Aadhaar Update: ಶಾಲಾ ಮಕ್ಕಳಿಗೆ ಆಧಾರ್ ನವೀಕರಣ, ಶಾಲೆಗಳಲ್ಲಿಯೇ ವಿಶೇಷ ಕ್ಯಾಂಪ್| ಮಾರ್ಚ್ 1ರೊಳಗೆ ನವೀಕರಣ
Aadhaar Update: ಶಾಲಾ ವಿದ್ಯಾರ್ಥಿಗಳು ಆಧಾರ್ ನವೀಕರಣಕ್ಕಾಗಿ ಸೈಬರ್ ಸೆಂಟರ್‌ಗಳಲ್ಲಿ ಗಂಟೆಗಳಷ್ಟು ಸಾಲಿನಲ್ಲಿ ನಿಂತು ಕಂಗಾಲಾಗುತ್ತಿದ್ದ ಸಮಯ ಇನ್ನು ಮುಗಿಯಲಿದೆ. ಈಗ ಶಾಲಾ–ಕಾಲೇಜುಗಳಲ್ಲೇ ವಿದ್ಯಾರ್ಥಿಗಳ ಆಧಾರ್ ನವೀಕರಣ ಮಾಡಲು ವಿಶೇಷ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರ ಮುಂದಾಗಿದೆ.
ವಿದ್ಯಾರ್ಥಿವೇತನ, ವಿವಿಧ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಕೆಲಸಗಳಲ್ಲಿ ಆಧಾರ್ ನವೀಕರಣದ ಕೊರತೆಯಿಂದ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸಲು, 5ರಿಂದ 15 ವರ್ಷದೊಳಗಿನ ಮಕ್ಕಳ ಬಯೋಮೆಟ್ರಿಕ್ ನವೀಕರಣ ಕಾರ್ಯವನ್ನು 2026ರ ಮಾರ್ಚ್ 1ರೊಳಗೆ ಪೂರ್ಣಗೊಳಿಸಲು ಸರ್ಕಾರ ಗಡುವು ವಿಧಿಸಿದೆ. ಈ ಜವಾಬ್ದಾರಿಯನ್ನು ಶಾಲಾ ಶಿಕ್ಷಣ ಇಲಾಖೆ, ಇ-ಗವರ್ಣೆನ್ಸ್, ಯುಐಡಿಎಐ ಹಾಗೂ ಜಿಲ್ಲಾ ಪಂಚಾಯತ್ CEOಗಳಿಗೆ ಹಂಚಲಾಗಿದೆ.
5 ವರ್ಷ ವಯಸ್ಸಿನಲ್ಲಿ ಮಾಡಿಸಿದ ಆಧಾರ್‌ನಲ್ಲಿ ಬೆರಳಚ್ಚು ಮತ್ತು ಫೋಟೋ ದಾಖಲಿಸಿರುವುದು ಗೊತ್ತೇ. ಆದರೆ 15 ವರ್ಷಕ್ಕೆ ಮಕ್ಕಳ ಬೆರಳಚ್ಚು ಮತ್ತು ಮುಖದ ಬದಲಾವಣೆಗಳನ್ನು ಪರಿಗಣಿಸಿ ಆಧಾರ್ ವಿವರಗಳನ್ನು ಕಡ್ಡಾಯವಾಗಿ ನವೀಕರಿಸಬೇಕು ಎಂದು ಯುಐಡಿಎಐ ಸೂಚಿಸಿದೆ.
ಇತ್ತೀಚೆಗೆ ತಮಿಳುನಾಡು ಮತ್ತು ದೆಹಲಿ ರಾಜ್ಯಗಳ ಕೆಲವು ಶಾಲೆಗಳಲ್ಲಿ ಯಶಸ್ವಿಯಾಗಿ ವಿಶೇಷ ಶಿಬಿರಗಳನ್ನು ನಡೆಸಲಾಗಿತ್ತು. ಈಗ ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಮಾನ್ಯತೆ ಪಡೆದ ಆಧಾರ್ ಏಜೆನ್ಸಿಗಳ ಮೂಲಕ ಶಾಲೆಗಳ ಆವರಣದಲ್ಲೇ ಶಿಬಿರಗಳನ್ನು ಆಯೋಜಿಸಿ 5–15 ವರ್ಷದ ಸುಮಾರು 30 ಲಕ್ಷ ವಿದ್ಯಾರ್ಥಿಗಳ ಆಧಾರ್ ನವೀಕರಣ ಮಾಡುವ ಯೋಜನೆ ಸರ್ಕಾರ ಕೈಗೊಂಡಿದೆ.
ವಿದ್ಯಾರ್ಥಿಗಳು ಹಳೆಯ ಆಧಾರ್ ಮತ್ತು ಜನನ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಉಚಿತವಾಗಿ ನವೀಕರಣ ಮಾಡಿಸಿಕೊಳ್ಳಬಹುದು.
ಶಾಲೆಗಳಲ್ಲಿ ವಿಶೇಷ ಶಿಬಿರಗಳನ್ನು ಹೇಗೆ ನಡೆಸಲಾಗುತ್ತದೆ?
ಯುಐಡಿಎಐ ನೀಡಿದ ಸೂಚನೆಗಳ ಆಧಾರವಾಗಿ ಶಿಕ್ಷಣ ಇಲಾಖೆ ಜಿಲ್ಲೆಯ ಸಮಿತಿಗೆ ಮಾಹಿತಿ ನೀಡುತ್ತದೆ.
ಪ್ರತಿ ಶಾಲೆಯಲ್ಲಿ ಶಿಬಿರ ನಡೆಸುವ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಅಂತಿಮಗೊಳಿಸಿ ಮೇಲ್ವಿಚಾರಣೆ ನಡೆಸುತ್ತದೆ.
ಮಾನ್ಯತೆ ಪಡೆದ ಆಧಾರ್ ಏಜೆನ್ಸಿಗಳು ಶಾಲೆಗೆ ಬಂದು ಸ್ಥಳದಲ್ಲೇ ನವೀಕರಣ ಮಾಡಲಿದ್ದಾರೆ.
ಅಗತ್ಯ ದಾಖಲೆಗಳು ಏನೇನು?
▪️ಮಗುವಿನ ಹಳೆಯ ಆಧಾರ್ ಕಾರ್ಡ್
▪️ಜನನ ಪ್ರಮಾಣ ಪತ್ರ (Birth Certificate)
▪️ಪೋಷಕರ/ಮಗುವಿನ ವಿಳಾಸ ದೃಢೀಕರಣ ದಾಖಲೆ
