Kalika habba-2025: ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ ಪರಿಣಾಮಕಾರಿಯಾಗಿ ಅನುಷ್ಠಾನ
Kalika habba-2025: ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ ಪರಿಣಾಮಕಾರಿಯಾಗಿ ಅನುಷ್ಠಾನ: ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವಿಶೇಷವಾಗಿ ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN)’ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ ಕಥೆಗಳನ್ನು ಹೇಳುವುದು, ಒಳಾಂಗಣ ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತವೆ. ಇಂತಹ ಸಂದರ್ಭಗಳು ಕಾಲಕ್ರಮೇಣ ಮಕ್ಕಳ ಕಲಿಕೆಯೆ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ. ಈ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ FLN ನಲ್ಲಿ ಮಕ್ಕಳು ಸಾಧಿಸಿರುವ ಕಲಿಕಾಫಲಗಳನ್ನು ತಿಳಿಯಲು ಮತ್ತು ಅವರ ಪ್ರತಿಭೆಯನ್ನು ಹೊರಹೊಮ್ಮಿಸಲು ಉತ್ತಮ ವೇದಿಕೆ ಸೃಷ್ಟಿಯಾಗುತ್ತದೆ.
ಅ) ಕಲಿಕಾ ಹಬ್ಬ ಆಯೋಜನೆಯ ಉದ್ದೇಶ:
1. ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸುವ ಹಿನ್ನೆಲೆಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆ ಕ್ಲಸ್ಟರ್ ಒಳಗಿನ ಶಾಲೆಗಳು ತಮ್ಮೊಳಗಿರುವ ಉತ್ತಮ ಕಲಿಕಾ ಅಭ್ಯಾಸಗಳನ್ನು ಪ್ರದರ್ಶಿಸಲು, ಪರಸ್ಪರ ಹಂಚಿಕೊಳ್ಳಲು ಒಂದು ಉತ್ತಮ ಅವಕಾಶವನ್ನು ಒದಗಿಸಿದಂತಾಗುತ್ತದೆ.
2. ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಮತ್ತು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ. ಮೋಜಿನ ಮತ್ತು ಆಕರ್ಷಕವೆನಿಸುವ ಕಾರ್ಯಕ್ರಮಗಳು ಶಾಲೆಯ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಎಲ್ಲಾ ಕಲಿಕಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎದುರು ನೋಡುತ್ತಿರುತ್ತಾರೆ. ಸೃಜನಶೀಲತೆಯ ಮೂಲಕ ಸಾಂಘಿಕ ಸಾಮರ್ಥದೊಂದಿಗೆ ಮಕ್ಕಳು ಸಾಮಾಜೀಕರಣವಾಗುವುದನ್ನು ಕಲಿಕಾಹಬ್ಬವು ಪ್ರೋತ್ಸಾಹಿಸುತ್ತದೆ. ಕಲೆ, ಸಂಗೀತ ಮತ್ತು ದೈಹಿಕ ಆಟಗಳೊಂದಿಗೆ ಸಂಯೋಜಿಸಲ್ಪಟ್ಟ FLN ಚಟುವಟಿಕೆಗಳು ಮನೋಜನ್ಯ, ಭಾವನಾತ್ಮಕ ಮತ್ತು ದೈಹಿಕವಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಲು ಒಂದು ಸಾಧನವಾಗಿ ಕೆಲಸ ಮಾಡುವುದು.
3. ವಿಭಿನ್ನ ಕಲಿಕೆಯ ವೇಗ ಅಥವಾ ಶೈಲಿಯನ್ನು ಹೊಂದಿರುವ ಮಕ್ಕಳು ಇಂತಹ ಕಲಿಕಾ ಉತ್ಸವಗಳಲ್ಲಿ ತೊಡಗಿಕೊಂಡಾಗ ವೈವಿಧ್ಯಮಯವಾದ ವಿಧಾನಗಳಿಂದ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ. 1 ರಿಂದ 5 ನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶೃತಿಯನ್ನು ಪಡೆಯಲು ಸಾಧವಿದೆ. ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಅವಕಾಶವನ್ನು ನೀಡುವ ಮೂಲಕ, ಸಮುದಾಯದೊಳಗಿನ ವಿವಿಧ ಭಾಗೀದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕೆನ್ನುವುದು ಇಲಾಖೆಯ ಪ್ರಮುಖ ಆಶಯವಾಗಿದೆ.
ಆ) ಕಲಿಕಾ ಹಬ್ಬದಲ್ಲಿ ಕೈಗೊಳ್ಳಬಹುದಾದ FLN ಚಟುವಟಿಕೆಗಳು:ಈ ಕೆಳಗೆ ನೀಡಿರುವ ಚಟುವಟಿಕೆಗಳಲ್ಲಿ ಕ್ರಮ ಸಂಖ್ಯೆ 1 ರಿಂದ 4 ರವರೆಗಿನ ಚಟುವಟಿಕೆಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳುವುದು. ಕ್ರಮ ಸಂಖ್ಯೆ 5 ರಿಂದ 11 ವರೆಗೆ ನೀಡಿರುವ ಚಟುವಟಿಕೆಗಳಲ್ಲಿ ಯಾವುದಾದರು 3 ನ್ನು ಆಯ್ಕೆ ಮಾಡಿಕೊಂಡು ಹಮ್ಮಿಕೊಳ್ಳುವುದು.
(ಸೂಚನೆ : ಚಟುವಟಿಕೆಗಳನ್ನು ಆಯ್ಕೆ ಮಾಡುವಾಗ ಕ್ಲಸ್ಟರ್ ನೋಡಲ್ ಬಿ ಆರ್ ಪಿ ಮತ್ತು ಸಂಬಂಧಿಸಿದ ಸಿ ಆರ್ ಪಿ ರವರು ಪೂರ್ವಭಾವಿ ಮುಖ್ಯ ಶಿಕ್ಷಕರ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸುವುದು. ಆಯ್ಕೆ ಮಾಡಿರುವ ಚಟುಟಿಕೆಗಳನ್ನು ಪೂರ್ವಭಾವಿಯಾಗಿ ಎಲ್ಲಾ ಶಾಲೆಗಳಿಗೆ ತಿಳಿಸುವುದು)
Kalika habba-2025 ಕಡ್ಡಾಯವಾಗಿ ನಿರ್ವಹಿಸಬೇಕಾದ ಚಟುವಟಿಕೆಗಳು
1. ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕಥೆಗಳನ್ನು ಕಟ್ಟುವುದು, ಮೋಜಿನ ಆಟಗಳನ್ನು ರೂಪಿಸುವುದು ಇತ್ಯಾದಿ. ಈ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು. ಈ ವಲಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಬ್ಬರಿಗೂ ಒದಗಿಸುವುದು. ಉದಾ:- ಫ್ಲಾಶ್‌ಕಾರ್ಡ್, ಪೇಪರ್, ಪೆನ್ನು, ಪೆನ್ಸಿಲ್, ಬಣ್ಣ ಇತ್ಯಾದಿ.
2. ಕಥೆ ಹೇಳುವುದು – ಮಕ್ಕಳು ಶಾಲಾ ಭಾಷೆಯಾದ ಕನ್ನಡ ಮತ್ತು ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಅಥವಾ ತಮ್ಮ ಮಾತೃ ಭಾಷೆಯಲ್ಲಿ ಆಕರ್ಷಕವಾದ ಕಥೆಗಳನ್ನು ಹೇಳಲು ಪ್ರೇರೇಪಿಸುವುದು. ಇದರಿಂದಾಗಿ ಮಕ್ಕಳಲ್ಲಿ ಹಾಗೂ ಸಮುದಾಯದ ಸದಸ್ಯರಲ್ಲಿ ಕುತೂಹಲವನ್ನು ಸೃಷ್ಟಿಸಲು ಸಾಧವಾಗುತ್ತದೆ. ನೈತಿಕ ಹಾಗೂ ಕಾಲ್ಪನಿಕವಾಗಿ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಅಥವಾ ಇತರೆ ಭಾಷೆಗಳ ಅನಿಮೆಟೆಡ್ ಕಥೆಗಳನ್ನು ಪ್ರದರ್ಶಿಸಲು ಟ್ಯಾಬ್ಲೆಟ್ ಅಥವಾ ಪ್ರೊಜೆಕ್ಟರ್‌ಗಳನ್ನು ಬಳಸಿಕೊಳ್ಳುವುದು.
3. ಸಂತೋಷದಾಯಕ ಗಣಿತ – ಸುತ್ತಮುತ್ತಲಿನ ಭೌತಿಕ ಪರಿಸರದಲ್ಲಿ ಲಭ್ಯವಾಗುವ ಮೂರ್ತ ವಸ್ತುಗಳ ಎಣಿಕೆ, ಶಾಲೆಯ ಒಳಗಾಂಣ/ಹೊರಾಂಗಣ ವಸ್ತುಗಳ ಎಣಿಕೆ, ಸ್ಥಳೀಯ ಸನ್ನಿವೇಶದ ವಸ್ತುಗಳ ಸಂಖ್ಯೆಗಳ ಎಣಿಕೆ, ವಿವಿಧ ಮಾದರಿಗಳ ಗುರುತಿಸುವಿಕೆ ಮತ್ತು ಸಮಸ್ಯೆ ಪರಿಹರಿಸುವಿಕೆಯೊಂದಿಗೆ ಸಂಖ್ಯಾ ಜ್ಞಾನದ ಆಟಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು.
4. ಆರೋಗ್ಯ ಮತ್ತು ಪೌಷ್ಟಿಕಾಂಶ- ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ನಿರ್ವಹಣೆಗಾಗಿ ಉತ್ತಮ ಪೌಷ್ಟಿಕ ಆಹಾರದ ಅಗತ್ಯತೆ ಇದೆ. ಈ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಆಹಾರ ವಿಂಗಡಣೆ ಮತ್ತು ಪೌಷ್ಟಿಕಾಂಶದ ಮಹತ್ವಗಳನ್ನು ಒಳಗೊಂಡ ಪೋಸ್ಟರ್ ತಯಾರಿಕೆ, ಮಾದರಿ ತಯಾರಿಕೆ, ಹಣ್ಣು ತರಕಾರಿ ಧಾನಗಳಿಂದ ತಯಾರಿಸಿದ ರಂಗೋಲಿ, ಮತ್ತು ಸಲಾಡ್ ತಯಾರಿಕೆಯಂತಹ ಚಟುವಟಿಕೆಗಳಲ್ಲಿ ಭಾಗವಹಿಸುವರು ಮತ್ತು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಳ್ಳುವರು. ಮನೆಯಲ್ಲಿ ಸಿಗುವ ತರಕಾರಿಗಳಲ್ಲಿ, ಕ್ರಿಯೇಟಿವ್ ಸ್ಟಾಕ್ ಚಾಲೆಂಜ್, ಹಣ್ಣುಗಳು ಮತ್ತು ತರಕಾರಿಗಳನ್ನು ಪರೀಕ್ಷಿಸಲು ಭೂತಗನ್ನಡಿಯನ್ನು ಬಳಸುವುದು ಹಾಗೂ, ಅವುಗಳ ನೋಟ, ಭಾವನೆ ಮತ್ತು ವಾಸನೆಯನ್ನು ವಿವರಿಸುವುದು.
ಯಾವುದಾದರು ಮೂರು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ನಿರ್ವಹಿಸಬೇಕಾದ ಚಟುವಟಿಕೆಗಳು ( ಆಯ್ಕೆ ಮಾಡಿಕೊಳ್ಳಲಾದ ಮೂರು ಚಟುವಟಿಕೆಗಳನ್ನು ಕ್ಲಸ್ಟರ್‌ನಲ್ಲಿರುವ ಎಲ್ಲಾ ಶಾಲೆಗಳಲ್ಲಿಯೂ ಅಭ್ಯಾಸ ಮಾಡುವಂತೆ ಸೂಚಿಸುವುದು)
5. ಛದ್ಮವೇಷ – ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಜಾಗೃತಿ, ನಮ್ಮ ಸುತ್ತ ಮುತ್ತ ಇರುವ ಪರಿಸರದ ಅರಿವನ್ನು ಮತ್ತು ಉತ್ತಮ ಸೃಜನಾತ್ಮಕ ಅಭಿವ್ಯಕ್ತಿಯನ್ನು ವೇಷಭೂಷಣಗಳ ಮೂಲಕ ಪ್ರದರ್ಶಿಸಲು ಈ ಚಟುವಟಿಕೆಯಲ್ಲಿ ಅವಕಾಶವನ್ನು ಕಲ್ಪಿಸಿದೆ. ಇದರಲ್ಲಿ ವಿದ್ಯಾರ್ಥಿಗಳು ಮರ ಗಿಡ, ಪ್ರಾಣಿಗಳು ಪಕ್ಷಿಗಳು ಇತರೇ ಪರಿಸರದ ಅಂಶಗಳನ್ನು ಪ್ರದರ್ಶಿಸುವ ಹಾಗೂ ಅವುಗಳ ಮೌಲ್ಯವನ್ನು ತಿಳಿಸುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ವೇಷ ಧರಿಸುವ ಮೂಲಕ ಹಾಗೂ ಲಘು ಸಂಭಾಷಣೆಯ ಮೂಲಕ ಭಾಗವಹಿಸುವರು.
6. ಕೈಬರಹ ಮತ್ತು ಕ್ಯಾಲಿಗ್ರಫಿ – ಉತ್ತಮವಾದ ಸ್ನಾಯುಜನ ಕೌಶಲ್ಯಗಳನ್ನು ಸುಧಾರಿಸಲು, ಅಚ್ಚುಕಟ್ಟಾಗಿ ಮತ್ತು ಸೃಜನಶೀಲವಾಗಿ ಅಕ್ಷರ/ಪದ/ವಾಕ್ಯ/ವಾಕ್ಯ ವೃಂದವನ್ನು ಬರೆಯಲು ಕೈಬರಹಕ್ಕಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳುವುದು
7. ಚಿತ್ರ ನೋಡಿ ವಿವರಿಸು ಈ ಚಟುವಟಿಕೆಯ ಮೂಲಕ ಮಕ್ಕಳು ವೀಕ್ಷಣಾ ಕೌಶಲ್ಯ, ಬಾಷಾ ಕೌಶಲ್ಯ ಮತ್ತು ಒಂದು ಚಿತ್ರವನ್ನು ತಾರ್ಕಿಕವಾಗಿ ಹಾಗೂ ಕಾಲ್ಪನಿಕವಾಗಿ ಅರ್ಥೈಸಿಕೊಂಡು ವಿವರಿಸುವ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಗಳಿಸುವರು. ಈ ಚಟುವಟಿಕೆಗೆ ವಿವಿಧ ಪರಿಕಲ್ಪನೆಗಳನ್ನು ಬಿಂಬಿಸುವ ಚಿತ್ರಗಳನ್ನು ಆಯ್ಕೆಮಾಡಿ ಮಕ್ಕಳಿಗೆ ಆಲೋಚಿಸಲು 2 ನಿಮಿಷಗಳ ಕಾಲಾವಕಾಶವನ್ನು ನೀಡಿ ಆಯೋಜಿಸುವುದು.
8. ಟ್ರೆಷರ್ ಹಂಟ್/ ಮೆಮೊರಿ ಪರೀಕ್ಷೆ- ಹಣ್ಣುಗಳು, ತರಕಾರಿಗಳು, ಬಣ್ಣಗಳು, ತರಗತಿಯ ವಸ್ತುಗಳು ಹಾಗೂ ಇತ್ಯಾದಿಗಳ ಕ್ರಿಯಾಶೀಲತೆಯಲ್ಲಿ ಗುರುತಿಸುವಿಕೆ/ಜ್ಞಾಪಕ ಶಕ್ತಿಯ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.
9. ರಸ ಪ್ರಶ್ನೆ – ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ, ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು, ಕೌಶಲಾಧಾರಿತ ಸಂಗತಿಗಳನ್ನು ಅಳವಡಿಸಿ ರಸಪ್ರಶ್ನೆಯ ವಿನ್ಯಾಸವನ್ನು ರೂಪಿಸಿಕೊಳ್ಳುವುದು. ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತತಿ ಶಾಲೆಯಿಂದಲೂ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. 04 ಸುತ್ತುಗಳಲ್ಲಿ ಸ್ಪರ್ಧೆಯನ್ನು ಮುಗಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಬೋನಸ್ ಸುತ್ತನ್ನು ಅಳವಡಿಸಿಕೊಳ್ಳಬಹುದು.
10. ಪಾತ್ರಾಭಿನಯ/ ಅಭಿನಯ ಕೌಶಲ್ಯ – ಈ ಚಟುವಟಿಕೆಯಲ್ಲಿ ಮಕ್ಕಳು ವಿವಿಧ ಪಾತ್ರಗಳು, ಸನ್ನಿವೇಶಗಳನ್ನು ಬಳಸಿಕೊಂಡು ಉತ್ತಮ ಸಂಭಾಷಣೆಯ ಮೂಲಕ ಅಭಿವ್ಯಕ್ತಿ/ಅಭಿನಯ ಸಾಮರ್ಥ್ಯ ಮತ್ತು ಸಂಭಾಷಣಾ ಕೌಶಲ್ಯವನ್ನು ಪ್ರದರ್ಶಿಸುವರು. ಈ ಚಟುವಟಿಕೆಗೆ ಪ್ರತಿ ವಿದ್ಯಾರ್ಥಿಗೆ 2 ರಿಂದ ತೆ ನಿಮಿಷಗಳ ಕಾಲಾವಕಾಶವನ್ನು ನಿಗದಿಪಡಿಸುವುದು ಏಕಪಾತ್ರಾಭಿನಯಕ್ಕೂ ಸಹ ಅವಕಾಶ ನೀಡುವುದು.
11. ಗಟ್ಟಿಯಾಗಿ ಓದುವುದು: ಮಕ್ಕಳು/ಶಿಕ್ಷಕರು ಸಿದ್ಧಪಡಿಸಿದ ಅಥವಾ ಸೃಜನಾತ್ಮಕವಾಗಿ ರಚಿಸಿದ ವಾಕ್ಯ.ವಾಕ್ಯವೃಂದ ಅಥವಾ ಪಠ್ಯ ಸಾಮಗ್ರಿಯನ್ನು ಗ್ರಹಿಸಿ ಗಟ್ಟಿಯಾಗಿ ಓದುವುದು. ಗ್ರಂಥಾಲಯದಿಂದ ಪಡೆದ ಓದು ಸಾಮಗ್ರಿಗಳನ್ನು ಗ್ರಹಿಸಿ ಓದುವುದು ಈ ವಿಭಾಗದ ಮುಖ್ಯವಾದ ಚಟುವಟಿಯಾಗಿದ್ದು, ಈ ಬಗ್ಗೆ ಶಾಲೆಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ / ಕೊಠಡಿಯ ಓದು ಸಾಮಗ್ರಿಗಳ ಕಾರ್ನ‌್ರನಿಂದ / ಗ್ರಂಥಾಲಯ / ಗ್ರಾಮ ಪಂಚಾಯತ್ ಗ್ರಂಥಾಲಯ / ನಗರ ಕೇಂದ್ರ ಗ್ರಂಥಾಲಯ ಇತ್ಯಾದಿಗಳಿಂದ ವಯಸ್ಸಿಗೆ ಸೂಕ್ತವಾದ (ಕಿರಿಯರಿಂದ ಹಿರಿಯರ ಕಡೆಗೆ ಪುಸ್ತಕಗಳನ್ನು ಸಂಗ್ರಹಿಸಿ. ವರ್ಣರಂಜಿತ ಓದುವ ಮೂಲೆಗಳನ್ನು ಸ್ಥಾಪಿಸಿಕೊಳ್ಳುವುದು. ಮಕ್ಕಳು ಕಥೆಯ ಭಾಗಗಳನ್ನು ಕೂಡ ಓದಿ ಅಭಿನಯಿಸುವಂತಹ ‘ಗಟ್ಟಿಯಾಗಿ ಓದಿ’ ಎಂಬ ಶಿರ್ಷಿಕೆಯ ಅವಧಿಗಳನ್ನು ಇಲ್ಲಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಕನ್ನಡ, ಆಂಗ ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಇತ್ಯಾದಿ ಭಾಷೆಗಳಲ್ಲಿ ನಿರ್ವಹಿಸತಕ್ಕದ್ದು.

ಈ) ಕ್ಲಸ್ಟರ್ ಹಂತದ ಕಲಿಕಾಹಬ್ಬಕ್ಕೆ ನಿಗದಿಪಡಿಸಿರುವ ಅನುದಾನದ ಮೊತ್ತ ಮತ್ತು ವೆಚ್ಚ ಭರಿಸುವಿಕೆಯ ಕ್ರಮ (ಬ್ಲಾಕ್ ಗಳಿಗೆ ನಿಗದಿಪಡಿಸಿದ ಕಲಿಕಾ ಹಬ್ಬದ ಅನುದಾನವನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರ ಮೂಲಕ BEO ರವರ ಖಾತೆಗೆ ಬಿಡುಗಡೆ ಮಾಡಲಾಗುವುದು)

ಉ) ಕಲಿಕಾ ಹಬ್ಬ ಅನುಷ್ಟಾನದ ಮೇಲ್ವಿಚಾರಣೆ ಮತ್ತು ಅನುಪಾಲನೆಯ ಕ್ರಮಗಳು:
▪️ದಿನಾಂಕ:10-12-2025 ರಿಂದ ದಿನಾಂಕ: 20-12-2025 ರೊಳಗಾಗಿ ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಚಟುವಟಿಕೆಗಳನ್ನು ಹಮ್ಮಿಕೊಂಡು ಪೂರ್ಣಗೊಳಿಸುವುದು.
ಎಲ್ಲಾ ಡಯಟ್ ಗಳ ಉಪನಿರ್ದೇಶಕರು ( ಅಭಿವೃದ್ಧಿ) ಇವರು ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ಮೇಲ್ವಿಚಾರಣೆ ಅಧಿಕಾರಿಯಾಗಿದ್ದು, ದಿನಾಂಕ 31.12.2025 ರೊಳಗಾಗಿ ತಮ್ಮ ತಾಲ್ಲೂಕುಗಳ, ಕಲಿಕಾ ಹಬ್ಬದ ಕ್ಲಸ್ಟರ್‌ವಾರು ದಿನಾಂಕಗಳನ್ನು ಕ್ರೂಡೀಕರಿಸಿ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಕಛೇರಿಯ ಎನ್.ಇ.ಪಿ ಶಾಖೆಗೆ ಇ ಮೇಲ್ ಮೂಲಕ-ssknep2020@gmail.comಗೆ ಕಡ್ಡಾಯವಾಗಿ ಸಲ್ಲಿಸುವುದು.
▪️ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ರೂವಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯಾಗಿರುತ್ತಾರೆ.
▪️ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸುವ ಮತ್ತು ಸಂಘಟಿಸುವ ನೋಡಲ್ ಅಧಿಕಾರಿ ಆಯಾಯ ಕ್ಲಸ್ಟರ್‌ನ CRP ಗಳೇ ಆಗಿರುತ್ತಾರೆ.
▪️ಒಂದು ಕ್ಲಸ್ಟರ್‌ಗೆ 1 ರಿಂದ 5 ನೇ ತರಗತಿ ವರೆಗಿನ ಮಕ್ಕಳನ್ನು ಒಳಗೊಂಡಂತೆ ಮಿತಿಯನ್ನು ಮಿತಿಯನ್ನು 100 ಮಕ್ಕಳಿಗೆ ನಿಗದಿಪಡಿಸಿದೆ ಒಂದು ವೇಳೆ, ಆ ಕ್ಲಸ್ಟರ್‌ನಲ್ಲಿ ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯದ ಸದಸ್ಯರು, ಶಿಕ್ಷಣಾಸಕ್ತರು ಪರಸ್ಪರ ಕೈಜೋಡಿಸಿ ಸಹಕರಿಸಿದ್ದಲ್ಲಿ ಮಕ್ಕಳ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಪ್ರತಿ ಶಾಲೆಯಿಂದ ಒಬ್ಬರು ಅಥವಾ ಶಿಕ್ಷಕರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಭಾಗವಹಿಸಬಹುದಾಗಿದೆ.
▪️ಕ್ಲಸ್ಟರ್ ಹಂತದ ಕಲಿಕಾ ಹಬ್ಬಕ್ಕಾಗಿ ದಿನಾಂಕವನ್ನು ನಿಗದಿಪಡಿಸಿದ ಮೇಲೆ ಸದರಿ ದಿನಾಂಕವನ್ನು ಪೂರ್ವಭಾವಿಯಾಗಿ ಆ ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೆ ತಿಳಿಸುವುದು.
▪️ಕ್ಲಸ್ಟರ್ ಶಾಲೆಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಶಾಲೆಗಳಿಂದ ಕಲಿಕಾ ಹಬ್ಬಕ್ಕೆ ಬರಬೇಕಾದ ವಿದ್ಯಾರ್ಥಿಗಳ ಸಂಖ್ಯೆಯ ಮಿತಿಯನ್ನು ನಿಗದಿಪಡಿಸುವುದು ಮತ್ತು ಆ ಶಾಲೆಗೆ ಮುಂಚಿತವಾಗಿ ತಿಳಿಸುವುದು.
▪️ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಆಯೋಜಿಸುವ ಚಟುವಟಿಕೆಗಳ ಬಗ್ಗೆ FLN ಶಿಕ್ಷಕರಿಗೆ ಅರಿವು ಮೂಡಿಸುವುದು.
▪️ಮಕ್ಕಳ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು. ಕಲಿಕಾ ಹಬ್ಬದಲ್ಲಿ ಮಕ್ಕಳ ಭಾಗವಹಿಸುವಿಕೆ ಮುಖ್ಯವಾಗಿದ್ದು, ಇತರೆ ಶಿಕ್ಷಣೇತರ ಚಟುವಟಿಕೆಗಳಿಗೆ ಆಸ್ಪದವಿರಬಾರದು.
▪️ಹಬ್ಬದ ಕ್ರಿಯಾತ್ಮಕ ವಾತಾವರಣವನ್ನು ಕಿರು ವರದಿಯೊಂದಿಗೆ ದಾಖಲೀಕರಣಗೊಳಿಸುವುದು ಮತ್ತು ರಾಜ್ಯ ಹಂತಕ್ಕೆ ಸಲ್ಲಿಸುವುದು.
▪️ಈ ಕಲಿಕಾ ಹಬ್ಬಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಲು ಸ್ಥಳೀಯ ಸಮುದಾಯದ ಹಿರಿಯರನ್ನು/ ಸಾಧಕರನ್ನು ಜಿಲ್ಲಾ ಹಂತದ FLN ನಲಿಕಲಿ ನೋಡಲ್ ಅಧಿಕಾರಿಗಳನ್ನು ಕೂಡ ಆಹ್ವಾನಿಸಬಹುದು.
▪️ಸದರಿ ಸುತ್ತೋಲೆಯೊಂದಿಗೆ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ರವರಿಗೆ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ನಿರ್ವಹಿಸಲು ಪೂರ್ಣ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಪನಿರ್ದೇಶಕರು ಆಡಳಿತ ಈ ಕೂಡಲೇ ಸದರಿ ಅನುದಾನವನ್ನು ತಾಲ್ಲೂಕುಗಳಿಗೆ ಬಿಡುಗಡೆ ಮಾಡಿ ಕಲಿಕಾ ಹಬ್ಬವನು ಕ್ಲಸ್ಟರ್ ಹಂತದಲ್ಲಿ ಆಯೋಜಿಸಲು ಅನುಕೂಲಿಸುವಂತೆ ಕ್ರಮವಹಿಸಲು ಸೂಚಿಸಿದೆ. ಕಲಿಕಾ ಹಬ್ಬದ ವೆಚ್ಚವನ್ನು FLN FS ಶಿರ್ಷಿಕೆಯಡಿಯಲ್ಲಿ ಚಟುವಟಿಕೆ 5.9.3 ನಲ್ಲಿ ರೂ.15,000/- ಮತ್ತು 5.10.1 ನಲ್ಲಿ ರೂ.10,000/-ವನ್ನು ಭರಿಸಲಾಗುತ್ತಿದೆ. ಈ ಮಾಹಿತಿಯನ್ನು ಪ್ರಬಂಧ portal ನಲ್ಲಿ ಚಟುವಟಿಕೆವಾರು ಇಂಧೀಕರಿಸುವುದು. ಕ್ಲಸ್ಟರ್ ವಾರು ಕಲಿಕಾ ಹಬ್ಬಕ್ಕೆ ಅನುದಾನ ಬಿಡುಗಡೆ ಮಾಹಿತಿಯನ್ನು ಈ ಪತ್ರದೊಂದಿಗೆ ಅನುಬಂಧ -1 ರಲ್ಲಿ ಲಗತ್ತಿಸಿದೆ. ಸಕಾಲದಲ್ಲಿ ಅನುದಾನವನ್ನು ಸಂಬಂಧಿಸಿದ ಕ್ಲಸ್ಟರ್ ಗಳಿಗೆ ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.
CLICK HERE TO DOWNLOAD ORDER