LKG and UKG Classes: ರಾಜ್ಯದಲ್ಲಿ LKG ಮತ್ತು UKG ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ
LKG and UKG Classes: 2025-26ನೇ ಸಾಲಿನ ಆಯವ್ಯಯ ಕಂಡಿಕೆ 111(i) ಅಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ LKG ಮತ್ತು UKG ತರಗತಿಗಳನ್ನು ಆರಂಭಿಸಲು ಸರ್ಕಾರ ಘೋಷಣೆ ಮಾಡಿದೆ. ಇದರ ಸಂಪೂರ್ಣ ಮಾಹಿತಿ, ಲಾಭಗಳು ಮತ್ತು ಅನುಷ್ಠಾನ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮಾಂಕ (1)ರ 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 111(1)ರಲ್ಲಿ ‘ಪ್ರಸ್ತುತ 2,619 ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 90,195 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ. ಈ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 5,000 ಶಾಲೆಗಳಿಗೆ ವಿಸ್ತರಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
ಸರ್ಕಾರದ ಆದೇಶ ಸಂಖ್ಯೆ ಇಪಿ 251 ಪಿಬಿಎಸ್ 2024 ದಿನಾಂಕ 11.06.2024ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಆಯ್ದ 1008 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಸರ್ಕಾರದ ಆದೇಶ ಸಂಖ್ಯೆ ಇಪಿ 257 ಪಿಬಿಎಸ್ 2024 ದಿನಾಂಕ 20.06.2024ರಲ್ಲಿ ರಾಜ್ಯದ ಆಯ್ದ 908 PAB ಅನುಮೋದಿತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ಸರ್ಕಾರದ ಆದೇಶ ಸಂಖ್ಯೆ ಇಪಿ 258 ಪಿಬಿಎಸ್ 2024 ದಿನಾಂಕ 19.06.2024ರಲ್ಲಿ 578 PAB ಅನುಮೋದಿತ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಸರ್ಕಾರದ ಆದೇಶ ಸಂಖ್ಯೆ ಇಪಿ 352 ಪಿಬಿಎಸ್ 2024 ದಿನಾಂಕ 09.09.224ರಲ್ಲಿ 367 ಪಿಎಂ ಶ್ರೀ ಶಾಲೆಗಳಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ ಕ್ರಮಾಂಕ (2)ರಲ್ಲಿ 2025-26ನೇ ಸಾಲಿನ ಆಯವ್ಯಯ ಕಂಡಿಕೆ ಸಂಖ್ಯೆ 111 (i) ರನ್ನಯ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಒಟ್ಟು 1496 ಶಾಲೆಗಳು, ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಒಟ್ಟು 1119 ಶಾಲೆಗಳು ಹಾಗೂ ಇತರೆ ಮ್ಯಾಗ್ನೆಟ್ ಶಾಲೆಗಳು 1706 ಶಾಲೆಗಳು ಸೇರಿದಂತೆ ಒಟ್ಟಾರೆ 3837 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸಲು ಯೋಜಿಸಿದ್ದು, ಸದರಿ ಪ್ರಸ್ತಾವನೆಗೆ ಸರ್ಕಾರದ ಅನುಮತಿ ನೀಡುವಂತೆ ಕೋರಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (3)ರಲ್ಲಿ 2025-26ನೇ ಸಾಲಿಗೆ 5000 ಶಾಲೆಗಳ ಪೂರ್ವ ಪ್ರಾಥಮಿಕ (ECCE) ತರಗತಿ ಅಭ್ಯಾಸ ಪುಸ್ತಕ, ಶಿಕ್ಷಕರ ಕೈಪಿಡಿ, ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಲು ನಡೆಸಲಾದ ಸಭೆ, ಕಾರ್ಯಾಗಾರಗಳು, ಮುದ್ರಣ ವೆಚ್ಚ, ತರಬೇತಿ ಸಾಹಿತ್ಯಗಳನ್ನು ಸಿದ್ಧಪಡಿಸಲು ಮತ್ತು ತರಬೇತಿ ವೆಚ್ಚಗಳು ಸೇರಿದಂತೆ ರೂ.2,77,74,561/-ಗಳನ್ನು ಅಂದಾಜಿಸಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (4)ರ 2025-26ನೇ ಸಾಲಿನ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ(PAB)ಯ ಸಭಾ ನಡವಳಿಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ಮಧ್ಯಾಹ್ನ ಉಪಹಾರ ನೀಡಲು ಕೇಂದ್ರದ ಪಾಲಿನ ಅನುದಾನಕ್ಕೆ ಅನುಮೋದನೆ ನೀಡಲಾಗಿರುತ್ತದೆ. ಈ ಸಭಾ ನವಳಿಯನ್ನು ಆಧರಿಸಿ ಮೇಲೆ ಓದಲಾದ ಕ್ರಮಾಂಕ (5)ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಏಕ ಕಡತದಲ್ಲಿ ವಿವಿಧ ಯೋಜನೆಗಳಡಿ ಅಂದರೆ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ವತಿಯಿಂದ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ, ಪಿ.ಎಂ ಶ್ರೀ ಯೋಜನೆಯಡಿ ಮತ್ತು ಕಲ್ಯಾಣ ಕರ್ನಾಟಕ ಭಾಗ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿಯ ವತಿಯಿಂದ ಈಗಾಗಲೇ ಪ್ರಾರಂಭಿಸಲಾಗಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಹಾಗೂ 2025-26ನೇ ಸಾಲಿನಲ್ಲಿ ಪ್ರಾರಂಭವಾಗಲಿರುವ ಪೂರ್ವ ಪ್ರಾಥಮಿಕ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ಮತ್ತು ಪೂರಕ ಪೌಷ್ಠಿಕ ಆಹಾರವಾದ ಮೊಟ್ಟೆ/ಬಾಳೆಹಣ್ಣನ್ನು ನೀಡುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಮಗ್ರ ಶಿಕ್ಷಣ ಕರ್ನಾಟಕವು ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಮಕ್ಕಳಿಗೆ ನಿಗದಿಪಡಿಸಿದ ಮಧ್ಯಾಹ್ನ ಊಟದ ಪೌಷ್ಠಿಕ ಮೌಲ್ಯಗಳು ಭಾರತ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ. ಆದ್ದರಿಂದ ಪೂರ್ವ ಪ್ರಾಥಮಿಕ ಮಕ್ಕಳಿಗೆ ಒದಗಿಸಲಾಗುವ ಮೂಲಭೂತ ಮಧ್ಯಾಹ್ನದ ಊಟದಲ್ಲಿ 418 ಕ್ಯಾಲೋರಿಗಳ ಶಕ್ತಿ ಮತ್ತು 8.7 ಗ್ರಾಂ ಪೋಟೀನ್ಗಳನ್ನು ಹೊಂದಿರುವ ಆಹಾರವನ್ನು ವಿತರಿಸಲಾಗುತ್ತಿದೆ. ಇದರ ಜೊತೆಗೆ ಕ್ಷೀರಭಾಗ್ಯ ಯೋಜನೆಯಡಿ ವಾರಕ್ಕೆ 5 ದಿನ ಹಾಲು ಮತ್ತು ವಾರಕ್ಕೆ 6 ದಿನ ಬಾಳೆಹಣ್ಣು/ಮೊಟ್ಟೆ ಒದಗಿಸಲಾಗುತ್ತಿದೆ. ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ಒದಗಿಸಲಾಗುವ ಪೌಷ್ಠಿಕಾಂಶದ ಪೂರಕಗಳು ಹೆಚ್ಚಿನ ಕ್ಯಾಲೋರಿ ಮೌಲ್ಯ ಹಾಗೂ ಪ್ರೋಟೀನ್ ಅಂಶಗಳನ್ನು ಹೊಂದಿವೆ. ಈ ಪೌಷ್ಠಿಕಾಂಶದ ಆಹಾರ ಪದಾರ್ಥಗಳನ್ನು ಸರ್ಕಾರವು ಸಮಗ್ರ ಶಿಕ್ಷಣ ಕರ್ನಾಟಕ (SSK) ಮೂಲಕ ಒದಗಿಸಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿರುವ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಬೋಧನೆಯ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ತರಗತಿ ಬೋಧಿಸುವ ಅತಿಥಿ ಶಿಕ್ಷಕ / ಶಿಕ್ಷಕಿಯರಿಗೆ ಪ್ರತಿ ವರ್ಷವೂ 5 ದಿನಗಳ ತರಬೇತಿಯನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡಲಾಗುತ್ತಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 64 ಎಂಪಿಇ 2024 ಬೆಂಗಳೂರು ದಿನಾಂಕ:15.10.2025 ರಂತೆ 474 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಆದೇಶಿಸಲಾಗಿದೆ. ಸದರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳು ಮಂಜೂರಾಗದಿರುವ ಶಾಲೆಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿದ 200 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳು ಮಂಜೂರಾಗದಿರುವ ಶಾಲೆಗಳನ್ನು ಗುರುತಿಸಲಾಗಿದೆ.
2018-19ನೇ ಸಾಲಿನಿಂದ 2024-25ನೇ ಸಾಲಿನವರೆಗೆ 2619 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಿ ನಡೆಸಲಾಗುತ್ತಿದೆ. ಮಾನ್ಯ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಮಾನ್ಯ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:17-07-2025 ರಂದು ನಡೆದ ಸಭೆಯಲ್ಲಿ ಈ ಕೆಳಕಂಡಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಾರಂಭಿಸಿರುವ ಪೂರ್ವ ಪ್ರಾಥಮಿಕ ತರಗತಿಗಳನ್ನು ಮುಂದುವರೆಸಲು ತೀರ್ಮಾನಿಸಲಾಯಿತು. 2025-26ನೇ ಸಾಲಿನ ಬಜೆಟ್ ಘೋಷಣೆಯಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 5000 ಇಸಿಸಿಇ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವುದು. ಸದರಿ 5000 ಇಸಿಸಿಇ ತರಗತಿಗಳನ್ನು ಪ್ರಾರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರ್ಣ ಸಹಕಾರವಿರುತ್ತದೆ.
ಪ್ರಸ್ತುತ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026-27ನೇ ಸಾಲಿನಿಂದ ಪ್ರಾರಂಭಿಸಲು ಉದ್ದೇಶಿಸಿರುವ KPS ಶಾಲೆಗಳಲ್ಲಿ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವುದು. ಉಳಿದಂತೆ ಶಾಲಾ ಆವರಣದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಉದ್ದೇಶಿಸಲಾಗಿರುವ ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರಾರಂಭಿಸುವುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ನಿಗದಿತ ಪ್ರಮಾಣದ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಮತ್ತು ಮಕ್ಕಳ Growth Monitoring ಅನ್ನು ಅಳೆಯಲು ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ಸೂಕ್ತ ಉಪಕರಣಗಳ ಖರೀದಿ ಮತ್ತು ಸಿಬ್ಬಂದಿ ತರಬೇತಿ ಕುರಿತು ಕ್ರಮವಹಿಸುವುದು.
ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರಿಂದ ಸಲ್ಲಿಕೆಯಾದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 176 ಪಿಬಿಎಸ್ 2025, ಬೆಂಗಳೂರು ದಿನಾಂಕ:14.11.2025
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 111(i)ರಲ್ಲಿ ಘೋಷಿಸಿರುವಂತೆ ಅನುಬಂಧ-1 ರಂತೆ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 1105 ಶಾಲೆಗಳು, 126 ಪಿ.ಎಂ.ಶ್ರೀ ಶಾಲೆಗಳು, ಕೆ.ಕೆ.ಆರ್.ಡಿ.ಬಿ ಯೋಜನೆಯಡಿ 1126 ಶಾಲೆಗಳು ಮತ್ತು 1699 ಮ್ಯಾಗ್ನೆಟ್ ಶಾಲೆಗಳು ಸೇರಿದಂತೆ ಅನುಬಂಧ-1 ರಂತೆ ಒಟ್ಟಾರೆ 4056 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿವಾರು LKG, UKG ಪ್ರತ್ಯೇಕ ತರಗತಿಗಳನ್ನು ಪ್ರಾರಂಭಿಸಲು ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಅನುಮತಿ ನೀಡಿ ಆದೇಶಿಸಿದೆ.
1. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2804 ಸರ್ಕಾರಿ ಶಾಲೆಗಳು ಹಾಗೂ 126 ಪಿ.ಎಂ.ಶ್ರೀ ಶಾಲೆಗಳು ಸೇರಿದಂತೆ ಒಟ್ಟಾರೆ 2930 ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳಿಗೆ ತಗಲುವ ವೆಚ್ಚವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅನುದಾನದಲ್ಲಿ ಭರಿಸತಕ್ಕದ್ದು.
2. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗುವ 1126 ಪೂರ್ವ ಪ್ರಾಥಮಿಕ ತರಗತಿಗಳಿಗೆ ತಗಲುವ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಭರಿಸತಕ್ಕದ್ದು.
3. 2018-19 ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಅನುಬಂಧ-2 ರಂತೆ 2619 ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿ ನಡೆಯುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳನ್ನು ಮುಂದುವರೆಸುವುದು.
4. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ನಡೆಸಲಾಗುತ್ತಿರುವ ಪೂರ್ವ ಪ್ರಾಥಮಿಕ ತರಗತಿಗಳನ್ನು ತರಗತಿವಾರು ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮದಲ್ಲಿ ನಡೆಸಲು ಕ್ರಮವಹಿಸುವುದು. ಸದರಿ
5. ವಿದ್ಯಾರ್ಥಿಗಳಿಗೆ LKG, UKG ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಗುವುದು. ಪೂರ್ವ ಪ್ರಾಥಮಿಕ ತರಗತಿಗಳನ್ನು ಪೂರ್ವಾಹ್ನ 10.00 ರಿಂದ ಅಪರಾಹ್ನ 3.30ರ ವರೆಗೆ ನಡೆಸತಕ್ಕದ್ದು.
6. ಪೂರ್ವ ಪ್ರಾಥಮಿಕ ತರಗತಿಗಳನ್ನು ನಡೆಸಲು ಅಗತ್ಯ ಮೂಲಭೂತ ಸೌಕರ್ಯ ಮತ್ತು 2. ಕಲಿಕಾ ಸೌಕರ್ಯಗಳನ್ನು ನಿಯಮಾನುಸಾರ ಒದಗಿಸಲು ಉಪನಿರ್ದೇಶಕರು(ಆಡಳಿತ) ಇವರಿಗೆ ಸೂಕ್ತ ನಿರ್ದೇಶನ ನೀಡುವುದು. ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿ ಸಜ್ಜುಗೊಳಿಸುವುದು.
7. 2025-26ನೇ ಸಾಲಿಗೆ ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲು ಮಾಡಿಕೊಳ್ಳುವುದು. ಈ ವಿಭಾಗ ಪ್ರಾರಂಭಿಸಲು ಅರ್ಹ ವಯೋಮಾನದ ಕನಿಷ್ಠ 20 ಮಕ್ಕಳು ದಾಖಲಾತಿ ಪಡೆಯುವಂತಿರಬೇಕು ಹಾಗೂ KPS ಶಾಲೆಗಳೂ ಸೇರಿದಂತೆ ಅನುಮೋದನೆಯಾಗಿರುವ ಎಲ್ಲಾ ಶಾಲೆಗಳಲ್ಲಿ ತರಗತಿಗೆ ಗರಿಷ್ಟ 40 ಮಕ್ಕಳನ್ನು ಮಾತ್ರ ದಾಖಲಿಸತಕ್ಕದ್ದು. ಪ್ರಸ್ತುತ ಸಾಲಿನಲ್ಲಿ ಕನಿಷ್ಠ ಸಂಖ್ಯೆ ದಾಖಲಾತಿ ಇಲ್ಲವಾದಲ್ಲಿ ಇಂಥಹ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಮುಂದಿನ ಸಾಲಿನಲ್ಲಿ ಪ್ರಾರಂಭಿಸತಕ್ಕದ್ದು.
8. ಭಾರತ ಸರ್ಕಾರವು ಪೂರ್ವ ಪ್ರಾಥಮಿಕ ಮಕ್ಕಳಿಗೆ ನಿಗದಿಪಡಿಸಿದ ಮಧ್ಯಾಹ್ನ ಊಟದ ಪೌಷ್ಠಿಕ ಮೌಲ್ಯಗಳಂತೆ ಪೂರ್ವ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ಕ್ಷೀರಭಾಗ್ಯ ಮತ್ತು ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುವುದು. ಈ ಸಂಬಂಧ ಪ್ರತ್ಯೇಕ ಸರ್ಕಾರದ ಆದೇಶ ಹೊರಡಿಸಲಾಗುವುದು.
9. ಪೂರ್ವಪ್ರಾಥಮಿಕ ತರಗತಿ ಮಕ್ಕಳಿಗೆ ಡಿ.ಎಸ್.ಇ.ಆರ್.ಟಿ.ಯಿಂದ ಹೊಸದಾಗಿ ಈ ವರ್ಷ ಅಭಿವೃದ್ಧಿ ಪಡಿಸಿರುವ ಬಾಲಚೇತನ ಅಭ್ಯಾಸ ಪುಸ್ತಕಗಳನ್ನು 2025-26ನೇ ಸಾಲಿಗೆ ಸರ್ಕಾರಿ ಮುದ್ರಣ, ಲೇಖನ ಸಾಮಗ್ರಿ ಹಾಗೂ ಪ್ರಕಟಣೆಗಳ ಇಲಾಖೆಯಿಂದ ಮುದ್ರಿಸಿ ನೀಡುವುದು. ಮುದ್ರಣದ ಸಂಬಂಧ ಪ್ರತ್ಯೇಕ ಆದೇಶ ಹೊರಡಿಸಲಾಗುವುದು.
10. ಪೂರ್ವ ಪ್ರಾಥಮಿಕ ತರಗತಿಗಳಿಗೆ ನಿಗದಿತ ಮಾನದಂಡಗಳಂತೆ ಅರ್ಹ ಶಿಕ್ಷಕರು ಮತ್ತು ಆಯಾಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಉಪನಿರ್ದೇಶಕರು(ಆಡಳಿತ) ಇವರಿಗೆ ಸೂಕ್ತ ನಿರ್ದೇಶನ ನೀಡತಕ್ಕದ್ದು.
11. ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕರು ಮತ್ತು ಒಬ್ಬರು ಆಯಾ ಅನ್ನು ನಿಗದಿಪಡಿಸಿದ ಮಾನದಂಡಗಳಂತೆ ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುವುದು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕರಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ ರೂ. 12,000.00 ಮತ್ತು ಆಯಾ ಇವರಿಗೆ ಮಾಸಿಕ ರೂ. 6,250.00 ಸಂಭಾವನೆಯನ್ನು ನಿಗದಿಪಡಿಸತಕ್ಕದ್ದು.
12. ಶಿಕ್ಷಕರು ಮತ್ತು ಆಯಾಗಳ ಗೌರವಧನ ಪಾವತಿಗೆ ಮತ್ತು ಪೂರ್ವಪ್ರಾಥಮಿಕ ತರಗತಿಗಳಲ್ಲಿ ಕಲಿಕಾ ಸೌಕರ್ಯಗಳನ್ನು ಒದಗಿಸಲು ಶಾಲಾ ಎಸ್.ಡಿ.ಎಂ.ಸಿ. ಜಂಟಿ ಖಾತೆಗಳಿಗೆ ಬಿಡುಗಡೆ ಮಾಡಲಾಗುವ ಅನುದಾನವನ್ನು ಸರ್ಕಾರದ ಆದೇಶಗಳು, ಸುತ್ತೋಲೆಗಳು ಮತ್ತು KTPP ಕಾಯಿದೆ ಮತ್ತು ನಿಯಮಗಳಂತೆ ವೆಚ್ಚಗಳನ್ನು ಭರಿಸಲು ಸೂಕ್ತ ನಿರ್ದೇಶನ ನೀಡತಕ್ಕದ್ದು.
13. ಕೆ.ಕೆ.ಆರ್.ಡಿ.ಬಿ ಅನುದಾನದಿಂದ ಪ್ರಾರಂಭಿಸಲಾಗುತ್ತಿರುವ 1126 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಸಂಬಂಧಿಸಿದಂತೆ ಕೆ.ಕೆ.ಆರ್.ಡಿ.ಬಿ. ಅನುದಾನದಿಂದ ಹಾಗೂ ಉಳಿದ 2930 ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ತರಗತಿಗಳಿಗೆ ಸಂಬಂಧಿಸಿದಂತೆ ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯಿಂದ ಅನುದಾನವನ್ನು ಆಯಾ ಶಾಲಾ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಜಂಟಿ ಖಾತೆಗೆ ಬಿಡುಗಡೆ ಮಾಡತಕ್ಕದ್ದು.
14. ಪೂರ್ವ ಪ್ರಾಥಮಿಕ ತರಗತಿಗಳಿಗೆ ನೇಮಕಗೊಳ್ಳುವ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ತರಬೇತಿ ನೀಡಲು ಅಗತ್ಯ ಕ್ರಮವಹಿಸತಕ್ಕದ್ದು.
15. ಪೂರ್ವಪ್ರಾಥಮಿಕ ತರಗತಿಗಳಿಗೆ ದಾಖಲಾಗುವ ಮಕ್ಕಳ ವಿವರವನ್ನು ಆಯಾ ಶಾಲಾ ಮುಖ್ಯಸ್ಥರು ಕಡ್ಡಾಯವಾಗಿ SATS ನಲ್ಲಿ ದಾಖಲಿಸುವುದು ಹಾಗೂ ಪ್ರತಿದಿನ ಹಾಜರಾತಿಯನ್ನು ದಾಖಲಿಸುವಂತೆ ನಿರ್ದೇಶನ ನೀಡತಕ್ಕದ್ದು.
16. ಈ ಆದೇಶದಂತೆ ಅನುಮತಿ ನೀಡಿದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು, ದಾಖಲಾತಿಗೆ ಪ್ರಚಾರ, ದಾಖಲಾತಿ ಪ್ರಕ್ರಿಯೆ ಪ್ರಾಂಭಿಸಲು, ಶಿಕ್ಷಕರು/ಆಯಾಗಳ ನೇಮಕಾತಿ ಮಾನದಂಡಗಳು, ನೇಮಕಾತಿ ವಿಧಾನ, ತರಗತಿಗಳಲ್ಲಿ ಅನುಸರಿಸಬೇಕಾದ ಪಠ್ಯಕ್ರಮ, ಬೋಧನಾ-ಕಲಿಕಾ ವಿಧಾನ, ಬಳಸಬೇಕಾಗಿರುವ ಕಲಿಕೋಪಕರಣಗಳ ಬಗ್ಗೆ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರ ಹಂತದಲ್ಲಿ ವಿಸ್ತ್ರತ ಸುತ್ತೋಲೆಯನ್ನು ಹೊರಡಿಸುವುದು.
ಆಡಳಿತಾತ್ಮಕ ಕ್ರಮಗಳು:
ಪೂರ್ವ ಪ್ರಾಥಮಿಕ ತರಗತಿಗಳಿಗೆ ಶಿಕ್ಷಕರು ಮತ್ತು ಆಯಾರವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
1. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕರಿಗೆ ಅಗತ್ಯ ಕನಿಷ್ಠ ವಿದ್ಯಾರ್ಹತೆ:
ಪದವಿ ಪೂರ್ವ ಶಿಕ್ಷಣದಲ್ಲಿ (PUC) ಕನಿಷ್ಠ 50% ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು ಮತ್ತು NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಎರಡು ಅಥವಾ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಡಿಪ್ಲೋಮಾ ಇನ್ ನರ್ಸರಿ ಟೀಚರ್ಸ್ ಎಜ್ಯುಕೇಶನ್/ಪ್ರೀ-ಸ್ಕೂಲ್ ಟೀಚರ್ ಎಜ್ಯುಕೇಶನ್/ಡಿಪ್ಲೋಮಾ ಇನ್ ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್ ಪ್ರೊಗ್ರಾಂ (ಡಿ.ಇ.ಸಿ.ಇಡಿ) ಅಥವಾ ಬಿ.ಇಡಿ (ನರ್ಸರಿ) ಅರ್ಹತೆ Diploma in Nursery Teachers Education/Pre-School Teacher Education/ Diploma in Early Childhood Education Programme (D.E.C.ED) of duration of not less than two years or B.Ed(Nursery)]
ಪರ್ಯಾಯ ವಿದ್ಯಾರ್ಹತೆ: ಒಂದು ವೇಳೆ ಈ ಮೇಲಿನ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪಿ.ಯು.ಸಿ.ಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆಯುವುದರ ಜೊತೆಗೆ NCTE ಮಾನ್ಯತೆ ಪಡೆದ ಸಂಸ್ಥೆಯಿಂದ ಡಿ.ಎಡ್ ತರಬೇತಿ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸತಕ್ಕದ್ದು.
ಗರಿಷ್ಟ ವಯೋಮಿತಿ: 45 ವರ್ಷಗಳು.
2. ಆಯಾಗಳ ಹುದ್ದೆಗೆ ಮಾನದಂಡಗಳು:
ವಿದ್ಯಾರ್ಹತೆ: ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣತೆ
ವಯೋಮಿತಿ: 45 ವರ್ಷಕ್ಕಿಂತ ಕಡಿಮೆ ವಯೋಮಾನದ ಸ್ಥಳೀಯ ಮಹಿಳೆಯಾಗಿರಬೇಕು (ಆಯಾ ಗ್ರಾಮ/ವಾರ್ಡ್ ವ್ಯಾಪ್ತಿಯವರು). ಒಂದು ವೇಳೆ ಸ್ಥಳೀಯವಾಗಿ ಯಾವುದೇ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಸರ್ಕಾರಿ ಶಾಲೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದವರು /ಪಕ್ಕದ ವಾರ್ಡಿನವರನ್ನು ಪರಿಗಣಿಸತಕ್ಕದ್ದು.
3. ತರಗತಿವಾರು ಶಿಕ್ಷಕರು ಮತ್ತು ಆಯಾ ಇವರ ಆಯ್ಕೆಯಲ್ಲಿ ಅನುಸರಿಸಬೇಕಾದ ವಿಧಾನ:-
ತರಗತಿವಾರು ಶಿಕ್ಷಕರು ಮತ್ತು ಆಯಾಗಳ ನೇಮಕಾತಿ ಕುರಿತು ವ್ಯಾಪಕ ಪ್ರಚಾರ ಮಾಡತಕ್ಕದ್ದು.
ತರಗತಿವಾರು ಶಿಕ್ಷಕರು/ಆಯಾ ಆಯ್ಕೆ ಸಮಿತಿ:
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇರುವ ಮುಖ್ಯ ಶಿಕ್ಷಕರು, ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಒಬ್ಬ ಹಿರಿಯ ಸಹ ಶಿಕ್ಷಕರು ಸದಸ್ಯರಾಗಿರತಕ್ಕದ್ದು.
ತರಗತಿವಾರು ಶಿಕ್ಷಕರ ಆಯ್ಕೆಗೆ ವಿವಿಧ ಅಂಶಗಳಿಗೆ ನೀಡಬೇಕಾದ ಮೌಲ್ಯ (weightage):
ಅರ್ಹ ಅಭ್ಯರ್ಥಿಗಳ ಪೈಕಿ ಈ ಕೆಳಗಿನ ಅಂಶಗಳಂತೆ ಅತೀ ಹೆಚ್ಚು ಒಟ್ಟು ಅಂಕಗಳಿಸಿದವರನ್ನು ಪರಿಗಣಿಸತಕ್ಕದ್ದು.

ಆಯಾ ಆಯ್ಕೆಗೆ ಅನುಸರಿಸಬೇಕಾದ ವಿಧಾನ:

4. ಮೇಲ್ಕಂಡಂತೆ ನೇಮಕ ಮಾಡಿಕೊಂಡ ಶಾಲಾವಾರು ಶಿಕ್ಷಕರು ಮತ್ತು ಆಯಾ ಇವರ ಪಟ್ಟಿಯನ್ನು ಎಲ್ಲಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಇವರಿಗೆ ಸಲ್ಲಿಸತಕ್ಕದ್ದು.
5. ಆಯ್ಕೆಯಾದ ತರಗತಿವಾರು ಶಿಕ್ಷಕರು/ ಆಯಾ ಇವರನ್ನು ಆಯಾ ಶೈಕ್ಷಣಿಕ ವರ್ಷದ ಮಾರ್ಚ್-31ರವರೆಗೆ ಮಾತ್ರ ನೇಮಕಗೊಳಿಸತಕ್ಕದ್ದು.
6. ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಬಳಸಬೇಕಾದ ಪಠ್ಯಕ್ರಮ, ಬೋಧನೋಪಕರಣಗಳು ಮುಂತಾದವುಗಳನ್ನು ಕೂಡಲೇ ಶಾಲೆಗಳಿಗೆ ಒದಗಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ.
7. ಆಯ್ಕೆಯಾದ ಶಿಕ್ಷಕರಿಗೆ ಡಯಟ್ಗಳಲ್ಲಿ ತರಬೇತಿಯನ್ನು ನೀಡತಕ್ಕದ್ದು.
8. ಉಪನಿರ್ದೇಶಕರು(ಅಭಿವೃದ್ಧಿ) ಇವರು ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಬೋಧನಾ ಕಲಿಕಾ ಪ್ರಕ್ರಿಯೆ, ಶಿಕ್ಷಕರ ತರಬೇತಿ, ಮಕ್ಕಳ ಕಲಿಕಾ ಪ್ರಗತಿ ಮುಂತಾದ ಶೈಕ್ಷಣಿಕ ಚಟುವಟಿಕೆಗಳ ಮಾರ್ಗದರ್ಶನ ಮತ್ತು ಮೇಲುಸ್ತುವಾರಿ ಮಾಡತಕ್ಕದ್ದು.
9. ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ ಇವರು ಗುರುತಿಸತಕ್ಕದ್ದು.
10. ಕ್ಷೇತ್ರಶಿಕ್ಷಣಾಧಿಕಾರಿಗಳು ಮೇಲಿನ ಎಲ್ಲಾ ಅಂಶಗಳ ಉಸ್ತುವಾರಿಯನ್ನು ಅವರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ನಿರ್ವಹಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 433 ವೆಚ್ಚ-8 /2025 ದಿನಾಂಕ:05.06.2025 ಹಾಗೂ ಸರ್ಕಾರದ ಆದೇಶ ಸಂಖ್ಯೆ ಎಫ್ ಡಿ 03 ಟಿಎಫ್ ಪಿ 2025 ದಿನಾಂಕ:24.09.2025 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಇವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ.

CLICK HERE -ಪೂರ್ವ ಪ್ರಾಥಮಿಕ ಶಿಕ್ಷಣ ತರಗತಿಗಳನ್ನು ಪ್ರಾರಂಭಿಸಲು ಆಯ್ಕೆ ಮಾಡಲಾದ 4056 ಶಾಲೆಗಳ ಪಟ್ಟಿ.
CLICK HERE – ಸರ್ಕಾರಿ ಆದೇಶದ PDF File