CGHS 2025 ದರಗಳು KASS ಯೋಜನೆಗೆ ಅಳವಡಿಕೆ: ಮಹತ್ವದ ಅಪ್ಡೇಟ್ ಮಾಹಿತಿ
CGHS 2025 ದರಗಳು KASS ಯೋಜನೆಗೆ ಅಳವಡಿಕೆ: ಕೇಂದ್ರ ಸರ್ಕಾರದ 2025ರ ಪರಿಷ್ಕೃತ CGHS ವೈದ್ಯಕೀಯ ಚಿಕಿತ್ಸಾ ವಿಧಾನಗಳು ಮತ್ತು ದರಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಯೋಜನೆಗೆ ಅಳವಡಿಸುವ ಕುರಿತು ಸಂಪೂರ್ಣ ಮಾಹಿತಿ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅರ್ಹ ಅವಲಂಬಿತ ಸದಸ್ಯರಿಗೆ ಒಳರೋಗಿ, ಹೊರರೋಗಿ, ಆಯುಷ್, ಡೇ-ಕೇರ್ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ ವಿವಿಧ ವೈದ್ಯಕೀಯ ಚಿಕಿತ್ಸೆಗಳನ್ನು ಹಂತ ಹಂತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ ನಗದುರಹಿತವಾಗಿ ಒದಗಿಸಲು ರಾಜ್ಯ ಸರ್ಕಾರವು ಮೇಲೆ ಓದಲಾದ (1) ಮತ್ತು (2)ರ ಸರ್ಕಾರದ ಆದೇಶಗಳಲ್ಲಿ ಯೋಜನೆಗೆ ಕಾರ್ಯನೀತಿಯನ್ನು ರೂಪಿಸಿ (policy frame work), ಮೇಲೆ ಓದಲಾದ (3)ರ ಸರ್ಕಾರದ ಆದೇಶದಲ್ಲಿ ದಿನಾಂಕ: 01.10.2025 ರಿಂದ ಜಾರಿಗೆ ತಂದಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ’ (KASS) ಯೋಜನೆಯ ಪ್ರಥಮ ಹಂತದಲ್ಲಿ ಒಳರೋಗಿ ಚಿಕಿತ್ಸೆಗಳಿಗೆ ಹಾಗೂ 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಗೆ ಇದುವರೆವಿಗೂ ಒಟ್ಟು 3,76,955 ನೌಕರರು opt-in ಆಗಿದ್ದು 23,081 ನೌಕರರು opt-out ಆಗಿರುತ್ತಾರೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೇಲೆ (4) ರಲ್ಲಿ ಓದಲಾದ ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ CGHS ದರಗಳನ್ನು ದಿನಾಂಕ: 13.10.2025 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವುದನ್ನು ಉಲ್ಲೇಖಿಸುತ್ತಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೇಲೆ (5) ರಲ್ಲಿ ಓದಲಾದ ಕಡತಗಳಲ್ಲಿ ಕೆಳಕಂಡ ಪ್ರಸ್ತಾವನೆಗಳನ್ನು ಸರ್ಕಾರದ ಪರಿಗಣನೆಗಾಗಿ ಸಲ್ಲಿಸಿರುತ್ತದೆ.
1. ಯೋಜನೆಯಡಿ 2025 ರ ಸಿಜಿಎಚ್ಎಸ್ ಪರಿಷ್ಕೃತ ದರಗಳ ಅಳವಡಿಕೆ (Revision of CGHS rates from 2014 to 2025 Rates).
2. ಶ್ರೇಣಿ-ವಾರು ನಗರಗಳನ್ನು (City Tier-wise) ಆಧರಿಸಿ ಪ್ಯಾಕೇಜ್ ದರ ನಿಗದಿಯನ್ನು ಅಸ್ತಿತ್ವದಲ್ಲಿರುವ 1963ರ ವೈದ್ಯಕೀಯ ಹಾಜರಾತಿ ನಿಯಮಗಳ ಪ್ರಕಾರ ಮುಂದುವರಿಸುವುದು.
3. ವಾರ್ಡ್ ದರಗಳ ಪರಿಷ್ಕರಣೆ.
4. ವಾರ್ಡ್ ಆಧರಿಸಿದ ಪ್ಯಾಕೇಜ್ ದರಗಳು (Revision of Differential Ward Rates).
5. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನ (Accreditation incentive for Super Speciality Hospitals).
6. ಸಿಜಿಎಚ್ಎಸ್ ದರಗಳು ಪರಿಷ್ಕರಣೆಯಾದ ಸಂದರ್ಭದಲ್ಲಿ ಅವುಗಳನ್ನು ಯೋಜನೆಯಡಿ ಅಳವಡಿಸಿಕೊಳ್ಳಲು KASS ಉನ್ನತ ಮಟ್ಟದ ಕಾರ್ಯನೀತಿ ಸಮಿತಿಗೆ ಅಧಿಕಾರ ನೀಡುವುದು (The KASS High Level Policy Committee may be empowered to decide on adopting future CGHS rate revisions).
7. 2025ರ ಪರಿಷ್ಕೃತ ಸಿಜಿಹೆಚ್ಎಸ್ ದರಗಳನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರಡಿ ಯಥಾವತ್ತಾಗಿ ಅಳವಡಿಸಿಕೊಳ್ಳುವ ಬಗ್ಗೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ಆರಂಭದ ಹಂತದಲ್ಲಿ KASS PACKAGE MASTER (CGHS, AB-ArK, National Health Authority(NHA) + HBP 2022) ರಡಿ, ಈ ಕೆಳಕಂಡ ಸಮ್ಮಿಶ್ರ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಹಾಗೂ ದರಗಳನ್ನು ಮೇಲೆ (2) ರಲ್ಲಿ ಓದಲಾದ ದಿನಾಂಕ: 02.04.2025 ರ ಆದೇಶದಲ್ಲಿ ಅಳವಡಿಸಿಕೊಳ್ಳಲಾಗಿದೆ:-
| ಮೂಲ | ಚಿಕಿತ್ಸಾ ವಿಧಾನಗಳು |
|---|---|
| CGHS (ಉನ್ನತ ಚಿಕಿತ್ಸಾ ವಿಧಾನಗಳು ಸೇರಿದಂತೆ) | 1,144 |
| AB-ArK | 05 |
| HBP 2022 (ಮೆಡಿಕಲ್ ಮ್ಯಾನೇಜ್ಮೆಂಟ್) | 615 |
| HBP 2022 (ಸರ್ಜಿಕಲ್ ಆಂಕಾಲಜಿ) | 236 |
| ಒಟ್ಟು | 2,000 |
| ಇಂಪ್ಲಾಂಟ್ಗಳು | CGHS ಇಂಪ್ಲಾಂಟ್ಗಳು |
| CGHS ನಲ್ಲಿ ಒಳಗೊಂಡಿರದ ಇಂಪ್ಲಾಂಟ್ಗಳು: HBP 2022 ರಲ್ಲಿದ್ದಂತೆ |
CGHS-2014 ರಲ್ಲಿ ಚಾಲ್ತಿಯಲ್ಲಿದ್ದ 1853 ಚಿಕಿತ್ಸಾ ವಿಧಾನಗಳಲ್ಲಿ ಕೆಲವು ಚಿಕಿತ್ಸಾ ವಿದಾನಗಳನ್ನು ತೆಗೆದು ಹಾಕಿ ಪರಿಷ್ಕೃತಗೊಂಡ ಹೊಸ Code ಗಳೊಂದಿಗೆ 1998 ಚಿಕಿತ್ಸಾ ವಿಧಾನಗಳಿಗೆ ದರಗಳನ್ನು ದಿನಾಂಕ: 13.10.2025 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಿನಾಂಕ: 03.10.2025ರ ಅಧಿಕೃತ ಜ್ಞಾಪನ ಸಂಖ್ಯೆ:F.No.5-16/CGHS(HQ)/HEC/2024(Part1) ರಲ್ಲಿ ಪರಿಷ್ಕರಣೆ ಮಾಡಿ ಆದೇಶಿಸಲಾಗಿರುತ್ತದೆ.
ಸದರಿ ದರಗಳನ್ನು ಅರೆ ಖಾಸಗಿ (Semi-Private) ವಾರ್ಡ್ಗಳಿಗೆ ನಿಗದಿಪಡಿಸಿದ್ದು, ಖಾಸಗಿ (Private ward) ಹಾಗೂ ಸಾಮಾನ್ಯ ವಾರ್ಡ್ (General ward)ಗಳಿಗೆ ಕ್ರಮವಾಗಿ ಶೇಕಡ 5 ರಷ್ಟು ಏರಿಕೆ ಹಾಗೂ ಶೇಕಡ 5 ರಷ್ಟು ಇಳಿಕೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಚಿಕಿತ್ಸಾ ವಿಧಾನಗಳು ಪ್ಯಾಕೇಜ್ ಮಾದರಿಯಲ್ಲಿದ್ದು ವಾರ್ಡ್ ದರಗಳನ್ನು ಸಹ ಒಳಗೊಂಡಿರುತ್ತದೆ. ಅಲ್ಲದೆ, Tier-I ರಡಿಯಲ್ಲಿ ಬರುವ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಿಜಿಹೆಚ್ಎಸ್ ದರದನ್ವಯ ಸಂಪೂರ್ಣ ಮೊತ್ತವನ್ನು Tier-11 ರಡಿ ಬರುವ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಿಜಿಹೆಚ್ಎಸ್ ದರಗಳಿಗಿಂತ ಶೇಕಡ 10 ರಷ್ಟು ಕಡಿಮೆ ಮೊತ್ತವನ್ನು (ಶೇ.90), Tier-III ರಡಿ ಬರುವ ನಗರಗಳಲ್ಲಿನ ಆಸ್ಪತ್ರೆಗಳಿಗೆ ಸಿಜಿಹೆಚ್ಎಸ್ ದರಗಳಿಗಿಂತ ಶೇಕಡ 20 ರಷ್ಟು ಕಡಿಮೆ ಮೊತ್ತವನ್ನು (ಶೇ.80) ಪಾವತಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ Tier-I ರಡಿಯಲ್ಲಿ: ಬೆಂಗಳೂರು (Urban Agglomeration) ನ್ನು Tier-II ರಡಿಯಲ್ಲಿ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಮತ್ತು ಕಲಬುರಗಿ ನಗರಗಳನ್ನು ಹಾಗೂ Tier III ರಡಿಯಲ್ಲಿ: Tier -1 ಮತ್ತು Tier-11 ರಡಿಯಲ್ಲಿ ಗುರುತಿಸಿರುವ ನಗರಗಳನ್ನು ಹೊರತುಪಡಿಸಿ ಉಳಿದ ನಗರಗಳನ್ನು ಕೇಂದ್ರ ಸರ್ಕಾರವು ದಿನಾಂಕ:03.10.2025ರ ಅಧಿಕೃತ ಜ್ಞಾಪನದಲ್ಲಿ ಗುರುತಿಸಿರುತ್ತದೆ. 200 ಬೆಡ್ಗಳಿಗಿಂತ ಹೆಚ್ಚು ಬೆಡ್ಗಳನ್ನು ಹೊಂದಿರುವಂತಹ ಹಾಗೂ ಕೆಲವೊಂದು ನಿರ್ದಿಷ್ಟ ಸೂಪರ್-ಸೆಷಾಲಿಟಿ ಹೊಂದಿರುವಂತಹ ಆಸ್ಪತ್ರೆಗಳನ್ನು ಸೂಪರ್-ಸ್ಪೆಷಲಿಟಿ ಆಸ್ಪತ್ರೆಗಳೆಂದು ವ್ಯಾಖ್ಯಾನಿಸಿ/ಗುರುತಿಸಿ. ಅಂತಹ ಆಸ್ಪತ್ರೆಗಳಿಗೆ NABH ಅರ್ಹತೆಯುಳ್ಳ ಆಸ್ಪತ್ರೆಗಳಿಗೆ ಪಾವತಿಸಲು ನಿಗದಿಪಡಿಸಿರುವ ದರಕ್ಕಿಂತ ಶೇಕಡ 15 ರಷ್ಟು ಹೆಚ್ಚುವರಿಯಾಗಿ ಪಾವತಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಲ್ಲದೇ, Non-NABH ಆಸ್ಪತ್ರೆಗಳು NABH ಅರ್ಹತೆಯುಳ್ಳ ಆಸ್ಪತ್ರೆಗಳಿಗಿಂತ ಶೇಕಡ 15ರಷ್ಟು ಕಡಿಮೆ ಮೊತ್ತವನ್ನು ಪಾವತಿಸಲು ಅಧಿಕೃತ ಜ್ಞಾಪನದಲ್ಲಿ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ರಾಜ್ಯ ಸರ್ಕಾರವು ದಿನಾಂಕ: 01.10.2025 ರಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ವೈದ್ಯಕೀಯ ವೆಚ್ಚ ಮರುಪಾವತಿಯ ವ್ಯವಸ್ಥೆಯನ್ನು 6 ತಿಂಗಳ ಅವಧಿಗೆ ಮಾತ್ರ ಮುಂದುವರೆಸಲು ಮೇಲೆ (3) ರಲ್ಲಿ ಓದಲಾದ ದಿನಾಂಕ: 23.09.2025ರ ಸರ್ಕಾರದ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸದರಿ ಅವಧಿಯು ದಿನಾಂಕ: 22.03.2026 ರಂದು ಅಂತ್ಯಗೊಂಡಿರುತ್ತದೆ. ಆದರೆ, ಪ್ರಸ್ತುತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು ಪೂರ್ಣ ಪ್ರಮಾಣದಲ್ಲಿ/ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ, ವೈದ್ಯಕೀಯ ವೆಚ್ಚ ಮರುಪಾವತಿಯ ವ್ಯವಸ್ಥೆಯನ್ನು ದಿನಾಂಕ:23.03.2026 ರಿಂದ ಮತ್ತೆ 6 ತಿಂಗಳ ಅವಧಿಗೆ ಮುಂದುವರೆಸುವ ಅವಶ್ಯಕತೆಯ ಬಗ್ಗೆ ಪರಿಶೀಲಿಸಲಾಗಿದೆ.
ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ನಿಯಮಗಳಲ್ಲಿ ಅಧಿಕೃತವಾಗಿ ವ್ಯಾಖ್ಯಾನಿಸಿರುವುದಿಲ್ಲವಾದ್ದರಿಂದ, ಕೇಂದ್ರ ಸರ್ಕಾರವು ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ ಕಲ್ಪಿಸಿರುವ ಅವಕಾಶದಂತೆ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಿಗೆ NABH ಅರ್ಹತೆಯುಳ್ಳ ಆಸ್ಪತ್ರೆಗಳಿಗಿಂತ ಹೆಚ್ಚುವರಿಯಾಗಿ ಶೇಕಡ 15ರಷ್ಟು ದರಗಳನ್ನು ಪಾವತಿಸಲು ಸಾಧ್ಯವಾಗುವುದಿಲ್ಲವಾದ ಸಾಧ್ಯವಾಗುವುದಿಲ್ಲವಾದ್ದರಿಂದ, ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಿಗೂ ಸಹ NABH ಅರ್ಹತೆಯುಳ್ಳ ಆಸ್ಪತ್ರೆಗಳಿಗೆ ಪಾವತಿಸುವ ದರಗಳನ್ನೇ ಪಾವತಿಸಬೇಕಾಗುತ್ತದೆ.
ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಈಗಾಗಲೇ ನಗದು ರಹಿತ ಆರೋಗ್ಯ ಯೋಜನೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ವ್ಯವಸ್ಥೆಯನ್ನು ಸಹ ಮುಂದುವರೆಸಿರುವುದರಿಂದ, ಏಕಕಾಲದಲ್ಲಿ ಎರಡು ಬೇರೆ-ಬೇರೆ ಯೋಜನೆಗಳಡಿ CGHS ದರಗಳನ್ನು ಪರಿಗಣಿಸುವುದು ಸಮಂಜಸವಾಗಿರುವುದಿಲ್ಲವಾದ್ದರಿಂದ ಕೇಂದ್ರ ಸರ್ಕಾರವು ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ ಪರಿಷ್ಕರಿಸಿರುವ ಸಿಜಿಹೆಚ್ಎಸ್ ದರಗಳನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರ ನಿಯಮಗಳಡಿಯಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಅಳವಡಿಸಿಕೊಳ್ಳವುದು ಸೂಕ್ತವಾಗಿರುವುದಿಲ್ಲವೆಂದು ಭಾವಿಸಲಾಗಿದೆ.
ಆರೋಗ್ಯ ಮತ್ತು కుటుంబ ಕಲ್ಯಾಣ ಇಲಾಖೆಯ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕೇಂದ್ರ ಸರ್ಕಾರವು ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ ಪರಿಷ್ಕರಿಸಿರುವ CGHS ದರಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ದಿನಾಂಕ:01.10.2025ರಿಂದ ಜಾರಿಗೆ ತಂದಿರುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರವು ತೀರ್ಮಾನಿಸಿ, ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 16 ಎಸ್ಎಂಆರ್ 2020(ಭಾ-25),ಬೆಂಗಳೂರು ದಿನಾಂಕ: 16.07.2026
ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ ಪರಿಷ್ಕರಿಸಿರುವ CGHS ದರಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ದಿನಾಂಕ: 01.10.2025 ರಿಂದ ಜಾರಿಗೆ ತಂದಿರುವ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಗೆ ಮಾತ್ರ ತಕ್ಷಣದಿಂದ ಜಾರಿಗೆ ಬರುವಂತೆ, ಕೆಳಕಂಡ ಷರತ್ತಿಗೊಳಪಟ್ಟು ಅಳವಡಿಸಿಕೊಳ್ಳಲು ಹಾಗೂ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರ ಯ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ಪೂರ್ವ ಪರಿಷ್ಕೃತ ದರಗಳಲ್ಲಿ ಪಾವತಿಸಲು (2014ರ CGHS ದರಗಳಲ್ಲಿ ) ವ್ಯವಸ್ಥೆಯನ್ನು ದಿನಾಂಕ:23.03.2026 ರಿಂದ 22.09.2026ರ ವರೆಗೆ ಮುಂದುವರೆಸಲು ಸರ್ಕಾರದ ಮಂಜೂರಾತಿಯನ್ನು ನೀಡಿ ಆದೇಶಿಸಿದೆ.
ಷರತ್ತುಗಳು:
1. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ನಿಯಮಗಳಲ್ಲಿ ಅಧಿಕೃತವಾಗಿ ವ್ಯಾಖ್ಯಾನಿಸಿರುವುದಿಲ್ಲವಾದ್ದರಿಂದ, ಕೇಂದ್ರ ಸರ್ಕಾರವು ದಿನಾಂಕ:03.10.2025ರ ಅಧಿಕೃತ ಜ್ಞಾಪನದಲ್ಲಿ ಕಲ್ಪಿಸಿರುವ ಅವಕಾಶದಂತೆ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳಿಗೆ NABH ಅರ್ಹತೆಯುಳ್ಳ ಆಸ್ಪತ್ರೆಗಳಿಗೆ ಪಾವತಿಸುವ ದರಗಳಿಗಿಂತ ಶೇಕಡ 15ರಷ್ಟು ಹೆಚ್ಚುವರಿಯಾಗಿ ದರಗಳನ್ನು ಪಾವತಿಸದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು NABH ಅರ್ಹತೆ/ದೃಢೀಕರಣ ಹೊಂದಿದ್ದಲ್ಲಿ NABH ಆಸ್ಪತ್ರೆಗಳಿಗೆ ಪಾವತಿಸುವ ದರಗಳನ್ನು ಪಾವತಿಸತಕ್ಕದ್ದು.
2. ಕೇಂದ್ರ ಸರ್ಕಾರವು ದಿನಾಂಕ: 03.10.2025ರ ಅಧಿಕೃತ ಜ್ಞಾಪನದಲ್ಲಿ ಪರಿಷ್ಕರಿಸಿರುವ ಸಿಜಿಹೆಚ್ಎಸ್ ದರಗಳನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರ ನಿಯಮಗಳಡಿಯಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಅಳವಡಿಸಿಕೊಳ್ಳತಕ್ಕದ್ದಲ್ಲ.
3. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಡಿಯಲ್ಲಿ ನೋಂದಾಯಿಸಲ್ಪಟ್ಟಿರುವ (empanelled hospitals) ಆಸ್ಪತ್ರೆಗಳೊಂದಿಗೆ, ಪರಿಷ್ಕೃತ CGHS ದರಗಳಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ರವರು 90 ದಿನಗಳೊಳಗಾಗಿ ಸೂಕ್ತ ಒಡಂಬಡಿಕೆಯನ್ನು (MoU) ಮಾಡಿಕೊಳ್ಳತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ:20.06.2026 ಮತ್ತು 13.07.2026ರ ಹಿಂಬರಹ ಸಂಖ್ಯೆ: ಆಇ 426 ಸೇ-1/2022 ಗಳಲ್ಲಿ ನೀಡಿದ ಸಹಮತಿ ಮೇರೆಗೆ ಹೊರಡಿಸಿಲಾಗಿದೆ.

CLICK HERE TO DOWNLOAD CGHS 2025 RATES