Heat Wave Safety Tips: ಬಿಸಿಗಾಳಿಯಲ್ಲಿ ಆರೋಗ್ಯ ರಕ್ಷಣೆಗಾಗಿ ಅಗತ್ಯ ಸೂಚನೆಗಳು-2026
Heat Wave Safety Tips: ಭಾರತೀಯ ಹವಾಮಾನ ಇಲಾಖೆಯು (IMD) ಉಲ್ಲೇಖಿತ ಪತ್ರಿಕಾ ಪ್ರಕಟಣೆಯಲ್ಲಿ 2026ರ ಬೇಸಿಗೆ ಕಾಲದ (ಮಾರ್ಚ್ನಿಂದ ಮೇ) ತಾಪಮಾನದ ಅವಧಿಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುವ (Above Normal) ಸಾಧ್ಯತೆಯಿದೆ.
ಆದರೆ ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದ್ದು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇದು ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ 3 ರಿಂದ 6 ದಿನಗಳವರೆಗೆ ಬಿಸಿಗಾಳಿಯ ಪ್ರಭಾವ ಕಂಡುಬರುವ ಸಾಧ್ಯತೆಯಿದೆ.
ಮಾರ್ಚ್ ತಿಂಗಳಿನಲ್ಲಿ ರಾಜ್ಯಾದ್ಯಂತ ಬಿಸಿಗಾಳಿ ಬೀಸುವ ಸಂಭವನೀಯತೆ ಇರುವುದಿಲ್ಲ. ತೀವು ತಾಪಮಾನವು ಸಾರ್ವಜನಿಕರ ಆರೋಗ್ಯದ ಮೇಲೆ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಬಿಸಿಲಿನಿಂದ ಉಂಟಾಗುವ ಬಳಲಿಕೆ, ನಿರ್ಜಲೀಕರಣ ಮತ್ತು ಲೂ (Heatstroke) ತಡೆಗಟ್ಟಲು ಮತ್ತು ತಗ್ಗಿಸಲು ಈ ಕೆಳಕಂಡ ಸಲಹೆ/ಸೂಚನೆಗಳನ್ನು ನೀಡಲಾಗಿದೆ:
1 ಅತೀ ಹೆಚ್ಚು ತಾಪಮಾನದಿಂದ(heat wave) ಉಂಟಾಗುವ ಅನಾರೋಗ್ಯವನ್ನು ತಡೆಗಟ್ಟಲು ಸಾಮಾನ್ಯ ಸೂಚನೆಗಳು:
ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು (ಮಧ್ಯಾಹ್ನ 12.00 ರಿಂದ 3.00 ರವರೆಗೆ).
i. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯುವುದು.
ii. ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸುವುದು.
ii. ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಬಳಸುವುದು.
iv. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವುದು (ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು).
V. ಪೂರ್ವಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಹೊರಾಂಗಣ ಸಭೆಗಳು /ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆಯನ್ನು ನೀಡಲು ಅಗತ್ಯ ಶಾಮಿಯಾನ / ಪೆಂಡಾಲ್ ವ್ಯವಸ್ಥೆ ಮಾಡುವುದು, ಉತ್ತಮ ಗಾಳಿಯ (Air Circulation) ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು. ಹಾಗೂ ಸಭಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡುವುದು.
vi. ಪ್ರಯಾಣ ಮಾಡುವಾಗ, ನೀರನ್ನು ಜೊತೆಯಲ್ಲಿ ಒಯ್ಯುವುದು.
vii. ದೇಹವನ್ನು ನಿರ್ಜಲೀಕರಣಗೊಳಿಸುವ ಆಲೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳನ್ನು ತಪ್ಪಿಸುವುದು.
viii. ಸಾಧ್ಯವಾದಷ್ಟು ಬಿಸಿ ಆಹಾರವನ್ನು ಸೇವಿಸುವುದು.
ix. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡದಿರುವುದು.
X. ಮೂರ್ಛ ಅಥವಾ ಅನಾರೋಗ್ಯ ಅನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡುವುದು.
Xi. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ORS ಅನ್ನು ಬಳಸುವುದು. xi.
xii. ಈ ಋತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ಹಾಗೂ ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ತರಕಾರಿ ಸೊಪ್ಪು, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು.
xiii, ಸಾಕು ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುವುದು.
xiv, ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್ಗಳು ಅಥವಾ ಸನ್ಶೇಡ್ಗಳನ್ನು ಬಳಸುವುದು.
XV. ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ / ಟೋಪಿ ಅಥವಾ ಕ್ಯಾಪ್/ಹೆಡ್ ಕವರ್, ಹ್ಯಾಂಡ್ ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟೋಲೈಟ್/ಗ್ಲೋಕೋಸ್/ ORS ಅನ್ನು ಒಳಗೊಂಡಿರುವ ಅತೀ ಹೆಚ್ಚು ತಾಪಮಾನವನ್ನು (heat wave) ತಡೆಗಟ್ಟುವ ಕಿಟ್ ಅನ್ನು ಒಯ್ಯಲು ನಾಗರಿಕರನ್ನು ಪ್ರೋತ್ಸಾಹಿಸುವುದು.
i. ಶಾಖ ಸೆಳೆತಗಳು (Heat cramps): ಸಾಮಾನ್ಯವಾಗಿ 39° C ಅಂದರೆ 102°F ಗಿಂತ ಕಡಿಮೆ ಜ್ವರದಿಂದ ಬಳಲುತ್ತಿರುವವರಲ್ಲಿ, ಎಡಿಮಾ (ಊತ) ಮತ್ತು ಮೂರ್ಛಯಂತಹ ಲಕ್ಷಣಗಳು ಕಂಡು ಬರುತ್ತವೆ.
ii. ಶಾಖದ ಬಳಲಿಕೆ: ಆಯಾಸ, ದೌರ್ಬಲ್ಯ, ತಲೆತಿರುಗುವಿಕೆ, ತಲೆನೋವು, ವಾಕರಿಕ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು.
iii. ಶಾಖಾಘಾತ (Sun Stroke): ದೇಹದ ಉಷ್ಣತೆಯು 40 ° C ಅಂದರೆ 104 ” F ಅಥವಾ ಅದಕ್ಕಿಂತ ಹೆಚ್ಚಾಗುವುದು ಹಾಗೂ ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞೆ ತಪ್ಪುವುದು.
III ಅತೀ ಹೆಚ್ಚು ತಾಪಮಾನ(heat wave)ಕ್ಕೆ ಸಂಬಂಧಿತ ಕಾಯಿಲೆಗೆ ಪ್ರಥಮ ಚಿಕಿತ್ಸೆ:
1. ಅತೀ ಹೆಚ್ಚು ತಾಪಮಾನದಿಂದ(heat wave) ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸುವುದು. ಒದ್ದೆಯಾದ ಬಟ್ಟೆಯಿಂದ ಮೈಒರೆಸುವುದು ಹಾಗೂ ದೇಹದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ನೀರನ್ನು ಹಾಕುವುದು.
ii. ನೀರು ಅಥವಾ ಪುನರ್ಜಲೀಕರಣ ಪಾನೀಯಗಳಾದ ಓಆರ್ಎಸ್, ನಿಂಬೆಪಾನಕ ನೀಡುವುದು (ವ್ಯಕ್ತಿ ಇನ್ನೂ ಪ್ರಜ್ಞೆ ಹೊಂದಿದ್ದರೆ)
iii . ವ್ಯಕ್ತಿಗೆ ತಂಪಾದ ಗಾಳಿಯ ವ್ಯವಸ್ಥೆ ಮಾಡುವುದು
iv. ರೋಗ ಲಕ್ಷಣಗಳು ಉಲ್ಬಣಗೊಂಡರ ಅಥವಾ ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು.
v. ಮದ್ಯಪಾನ, ಕಾಫಿ, ಶೇಖರಿಸಿದ ಪಾನೀಯವನ್ನು ನೀಡಬಾರದು.
vi. ಅತೀ ಹೆಚ್ಚು ತಾಪಮಾನದಿಂದ(heat wave) ಬಳಲಿಕೆಗೆ ತುತ್ತಾದವರ ಮೇಲೆ ತಂಪಾದ ಒದ್ದೆ ಬಟ್ಟೆಯನ್ನು ಹಾಕುವ ಮೂಲಕ ವ್ಯಕ್ತಿಯನ್ನು ತಂಪಾಗಿಸುವುದು.
vii. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸುವುದು.
vill. ಅತೀ ಹೆಚ್ಚು ತಾಪಮಾನದಿಂದ ಉದ್ಭವಿಸಬಹುದಾದ ರೋಗಲಕ್ಷಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಆಗಿಂದಾಗ್ಗೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವುದು.
IV ಅತೀ ಹೆಚ್ಚು ತಾಪಮಾನಕ್ಕೆ (heat wave) ಸಂಬಂಧಿತ ಅನಾರೋಗ್ಯವನ್ನು ತಡೆಗಟ್ಟಲು/ಕಡಿಮೆಗೊಳಿಸಲು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿರ್ದಿಷ್ಟ ಕ್ರಮಗಳು:
1. ಅತೀ ಹೆಚ್ಚು ತಾಪಮಾನಕ್ಕೆ (heat wave) ಸಂಬಂಧಿಸಿದಂತೆ IMD ಮತ್ತು KSNDMC ಯಿಂದ ನೀಡಿದ ಮುನ್ಸೂಚನೆ/ ಎಚ್ಚರಿಕೆಗಳು/ಎಚ್ಚರಿಕೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು.
ii. ಅತೀ ಹೆಚ್ಚು ತಾಪಮಾನದ(heat wave) ಪ್ರತಿಕೂಲ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅತೀ ಹೆಚ್ಚು ತಾಪಮಾನದ(heat wave) ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ (ವಿ.ನಿ) ಯಿಂದ ತಯಾರಿಸಿರುವ IEC ಸಕ್ರಿಯಗೊಳಿಸುವುದು.
iii. ನಗರ, ಪಟ್ಟಣ, ಕೊಳಚೆ ಪ್ರದೇಶಗಳು, ಅತೀ ಹೆಚ್ಚು ತಾಪಮಾನಕ್ಕೆ (heat wave) ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸುವುದು ಮತ್ತು ಸದರಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸೌಲಭ್ಯಗಳ ಲಭ್ಯತೆಯನ್ನು ಸಂಬಂಧಪಟ್ಟ ಇಲಾಖೆಗಳು (RDPR & UD) ಖಚಿತಪಡಿಸಿಕೊಳ್ಳುವುದು.
iv. ಮಾರುಕಟ್ಟೆಗಳು, ಬಸ್ ನಿಲ್ದಾಣಗಳು ಮತ್ತು ಜನರು ಸೇರುವ ಇತರ ಆಯಕಟ್ಟಿನ ಸ್ಥಳಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೆರಳಿನ ಸೌಲಭ್ಯ ಕಲ್ಪಿಸುವುದು.
V. ಪ್ರಾಣಿಗಳಲ್ಲಿ ಬಿಸಿಗಾಳಿಗೆ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ಸಂಬಂಧಿಸಿದ ಪಶುವೈದ್ಯಕೀಯ ಔಷಧಗಳನ್ನು ಶೇಖರಣೆ ಮಾಡುವುದು.
vi. ವಾಹನ ಚಾಲಕರಿಗೆ ಅವಶ್ಯ ಕುಡಿಯುವ ನೀರನ್ನು ಒದಗಿಸುವುದು ಹಾಗೂ ರಾಜ್ಯದಲ್ಲಿ ಅತೀ ಹೆಚ್ಚು ತಾಪಮಾನದ (HEAT WAVE) ಪರಿಸ್ಥಿತಿಗಳ ಬಗ್ಗೆ ಪ್ರವಾಸಿಗರಿಗೆ ಸಲಹೆಗಳನ್ನು ಪ್ರಚಾರ ಮಾಡುವುದು.
vii. ಸಾಮೂಹಿಕ ಸಭೆಯ ಹೊರಾಂಗಣ ಸ್ಥಳಗಳಲ್ಲಿ ಜನರಿಗೆ ತಾತ್ಕಾಲಿಕ ನೆರಳಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು, ಸಾಕಷ್ಟು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಬೇಕು, ಆಸನಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಬೇಕು, ಸಾಕಷ್ಟು ORS ಮತ್ತು ಇತರ ಔಷಧಿಗಳ ದಾಸ್ತಾನು ಮತ್ತು ವೈದ್ಯಕೀಯ ಸಿಬ್ಬಂದಿ ಇರಬೇಕು. ಅತೀ ಹೆಚ್ಚು ತಾಪಮಾನಕ್ಕೆ (heat wave) ತುತ್ತಾದ ವ್ಯಕ್ತಿಗೆ ಪ್ರತ್ಯೇಕ ವಿಶ್ರಾಂತಿ ಸ್ಥಳವನ್ನು ಖಚಿತಪಡಿಸಿಕೊಳ್ಳಬೇಕು. ಅನುಕೂಲಕರ ತಾಪಮಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ಥಳದಲ್ಲಿ ಸಾಕಷ್ಟು ಗಾಳಿ ಸಂಚಾರ ಇರುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸಂಖ್ಯೆಯ ಫ್ಯಾನ್/ಏರ್ ಕೂಲರ್ಗಗಳು ಇರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸಭೆ/ಸಮಾರಂಭಗಳನ್ನು ತಂಪಾದ ವಾತಾವರಣವಿರುವ ಅವಧಿಯಲ್ಲಿ (ಬೆಳಗ್ಗೆ ಅಥವಾ ಸಂಜೆ) ನಿಗದಿಪಡಿಸುವುದು.
viii. ಜಿಲ್ಲಾಧಿಕಾರಿಗಳೂ/ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯದೊಂದಿಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದ ಅತೀ ಹೆಚ್ಚು ತಾಪಮಾನ (HEAT WAVE) ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
V. ಕುಡಿಯುವ ನೀರಿನ ಲಭ್ಯತೆ:
i. ಪ್ರಾದೇಶಿಕ ಆಯುಕ್ತರು ಹಾಗು ಜಿಲ್ಲಾಧಿಕಾರಿಗಳು ಜಲಸಂಪನ್ಮೂಲ ಇಲಾಖೆಯ ಜಲಾಶಯಗಳಲ್ಲಿ ಇರುವ ನೀರಿನ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಂಗ್ರಹಣೆಯನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಆದ್ಯತೆಯ ಮೇರೆಗೆ ಕಾಯ್ದಿರಿಸುವುದು.
ii. ಹಿಂದಿನ ವರ್ಷಗಳ ಮಾಹಿತಿಯ ಆಧಾರದ ಮೇಲೆ ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಗುರುತಿಸುವುದು.
iii. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮತ್ತು ಖಾಸಗಿ ಬೋರ್ವೆಲ್ ಗುರುತಿಸಿ ಅವುಗಳ ಮೂಲಕ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಂಬಂಧಪಟ್ಟ ಇಲಾಖೆಗಳು (RDPR & UD) ಪರ್ಯಾಯ ಕಾರ್ಯತಂತ್ರವನ್ನು (ಕಾಂಟಿಂಜೆನ್ಸಿ ಯೋಜನೆ) ರೂಪಿಸುವುದು.
iv. ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮ ಅಥವಾ ಪಟ್ಟಣಕ್ಕೆ ಅಗತ್ಯವಿರುವಷ್ಟು ನೀರನ್ನು ಪೈಪ್ಲೈನ್ ಮೂಲಕ ಸಂಬಂಧಪಟ್ಟ ಇಲಾಖೆಗಳು (RDPR & UD) ಪೂರೈಸುವುದು.
V. ಅಸ್ತಿತ್ವದಲ್ಲಿರುವ ನೀರು ಸರಬರಾಜು ಯೋಜನೆಗಳ ವಿದ್ಯುತ್ ಪಂಪ್ಗಳು, ಕೈಪಂಪುಗಳ ದುರಸ್ತಿ, ಕಡಿಮೆ ನೀರಿನ ಲಭ್ಯತೆ ಇರುವ ಬೋರ್ವೆಲ್ಗಳನ್ನು ಪ್ರತಿಂಗ್ ಮಾಡುವುದು ಮತ್ತು ಆಳಗೊಳಿಸುವುದು ಮತ್ತು ಆರ್ಒ ಪ್ಲಾಂಟ್ಗಳ ನಿರ್ವಹಣೆ ಇತ್ಯಾದಿಗಳನ್ನು
ಸಂಬಂಧಪಟ್ಟ ಇಲಾಖೆಗಳು (RDPR, UD & ENERGY) ಆದ್ಯತೆಯ ಮೇಲೆ ತೆಗೆದುಕೊಳ್ಳುವುದು.
vi. ಕುಡಿಯುವ ನೀರಿನ ಪರಿಸ್ಥಿತಿಯನ್ನು ಪರಿಶೀಲಿಸಲು/ಮೌಲ್ಯಮಾಪನ ಮಾಡಲು ತಹಶೀಲ್ದಾರ್, ತಾಲ್ಲೂಕು ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿ ವಾರ ಸಭೆ ನಡೆಸುವುದು.
vii. ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು, ಮತ್ತು ಕಲುಷಿತವಾಗಿದ್ದಲ್ಲಿ ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು.
VI ಅತೀ ಹೆಚ್ಚು ತಾಪಮಾನ(heat wave) ಸಮಯದಲ್ಲಿ ಬೆಂಕಿಯ ತಡೆಗಟ್ಟುವಿಕೆ:
i. ಆಸ್ಪತ್ರೆಗಳು, ಕೈಗಾರಿಕೆಗಳು, ಜನಸಂದಣಿ ಸ್ಥಳಗಳು ಇತ್ಯಾದಿಗಳಲ್ಲಿ ಅಗ್ನಿ ಸುರಕ್ಷತೆಯ ವಿವಿಧ ಅಂಶಗಳ ಮೇಲೆ ಆಗಾಗ್ಗೆ ತಪಾಸಣೆ ಕೈಗೊಳ್ಳುವುದು. ಅಗ್ನಿ ಸುರಕ್ಷತೆಗೆ ತರಬೇತಿಗಳನ್ನು ಹಮ್ಮಿಕೊಳ್ಳುವುದು.
ii. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್ ಕಡ್ಡಾಯವಾಗಿ ನಡೆಸುವುದು.
iii. ರಾಸಾಯನಿಕ ದ್ರವ್ಯಗಳು ಮತ್ತು ಇತರೆ ದ್ರವ್ಯ ಪದಾರ್ಥಗಳನ್ನು ಶೇಖರಣೆ ಮಾಡಿರುವಂತಹ ಗೋದಾಮುಗಳಲ್ಲಿ ಅಗ್ನಿಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ, ಜಾಗೃತಿ ಮೂಡಿಸುವುದು.
ಅತೀ ಹೆಚ್ಚು ತಾಪಮಾನ(heat wave) ತಡೆಗಟ್ಟುವ ಕುರಿತಂತೆ ಇಲಾಖಾವಾರು ಕರ್ತವ್ಯ/ಜವಾಬ್ದಾರಿಗಳನ್ನು ಅತೀ ಹೆಚ್ಚು ತಾಪಮಾನದ (heat wave) ಕ್ರಿಯಾ ಯೋಜನೆಗಳಲ್ಲಿ ನಿಗದಿಪಡಿಸಲಾಗಿರುತ್ತದೆ. ಮೇಲೆ ವಿವರಿಸಿರುವ ಸಲಹೆ ಸೂಚನೆಗಳೊಂದಿಗೆ ಕ್ರಿಯಾ ಯೋಜನೆಗಳಡಿಯಲ್ಲಿ ಇಲಾಖೆಗಳಿಗೆ ನಿಗದಿಪಡಿಸಿರುವಂತೆ ಕ್ರಮಗಳನ್ನು ಕೈಗೊಳ್ಳುವುದು.
