KARTET-2025 ಟಿಇಟಿ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಮಾಹಿತಿ
KARTET-2025 ಟಿಇಟಿ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಮಾಹಿತಿ.
KARTET-2025 ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹೇಗೆ ಸಿದ್ಧತೆ ನಡೆಸಬೇಕೆಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಅಧಿಸೂಚನೆಯಲ್ಲಿ ಡಿಸೆಂಬರ್ 07 ರಂದು ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ.
ಹೀಗಾಗಿ ಇನ್ನು ಪರೀಕ್ಷೆಗೆ ಉಳಿದಿರುವುದು ಕೆಲವು ದಿನ ಮಾತ್ರ. ಈ ಸಮಯವನ್ನು ವ್ಯಸ್ಥಿತವಾಗಿ ಸದುಪಯೋಗಪಡಿಸಿಕೊಂಡರೆ ಮಾತ್ರ ನೀವು ಟಿಇಟಿಯಲ್ಲಿ ಅರ್ಹತೆ ಪಡೆಯಲು ಸಾಧ್ಯ. ಈ ಸಮಯದಲ್ಲಿ ಈ ಅರ್ಹತಾ ಪರೀಕ್ಷೆ ನಿಗದಿತ ದಿನದಂದು ನಡೆಯುತ್ತದೆಯೇ? ಇಲ್ಲವೇ ಎಂಬ ಚರ್ಚೆಯಲ್ಲಿ ತೊಡಗುವುದನ್ನು ಬಿಟ್ಟು, ಓದಿನತ್ತ ಗಮನ ನೀಡುವುದು ಒಳ್ಳೆಯದು.
ನಿಮಗೀಗಾಗಲೇ ತಿಳಿದಿರುವಂತೆ ಇಲಾಖೆಯ ವೆಬ್‌ನಲ್ಲಿ ಈ ಬಾರಿಯ ಸಿಲಬಸ್ ಪ್ರಕಟವಾಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಯಾವ ಯಾವ ಪರೀಕ್ಷೆಯ ಪಠ್ಯ ವಿಷಯ ಏನಾಗಿರುತ್ತದೆ, ಯಾವ ವಿಷಯಕ್ಕೆ ಎಷ್ಟು ಅಂಕ ನಿಗದಿಯಾಗಿದೆ ಎಂಬುದನ್ನು ನೋಡಿಕೊಳ್ಳಿ. ಇದಕ್ಕೆ ಸರಿಯಾಗಿ ವೇಳಾಪಟ್ಟಿ ಸಿದ್ಧಪಡಿಸಿ ಅಭ್ಯಾಸ ಆರಂಭಿಸಿ. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸ್ಪಷ್ಟ ಗ್ರಹಿಕೆ ಹೊಂದುವುದು ಅಗತ್ಯ. ಆದ್ದರಿಂದ ಯಾವುದೇ ಗೊಂದಲವಾಗದಂತೆ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು.
ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ, ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಂಡಿರಬೇಕು. ಅಭ್ಯಸಿಸುವಾಗ ಮುಖ್ಯವಾಗಿ ಈ ಎರಡು ಪಾಯಿಂಟ್‌ನತ್ತ ಹೆಚ್ಚು ಗಮನ ನೀಡಿ. ಮೊದಲಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಅಭ್ಯಾಸ ಮಾಡಿ. ಇಲ್ಲಿರುವ ಪ್ರಮುಖ ವಿಷಯಗಳ (ಉದಾ: ಸ್ವಾತಂತ್ರ್ಯ, ಹೋರಾಟ) ಬಗ್ಗೆ ಹೆಚ್ಚಿನ ಓದಿಗೆ ಸೂಕ್ತ ಪುಸ್ತಕ ಆಯ್ದುಕೊಳ್ಳಿ.
ರಾಜ್ಯದಲ್ಲಿ ಈಗಾಗಲೇ ನಾಲ್ಕು ಬಾರಿ ಟಿಇಟಿ ಪರೀಕ್ಷೆ ನಡೆದಿದೆ. ಇದರ ಪ್ರಶ್ನೆ ಪತ್ರಿಕೆ ಲಭ್ಯವಿದ್ದು ಪರೀಕ್ಷೆ ಹೇಗೆ ನಡೆಯುತ್ತದೆ ಎಂಬ ಮಾಹಿತಿ ಸಿಗುತ್ತದೆ. ಇದನ್ನು ನೋಡಿಕೊಂಡು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕೆಂಬ ಪ್ಲಾನ್ ಮಾಡಿ. ಈಗಾಗಲೇ ನಿಮಗೆ ತಿಳಿದಿರುವಂತೆ ಈ ಪರೀಕ್ಷೆಯಲ್ಲಿ ಶಿಶು ಮನೋವಿಜ್ಞಾನದ ಪ್ರಕಾರಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಜ್ಞಾನದ ಪ್ರಕಾರವೇ ಮಕ್ಕಳಲ್ಲಿ ವಸ್ತುಗಳನ್ನು ಸಂಗ್ರಹಿಸುವ ಮನೋವೃತ್ತಿ ಕಾಣುತ್ತೇವೆ.
ಹಾಗೆಯೇ ನೀವು ಕೂಡ ಕೈಗೆಟಕುವ ಟಿಇಟಿ ಪರೀಕ್ಷೆ ಶೀರ್ಷಿಕೆಯ ಪುಸ್ತಕಗಳನ್ನು ಸಂಗ್ರಹಿಸುವುದರಲ್ಲಿ ಕಾಲ ಕಳೆಯಬೇಡಿ. ಬದಲಾಗಿ ಈ ಕೇಳಗೆ ತಿಳಿಸಿರುವ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸು ಗಳಿಸಿ.

ಭಾಷೆಗೆ ಸಂಬಂಧಿಸಿದ ಪತ್ರಿಕೆಗಳಲ್ಲಿ ಅಪರಿಚಿತ ಸನ್ನಿವೇಶದ ಯಾವುದಾದರೂ ಗದ್ಯಾಂಶ ಮತ್ತು ಪದ್ಯಾಂಶಗಳಿರುತ್ತವೆ. ಅವು ಸಾಹಿತ್ಯ, ವಿಜ್ಞಾನ ಅಥವಾ ಕಥಾ ಸಾರಾಂಶವನ್ನು ಒಳಗೊಂಡಿರುತ್ತವೆ. ಅವುಗಳನ್ನು ಓದಿ ಅರ್ಥೈಸಿಕೊಂಡು ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಆದ್ದರಿಂದ ಕಣ್ಣಾಲನೆ ಮತ್ತು ಆಲೋಚನೆಯ ಸಾಮರ್ಥ್ಯಗಳು ಬಹಳ ಮುಖ್ಯ. ಇವುಗಳನ್ನು ನೀವು ಎಷ್ಟು ವೇಗವಾಗಿ ಓದಿ ಅರ್ಥೈಸಿಕೊಳ್ಳುವಿರೋ ಅಷ್ಟು ಬೇಗ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ಆ ಪ್ರಶ್ನೆಯಲ್ಲಿನ ಆಯ್ಕೆಗಳು ನಿಮ್ಮನ್ನು ದ್ವಂದ್ವಕ್ಕೊಳಪಡಿಸುತ್ತವೆ. ಹೀಗಾಗಿ ನಿಮ್ಮ ಗ್ರಹಿಕೆ ಸರಿಯಾಗಿರುವಂತೆ ನೋಡಿಕೊಳ್ಳಿ. ಈಗಾಗಲೇ ನಡೆದಿರುವ ಪರೀಕ್ಷೆಗಳ ಲಭ್ಯವಿರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅವುಗಳಿಗೆ ಉತ್ತರಿಸುವ ಸಾಮರ್ಥ್ಯಗಳಿಸಿಕೊಳ್ಳಿ.
▪️ಒಟ್ಟು ಪ್ರಶ್ನೆಗಳು ಒಟ್ಟು ಅಂಕಗಳನ್ನು ಉತ್ತರಿಸಲು ಬೇಕಾಗುವ ಸಮಯವನ್ನು ಲೆಕ್ಕಹಾಕಿಕೊಂಡು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸಮಾಡಿಕೊಳ್ಳಿ.
▪️ಭಾಷೆಯ ಮೇಲೆ ಹಿಡಿತವಿದ್ದರೆ ಇಂತಹ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಅರ್ಥೈಸಿಕೊಂಡು ಉತ್ತರಿಸಬಹುದು. ಇದರಿಂದ ಸಮಯದ ಉಳಿತಾಯವಾಗಿ ಆ ಸಮಯವನ್ನು ಕ್ಲಿಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಆಲೋಚಿಸುವಾಗ ಬಳಸಿಕೊಳ್ಳಬಹುದು.
▪️ಬೋಧನಾ ಸಾಮರ್ಥ್ಯ ಮತ್ತು ಶಿಶು ಮನೋವಿಜ್ಞಾನದಲ್ಲಿ ಶಿಕ್ಷಣ ಪದ್ಧತಿ ತರಗತಿಯ ಸನ್ನಿವೇಶ ಮಗುವಿನ ಮನೋವೃತ್ತಿ ಮಗುವಿನ ಗ್ರಹಿಕೆ ಕಲಿಕೆಯ ದೋಷಗಳನ್ನು ಪತ್ತೆಹಚ್ಚುವ ವಿಷಯಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಪ್ರಶ್ನೆಗಳ ಆಯ್ಕೆಗಳು ಅತಿ ಉದ್ದುದ್ದ ಸಾಲಿನ ಉತ್ತರಗಳಾಗಿರುತ್ತವೆ. ಇಲ್ಲಿ ನಿಮ್ಮ ತಾರ್ಕಿಕ ವಿವೇಚನೆ ಪ್ರಶ್ನೆಯನ್ನು ಗಮನವಿಟ್ಟು ಓದಿ ಸಮಸ್ಯೆಯನ್ನು ಬೇಗನೆ ಕಂಡುಕೊಳ್ಳುವುದು ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ.
▪️ಭಾಷಾ ಕೌಶಲಗಳು, ಮನೋಸಾಮರ್ಥ್ಯ ಭಾಷಾ ಬೋಧನೆಯಲ್ಲಿ ಎದುರಾಗುವ ಸವಾಲುಗಳಿಗೆ ಸಂಬಂಧಿಸಿದ ಪ್ರಶ್ನೆಗಳಾಗಿದ್ದಲ್ಲಿ ತರಗತಿಯ ಶಿಕ್ಷಕರಾಗಿ ಆಲೋಚಿಸಿದರೆ ಒಳ್ಳೆಯದು. ಆಗ ನಿಮ್ಮ ಯೋಚನಾ ಕ್ರಮ ಮತ್ತು ದೃಷ್ಟಿಕೋನದಿಂದ ಸಮರ್ಪಕವಾದ ಸರಿಯುತ್ತರವನ್ನು ಪಡೆಯಲು ಸಾಧ್ಯವಾಗುತ್ತದೆ.
▪️ತೀರಾ ದ್ವಂದದ ಪ್ರಶ್ನೆಗಳಾದರೆ, ತಕ್ಷಣ ಉತ್ತರ ತೋಚದಿದ್ದರೆ ಮುಂದಿನ ಪ್ರಶ್ನೆಯ ಕಡೆ ಸಾಗುವುದು ಉತ್ತಮ. ಇದರಿಂದ ಸಮಯ ಉಳಿತಾಯವಾಗಿ ಎರಡನೇ ಸರದಿಯಲ್ಲಿ ಮತ್ತೆ ಪ್ರಶ್ನೆಗಳಿಗೆ ಯೋಚಿಸುವುದಕ್ಕೆ ಅನುಕೂಲವಾಗುತ್ತದೆ.
▪️ಮನೋವಿಜ್ಞಾನದಲ್ಲಿ ಬಹುತೇಕ ಪ್ರಶ್ನೆಗಳಿಗೆ ಆಯ್ಕೆ ಮಾಡುವಾಗ ಒಂದಕ್ಕಿಂತ ಹೆಚ್ಚು ಆಯ್ಕೆಗಳು ನಿಮಗೆ ಸರಿ ಎನಿಸಬಹುದು. ಹಾಗಾಗಿ ಕೊಟ್ಟ ಆಯ್ಕೆಗಳಲ್ಲಿ ಹೆಚ್ಚು ಸಮಗ್ರತೆಯನ್ನು ಹೊಂದಿರುವ ಆಯ್ಕೆಯನ್ನು ಗುರುತಿಸಿರಿ.
▪️ ಟಿಇಟಿ ಪರೀಕ್ಷೆಯಲ್ಲಿ ಕೇವಲ ಶಿಶು ಮನೋವಿಜ್ಞಾನ ಮತ್ತು ಭಾಷಾ ವಿಷಯ ಮಾತ್ರ ಇರುವುದಿಲ್ಲ ಪ್ರಶ್ನೆ ಪತ್ರಿಕೆ -1ರಲ್ಲಿ ಗಣಿತ ಮತ್ತು ಪರಿಸರ ಅಧ್ಯಯನ ಹಾಗೂ ಪ್ರಶ್ನೆ ಪತ್ರಿಕೆ-2ರಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳೂ ಇರುತ್ತವೆ. ಹೀಗಾಗಿ ಓದುವಾಗ ಈ ಎಲ್ಲ ವಿಷಯಗಳ ಅಧ್ಯಯನಕ್ಕೂ ಸಮಯ ಸಿಗುವಂತೆ ಟೈಮ್ ಟೇಬಲ್ ಹಾಕಿಕೊಳ್ಳಿ.
▪️ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವು ದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯುವುದು ಮುಖ್ಯ. ಇದರತ್ತ ಗಮನ ನೀಡಿ.
▪️ಹಳೆಯ ಪ್ರಶ್ನೆಪತ್ರಿಕೆಯನ್ನು ತೆಗೆದುಕೊಂಡು ಉತ್ತರ ಬರೆಯುವಾಗ ಸಮಯವನ್ನು ನಿಗದಿಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರದ ವಾತಾವರಣ (ಯಾವುದೇ ಅಡ್ಡಿಗಳಿಲ್ಲದಂತೆ) ರೂಪಿಸಿಕೊಂಡು, ಅಭ್ಯಾಸ ನಡೆಸಿ.
▪️ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಗಮನ ಹೆಚ್ಚಿನ ಅಂಕ ಪಡೆಯುವುದರತ್ತ ಇರಲಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಆಕಾಶವೇನು ಕಳಚಿ ನಿಮ್ಮ ಮೇಲೆ ಬೀಳುವುದಿಲ್ಲ. ಏಕೆಂದರೆ ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು.
ಇತ್ತ ಗಮನಿಸಿ:
▪️ಅಭ್ಯಾಸ ನಡೆಸುವಾಗಲೇ ಟೈಮ್ ಮ್ಯಾನೇಜ್ ಮಾಡುವುದನ್ನೂ ಕಲಿತುಕೊಳ್ಳಿ. ಏಕೆಂದರೆ ಐದು ವಿಷಯಗಳಿಗೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಕೇವಲ 150 ನಿಮಿಷದಲ್ಲಿ ನೀವು ಉತ್ತರ ಗುರುತಿಸಬೇಕಾಗಿರುತ್ತದೆ. ಒಂದು ಪ್ರಶ್ನೆಗೆ ಉತ್ತರಿಸಲು ಸಿಗುವುದು ಒಂದು ನಿಮಿಷ ಮಾತ್ರ.
▪️ಟಿಇಟಿಯ ದಿನಾಂಕ ಪ್ರಕಟವಾಗುತ್ತಿ ದ್ದಂತೆಯೇ, ರಾಜ್ಯದಾದ್ಯಂತ ನೂರಾರು ತರಬೇತಿ ಕೇಂದ್ರಗಳು, ಅಕಾಡೆಮಿಗಳು ಹುಟ್ಟಿಕೊಂಡಿವೆ. ಇವರ ಆಕರ್ಷಕ ಮಾತಿನ ಶೈಲಿಗೆ ಬಲಿಯಾಗದೆ, ತರಬೇತಿ ಅಗತ್ಯವೆನಿಸಿದಲ್ಲಿ, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿರುವ ತರಬೇತಿ ಕೇಂದ್ರ ಆಯ್ದುಕೊಳ್ಳಿ. ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಈ ಬಗ್ಗೆ ಎಚ್ಚರ ವಹಿಸಿ.
-ಬೆಸ್ಟ್ ಆಫ್ ಲಕ್….