High School Asst Teacher Promotion-2025: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರಿಗೆ PUC ಉಪನ್ಯಾಸಕರ ಹುದ್ದೆಗೆ ಬಡ್ತಿ: ಅರ್ಹತಾ ಪರೀಕ್ಷೆ ಮತ್ತು ಅಂತಿಮ ಪಟ್ಟಿಯ ಮಾಹಿತಿ
High School Teacher Pramotion-2025: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಅರ್ಹತಾ ಪರೀಕ್ಷೆ ನಡೆಸಿ, ಅಂತಿಮ ಅರ್ಹತಾ ಪಟ್ಟಿಯನ್ನು ನೀಡುವ ಕುರಿತು.
ಅಧಿಸೂಚನೆ ವಿವರ:
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ನೇರ ನೇಮಕಾತಿಗೆ ಶೇ.75 ರಷ್ಟು ಮತ್ತು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-02 ಹುದ್ದೆಯಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಲು ಶೇಕಡ 25ರಷ್ಟು ಅವಕಾಶ ಕಲ್ಪಿಸಿರುತ್ತದೆ.
ಉಲ್ಲೇಖ (2)ರ ಸರ್ಕಾರದ ಅಧಿಸೂಚನೆಯಂತೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-02 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಸ್ತುತ ಬೋಧನಾ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರುವ ಅಥವಾ ಪದವಿ ಹಂತದಲ್ಲಿ ಅಧ್ಯಯನ ಮಾಡಿದ, ಯಾವುದಾದರೂ ಐಚ್ಛಿಕ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರುವ ಹಾಗೂ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-02 ಹುದ್ದೆಯಲ್ಲಿ ಕನಿಷ್ಠ 10 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರುವ ಸಹಶಿಕ್ಷಕರು ಹಾಗೂ ಅಂತಹ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ 7 ವರ್ಷಗಳ ಸೇವಾವಧಿ ಪೂರ್ಣಗೊಳಿಸಿರುವ ಈ ಅರ್ಹತೆಯುಳ್ಳ ಸಹಶಿಕ್ಷಕರುಗಳು ಬಿ.ಇಡಿ ಪದವಿಯನ್ನು ಹೊಂದಿದ್ದು, ಮುಂಬಡ್ತಿ ನೀಡುವ ಹುದ್ದೆಗಳಿಗೆ ಅರ್ಹರಿರುವ ಸಹಶಿಕ್ಷಕಕರುಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನಯ ಅರ್ಹತಾ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.
ಉಲ್ಲೇಖ-03ರಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಿಕ್ಷಣ ವಿಭಾಗದ ನಿರ್ದೇಶಕರು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-02 ಹುದ್ದೆಯಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸಹಶಿಕ್ಷಕರ ರಾಜ್ಯಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ಉಪನ್ಯಾಸಕರ ಹುದ್ದೆಯ ಬಡ್ತಿಗೆ ಮಾತ್ರ ಅನ್ವಯಿಸಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ.
ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಳಿಕೆ ಮೂಲ ಉಪನ್ಯಾಸಕರ ವೃಂದದ ಮತ್ತು ಕಲ್ಯಾಣ ಕರ್ನಾಟಕ ರಾಜ್ಯ ವ್ಯಾಪ್ತಿಯ ಸ್ಥಳಿಯ ಉಪನ್ಯಾಸಕರ ವೃಂದದ (ಎರಡು ವೃಂದಗಳನ್ನು ಒಳಗೊಂಡಂತೆ) ಖಾಲಿ ಹುದ್ದೆಗಳಿಗೆ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆ ನಡೆಸಿ, ನಿಗದಿತ ಮೀಸಲಾತಿ ನಿಯಮಗಳನ್ವಯ ಜೇಷ್ಠತಾ ಪಟ್ಟಿಯನುಸಾರ ಅಂತಿಮ ಅರ್ಹತಾ ಪಟ್ಟಿಯನ್ನು ನೀಡುವ ಸಂಬಂಧ ಅರ್ಹತಾ ಪರೀಕ್ಷೆಯ ಈ ಅಧಿಸೂಚನೆ ಹೊರಡಿಸಲಾಗಿರುತ್ತದೆ.

2. ಪರೀಕ್ಷಾ ಪ್ರಾಧಿಕಾರ :
ಪ್ರೌಢಶಾಲಾ ಸಹಶಿಕ್ಷಕರ ಗ್ರೇಡ್-02 ವೃಂದದಿಂದ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧದ ಅರ್ಹತಾ ಪರೀಕ್ಷೆಯನ್ನು ನಡೆಸಲು ಕೇಂದ್ರೀಕೃತ ದಾಖಲಾತಿ ಘಟಕ, ಕೆ.ಜಿ.ರಸ್ತೆ, ಶಾಲಾ ಶಿಕ್ಷಣ ಇಲಾಖೆ, ಸೆಂಟ್ರಲ್ ಜೂನಿಯರ್ ಕಾಲೇಜು ಆವರಣ, ಕಾವೇರಿ ಭವನದ ಎದುರು ಕೆಂಪೇಗೌಡ ರಸ್ತೆ, ಬೆಂಗಳೂರು ಇವರು ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ.
3. ಅರ್ಹತಾ ಷರತ್ತುಗಳು (ಅಧಿಸೂಚಿತ ದಿನಾಂಕಕ್ಕೆ)
1. ಶಾಲಾ ಶಿಕ್ಷಣ ಇಲಾಖೆಯ ಪ್ರೌಢಶಿಕ್ಷಣ ವಿಭಾಗದ ನಿರ್ದೇಶಕರು ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್ -02 ಹುದ್ದೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸಹಶಿಕ್ಷಕರು ಗ್ರೇಡ್-02 ರಾಜ್ಯಮಟ್ಟದ ಒಂದೇ ಅಂತಿಮ ಜೇಷ್ಠತಾ ಪಟ್ಟಿಯನ್ನು ಉಪನ್ಯಾಸಕರ ಹುದ್ದೆಯ ಬಡ್ತಿಗೆ ಮಾತ್ರ ಅನ್ವಯಿಸಿ ಹೊರಡಿಸಿರುತ್ತಾರೆ. ಸದರಿ ಪಟ್ಟಿಯಲ್ಲಿನ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸದರಿ ಜೇಷ್ಠತಾ ಪಟ್ಟಿಯನ್ನು ಲಗತ್ತಿಸಿದೆ.
2 . ಖಾಯಂ-ಪೂರ್ವ ಸೇವಾವಧಿ ತೃಪ್ತಿಕರವೆಂದು ಘೋಷಣೆಯಾಗಿರಬೇಕು.
3. ನಿರ್ದೇಶಕರು (ಪ್ರೌಢಶಿಕ್ಷಣ), ರವರು ಹೊರಡಿಸಿರುವ ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಸಹಶಿಕ್ಷಕರು ಪ್ರೌಢಶಾಲೆಯಲ್ಲಿ ಪ್ರಸ್ತುತ ಬೋಧಿಸುತ್ತಿರುವ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರುವ ಅಥವಾ ಪದವಿ ಹಂತದಲ್ಲಿ ಅಧ್ಯಯನ ಮಾಡಿದ, ಯಾವುದಾದರೂ ಐಚ್ಛಿಕ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರುವ ಹಾಗೂ ಕನಿಷ್ಠ 10 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರತಕ್ಕದ್ದು.
4. 10 ವರ್ಷಗಳ ಸೇವಾವಧಿಯನ್ನು ಪುರ್ಣಗೊಳಿಸಿದ ಸಹಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ 7 ವರ್ಷಗಳ ಸೇವಾವಧಿ ಪೂರ್ಣಗೊಳಿಸಿರುವ ಹಾಗೂ ಸದರಿ ಜೇಷ್ಠತಾ ಪಟ್ಟಿಯಲ್ಲಿ ಹೆಸರಿರುವ ಸಹಶಿಕ್ಷಕರು ಪ್ರೌಢಶಾಲೆಯಲ್ಲಿ ಪ್ರಸ್ತುತ ಬೋಧಿಸುತ್ತಿರುವ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರುವ ಅಥವಾ ಪದವಿ ಹಂತದಲ್ಲಿ ಅಧ್ಯಯನ ಮಾಡಿದ, ಯಾವುದಾದರೂ ಐಚ್ಛಿಕ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರುವ ಸಹಶಿಕ್ಷಕರು ಅರ್ಹರಾಗಿರುತ್ತಾರೆ.
5. ಬಡ್ತಿಗಾಗಿ ನಡೆಸಲಾಗುವ ಅರ್ಹತಾ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಹಾಗೂ ಪತ್ರಿಕೆಯಲ್ಲಿ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಕಡ್ಡಾಯವಾಗಿ ಗಳಿಸಬೇಕು. ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಶಿಕ್ಷಕರನ್ನು ಮಾತ್ರ ಪದವಿಪೂರ್ವ ಉಪನ್ಯಾಸಕರ ಹುದ್ದೆಯ ಬಡ್ತಿಗೆ ಅರ್ಹರಾದ ಶಿಕ್ಷಕರ ಪಟ್ಟಿಗೆ ಪರಿಗಣಿಸಲಾಗುವುದು.
6. ಜೇಷ್ಠತಾ ಪಟ್ಟಿಯಲ್ಲಿರುವ, ಬಡ್ತಿ ನಿಯಮಗಳನ್ವಯ ಅರ್ಹತೆ ಪಡೆದಿರುವ ಹಾಗೂ ಅರ್ಹತಾ ಪರೀಕ್ಷೆಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ಸೇವಾನಿರತ ಸಹಶಿಕ್ಷಕರನ್ನು ಮಾತ್ರ ಅರ್ಹತಾ ಪರೀಕ್ಷೆಗೆ ಪರಿಗಣಿಸಲಾಗುವುದು. ಅರ್ಹತಾ ಪರೀಕ್ಷೆಗೆ ಹಾಜರಾಗಿ ನಿಗದಿತ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಶಿಕ್ಷಕರನ್ನು ಮಾತ್ರ ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು. ಪರೀಕ್ಷೆಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಹಾಜರಾದ ಮಾತ್ರಕ್ಕೆ ಬಡ್ತಿಗೆ ಹಕ್ಕೊತ್ತಾಯ ಮಾಡುವಂತಿಲ್ಲ.
4. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
1. ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ https://schooleducation.karnataka.gov.in ಹೊರಡಿಸಲಾಗುವ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.
2. ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಸಹಶಿಕ್ಷಕರು ಇಲಾಖಾ ವೆಬ್‌ಸೈಟ್ https://schooleducation.karnataka.gov.in ನಲ್ಲಿ Login ಆಗಿ Registration ಮಾಡುವುದು ನಂತರ Login ಆಗಿ ಆನ್‌ಲೈನ್ ಅರ್ಜಿಯನ್ನು ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಸಲ್ಲಿಸುವುದು. .
3. ಸಹಶಿಕ್ಷಕರು User ID ಮತ್ತು Password ಬಳಸಿ Login ಆಗಿ ಆನ್‌ಲೈನ್ ಮೂಲಕ ದಿನಾಂಕ: 29/12/2026 ರಿಂದ 28/01/2026 ರ ಒಳಗಾಗಿ ಅರ್ಜಿ ಸಲ್ಲಿಸುವುದು. USER ID ಮತ್ತು Password ಅನ್ನು ಅಭ್ಯರ್ಥಿಗಳು ಇತರರಿಗೆ ಸಿಗದಂತೆ/ಗೊತ್ತಾಗದಂತೆ ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಕೊಳ್ಳತಕ್ಕದ್ದು. ಒಂದು ವೇಳೆ ತಮ್ಮ USER ID ಮತ್ತು Password ಇತರೆ ಯಾರಿಗಾದರೂ ಲಭ್ಯವಾದಲ್ಲಿ ತಮ್ಮ ಹೆಸರಿನಿಂದ ಲಾಗಿನ್ ಆಗಿ ತಮ್ಮ ಮಾಹಿತಿಯನ್ನು ವ್ಯತ್ಯಾಸ ಮಾಡುವ ಅಥವಾ ವಿರೂಪಗೊಳಿಸುವ ಸಾಧ್ಯತೆಯಿರುತ್ತದೆ. ಇದಕ್ಕೆ ಸಿ.ಎ.ಸಿ ಜವಾಬ್ದಾರಿಯಾಗಿರುವುದಿಲ್ಲ.
4. ಸಹಶಿಕ್ಷಕರು User ID ಮತ್ತು Password ಅಳತೆಯ (ಎದುರು ಭಂಗಿಯಲ್ಲಿ ಇರುವಂತಹ) ಭಾವಚಿತ್ರವನ್ನು 50KB ಗೆ ಮೀರದಂತೆ ಹಾಗೂ ಕಪ್ಪು ಶಾಹಿಯಲ್ಲಿ ಮಾಡಿರುವ ಸಹಿಯನ್ನು 40KBಗೆ ಮೀರದಂತೆ ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್ ಲೋಡ್ ಮಾಡುವುದು.
5. ಅಭ್ಯರ್ಥಿಯ ಭಾವಚಿತ್ರ, ಸಹಿ ಹಾಗೂ ಹೆಸರು ತಾಳೆ ಆಗದಿದ್ದಲ್ಲಿ, ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
6. ಸಹಶಿಕ್ಷಕರು ಅತ್ಯಂತ ಜಾಗರೂಕತೆಯಿಂದ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿಯನ್ನು Submit ಮಾಡುವ ಮೊದಲು ಭರ್ತಿ ಮಾಡಲಾದ ವಿವರಗಳನ್ನು ಇನ್ನೊಮ್ಮೆ ಪರಿಶೀಲಿಸಿಕೊಳ್ಳಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ತಿದ್ದಪಡಿ/ಬದಲಾವಣೆಗೆ ಅವಕಾಶ ಇರುವುದಿಲ್ಲ. ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಕೇಂದ್ರೀಕೃತ ದಾಖಲಾತಿ ಘಟಕ ಜವಾಬ್ದಾರಿಯಾಗುವುದಿಲ್ಲ.
7. ಸಹಶಿಕ್ಷಕರು ತಮ್ಮ ಆನ್ ಲೈನ್ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಯಾವುದೇ ಕಚೇರಿ ಸಂಬಂಧಿತ ಪತ್ರ ವ್ಯವಹಾರಕ್ಕಾಗಿ ತಮ್ಮ ಬಳಿ ಕಡ್ಡಾಯವಾಗಿ ಇರಿಸಿಕೊಳ್ಳುವುದು.
8. ಒಂದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಲ್ಲಿ ಅಂತಹ ಶಿಕ್ಷಕರು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸತಕ್ಕದ್ದು.
9. ಪ್ರತಿ ಬಾರಿ ಲಾಗ್ ಇನ್ ಆದಾಗಲೂ, ತಪ್ಪದೇ ಲಾಗ್ ಔಟ್ ಆಗುವುದು.
5. ಪ್ರಮಾಣ ಪತ್ರ/ದಾಖಲೆಗಳು :
ನೇಮಕಾತಿ ಆದೇಶ, ರೋಸ್ಟರ್ ಮೀಸಲಾತಿ, 371ಜೆ ಮೀಸಲಾತಿ ಮತ್ತು ವಿಶೇಷಚೇತನ ಮೀಸಲಾತಿ ಕುರಿತಾಗಿ ಸೇವಾಪುಸ್ತಕದಲ್ಲಿ ದೃಢೀಕೃತವಾಗಿರಬೇಕು ಹಾಗೂ ಸಂಬಂಧಪಟ್ಟ ಮೀಸಲಾತಿ ಪ್ರಮಾಣ ಪತ್ರಗಳನ್ನು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಶಿಕ್ಷಕರು ಹೊಂದಿರಬೇಕು. ಸದರಿ ಪ್ರಮಾಣ ಪತ್ರಗಳನ್ನು ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಇವರು ಪರಿಶೀಲನೆಗೆ ಕೇಳಿದಾಗ, ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯವಾಗಿರುತ್ತದೆ. ಸಹಶಿಕ್ಷಕರು ತಮ್ಮ ಬಡ್ತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅಗತ್ಯವಿರುವ ಎಲ್ಲಾ ಅರ್ಹತೆ ಮತ್ತು ಷರತ್ತುಗಳನ್ನು ಪೂರೈಸುವುದು ಕಡ್ಡಾಯವಾಗಿರುತ್ತದೆ.
6. ಅರ್ಹತಾ ಪರೀಕ್ಷೆಯು ಈ ಕೆಳಕಂಡ ಅಧಿವೇಶನಗಳಲ್ಲಿ ನಡೆಯಲಿದೆ.
ಮೊದಲನೇ ಅಧಿವೇಶನ (ಪೂರ್ವಾಹ್ನ)

ವಿಶೇಷ ಸೂಚನೆ:
ಒಂದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕರು ತಾನು ಬಡ್ತಿ ಬಯಸಿದಲ್ಲಿ ಅಂತಹವರಿಗೆ ಎರಡು ಅವಧಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
7. ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ವಿಷಯ ಹಾಗೂ ಅಂಕಗಳು :
ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡಲು 2014ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅರ್ಹತಾ ಪರೀಕ್ಷೆಯನ್ನು ನಿಗದಿಪಡಿಸಿರುವಂತೆ, ಸದರಿ ಅರ್ಹತಾ ಪರೀಕ್ಷೆಗೆ ವಿಷಯ ಆಧಾರಿತ (ವಿವರಣಾತ್ಮಕ ಪ್ರಶ್ನೆಗಳು-Descriptive Questions) ಒಂದು ಪ್ರಶ್ನೆಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳನ್ನು ಕೋಷ್ಠಕದಲ್ಲಿ ವಿವರಿಸಿರುವಂತೆ, ವರ್ಗೀಕರಿಸಿ, ನಿಗದಿಪಡಿಸಿದೆ.

ವಿಶೇಷ ಸೂಚನೆ:
ಅರ್ಹತೆಗಾಗಿ ವಿಷಯವಾರು ಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು (Eligible/Qualified) ಪಡೆಯತಕ್ಕದ್ದು, (ಪ್ರವರ್ಗಗಳ ಮೀಸಲಾತಿ ಅನ್ವಯಿಸುವುದಿಲ್ಲ ಅರ್ಜಿ ಸಲ್ಲಿಸಿದ ಎಲ್ಲಾ ಸಹ ಶಿಕ್ಷಕರು ಕನಿಷ್ಟ 50 ಅಂಕಗಳು ಗಳಿಸುವುದು ಕಡ್ಡಾಯ)
8. ಅರ್ಹತಾ ಪರೀಕ್ಷೆ :
ಅರ್ಹತಾ ಪರೀಕ್ಷೆಯು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಆದುದರಿಂದ ಅಭ್ಯರ್ಥಿಗಳು ತಾವು ಪರೀಕ್ಷೆ ಬರೆಯಬಯಸುವ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುವುದು. ಪರೀಕ್ಷಾ ಕೇಂದ್ರದ ಸ್ಥಳವನ್ನು ಪ್ರವೇಶ ಪತ್ರದಲ್ಲಿ ನೀಡಲಾಗುವುದು.
9. ಪ್ರವೇಶ ಪತ್ರ :
ಸೇವಾನಿರತ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-02 ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರ (Hall Ticket) ವನ್ನು ದಿನಾಂಕ:12/02/2026 ರಿಂದ ದಿನಾಂಕ:22/02/2026 ರವರೆಗೆ ಇಲಾಖಾ ವೆಬ್‌ಸೈಟ್‌ನಲ್ಲಿ Login ಆಗಿ ಪಡೆದುಕೊಳ್ಳುವುದು. ಸೇವಾನಿರತ ಸಹಶಿಕ್ಷಕರು ಅರ್ಹತಾ ಪರೀಕ್ಷೆಗೆ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ ಮಾಹಿತಿಗಳನ್ನಾಧರಿಸಿ, ಪ್ರವೇಶ ಪತ್ರದಲ್ಲಿ ವಿವರಗಳು ಮುದ್ರಿತವಾಗಿರುತ್ತವೆ. ಪ್ರವೇಶ ಪತ್ರದಲ್ಲಿನ ವಿವರಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ
ಸೂಚನೆ:
ಸೇವಾನಿರತ ಸಹಶಿಕ್ಷಕರು ಅರ್ಜಿ ಸಲ್ಲಿಸುವಾಗ ಬಳಿಸಿರುವ User ID ಮತ್ತು Password ಮಾಹಿತಿಯನ್ನು ಗೌಪ್ಯವಾಗಿ ಹಾಗೂ ಸುರಕ್ಷಿತವಾಗಿ ಸಂರಕ್ಷಿಸಿಟ್ಟುಕೊಳ್ಳುವುದು.
10. ಪರೀಕ್ಷಾ ವೇಳಾಪಟ್ಟಿ:

ಸೂಚನೆ:
ವಿಶೇಷ ಚೇತನವುಳ್ಳ ಶಿಕ್ಷಕರಿಗೆ ಪರೀಕ್ಷಾ ಅವಧಿಯ ಪ್ರತಿ ಗಂಟೆಗೆ 20 ನಿಮಿಷದಂತೆ 50 ನಿಮಿಷಗಳ ಹೆಚ್ಚವರಿ ಸಮಯ ನಿಡಲಾಗುವುದು.
11. ಪ್ರಶ್ನೆಗಳ ಸ್ವರೂಪ ಮತ್ತು ವ್ಯಾಪ್ತಿ:
1. ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿವರಣಾತ್ಮಕ ಮಾದರಿಯ (Descriptive Questions) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಂದು ಪ್ರಶ್ನೆಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷಾ ಅವಧಿಯನ್ನು 2 ಗಂಟೆ 30 ನಿಮಿಷಕ್ಕೆ ನಿಗದಿಪಡಿಸಿದೆ.
2. ಪರೀಕ್ಷಾ ಪ್ರಶ್ನೆಪತ್ರಿಕೆಯು ವಿಷಯವಾರು ಆಗಿದ್ದು, ಪ್ರಸ್ತುತ ಬಳಕೆಯಲ್ಲಿರುವ/ಚಾಲ್ತಿಯಲ್ಲಿರುವ ಪಠ್ಯವಸ್ತು ಆಗಿರುತ್ತದೆ. ಪ್ರಥಮ ಪಿ.ಯು.ಸಿ ವಿಷಯದ ಶೇಕಡ 40 ರಷ್ಟು, ದ್ವಿತೀಯ ಪಿಯುಸಿ ವಿಷಯದ ಶೇಕಡ 40 ರಷ್ಟು, ಸ್ನಾತಕೋತ್ತರ ಪದವಿ ವಿಷಯದ ಶೇಕಡ 20 ರಷ್ಟು ಪಠ್ಯವಸ್ತುವನ್ನು ಒಳಗೊಂಡಿರುತ್ತದೆ.
12. ಪ್ರಶ್ನೆಪತ್ರಿಕೆ ಮಾಧ್ಯಮ :
ಭಾಷಾ ವಿಷಯಗಳನ್ನು ಆಯಾ ಭಾಷೆಯಲ್ಲಿ ಹಾಗೂ ಕೋರ್ ವಿಷಯಗಳನ್ನು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಪ್ರಶ್ನೆಗಳನ್ನು ಮುದ್ರಿಸಲಾಗುವುದು. ಆಂಗ್ಲಭಾಷೆಯಲ್ಲಿನ ಪ್ರಶ್ನೆಯನ್ನೇ ಆಧರಿಸಿ, ಕನ್ನಡಕ್ಕೆ ಭಾಷಾಂತರಿಸುವುದರಿಂದ, ತರ್ಜಿಮೆಯಲ್ಲಿ ದೋಷವಿದ್ದಲ್ಲಿ ಮೂಲ ಪ್ರಶ್ನೆಯಾದ ಆಂಗ್ಲ ಭಾಷೆಯನ್ನು ಓದಿಕೊಂಡು ಅರ್ಥೈಸಿಕೊಂಡು ಉತ್ತರಿಸುವುದು.
13. ಮೌಲ್ಯಮಾಪನ :
ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿವರಣಾತ್ಮಕ ಮಾದರಿಯಾದ್ದರಿಂದ ವಿಷಯ ಪರಿಣಿತರು ಸಿದ್ಧಪಡಿಸಿ ನೀಡಿದ Scheme Of Evaluation ನಂತೆ ಗಣಕೀಕೃತ ಮೌಲ್ಯಮಾಪನವನ್ನು ಅನುಭವಿ ಹಾಗೂ ವಿಷಯ ಪರಿಣಿತ ಮೌಲ್ಯಮಾಪಕರಿಂದ ಕೈಗೊಳ್ಳಲಾಗುವುದು. ಪ್ರತಿಯೊಂದೂ ಉತ್ತರ ಪತ್ರಿಕೆಯನ್ನು ಕನಿಷ್ಠ ಇಬ್ಬರು ಮೌಲ್ಯಮಾಪಕರು ಮೌಲ್ಯಮಾಪನ ಮಾಡುವುದರಿಂದ, ಸದರಿ ಇಬ್ಬರೂ ಮೌಲ್ಯಮಾಪಕರು ನೀಡುವ ಅಂಕಗಳನ್ನು ಒಟ್ಟುಗೂಡಿಸಿ ಸರಾಸರಿ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುವುದು.
ಒಂದು ವೇಳೆ ಇಬ್ಬರು ಮೌಲ್ಯಮಾಪಕರು ನೀಡಿರುವ ಅಂಕಗಳಲ್ಲಿ 15 ಮತ್ತು 15ಕ್ಕಿಂತ ಹೆಚ್ಚು ಅಂಕಗಳು ವ್ಯತ್ಯಾಸವಾದಲ್ಲಿ ಮೂರನೇ ಮೌಲ್ಯಮಾಪಕರಿಂದ ಮೌಲ್ಯಮಾಪನ ಮಾಡಲಾಗುವುದು. ಮೂರನೇ ಮೌಲ್ಯಮಾಪನ ಕೈಗೊಂಡ ಸಂದರ್ಭದಲ್ಲಿ ಮೂರೂ ಜನ ಮೌಲ್ಯಮಾಪಕರು ನೀಡಿರುವ ಮೌಲ್ಯಾಂಕನಗಳಲ್ಲಿ ಸಮೀಪವಿರುವ ಎರಡು ಮೌಲ್ಯಮಾಪಕರ ಸ್ಮರ್‌ಗಳನ್ನು ಪರಿಗಣಿಸಿ, ಸರಾಸರಿ ಅಂಕಗಳನ್ನು ಮೆರಿಟ್ ಗೆ ಪರಿಗಣಿಸಲಾಗುವುದು.
14. ಆಕ್ಷೇಪಣೆಗಳ ಸಲ್ಲಿಕೆಗೆ/ ಮರುಎಣಿಕೆ/ ಮರುಮೌಲ್ಯಮಾಪನ/ಉತ್ತರ ಪತ್ರಿಕೆಯ ಜೆರಾಕ್ಸ್ ಪಡೆಯಲು ಅವಕಾಶವಿರುವುದಿಲ್ಲ:
ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿವರಣಾತ್ಮಕ ಮಾದರಿಯಾದ್ದರಿಂದ ವಿಷಯ ಪರಿಣಿತರು ಸಿದ್ಧಪಡಿಸಿ ನೀಡಿದ Scheme Of Evaluation ನಂತೆ ಗಣಕೀಕೃತ ಮೌಲ್ಯಮಾಪನವನ್ನು ಅನುಭವಿ ಹಾಗೂ ವಿಷಯ ಪರಿಣಿತ ಮೌಲ್ಯಮಾಪಕರಿಂದ ಕೈಗೊಳ್ಳಲಾಗುವುದು. ಗಣಕೀಕೃತ ಮೌಲ್ಯಮಾಪನ ಕೈಗೊಳ್ಳುವುದರಿಂದ ಯಾವುದೇ ಅಭ್ಯರ್ಥಿಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು, ಮರು ಎಣಿಕೆ, ಮರು ಮೌಲ್ಯಮಾಪನಗಳಿಗೆ ಅವಕಾಶವಿರುವುದಿಲ್ಲ ಹಾಗೂ ಈ ಕುರಿತಂತೆ ಯಾವುದೇ ರೀತಿಯ ಮನವಿಯನ್ನು ಪರಿಗಣಿಸಲಾಗುವುದಿಲ್ಲ.
15. ಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ಮಾಹಿತಿ :
ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡುವ ಸಂಬಂಧ ನಡೆಸಲಾಗುವ ಈ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ವಿಷಯ ಪರಿಣಿತರಿಂದ ಪರೀಕ್ಷಾ ಗೌಪ್ಯತೆಯ ನಿಯಮಗಳಿಗೆ ಒಳಪಟ್ಟು ಸಿದ್ಧಪಡಿಸಲಾಗುವುದು. ಮುದ್ರಣಕ್ಕೆ ಮುಂಚಿತವಾಗಿ ಸದರಿ ಪ್ರಶ್ನೆಪತ್ರಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಿ, Validation ಮಾಡಲಾಗುವುದು.
ಆದಾಗ್ಯೂ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿ ತಪ್ಪುಗಳಿದ್ದಲ್ಲಿ ಅಥವಾ ಮುದ್ರಣ ದೋಷದಿಂದಾಗಿ ತಪ್ಪುಗಳಿದ್ದಲ್ಲಿ ವಿಷಯ ಪರಿಣಿತರ ಸಮಿತಿಯ ತೀರ್ಮಾನದಂತೆ ಅಂತಹ ಪ್ರಶ್ನೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದೇ Delete ಮಾಡಲಾಗುವುದು ಹಾಗೂ ಯಾವುದೇ ಕೃಪಾಂಕ ನೀಡಲಾಗುವುದಿಲ್ಲ. Delete ಮಾಡಲಾದ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದ ಪ್ರಶ್ನೆಗಳನ್ನಾಧರಿಸಿ, ಅರ್ಹತಾ ಅಂಕಗಳನ್ನು ನಿರ್ಧರಿಸಲಾಗುವುದು.
16. ಫಲಿತಾಂಶ ಪ್ರಕಟಣೆ :
ಮೌಲ್ಯಮಾಪನದ ನಂತರ ಅರ್ಹತಾ ಪರೀಕ್ಷೆಯಲ್ಲಿ ಸಹ ಶಿಕ್ಷಕರು ಗಳಿಸಿದ ಅಂಕಗಳು/ಫಲಿತಾಂಶವನ್ನು ಪ್ರಕಟಿಸಲಾಗುವುದು.
17. ಅರ್ಹತಾ ಪಟ್ಟಿ ಸಿದ್ಧಪಡಿಸುವಿಕೆ ಮತ್ತು ಪ್ರಕಟಣೆ :
ಅರ್ಹತಾ ಪರೀಕ್ಷೆಯಲ್ಲಿ ನಿಗದಿತ ಕನಿಷ್ಟ ಶೇ.50ರಷ್ಟು ಅರ್ಹತಾ ಅಂಕಗಳನ್ನು ಗಳಿಸಿದ ಸಹಶಿಕ್ಷಕರನ್ನು ಪರಿಗಣಿಸಿ, ಮೊದಲು 10 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರುವವರನ್ನು ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು ನಂತರ ಅಧಿಸೂಚಿತ ಹುದ್ದೆಗಳಿಗನುಗುಣವಾಗಿ ಸಾಕಷ್ಟು ಅರ್ಹ ಶಿಕ್ಷಕರು ಲಭ್ಯವಾಗದಿದ್ದಲ್ಲಿ ಕನಿಷ್ಠ 07 ವರ್ಷಗಳ ಸೇವಾವಧಿ ಪೂರ್ಣಗೊಳಿಸಿರುವ ಸಹಶಿಕ್ಷಕರನ್ನು ಅರ್ಹತಾ ಪಟ್ಟಿಗೆ ಪರಿಗಣಿಸಲಾಗುವುದು. ಅದರಂತೆ ಸಿದ್ಧಪಡಿಸಲಾದ ಸಹಶಿಕ್ಷಕರ ಅರ್ಹತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು.
18. ಅರ್ಹತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ :
ಪ್ರಕಟಿಸಲಾದ ಅರ್ಹತಾ ಶಿಕ್ಷಕರ ಪಟ್ಟಿಗೆ ಪರೀಕ್ಷೆ ಬರೆದ ಶಿಕ್ಷಕರ ಜೇಷ್ಠತೆ ಹಾಗೂ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ಮಾತ್ರ ಆಕ್ಷೇಪಣೆಯನ್ನು ಸೂಕ್ತ ಸಮರ್ಥನೀಯ ದಾಖಲೆಗಳೊಂದಿಗೆ ಕಚೇರಿ ಕಾರ್ಯದ ಮೂರು ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸುವುದು. ನಿಗದಿತ ದಿನಾಂಕದೊಳಗೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಹಾಗೂ ಸೂಕ್ತವಾದವುಗಳನ್ನು ಪರಿಗಣಿಸಲಾಗುವುದು.
19 . ಅಂತಿಮ ಅರ್ಹತಾ ಪಟ್ಟಿ ಪ್ರಕಟಣೆ:
ಸೂಕ್ತ ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ ಅಂತಿಮ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುವುದು ಮತ್ತು ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಇವರಿಗೆ ಸಲ್ಲಿಸಲಾಗುವುದು.
20. ದಾಖಲೆಗಳ ಸಂರಕ್ಷಣೆ :
ಪರೀಕ್ಷಾ ಪ್ರಕ್ರಿಯೆ ಕುರಿತ ದಾಖಲೆಗಳನ್ನು ಹಾಗೂ ಅರ್ಹತಾಪಟ್ಟಿಯನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಉತ್ತರಪತ್ರಿಕೆಗಳನ್ನು ಹಾಗೂ ಇತರ ದಾಖಲೆಗಳನ್ನು ಪರೀಕ್ಷಾ ಫಲಿತಾಂಶ ಫಲಿತಾಂಶ ಪ್ರಕಟಣೆ ದಿನಾಂಕದ ನಂತರ ಆರು ತಿಂಗಳ ಕಾಲ ಸಂರಕ್ಷಿಸಿಡಲಾಗುವುದು.
21. ಅನ್ವಯತೆ :
ಅರ್ಹತಾ ಪರೀಕ್ಷೆಯ ಫಲಿತಾಂಶವು ಈ ಮೇಲ್ಕಂಡಂತೆ 2026ನೇ ಸಾಲಿನಲ್ಲಿ ನಡೆಸಲಾಗುವ ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿಗೆ ಮಾತ್ರ ಅನ್ವಯಿಸುತ್ತದೆ, ಭವಿಷ್ಯದಲ್ಲಿ ನಡೆಸುವ ಉಪನ್ಯಾಸಕರ ಹುದ್ದೆಯ ಬಡ್ತಿ ಪಕ್ರಿಯೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ಈ ಅರ್ಹತಾ ಪರೀಕ್ಷೆಯ ಸಂಬಂಧ ಯಾವುದೇ ಅರ್ಹತಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿಯನ್ನು ನೀಡುವುದಿಲ್ಲ.
ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಯಲ್ಲಿ ಮುದ್ರಣ ದೋಷವಿದ್ದಲ್ಲಿ ತಪ್ಪಿದ್ದಲ್ಲಿ ವಿಷಯ ತಜ್ಞರಿಂದ ಪರಿಶೀಲನೆ ಮಾಡಿಸಲಾಗುವುದು. ತಪ್ಪಾದ ಪ್ರಶ್ನೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸದೇ ಅಂತಹ ಪ್ರಶ್ನೆಯನ್ನು Delete ಮಾಡಲಾಗುವುದು ಹಾಗೂ ಅಂತಹ ಪ್ರಶ್ನೆಯನ್ನು ಮೌಲ್ಯಮಾಪನಕ್ಕೆ ಪರಿಗಣಿಸದೇ ಅಂತಹ ಪ್ರಶ್ನೆಗೆ ಯಾವುದೇ ಕೃಪಾಂಕ ನೀಡಲಾಗುವುದಿಲ್ಲ. ಈ ರೀತಿ Delete ಮಾಡಲಾದ ಪ್ರಶ್ನೆಗಳನ್ನು ಹೊರತುಪಡಿಸಿ, ಉಳಿದ ಒಟ್ಟು ಪ್ರಶ್ನೆಗಳನ್ನಾಧರಿಸಿ, ಶೇಕಡವಾರು ಅಂಕಗಳನ್ನು ಲೆಕ್ಕಾಚಾರ ಮಾಡಲಾಗುವುದು.
22. ಪ್ರಮುಖ ಸೂಚನೆಗಳು:
1. ಸಹಶಿಕ್ಷಕರು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಅಂತಿಮ ದಿನಾಂಕದ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂಚೆ ಅಥವಾ ಮತ್ಯಾವುದೇ ವಿಧಾನದಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
2. ಸಹಶಿಕ್ಷಕರು ಪ್ರವೇಶ ಪತ್ರವನ್ನು ಸಹ ಆನ್ ಲೈನ್ ನಲ್ಲಿಯೇ ಪಡೆಯತಕ್ಕದ್ದು.
3. ಸಹಶಿಕ್ಷಕರು ಅರ್ಹತಾ ಪರೀಕ್ಷೆಗೆ ಹಾಜರಾದ ಮಾತ್ರಕ್ಕೆ ಅರ್ಹತೆಯನ್ನು ಪಡೆದುಕೊಳ್ಳುವುದಿಲ್ಲ.
4. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸುವ ಮಾಹಿತಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.
5. ಸಹಶಿಕ್ಷಕರು ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿರುವ ಮಾಹಿತಿಗಳ ಆಧಾರದ ಮೇಲೆ ಅವರಿಗೆ ಅರ್ಹತಾ ಪರೀಕ್ಷೆ ಬರೆಯಲು ಪ್ರವೇಶ ಪತ್ರಗಳನ್ನು ನೀಡಲಾಗುತ್ತದೆ. ಪೂರ್ಣ ಮಾಹಿತಿ ನೀಡದ ಅಥವಾ ತಪ್ಪು ಮಾಹಿತಿ/ದಾಖಲೆಗಳನ್ನು ನೀಡಿರುವುದು ಕಂಡುಬಂದಿಲ್ಲಿ ಅಂತಹವರ ಫಲಿತಾಂಶವನ್ನು ರದ್ದುಪಡಿಸಲಾಗುವುದು.
6. ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಿದ ತಪ್ಪು ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಯು ಅರ್ಹತೆ ಹೊಂದಿದಲ್ಲಿ ಅಥವಾ ಪರೀಕ್ಷೆಯಲ್ಲಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಂತಹವರ ಫಿಲತಾಂಶವನ್ನು ರದ್ದುಗೊಳಿಸುವ ಅಧಿಕಾರವನ್ನು ಸಹನಿರ್ದೇಶಕರು, ಕೇಂದ್ರೀಕೃತ ದಾಖಲಾತಿ ಘಟಕ ಇವರು ಕಾಯ್ದಿರಿಸಿಕೊಂಡಿರುತ್ತಾರೆ.
7. ಅರ್ಹತಾ ಪರೀಕ್ಷೆಯು ಸರ್ಕಾರ/ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸುವ ನಿಯಮಗಳು, ಆದೇಶಗಳು ಮತ್ತು ತಿದ್ದಪಡಿಗೆ ಒಳಪಟ್ಟಿರುತ್ತದೆ.
8. ಸಹಶಿಕ್ಷಕರು ಆನ್‌ಲೈನ್ ಅರ್ಜಿ ಮತ್ತು ಪ್ರವೇಶಪತ್ರವನ್ನು ಬಡ್ತಿ ಪ್ರಕ್ರಿಯೆ ಮುಗಿಯುವವರೆವಿಗೂ ಸುರಕ್ಷಿತವಾಗಿ ಇಟ್ಟುಕೊಳ್ಳತಕ್ಕದ್ದು.
9. ಪರೀಕ್ಷೆಯಲ್ಲಿ ಯಾವುದೇ ಸಹಶಿಕ್ಷಕರು ಯಾವುದೇ ನಿಯಮ ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕ್ರಮವಹಿಸಲಾಗುವುದು.
ಪ್ರಮುಖ ದಿನಾಂಕಗಳು:

10. ಪರೀಕ್ಷೆ ಬರೆಯುತ್ತಿರುವ ವಿಶೇಷ ಚೇತನ ಶಿಕ್ಷಕರಿಗೆ ಹೆಚ್ಚುವರಿ ಸಮಯ ಹಾಗೂ ಇತರೆ ಸೌಲಭ್ಯವನ್ನು ನಿಯಮಾನುಸಾರ ನೀಡಲಾಗುವುದು.
11. ಅಧಿಸೂಚನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಕೃತ ದಾಖಲಾತಿ ಘಟಕ, ಬೆಂಗಳೂರು, ಈ ಕಛೇರಿಯನ್ನು ಸಂಪರ್ಕಿಸುವುದು. ಕಛೇರಿ ವೇಳೆಯಲ್ಲಿ ಸಹಾಯವಾಣಿ 080 22483145/22483140 ಸಂಖ್ಯೆಯನ್ನು ಸಂಪರ್ಕಿಸುವುದು.
CLICK HERE TO DOWNLOAD NOTIFICATION