Age relaxation order: ರಾಜ್ಯ ಸರ್ಕಾರದ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 3 ವರ್ಷಗಳ ವಯೋಮಿತಿ ಸಡಿಲಿಕೆ, 2025ರ ಸೆಪ್ಟೆಂಬರ್ 29 ರಿಂದ 2027ರ ಡಿಸೆಂಬರ್ 31ರ ವರೆಗಿನ ನೇಮಕಾತಿಗಳಿಗೆ ಅನ್ವಯ
Good news: ರಾಜ್ಯ ಸರ್ಕಾರದ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೂರು ವರ್ಷಗಳ ಸಡಿಲಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಒಂದು ಬಾರಿಯ ಕ್ರಮವಾಗಿ ಈ ಸಡಿಲಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
2025ರ ಸೆಪ್ಟೆಂಬರ್ 29 ರಿಂದ 2027ರ ಡಿಸೆಂಬರ್ 31ರ ವರೆಗಿನ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳ ಅನ್ವಯ ಆಯ್ಕೆ ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ಮಿತಿ 3 ವರ್ಷ ಸಡಿಲಿಕೆ ಮಾಡಲಾಗಿದೆ.
ಪ್ರಸ್ತಾವನೆ:
1. ಮೇಲೆ (1) ರಲ್ಲಿ ಓದಲಾದ ದಿನಾಂಕ 25.11.2024ರ, ದಿನಾಂಕ 29.03.2025ರ ಮತ್ತು ದಿನಾಂಕ 11.04.2025ರ ಸರ್ಕಾರದ ಸುತ್ತೋಲೆಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಯಾಗುವವರೆಗೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅಥವಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ದಿನಾಂಕ: 28-10-2024 ರಿಂದ ಮುಂದಿನ ಆದೇಶದವರೆವಿಗೂ ಹೊರಡಿಸಬಾರದೆಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಲಾಗಿರುತ್ತದೆ.
2. ದಿನಾಂಕ: 18.08.2025 ರಂದು ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಕುರಿತು ನಿವೃತ್ತ ನ್ಯಾಯಮೂರ್ತಿ ಡಾ: ಹೆಚ್.ಎನ್. ನಾಗಮೋಹನ್ ದಾಸ್ ರವರ ಏಕ ಸದಸ್ಯ ಆಯೋಗವು ನೀಡಿರುವ ವರದಿಯ ಬಗ್ಗೆ’ ಚರ್ಚಿಸಿ ಸಚಿವ ಸಂಪುಟದಲ್ಲಿ ನಿರ್ಣಯಿಸಲಾದ 7 ಅಂಶಗಳ ಪೈಕಿ 4ನೇ ಅಂಶದಲ್ಲಿ “ಒಳಮೀಸಲಾತಿ ಕುರಿತು ಆದೇಶ ಹೊರಡಿಸಿದ ಕೂಡಲೇ, ರಾಜ್ಯ ಸಿವಿಲ್ ಸೇವೆಗಳ ಹುದ್ದೆಗಳಿಗೆ ತಡೆಹಿಡಿಯಲಾದ ನೇರ ನೇಮಕಾತಿ ಪಕ್ರಿಯೆಯನ್ನು ಪ್ರಾರಂಭಿಸಲು ಸಚಿವ ಸಂಪುಟವು ನಿರ್ಧರಿಸಿತು. ಒಳ ಮೀಸಲಾತಿಗಳ ಕುರಿತು ನಿರ್ಧಾರ ತೆಗೆದುಕೊಳ್ಳುವವರೆಗೆ ನೇರ ನೇಮಕಾತಿಯನ್ನು ತಾತ್ಕಾಲಿಕವಾಗಿಸ್ಥಗಿತಗೊಳಿಸಲಾಗಿರುವುದರಿಂದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ಆಯಾ ನೇಮಕಾತಿಗಳಿಗೆ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲು ಸಂಪುಟ ನಿರ್ಧರಿಸಿದೆ. ಸಡಿಲಿಕೆಯ ಪ್ರಮಾಣ ಮತ್ತು ಅವಧಿಯನ್ನು ನಿರ್ಧರಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ.” ಎಂದು ನಿರ್ಣಯಿಸಲಾಗಿದೆ.
3. ಅದರಂತೆ, ಮೇಲೆ (2) ರಲ್ಲಿ ಓದಲಾದ ದಿನಾಂಕ:6.09.2025 ರ ಆದೇಶವನ್ನು ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31.12.2027 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 2 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ.
4. ನಂತರದಲ್ಲಿ ಹಲವಾರು ಉದ್ಯೋಗಾಕಾಂಕ್ಷಿಗಳು, ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿರುತ್ತಾರೆ. ಸದರಿ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025 ಬೆಂಗಳೂರು ದಿನಾಂಕ:29.09.2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (2)ರಲ್ಲಿ ಓದಲಾದ ದಿನಾಂಕ: 06.09.2025ರ ಆದೇಶವನ್ನು ಹಿಂಪಡೆದು, ಈ ಆದೇಶ ಹೊರಡಿಸಿದ ದಿನಾಂಕದ ನಂತರ ಮುಂದಿನ ದಿನಾಂಕ 31.12.2027 ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸುವ ಅಧಿಸೂಚನೆಗಳನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪವರ್ಗಗಳ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಆಯಾಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ (as a one-time measure) 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಲಾಗಿದೆ.