ಒಂದು ವರ್ಷದ ಎಂ.ಇಡಿ, ಬಿ.ಇಡಿ,-2026-27 ನೇ ಸಾಲಿನಲ್ಲಿ ಆರಂಭ: ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಮಾಹಿತಿ.
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು (ಎನ್‌ಸಿಟಿಇ) ಒಂದು ವರ್ಷದ ಎಂ.ಇಡಿ ಹಾಗೂ ಬಿ.ಇಡಿ ಕೋರ್ಸ್‌ಗಳನ್ನು ಆರಂಭಿಸಲಿದೆ. ಎನ್‌ಸಿಟಿಇ ಅಧ್ಯಕ್ಷ ಪ್ರೊ. ಪಂಕಜ್ ಅರೋರಾ ಈ ಮಾಹಿತಿ ನೀಡಿದ್ದಾರೆ. ದೇಶಾದ್ಯಂತ ಒಂದು ವರ್ಷದ ಎಂ.ಇಡಿ
ಕೋರ್ಸ್ 2026-27ನೇ ಸಾಲಿನಿಂದ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಒಂದು ವರ್ಷದ ಬಿ.ಇಡಿ ಕೋರ್ಸ್ ಆರಂಭಿಸುವ ವಿವರವನ್ನು ನೀಡಲಾಗಿತ್ತು.
ಎಂ.ಇಡಿಗೆ ಯಾರು ಅರ್ಹರು?:
ಒಂದು ವರ್ಷದ ಬಿ.ಇಡಿ ಕೋರ್ಸ್ ಪೂರ್ಣಗೊಳಿಸಿರುವ, ಎರಡು ವರ್ಷದ ಬೋಧನೆ ಪದವಿ ಕೋರ್ಸ್ ಪೂರೈಸಿರುವ ಅಥವಾ ನಾಲ್ಕು ವರ್ಷಗಳ ಸಮಗ್ರ ಬಿ.ಇಡಿ ಕೋರ್ಸ್ ಸೇರಿದಂತೆ ಈ ಮೂರು ವಿಭಾಗದಲ್ಲಿ ವ್ಯಾಸಂಗ ಮಾಡಿರುವ ಯಾವುದೇ ಅಭ್ಯರ್ಥಿಗಳು ಒಂದು ವರ್ಷದ ಎಂ.ಇಡಿ ಕೋರ್ಸ್‌ಗೆ ಪ್ರವೇಶ ಪಡೆಯಬಹುದು ಎಂದು ವಿವರಿಸಿದ್ದಾರೆ. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಯುಜಿಸಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನೂತನ ಮಾನದಂಡಗಳನ್ನು ರೂಪಿಸಿದೆ. ಈ ಮಾರ್ಗದರ್ಶನ ಹಾಗೂ ನಿರ್ದೇಶನಗಳನ್ನು ಆಧರಿಸಿ ಒಂದು ವರ್ಷದ ಎಂ.ಇಡಿ ಕೋರ್ಸ್ ಆರಂಭಿಸಲಾಗುತ್ತಿದೆ ಎಂದು ಪ್ರೊ.ಅರೋರಾ ತಿಳಿಸಿದ್ದಾರೆ.
ಪ್ರಸಕ್ತ ವರ್ಷವೇ ಅರ್ಜಿ ಆಹ್ವಾನ
ಒಂದು ವರ್ಷದ ಎಂ.ಇಡಿ ಕೋರ್ಸ್ ಆರಂಭಿಸಲು ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಂದ ಪ್ರಸಕ್ತ ವರ್ಷವೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನಂತರ 2026-27ರಲ್ಲಿ ಈ ಕೋರ್ಸ್ ಶುರು ಮಾಡಲಾಗುತ್ತದೆ. ಪ್ರಸ್ತುತ ಈ ಕೋರ್ಸ್‌ನ ಪಠ್ಯಕ್ರಮ ಸಿದ್ಧಪಡಿಸಲಾಗುತ್ತಿದ್ದು, ಗುಣಮಟ್ಟವನ್ನೇ ಮಾನದಂಡವನ್ನಾಗಿಸಿ ರೂಪಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಎನ್‌ಸಿಟಿಇ ಶಿಕ್ಷಕರ ಶಿಕ್ಷಣಕ್ಕೆ ಹೊಸ ರೂಪ ನೀಡುತ್ತಿದೆ. ಪ್ರಸಕ್ತ ಸ್ಥಿತಿಗತಿ ಹಾಗೂ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮವನ್ನು ತಯಾರು ಮಾಡಲು ಗಮನ ಹರಿಸಲಾಗುತ್ತಿದೆ.
ಎರಡು ವರ್ಷದ ಕೋರ್ಸ್ ಇರಲ್ಲ!
ಒಂದು ವರ್ಷದ ಎಂ.ಇಡಿ ಕೋರ್ಸ್ ಆರಂಭವಾದ ಬಳಿಕ ಎರಡು ವರ್ಷದ ಎಂ.ಇಡಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಗಳನ್ನು ನಿಲ್ಲಿಸಲಾಗುತ್ತದೆ.
ಪಠ್ಯಕ್ರಮ ಚೌಕಟ್ಟು ಸಮಿತಿ
ಎನ್‌ಸಿಟಿಇ 10 ವರ್ಷಗಳ ಬಳಿಕ ಮತ್ತೆ ಒಂದು ವರ್ಷದ ಬಿ.ಇಡಿ ಕೋರ್ಸ್ ಆರಂಭಿಸುತ್ತಿದೆ. ಜತೆಗೆ ನಾಲ್ಕು ವರ್ಷಗಳ ಸಮಗ್ರ ಬಿ.ಇಡಿ ಕೋರ್ಸ್‌ಗೆ (ಇಂಟಿಗ್ರೇಟೆಡ್ ಟೀಚರ್ ಎಜುಕೇಷನ್ ಪ್ರೋಗ್ರಾಂ- ಐಟಿಇಪಿ) ಹೊಸ ವಿಷಯಗಳನ್ನು ಸೇರ್ಪಡೆ ಮಾಡುತ್ತಿದೆ. ಅದರಂತೆ ಐಟಿಇಪಿ ಯೋಗ ಶಿಕ್ಷಣ, ಐಟಿಇಪಿ ದೈಹಿಕ ಶಿಕ್ಷಣ, ಐಟಿಇಪಿ ಸಂಸ್ಕೃತ ಹಾಗೂ ಐಟಿಇಪಿ ಪ್ರದರ್ಶನ ಕಲೆಗಳ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಈ ಎಲ್ಲ ಕೋರ್ಸ್ ಗಳಿಗೆ ಪಠ್ಯಕ್ರಮ ಚೌಕಟ್ಟು ರೂಪಿಸಲು 8 ಸದಸ್ಯರ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು NCTE ತಿಳಿಸಿದೆ.
ಎಲ್ಲೆಲ್ಲಿ 4 ವರ್ಷದ ಕೋರ್ಸ್?
ಸದ್ಯ ದೇಶದ 64 ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್ (ಐಟಿಇಪಿ) ನಡೆಸಲಾಗುತ್ತಿದ್ದು, ಇನ್ನಷ್ಟು ಸಂಸ್ಥೆಗಳಲ್ಲಿ ಆರಂಭವಾಗಲಿದೆ. ಈವರೆಗೆ ಪ್ರಾಯೋಗಿಕ ಮಾದರಿಯಲ್ಲಿ ನಡೆಸಲಾಗುತ್ತಿದ್ದ ಈ ಕೋರ್ಸ್‌ಗಳನ್ನು ರೆಗ್ಯುಲರ್ ಸ್ವರೂಪದಲ್ಲಿ ಮುಂದುವರಿಸಲಾಗುತ್ತದೆ. ಇದಕ್ಕಾಗಿ ಕೋರ್ಸ್ ಆರಂಭದಲ್ಲಿ ವಿಧಿಸಲಾಗಿದ್ದ ಷರತ್ತುಗಳಲ್ಲೂ ಬದಲಾವಣೆಯಾಗಲಿದೆ. ಕೆಲ ನಿಬಂಧನೆಗಳನ್ನು ಸರಳಗೊಳಿಸಲಾಗುತ್ತದೆ ಎಂದು ಎನ್‌ಸಿಟಿಇ ಹೇಳಿದೆ. 30 ದಿನಗಳಲ್ಲಿ ಉನ್ನತಾಧಿಕಾರ ಸಮಿತಿಯು ವರದಿ ನೀಡಲಿದ್ದು, ಈ ಸಮಿತಿಯ ವರದಿ ಆಧರಿಸಿ ಪಠ್ಯಕ್ರಮ ಚೌಕಟ್ಟು ಅಂತಿಮಗೊಳಿಸಲಾಗುವುದು. ಐಟಿಇಪಿ ದ್ವಿ-ಪದವಿ ಕೋರ್ಸ್ ಆಗಿದ್ದು, ಇದರಲ್ಲಿ ಬಿಎ-ಬಿ.ಇಡಿ, ಬಿಕಾಂ-ಬಿಡಿ ಹಾಗೂ ಬಿಎಸ್‌ಸಿ ಬಿ.ಇಡಿ ಪದವಿ ನೀಡಲಾಗುತ್ತದೆ.
Hello