Kalika Habba: ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ-2025

Kalika Habba: ಕ್ಲಸ್ಟರ್ ಮಟ್ಟದಲ್ಲಿ FLN ಕಲಿಕಾ ಹಬ್ಬವನ್ನು ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಬಗ್ಗೆ.

ಹಿನ್ನೆಲೆ:

Kalika Habba: ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ (FLN) ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ ಕಥೆಗಳನ್ನು ಹೇಳುವುದು, ಒಳಾಂಗಣ ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ | ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತವೆ. ಇಂತಹ ಸಂದರ್ಭಗಳು ಕಾಲ ಕ್ರಮೇಣ ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತವೆ.

ಅ) ಕಲಿಕಾ ಹಬ್ಬ ಆಯೋಜನೆಯ ಉಪಯುಕ್ತ ಅಂಶಗಳು:

1.ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸಮುದಾಯದೊಂದಿಗೆ ವಿಸ್ತರಿಸಲು ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆ ಕ್ಲಸ್ಟರ್ ಒಳಗಿನ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಿದಂತಾಗುತ್ತದೆ.

2.ಕಲಿಕಾ ಹಬ್ಬವು ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಪರಸ್ಪರ ಹಂಚಿಕೊಂಡ ಕಲಿಕೆಯ ಅನುಭವಗಳು ಮಕ್ಕಳ ಹಾಗೂ ಒಂದು ಶಾಲೆಯ ಸಾಮೂಹಿಕ ಬೆಳವಣಿಗೆ ಮತ್ತು ಸುಧಾರಣೆಯನ್ನು ಪ್ರೋತ್ಸಾಹಿಸುತ್ತವೆ. ಮೋಜಿನ ಮತ್ತು ಆಕರ್ಷಕವೆನಿಸುವ ಕಾರ್ಯಕ್ರಮಗಳು ಶಾಲೆಗೆ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ ಮಾತ್ರವಲ್ಲದೆ, ವಿಶೇಷವಾಗಿ ಮೊದಲ ತಲೆಮಾರಿನ ಕಲಿಕಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎದುರು ನೋಡುತ್ತಿರುತ್ತಾರೆ.

ಸೃಜನಶೀಲತೆಯ ಮೂಲಕ ಸಾಂಘಿಕ ಸಾಮರ್ಥ್ಯದೊಂದಿಗೆ ಮಕ್ಕಳು ಸಮಾಜೀಕರಣವಾಗುವುದನ್ನು ಕಲಿಕಾ ಹಬ್ಬವು ಪ್ರೋತ್ಸಾಹಿಸುತ್ತದೆ. ಕಲೆ, ಸಂಗೀತ ಮತ್ತು ದೈಹಿಕ ಆಟಗಳೊಂದಿಗೆ ಸಂಯೋಜಿಸಲ್ಪಟ್ಟ FLN ಚಟುವಟಿಕೆಗಳು ಮನೋಜನ್ಯ, ಭಾವನಾತ್ಮಕ ಮತ್ತು ದೈಹಿಕವಾದ ಕೌಶಲ್ಯಗಳನ್ನು ಮಕ್ಕಳಲ್ಲಿ ಅಭಿವೃದ್ಧಿಪಡಿಸಲು ಒಂದು ಸಾಧನವಾಗಿ ಕೆಲಸ ಮಾಡುವುದು.

3.ವಿಭಿನ್ನ ಕಲಿಕೆಯ ವೇಗ ಅಥವಾ ಶೈಲಿಯನ್ನು ಹೊಂದಿರುವ ಮಕ್ಕಳು ಇಂತಹ ಕಲಿಕಾ ಉತ್ಸವಗಳಲ್ಲಿ ತೊಡಗಿಕೊಂಡಾಗ ವೈವಿಧ್ಯಮಯವಾದ ವಿಧಾನಗಳಿಂದ ಹಾಗೂ ತಂತ್ರಗಾರಿಕೆಯಿಂದ ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ.

1 ರಿಂದ 5 ನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶೃತಿಯನ್ನು ಪಡೆಯಲು ಸಾಧ್ಯವಿದೆ. ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ಸಹಯೋಗದ ಕಲಿಕೆಗೆ ಸ್ಥಳಾವಕಾಶವನ್ನು ನೀಡುವ ಮೂಲಕ, ಸಮುದಾಯದೊಳಗಿನ ವಿವಿಧ ಭಾಗೀದಾರರ ಭಾಗವಹಿಸುವಿಕೆಯನ್ನು ಉತ್ತೇಚಿಸಬೇಕನ್ನುವುದು ಇಲಾಖೆಯ ಪ್ರಮುಖ ಆಶಯವಾಗಿದೆ.

ಆ) ಕಲಿಕಾ ಹಬ್ಬದಲ್ಲಿ ಕೈಗೊಳ್ಳಬಹುದಾದ FLN ಚಟುವಟಿಕೆಗಳು:

1.ಗಟ್ಟಿ ಓದು – ಎಂದರೆ,

ಮಕ್ಕಳು/ಶಿಕ್ಷಕರು ಸಿದ್ದಪಡಿಸಿದ ಅಥವಾ ಸೃಜನಾತ್ಮಕವಾಗಿ ರಚಿಸಿದ ವಾಕ್ಯ ಅಥವಾ ಪಠ್ಯ ಸಾಮಗ್ರಿಯನ್ನು ಗ್ರಹಿಸಿ ಗಟ್ಟಿಯಾಗಿ ಓದುವುದು. ಗ್ರಂಥಾಲಯದಿಂದ ಪಡೆದ ಓದು ಸಾಮಗ್ರಿಗಳನ್ನು ಗ್ರಹಿಸಿ ಓದುವುದು ವಿಭಾಗದ ಮುಖ್ಯವಾದ ಚಟುವಟಿಕೆಯಾಗಿದ್ದು, ಈ ಬಗ್ಗೆ ಶಾಲೆಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ / ಕೊಠಡಿಯ ಓದು  ಸಾಮಗ್ರಿಗಳ ಕಾರ್ನ‌್ರನಿಂದ / ಗ್ರಂಥಾಲಯ / ಗ್ರಾಮ ಪಂಚಾಯತ್ ಗ್ರಂಥಾಲಯ / ನಗರ ಕೇಂದ್ರ ಗ್ರಂಥಾಲಯ ಇತ್ಯಾದಿಗಳಿಂದ ವಯಸ್ಸಿಗೆ ಸೂಕ್ತವಾದ (ಕಿರಿಯರಿಂದ ಹಿರಿಯರ ಕಡೆಗೆ) ಪುಸ್ತಕಗಳನ್ನು ಸಂಗ್ರಹಿಸಿ. ವರ್ಣರಂಜಿತ ಓದುವ ಮೂಲೆಗಳನ್ನು ಸ್ಥಾಪಿಸಿಕೊಳ್ಳುವುದು.

ಮಕ್ಕಳು ಕಥೆಯ ಭಾಗಗಳನ್ನು ಕೂಡ ಓದಿ ಓದಿ ಅಭಿನಯಿಸುವಂತಹ ‘ಗಟ್ಟಿಯಾಗಿ ಎಂಬ ಶೀರ್ಷಿಕೆಯ ಅವಧಿಗಳನ್ನು ಇಲ್ಲಿ ನಿರ್ವಹಿಸುವುದು. ಸದರಿ ಚಟುವಟಿಕೆಯನ್ನು ಕನ್ನಡ, ಅಂಗ್ಲ, ಉರ್ದು, ಮರಾಠಿ, ತಮಿಳು, ತೆಲುಗು, ಇತ್ಯಾದಿ ಭಾಷೆಗಳಲ್ಲಿ ನಿರ್ವಹಿಸತಕ್ಕದ್ದು.

2.ಕಥೆ ಹೇಳುವುದು – ಎಂದರೆ,

ಮಕ್ಕಳು ಶಾಲಾ ಭಾಷೆಯಾದ ಕನ್ನಡ ಮತ್ತು ಇತರೆ ಪ್ರಾದೇಶಿಕ ಹಾಗೂ ಅಂಗ್ಲ ಭಾಷೆಗಳಲ್ಲಿ ಅಥವಾ ತಮ್ಮ ಮನೆಯ ಮಾತೃ ಭಾಷೆಯಲ್ಲಿ ಆಕರ್ಷಕವಾದ ಕಥೆಗಳನ್ನು ಹೇಳಲು ಪ್ರೇರೇಪಿಸುವುದು. ಇದರಿಂದಾಗಿ ಮಕ್ಕಳಲ್ಲಿ ಹಾಗೂ ಸಮುದಾಯದ ಸದಸ್ಯರಲ್ಲಿ ಕುತೂಹಲವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ನೈತಿಕ ಹಾಗೂ ಕಾಲ್ಪನಿಕವಾಗಿ ಕಥೆಗಳನ್ನು ಸೃಜಿಸುವುದರಿಂದ ಮಕ್ಕಳಲ್ಲಿ ಕೆಲ್ಪನಾ ಶಕ್ತಿ ಬೆಳವಣಿಗೆಗೆ ಅವಕಾಶ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಅಥವಾ ಇತರೆ ಭಾಷೆಗಳ ಅನಿಮೆಟೆಟ್ ಕಥೆಗಳನ್ನು ಪ್ರದರ್ಶಿಸಲು ಟ್ಯಾಬ್ಲೆಟ್ ಅಥವಾ ಪ್ರೊಜೆಕ್ಟರ್‌ಗಳನ್ನು ಬಳಸಿಕೊಳ್ಳುವುದು.

3.ಕೈಬರಹ ಮತ್ತು ಕ್ಯಾಲಿಗ್ರಫಿ

ಉತ್ತಮವಾದ ಸ್ನಾಯುಜನ್ಯ ಕೌಶಲ್ಯಗಳನ್ನು ಸುಧಾರಿಸಲು, ಅಚ್ಚುಕಟ್ಟಾಗಿ ಮತ್ತು ಸೃಜನಶೀಲವಾಗಿ ಅಕ್ಷರ/ಪದ/ವಾಕ್ಯ/ವಾಕ್ಯವೃಂದವನ್ನು ಬರೆಯಲು ಕೈಬರಹಕ್ಕಾಗಿಯೇ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿಕೊಳ್ಳುವುದು.

4.ಸಂತೋಷದಾಯಕ ಗಣಿತ –

ಸುತ್ತಮುತ್ತಲಿನ ಭೌತಿಕ ಪರಿಸರದಲ್ಲಿ ಲಭ್ಯವಾಗುವ ಮೂರ್ತ ವಸ್ತುಗಳ ಎಣಿಕೆ, ಶಾಲೆಯ ಒಳಾಂಗಣ/ಹೊರಾಂಗಣ ವಸ್ತುಗಳ ಎಣಿಕೆ, ಸ್ಥಳೀಯ ಸನ್ನಿವೇಶದ ವೆಸ್ತುಗಳ ಸಂಖ್ಯೆಗಳ ಎಣಿಕೆ, ವಿವಿಧ ಮಾದರಿಗಳ ಗುರುತಿಸುವಿಕೆ ಮತ್ತು ಸಮಸ್ಯೆ ಪರಿಹರಿಸುವಿಕೆಯೊಂದಿಗೆ ಸಂಖ್ಯಾ ಜ್ಞಾನದ ಆಟಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು.

5.ಟ್ರೆಷರ್ ಹಂಟ್/ ಮೆಮೊರಿ ಪರೀಕ್ಷೆ

ಹಣ್ಣುಗಳು, ತರಕಾರಿಗಳು, ಬಣ್ಣಗಳು, ತರಗತಿಯ ವಸ್ತುಗಳು ಹಾಗೂ ಇತ್ಯಾದಿಗಳ ಕ್ರಿಯಾಶೀಲತೆಯಲ್ಲಿ ಗುರುತಿಸುವಿಕೆ/ಜ್ಞಾಪಕ ಶಕ್ತಿಯ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.

6.ರಸ ಪ್ರಶ್ನೆ –

ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಮತ್ತು ಆರೋಗ್ಯ ಮತ್ತು ಪರಿಸರ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು, ಕೌಶಲಾಧಾರಿತ ಸಂಗತಿಗಳನ್ನು ಅಳವಡಿಸಿ ರಸ ಪ್ರಶ್ನೆಯ ವಿನ್ಯಾಸ ರೂಪಿಸಿಕೊಳ್ಳುವುದು. ಸ್ಥಳೀಯ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತೀ ಶಾಲೆಯಿಂದಲೂ ಮಕ್ಕಳು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. 04 ಸುತ್ತುಗಳಲ್ಲಿ ಸ್ಪರ್ಧೆಯನ್ನು ಮುಗಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಬೋನಸ್ ಸುತ್ತನ್ನು ಅಳವಡಿಸಿಕೊಳ್ಳಬಹುದು.

7.ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ

ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಕಥೆಗಳನ್ನು ಬರೆಯುವುದು, ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಸೇರಿ ಸಣ್ಣ ಕಥೆಗಳನ್ನು ಕಟ್ಟುವುದು, ಮೋಜಿನ ಆಟಗಳನ್ನು ರೂಪಿಸುವುದು ಇತ್ಯಾದಿ. ಈ ಬಗ್ಗೆ ಪೋಷಕರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸಿ ಕಾರ್ಯಪ್ರವೃತ್ತರಾಗುವಂತೆ ನೋಡಿಕೊಳ್ಳುವುದು.ಈ ವಲಯಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಇಬ್ಬರಿಗೂ ಒದಗಿಸುವುದು. ಉದಾ., ಫ್ಲಾಶ್‌ಕಾರ್ಡ್,ಪೇಪರ್, ಪೆನ್ನು, ಪೆನ್ಸಿಲ್, ಬಣ್ಣ ಇತ್ಯಾದಿ. .

ಇ) ಕಲಿಕಾ ಉತ್ಸವದ ಮಾದರಿ ವೇಳಾಪಟ್ಟಿ:

ಈ) ಕ್ಲಸ್ಟರ್ ಹಂತದ ಕಲಿಕಾ ಹಬ್ಬಕ್ಕೆ ನಿಗದಿಪಡಿಸಿರುವ ಅನುದಾನದ ಮೊತ್ತ ಮತ್ತು ವೆಚ್ಚ ಭರಿಸುವಿಕೆಯ ಕ್ರಮ: (ಬ್ಲಾಕ್‌ಗಳಿಗೆ ನಿಗದಿಪಡಿಸಿದ ಕಲಿಕಾ ಹಬ್ಬದ ಅನುದಾನವನ್ನು BEO ರವರಿಗೆ ಬಿಡುಗೆಡೆಗೊಳಿಸಲಾಗುವುದು.)

1. ಪ್ರತಿ ಕ್ಲಸ್ಟರ್‌ಗೆ ರೂ. 25000 /- ಮೊತ್ತದ ವೆಚ್ಚವನ್ನು ನಿಗದಿಪಡಿಸಿದೆ.

 

ಉ) ಕಲಿಕಾ ಹಬ್ಬ ಅನುಷ್ಟಾನದ ಮೇಲ್ವಿಚಾರಣೆ ಮತ್ತು ಅನುಪಾಲನೆಯ ಕ್ರಮಗಳು:

ದಿನಾಂಕ 01.02.2025 ರಿಂದ 10.02.2025 ರೊಳಗಾಗಿ ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಚಟುವಟಿಕೆಗಳನ್ನು ಹಮ್ಮಿಕೊಂಡು ಪೂರ್ಣಗೊಳಿಸುವುದು.

ಎಲ್ಲಾ ಡಯಟ್‌ಗಳ ಉಪನಿರ್ದೇಶಕರು (ಆಭಿವೃದ್ಧಿ) ಇವರು ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ಮೇಲ್ವಿಚಾರಣಾಧಿಕಾರಿಯಾಗಿದ್ದು, ದಿನಾಂಕ: 30.01.2025 ರೊಳಗಾಗಿ ತಮ್ಮ ತಾಲ್ಲೂಕುಗಳ ಕ್ಲಸ್ಟರ್ ಹಬ್ಬದ ದಿನಾಂಕಗಳನ್ನು ಜಿಲ್ಲಾವಾರು ತಾಲ್ಲೂಕುವಾರು ಕ್ರೂಡೀಕರಿಸಿ ಎಸ್.ಎಸ್.ಕೆ ಎನ್.ಇ.ಪಿ ಶಾಖೆಗೆ ಇ-ಮೇಲ್ ಮೂಲಕ ಕಡ್ಡಾಯವಾಗಿ ಸಲ್ಲಿಸುವುದು.

ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ರೂವಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯಾಗಿರುತ್ತಾರೆ.

ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸುವ ಮತ್ತು ಸಂಘಟಿಸುವ ನೋಡಲ್ ಅಧಿಕಾರಿ ಆಯಾಯ ಕ್ಲಸ್ಟರ್‌ನ CRP ಗಳೇ ಆಗಿರುತ್ತಾರೆ.

ಒಂದು ಕ್ಲಸ್ಟರ್‌ಗೆ 1 ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಒಳಗೊಂಡಂತೆ ಮಿತಿಯನ್ನು 100 ಮಕ್ಕಳಿಗೆ ನಿಗದಿಪಡಿಸಿದೆ. ಒಂದು ವೇಳೆ, ಆ ಕ್ಲಸ್ಟರ್‌ನಲ್ಲಿ ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯದ ಸದಸ್ಯರು, ಶಿಕ್ಷಣಾಸಕ್ತರು ಪರಸ್ಪರ ಕೈಜೋಡಿಸಿ ಸಹಕರಿಸಿದ್ದಲ್ಲಿ ಮಕ್ಕಳ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೂ ಪ್ರತಿ ಶಾಲೆಯಿಂದ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಭಾಗವಹಿಸಬಹುದಾಗಿದೆ.

ಕ್ಲಸ್ಟ‌ರ್ ಹಂತದ ಕಲಿಕಾ ಹಬ್ಬಕ್ಕಾಗಿ ದಿನಾಂಕವನ್ನು ನಿಗದಿಪಡಿಸಿದ ಮೇಲೆ ಸದರಿ ದಿನಾಂಕವನ್ನು ಪೂರ್ವಭಾವಿಯಾಗಿ ಆ ಕ್ಲಸ್ಟರ್‌ನ ಎಲ್ಲಾ ಶಾಲೆಗಳಿಗೆ ತಿಳಿಸುವುದು.

ಕ್ಲಸ್ಟ‌ರ್ ಶಾಲೆಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಶಾಲೆಗಳಿಂದ ಕಲಿಕಾ ಹಬ್ಬಕ್ಕೆ ಬರಬೇಕಾದ ವಿದ್ಯಾರ್ಥಿಗಳ ಸಂಖ್ಯೆಯ ಮಿತಿಯನ್ನು ನಿಗದಿಪಡಿಸುವುದು ಮತ್ತು ಆ ಶಾಲೆಗೆ ಮುಂಚಿತವಾಗಿ ತಿಳಿಸುವುದು.

ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಆಯೋಜಿಸುವ ಚಟುವಟಿಕೆಗಳ ಬಗ್ಗೆ FLN ಶಿಕ್ಷಕರಿಗೆ ಅರಿವು ಮೂಡಿಸುವುದು.

ಮಕ್ಕಳ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು. ಕಲಿಕಾ ಹಬ್ಬದಲ್ಲಿ ಮಕ್ಕಳ ಭಾಗವಹಿಸುವಿಕೆ ಮುಖ್ಯವಾಗಿದ್ದು, ಇತರ ಶಿಕ್ಷಣೇತರ ಚಟುವಟಿಕೆಗಳಿಗೆ ಆಸ್ಪದವಿರಬಾರದು.

ಹಬ್ಬದ ಕ್ರಿಯಾತ್ಮಕ ವಾತಾವರಣವನ್ನು ಕಿರು ವರದಿಯೊಂದಿಗೆ ದಾಖಲೀಕರಣಗೊಳಿಸುವುದು ಮತ್ತು ರಾಜ್ಯ ಹಂತಕ್ಕೆ ಸಲ್ಲಿಸುವುದು.

ಈ ಕಲಿಕಾ ಹಬ್ಬಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಲು ಸ್ಥಳೀಯ ಸಮುದಾಯದ ಹಿರಿಯರನ್ನು/ಸಾಧಕರನ್ನು/ ಜಿಲ್ಲಾ ಹಂತದ FLN/ನಲಿಕಲಿ ನೋಡಲ್ ಅಧಿಕಾರಿಗಳನ್ನು ಕೂಡ ಆಹ್ವಾನಿಸಬಹುದು.

ಸದರಿ ಸುತ್ತೋಲೆಯೊಂದಿಗೆ ಜಿಲ್ಲೆಗಳಿಗೆ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ನಿರ್ವಹಿಸಲು ಪೂರ್ಣ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಉಪನಿರ್ದೇಶಕರು(ಆಡಳಿತ) ಈ ಕೂಡಲೇ ಸದರಿ ಅನುದಾನವನ್ನು ತಾಲ್ಲೂಕುಗಳಿಗೆ ಬಿಡುಗಡೆ ಮಾಡಿ ಕಲಿಕಾ ಹಬ್ಬವನ್ನು ಕ್ಲಸ್ಟರ್ ಹಂತದಲ್ಲಿ ಆಯೋಜಿಸಲು ಅನುಕೂಲಿಸುವಂತೆ ಕ್ರಮವಹಿಸಲು ಸೂಚಿಸಿದೆ. ಕಲಿಕಾ ಹಬ್ಬದ ವೆಚ್ಚವನ್ನು ನಿಪುಣ್ ಭಾರತ್ ಚಟುವಟಿಕೆಯಡಿ 5.1.1 – NIPUN Bharat Mission ಚಟುವಟಿಕೆಯಡಿ ಭರಿಸಲಾಗುತ್ತಿದೆ.

ವೆಚ್ಚದ ಪ್ರಗತಿಯನ್ನು PFMS ನಲ್ಲಿ Line Item No: F.01.13.01-LEP Class 1-11 ರಲ್ಲಿ ಇಂದಿಕರಿಸುವುದು. ಕಲಿಕಾ ಹಬ್ಬ ಕಾರ್ಯಕ್ರಮದ ಜಿಲ್ಲಾವಾರು ಪ್ರಗತಿ ಮಾಹಿತಿಯನ್ನು ಹಾಗೂ ಫೋಟೊ ಸಮೇತ ವರದಿಯನ್ನು ದಿನಾಂಕ 10-02-2025 ರೊಳಗೆ sskpoecell@gmail.com ಗೆ ಸಲ್ಲಿಸುವುದು.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!