KARTET-2025 ನೋಂದಣಿ ಅಪ್ಡೇಟ್: 3.35 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ
KARTET-2025 ನೋಂದಣಿ ಅಪ್ಡೇಟ್: 3.35 ಲಕ್ಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ:ಶಿಕ್ಷಕರ ನೇಮಕಾತಿ ಆದೇಶ ಪ್ರಕಟಿಸುವ ಹಿನ್ನೆಲೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ.
ಶೀಘ್ರದಲ್ಲಿಯೇ 18 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸುವುದಾಗಿ ಶಿಕ್ಷಣ ಇಲಾಖೆ ಘೋಷಿಸಿರುವ ಪರಿಣಾಮ, ಈ ಬಾರಿಯ ಟಿಇಟಿ ಪರೀಕ್ಷೆಗೆ ದಾಖಲೆಯ 3.35 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಕಳೆದ ಬಾರಿ KARTET-2024ರಲ್ಲಿ 2.70 ಲಕ್ಷ ನೋಂದಣಿ 2.70 ಮಾಡಿಕೊಂಡಿದ್ದರು. ಆದರೆ, ಈ ಬಾರಿ ಶಿಕ್ಷಕರ ನೇಮಕ ಆದೇಶ ಹೊರಬೀಳಲಿರುವ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡುವುದಕ್ಕಾಗಿ ಹೆಚ್ಚಿನ ಜನರು ಟಿಇಟಿ ಅರ್ಹತೆ ಪಡೆಯಲು ಮುಂದಾಗಿದ್ದಾರೆ.
ಸರ್ಕಾರವು 6ರಿಂದ 8ನೇ ತರಗತಿಗೆ ಶಿಕ್ಷಕರನ್ನು ನೇಮಕಾತಿ ಮಾಡುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತೆಗೆ (1ರಿಂದ 5ನೇ ತರಗತಿ) ಪತ್ರಿಕೆ-1ಗಿಂತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತೆ (6ರಿಂದ 8ನೇ ತರಗತಿ) ಪತ್ರಿಕೆ-2ಕ್ಕೆ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ.
ಪೇಪರ್-1ಕ್ಕೆ 85,030 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, ಪೇಪರ್-2ಕ್ಕೆ 2,50,098 ಅಭ್ಯರ್ಥಿಗಳು ಸೇರಿ ಒಟ್ಟು 3,35,128 ಮಂದಿ ನೋಂದಣಿ ಪೂರ್ಣಗೊಂಡಿದೆ. ಅರ್ಜಿ ಸಲ್ಲಿಸಲು ಅ.23ರಿಂದ ನ.9ರವರೆಗೆ ಅವಕಾಶ ನೀಡಲಾಗಿತ್ತು.
ಟಿಇಟಿ-24ರಲ್ಲಿ ಪತ್ರಿಕೆ-1ರಲ್ಲಿ 1,02,282 ಹಾಗೂ ಪತ್ರಿಕೆ-2ರಲ್ಲಿ 1,68,232 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದಕ್ಕೆ ಹೋಲಿಸಿದರೆ, ಪತ್ರಿಕೆ-1ಕ್ಕೆ ಕುಸಿದಿದ್ದು, ಪತ್ರಿಕೆ-2ರ ಸಂಖ್ಯೆ ಹೆಚ್ಚಳವಾಗಿದೆ.
ಡಿಸೆಂಬರ್ 7 ರಂದು ಬೆಳಿಗ್ಗೆ 9-30 ರಿಂದ 12 ಗಂಟೆಯವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ.
2022ರ ಮೇ ನಲ್ಲಿ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿತ್ತು. ಅದರಲ್ಲಿ 13,352 ಮಂದಿ ಅರ್ಹತೆ ಪಡೆದಿದ್ದರು. ಪ್ರಕರಣವು ನ್ಯಾಯಾಲಯದಲ್ಲಿರುವ ಕಾರಣ ಇನ್ನೂ 491 ಮಂದಿಗೆ ಅರ್ಹತಾ ನೇಮಕಾತಿ ಆದೇಶ ಕೈತಲುಪಿಲ್ಲ.! ಮೂರು ವರ್ಷದ ನಂತರ ನೇಮಕಾತಿ ಆದೇಶ ಹೊರಡಿಸಿವುದಾಗಿ ಸರ್ಕಾರ ಪ್ರಕಟಿಸಿರುವುದರಿಂದ ಆಕಾಂಕ್ಷಿಗಳು ಉತ್ಸಾಹದಲ್ಲಿದ್ದಾರೆ.
