JOB APPLICATION: ಅರ್ಜಿ ಸಲ್ಲಿಕೆ ಹೆಚ್ಚಳಕ್ಕೆ ಕಾರಣಗಳೇನು ಮತ್ತು ಪರಿಹಾರೋಪಾಯಗಳು
JOB APPLICATION:ಉದ್ಯೋಗದಾತರು ಅಭ್ಯರ್ಥಿಗಳನ್ನು ಆಯ್ಕೆಮಾಡುವಾಗ ಅನುಸರಿಸುವ ಮಾನದಂಡಗಳೇನು ಮತ್ತು ಉದ್ಯೋಗರಂಗ ಪ್ರವೇಶಿಸಲು ಅಭ್ಯರ್ಥಿಗಳು ಮಾಡಬೇಕಾದ್ದೇನು ಎಂಬುದರ ವಿವರ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಕಡಿಮೆ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ ಪ್ರಕಟಿ ಮಾಡಿದ್ದರೂ ಸಾವಿರಾರು ಅಭ್ಯರ್ಥಿಗಳು ಅವುಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕಾಯಂ ಅಥವಾ ಭದ್ರತೆ ಇರುವ ಉದ್ಯೋಗಗಳಿಗೆ ಸೇರಲು ಬಯಕೆ ಇವರದಾಗಿದೆ. ಇದು ಭಾರತ ದೇಶದಲ್ಲಿ ಮಾತ್ರವಲ್ಲ ಯಾವುದೇ ದೇಶವನ್ನು ಗಮನಿಸಿದರೂ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಭದ್ರತೆ ಎನ್ನುವುದು ಉದ್ಯೋಗಿಗಳ ಮೊದಲ ಆದ್ಯತೆಯಾಗುತ್ತಿದೆ. ಹಾಗಾಗಿ, ತಮಗೆ ಸೂಕ್ತವಾದ ಕಂಪನಿಯನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಎಷ್ಟೋ ಸಲ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಕಂಪನಿಗಳಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಮಾತ್ರವಲ್ಲ, ಕಂಪನಿಗಳು ಕೆಲವೇ ಗಂಟೆಗಳಲ್ಲಿ ಅರ್ಜಿ ಸಲ್ಲಿಕೆಯ ಪೋರ್ಟಲ್ ಅನ್ನು ಕೂಡ ಮುಚ್ಚುವ ಪ್ರಸಂಗಗಳು ಕೂಡ ಕಂಡುಬರುತ್ತವೆ. ಹಾಗಾದರೆ, ಅಷ್ಟು ಪ್ರಮಾಣದ ಅರ್ಜಿ ಸಲ್ಲಿಕೆ ಆಗಿರುತ್ತದೆಯೇ ಅಥವಾ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಮುಕ್ತಾಯವಾಗಿರುತ್ತದೆಯೇ, ಈ ಬೆಳವಣಿಗೆಗೆ ಕಾರಣಗಳೇನು? -ಇಂಥ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಡಾಯ್ಕ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಸ್ತುತ ಲಂಡನ್ ಫೌಂಡೇಶನ್ ಫಾರ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್ ನ ಉಪಾಧ್ಯಕ್ಷರಾಗಿರುವ ಕ್ವೆಂಟಿನ್ ನೇಸನ್ ಅವರು ತಮ್ಮ ‘ಲಿಂಕ್ಸ್‌ಇನ್’ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಉದ್ಯೋಗಾತರ ಈ ನಿಲುವಿಗೆ ಕಾರಣಗಳೇನು, ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾದ ಬದಲಾವಣೆಗಳೇನು ಹಾಗೂ ಪ್ರಸ್ತುತ ಉದ್ಯೋಗರಂಗಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ಬೆಳೆಸಿಕೊಳ್ಳಬೇಕಾದ ವೃತ್ತಿಪರ ಕೌಶಲಗಳೇನು? ಎಂಬ ಬಗ್ಗೆ ಅದರಲ್ಲಿ ಚರ್ಚಿಸಿದ್ದಾರೆ. ಅದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.
ಕಾರಣಗಳು ಏನು?
ರೆಸೂಮ್ ಪರಿಶೀಲನೆಗೆ ಎಐ:
ಈ ಹಿಂದೆಲ್ಲ ಸಲ್ಲಿಕೆಯಾಗುವ ರೆಸ್ಯುಮೆ ಅಥವಾ ಅರ್ಜಿಗಳನ್ನು ಕಂಪನಿಗಳ ಮೇಲ್ವಿಚಾರಕರು ಅಥವಾ ಎಚ್‌ಆರ್‌ಗಳು” ಪರಿಶೀಲನೆ ನಡೆಸುತ್ತಿದ್ದರು. ಆದರೆ, ಈಚಿನ ದಿನಗಳಲ್ಲಿ ಕಂಪನಿಗಳು ತಂತ್ರಜ್ಞಾನವನ್ನು ಅಧಿಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗದಾತರು ರೆಸ್ಯುಮೆಗಳ ಪರಿಶೀಲನೆಗೆ ಎಐ ಬಳಸುತ್ತಾರೆ. ಹತ್ತು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಕೆಲವೇ ಕ್ಷಣಗಳಲ್ಲಿ ಪರಿಶೀಲನೆ ನಡೆಸುತ್ತಾರೆ. ಅಭ್ಯರ್ಥಿಗಳು ಕೂಡ ಕಚೇರಿಗೆ ಬಂದು ಸಂದರ್ಶನ ನೀಡುವ ಬದಲು ಆನ್‌ಲೈನ್ ಅಥವಾ ವಿಡಿಯೊ ಸಂದರ್ಶನಗಳನ್ನು ನೀಡುತ್ತಾರೆ. ಈ ಪ್ರಕ್ರಿಯೆಗಳು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವಿಫಲವಾಗುತ್ತವೆ. ಇಲ್ಲಿ ಪ್ರಾಯೋಗಿಕ ಅನುಭವಕ್ಕಿಂತ ಡಿಜಿಟಲ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಉದ್ಯೋಗದಾತರು, ಉತ್ತಮ ಉದ್ಯೋಗ ಪಡೆಯುವಲ್ಲಿ ಅಭ್ಯರ್ಥಿಗಳು ಎಡವುತ್ತಾರೆ.
ಗಂಟೆಗಳಲ್ಲೇ ಪೋರ್ಟಲ್ ಸ್ಥಗಿತ:
ಈ ಹಿಂದೆ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ವಾರಾನುಗಟ್ಟಲೆ ಸಮಯ ನೀಡಲಾಗುತ್ತಿತ್ತು. ಇದೀಗ ಅರ್ಜಿ ಸಲ್ಲಿಕೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಪೋರ್ಟಲ್ ಅನ್ನು ಮುಚ್ಚಲಾಗುತ್ತದೆ. ಏಕೆಂದರೆ, ಒಂದೇ ಒಂದು ಹುದ್ದೆ ಖಾಲಿ ಇದ್ದರೂ, ಅದಕ್ಕೆ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಾರೆ. ಈ ಬೆಳವಣಿಗೆಯಿಂದ ಉದ್ಯೋಗದಾತರಿಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಷ್ಟವಾಗುತ್ತದೆ.
ಆರ್ಥಿಕ ಹೊರೆ:
ಪದವಿ ಮುಗಿದ ಕೂಡಲೇ ಅಧಿಕ ವೇತನದ ಉದ್ಯೋಗ ಪಡೆಯಬೇಕು ಎಂಬುದು ಬಹುತೇಕ ಅಭ್ಯರ್ಥಿಗಳ ಬಯಕೆ. ಏಕೆಂದರೆ: ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಪಡೆದಿರುತ್ತಾರೆ, ಅದನ್ನು ಪಾವತಿಸಲು ಆರಂಭಿಕ ಹಂತದಲ್ಲಿಯೇ ಉತ್ತಮ ಉದ್ಯೋಗಗಳನ್ನು ಪಡೆಯಲು ಬಯಸುತ್ತಾರೆ. ಸಾಲ ಮಾಡಿ, ಕಷ್ಟಪಟ್ಟು ಅಧ್ಯಯನ ಮಾಡಿ, ಉತ್ತಮ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳು ಕಡಿಮೆ ವೇತನದ ಉದ್ಯೋಗಕ್ಕೆ ಸೇರಲು ಹಿಂಜರಿಯುತ್ತಾರೆ ಎಂದು ಕ್ವೆಂಟಿನ್ ನೇಸನ್ ತಮ್ಮ ‘ಲಿಂಕ್ಸ್ ಇನ್’ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಪರಿಹಾರಗಳೇನು?
ಕೌಶಲಗಳನ್ನು ಬೆಳೆಸಿಕೊಳ್ಳಿ:
ದಶಕಗಳಿಂದೀಚೆಗೆ ಅಭ್ಯರ್ಥಿಯು ಉದ್ಯೋಗವನ್ನು ಪಡೆಯಲು ಪದವಿ ಜತೆಗೆ ಕೌಶಲಗಳನ್ನೂ ಮಾನದಂಡಗಳಾಗಿ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಇನ್ನು ಮುಂದೆ ಕೌಶಲ, ಅನುಭವ ಪಡೆಯಲು ಮುಂದಾಗಬೇಕು. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ, ಸಂವಹನ, ತಂಡದ ಜತೆ ಕೆಲಸ ಹಾಗೂ ಮೂಲಭೂತ ಡಿಜಿಟಲ್ ಕೌಶಲಗಳು ಅಭ್ಯರ್ಥಿಗಳಿಗೆ ಹಿಂದೆಂದಿಗಿಂತಲೂ ಈಗ ಮುಖ್ಯವಾಗಿವೆ. ಅದಕ್ಕಾಗಿ ಅಭ್ಯರ್ಥಿಗಳು ಪದವಿ ಜತೆ ಜತೆಗೆ ಇಂಟರ್ನ್ಷಿಪ್ ಫ್ರೀಲಾನ್ಸರ್, ಸೈಡ್ ಇನಿಶಿಯೇಟಿವ್ ಯೋಜನೆಗಳಲ್ಲಿ ತೊಡಗಬೇಕು. ಇವುಗಳಿಂದ ಹೆಚ್ಚೆಚ್ಚು ಕಲಿಕಾ ಅನುಭವ ಸಿಗುತ್ತದೆ.
ಸಂಪರ್ಕ ಜಾಲವನ್ನು ಬೆಳೆಸಿ:
ಪದವೀಧರರು ಹಳೆಯ ವಿದ್ಯಾರ್ಥಿಗಳು,ಮಾರ್ಗದರ್ಶಕರು ಹಾಗೂ ಉದ್ಯಮ ವೃತ್ತಿಪರರ ಸಂಪರ್ಕವನ್ನು ಇಟ್ಟು ಕೊಂಡಿರುವುದು ಒಳಿತು. ಇದರಿಂದ ಎಐ ಅಥವಾ ಇನ್ನಿತರ ತಂತ್ರಜ್ಞಾನ ಗಳಿಂದ ಸಾಧ್ಯವಾಗದ ಅವಕಾಶದ ಬಾಗಿಲುಗಳು ತೆರೆಯಬಹುದು. ಅಂದರೆ, ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ವಿದ್ಯಾರ್ಥಿ ಸಂಘಟನೆಗಳು, ಆನ್‌ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಸಕ್ರಿಯರಾಗಿ ರುವುದರಿಂದ ವಿದ್ಯಾರ್ಥಿಗಳು ವಿಶ್ವಾಸಾರ್ಹತೆಯನ್ನು ನಿರ್ಮಿಸಿಕೊಳ್ಳಬಹುದು.
ಕಲಿಕೆ ಮುಂದುವರಿಸಿ:
ಉದ್ಯೋಗ ಮಾರುಕಟ್ಟೆಯು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಹಾಗಾಗಿ, ಪದವೀಧರರು ಮಾತ್ರವಲ್ಲ, ವೃತ್ತಿಪರರೂ ಹೊಸ ಕೌಶಲಗಳ ಕಲಿಕೆಗೆ ಆಸಕ್ತಿ ತೋರಬೇಕು. ಹೊಸ ಹೊಸ ಕೌಶಲಗಳನ್ನು ಕಲಿಯುವುದರಿಂದ ಇತರರಿಗಿಂತ ನಿಮಗೆ ಹೆಚ್ಚೆಚ್ಚು ಅವಕಾಶಗಳು ಅರಸಿ ಬರುತ್ತವೆ.
ಆಗಬೇಕಾದ ಬದಲಾವಣೆಗಳೇನು?
ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೆಣಗಾಡುವಂಥ ಮಟ್ಟಿಗೆ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆದರೂ, ಕಂಪನಿಗಳು ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡುವಲ್ಲಿ ವಿಫಲವಾಗುತ್ತವೆ. ಹುದ್ದೆಗೆ ಬೇಕಾದ ಎಲ್ಲಾ ಅರ್ಹತೆಗಳಿದ್ದರೂ, ಅಭ್ಯರ್ಥಿಗಳು ಮಾತ್ರ ಉದ್ಯೋಗದಾತರಿಂದ ನಿರಂತರ ನಿರಾಕರಣೆಗೆ ಒಳಪಡುತ್ತಿದ್ದಾರೆ. ಉದ್ಯೋಗ ಪಡೆಯಲು ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂಪನಿಗಳು ಮತ್ತು ಅಭ್ಯರ್ಥಿಗಳು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಿದೆ. ಉದ್ಯೋಗದಾತರು ರೆಸ್ಯುಮಗಳ ಪರಿಶೀಲನೆಗೆ ತಂತ್ರಜ್ಞಾನ ಬಳಸುವ ಬದಲು ಮನುಷ್ಯರನ್ನು ತೊಡಗಿಸಿಕೊಳ್ಳಬೇಕು. ಹಾಗೆಯೇ. ಡಿಜಿಟಲ್ ಸಂದರ್ಶನದ ಬದಲಿಗೆ ಭೌತಿಕ ಉಪಸ್ಥಿತಿಗೆ ಆದ್ಯತೆ ನೀಡಬೇಕು. ಉದ್ಯೋಗಾಕಾಂಕ್ಷಿಗಳು ಕೂಡ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಕ್ವೆಂಟಿನ್ ನೇಸನ್ ಸಲಹೆ ನೀಡಿದ್ದಾರೆ.