KARTET: ಶಿಕ್ಷಕರಿಗೆ TET ಕಡ್ಡಾಯವೇ..!!
ಶಿಕ್ಷಕರಿಗೆ TET ಕಡ್ಡಾಯವೇ..!ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ಯು 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಖಡ್ಡಾಯ ಶಿಕ್ಷಣದ ಹಕ್ಕಿನ ಸಂರಕ್ಷಣೆಗಾಗಿ ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ನುರಿತ, ಅರ್ಹ ಹಾಗೂ ತರಬೇತಿ ಹೊಂದಿದ ಶಿಕ್ಷಕರ ಅಗತ್ಯತೆಯನ್ನು ಮನಗಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ TET (ಶಿಕ್ಷಕರ ಅರ್ಹತಾ ಪರೀಕ್ಷೆ) ಯನ್ನು ಕಡ್ಡಾಯಗೊಳಿಸಿರುವುದು ಅತ್ಯಂತ ನ್ಯಾಯೋಚಿತ ತೀರ್ಮಾನ.
ಆದರೆ ಈ ನಿಯಮವನ್ನು ಈಗಾಗಲೇ 25-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೇವಾನಿರತ ಶಿಕ್ಷಕರಿಗೆ ಅನ್ವಯಿಸುವುದು ನ್ಯಾಯವೇ ? 5 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಹೊಂದಿದ ಸೇವಾನಿರತ ಶಿಕ್ಷಕರು ಸೇವೆಯಲ್ಲಿ ಮುಂದುವರೆಯಬೇಕಾದರೆ ಎರಡು ವರ್ಷಗಳಲ್ಲಿ TET ಪರೀಕ್ಷೆಯನ್ನು ಉತ್ತೀರ್ಣರಾಗಬೇಕು, ಇಲ್ಲದಿದ್ದರೆ ಸೇವೆಯನ್ನು ತ್ಯಜಿಸಬೇಕು ಅಥವಾ ಖಡ್ಡಾಯ ಸೇವಾನಿವೃತ್ತಿಯನ್ನು ಪಡೆಯಬೇಕೆಂಬ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಇಡೀ ದೇಶದ ಸೇವಾನಿರತ ಶಿಕ್ಷಕರಲ್ಲಿ ಆತಂಕ ಹಾಗೂ ತಲ್ಲಣವನ್ನು ಸೃಷ್ಟಿಸಿದೆ. ಇದರಿಂದಾಗಿ ಪಾಲಕ-ಪೋಷಕರು ಶಿಕ್ಷಕರ ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಯನ್ನು ಸಂದೇಹ ಹಾಗೂ ಸಂಶಯದ ದೃಷ್ಟಿಯಿಂದ ನೋಡುವಂತಾಗಬಹುದೆಂಬ ಆತಂಕ ಕಾಡುತ್ತಿದೆ !
ಕರ್ನಾಟಕದಲ್ಲಿ NCTE ನಿಯಮದ ಅನುಷ್ಠಾನ :
RTE-2009 ರನ್ವಯ NCTE ರಾಷ್ಟ್ರಮಟ್ಟದಲ್ಲಿ 1-8 ರ ಶಿಕ್ಷಕರಿಗೆ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದು ಆಗಸ್ಟ್ 23, 2010 ರಲ್ಲಿ..! ಈ ನಿಯಮಗಳನ್ನು ಕರ್ನಾಟಕ ರಾಜ್ಯದಲ್ಲಿ ಅನ್ವಯ ಮಾಡಿದ್ದು 2015-16 ರ ನೇಮಕಾತಿಯಲ್ಲಿ, ರಾಜ್ಯದಲ್ಲಿ ಅಧಿಕೃತವಾಗಿ ನಿಯಮ ರಚನೆಯಾದದ್ದು 2017 ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಲ್ಲವೇ !
KCSR ನಿಯಮಗಳನ್ವಯ ಹೊಸದಾಗಿ ಜಾರಿಗೆ ಬಂದ ಯಾವುದೇ ವೃಂದ ಮತ್ತು ನೇಮಕಾತಿ ನಿಯಮಗಳು, ಸೇವಾ ನಿಯಮಗಳು ಹಾಗೂ ಷರತ್ತುಗಳನ್ನು ಈ ಮೊದಲು ನೇಮಕಗೊಂಡ ನೌಕರರಿಗೆ ಪೂರ್ವಾನ್ವಯಗೊಳಿಸುವಂತಿಲ್ಲ.
ಉದಾ : ಕರ್ನಾಟಕದಲ್ಲಿ 1ನೇ ಏಪ್ರಿಲ್, 2006 ರಲ್ಲಿ ರಾಜ್ಯ ಸರಕಾರಿ ನೌಕರರಿಗೆ NPS ಜಾರಿಯಾಗಿದೆ. 2005 ರಲ್ಲಿ ನೋಟಿಫಿಕೇಶನ್ ಆಗಿ 2007 ರಲ್ಲಿ ನೇಮಕಾತಿಯಾದ ನೌಕರರೂ ಕೂಡ ಸುಪ್ರೀಂ ಕೋರ್ಟ್ ಆದೇಶದನ್ವಯ ನಮ್ಮ ರಾಜ್ಯದಲ್ಲಿ OPS ವ್ಯಾಪ್ತಿಗೆ ಒಳಪಡುತ್ತಿಲ್ಲವೇ !
ಇದರರ್ಥ ಒಬ್ಬ ನೌಕರನ ನೇಮಕಾತಿ ಸಂದರ್ಭದಲ್ಲಿನ ನಿಯಮಗಳನ್ನು ಅಲ್ಲಗಳೆದು ಯಾವುದೇ ನಿಯಮ ಹಾಗೂ ಕಾನೂನುಗಳನ್ನು ಪೂರ್ವಾನ್ವಯ ಮಾಡಲು ಅವಕಾಶವಿಲ್ಲ ! ಹಾಗಿದ್ದಾಗ NCTE ಹಾಗೂ RTE ನಿಯಮಗಳನ್ನು ಪೂರ್ವಾನ್ವಯಗೊಳಿಸುವುದು ನ್ಯಾಯವೇ ?
▪️NCTE 13ನೇ ಅಕ್ಟೋಬರ್ 2011 ರಂದು ಹೊರಡಿಸಿದ The Gazette of India ನಲ್ಲಿ ನಮೂದಿಸಿದಂತೆ ಸೆಕ್ಷನ್ 12A ಪ್ರಕಾರ NCTE ನಿಗದಿ ಪಡಿಸಿದ ವಿದ್ಯಾರ್ಹತೆಯು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (NCTE) ಪ್ರಾರಂಭಕ್ಕೂ ಮೊದಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಇತ್ಯಾದಿ ಶಾಲೆಗಳಲ್ಲಿ ನೇಮಕಗೊಂಡ ಯಾವುದೇ ನೌಕರರಿಗೆ ಸೇವೆಯಲ್ಲಿ ಮುಂದುವರೆಯಲು ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಅಂದರೆ NCTE ನಿಗದಿ ಪಡಿಸಿದ ವಿದ್ಯಾರ್ಹತೆ ಹಾಗೂ TET ಪರೀಕ್ಷೆಯನ್ನು ಜಾರಿಗೊಳಿಸಿದ ದಿನಾಂಕದ ಮುಂಚೆ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬಾರದು ಎಂದರ್ಥ ಅಲ್ಲವೇ !
▪️ಯಾವುದೇ ಹೊಸ ನಿಯಮಗಳನ್ನು ಜಾರಿಗೆ ಬಂದ ದಿನಾಂಕದಿಂದ ಅನ್ವಯಿಸಬೇಕು ಎಂಬುದು ಸಹಜ ನ್ಯಾಯದ ಕಾನೂನಿನ ಪರಿಭಾಷೆ ಹಾಗೂ ಸಾಮಾಜಿಕ ನಿಯಮ.
▪️ಆದಾಗ್ಯೂ ಈ ನಿಯಮಗಳು ಜಾರಿಗೂ ಮುನ್ನ ನೇಮಕಾತಿಗೊಂಡು 25-30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ TET ಖಡ್ಡಾಯ ಎಂಬ ನಿಯಮ ಶಿಕ್ಷಕ ಸಮುದಾಯದಲ್ಲಿ ಅಧೈರ್ಯವನ್ನು ಸೃಷ್ಟಿಸುವುದಲ್ಲದೇ ಭವಿಷ್ಯದ ವೃತ್ತಿ ಬದುಕಿನಲ್ಲಿ ಅನಿಶ್ಚಿತತೆಯನ್ನು ಮೂಡಿಸಿದಂತಾಗುವುದಿಲ್ಲವೇ..!
▪️ದೇಶದೆಲ್ಲೆಡೆ ಒಬ್ಬ ಗುಮಾಸ್ತನಾಗಿ ಸರಕಾರಿ ನೌಕರಿಗೆ ಸೇರಿದ ವ್ಯಕ್ತಿ ತನ್ನ ಸೇವಾವಧಿಯಲ್ಲಿ 3-4 ಮುಂಬಡ್ತಿಗಳನ್ನು ಪಡೆದು ಉನ್ನತ ಅಧಿಕಾರಿಯಾಗಿ ನಿವೃತ್ತಿ ಹೊಂದುತ್ತಿರುವಾಗ…..!
▪️2017 ರಲ್ಲಿ ರಚಿತವಾದ ಹೊಸ ನಿಯಮಗಳ ಪೂರ್ವಾನ್ವಯದಿಂದ 1-7/8 ಕ್ಕೆ ನೇಮಕಾತಿ ಹೊಂದಿದ ಶಿಕ್ಷಕರ ಮೂಲ ಹುದ್ದೆ ಪಲ್ಲಟಗೊಂಡು 1-5 ರ ಕೆಳವೃಂದಕ್ಕೆ ತಳ್ಳಲ್ಪಟ್ಟಿದೆ. ಪರಿಣಾಮ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು B.A/B.SC/B.Ed/MA/M.Sc/M.Ed/M.Phil/Ph.D ನಂತಹ ಉನ್ನತ ವಿದ್ಯಾರ್ಹತೆ ಇದ್ದಾಗ್ಯೂ ತಮ್ಮ 30-35 ವರ್ಷದ ಸೇವಾವಧಿಯಲ್ಲಿ ಒಂದೂ ಬಡ್ತಿಯನ್ನು ಪಡೆಯದೇ ಕಣ್ಣೀರು ಹಾಕುತ್ತಾ ನಿವೃತ್ತಿಯಾಗುತ್ತಿದ್ದಾರೆ. ದೇಶದ ಯಾವ ಇಲಾಖೆಯಲ್ಲಿಯೂ ಸರಕಾರಿ ನೌಕರರಿಗೆ ಇಂತಹ ಘೋರ ಅನ್ಯಾಯವಾಗಿಲ್ಲವೆನಿಸುತ್ತದೆ !.
▪️ಇದರಿಂದ ಶಿಕ್ಷಕರ ವರ್ಗಾವಣೆ, ಮುಖ್ಯ ಶಿಕ್ಷಕರ ಬಡ್ತಿ, ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ಬಡ್ತಿ, ಪಿಎಸ್‌ಟಿ ಮತ್ತು ಜಿಪಿಟಿ ಹುದ್ದೆಗಳ ಸಮನ್ವಯ ಹಾಗೂ ಸೇವಾ ಜೇಷ್ಠತೆಯಂತಹ ಹಲವಾರು ಸಮಸ್ಯೆಗಳು ಉದ್ಭವವಾಗಿ ಶಿಕ್ಷಕರು ಪರಿತಪಿಸುವಂತಾದ ಈ ಸಂದಿಗ್ಧ ಸ್ಥಿತಿಯಲ್ಲಿ ಸುಪ್ರೀಂ ಕೋರ್ಟಿನ ತೀರ್ಪು ಶಿಕ್ಷಕರಿಗೆ ಮತ್ತೊಂದು ಕೊಡಲಿ ಪೆಟ್ಟು ಕೊಟ್ಟಂತಾಗಿದೆ !
▪️ಮಾನ್ಯ ಘನ ಸರ್ಕಾರದ ಸನ್ಮಾನ್ಯ ಮುಖ್ಯ ಮಂತ್ರಿಗಳು, ಶಿಕ್ಷಣ ಸಚಿವರು ಹಾಗೂ ಇಲಾಖೆಯು ರಾಜ್ಯದ ಶಿಕ್ಷಕರಿಗಾದ ಈ ಬಹುದೊಡ್ಡ ಅನ್ಯಾಯವನ್ನು ಸರಿಪಡಿಸಲು ಸಚಿವ ಸಂಪುಟದ ತೀರ್ಮಾನದೊಂದಿಗೆ ಇನ್ನೇನು ಆದೇಶ ಹೊರಡಿಸಬೇಕೆನ್ನುವಷ್ಟರಲ್ಲಿ TET ಖಡ್ಡಾಯ..! ಎಂಬ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಶಿಕ್ಷಕರಿಗೆ ಬರಸಿಡಿಲು ಬಡಿದಂತಾಗಿದೆ…!
ಕರ್ನಾಟಕ ರಾಜ್ಯದಲ್ಲಿ ಶಿಕ್ಷಕರಿಗೆ CET ಪರೀಕ್ಷೆ !
▪️2001 ರಿಂದ ರಾಜ್ಯದಲ್ಲಿ ಶೈಕ್ಷಣಿಕ ಹಾಗೂ ಬೋಧನಾ ಕೌಶಲ್ಯಗಳ ಜೊತೆಗೆ ಶಿಕ್ಷಕರ ಅರ್ಹತೆಯನ್ನು ಪರೀಕ್ಷಿಸುವ CET ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾಡಿ ಪಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದೆ. 2001-02 ಕ್ಕಿಂತ ಮೊದಲು ಪ್ರಾಥಮಿಕ ಶಾಲೆಯಲ್ಲಿ ITC/TCH ವಿದ್ಯಾರ್ಹತೆಯ ಮೇಲೆ ಶಿಕ್ಷಕರನ್ನು ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಶಿಕ್ಷಕರಿಗೆ CET ಯಿಂದ ವಿನಾಯಿತಿ ನೀಡಿಲ್ಲವೇ..! NCTE ನಿಯಮದಲ್ಲಿಯೂ ಕೂಡ ಹೊಸ ವಿದ್ಯಾರ್ಹತೆಯಿಂದ ಸದರಿ ಶಿಕ್ಷಕರಿಗೆ ವಿನಾಯಿತಿ ನೀಡಿಲ್ಲವೇ ?
▪️ಶಿಕ್ಷಕರಿಗೆ CET ಪರೀಕ್ಷೆಯಲ್ಲಿ ಸಾಮಾನ್ಯ ವಿಜ್ಞಾನ, ಆಂಗ್ಲ ಭಾಷೆ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಕ್ಕೆ ಅಂಕಗಳನ್ನು ನಿಗದಿಪಡಿಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಎಲ್ಲ ವಿಷಯಗಳಲ್ಲಿ ಶಿಕ್ಷಕರ ಸಮಗ್ರ ಜ್ಞಾನವನ್ನು ಪರೀಕ್ಷಿಸಲಾಗಿತ್ತು.
▪️ಹೊಸ ನೇಮಕಾತಿಗಳಿಗೆ TET ಪರೀಕ್ಷೆಯಲ್ಲಿ 1-5 ರ ಶಿಕ್ಷಕರಿಗೆ ಕನ್ನಡ ಭಾಷೆ, ಆಂಗ್ಲ ಭಾಷೆ, ಶಿಶು ವಿಕಸನ ಹಾಗೂ ಬೋಧನಾ ಕ್ರಮ, ಗಣಿತ, ಪರಿಸರ ಅಧ್ಯಯನಕ್ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
▪️6-8 ರ ಗಣಿತ-ವಿಜ್ಞಾನ ಶಿಕ್ಷಕರಿಗೆ ಕನ್ನಡ ಭಾಷೆ, ಆಂಗ್ಲ ಭಾಷೆ, ಶಿಶು ವಿಕಸನ ಹಾಗೂ ಬೋಧನಾ ಕ್ರಮ, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
▪️6-8 ರ ಸಮಾಜ ವಿಜ್ಞಾನ ಶಿಕ್ಷಕರಿಗೆ ಕನ್ನಡ ಭಾಷೆ, ಆಂಗ್ಲ ಭಾಷೆ, ಶಿಶು ವಿಕಸನ ಹಾಗೂ ಬೋಧನಾ ಕ್ರಮ, ಸಮಾಜ ವಿಜ್ಞಾನ ವಿಷಯಕ್ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ.
▪️ಶಿಶು ವಿಕಸನ ಹಾಗೂ ಬೋಧನಾ ಕ್ರಮದ ವಿಷಯವನ್ನು ಹೊರತುಪಡಿಸಿ CET ಪರೀಕ್ಷೆಯಲ್ಲಿ TET ಗೆ ನಿಗದಿಪಡಿಸಿದ ಎಲ್ಲ ವಿಷಯಗಳಲ್ಲಿನ ಪರೀಕ್ಷೆಯಲ್ಲಿ ಶಿಕ್ಷಕರು ಉತ್ತೀರ್ಣರಾಗಿದ್ದಾರೆ. ಅಲ್ಲದೇ ಶಿಶು ವಿಕಸನ ಹಾಗೂ ಬೋಧನಾ ಕ್ರಮದ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, TCH / D ED ನಲ್ಲಿ ಎರಡು ವರ್ಷ ವಿದ್ಯಾಭ್ಯಾಸ ಮಾಡಿ ಪರೀಕ್ಷೆಯನ್ನು ಪಾಸಾಗುವುದರ ಜೊತೆಗೆ ನೂರಾರು ಇಲಾಖಾ ತರಬೇತಿಗಳೊಂದಿಗೆ ತರಗತಿ ಕೋಣೆಯಲ್ಲಿ 25-30 ವರ್ಷ ಕಲಿಸಿದ ಪ್ರಾಯೋಗಿಕ ಅನುಭವವಿದೆ ಅಲ್ಲವೇ ! ಇಂತಹ ಶಿಕ್ಷಕರ ಸಾಮರ್ಥ್ಯವನ್ನು ಅಳೆಯಲು ಮತ್ತೊಂದು ಪರೀಕ್ಷೆ ಅಗತ್ಯವೇ….!
▪️ಡಾ. ರಾಜಾರಾಮಣ್ಣ ವರದಿಯ ಅನುಸಾರ 2001 ರ ನಂತರ ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗೆ ಪ್ರವೇಶ ಪರೀಕ್ಷೆಯನ್ನು (CET) ಖಡ್ಡಾಯಗೊಳಿಸಿತು. ಇದೇ ವರದಿಯ ಅನುಸಾರವೇ ಕರ್ನಾಟಕ ರಾಜ್ಯದಲ್ಲಿ 1-7 ನೇ ತರಗತಿಗೆ 8 ನೇ ತರಗತಿಯನ್ನು ಸೇರ್ಪಡೆ ಮಾಡಿ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು 1-8 ತರಗತಿಗೆ ನಿಗದಿಪಡಿಸಲಾಯಿತು.
▪️ಅಂದಿನಿಂದ ಕರ್ನಾಟಕ ರಾಜ್ಯದಲ್ಲಿ 1-8 ನೇ ತರಗತಿಗೆಂದು ವಿಷಯವಾರು ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಯಿತು. ಇವರೆಲ್ಲರೂ 1-8 ರ ಎಲ್ಲ ತರಗತಿಗಳಿಗೆ ಎಲ್ಲ ವಿಷಯಗಳನ್ನು ಅಗತ್ಯಕ್ಕನುಗುಣವಾಗಿ 25-30 ವರ್ಷಗಳಿಂದ ಬೋಧಿಸಿದ ಅನುಭವಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು.
▪️ಕನ್ನಡ ಭಾಷಾ ಶಿಕ್ಷಕರಾಗಿ ನೇಮಕಕೊಂಡ ಶಿಕ್ಷಕರು ಕನ್ನಡಲ್ಲಿ ಆಳವಾದ ಜ್ಞಾನವನ್ನೂ, ಅಗಾಧ ಪಾಂಡಿತ್ಯವನ್ನೂ ಹೊಂದಿರುತ್ತಾರೆ.
▪️ಆಂಗ್ಲಭಾಷಾ ವಿಷಯ ಶಿಕ್ಷಕರಾಗಿ ನೇಮಕಗೊಂಡ ಶಿಕ್ಷಕರು ಆಂಗ್ಲಭಾಷಾ ವಿಷಯದಲ್ಲಿ ಆಳವಾದ ಜ್ಞಾನವನ್ನೂ, ಅಗಾಧ ಪಾಂಡಿತ್ಯವನ್ನೂ ಹೊಂದಿರುತ್ತಾರೆ.
▪️ವಿಜ್ಞಾನ ವಿಷಯ ಶಿಕ್ಷಕರಾಗಿ ನೇಮಕಗೊಂಡ ಶಿಕ್ಷಕರು ವಿಜ್ಞಾನ ವಿಷಯದಲ್ಲಿ ಆಳವಾದ ಜ್ಞಾನವನ್ನೂ, ಅಗಾಧ ಪಾಂಡಿತ್ಯವನ್ನೂ ಹೊಂದಿರುತ್ತಾರೆ.
▪️ಹಿಂದಿ ಭಾಷಾ ಶಿಕ್ಷಕರಾಗಿ ನೇಮಕಗೊಂಡ ಶಿಕ್ಷಕರು ಹಿಂದಿಯಲ್ಲಿ ಆಳವಾದ ಜ್ಞಾನವನ್ನೂ, ಅಗಾಧ ಪಾಂಡಿತ್ಯವನ್ನೂ ಹೊಂದಿರುತ್ತಾರೆ.
▪️ಹೀಗೆಯೇ….ಇತರೆ ಎಲ್ಲ ವಿಷಯಗಳಲ್ಲಿ ವಿಷಯವಾರು ಶಿಕ್ಷಕರಾಗಿ ನೇಮಕಾತಿಗೊಂಡ ಶಿಕ್ಷಕರು ಅವರವರ ವಿಷಯದಲ್ಲಿ ಅಪರಿಮಿತ ಜ್ಞಾನವನ್ನು ಗಳಿಸಿದ್ದಾರೆ.
▪️ರಾಜ್ಯದಲ್ಲಿ 1 ರಿಂದ 3 ನೇ ತರಗತಿಗೆ ನಲಿ-ಕಲಿ ಆರಂಭವಾದ ನಂತರ ಕೆಲ ಶಿಕ್ಷಕರು 15-20 ವರ್ಷಗಳಿಂದ ನಲಿ-ಕಲಿ ಬೋಧಿಸುತ್ತಿದ್ದಾರೆ. ಬೋಧಿಸುತ್ತಿದ್ದಾರೆ. ಇವರೆಲ್ಲರಿಗೂ ಮತ್ತೆ ಎಲ್ಲ ವಿಷಯಗಳ TET ಪರೀಕ್ಷೆ ಬರೆಯಿರಿ ಎನ್ನುವುದು ಸಮರ್ಥನೀಯವೇ !
▪️TET ಪರೀಕ್ಷೆಯನ್ನು ಖಡ್ಡಾಯಗೊಳಿಸಿದ 2010ರ ಅಧಿಸೂಚನೆಗೂ ಪೂರ್ವದಲ್ಲಿ ನೇಮಕಾತಿಯಾದ ಈ ಹಿಂದಿನ ಎಲ್ಲ ನೌಕರರಿಗೆ ಮೊದಲೇ ನಿಗದಿಪಡಿಸಿದ್ದರೆ, ಎಲ್ಲರೂ ಉತ್ತೀರ್ಣರಾಗಿಯೇ ನೇಮಕಾತಿಗೊಳ್ಳುತ್ತಿದ್ದರು. ಹೊಸ ನಿಯಮವನ್ನು ಪೂರ್ವಾನ್ವಯಗೊಳಿಸಿ ಇವರೆಲ್ಲರಿಗೂ ಮತ್ತೆ ಪರೀಕ್ಷೆ ಬರೆಯಿರಿ ಎನ್ನುವುದು ಸಾಮಾಜಿಕ ನ್ಯಾಯವೇ ?
▪️ತಮ್ಮ ಸೇವಾವಧಿಯಲ್ಲಿ ನೂರಾರು ತರಬೇತಿ ಪಡೆದ ಶಿಕ್ಷಕರು ಕಾಲ ಕಾಲಕ್ಕೆ ತಕ್ಕಂತೆ ಹೊಸ ಹೊಸ ಪಠ್ಯ ಹಾಗೂ ಬೋಧನಾ ಪದ್ಧತಿಗನುಗುಣವಾಗಿ ನಾವಿನ್ಯಯುತ ಬೋಧನಾ ಕೌಶಲ್ಯಗಳನ್ನು ಅನ್ವಯಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಇಲ್ಲಿಯವರೆಗೂ ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ.
▪️1-8 ನೇ ತರಗತಿಯಲ್ಲಿ ಇದೇ ಶಿಕ್ಷಕರಿಂದ ಕಲಿತ ಮಕ್ಕಳೇ ಅಲ್ಲವೇ….ಇಂದು ದೇಶದೆಲ್ಲೆಡೆ IAS, IPS, IFS, KAS ನಂತಹ ಇತ್ಯಾದಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರು, ವಿಜ್ಞಾನಿಗಳು, ಇಂಜನಿಯರುಗಳು, ಉಪನ್ಯಾಸಕರು, ಶಿಕ್ಷಕರು ಅಲ್ಲದೇ ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರೂ ಕೂಡ ಇದೇ ಶಿಕ್ಷಕರ ವಿದ್ಯಾರ್ಥಿಗಳಲ್ಲವೇ !
▪️25-30 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ಮಕ್ಕಳ ಸವಾರ್ಂಗೀಣ ಪ್ರಗತಿಗೆ ಶ್ರಮಿಸಿದ ಸೇವಾನಿರತ ಶಿಕ್ಷಕರ ಮೌಲ್ಯಮಾಪನಕ್ಕೆ TET ಒಂದೇ ಮಾನದಂಡವೇ ?
▪️ಶಿಕ್ಷಕರು ಪರೀಕ್ಷೆಯಲ್ಲಿ ಕಾರಣಾಂತಗಳಿಂದ ಅನುತ್ತೀರ್ಣರಾದರೆ ಅವರನ್ನು ಅಸರ್ಥರೆಂದು ಘೋಷಿಸುವುದೇ ? ಆಗ ಶಿಕ್ಷಕರ ಕುಟುಂಬದಲ್ಲಿ, ಸಮಾಜದಲ್ಲಿ ಗೌರವ ಕಡಿಮೆಯಾಗುವುದಿಲ್ಲವೇ ? ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ತಲೆತಗ್ಗಿಸುವಂತಾಗುವುದಿಲ್ಲವೇ ? ಅವರ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾದಂತಾಗುವುದಿಲ್ಲವೇ ? ಇಷ್ಟು ವರ್ಷದ ಬೋಧನೆ ಅಸಮರ್ಥನೀಯವೆನಿಸುವುದಿಲ್ಲವೇ ? TET ಉತ್ತೀರ್ಣರಾಗಿಲ್ಲವೆಂಬ ಕಾರಣವೊಡ್ಡಿ ಅವರೆಲ್ಲರನ್ನು ವೃತ್ತಿ ಬದುಕಿನಿಂದ ತ್ಯಜಿಸಬೇಕೆನ್ನುವುದು ಸಹಜ ನ್ಯಾಯವೇ ? ಇದರಿಂದ ಅವರಿಗಾಗುವ ಮಾನಸಿಕ ಆಘಾತವನ್ನು ಊಹಿಸಲು ಸಾದ್ಯವೇ ? ಇದು ರಾಜ್ಯ ಹಾಗೂ ದೇಶದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಗಾಢ ಪರಿಣಾಮವನ್ನು ಬೀರುವುದಿಲ್ಲವೇ ?
▪️NCTE ರಾಷ್ಟ್ರಮಟ್ಟದಲ್ಲಿ 1-8 ರ ಶಿಕ್ಷಕರಿಗೆ ವಿದ್ಯಾರ್ಹತೆಯನ್ನು ಆಗಸ್ಟ್ 23, 2010 ರಲ್ಲಿ ನಿಗದಿಪಡಿಸಿದ್ದು, ಈ ನಿಯಮ ಜಾರಿಗೂ ಮುಂಚೆ ನೇಮಕಗೊಂಡ ಶಿಕ್ಷಕರಿಗೆ TET ಪರೀಕ್ಷೆ ಇರಲಿಲ್ಲ. ಇವರೆಲ್ಲ ಆಯಾ ಕಾಲಘಟ್ಟದಲ್ಲಿದ್ದ ಶೈಕ್ಷಣಿಕ ಹಾಗೂ ಬೋಧನಾ ಪದ್ಧತಿಗಳಲ್ಲಿ ಪರಿಣಿತಿ ಹೊಂದಿ ಬೋಧಿಸಿದ ಹಾಗೂ ಬೋಧಿಸುತ್ತಿರುವ ಶಿಕ್ಷಕರು. ಇಂತಹ ಸೇವಾನಿರತ ಶಿಕ್ಷಕರ ಅಪಾರ ಸೇವಾ ಅನುಭವವನ್ನು ನಾವೆಲ್ಲರೂ ಗೌರವಿಸುವುದು ನ್ಯಾಯವಲ್ಲವೇ !
▪️ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಇಲಾಖೆಯು ಕಾಲಕಾಲಕ್ಕೆ ನೀಡುವ ತರಬೇತಿಗಳಾದ ಕಲಿಕಾ ಚೇತರಿಕೆ, ಗಣಿತ ಗಣಕ, ಸಚೇತನ, ಗುರು ಚೇತನ, ಓದು ಕರ್ನಾಟಕ, ಇಎನ್‌ಕೆ, ಗಣಿತ ಕಲಿಕಾ ಆಂದೋಲನ, ಪ್ರೇರಣಾ, ಮರು ಸಿಂಚನದಂತಹ ನೂರಾರು ತರಬೇತಿಗಳ ಜೊತೆಗೆ ನಿಷ್ಠಾ ತರಬೇತಿಗಳಲ್ಲಿಯೂ ಎಲ್ಲ ಶಿಕ್ಷಕರಿಗೆ ಕನ್ನಡ, ಗಣಿತ ಶಿಕ್ಷಣ ಶಾಸ್ತ್ರ, ಇಂಗ್ಲಿಷ್ ಶಿಕ್ಷಣ ಶಾಸ್ತ್ರ, ವಿಜ್ಞಾನ ಶಿಕ್ಷಣ ಶಾಸ್ತ್ರ, ಸಮಾಜ ವಿಜ್ಞಾನ ಶಿಕ್ಷಣ ಶಾಸ್ತ್ರ, ಪರಿಸರ ಅಧ್ಯಯನ ಶಿಕ್ಷಣ ಶಾಸ್ತ್ರ, ಬುನಾದಿ ಭಾಷೆ ಮತ್ತು ಸಾಕ್ಷರತೆ, ವೃತ್ತಿಪರ ಶಿಕ್ಷಣ, ಐಸಿಟಿ ಸಮ್ಮಿಳಿತ ಬೋಧನೆ, ಸಮನ್ವಯ ಶಿಕ್ಷಣ, ಮೌಲ್ಯಾಂಕನ, ಬಹುಭಾಷಾ ಶಿಕ್ಷಣ, ಶಾಲಾ ಶಿಕ್ಷಣದ ಉಪಕ್ರಮಗಳು, ವಿವಿಧ ಬೋಧನಾ ಕೌಶಲ್ಯಗಳ ತರಬೇತಿಗಳನ್ನು ನೀಡಿ ಪರೀಕ್ಷೆಗಳನ್ನೂ ಮಾಡಲಾಯಿತು. ಎಲ್ಲ ಶಿಕ್ಷಕರು ಉತ್ತೀರ್ಣರಾಗಿರುವುದು ಮಾತ್ರವಲ್ಲ ತಾವು ಪಡೆದ ನೂರಾರು ತರಬೇತಿಗಳ ಜ್ಞಾನ ಹಾಗೂ ಬೋಧನಾ ಕೌಶಲ್ಯಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನಗೊಳಿಸಿ ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.
▪️ಅದ್ದರಿಂದ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸುವ ಬದಲು, ಹೊಸ ಪಠ್ಯ ಹಾಗೂ ನಾವಿನ್ಯಯುತ ಬೋಧನಾ ಪದ್ಧತಿಗಳನ್ನು ತರಗತಿ ಕೋಣೆಯಲ್ಲಿ ಅನ್ವಯಿಸಿ, ದಶಕಗಳಿಂದ ಅರ್ಜಿಸಿದ ಜ್ಞಾನವನ್ನು ಸುಧೀರ್ಘ ಬೋಧನಾ ಅನುಭವದೊಂದಿಗೆ ಮೇಲೈಸಿಕೊಂಡು ಬೋಧಿಸುತ್ತಿರುವ ಶಿಕ್ಷಕರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಕಾಲಘಟ್ಟದ ಪುನಶ್ಚತನ ತರಬೇತಿಗಳನ್ನು ನೀಡುವುದರ ಮೂಲಕ ಶಿಕ್ಷಕರನ್ನು ಸಜ್ಜುಗೊಳಸಿ ಶೈಕ್ಷಣಿಕ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಬೇಕು.
▪️ಶಿಕ್ಷಕರಲ್ಲಿ ಆತ್ಮಸ್ಥೆರ್ಯವನ್ನು ಹೆಚ್ಚಿಸುವುದರ ಜೊತೆಗೆ ಶೈಕ್ಷಣಿಕ ವ್ಯವಸ್ಥೆಯ ಸ್ಥಿರತೆಯನ್ನು ಕಾಪಾಡುವುದು ಈ ಘಳಿಗೆಯ ತುರ್ತು ಅಗತ್ಯವೆನಿಸುತ್ತದೆ. 20-25-30 ವರ್ಷಗಳ ಕಾಲ ನಿರಂತರವಾಗಿ ಬೋಧನಾ ಕಾರ್ಯದಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡಿರುವ ಸೇವಾನಿರತ ಶಿಕ್ಷಕರ ಪರಿಶ್ರಮ, ಅನುಭವ ಮತ್ತು ಜ್ಞಾನವನ್ನು ಗೌರವಿಸುವುದರ ಮೂಲಕ ಅವರ ಮನೋಬಲವನ್ನು ವೃದ್ಧಿಸಬೇಕಾಗಿದೆ.
▪️ಸಂವಿಧಾನವನ್ನು ರಕ್ಷಿಸುವ ಪರಮೋಚ್ಚ ಅಧಿಕಾರ ಹೊಂದಿದ, ಸಂವಿಧಾನದ ಮೂಲ ಆಶಯಗಳಾದ ಸಾಮಾಜಿಕ ಹಾಗೂ ಸಹಜ ನ್ಯಾಯದ ತತ್ವವನ್ನು ಸಂರಕ್ಷಿಸುವ, ಘನ ಸರ್ವೋಚ್ಚ ನ್ಯಾಯಾಲಯಕ್ಕೆ ವಿನಮ್ರವಾಗಿ ಪ್ರಾರ್ಥಿಸುತ್ತೇವೆ, ದಯವಿಟ್ಟು ತಮ್ಮ ತೀರ್ಪನ್ನು ಪುನರ್ ಪರಿಶೀಲಿಸಿ. ಈ ಮೂಲಕ ದೇಶದ ಲಕ್ಷಾಂತರ ಶಿಕ್ಷಕರ ಸೇವಾ ಭದ್ರತೆಯ ಜೊತೆಗೆ ಜೀವನೋಪಾಯದ ಭದ್ರತೆಯನ್ನು ಖಚಿತಪಡಿಸಬೇಕೆಂಬುದು ನಮ್ಮೆಲ್ಲರ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕೂಡ ಸಮಸ್ತ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರ ಹಕ್ಕುಗಳನ್ನು ರಕ್ಷಿಸುವುದರ ಮೂಲಕ ಶೀಘ್ರ ನ್ಯಾಯವನ್ನು ಒದಗಿಸಲು ಸಮಯೋಚಿತ ಹಾಗೂ ನ್ಯಾಯೋಚಿತ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂಬುದು ರಾಜ್ಯದ ಶಿಕ್ಷಕರ ನಿರೀಕ್ಷೆ ಹಾಗೂ ಬೇಡಿಕೆಯಾಗಿದೆ.
ಕೃಪೆ: ಪ್ರವೀಣ ಪತ್ತಾರ.ಶಿಕ್ಷಕರು ವಿಜಯಪುರ