Foreign policy of India: ಭಾರತದ ವಿದೇಶಾಂಗ ನೀತಿ ಅಂದು-ಇಂದು- ಪ್ರಬಂಧ-05

Foreign policy of India: ಭಾರತದ ವಿದೇಶಾಂಗ ನೀತಿ ಅಂದು-ಇಂದು- ಪ್ರಬಂಧ

Foreign policy of India: ಭಾರತವು ಸ್ವಾತಂತ್ರ್ಯ ಪಡೆದಾಗಿನಿಂದ ಜಾಗತಿಕವಾಗಿ ಇತರೆ ದೇಶಗಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದೆ ಎಂಬುದನ್ನು ಈ ಬಾರಿಯ ಪ್ರಬಂಧದಲ್ಲಿ ವಿವರಿಸಲಾಗಿದೆ.

 

ಪೀಠಿಕೆ: “ಪ್ರತಿಯೊಂದು ಸ್ನೇಹದ ಹಿಂದೆಯೂ ಸ್ವಲ್ಪ ಸ್ವಹಿತಾಸಕ್ತಿ ಇರುತ್ತದೆ. ಸ್ವಹಿತಾಸಕ್ತಿ ಇಲ್ಲದೆ ಸ್ನೇಹವಿಲ್ಲ, ಇದು ಕಹಿ ಸತ್ಯ – ಚಾಣಕ್ಯ”

ಸ್ವಾತಂತ್ರ್ಯದ ನಂತರ ಭಾರತದ ವಿದೇಶಾಂಗ ನೀತಿಯು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಅಲಿಪ್ತತೆಯೊಂದಿಗೆ ಆರಂಭಗೊಂಡು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳುವ ಹಂತಕ್ಕೆ ಬೆಳೆದು ಈಗ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಜಾಗತಿಕ ಪಾಲುದಾರಿಕೆಗಳ ಮೇಲೆ ಬಲವಾದ ಒತ್ತು ನೀಡುವ ಮೂಲಕ ಹೆಚ್ಚು ದೃಢವಾದ ವಿದೇಶಿ ನೀತಿಯಾಗಿ ಪಕ್ವಗೊಂಡಿದೆ. ಭಾರತ ಸ್ವಾತಂತ್ರ್ಯ ಪಡೆದಾಗಿನಿಂದ ಇಲ್ಲಿಯವರೆಗೂ ಅನುಸರಿಸಿಕೊಂಡು ಬಂದ ವಿದೇಶಿ ನೀತಿಯ ಇಣುಕು ನೋಟ ಇಲ್ಲಿದೆ.

ಆರಂಭಿಕ ವರ್ಷಗಳು: ಅಲಿಪ್ತತೆ ಮತ್ತು ಪಂಚಶೀಲ:

ಸ್ವಾತಂತ್ರ್ಯದ ನಂತರದ ಭಾರತದ ವಿದೇಶಾಂಗ ನೀತಿಯನ್ನು ಹೆಚ್ಚಾಗಿ ಅದರ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ರೂಪಿಸಿದರು. ಇದು ಮುಖ್ಯವಾಗಿ ಮೂರು ಆಯಾಮಗಳನ್ನು ಹೊಂದಿತ್ತು. ಅವುಗಳೆಂದರೆ;

1. ಅವರು ಶೀತಲ ಸಮರದ ಸಮಯದಲ್ಲಿ ಅಲಿಪ್ತತೆಯನ್ನು ಪ್ರತಿವಾದಿಸಿದರು. ಈ ನೀತಿಯು ದೇಶದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಪ್ರಮುಖ ಶಕ್ತಿ ಬಣಗಳ (ಅಮೆರಿಕ ಮತ್ತು ಅಂದಿನ ಸೋವಿಯತ್ ರಷ್ಯಾ) ಸಂಘರ್ಷಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸುವ ಗುರಿಯನ್ನು ಹೊಂದಿತ್ತು.

2. ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಪರಸ್ಪರ ಗೌರವ, ಆಕ್ರಮಣಶೀಲತೆ ಇಲ್ಲದಿರುವುದು, ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು, ಸಮಾನತೆ ಮತ್ತು ಪರಸ್ಪರ ಲಾಭ ಮತ್ತು ಶಾಂತಿಯುತ ಸಹಬಾಳ್ವೆಯನ್ನೊಳಗೊಂಡ ಐದು ತತ್ವಗಳನ್ನು ಪಂಚಶೀಲ ತತ್ವಗಳೆಂದು ಕರೆಯಲಾಗಿದ್ದು ಇದು ನೆಹರು ಕಾಲದ ಭಾರತದ ವಿದೇಶಾಂಗ ನೀತಿಯ ಕೇಂದ್ರ ಬಿಂದುವಾಗಿತ್ತು.

3. ಭಾರತವು ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೊಸದಾಗಿ ಹುಟ್ಟಿಕೊಂಡ ಸ್ವತಂತ್ರ ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬಲಪಡಿಸುವುದು, ದಕ್ಷಿಣ- ದಕ್ಷಿಣ ಸಹಕಾರವನ್ನು ಉತ್ತೇಜಿಸುವುದು ಮತ್ತು ಹೆಚ್ಚು ಸಮಾನವಾದ ವಿಶ್ವ ವ್ಯವಸ್ಥೆಯನ್ನು ಪ್ರತಿಪಾದಿಸುವುದರ ಮೇಲೆ ಕೇಂದ್ರೀಕರಿಸಿತು.

ನೆಹರು ಕಾಲದ ಭಾರತದ ವಿದೇಶಿ ನೀತಿಯನ್ನು ಆದರ್ಶವಾದಿ ನೀತಿಯೆಂದು ಕರೆಯಲಾಗಿದ್ದು ಇದು ವಾಸ್ತವ ಸಂಗತಿಗಳನ್ನು ಪರಿಗಣಿಸಲಿಲ್ಲ ಎಂದು ಟೀಕಿಸಲಾಯಿತು. ಮುಖ್ಯವಾಗಿ ಪಾಕಿಸ್ತಾನ ಹಾಗೂ ಚೀನಾದ ಜೊತೆಗಿನ ನೆಹರು ಧೋರಣೆ ಭಾರತಕ್ಕೆ ಹಾನಿ ಮಾಡಿತು. ನೆಹರು ನಂತರ ಬಂದ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಕಾಲದಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಲಾಯಿತೇ ತೇ ಹೊರತು ಅಮೂಲಾಗ್ರ ಬದಲಾವಣೆಗಳಾಗಲಿಲ್ಲ.

ಆರ್ಥಿಕ ಉದಾರೀಕರಣ ಮತ್ತು ಬಹುಪಕ್ಷಗಳತ್ತ ತಿರುಗಿದ ಭಾರತ:

ದಶಕಗಳ ಕಾಲದ ದೋಷಪೂರಿತ ವಿದೇಶಾಂಗ ನೀತಿ ಮತ್ತು ಆರ್ಥಿಕ ನೀತಿಗಳಿಂದಾಗಿ ಭಾರತ 1990ರ ಹೊತ್ತಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಕೇವಲ 1 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಪಡೆಯಲುಐಎಂಎಫ್‌ನಲ್ಲಿ ಚಿನ್ನವನ್ನು ಒತ್ತೆ ಇಡಬೇಕಾಯಿತು. ಉದಾರೀಕರಣ ಮತ್ತು ಜಾಗತೀಕರಣವನ್ನು ಅಳವಡಿಸಿಕೊಳ್ಳದ ಹೊರತು ಭಾರತಕ್ಕೆ ತಮ್ಮ ಬೆಂಬಲ ದೊರೆಯುವುದಿಲ್ಲ ಎಂದು ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದವು. ಈ ಹಿನ್ನೆಲೆಯಲ್ಲಿ 1990 ರ ದಶಕವು ಆರ್ಥಿಕ ಉದಾರೀಕರಣ ಮತ್ತು ಆರ್ಥಿಕ ರಾಜತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಿತು. ಭಾರತವು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಂತಹ ಜಾಗತಿಕ ಶಕ್ತಿಗಳೊಂದಿಗೆ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಾರಂಭಿಸಿತು. ಜೊತೆಗೆ ರಷ್ಯಾದಂತಹ ಸಾಂಪ್ರದಾಯಿಕ ಪಾಲುದಾರರೊಂದಿಗೆ ತನ್ನ ಸಂಬಂಧಗಳನ್ನು ಬಲಪಡಿಸಿತು.

ಬಹು-ಜೋಡಣೆಯ ಪರಿಕಲ್ಪನೆಯು ಭಾರತದ ವಿದೇಶಾಂಗ ನೀತಿಯ ಕೇಂದ್ರಬಿಂದುವಾಯಿತು. ಭಾರತವು ಯಾವುದೇ ನಿರ್ದಿಷ್ಟ ಬಣದೊಂದಿಗೆ ಔಪಚಾರಿಕವಾಗಿ ಮೈತ್ರಿ ಮಾಡಿಕೊಳ್ಳದೆ ವಿವಿಧ ದೇಶಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಗಳನ್ನು ರೂಪಿಸಲಾರಂಭಿಸಿತು. ಈ ವಿಧಾನವು ಭಾರತವು ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಅನುಸರಿಸಲು, ತನ್ನ ಭದ್ರತಾ ಅಗತ್ಯಗಳನ್ನು ಭದ್ರಪಡಿಸಿಕೊಳ್ಳಲು ಮತ್ತು ಜಾಗತಿಕ ವ್ಯವಹಾರಗಳಲ್ಲಿ ಹೆಚ್ಚು ಪ್ರಮುಖ ಪಾತ್ರವನ್ನು ವಹಿಸಲು ಅವಕಾಶ ಮಾಡಿಕೊಟ್ಟಿತು.

ಭಾರತದ ವಿದೇಶಾಂಗ ನೀತಿಯ ಈ ಹೊಸ ತಂತ್ರವು ಪಿ.ವಿ.ನರಸಿಂಹರಾವ್ ಅವರ ಕಾಲದಲ್ಲಿ ಆರಂಭಗೊಂಡು ಎ.ಬಿ. ವಾಜಪೆಯಿ ಹಾಗೂ ಮನಮೋಹನ ಸಿಂಗ್ ಸರ್ಕಾರಗಳ ಕಾಲದಲ್ಲಿ ಪಕ್ವಗೊಂಡಿತು.

ಸಮಕಾಲೀನ ಭಾರತದ ವಿದೇಶಾಂಗ ನೀತಿ:

ಸಮಕಾಲೀನ ಭಾರತದ ವಿದೇಶಾಂಗ ನೀತಿಯು ಎಲ್ಲಾ ಅಂತರರಾಷ್ಟ್ರೀಯ ಸಂಬಂಧಗಳು ಮೂಲಭೂತವಾಗಿ ಸ್ವಹಿತಾಸಕ್ತಿಯಿಂದ ನಡೆಸಲ್ಪಡುತ್ತವೆ; ಆದ್ದರಿಂದ ನೈತಿಕ ಪರಿಗಣನೆಗಳಿಗೆ ಮಾನ್ಯತೆ ಕೊಡುವ ಭರದಲ್ಲಿ ಒಂದು ದೇಶ ತನ್ನ ಭದ್ರತೆ ಮತ್ತು ಯೋಗಕ್ಷೇಮವನ್ನು ಮರೆಮಾಡಬಾರದು ಎಂಬ ಚಾಣಕ್ಯನ ತತ್ವವನ್ನು ಹೆಚ್ಚು ಅನುಸರಿಸುತ್ತಿರುವಂತಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನದ ಭಾರತದ ವಿದೇಶಾಂಗ ನೀತಿಯು ನೆರೆಹೊರೆ ಮೊದಲು ಎಂಬುದನ್ನು ತನ್ನ ಮಂತ್ರವಾಗಿಸಿಕೊಂಡಿದೆ. ಅಮಿಷಗಳಿಗೆ ಒಳಗಾಗಿ ಚೀನಾದತ್ತ ವಾಲುತ್ತಿದ್ದ ಬಹುತೇಕ ನೆರೆಯ ರಾಷ್ಟ್ರಗಳನ್ನು ಭಾರತದತ್ತ ತಿರುಗಿಸಿಕೊಳ್ಳುವಲ್ಲಿ ಅವರು ಸಫಲರಾಗುತ್ತಿದ್ದಾರೆ. ಹೊಸ ಅಧ್ಯಕ್ಷ ಮಹ್ಮದ್ ಮುಯಿಝಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ವಿರುದ್ಧ ಮಲೆತು ನಿಂತಿದ್ದ ಅತ್ಯಂತ ಚಿಕ್ಕ ರಾಷ್ಟ್ರವಾಗಿರುವ ಮಾಲ್ದಿವ್ಸ್ ಅನ್ನು ತಮ್ಮತ್ತ ತಿರುಗಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದರ 60ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಮೋದಿಯವರು ಮುಖ್ಯ ಅತಿಥಿಯಾದದ್ದು ಗಮನಾರ್ಹ ಸಂಗತಿಯಾಗಿದೆ.

ಮೋದಿ ಸರಕಾರದ ಆಕ್ಟ್ ಈಸ್ಟ್ ಮತ್ತು ಥಿಂಕ್ ವೆಸ್ಟ್ ತಂತ್ರಗಳು ಸಾಕಷ್ಟು ಫಲವನ್ನು ನೀಡುತ್ತಿವೆ. ಅದಕ್ಕೆ ಉದಾಹರಣೆಯಾಗಿ ಯುನೈಟೆಡ್ ಇಂಗ್ಲೆಂಡ್ ಮತ್ತು ಭಾರತ ಇದೀಗ ವಿಸ್ಸತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕದೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಲೇ ರಷ್ಯಾದೊಂದಿಗಿನ ತನ್ನ ಸಾಂಪ್ರದಾಯಿಕ ಸಂಬಂಧವನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ಭಾರತವು ಜಿ-20, ಬ್ರಿಕ್ಸ್+ ಮತ್ತು ಕ್ವಾಡ್ ಸೇರಿದಂತೆ ವಿವಿಧ  ಬಹುಪಕ್ಷೀಯ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ – ಆಡಳಿತದಂತಹ ವಿಷಯಗಳ ಕುರಿತು ಜಾಗತಿಕ ಕಾರ್ಯಸೂಚಿಯನ್ನು ಈ ರೂಪಿಸಲು ಪ್ರಯತ್ನಿಸುತ್ತಿದೆ. ಅಂತರಾಷ್ಟ್ರೀಯ ಸೌರ ಸಂಘಟನೆಗೆ  (ಐಎಸ್‌ಎ) ಭಾರತ ನೇತೃತ್ವ, ವಹಿಸಿರುವುದು ಇದಕ್ಕೆ  ಉದಾಹರಣೆಯಾಗಿದೆ. ಯುಪಿಐನಂತಹ ಭಾರತದ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯವು ಅಂತರರಾಷ್ಟ್ರೀಯ ಮನ್ನಣೆ  ಗಳಿಸಿದೆ ಮತ್ತು ಇತರ ದೇಶಗಳು ಇದನ್ನು ಅಳವಡಿಸಿಕೊಳ್ಳುತ್ತಿವೆ. ಇದು – ಭಾರತದ ತಾಂತ್ರಿಕ ಪರಾಕ್ರಮ ಮತ್ತು ಜಾಗತಿಕ ನಾಯಕತ್ವದ – ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಸಮಕಾಲೀನ ಮತ್ತು ಭವಿಷ್ಯದ ಸವಾಲುಗಳು:

ಭಾರತವು ತನ್ನ ವಿದೇಶಾಂಗ ನೀತಿಯಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಇದೆ. ಇದರಲ್ಲಿ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಗಡಿ ವಿವಾದಗಳು, ಪ್ರಮುಖ ಶಕ್ತಿಗಳೊಂದಿಗಿನ ತನ್ನ ಸಂಬಂಧಗಳನ್ನು ಸಮತೋಲನ ಗೊಳಿಸುವ ಅಗತ್ಯತೆ ಮತ್ತು ಅಭಿವೃದ್ಧಿ ಮತ್ತು ಭದ್ರತೆಗೆ ಸಂಬಂಧಿಸಿದ ದೇಶೀಯ ಕಾಳಜಿಗಳನ್ನು ಪರಿಹರಿಸುವ ಅಗತ್ಯತೆ ಸೇರಿವೆ.

ಉಪಸಂಹಾರ:

ಭಾರತದ ವಿದೇಶಾಂಗ ನೀತಿಯು ವಿಕಸನಗೊಳ್ಳುತ್ತಲೇ ಇದೆ. ಅದರ ಸಾಂಪ್ರದಾಯಿಕ ಮೌಲ್ಯಗಳನ್ನು ಅದರ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳೊಂದಿಗೆ ಸಮತೋಲನಗೊಳಿಸುತ್ತಲೇ 21ನೇ ಶತಮಾನದ ಪ್ರಪಂಚದ ಸಂಕೀರ್ಣತೆಗಳಿಗೆ ತನ್ನನ್ನು ತಾನು ಹೊಂದಿಸಿ ಕೊಳ್ಳುತ್ತಿದೆ. ನೆಹರು ಕಾಲದ ಸಮಾನ ಅಂತರ ಕಾಯ್ದುಕೊಳ್ಳುವ ಆದರ್ಶವಾದಿ ತತ್ವಕ್ಕೆ ಬದಲಾಗಿ ಮೋದಿ ಸರಕಾರವು ದೇಶದ ಹಿತದೃಷ್ಟಿ ಕಾಪಾಡುವ ಸಮಾನ ಸಂಬಂಧದ ವಾಸ್ತವಿಕ ತತ್ವವನ್ನು ಅನುಸರಿಸುತ್ತಿದೆ

 

ಮಾಹಿತಿ ಕೃಪೆ: ಐ.ಜಿ. ಚೌಗಲಾ…..

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!