Money Management : ಮನಿ ಮ್ಯಾನೇಜೆಂಟ್ ಗೊತ್ತಿಲ್ಲ, ಏನ್ಮಾಡ್ಲಿ?ಇಲ್ಲಿದೆ ಮಾಸ್ಟರ್ ಕ್ಲಾಸ್
Money Management-2025: ಸಾಕ್ಷರತೆಯಿಂದ ಉದ್ಯೋಗ ಪಡೆಯಬಹುದು. ಆದರೆ, ಹಣಕಾಸು ಸಾಕ್ಷರತೆಯಿಂದ ಬದುಕು ಕಟ್ಟಿಕೊಳ್ಳಬಹುದು. ನಾವು ಉಳಿತಾಯ, ಹೂಡಿಕೆ, ವಿಮೆ ನಿರ್ವಹಣೆ, ಬಜೆಟಿಂಗ್, ಬೆಲೆ ಏರಿಕೆ ಬಗ್ಗೆ ಅರಿತುಕೊಳ್ಳದಿದ್ದರೆ, ಜೀವನವಿಡೀ ಕಷ್ಟಪಟ್ಟು ದುಡಿದರೂ ಸಂಪತ್ತು ಸೃಷ್ಟಿಸಿಕೊಳ್ಳಲಾಗದ ಸ್ಥಿತಿಯಲ್ಲಿರುತ್ತೇವೆ. ದುಡ್ಡನ್ನು ನಾವು ನಿಯಂತ್ರಿಸಬೇಕೇ ಹೊರತು, ದುಡ್ಡು ನಮ್ಮನ್ನು ನಿಯಂತ್ರಿಸಬಾರದು. ಹಾಗಾದರೆ ಹಣಕಾಸು ಯೋಜನೆ ರೂಪಿಸಿಕೊಂಡು ಆರ್ಥಿಕ ಯಶಸ್ಸು ಕಾಣುವುದು ಹೇಗೆ? ನಿದ್ರೆ ಮಾಡುವಾಗ್ಲ ದುಡ್ಡನ್ನು ದುಡಿಸೋದು ಹೇಗೆ? ಬನ್ನಿ, ಮನಿ ಮ್ಯಾನೇಜ್‌ಮೆಂಟ್‌ನ 13 ಹಂತಗಳನ್ನು ವಿವರವಾಗಿ ತಿಳಿಯೋಣ.
ಸಾಕ್ಷರತೆ ಜತೆಗೆ ಹಣಕಾಸು ಸಾಕ್ಷರತೆಯೂ ಬೇಕು:
ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ-2023-24ರ ಪ್ರಕಾರ ಭಾರತದಲ್ಲಿ ಆರ್ಥಿಕ ಸಾಕ್ಷರತೆ ಸುಮಾರು ಶೇ.80.9ರಷ್ಟಿದೆ. ಆದರೆ ಹಣಕಾಸು ಸಾಕ್ಷರತೆಯ ಪ್ರಮಾಣ ಶೇ.27ರಷ್ಟು ಮಾತ್ರ ಇದೆ. ಕರ್ನಾಟಕವನ್ನು ಗಣನೆಗೆ ತೆಗೆದುಕೊಂಡರೆ ಮನಿ ಮ್ಯಾನೇಜ್‌ಮೆಂಟ್ ಗೊತ್ತಿರುವವರ ಪ್ರಮಾಣ ಶೇ.25ರಷ್ಟು ಮಾತ್ರ. ನಾವು ಓದುಬರಹ ಕಲಿಯುವುದು ಎಷ್ಟು ಮುಖ್ಯವೋ, ಹಣಕಾಸಿನ ನಿರ್ವಹಣೆಯ ಮೂಲಭೂತ ಅಂಶಗಳನ್ನು ಅರಿತುಕೊಳ್ಳುವುದು ಸಹ ಅಷ್ಟೇ ಮುಖ್ಯ.
ದುಡ್ಡಿನ ನಿರ್ವಹಣೆ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಸಾಧ್ಯವಾದಷ್ಟು ಕಲಿಯೋಕೆ ಪ್ರಯತ್ನ ಪಡಿ. ನಿಮ್ಮ ಮನೆಯವರು, ಮಕ್ಕಳು ಎಲ್ಲರಿಗೂ ಮನಿ ಪಾಠದ ಮಹತ್ವ ಹೇಳಿ. ಹಣಕಾಸು ನಿರ್ವಹಣೆ ತಿಳಿದು ಶ್ರಮಿಕರು ಧನಿಕರಾದದ್ದು ಮತ್ತು ಹಣಕಾಸು ನಿರ್ವಹಣೆ ಕಡೆಗಣಿಸಿ ಧನಿಕರು ಜೇಬು ಖಾಲಿ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ದುಡ್ಡನ್ನು ಕಾಪಾಡುವುದನ್ನು ಕಲಿತರೆ, ಕಷ್ಟಕಾಲದಲ್ಲಿ ಅದು ನಿಮ್ಮನ್ನು ಕಾಪಾಡುತ್ತದೆ.
ದುಡ್ಡಿನ ಲೆಕ್ಕಾಚಾರ ಮಾಡಿ ಉಳಿತಾಯ ಸೂತ್ರ ಮರೆಯದಿರಿ
‘ಲೆಕ್ಕ ಬಿಟ್ಟವ ಲೋಕ ಬಿಟ್ಟ’ ಅನ್ನೋ ಮಾತಿದೆ. ದೇಶಕ್ಕೆ ಹೇಗೆ ಒಂದು ಬಜೆಟ್ ಇದೆಯೋ, ಅದೇ ರೀತಿ ನಿಮ್ಮ ಮನೆಯ ಖರ್ಚು-ವೆಚ್ಚಗಳಿಗೂ ಒಂದು ಬಜೆಟ್ ಮಾಡಿಕೊಳ್ಳಿ. ಬಂದ ಆದಾಯದಲ್ಲಿ ಖರ್ಚು ಮಾಡಿದ ನಂತರ ಉಳಿದದ್ದು ಉಳಿತಾಯ ಎಂದು ಸುಮ್ಮನಾಗಬೇಡಿ. ಆದಾಯ ಬಂದ ಮೇಲೆ ಉಳಿತಾಯ ಮಾಡಿ ನಂತರ ಖರ್ಚು ಮಾಡಿ.
ಆದಾಯ – ಉಳಿತಾಯ=ಖರ್ಚು ಇದು ನಿಮ್ಮ ಮನಿಮಂತ್ರವಾಗಲಿ.
ಆದಾಯದ ನಿರ್ವಹಣೆಗೆ 50/30/20 ನಿಯಮ ಅಳವಡಿಸಿಕೊಳ್ಳಿ. ಉದಾಹರಣೆಗೆ ರಾಹುಲ್ ಎನ್ನುವ ವ್ಯಕ್ತಿ ತಿಂಗಳಿಗೆ 30 ಸಾವಿರ ಆದಾಯ ಗಳಿಸುತ್ತಾರೆ ಎಂದಾದರೆ, ಶೇ.50ರಷ್ಟು ಹಣ (15 ಸಾವಿರ ರೂ.) ಮನೆ ಬಾಡಿಗೆ, ದಿನಸಿ, ಬಿಲ್ ಪಾವತಿಯಂತಹ ಅಗತ್ಯ ವೆಚ್ಚಗಳಿಗೆ ಹೋಗಬೇಕು.
ಶೇ.30ರಷ್ಟು ಹಣ (9 ಸಾವಿರ ರೂಪಾಯಿ) ಹೊರಗಿನ ಊಟ, ಸಿನಿಮಾ ಸುತ್ತಾಟ, ಹೊಸ ವಸ್ತುಗಳ ಖರೀದಿಯಂತಹ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ಬಳಕೆಯಾಗಬೇಕು.
ಶೇ.20ರಷ್ಟು ಅಂದ್ರೆ 6 ಸಾವಿರ ರೂಪಾಯಿಯನ್ನಾದರೂ ಮ್ಯೂಚುವಲ್ ಫಂಡ್ ಎಸ್‌ಐಪಿ, ಪಿಪಿಎಫ್ ಮುಂತಾದ ಹೂಡಿಕೆಗಳಿಗೆ ಮೀಸಲಿಡಬೇಕು. ಇಲ್ಲಿ ಶೇ.20ರಷ್ಟನ್ನಾದರೂ ಉಳಿಸಬೇಕು ಎನ್ನುವುದೊಂದು ಲೆಕ್ಕಾಚಾರ ಅಷ್ಟೇ. ನಿಮ್ಮ ಆದಾಯ ಹೆಚ್ಚಳವಾದಂತೆ ಉಳಿತಾಯ ಹೂಡಿಕೆಯನ್ನು ಶೇ.30, ಶೇ.40ಕ್ಕೆ ಹೆಚ್ಚಿಸುತ್ತಾ ಹೋಗುವುದು ಒಳಿತು.
ಕಷ್ಟಕಾಲದಲ್ಲಿ ಕೈ ಹಿಡಿಯುತ್ತೆ ಎಮರ್ಜೆನ್ಸಿಫಂಡ್:
ಸಂಕಷ್ಟಗಳು ಹೇಳಿಕೇಳಿ ಬರುವುದಿಲ್ಲ. ಗಳಿಸಿದ ದುಡ್ಡಲ್ಲಿ ಕಷ್ಟಕಾಲಕ್ಕೆ ಅಂತ ಒಂದಷ್ಟು ಹಣ ಮೀಸಲಿಡಬೇಕು. ಕನಿಷ್ಠ 6 ತಿಂಗಳ ವೆಚ್ಚಗಳು ನಿಮ್ಮ ತುರ್ತುನಿಧಿಯಲ್ಲಿರಬೇಕು. ಉದಾಹರಣೆಗೆ ನಿಮ್ಮ ಮಾಸಿಕ ವೆಚ್ಚ 20 ಸಾವಿರ ರೂ. ಎಂದು ಭಾವಿಸಿ. ಈ ಲೆಕ್ಕಾಚಾರದಂತೆ ನಿಮ್ಮ ಎಮರ್ಜೆನ್ಸಿಫಂಡ್‌ನಲ್ಲಿ 1.20 ಲಕ್ಷ ರೂ. ಹಣವಿರಬೇಕು.
ಲಿಕ್ವಿಡ್ ಮ್ಯೂಚುವಲ್ ಫಂಡ್, ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಸ್ವೀಪ್ ಇನ್ ಎಫ್‌ಡಿಯಂತಹ ಹೂಡಿಕೆಗಳಲ್ಲಿ ನಿಮ್ಮ ಎಮರ್ಜೆನ್ಸಿ ಫಂಡ್ ಇರಬೇಕು. ಇಲ್ಲಿ ಹಣವಿಟ್ಟಾಗ ಬೇಕಾದಾಗ ಅದನ್ನು ಬಿಡಿಸಿಕೊಳ್ಳುವುದು ಸುಲಭ. ಅಪತ್ಕಾಲಕ್ಕೆ ಅಂತ ಪ್ರತ್ಯೇಕ ಹಣ ಮೀಸಲಿಟ್ಟಾಗ, ಹೂಡಿಕೆ ಮಾಡಿದ ಹಣವನ್ನು ಬಿಡಿಸಿಕೊಳ್ಳುವ ಪ್ರಮೇಯ ಎದುರಾಗುವುದಿಲ್ಲ. ತಾತ್ಕಾಲಿಕ ಉದ್ಯೋಗ ನಷ್ಟ ಅನಾರೋಗ್ಯ ಹೀಗೆ ಧುತ್ತೆಂದು ಬರುವ ಖರ್ಚುಗಳನ್ನು ನಿಭಾಯಿಸಲು ಇದು ಅತ್ಯಗತ್ಯ.
ನನಗ್ಯಾಕೆ ಇನ್ಸೂರೆನ್ಸ್ ಎಂಬ ತಾತ್ಸಾರ ಬೇಡ:
ನಾವ್ಯಾರೂ ಚಿರಂಜೀವಿಗಳಲ್ಲ, ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರೂ ಸಂಕಷ್ಟಗಳನ್ನು ಎದುರಿಸುತ್ತೇವೆ. ಆ ಸಂಕಷ್ಟಗಳಿಗೆ ನಮ್ಮ ಪಾಲಿಗೆ ಅತ್ಯಮಿತ್ರನಂತೆ ನೆರವಾಗುವುದು ಇನ್ನೂರೆನ್ಸ್ ಕುಟುಂಬಕ್ಕೆ ಆಧಾರವಾಗಿ ದುಡಿಯುವ ಮನೆಯ ಯಜಮಾನ / ಯಜಮಾನಿಯ ಜೀವಕ್ಕೆ ಏನಾದರೂ ತೊಂದರೆ ಆದರೆ ಆ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಅದಕ್ಕೆ ಪರಿಹಾರ ರೂಪದಲ್ಲಿ ಟರ್ಮ್ ಇನ್ಸೂರೆನ್ಸ್ ನಿಲುತ್ತದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಟರ್ಮ್ ಲೈಫ್ ಇನ್ಸೂರೆನ್ಸ್ ಪಡೆದುಕೊಳ್ಳಬೇಕು. ಸುಮಾರು 30 ವರ್ಷದ ವ್ಯಕ್ತಿ 700-750 ರೂಪಾಯಿ ಕೊಟ್ಟರೆ 1 ಕೋಟಿ ರೂಪಾಯಿ ವರೆಗೆ ಟರ್ಮ್ ಇನ್ಸೂರೆನ್ಸ್ ಕವರೇಜ್ ಸಿಗುತ್ತದೆ.
ನಿಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕನಿಷ್ಠ 5 ಲಕ್ಷ ರೂ. ಕವರೇಜ್ ಇರುವ ಹೆಲ್ತ್ ಇನ್ಸೂರೆನ್ಸ್ ತೆಗೆದುಕೊಳ್ಳಿ ನಿಮಗೆ, ಮಡದಿ ಮಕ್ಕಳಿಗೆ ಸೇರಿ ಫ್ಯಾಮಿಲಿ ಪ್ಲೋರ್ಟ ಪಾಲಿಸಿ ಪರಿಗಣಿಸಬಹುದು. ವಯಸ್ಸಾದ ತಂದೆ ತಾಯಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಿರುವ ಕಾರಣ ಪ್ರತ್ಯೇಕ ಹೆಲ್ತ್ ಪಾಲಿಸಿಗಳನ್ನು ತೆಗೆದುಕೊಳ್ಳುವುದು ಒಳಿತು.
ನಾವು ಆರ್ಥಿಕವಾಗಿ ಅಷ್ಟುಸಬಲರಾಗಿಲ್ಲ. ಹೇಗೆ ಇನ್ನೂರೆನ್ಸ್ ಪಡೆಯುವುದು ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು. ಅದಕ್ಕಾಗಿ ಕೇಂದ್ರ ಸರಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಇದೆ. ಇದರಲ್ಲಿ ವರ್ಷಕ್ಕೆ 436 ರೂಪಾಯಿ ಪಾವತಿಸಿದರೆ 2 ಲಕ್ಷ ರೂ.ಗಳ ಟರ್ಮ್ ಲೈಫ್ ಇನ್ಸೂರೆನ್ಸ್ ಕವರೇಜ್ ಸಿಗುತ್ತದೆ. ಇದಲ್ಲದೆ ವರ್ಷಕ್ಕೆ ಬರೀ 20 ರೂಪಾಯಿ ಪಾವತಿಸಿದರೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ 2 ಲಕ್ಷ ರೂ. ಕವರೇಜ್ ಇರುವ ಅಪಘಾತ ವಿಮೆ ಸಿಗುತ್ತದೆ.
ಸರಕಾರದ ಆಯುಷ್ಮಾನ್ ಭಾರತ್ ಸ್ಟೀಮ್ ಅಡಿಯಲ್ಲಿ 5 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಸೌಲಭ್ಯವೂ ಇದೆ. ನಮಗೆ ಹಣಕಾಸಿನ ತೊಂದರೆ, ಹೆಚ್ಚು ಪ್ರೀಮಿಯಂ ಕಟ್ಟಿ ಖಾಸಗಿ ಆರೋಗ್ಯ ವಿಮೆ ಪಡೆಯಲು ಸಾಧ್ಯವಿಲ್ಲ ಎನ್ನುವವರು ಈ ವಿಮೆ ಪರಿಗಣಿಸಬಹುದು.
ನಿಮ್ಮ ಹೂಡಿಕೆಗಳು ಗುರಿ ಕೇಂದ್ರಿತವಾಗಲಿ:
ಮಕ್ಕಳ ಉನ್ನತ ವಿದ್ಯಾಭ್ಯಾಸ, ನಿವೃತ್ತಿ ಜೀವನ, ಮನೆ ನಿರ್ಮಾಣ, ಕಾರು ಖರೀದಿ ಹೀಗೆ ಬೇರೆಬೇರೆ ಹೂಡಿಕೆ ಗುರಿಗಳು ಪ್ರತಿಯೊಬ್ಬರಿಗೂ ಇರುತ್ತವೆ. ಗುರಿ ಮತ್ತು ಆದಕ್ಕಿರುವ ಸಮಯವನ್ನು ಆಧರಿಸಿ ನಮ್ಮ ಹೂಡಿಕೆಗಳನ್ನು ಮಾಡಬೇಕಾಗುತ್ತದೆ. ಅತ್ಯಂತ ಅಲ್ಪಾವಧಿಗೆ ಷೇರು ಹೂಡಿಕೆ ಪರಿಗಣಿಸುವುದು. ತುರ್ತು ಅಗತ್ಯಗಳಿಗೆ ಬೇಕಾದ ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್ ನಲ್ಲಿ ಇಡಲು ಮುಂದಾಗುವಂತಹ ತೀರ್ಮಾನಗಳು ತಪ್ಪಾಗುತ್ತವೆ.
ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಗುರಿಗಳನ್ನು ಅಲ್ಪಾವಧಿ, 3-7 ವರ್ಷಗಳ ಗುರಿಗಳನ್ನು ಮಧ್ಯಮಾವಧಿ ಮತ್ತು 7 ವರ್ಷ ಮೇಲ್ಪಟ್ಟ ಹೂಡಿಕೆಗಳನ್ನು ದೀರ್ಘಾವಧಿ ಎಂದು ಪರಿಗಣಿಸಬೇಕಾಗುತ್ತದೆ. ನಿಮ್ಮ ಹೂಡಿಕೆ ಉತ್ಪನ್ನವನ್ನು ಆಯ್ಕೆ ಮಾಡುವಾಗ, ನಿಮ್ಮ ಹೂಡಿಕೆಯು ಗುರಿ ಕೇಂದ್ರಿತವಾಗಿರಬೇಕು. ಆಗ ಮಾತ್ರ ಹಣಕಾಸು ನಿರ್ವಹಣೆಯಲ್ಲಿ ಯಶಸ್ಸು ಗಳಿಸಬಹುದು. ಉದಾಹರಣೆಗೆ ಮ್ಯೂಚುವಲ್ ಫಂಡ್ ಅಂತ ಬಂದಾಗ ಅಲ್ಪಾವಧಿಗೆ ಲಿಕ್ವಿಡ್ ಫಂಡ್ ಗಳು, ಮಧ್ಯಮಾವಧಿಗೆ ಬ್ಯಾಲೆನ್ಸ್ ಫಂಡ್‌ಗಳು ಮತ್ತು ದೀರ್ಘಾವಧಿಗೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಬಹುದು.
ಹೂಡಿಕೆ ಮಾಡುವಾಗ ಬೆಲೆ ಏರಿಕೆ ಮರೆಯದಿರಿ:
ಇವತ್ತು ನಿಮ್ಮ ಹತ್ತಿರ 100 ರೂಪಾಯಿ ಇದ್ದರೆ 10 ವರ್ಷಗಳ ಬಳಿಕ ಅದರ ಬೆಲೆ 50 ರೂಪಾಯಿ ಮಾತ್ರ! ಹೌದು, ಬೆಲೆ ಏರಿಕೆ ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಜೇಬಿಗೆ ಕತ್ತರಿ ಹಾಕುತ್ತದೆ. ಬೆಲೆ ಏರಿಕೆ ಶ್ರೀಮಂತರನ್ನು ಅಷ್ಟಾಗಿ ಬಾಧಿಸುವುದಿಲ್ಲ, ಏಕೆಂದರೆ ಅವರ ಆದಾಯ ಮತ್ತು ಗಳಿಕೆ ಸಾಮರ್ಥ್ಯ ಉತ್ತಮವಾಗಿರುತ್ತದೆ. ಆದರೆ ಬಡವರು ಮತ್ತು ಮಧ್ಯಮ ವರ್ಗದವರನ್ನು ಹಣದುಬ್ಬರ ಹೈರಾಣಾಗಿಸಿಬಿಡುತ್ತದೆ.
ಉದಾಹರಣೆಗೆ 2025ನೇ ವರ್ಷದಲ್ಲಿ ನಿಮ್ಮ ಬಳಿ 1 ಲಕ್ಷ ರೂಪಾಯಿ ಇದೆ ಎಂದುಕೊಳ್ಳಿ. ವಾರ್ಷಿಕ ಶೇ.8ರಷ್ಟು ಬೆಲೆ ಏರಿಕೆಯಾಗುತ್ತಾ ಹೋದರೆ, 2030ರ ವೇಳೆಗೆ ನಿಮ್ಮ ಬಳಿ ಇರುವ 1 ಲಕ್ಷ ರೂ. ಮೌಲ್ಯ 65,908 ರೂಪಾಯಿಗೆ ಇಳಿಕೆಯಾಗುತ್ತದೆ. 2035ನೇ ವರ್ಷವಾಗುವಷ್ಟರಲ್ಲಿ 1 ಲಕ್ಷದ ಬೆಲೆ 43,439 ರೂ.ಗೆ ಇಳಿಕೆಯಾಗಿರುತ್ತದೆ! 2040ರ ಹೊತ್ತಿಗೆ 1 ಲಕ್ಷದ ಮೌಲ್ಯ 28,630 ರೂಪಾಯಿಗೆ ಬಂದಿರುತ್ತದೆ. 2045ನೇ ವರ್ಷದ ವೇಳೆಗೆ 1 ಲಕ್ಷದ ಮೌಲ್ಯ 18,869 ರೂಪಾಯಿಗೆ ಕುಸಿದಿರುತ್ತದೆ. 2050ನೇ ಇಸವಿಗೆ 1 ಲಕ್ಷದ ಮೌಲ್ಯ ಬರ್ರೀ 12,436 ರೂಪಾಯಿಗೆ ತಲುಪಿರುತ್ತದೆ. ಹಾಗಾಗಿ ಹೂಡಿಕೆ ಉತ್ಪನ್ನಗಳನ್ನು ಆಯ್ಕೆ ಮಾಡುವಾಗ ಹಣದುಬ್ಬರದ ಅಂದಾಜಿರಲಿ.
ಬೇಗ ಹೂಡಿಕೆ ಆರಂಭಿಸಿ ಆರ್ಥಿಕವಾಗಿ ಸಬಲರಾಗಿ:
ಕೆಲಸಕ್ಕೆ ಸೇರಿದ ತಕ್ಷಣ ಹೂಡಿಕೆ ಆರಂಭಿಸಿ. ಬೇಗ ಹೂಡಿಕೆ ಆರಂಭಿಸಿದಾಗ ದೀರ್ಘಾವಧಿಯಲ್ಲಿ ಚಕ್ರಬಡ್ಡಿಯ ಲಾಭ ಪಡೆಯಲು ಸಾಧ್ಯವಾಗುತ್ತದೆ.
ಉದಾಹರಣೆಗೆ ಶ್ಯಾಮ್ ಮತ್ತು ಸಿರಿ ಎಂಬ ಇಬ್ಬರು ಸ್ನೇಹಿತರಿದ್ದರು ಎಂದುಕೊಳ್ಳೋಣ. ಶ್ಯಾಮ್ 20ನೇ ವಯಸ್ಸಿಗೆ ಪ್ರತಿ ತಿಂಗಳು 5 ಸಾವಿರ ರೂ. ಎಸ್‌ಐಪಿ ಹೂಡಿಕೆ ಶುರು ಮಾಡಿ ಮುಂದಿನ 20 ವರ್ಷ ಹೂಡಿಕೆ ಮಾಡುತ್ತಾರೆ ಎಂದು ಭಾವಿಸೋಣ. ಆ ಪ್ರಕಾರ ಶೇ.12ರ ಗಳಿಕೆ ಸಿಕ್ಕರೂ ಶ್ಯಾಮ್ ಬಳಿ 47.7 ಲಕ್ಷ ರೂ. ಹಣವಿರುತ್ತದೆ. ಆದರೆ ಸಿರಿ ತಮ್ಮ 35ನೇ ವಯಸ್ಸಿಗೆ ಎಸ್‌ಐಪಿ ಹೂಡಿಕೆ ಶುರು ಮಾಡಿ, ಪ್ರತಿ ತಿಂಗಳು 10 ಸಾವಿರ ಹೂಡಿಕೆ ಮಾಡುತ್ತಾರೆ ಅವರಿಗೂ ಶೇ.12ರಷ್ಟು ಗಳಿಕೆ ಸಿಗುತ್ತದೆ ಎಂದುಕೊಳ್ಳೋಣ. ಹೀಗಿದ್ದರೂ ಶ್ಯಾಮ್ ಬಳಿ 25.9 ಲಕ್ಷ ರೂಪಾಯಿ ಮಾತ್ರ ಸಂಗ್ರಹವಾಗಿರುತ್ತದೆ. ಬೇಗ ಹೂಡಿಕೆ ಆರಂಭಿಸಿದಾಗ ಹಣದ ಬೆಳವಣಿಗೆಗೆ ಸಮಯ ಸಿಗುತ್ತದೆ. ಆದ್ದರಿಂದ ಶ್ಯಾಮ್ ಸಿರಿಗಿಂತ ಹೆಚ್ಚು ಗಳಿಸುತ್ತಾರೆ.
ಹೂಡಿಕೆ ವೈವಿಧ್ಯತೆ ಎಂದಿಗೂ ಮರೆಯದಿರಿ:
ಹೂಡಿಕೆಯ ಪೋರ್ಟ್‌ಫೋಲಿಯೋದಲ್ಲಿ ಒಂದು ಹದವಾದ ಮಿಶ್ರಣವಿರಬೇಕು. ಫಿಕ್ಸೆಡ್ ಡೆಪಾಸಿಟ್, ಅಂಚೆ ಕಚೇರಿ ಹೂಡಿಕೆಗಳು, ಬಾಂಡ್ಸ್, ಚಿನ್ನ, ರಿಯಲ್ ಎಸ್ಟೇಟ್ ನಂತಹ ಸಾಂಪ್ರದಾಯಿಕ ಹೂಡಿಕೆಗಳ ಜೊತೆಗೆ ಷೇರು ಮಾರುಕಟ್ಟೆ ಹೂಡಿಕೆ ಮತ್ತು ಮ್ಯೂಚುವಲ್ ಫಂಡ್ ತರ ಹೊಸ ಮಾದರಿಯ ಹೂಡಿಕೆಗಳೂ ಇರಬೇಕು. ನೆನಪಿಟ್ಟುಕೊಳ್ಳಿ, ಸಾಂಪ್ರದಾಯಿಕ ಹೂಡಿಕೆಗಳು ಬಂಡವಾಳದ ಸುರಕ್ಷತೆಯನ್ನು ಒದಗಿಸುತ್ತವೆ. ಆದರೆ ಬೆಲೆ ಏರಿಕೆ ( ಹಣದುಬ್ಬರ) ಮೀರಿ ಹೆಚ್ಚು ಗಳಿಸಬೇಕು ಎಂದರೆ, ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ತರಹದ ಹೈ ರಿಸ್ಕ್ ಹೂಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ಹೂಡಿಕೆಗಳಲ್ಲಿ ಅಲ್ಪಾವಧಿ ರಿಸ್ಟ್ ಹೆಚ್ಚಿಗೆ ಇದ್ದರೂ ದೀರ್ಘಾವಧಿಯಲ್ಲಿ ಶೇ.12ರ ವರೆಗೆ ಗಳಿಕೆ ನಿರೀಕ್ಷಿಸಬಹುದು ಎಂದು ಅಂಕಿಅಂಶಗಳು ಹೇಳುತ್ತವೆ. ನಿಮಗೆ ಷೇರು ಮತ್ತು ಮ್ಯೂಚುವಲ್ ಫಂಡ್ ಬಗ್ಗೆ ತಿಳಿದಿಲ್ಲ ಎಂದರೆ ಪ್ರಯೋಗ ಮಾಡಲು ಹೋಗಬೇಡಿ. ಹಣಕಾಸು ತಜ್ಞರ ನೆರವು ಪಡೆದುಕೊಳ್ಳಿ.
ಒಂದೇ ಆದಾಯ ನೆಚ್ಚಿಕೊಳ್ಳಬೇಡಿ, ಹೊಸ ದಾರಿ ಹುಡುಕಿ
ಸಂಬಳ ಮಾತ್ರ ನಿಮ್ಮ ಆದಾಯದ ಮೂಲವಾಗಿದ್ದರೆ, ಬಡತನಕ್ಕೆ ನೀವು ಬಹಳ ಹತ್ತಿರವಿದ್ದೀರಿ! ಈ ಮಾತು ಹೇಳಿದವರು ಖ್ಯಾತ ಹೂಡಿಕೆ ತಜ್ಞವಾರನ್ ಬಫೆಟ್. ಬರೀ ಸಂಬಳ ನೆಚ್ಚಿಕೊಂಡು ಬದುಕುವುದು ಕಷ್ಟ, ಉದ್ಯೋಗ ಅಥವಾ ಉದ್ಯಮ ನಷ್ಟವಾದರೆ ಹಣಕಾಸಿನ ಸಂಕಷ್ಟಗಳಿಗೆ ಸಿಲುಕಬೇಕಾಗುತ್ತದೆ ಅನ್ನೋದು ಬಫೆಟ್ ಈ ಮಾತಿನ ತಾತ್ಪರ್ಯ. ಆದಾಯ ಗಳಿಕೆ ವಿಧಾನದಲ್ಲಿ ಎರಡು ಮಾದರಿಗಳಿವೆ. ಒಂದನೆಯದ್ದು ಆ್ಯಕ್ಟಿವ್ ಇನ್‌ಕಮ್, ಎರಡನೆಯದ್ದು ಪ್ಯಾಸಿವ್ ಇನ್‌ಕಮ್. ಸಮಯ ಮತ್ತು ಪರಿಶ್ರಮ ಎರಡನ್ನೂ ಹಾಕಿ ಗಳಿಸುವ ಹಣಕ್ಕೆ ಆಕ್ಟಿವ್ ಇನ್‌ಕಮ್ ಎಂದು ಕರೆಯಬಹುದು.
ಉದಾಹರಣೆಗೆ ಯಾವುದೋ ಉದ್ಯೋಗದಲ್ಲಿದ್ದು ಅದರಿಂದ ಪ್ರತಿ ತಿಂಗಳು ಸಂಬಳದ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರೆ ಅದು ಆಕ್ಟಿವ್ ಇನ್‌ಕಮ್ ಆಗುತ್ತದೆ. ಮತ್ತೊಂದೆಡೆ ಹೆಚ್ಚು ಪರಿಶ್ರಮ ಮತ್ತು ಸಮಯ ನೀಡದೆ ಗಳಿಸುವ ಹಣವನ್ನು ಪ್ಯಾಸಿವ್ ಇನ್ ಕಮ್ ಎನ್ನಬಹುದು. ಉದಾಹರಣೆಗೆ ಬಂದ ಸಂಬಳದಲ್ಲಿ ಉಳಿತಾಯ ಮಾಡಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಕ್ರಮೇಣ ಆ ಮ್ಯೂಚುವಲ್ ಫಂಡ್ ನಿಂದ ಲಾಭ ಸಿಗುತ್ತದೆ.
ಮ್ಯೂಚುವಲ್ ಫಂಡ್ ಹೂಡಿಕೆಗೆ ಇಲ್ಲಿ ಯಾವುದೇ ಹೆಚ್ಚಿನ ಸಮಯವನ್ನು ವ್ಯಕ್ತಿ ನೀಡಬೇಕಿಲ್ಲ. ಗಳಿಸಿದ ಹಣ ಹೂಡಿದರೆ ಸಾಕು ಕ್ರಮೇಣ ಸಂಪತ್ತು ಸೃಷ್ಟಿಯಾಗುತ್ತದೆ. ಅಂದರೆ ಇಲ್ಲಿ ವ್ಯಕ್ತಿ ನಿದ್ರೆ ಮಾಡುವಾಗಲೂ ದುಡ್ಡಿಂದ ದುಡ್ಡು ಬೆಳೆಯುತ್ತದೆ. ಯಾರು ಹೀಗೆ ಹೆಚ್ಚು ಪರಿಶ್ರಮವಿಲ್ಲದೆ ಹಣ ಗಳಿಸುವ ಒಳ್ಳೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಾರೋ ಅವರಿಗೆ ಶ್ರೀಮಂತರಾಗುವ ಹಾದಿ ಕಾಣಿಸುತ್ತದೆ.
ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಒಂದಲ್ಲ ಎರಡಲ್ಲ ಏಳು ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬಹುದು. ಉದ್ಯಮಿ ಧವಳ್ ಭಾಟಿಯಾ ಹೇಗೆ ಏಳು ಆದಾಯದ ಮಾರ್ಗಗಳನ್ನು ಪ್ರತಿಯೊಬ್ಬರೂ ಕಂಡುಕೊಳ್ಳಬಹುದು ಎನ್ನುವುದನ್ನು ತಿಳಿಸಲು ‘7’ ಸೂತ್ರವನ್ನು ಜನಪ್ರಿಯಗೊಳಿಸಿದ್ದಾರೆ.
ಶಿಕ್ಷಣ, ಕೌಶಲ್ಯ, ಮತ್ತು ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬರೂ ಸ್ವಂತ ವ್ಯವಹಾರದ ಆದಾಯ (Rate), ವೇತನ (Remuneration), ಬಾಡಿಗೆ ಆದಾಯ (RENT), ಹೂಡಿಕೆ ಮೇಲಿನ ಲಾಭ(Returns),ರಾಯಧಾನ (Royalty), ಪುನರಾವರ್ತನೆ (Replication), ಹಕ್ಕುಸ್ವಾಮ್ಯ (Rights) ಹೀಗೆ ಪರ್ಯಾಯ ಆದಾಯದ ದಾರಿಗಳನ್ನು ಕಂಡುಕೊಳ್ಳಬಹುದಾಗಿದೆ.
ಸಾಲ ನಿರ್ವಹಣೆಯಲ್ಲಿ ಗೆದ್ದರೆ ಆರ್ಥಿಕ ಯಶಸ್ಸು:
ಸಾಲ ಕೆಟ್ಟದ್ದಲ್ಲ, ಆದರೆ ಕೆಟ್ಟ ಸಾಲ ಒಳ್ಳೆಯದಲ್ಲ! ಸಾಲ ಮಾಡಿ ಸಂಪತ್ತು ಸೃಷ್ಟಿಸಬೇಕೇ ಹೊರತು ಶೋಕಿಗಾಗಿ ಸಾಲ ಮಾಡಬಾರದು. ಉದಾಹರಣೆಗೆ ಶಿಕ್ಷಣದ ಉದ್ದೇಶಕ್ಕೆ, ಮನೆ ನಿರ್ಮಾಣಕ್ಕೆ, ಕಮರ್ಷಿಯಲ್ ಟ್ಯಾಕ್ಸಿಖರೀದಿಗೆ ಸಾಲ ಮಾಡಿದರೆ ತಪ್ಪಲ್ಲ. ಯಾಕಂದ್ರೆ ಇಲ್ಲಿ ಸಂಪತ್ತು ಸೃಷ್ಟಿಯ ಉದ್ದೇಶಕ್ಕೆ ಸಾಲ ಮಾಡುತ್ತೇವೆ. ಆದರೆ ಕ್ರೆಡಿಟ್ ಕಾರ್ಡ್ ಸಾಲ, ಇಎಂಐ ಮೂಲಕ ಐಷಾರಾಮಿ ವಸ್ತುಗಳ ಖರೀದಿ ಮಾಡುವುದು ಒಳ್ಳೆಯದಲ್ಲ. ಪರ್ಸನಲ್ ಲೋನ್ ಗಳನ್ನು ತೀರಾ ಅಗತ್ಯ ಎಂದಾಗ ಮಾತ್ರ ಪರಿಗಣಿಸಬೇಕು. ಈ ಸಾಲಗಳ ಮೇಲಿನ ಅತಿಯಾದ ಅವಲಂಬನೆ ನಿಮ್ಮನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತದೆ.
ನಿಮ್ಮ ಎಲ್ಲ ಸಾಲಗಳ ಒಟ್ಟು ಮಾಸಿಕ ಇಎಂಐ ಮೊತ್ತವು ನಿಮ್ಮ ಆದಾಯದ ಶೇ.30-35 ಕ್ಕಿಂತ ಹೆಚ್ಚಿಗೆ ಇರಬಾರದು. ಉದಾಹರಣೆಗೆ ನಿಮ್ಮ ಆದಾಯ 1 ಲಕ್ಷ ರೂ. ಇದ್ದರೆ ನಿಮ್ಮ ಸಾಲದ ಇಎಂಐ 30-35 ಸಾವಿರ ರೂ. ಮೀರಬಾರದು.
ನಾಮಿನಿ ಮಾಡುವದನ್ನು ತಪ್ಪದೇ ಮರೆಯಬೇಡಿ:
ಈಗ ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್, ಷೇರು ಹೂಡಿಕೆ, ಅಂಚೆ ಕಚೇರಿ ಹೂಡಿಕೆಗಳೂ ಸೇರಿದಂತೆ ಇನ್ನಿತರ ಹಣಕಾಸು ವ್ಯವಹಾರಗಳಿಗೆ ನಾಮಿನಿ ಕಾಲಂ ಕಡ್ಡಾಯ ಮಾಡಲಾಗಿದೆ. ಆದರೂ ಕೆಲವರು ನಾಮಿನಿ ಮಾಡುವುದನ್ನು ಕಡೆಗಣಿಸುತ್ತಾರೆ. ನಾಮಿನಿ ಮಾಡುವುದರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ನಿಮ್ಮ ಪರಿಶ್ರಮದ ಹಣ ನಿಮ್ಮ ಪ್ರೀತಿಪಾತ್ರರಿಗೆ ಸೇರುವುದು ಕಷ್ಟವಾಗುತ್ತದೆ.
ನಿಮ್ಮ ಹಣಕಾಸು ಮಾಹಿತಿ ಮುಚ್ಚಿಡಬೇಡಿ ಆಪ್ತರಿಗೆ ಅದರ ಅರಿವಿರಲಿ:
ಭಾರತದಲ್ಲಿ ಬಹುಪಾಲು ಜನರು ದುಡ್ಡುಕಾಸಿನ ವಿಷಯಗಳನ್ನು ಮನೆ ಮಂದಿ ಜತೆ ಚರ್ಚಿಸುವುದಿಲ್ಲ. ಹಣಕಾಸು, ವಿಮೆ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ನಿಮ್ಮ ಕುಟುಂಬದ ಆಪ್ತ ಸದಸ್ಯರೊಂದಿಗೆ ಹಂಚಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡದಿದ್ದರೆ ನಿಮ್ಮ ಕುಟುಂಬದವರ ಉತ್ತಮ ಭವಿಷ್ಯಕ್ಕಾಗಿ ನೀವು ಮಾಡಿದ ಹೂಡಿಕೆ ವ್ಯರ್ಥವಾಗಿಬಿಡಬಹುದು.
ಇಂಥ ಅಗತ್ಯ ಮಾಹಿತಿಯನ್ನು ಸುಲಭವಾಗಿ ಹಂಚಿಕೊಳ್ಳಲು ಮೈಕ್ರೋಸಾಫ್ಟ್ ಎಕ್ಸೆಲ್ ಅಥವಾ ಮೈಕ್ರೋಸಾಫ್ಟ್ ವರ್ಡ್ ಡಾಕ್ಯೂಮೆಂಟ್ ಬಳಸಿಕೊಳ್ಳಿ. ಎಕ್ಸೆಲ್ ಅಥವಾ ವರ್ಡ್‌ಫೈಲ್‌ನಲ್ಲಿ ಎಲ್ಲ ಉಳಿತಾಯ, ಹೂಡಿಕೆ, ಗಳಿಕೆ ಮತ್ತು ಸಾಲಕ್ಕೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ ಪೆನ್‌ಡ್ರೈವ್ ಅಥವಾ ಹಾರ್ಡ್ ಡಿಸ್ಕ್ನಲ್ಲಿ ಪ್ರೊಟೆಸ್ಟೆಡ್ ಪಾಸ್‌ವರ್ಡ್ ನೀಡಿ ಸ್ಟೋರ್ ಮಾಡಬಹುದು. ಸುರಕ್ಷತೆಯ ದೃಷ್ಟಿಯಿಂದ ಈ ಫೈಲ್ ಅನ್ನು ಮೊಬೈಲ್‌ನಲ್ಲಿಡುವುದು ಬೇಡ. ಕಾಲಕಾಲಕ್ಕೆ ಶೀಟ್ ನಲ್ಲಿ ಮಾಹಿತಿ ಅಪ್ ಡೇಟ್ ಮಾಡುವುದನ್ನು ಮರೆಯಬೇಡಿ. ಎಕ್ಸೆಲ್ ಅಥವಾ ವರ್ಡ್ ಫೈಲ್ನಲ್ಲಿರುವ ಎಲ್ಲ ಮಾಹಿತಿ ಪತಿ-ಪತ್ನಿಗೆ ತಿಳಿದಿರಬೇಕು. ಪತಿ-ಪತ್ನಿಯ ಜೊತೆಗೆ 18 ತುಂಬಿದ ಮಕ್ಕಳು ಮತ್ತು ಕುಟುಂಬದ ನಂಬಲರ್ಹ ಆಪ್ತರಿಗೂ ಈ ದಾಖಲೆಗಳಿರುವ ಬಗ್ಗೆ ಮಾಹಿತಿ ಇರಲಿ.

ವಿಲ್ ಮರೆಯದಿರಿ ಆಸ್ತಿ ವರ್ಗಾವಣೆ ಸುಗಮಗೊಳಿಸಿ:
ದೇಶದ 140 ಕೋಟಿಗೂ ಹೆಚ್ಚಿನ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಂದಿ ಮಾತ್ರ ವಿಲ್ ಬರೆಯುತ್ತಾರೆ ಎನ್ನುತ್ತವೆ ಅಂಕಿಅಂಶಗಳು. ವಿಲ್ ಬರೆಯುವುದು ಸಾಕಷ್ಟು ಆಸ್ತಿಪಾಸ್ತಿ ಹೊಂದಿರುವ ಶ್ರೀಮಂತರು ಮಾತ್ರ! ಸಾಮಾನ್ಯ ಜನರಿಗೆ ಉಯಿಲು ಎನ್ನುವುದು ಅಷ್ಟು ಮಹತ್ವದ್ದಲ್ಲ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ನೀವು ಕಷ್ಟಪಟ್ಟು ಉಳಿಸಿದ ಹಣ, ಆಸ್ತಿ ನಿಮ್ಮ ಕುಟುಂಬದವರಿಗೆ, ನೀವಿಷ್ಟಪಟ್ಟವರಿಗೆ ಸೇರಬೇಕಾದರೆ ವಿಲ್ ಬೇಕೇಬೇಕು.
ನಾವು ಸಂಪಾದಿಸಿದ, ಬಳುವಳಿಯಾಗಿ ಪಡೆದ ಆಸ್ತಿ-ಪಾಸ್ತಿ ನಮ್ಮ ನಿಧನದ ಬಳಿಕ ಯಾರಿಗೆ ಸೇರಬೇಕೆಂದು ಬರೆಯುವ ದಾಖಲೆಯೇ ವಿಲ್. ಒಂದು ವೇಳೆ ವಿಲ್ ಇಲ್ಲದಿದ್ದಾಗ ಕುಟುಂಬದ ನಡುವೆ ಆಸ್ತಿ ವರ್ಗಾವಣೆ ಕಷ್ಟವಾಗುತ್ತದೆ. ಆಸ್ತಿಗಾಗಿ ಜಗಳ ಉಂಟಾಗುತ್ತದೆ. ವಯಸ್ಸಾದ ಮೇಲೆ ವಿಲ್ ಬರೆಯುವ ಬಗ್ಗೆ ಆಲೋಚನೆ ಮಾಡಬೇಕು ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ದುಡಿಯಲು ಆರಂಭಿಸಿದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಒಂದು ವಿಲ್ ಬರೆದುಬಿಡಿ. ಕಾಲಕಾಲಕ್ಕೆ ಎಲ್ ಅನ್ನು ಬದಲಾಯಿಸುವ ಅವಕಾಶವಿರುತ್ತದೆ. 18 ವರ್ಷ ತುಂಬಿದ ವ್ಯಕ್ತಿ ಭಾರತದಲ್ಲಿ ವಿಲ್ ಬರೆಯಬಹುದು.
ಇದನ್ನೂ ನೋಡಿ…..HRMS Employee Self Service portal for Karnataka Govt