ITR Filing: ಐಟಿಆರ್ ಫೈಲಿಂಗ್ ಡೆಡ್ಲೈನ್ ಮಿಸ್ ಮಾಡಿದ್ರಾ? ಮುಂದೇನು?
ITR Filing: ಆದಾಯ ತೆರಿಗೆ ಇಲಾಖೆಯು 2024-25ರ ಹಣಕಾಸು ವರ್ಷದ ಐಟಿಆರ್ ಫೈಲಿಂಗ್‌ಗೆ ಸೆ.16ರ ಡೆಡ್ಲೈನ್ ನಿಗದಿ ಮಾಡಿತ್ತು. ಇದು ಸಾಧ್ಯವಾಗಿಲ್ಲವೇ? ನೀವೇನಾದರೂ ಈ ಗಡುವನ್ನು ಮೀರಿದ್ದರೆ ದಂಡ ತೆರಬೇಕು. ಕೆಲವು ರಿಯಾಯಿತಿಗಳೂ ನಿಮ್ಮ ಕೈ ತಪ್ಪಿವೆ!
ಸಾಮಾನ್ಯವಾಗಿ ಇಷ್ಟು ವರ್ಷಗಳಲ್ಲಿ ಸಾಂಪ್ರದಾಯಿಕವಾಗಿ ಜುಲೈ 31ರಂದು ಐಟಿಆರ್ ಫೈಲಿಂಗ್ ಡೆಡ್‌ಲೈನ್ ಇರುತ್ತಿದ್ದು, ಆದರೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಟೆಕ್ನಿಕಲ್ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ, ಐಟಿ ಇಲಾಖೆಯು ಸೆಪ್ಟೆಂಬರ್ 16ರಂದು ಅಂತಿಮ ದಿನಾಂಕವಾಗಿ ವಿಸ್ತರಣೆ ಮಾಡಿತ್ತು.
ಈಗ ಡೆಡ್‌ಲೈನ್ ಮೀರಿದವರು ಏನು ಮಾಡಬೇಕು? ಬನ್ನಿ ನೋಡೋಣ.

1) ಡೆಡ್ ಲೈನ್ ಮೀರಿದರೆ ದಂಡ:
ಸೆಕ್ಷನ್ 234F ಆದಾಯ ತೆರಿಗೆ ಕಾಯಿದೆ ಪ್ರಕಾರ ತಡವಾಗಿ ಐಟಿಆರ್ ಫೈಲಿಂಗ್ ಮಾಡುವವರಿಗೆ ದಂಡವನ್ನು ವಿಧಿಸಲಾಗುತ್ತದೆ. ನೀವು ಎಷ್ಟು ತಡವಾಗಿ ಫೈಲಿಂಗ್ ಮಾಡುತ್ತೀರಿ ಎಂಬುದರ ಮೇಲೂ ದಂಡ ನಿರ್ಧಾರವಾಗಲಿದೆ. ಈ ದಂಡವು ವ್ಯಕ್ತಿಯ ಒಟ್ಟಾರೆ ಆದಾಯ ಮತ್ತು ಫೈಲಿಂಗ್ ದಿನಾಂಕದ ಮೇಲೆ ನಿರ್ಧಾರವಾಗುತ್ತದೆ ಎಂದು ಕ್ಲಿಯರ್ ಟ್ಯಾಕ್ಸ್‌ನ ತೆರಿಗೆ ತಜ್ಞ ಶೆಫಾಲಿ ಮುಂದ್ರಾ ಹೇಳಿದ್ದಾರೆ.
2025-26ರ ಅಸೆಸ್‌ಮೆಂಟ್ ವರ್ಷದ ಅಥವಾ 2024-25ರ ಹಣಕಾಸು ವರ್ಷದ ತೆರಿಗೆದಾರರ ಆದಾಯವು 5 ಲಕ್ಷ ರೂಪಾಯಿಗಳಿದ್ದರೆ, ನೀವು ಡಿಸೆಂಬರ್ 31ರೊಳಗೆ ಫೈಲಿಂಗ್ ಮಾಡಿದರೆ 1,000 ರೂಪಾಯಿ ದಂಡವನ್ನು ಪಾವತಿಸಬೇಕು. ಆದರೆ, ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಇದೇ ಸಂದರ್ಭದಲ್ಲಿ 5,000 ರೂಪಾಯಿ ದಂಡಕ್ಕೆ ಒಳಪಡುವರು.
2) ಪಾವತಿಸದ ತೆರಿಗೆ ಮೇಲೆ ಬಡ್ಡಿ!:
ನೀವು ಸರಿಯಾದ ಸಮಯದಲ್ಲಿ ತೆರಿಗೆ ಪಾವತಿ ಮಾಡದಿದ್ದರೆ, ತಡವಾಗ ಫೈಲಿಂಗ್ ಮಾಡಿದರೆ ಅಥವಾ ಮೊದಲೇ ಅಡ್ವಾನ್ಸ್ ತೆರಿಗೆ ಪಾವತಿ ಮಾಡದ ಸಂದರ್ಭದಲ್ಲಿ ನಿಮ್ಮ ಪಾವತಿಸಲಾಗದ ತೆರಿಗೆ ಮೇಲೆ ಬಡ್ಡಿ ಹಾಕಲಾಗುವುದು.
3) ರೀಫಂಡ್ ಮೇಲಿನ ಬಡ್ಡಿಯನ್ನು ಕಳೆದುಕೊಳ್ಳುತ್ತೀರಿ!:
ನೀವು ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲಿಂಗ್ ಮಾಡಿದ್ದರೆ ಸಿಗುತ್ತಿದ್ದ ಬಡ್ಡಿ, ಡೆಡ್‌ಲೈನ್ ಮೀರಿ ಐಟಿಆರ್ ಸಲ್ಲಿಸಿದರೆ ಕಡಿಮೆಯಾಗುತ್ತದೆ. ಉದಾಹರಣೆಗೆ ನಿಮಗೆ 50,000 ರೂಪಾಯಿ ರೀಫಂಡ್ ಬರಬೇಕಿದ್ದಲ್ಲಿ, ಸರಿಯಾದ ಸಮಯಕ್ಕೆ ಐಟಿಆರ್ ಫೈಲಿಂಗ್ ಮಾಡಿದ್ದರೆ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ನೀವು 2,250 ರೂಪಾಯಿ ಬಡ್ಡಿಯನ್ನು ಸ್ವೀಕರಿಸುತ್ತೀರಿ. ಸೆಕ್ಷನ್ 244ಅ ಅಡಿಯಲ್ಲಿ 0.5% ಪ್ರತಿ ತಿಂಗಳ ಬಡ್ಡಿ ಪಡೆಯುತ್ತೀರಿ.
ನೀವು ತಡವಾಗಿ ಅಕ್ಟೋಬರ್‌ನಲ್ಲಿ ಐಟಿಆರ್ ಫೈಲಿಂಗ್ ಮಾಡಿದ್ದೇ ಆದಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ನೀವು 500 ರೂಪಾಯಿ ಬಡ್ಡಿಯನ್ನಷ್ಟೇ ಪಡೆಯುತ್ತೀರಿ. ಇದರರ್ಥ ತೆರಿಗೆದಾರರು 1,750 ರೂಪಾಯಿ ನಷ್ಟವನ್ನು ಅನುಭವಿಸುತ್ತಾರೆ.
ಇ-ವೆರಿಫಿಕೇಶನ್ ಮರೆಯಬೇಡಿ…
ಐಟಿಆರ್ ಫೈಲಿಂಗ್ ಬಳಿಕ ಐಟಿ ರಿಟರ್ನ್ ಇ- ವೆರಿಫಿ ಕೇಶನ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ವಿಳಂಬವಾದರೆ ನಿಮ್ಮ ಫೈಲಿಂಗ್ ಅಮಾನ್ಯವಾಗಬಹುದು. ಇದರ ಜೊತೆಗೆ ಕೊನೆಯದಾಗಿ ಎಲ್ಲಾ ದಾಖಲೆಗಳೂ ಸರಿಯಾಗಿವೆಯೇ? ತೆರಿಗೆ ಕಡಿತಕ್ಕೆ ಸೂಕ್ತ ದಾಖಲೆಗಳಿವೆಯೇ ಎಂದು ಪರಿಶೀಲಿಸಿ. ಏಕೆಂದರೆ ಸರಿಯಾಗಿಲ್ಲದ ದಾಖಲೆಗಳು ಟ್ಯಾಕ್ಸ್ ರೀಫಂಡ್ ಅನ್ನು ತಿರಸ್ಕರಿಸಲು ದಾರಿಯಾಗಬಹುದು.
2 thoughts on “ITR Filing: ಐಟಿಆರ್ ಫೈಲಿಂಗ್ ಡೆಡ್ಲೈನ್ ಮಿಸ್ ಮಾಡಿದ್ರಾ? ಮುಂದೇನು? -2024-25”