Marusinchana: 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ‘ಮರು ಸಿಂಚನ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆ
Marusinchana:ಕಲಿಕೆಯಲ್ಲಿ ಹಿಂದುಳಿದ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಸುಧಾರಿಸಲು 10 ಕೋಟಿ ರೂ. ಅನುದಾನದಲ್ಲಿ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 & 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಉತ್ತಮಪಡಿಸಲು ‘ಮರು ಸಿಂಚನ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರಲ್ಲಿ 2025-26ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಭಾಷಣದ ಕಂಡಿಕೆ 111 (v)ರಲ್ಲಿ ಈ ಕೆಳಕಂಡಂತೆ ಘೋಷಣೆ ಮಾಡಲಾಗಿದೆ.
“ಸರ್ಕಾರಿ ಶಾಲೆಗಳಲ್ಲಿ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ‘ಮರು ಸಿಂಚನ’ (Marusinchana) ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವುದು.”
ಮೇಲೆ ಓದಲಾದ ಕ್ರಮಾಂಕ (3)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ.
ಮರುಸಿಂಚನ (Marusinchana) ಕಾರ್ಯಕ್ರಮವು 2023-2024 ಮತ್ತು 2024-2025 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರದ ಉಪಕ್ರಮವಾಗಿದೆ. ಟ್ರಾನ್ಸ್ಫಾರ್ಮ್ ಸ್ಕೂಲ್ ಪೀಪಲ್ ಫಾರ್ ಆಕ್ಷನ್ ಸಂಸ್ಥೆಗಳ ತಾಂತ್ರಿಕ ಬೆಂಬಲವನ್ನು ಒದಗಿಸುವ ಪಾಲುದಾರಾಗಿರುತ್ತಾರೆ. ಇದು ಐದು ಶೈಕ್ಷಣಿಕ ವರ್ಷಗಳಲ್ಲಿ ಪ್ರತಿ ತರಗತಿಗೆ 50 ಗಂಟೆಗಳ ಕಲಿಕೆಯ ಕಾರ್ಯಕ್ರಮವಾಗಿದೆ. ಬುನಾದಿ ಮತ್ತು ಪೂರ್ವ ಅವಶ್ಯಕ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದು ಕಲಿಕೆಯ ಅಂತರವನ್ನು ನಿವಾರಿಸುತ್ತದೆ ಮತ್ತು 6-10 ತರಗತಿಯ ವಿದ್ಯಾರ್ಥಿಗಳಿಗೆ ವರ್ಗ-ಸೂಕ್ತವಾದ ಕಲಿಕೆಯ ಮಟ್ಟವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.
ಈ ಕಾರ್ಯಕ್ರಮವು ಎಸ್.ಎಸ್.ಎಲ್.ಸಿ ಫಲಿತಾಂಶಗಳ ಗುಣಮಟ್ಟವನ್ನು ಸುಧಾರಿಸಲು ಸಹಕರಿಸುತ್ತದೆ. 2023-2024 ಮತ್ತು 2024-2025 ರಲ್ಲಿ ಮರುಸಿಂಚನ ಕಾರ್ಯಕ್ರಮವು ಕರ್ನಾಟಕದ 17 ಜಿಲ್ಲೆಗಳಾದ್ಯಂತ 69 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಎಲ್ಲಾ ಕನ್ನಡ ಮಾಧ್ಯಮದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಸಂಯೋಜಿತ ಕಾಲೇಜುಗಳನ್ನು ಗುರಿಯಾಗಿಸಿಕೊಂಡಿತ್ತು. ಇದು ಇಂಗ್ಲಿಷ್, ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಒಳಗೊಂಡಿದೆ. ಈ ಉಪಕ್ರಮದಡಿಯಲ್ಲಿ 2024-25ನೇ ಸಾಲಿನಲ್ಲಿ 8,821 ಶಾಲೆಗಳಲ್ಲಿ ಕಾರ್ಯನಿರ್ವಹಿಸಲಾಗಿದೆ.
ಗುಣಮಟ್ಟದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸಂಪನ್ಮೂಲ ಗುಂಪು, ಮಾಸ್ಟರ್ ಸಂಪನ್ಮೂಲ ವ್ಯಕ್ತಿಗಳು, ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರುಗಳಿಗೆ ತರಬೇತಿಯನ್ನು ನೀಡಲಾಗಿತ್ತು.
2025-26ನೇ ಸಾಲಿನ ಆಯವ್ಯಯದಲ್ಲಿ ಮರುಸಿಂಚನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಹಲವಾರು ಆರಂಭಿಕ ಚರ್ಚೆಗಳ ಸಭೆಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಕೈಗೊಳ್ಳಲಾಗಿದೆ. ಈ ಅವಲೋಕನ ಸಭೆಗಳಲ್ಲಿ ಚರ್ಚಿತವಾದಂತೆ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಆಧರಿಸಿ ಪ್ರಸಕ್ತ ಸಾಲಿನಲ್ಲಿ ಮರುಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕಾದ ಜಿಲ್ಲೆಗಳನ್ನು ಗುರುತಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಅನುವಾಗುವಂತೆ ಯೋಜನೆಯನ್ನು ರಚಿಸಿದೆ.
ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಆಧರಿಸಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಮರುಸಿಂಚನ ಕಾರ್ಯಕ್ರಮದ ಅನುಷ್ಠಾನದಿಂದ ಪ್ರಸಕ್ತ ಸಾಲಿಗೆ ಕೈಬಿಡಬಹುದಾಗಿದೆ. ಪ್ರಸಕ್ತ ಸಾಲಿಗೆ ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 27 ಜಿಲ್ಲೆಗಳಲ್ಲಿ ಮರು ಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಮರು ಸಿಂಚನ ಅಭ್ಯಾಸ ಪುಸ್ತಕವನ್ನು 6 ಮತ್ತು 7ನೇ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳ ತರಗತಿವಾರು ದಾಖಲಾತಿಯನ್ನು ಆಧರಿಸಿ ಶೇಕಡ ಎಷ್ಟು ಪ್ರಮಾಣದಲ್ಲಿ ಲಭ್ಯವಿರುವ ಪಿ.ಎ.ಬಿ 2025-26 LEP (Learning Enhancement/Enrichment Programme) ಬಜೆಟ್ ಆಧರಿಸಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು
ಎಂಬ ಬಗ್ಗೆ 27 ಜಿಲ್ಲೆಗಳ ಶೇಕಡ 100 ರಷ್ಟು ವಿದ್ಯಾರ್ಥಿಗಳಿಗೆ (ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳು) ಮರುಸಿಂಚನ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ರೂ.2434.76 ಲಕ್ಷಗಳು, ಶೇಕಡ 60 ರಷ್ಟು ಸದರಿ ವಿದ್ಯಾರ್ಥಿಗಳಿಗೆ ರೂ.1460.86 ಲಕ್ಷಗಳು, ಶೇಕಡ 40 ರಷ್ಟು ಸದರಿ ವಿದ್ಯಾರ್ಥಿಗಳಿಗೆ ರೂ.973.90 ಲಕ್ಷಗಳು, ಶೇಕಡ 25 ರಷ್ಟು ಸದರಿ ವಿದ್ಯಾರ್ಥಿಗಳಿಗೆ ರೂ.608.69 ಲಕ್ಷಗಳು ವೆಚ್ಚವಾಗಲಿದೆ.
National Achievement Survey 2021 ಸಮೀಕ್ಷೆ ಸೇರಿದಂತೆ ವಿವಿಧ ಆಸೇಸಮೆಂಟ್ ಸರ್ವೇಗಳಲ್ಲಿನ ವರದಿಗಳನ್ನು ಗಮನಿಸಿದಂತೆ ಶೇ 40 ರಷ್ಟು ಮಕ್ಕಳಲ್ಲಿ ತರಗತಿ ಕಲಿಕಾಫಲ ಸಾಧನೆಯಾಗದೇ ಇರುವುದು ಗಮನಾರ್ಹ, ಅದೇ ರೀತಿ PARAKH 2024 ವರದಿಯಲ್ಲಿಯೂ ಶೇ.40 ರಷ್ಟು ಮಕ್ಕಳಿಗೆ ತರಗತಿ ಕಲಿಕಾಫಲ ಸಾಧನೆಯಾಗದೇ ಇರುವುದು ವರದಿಯಾಗಿದೆ. ಡಿ ಎಸ್ ಇ ಆರ್ ಟಿ ವತಿಯಿಂದ ಸೇತುಬಂಧ-ಎಫ್ ಎಲ್ ಎನ್ ಪೂರ್ವ ಪರೀಕ್ಷೆಯ ಆಧಾರದಲ್ಲಿ ಶೇ 40 ರಷ್ಟು ಮಕ್ಕಳಿಗೆ ಅಗತ್ಯ ಕಲಿಕಾ ಫಲಗಳನ್ನು ಕಲಿಸಬೇಕೆಂಬುದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ 27 ಜಿಲ್ಲೆಗಳ ಸರ್ಕಾರಿ ಶಾಲೆಗಳ 6 ರಿಂದ 10 ನೇ ತರಗತಿ ಮಕ್ಕಳಲ್ಲಿ ಗುರುತಿಸಿಕೊಳ್ಳಬಹುದಾದ ಶೇ 40 ರಷ್ಟು ಸದರಿ ವಿದ್ಯಾರ್ಥಿಗಳಿಗೆ, ಪಿ ಎ ಬಿ 2025-26 ರ ಎಲ್ ಇ ಪಿ (Learning Enhancement/Enrichment Programme) ಅಡಿ ಲಭ್ಯವಿರುವ ಸುಮಾರು ರೂ. 31 ಕೋಟಿಗಳಲ್ಲಿ ರೂ.9.739 ಕೋಟಿಗಳ ವೆಚ್ಚದಲ್ಲಿ ಪುಟ ಸಂಖ್ಯೆ ಮಿತಗೊಳಿಸಿದ ಮರುಸಿಂಚನ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಬಹುದಾಗಿದ್ದು ಎಂದು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆರವರ ಅಭಿಪ್ರಾಯವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ರವರು ಸಹಮತಿಸಿರುತ್ತಾರೆ.
ಕಾರ್ಯಕ್ರಮದ ಸ್ವರೂಪ:
ಮರುಸಿಂಚನ ಕಾರ್ಯಕ್ರಮದ ಭಾಗವಾಗಿ ಸೇತುಬಂಧ ಪೂರ್ವ ಪರೀಕ್ಷೆ, ಬುನಾದಿ ಹಂತದ ಕಲಿಕಾ ಅನುಭವಗಳ ಆಯೋಜನೆ, ಪಠ್ಯದೊಂದಿಗೆ ಸಮನ್ವಯಗೊಳಿಸಿದ ಬೆಂಬಲಿತ ಕಲಿಕಾ ಅನುಭವಗಳ ಆಯೋಜನೆ, ಪರೀಕ್ಷೆಗಳನ್ನು ಒಳಗೊಂಡ ಕಲಿಕಾ ಕ್ರೋಡೀಕರಣ ಹಂತ, ಸೇತುಬಂಧ ಸಾಪಲ್ಯ, ಪರೀಕ್ಷೆ ಮುಂತಾದ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ.
ಸೇತುಬಂಧ ಕಾರ್ಯಕ್ರಮದ ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆ, ಪಠ್ಯಾಧಾರಿತ ಮೌಲ್ಯಾಂಕನಗಳು, ರೂಪಣಾತ್ಮಕ ಮೌಲ್ಯಾಂಕನ (FA-Formative Assessment) 1, 2, 3, 4 ಮತ್ತು ಸಂಕಲನಾತ್ಮಕ ಮೌಲ್ಯಾಂಕನ (SA-Summative Assessment) 1, 2 ಗಳ ದತ್ತಾಂಶವನ್ನು ಮರುಸಿಂಚನ ಕಾರ್ಯಕ್ರಮದ ಅನುಷ್ಠಾನ ಪರಿಣಾಮಕಾರತ್ನವನ್ನು ಅರ್ಥೈಸಲು ಬಳಸಲಾಗುವುದು.
ಪಿಎಬಿ 2025-26 ನೇ ಸಾಲಿನ LEP (Learning Enhancement/Enrichment Programme) ಅನುದಾನದಡಿ ನಿಗದಿಗೊಳಿಸುವ ವಿದ್ಯಾರ್ಥಿಗಳ ತರಗತಿವಾರು ಸಂಖ್ಯೆಗೆ ಅನುಗುಣವಾಗಿ ಶಾಲಾ ಪೂರ್ವ ಅಥವಾ ಶಾಲಾ ನಂತರದ ವಿಶೇಷ ಅವಧಿಗಳ ನಿರ್ವಹಣೆಯ ಸ್ವರೂಪದಲ್ಲಿ ಅನುಷ್ಠಾನಗೊಳಿಸಬೇಕಿದೆ. ಡಿ.ಎಸ್.ಇ.ಆರ್.ಟಿ ವತಿಯಿಂದ ಪಠ್ಯಾಧಾರಿತ ಮೌಲ್ಯಾಂಕನ (LBA-Lesson Based Assessment) ನಡೆಸುವಾಗ 20 ಅಂಕಗಳನ್ನು ಘಟಕಕ್ಕೂ ಹಾಗೂ 5 ಅಂಕಗಳನ್ನು ಮರುಸಿಂಚನ ಕಾರ್ಯಕ್ರಮದಡಿ ಆಧರಿಸಿದ ಕಲಿಕಾಫಲಗಳಿಗೂ ಆದ್ಯತೆ ನೀಡಿ ನಿರ್ವಹಿಸುವುದು.
ಕಾರ್ಯಕ್ರಮಕ್ಕೆ ಅಗತ್ಯವಾದ ಸಂಪನ್ಮೂಲಗಳ ಸೃಜನೆ ಹಾಗೂ ವಿತರಣೆ:
2025-26ನೇ ಸಾಲಿನ ಪಿ.ಎ.ಬಿ ಅನುಮೋದಿತ ಎಂ.ಆರ್.ಪಿ ತರಬೇತಿಗಳು, ಪ್ರಾಥಮಿಕ ಶಾಲಾ ಹಾಗೂ ಪ್ರೌಢ ಶಾಲಾ ಶಿಕ್ಷಕರ ತರಬೇತಿ ಘಟಕ ವೆಚ್ಚದಲ್ಲಿ ಲಭ್ಯವಾಗುವ ಭಾಗಾಂಶವನ್ನು ಬಳಸಿ ಕಾರ್ಯಕ್ರಮಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು 5 ಡಯಟ್ಗಳು ಮತ್ತು ಡಿ.ಎಸ್.ಇ.ಆರ್.ಟಿಯ ಸಹಯೋಗದೊಂದಿಗೆ ಈಗಾಗಲೇ ಮೊದಲ ಹಂತದಲ್ಲಿ ಸಿದ್ಧಪಡಿಸಲಾಗಿದೆ.
ಪ್ರಸ್ತುತ ಅವಲೋಕನ ಸಭೆಗಳಲ್ಲಿ ಚರ್ಚೆಯಾದಂತೆ ಪರಿಷ್ಕರಣೆ, ಹೊಸದಾಗಿ ಮತ್ತೊಮ್ಮೆ ಮರು ವಿನ್ಯಾಸ, ಪುಟಗಳ ಹೆಚ್ಚಿಸುವಿಕೆ ಮತ್ತು ಮಿತಗೊಳಿಸುವಿಕೆ, ಅಗತ್ಯ ಸೂಚಿತ ತಿದ್ದುಪಡಿಗಳು ಮುಂತಾದ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚಿಸಿದೆ.
ಟ್ರಾನ್ಸ್ಫಾರ್ಮ್ ಸ್ಕೂಲ್ಸ್ ತಂಡವು ಮರುನಿಗದಿಯಾಗುವ ತರಗತಿವಾರು ವಿಷಯವಾರು ಮರುಸಿಂಚನ ವಿದ್ಯಾರ್ಥಿ ಅಭ್ಯಾಸ ಪುಸ್ತಕಗಳ ಪುಟಗಳ ಸಂಖ್ಯೆಗೆ ಅನುಗುಣವಾಗಿ ಮರುವಿನ್ಯಾಸ ಮಾಡಿ ನೀಡುವುದಾಗಿ ತಿಳಿಸಿರುತ್ತಾರೆ. ಈ ರೀತಿ ಸಿದ್ದಗೊಂಡ ಮರು ಸಿಂಚನ ಶಿಕ್ಷಕರ ಕೈಪಿಡಿಯನ್ನು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ನಲ್ಲಿ ಪ್ರಕಟಿಸಲು ಸೂಚಿಸಲಾಗುವುದು. ಇದನ್ನು ಯಾವುದೇ ತರಬೇತಿಯಲ್ಲಿಯೂ ಭೌತಿಕ ರೂಪದಲ್ಲಿ ಶಿಬಿರಾರ್ಥಿಗಳಿಗೆ ನೀಡಲಾಗುವುದಿಲ್ಲ. ಡಿಜಿಟಲ್ ಗ್ರೂಪ್ಗಳಲ್ಲಿ ಇದನ್ನು ಹಂಚಿಕೆ ಮಾಡಿಕೊಳ್ಳುವಂತೆ ಡಯಟ್ ಮತ್ತು ಬಿ.ಆರ್.ಸಿ ಕೇಂದ್ರಗಳಿಗೆ ಸೂಚಿಸಲಾಗುವುದು.
2025-26ನೇ ಸಾಲಿನ ಮರುಸಿಂಚನ ಸಾಹಿತ್ಯವನ್ನು ಅಕ್ಟೋಬರ್ ಮಾಹೆಯಿಂದ ಪ್ರಾರಂಭವಾಗುವ ಪಾಠ ಹಂಚಿಕೆಯ ಜೊತೆಗೆ ಸಮನ್ವಯಗೊಳಿಸಿದಾಗ ಮುದ್ರಣಕ್ಕೆ ಬೀಳುವ ಅಗತ್ಯ ಪುಟಗಳ ಸಂಖ್ಯೆ ಈ ಕೆಳನಂತಿದೆ.

ಕಾರ್ಯಕ್ರಮದ ಭಾಗವಾಗಿ 2025-26ನೇ ಸಾಲಿನ ಮರುಸಿಂಚನ ಸಾಹಿತ್ಯವನ್ನು ಅಕ್ಟೋಬರ್ ಮಾಹೆಯಿಂದ ಪ್ರಾರಂಭವಾಗುವ ಪಾಠ ಹಂಚಿಕೆಯ ಜೊತೆಗೆ ಸಮನ್ವಯಗೊಳಿಸಿದಾಗ ಮುದ್ರಣಕ್ಕೆ ಬೀಳುವ ಅಗತ್ಯ ಪುಟಗಳ ಸಂಖ್ಯೆಗನುಗುಣವಾಗಿ ಮುದ್ರಿಸಿ ವಿತರಿಸಲು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಕೆ.ಟಿ. ಬಿ.ಎಸ್. ಸಹಕಾರದೊಂದಿಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಮುಂದುವರೆದು, 2025-26ನೇ ಸಾಲಿನಲ್ಲಿ ಎಂ ಆರ್ ಪಿ ತರಬೇತಿ ಯನ್ನು 5 ದಿನಗಳ ಪ್ಯಾಕೇಜ್ನಲ್ಲಿ 2 ದಿನಗಳ ಅವಧಿಗೆ, 5 ಡಯಟ್ಗಳ ಮುಖಾಂತರ (ಶಿವಮೊಗ್ಗ- ಇಂಗ್ಲಿಷ್, ಮೈಸೂರು-ಕನ್ನಡ, ದಾವಣಗೆರೆ-ವಿಜ್ಞಾನ, ತುಮಕೂರು-ಗಣಿತ ಮತ್ತು ಬೆಳಗಾವಿ-ಸಮಾಜ ವಿಜ್ಞಾನ) 5 ಬ್ಯಾಚ್ಗಳಲ್ಲಿ ನೀಡಲು ಉದ್ದೇಶಿಸಿದೆ. ಅದೇ ರೀತಿ 5-6 ದಿನಗಳ ತರಬೇತಿ ಪ್ಯಾಕೇಜ್ನಲ್ಲಿ 2 ದಿನಗಳ ಅವಧಿಗೆ ಮರುಸಿಂಚನ ತರಬೇತಿಯನ್ನು ಶಿಕ್ಷಕರಿಗೆ ನೀಡಲು ಉದ್ದೇಶಿಸಿದೆ. ಪಿ.ಎ.ಬಿ 2025-26ನೇ ಸಾಲಿನ ಅನುಸಾರ ಘಟಕ ವೆಚ್ಚಕ್ಕೆ Master Resource Person(MRP ತರಬೇತಿಗೆ ರೂ.1000/-ದಿನವೊಂದಕ್ಕೆ ಶಿಕ್ಷಕರ ತರಬೇತಿಗೆ ರೂ.500/- ದಿನವೊಂದಕ್ಕೆ ಇರುವ ದರದಲ್ಲಿ ಆಯೋಜಿಸಲಾಗುವುದು.
ತರಬೇತಿಯ ನಂತರ ಕಾರ್ಯಕ್ರಮದ ಅನುಷ್ಠಾನದಲ್ಲಿ ಸೇತುಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ, ಪಠ್ಯಾಧಾರಿತ ಮೌಲ್ಯಾಂಕನ, ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಕಾರ್ಯಕ್ರಮದ ಸಾಧನೆಯನ್ನು ಗುರುತಿಸಲು ಆಧರಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿಯೂ ಇವುಗಳನ್ನೇ ಬೇಸ್ಲೈನ್ ಮತ್ತು ಎಂಡ್ಲೈನ್ ದತ್ತಾಂಶಗಳಾಗಿ ಕಾರ್ಯಕ್ರಮದಲ್ಲಿ ಬಳಸಬೇಕಿರುತ್ತದೆ.
ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ತಗಲುವ ವೆಚ್ಚವನ್ನು 2025-26 ನೇ ಸಾಲಿನ PAB ಅನುಮೋದಿತ ಚಟುವಟಿಕೆ line item 5.4.1 LEP Classes 6 to 8 Activity ಅಡಿಯಲ್ಲಿ 3,49,413 ಮಕ್ಕಳಿಗೆ, ಒಂದು ಮಗುವಿಗೆ, ರೂ.500/- ರಂತೆ ಒಟ್ಟು ರೂ.1747.065 ಲಕ್ಷಗಳಂತೆ ಹಾಗೂ Secondary Education Domain 2 line item 3.1.3 LEP Classes 9 to 12 Activity ಅಡಿಯಲ್ಲಿ 2,73,213 ಮಕ್ಕಳಿಗೆ, ಒಂದು ಮಗುವಿಗೆ, ರೂ.500/- ರಂತೆ ಒಟ್ಟು ರೂ. 1366.065 ಲಕ್ಷಗಳಂತೆ ಒಟ್ಟು ರೂ. 3113.13ಲಕ್ಷಗಳು ಅನುಮೋದನೆ ಆಗಿರುವ ಮೊತ್ತದಲ್ಲಿ ಭರಿಸಬಹುದಾಗಿದೆ.
ತರಬೇತಿಯನ್ನು Training for in-service teachers component 5 5.7.1 line item training of resource persons and master trainers sub activity ನಲ್ಲಿ MRP ಗಳಿಗೆ ತರಬೇತಿ ಹಾಗೂ 6 ರಿಂದ 8 ನೇ ತರಗತಿ ಶಿಕ್ಷಕರಿಗೆ Sub Activity 3 teachers of classes 6 to 8 ಅಡಿಯಲ್ಲಿ 51,781 ಶಿಕ್ಷಕರಿಗೆ ತರಬೇತಿ ನೀಡಬಹುದಾಗಿದೆ. 3.3.1 Line Item ಅಡಿಯಲ್ಲಿ 6 ರಿಂದ 8ನೇ ತರಗತಿ 44,218 51,781 ಶಿಕ್ಷಕರಿಗೆ ತರಬೇತಿ ನೀಡಬಹುದಾಗಿದೆ ಎಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.
ಮೇಲ್ಕಂಡ ಪ್ರಸ್ತಾವನೆಯ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಆದೇಶದ ವಿವರ:
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಮರು ಸಿಂಚನ ಕಾರ್ಯಕ್ರಮವನ್ನು ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ(ಶೈಕ್ಷಣಿಕ ಜಿಲ್ಲೆ), ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ 27 ಜಿಲ್ಲೆಗಳಲ್ಲಿನ ಸುಮಾರು 18,478 ಸರ್ಕಾರಿ ಶಾಲೆಗಳ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕಲಿಕಾ ಫಲಗಳನ್ನು ಸಾಧಿಸದೇ ಇರುವ ಶೇ.40 ರಷ್ಟು ಅಂದರೆ 6,09,784 ವಿದ್ಯಾರ್ಥಿಗಳಿಗೆ PAB 2025-26 ರ LEP Learning Enhancement/Enrichment Programme)ರಡಿ ಅಂದಾಜು ರೂ. 973.90 ಲಕ್ಷಗಳ ವೆಚ್ಚದಲ್ಲಿ ಪುಟ ಸಂಖ್ಯೆ ಮಿತಗೊಳಿಸಿದ ಮರುಸಿಂಚನ ಅಭ್ಯಾಸ ಪುಸ್ತಕಗಳ ಮುದ್ರಣ ಮತ್ತು ವಿತರಣೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳಡಿ ಕೆ.ಟಿ.ಬಿ.ಎಸ್. ಮೂಲಕ ಟೆಂಡರ್ ಆಹ್ವಾನಿಸಿ ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಕಛೇರಿ ವತಿಯಿಂದ ಅನುಷ್ಠಾನಗೊಳಿಸಲು, ತರಬೇತಿಯಲ್ಲಿ ಪಾಲ್ಗೊಳ್ಳುವ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು (Master Resource Person) ಹಾಗೂ ಶಿಕ್ಷಕರಿಗೆ ಅರ್ಹತೆಯಂತೆ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು (TA & DA) Karnataka Direct Benefit Transfer (DBT) ಪೋರ್ಟಲ್ ಮುಖಾಂತರ ನೇರ ನಗದು ವರ್ಗಾವಣೆ (DBT) ಮೂಲಕ ಆಧಾರ್ ಜೋಡಣೆಯಾಗಿರುವ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಖಜಾನೆ-2 ಯಿಂದ ವರ್ಗಾಯಿಸಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ರವರಿಗೆ ಅನುಮತಿ ನೀಡಿ ಆದೇಶಿಸಿದೆ.
ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಗಳ ಜವಾಬ್ದಾರಿಗಳು:
1. ರಾಜ್ಯ ಹಂತದಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ರವರ ನೇತೃತ್ವದಲ್ಲಿ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರ ನೇತೃತ್ವದಲ್ಲಿ ಪ್ರತಿ ಮಾಸಿಕ, ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ, ಕ್ಲಸ್ಟರ್ ಹಂತದಲ್ಲಿ ಸಿ.ಆರ್.ಪಿಗಳ ನೇತೃತ್ವದಲ್ಲಿ ಮತ್ತು ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರುಗಳ ನೇತೃತ್ಯದಲ್ಲಿ ಅವಲೋಕನ ಮತ್ತು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವುದು.
2. ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಶಿಕ್ಷಕರು ಹಾಗೂ ಅನುಷ್ಠಾನಾಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ಸಮ್ಮಿಲನದೊಂದಿಗೆ ನಿರ್ದೇಶಕರು, ಡಿ.ಎಸ್.ಇ.ಆರ್.ಟಿರವರ ನೇತೃತ್ವದಲ್ಲಿ ಇನ್ನಿತರ ತರಬೇತಿ ಪ್ಯಾಕೇಜ್ನಡಿ ಎರಡು ದಿನದ ತರಬೇತಿ ನೀಡಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಕ್ರಮವಹಿಸುವುದು.
3. ಪ್ರಗತಿ ಪರಿಶೀಲನಾ ಸಭೆಗಳ ಜೊತೆಗೆ ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಹಂತಗಳಿಂದ ಮರುಸಿಂಚನ ಕಾರ್ಯಕ್ರಮದ ಅನುಷ್ಠಾನದ ಸ್ಥಿತಿಗತಿಗಳನ್ನು ಅರ್ಥೈಸಲು ಶಾಲಾ ಭೇಟಿಗಳನ್ನು ಕೈಗೊಳ್ಳುವುದು.
4. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಸರ್ಕಾರಿ ಸುತ್ತೋಲೆ/ಜ್ಞಾಪನ ಹೊರಡಿಸುವುದು.
5. ಕಾರ್ಯಕ್ರಮದ ಸುಗಮ ಅನುಷ್ಠಾನಕ್ಕಾಗಿ ಎಲ್ಲಾ ಪಾಲುದಾರರು ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಹಾಗೂ ಸರ್ಕಾರಿ ಮೇಲ್ವಿಚಾರಣಾ ತಂಡವೂ ನಿರಂತರವಾಗಿ ಶಿಕ್ಷಕರಿಗೆ ಬೆಂಬಲ ನೀಡುವುದು.
6. ಸ್ಥಳೀಯ ಸಮಸ್ಯೆಗಳಿಗೆ ತಕ್ಷಣದ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಬ್ಲಾಕ್ ಮಟ್ಟ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸುವುದು.
7. ನಿರ್ದಿಷ್ಟ ಸಮಯದ ಪ್ರಕಾರ ಎಲ್ಲಾ ಬೋಧನಾ ಕಲಿಕಾ ಸಾಮಗ್ರಿಗಳ ಮುದ್ರಣ ಮತ್ತು ವಿತರಣೆ ಕುರಿತು ಅಗತ್ಯ ಕ್ರಮವಹಿಸುವುದು.
8. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಮತ್ತು ಬ್ಲಾಕ್ ಮಟ್ಟದಲ್ಲಿ ಕಾರ್ಯಕ್ರಮಕ್ಕಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಜ್ಞಾಪನಗಳನ್ನು ಹೊರಡಿಸುವುದು.
9. ಡಯಟ್ ಹಂತದಲ್ಲಿ ಕಾರ್ಯಕ್ರಮದ ಅರಿವು ಮತ್ತು ತರಬೇತಿಗಳು ಸೇರಿದಂತೆ, ರಾಜ್ಯ ಸಂಪನ್ಮೂಲ ತಂಡವನ್ನು (SRG) ರಚಿಸುವುದು, ಮೇಲ್ವಿಚಾರಣೆ ಮತ್ತು ಗುಣಮಟ್ಟದ ಭರವಸೆಯನ್ನು ಬೆಂಬಲಿಸುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಭೆಗಳು ಮತ್ತು ಕಾರ್ಯಕ್ರಮ ಚಟುವಟಿಕೆಗಳ ಜಂಟಿ ಮೇಲ್ವಿಚಾರಣೆ ಮಾಡುವುದು.
10. ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನದಂತಹ ಸೂಕ್ತ ಚಟುವಟಿಕೆಗಳಲ್ಲಿ ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು.
ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಜವಾಬ್ದಾರಿಗಳು:
1.ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪೋಷಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು. ಅವರ ಮಗುವನ್ನು ಏಕೆ ಈ ಕಾರ್ಯಕ್ರಮಕ್ಕೆ ಒಳಪಡಿಸಿದೆ ಹಾಗೂ ಹೇಗೆ ಪೋಷಕರ ಸಹಾಯದೊಂದಿಗೆ ಮಗುವಿನ ಕಲಿಕಾ ಮಟ್ಟವನ್ನು ಸುಧಾರಿಸಬಹುದೆಂದು ನಮ್ರತೆಯಿಂದ ತಿಳಿಸುವುದು.
2. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.
3. ಮರು ಸಿಂಚನ ಅಭ್ಯಾಸ ಪುಸ್ತಕಗಳನ್ನು ಸ್ವೀಕರಿಸಿದ ನಂತರ ಮಾಹಿತಿಯನ್ನು SATS ದತ್ತಾಂಶದಲ್ಲಿ ದಾಖಲಿಸುವುದು.
4 ಮರುಸಿಂಚನ ಕಾರ್ಯಕ್ರಮದ ಬುನಾದಿ ಹಂತದ ಕಲಿಕಾ ಅನುಭವಗಳನ್ನು ಪ್ರಾರಂಭಿಸಿದಾಗ ಪ್ರತಿ ವಾರದಲ್ಲಿ ಲಭ್ಯವಿರುವ ವಿಷಯದ ಅವಧಿಗಳಲ್ಲಿ ಒಂದು ಅವಧಿಗಳನ್ನು ಇದಕ್ಕಾಗಿ ಮೀಸಲಿರಿಸುವುದು.
5. ಬೆಂಬಲಿತ ಹಂತದ ಕಲಿಕಾ ಅನುಭವಗಳನ್ನು ನೀಡುವ ಸಂದರ್ಭದಲ್ಲಿ ನಿರ್ವಹಿಸುವ ಘಟಕದ ಪೂರ್ವಭಾವಿಯಾಗಿ ಪೂರ್ವ ಸಿದ್ಧತಾ ಚಟುವಟಿಕೆಗಳಾಗಿ ಮರುಸಿಂಚನ ಅಭ್ಯಾಸ ಪುಸ್ತಕದಲ್ಲಿರುವ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ಕಲಿಕಾ ಗುಂಪುಗಳ ಮೂಲಕ ಪೂರ್ಣಗೊಳಿಸಿ, ನಂತರ ಘಟಕದ ಕಲಿಕಾ ಅನುಭವಗಳನ್ನು ಆಯೋಜಿಸುವುದು.
6. ಇದೇ ರೀತಿ ಮುಂದಿನ ಘಟಕಕ್ಕೂ ಪೂರ್ವಸಿದ್ಧತಾ ಚಟುವಟಿಕೆಗಳನ್ನು ಮರುಸಿಂಚನ ಅಭ್ಯಾಸ ಪುಸ್ತಕದಲ್ಲಿರುವಂತೆ ನಿರ್ವಹಿಸಲು ಶಿಕ್ಷಕರಿಗೆ ಸೂಚಿಸುವುದು.
7. ಅಗತ್ಯವಿರುವ ಕಲಿಕಾ ಫಲಗಳನ್ನು ಸಾಧಿಸದೇ ಇರುವ ವಿದ್ಯಾರ್ಥಿಗಳಿಗಾಗಿ ಶಾಲಾ ಸಮಯದ ಪೂರ್ವದಲ್ಲಿ ಅಥವಾ ನಂತರದಲ್ಲಿ ಶಾಲಾವತಿಯಿಂದ ಸಮಯ ನಿರ್ಧರಿಸಿ ವಿಷಯವಾರು ಒಂದು ಅವಧಿಯನ್ನು ಪ್ರತಿ ವಾರ 5 ದಿನಗಳಿಗೆ ಗುರುತಿಸಿಕೊಳ್ಳಲು ಶಿಕ್ಷಕರಿಗೆ ಸೂಚಿಸುವುದು.
ಸಮೂಹ ಸಂಪನ್ಮೂಲ ವ್ಯಕ್ತಿಗಳ(ಸಿ.ಆರ್.ಪಿ) ಜವಾಬ್ದಾರಿಗಳು:
1. ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ ಶಿಕ್ಷಕರಿಗೆ ಸೂಕ್ತ ಬೆಂಬಲ, ಮಾರ್ಗದರ್ಶನ ಹಾಗೂ ಉಸ್ತುವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
2. ಸದರಿ ಕಾರ್ಯಕ್ರಮವು ಎಲ್ಲಾ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿರುವುದರ ಬಗ್ಗೆ, ಖಾತ್ರಿಪಡಿಸಿಕೊಳ್ಳುವುದು.
3. ತಮ್ಮ ಕ್ಲಸ್ಟರ್ ಗಳಲ್ಲಿ ಎಲ್ಲಾ ಶಿಕ್ಷಕರು ಬೋಧನಾ ತರಗತಿಗಳ ಮಾಹಿತಿಯನ್ನು SATSನಲ್ಲಿ ದಾಖಲಿಸುವುದನ್ನು ಖಚಿತಪಡಿಸಿಕೊಳ್ಳುವುದು.
4. ಶಿಕ್ಷಕರೊಡನೆ ಸಂವಾದಿಸಿ ಹಾಗೂ ಅವಕಾಶವಿದ್ದಲ್ಲಿ ಶಿಕ್ಷಕರಿಗೆ ಸೂಕ್ತ ಹಿಮ್ಮಾಹಿತಿ ಮತ್ತು ಅಗತ್ಯವಿದ್ದಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಇತರೆ ಅಧಿಕಾರಿಗಳ ಜವಾಬ್ದಾರಿಗಳು:
1. ಎಲ್ಲಾ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು.
2. ಕಾರ್ಯಕ್ರಮವನ್ನು ನಿರ್ವಹಿಸುವ ಎಲ್ಲಾ ಶಿಕ್ಷಕರಿಗೆ ತರಬೇತಿ ನೀಡಿರುವ ಬಗ್ಗೆ ಖಚಿತಪಡಿಸಿ ಕೊಳ್ಳುವುದು.
3.ಸಿ.ಆರ್.ಪಿಗಳ ಮೂಲಕ ಶಾಲೆಗಳಲ್ಲಿ ಕಾರ್ಯಕ್ರಮದ ನಿರ್ವಹಣೆ ಬಗ್ಗೆ, ಮಾಹಿತಿ ಪಡೆದುಕೊಂಡು ಸೂಕ್ತ ಮಾರ್ಗದರ್ಶನ ನೀಡುವುದು.
4. ಸಮಸ್ಯೆಗಳಿದ್ದಲ್ಲಿ ರಾಜ್ಯ ಕಛೇರಿಯನ್ನು ಸಂಪರ್ಕಿಸಿ ಪರಿಹಾರಗಳನ್ನು ಕಂಡುಕೊಳ್ಳುವುದು.
5. ಜಿಲ್ಲಾ ಹಂತದ ಎಲ್ಲಾ ಉಸ್ತುವಾರಿ ಅಧಿಕಾರಿಗಳಿಗೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಶಾಲಾ ಭೇಟಿ ಸಮಯದಲ್ಲಿ ಕಾರ್ಯಕ್ರಮದ ನಿರ್ವಹಣೆಯ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡುವಂತೆ ಕ್ರಮವಹಿಸುವುದು.
6. ಕಾರ್ಯಕ್ರಮದ ನಿರ್ವಹಣೆಯ ಬಗ್ಗೆ, ಎಲ್ಲಾ ಶಿಕ್ಷಕರು ಮಾಹಿತಿ ದಾಖಲಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
7. ರಾಜ್ಯ ಕಛೇರಿಯಿಂದ ನಡೆಯುವ ಸಭೆಗಳಲ್ಲಿ ಭಾಗವಹಿಸಿ ಜಿಲ್ಲೆಯ ಪುಗತಿ ಬಗ್ಗೆ ಚರ್ಚಿಸುವುದು.
8. ಈ ಕಾರ್ಯಕ್ರಮದ ಪ್ರಗತಿಯನ್ನು ರಾಜ್ಯ ಹಂತದಿಂದ ಶಾಲಾ ಹಂತದವರೆಗೆ ಕಾಲಕಾಲಿಕವಾಗಿ ನಿರ್ವಹಿಸುವುದು. ಈ ಅವಲೋಕನ ಮತ್ತು ಪ್ರಗತಿ ಪರಿಶೀಲನಾ ಸಭೆಗಳಿಗೆ ಅಗತ್ಯವಿರುವ ಅನುಪಾಲನ ನಮೂನೆಗಳ ಮಾದರಿಗಳನ್ನು ಆಯಾ ಹಂತಕ್ಕೆ ಒದಗಿಸುವುದು. ಅವುಗಳನ್ನು ಬಳಸಿ ಸಭೆಗಳನ್ನು ನಡೆಸಿ ಪುಗತಿಯನ್ನು ದಾಖಲಿಸಿ ಮುಂದಿನ ಹಂತಕ್ಕೆ ಸಲ್ಲಿಸುವುದು.
9. ಶಾಲಾ ಭೇಟಿಯ ದತ್ತಾಂಶಗಳನ್ನು SATSನಲ್ಲಿ ಆಯಾ ಹಂತದಿಂದ ದಾಖಲಿಸುವುದು. SATS ತಂಡದವರೂ ಸೆಪ್ಟೆಂಬರ್-2025 ರೊಳಗೆ ತಂತ್ರಾಂಶದಲ್ಲಿ ಸದರಿ ಅವಕಾಶವನ್ನು ಕಲ್ಪಿಸಿಕೊಡಲು ಸೂಚಿಸಿದೆ.
10. ಮರುಸಿಂಚನ ಕಾರ್ಯಕ್ರಮ ಅನುಷ್ಠಾನವಾಗದ 8 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಪೂರಕ ಕಾರ್ಯ ಚಟುವಟಿಕೆಗಳನ್ನು ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ರವರು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ಪಡೆದು ಶೈಕ್ಷಣಿಕ ವರ್ಷ ಪೂರ್ತಿ ಅನುಷ್ಠಾನಗೊಳಿಸುವುದು.
11. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಫಲಿತಾಂಶ ಕಡಿಮೆಯಾಗದಂತೆ ಅಗತ್ಯ ಕ್ರಮವಹಿಸುವುದು. ಈ ಸಂಬಂಧ ಕೈಗೊಂಡ ಚಟುವಟಿಕೆಗಳ ವರದಿಯನ್ನು ರಾಜ್ಯ ಹಂತಕ್ಕೆ ಸಲ್ಲಿಸಬಹುದಾಗಿದೆ.
ಸದರಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸತಕ್ಕದ್ದು ಹಾಗೂ ಅದರನ್ವಯ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆಯ 15ನೇ ತಾರೀಖಿನೊಳಗೆ New Decision Supportive System (ಅವಲೋಕನ) ತಂತ್ರಾಂಶದಲ್ಲಿ ಕಡ್ಡಾಯವಾಗಿ ಇಂದೀಕರಿಸತಕ್ಕದ್ದು
ಈ ಆದೇಶವು ಸರ್ಕಾರವು ಆಯಾ ಸಂದರ್ಭದಲ್ಲಿ ಹೊರಡಿಸಲಾಗುವ ಆದೇಶ/ತಿದ್ದುಪಡಿ ಆದೇಶ ಮತ್ತು ಸುತ್ತೋಲೆಗಳಿಗೆ ಒಳಪಟ್ಟಿರುತ್ತದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 560 ವೆಚ್ಚ-8/2025, ದಿನಾಂಕ:21.07.2025ರಲ್ಲಿ ನೀಡಿರುವ ಸಹಮತಿ ಮೇರೆಗೆ ಮತ್ತು ಸರ್ಕಾರದ ಆದೇಶ ಸಂಖ್ಯೆ: FD 02 TFP 2025, ದಿನಾಂಕ:30.06.2025 ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.