Marusinchana Programme :2024- 6&7 ನೇ ತರಗತಿ ವಿದ್ಯಾರ್ಥಿಗಳಿಗಾಗಿ “ಮರುಸಿಂಚನ” ಕಾರ್ಯಕ್ರಮ ಅನುಷ್ಠಾನ.
2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮರುಸಿಂಚನ (Marusinchana) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ.
ಮರುಸಿಂಚನ ಕಾರ್ಯಕ್ರಮ: ಮಾನ್ಯ ಮುಖ್ಯಮಂತ್ರಿಗಳ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದ “ಮರುಸಿಂಚನ” ಕಾರ್ಯಕ್ರಮವನ್ನು ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳ 6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, ಈಗಾಗಲೇ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಿಕಾ ನ್ಯೂನತೆಗಳನ್ನು ಸರಿಪಡಿಸುವುದು, ತರಗತಿಗನುಗುಣವಾದ ಕಲಿಕಾ ಫಲಗಳನ್ನು ಸಾಧಿಸಲು ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವೃದ್ಧಿಸುವುದು, ಪ್ರಮಾಣೀಕೃತ ಮೌಲ್ಯಮಾಪನವನ್ನು ಕೈಗೊಳ್ಳುವುದು ಹಾಗೂ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಗುಣಾತ್ಮಕವಾಗಿ ಸಾಧಿಸುವುದು.
ಇದರ ಮುಂದುವರಿದ ಭಾಗವಾಗಿ, ಮರುಸಿಂಚನ ಕಾರ್ಯಕ್ರಮವನ್ನು ಮಹಾತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಮಟ್ಟದ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಮರುಸಿಂಚನ ಕಾರ್ಯಕ್ರಮವನ್ನು ಶಾಲಾ ಮಟ್ಟದ ಚಟುವಟಿಕೆಗಳನ್ನು ದಿನಾಂಕ 23-12-2024 ರಿಂದ ನಡೆಸಲಾಗುವುದು. ಈ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬೇಸೈನ್(ನೈದಾನಿಕ ಪರೀಕ್ಷೆ) ಹಾಳೆಗಳು, ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ” ಮತ್ತು ಶಿಕ್ಷಕರಿಗೆ “ಶಿಕ್ಷಕರ ಕೈಪಿಡಿ” ಗಳನ್ನು ಪ್ರತಿ ವಿಷಯಕ್ಕೆ ನೀಡಲಾಗಿದೆ. ಮರುಸಿಂಚನ ಕಾರ್ಯಕ್ರಮದ ಚಟುವಟಿಕೆಗಳನ್ನು ತರಗತಿಯಲ್ಲಿ ನಿಗದಿಪಡಿಸಿರುವ ಶಿಕ್ಷಕರ ಕೈಪಿಡಿಯನ್ನು ಅನುಸರಿಸಿ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಕರು, ಕಾರ್ಯಪ್ರವೃತರಾಗಬೇಕಾಗಿದೆ. ಈ ಎಲ್ಲಾ ಚಟುವಟಿಕೆಗಳ ಕಾರ್ಯಸೂಚಿಯನ್ನು ಈ ಪತ್ರದ ಜೊತೆಯಲ್ಲಿ ಲಗತ್ತಿಸಲಾಗಿದೆ. ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಸೂಚಿಯನ್ನು ಗಣನೆಗೆ ತೆಗೆದುಕೊಂಡು, ಪ್ರತಿಚಟುವಟಿಕೆಯನ್ನು ನಿಗಧಿತ ದಿನಾಂಕದ ಒಳಗೆ ಕಾರ್ಯರೂಪಕ್ಕೆ ತರುವಂತೆ ಈ ಮೂಲಕ ಸೂಚಿಸಲಾಗಿದೆ.
ನೈದಾನಿಕ ಪರೀಕ್ಷೆ ವೇಳಾಪಟ್ಟಿ:
2024-25ನೇ ಸಾಲಿನ ರೂಪಣಾತ್ಮಕ ಮೌಲ್ಯಮಾಪನ 3ರನ್ನು ಸಾಂಪ್ರದಾಯಕವಾಗಿ ನಡೆಸದೆ, ಮರುಸಿಂಚನ (Marusinchana) ಕಾರ್ಯಕ್ರಮದ ನೈದಾನಿಕ ಪರೀಕ್ಷೆಯ ಕೈಗೊಂಡು ನಂತರ ಅದರ ಅಂಕಗಳನ್ನು ರೂಪಣಾತ್ಮಕ ಮೌಲ್ಯಮಾಪನ 3ರ ಗಣನೆಗೆ ತೆಗೆದುಕೊಳ್ಳುವುದು. ರೂಪಣಾತ್ಮಕ ಮೌಲ್ಯಮಾಪನ 3- ಶ್ರೇಣಿಗಳನ್ನು ಈ ಕೆಳಕಂಡಂತೆ ಪರಿವರ್ತಿಸಿಕೊಳ್ಳುವುದು ಹಾಗೂ SATS Portal ನಲ್ಲಿ ಇಂದೀಕರಿಸುವುದು.
ಮರುಸಿಂಚನ ಕಾರ್ಯಕ್ರಮವನ್ನು 3 ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ.
1.ಬುನಾದಿ ಹಂತ : ಈ ಹಂತದಲ್ಲಿ ಶಿಕ್ಷಕರು ಶಿಕ್ಷಕರ ಕೈಪಿಡಿಯನ್ನು ಬಳಸಿಕೊಂಡು ವೇಳಾಪಟ್ಟಿಯಲ್ಲಿ ನೀಡಿರುವ ಚಟುವಟಿಕೆಗಳನ್ನು ಕೈಗೊಂಡು ಪ್ರಸ್ತುತ ತರಗತಿಯ ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವುದು. ಈ ಹಂತದಲ್ಲಿ 12 ಅಧ್ಯಾಯಗಳಿರುತ್ತವೆ. ದಿನಾಂಕ: 27.12.2024 ರಿಂದ 10.01.2025 ರವರೆಗೆ ಈ ಹಂತವನ್ನು ಹಮ್ಮಿಕೊಳ್ಳುವುದು.
2.ಬೆಂಬಲಿತ ಕಲಿಕಾ ಹಂತ : ಈ ಹಂತದಲ್ಲಿ ಶಿಕ್ಷಕರು ತರಗತಿಗನುಗುಣವಾದ ಸಾಮರ್ಥ್ಯಗಳನ್ನು ಗಳಿಸಲು ಚಟುವಟಿಕೆಗಳ ಕೈಗೊಂಡು ಪ್ರಸ್ತುತ ತರಗತಿಯ ಕಲಿಕಾ ಫಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವುದು. ಈ ಹಂತದಲ್ಲಿ 24 ಅಧ್ಯಾಯಗಳಿರುತ್ತವೆ. ದಿನಾಂಕ : 13.01.2025 ರಿಂದ 04.03.2025 ರವರೆಗೆ ಈ ಹಂತವನ್ನು ಹಮ್ಮಿಕೊಳ್ಳುವುದು.
3.ಕ್ರೂಢೀಕರಣ ಹಂತ : ಈ ಹಂತದಲ್ಲಿ ಶಿಕ್ಷಕರು ಎಲ್ಲಾ ಅಧ್ಯಾಯಗಳ ಪುನರ್ ಮನನ ಮಾಡಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಮಾಡುವುದು.
- ಇದನ್ನೂ ನೋಡಿ….ಶಿಷ್ಯವೇತನ ಅವಧಿ ವಿಸ್ತರಣೆ
ಇದರೊಂದಿಗೆ ಲಗತ್ತಿಸಿರುವ ಮರುಸಿಂಚನ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ನೀಡುವುದು. ಸಂಬಂಧಿಸಿದ ಜಿಲ್ಲೆಗಳ ಎಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಶಾಲಾ ಹಂತದಲ್ಲಿ ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಮರುಸಿಂಚನ (Marusinchana) ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಶಾಲಾ ಹಂತದಲ್ಲಿ ನಿಗಧಿಪಡಿಸಿರುವಂತೆ ಅನುಸರಿಸಲು ಸೂಚಿಸುವುದು.