Karnataka Education Department Services (Department of Public Instructions) (Recruitment) (Amendment) Rules, 2025.: ಪ್ರಾಥಮಿಕ ಶಿಕ್ಷಕರು 6–7ಕ್ಕೆ ಬೋಧಿಸಬಹುದೇ? – ನಿಯಮಗಳ ಸಂಪೂರ್ಣ ವಿವರ
Karnataka Education Department Services (Department of Public Instructions) (Recruitment) (Amendment) Rules, 2025 :“NCTE ಮಾರ್ಗಸೂಚಿಗಳ ಪ್ರಕಾರ 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಿಕ್ಷಕರು ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದರೆ 6 ಮತ್ತು 7ನೇ ತರಗತಿಗೆ ಬೋಧಿಸಲು ಅರ್ಹರಾಗುತ್ತಾರೆ. ಪದವೀಧರ ಪ್ರಾಥಮಿಕ ಶಿಕ್ಷಕರ ಅರ್ಹತೆ, ನಿಯಮಗಳು ಮತ್ತು ನೇಮಕಾತಿ ಮಾನದಂಡಗಳ ಸಂಪೂರ್ಣ ವಿವರಣೆ.”
ಅಧಿಸೂಚನೆ:
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025ನ್ನು ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ರ ಕಲಂ-3 ರ ಉಪ ಕಲಂ (2) ರ ಖಂಡ (ಎ) ರಲ್ಲಿ ಅಗತ್ಯಪಡಿಸಿರುವಂತೆ ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯ ಭಾಗ-IVA (ಸಂಖ್ಯೆ: 659) ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗಲು ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿರುವುದರಿಂದ;
ಸದರಿ ವಿಶೇಷ ರಾಜ್ಯಪತ್ರವನ್ನು ದಿನಾಂಕ: 17.10.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು ಸದರಿ ಕರಡು ತಿದ್ದುಪಡಿ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ;
ಈಗ ಕರ್ನಾಟಕ ನಾಗರಿಕ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಿಕೊಂಡು 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ. ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡಂತೆ ನಿಯಮಗಳನ್ನು ರಚಿಸುತ್ತದೆ ಎಂದರೆ:-
ನಿಯಮಗಳ ವಿವರಣೆ:
1. ಶೀರ್ಷಿಕೆ ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು ಕರ್ನಾಟಕ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಯಾಗತಕ್ಕದ್ದು.
2. ಕೋಷ್ಟಕದ ತಿದ್ದುಪಡಿ:
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) ನಿಯಮಗಳು, 1967ರ ಕೋಷ್ಟಕದಲ್ಲಿ ‘ಶ್ರೇಣಿ II ಪತ್ರಾಂಕಿತವಲ್ಲದ ಹುದ್ದೆಗಳು’ ಶೀರ್ಷಿಕೆಯಡಿಯಲ್ಲಿ ಕ್ರಮ ಸಂಖ್ಯೆ: 66 ರಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರು ತರಗತಿ 1 ರಿಂದ 5 ವರ್ಗದ ಅಂಕಣ ಸಂಖ್ಯೆ (3) ರಲ್ಲಿ:-
1. ಪ್ರಸ್ತುತ ಇರುವ ಟಿಪ್ಪಣಿಯನ್ನು ಟಿಪ್ಪಣಿ-1 ಎಂದು ಸಂಖ್ಯೆಕರಿಸುವುದು: ಮತ್ತು
2. ಅದರಂತೆ ಸಂಖ್ಯಿಕರಿಸಿದ ಟಿಪ್ಪಣಿ-1 ರ ನಂತರ ಈ ಕೆಳಗಿನಂತೆ ಸೇರ್ಪಡೆಗೊಳಿಸತಕ್ಕದ್ದು. ಅಂದರೆ,
“ಟಿಪ್ಪಣಿ-2 – 1 ರಿಂದ 5ನೇ ತರಗತಿಗೆ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು NCTE ಮಾರ್ಗಸೂಚಿಗಳಲ್ಲಿ ನಿರ್ಧಿಷ್ಟಪಡಿಸಿದಂತೆ ಮತ್ತು ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿರುವಂತೆ ಅಗತ್ಯ ವಿಷಯಗಳಲ್ಲಿ ಪದವಿಯನ್ನು ಹೊಂದಿದ್ದಲ್ಲಿ, 6 ಮತ್ತು 7 ನೇ ತರಗತಿಗೆ ಬೋಧಿಸಲು ಅರ್ಹರಾಗತಕ್ಕದ್ದು.” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

CLICK HERE TO DOWNLOAD NOTIFICATION