ಕರ್ನಾಟಕ ಸರ್ಕಾರದ BPL ಹೊಸ ಬಿಗಿ ನೀತಿ: ಹೆಸರು ಸೇರ್ಪಡೆಗೂ ಜಾತಿ, ಆದಾಯ ಪತ್ರ, ವಿವಾಹ ಪ್ರಮಾಣ ಪತ್ರ ಕಡ್ಡಾಯ-2025
ಕರ್ನಾಟಕ ಸರ್ಕಾರದ BPL ಹೊಸ ಬಿಗಿ ನೀತಿ:ಅನರ್ಹ BPL ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿರುವುದರ ಬೆನ್ನಲ್ಲೇ ಈಗ ಆಹಾರ ಇಲಾಖೆಯು ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವಲ್ಲಿ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಹೊಸದಾಗಿ BPL ಪಡಿತರ ಚೀಟಿ ಪಡೆಯಲು ಮಾತ್ರವಲ್ಲ, ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡುವುದಕ್ಕೂ ಜಾತಿ, ಆದಾಯ, ವಿವಾಹ ಮತ್ತಿತರ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಿದೆ. ಪಡಿತರ ಚೀಟಿಗಳಲ್ಲಿ ಇನ್ನು ಮುಂದೆ ಹೊಸದಾಗಿ ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಬೇಕೆಂದರೆ ಅಥವಾ ತಿದ್ದುಪಡಿ ಮಾಡಬೇಕೆಂದರೆ ಕೆಲವು ದಾಖಲೆಗಳನ್ನು ಸಲ್ಲಿಸುವುದು ಅನಿವಾರ್ಯವಾಗಿದೆ.
ಇದೇ ಮೊದಲ ಬಾರಿಗೆ ಆರು ವರ್ಷ ಮೇಲ್ಪಟ್ಟ ಮಕ್ಕಳ ಹೆಸರನ್ನು ಬಿಪಿಎಲ್ ಪಡಿತರ ಚೀಟಿಯಲ್ಲಿ ಸೇರಿಸಲು ಇಚ್ಛೆ ಪಟ್ಟರೆ ಜಾತಿ ಪ್ರಮಾಣದ ಜತೆಗೆ ಆದಾಯ ಪ್ರಮಾಣ ಪತ್ರವನ್ನೂ ಒದಗಿಸಬೇಕು. ಪೋಷಕರ ಆದಾಯ ಎಷ್ಟಿದೆ ಹಾಗೂ ಅವರ ಉದ್ಯೋಗ, ಜಾತಿ ಕೂಡ ತಿಳಿಯುವುದರಿಂದ ಆ ಪಡಿತರ ಚೀಟಿ ಬಿಪಿಎಲ್‌ಗೆ ಅರ್ಹವಾಗಿದೆಯೇ ಎಂಬುದರ ಕುರಿತು ಈ ದಾಖಲೆಗಳು ಇಲಾಖೆಗೆ ಸುಳಿವು ನೀಡುತ್ತವೆ. ಹೀಗಾಗಿ, ಅಂತಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಈ ದಾಖಲೆಗಳು ನೆರವಾಗಲಿವೆ.
ರೇಷನ್ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರೆ ಆ ಬದಲಾವಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸದಸ್ಯರ ಸೇರ್ಪಡೆ ಮತ್ತು ತಿದ್ದುಪಡಿ ಪ್ರಕ್ರಿಯೆಗೆ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು. ದಾಖಲೆಗಳಿಲ್ಲದಿದ್ದರೆ ಸೇರ್ಪಡೆಗೆ ತಂತ್ರಜ್ಞಾನ ಸ್ವೀಕರಿಸುವುದೇ ಇಲ್ಲ.
APL ಕಾರ್ಡಗಷ್ಟೇ ಅರ್ಜಿ:
ಪಡಿತರ ಚೀಟಿ ಹೊಂದಿರುವವರಿಗೆ ಅನುಕೂಲವಾಗುವಂತೆ ಆಹಾರ ಇಲಾಖೆಯು ನಾನಾ ರೀತಿಯ ತಿದ್ದುಪಡಿ ಮತ್ತು ಬದಲಾವಣೆ ಮಾಡಲು ಅವಕಾಶವನ್ನು ಒದಗಿಸಲಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್‌ಗಳಲ್ಲಿ ಅಥವಾ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಸ್ವಯಂ ಅರ್ಜಿ ಸಲ್ಲಿಸಬಹುದು. APL ಕಾರ್ಡ್ ಬಯಸುವವರು ಸಹ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಆದರೆ, ಬಿಪಿಎಲ್ ಕಾರ್ಡ್‌ಗಳನ್ನು ಹೊಸದಾಗಿ ಪಡೆಯಲು ಇನ್ನೂ ಅವಕಾಶ ಕಲ್ಪಿಸಿಲ್ಲ.
ಏನೆಲ್ಲಾ ಬದಲಾವಣೆ ಮಾಡಲಾಗಿದೆ?
▪️ಹೊಸದಾಗಿ ಮದುವೆಯಾಗಿದ್ದರೆ ಗಂಡ/ಹೆಂಡತಿ ಅಥವಾ ಮಕ್ಕಳ ಹೆಸರು ಸೇರಿಸಬಹುದು
▪️ಹೆಸರು ತಿದ್ದುಪಡಿ, ಫೋಟೋ/ ವಿಳಾಸ ಬದಲಾವಣೆ, ಹೆಸರು ಡಿಲೀಟ್, ಅಂಗಡಿ ಬದಲಾವಣೆ
▪️ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು.
ಯಾವುದು ಕಡ್ಡಾಯ ?
▪️ಆರು ವರ್ಷ ಮೇಲ್ಪಟ್ಟಿದ್ದರೆ ಅವರ ಜಾತಿ ಮತ್ತು ಆದಾಯ ಪ್ರಮಾಣಪತ್ರ
▪️6 ವರ್ಷದ ಒಳಗಿನ ಮಕ್ಕಳಿದ್ದರೆ, ಜನನ ಪ್ರಮಾಣಪತ್ರ
▪️ತಂದೆ, ತಾಯಿಯ ಆಧಾರ್ ಕಾರ್ಡ್, ತಂದೆ-ತಾಯಿಯ ಪಡಿತರ ಚೀಟಿಯ ಮೂಲ ದಾಖಲೆಗಳು
▪️ಮದುವೆಯಾಗಿ ಬರುವ ಸೊಸೆಗೆ ವಿವಾಹ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ಪೋಷಕರ (ಗಂಡನ ಮನೆಯ) ಪಡಿತರ ಚೀಟಿಯ ಪ್ರತಿ ಮತ್ತು ಹಳೆಯ ಕಾರ್ಡ್‌ನಿಂದ ಹೆಸರು ತೆಗೆದಿರುವ ದೃಢೀಕರಣ ಅವಶ್ಯ.
