PMDDKY: ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ,100 ಜಿಲ್ಲೆಗಳ ಆಯ್ಕೆ,ಆಯ್ಕೆಗೆ ಮಾನದಂಡವೇನು?
PMDDKY: ಸರಕಾರವು ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯಡಿಯಲ್ಲಿ ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 100 ಕೃಷಿ ಜಿಲ್ಲೆಗಳ ಜಿಲ್ಲೆಗಳ ಪಟ್ಟಿಯನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಉತ್ತರಪ್ರದೇಶದಿಂದ ಅತಿ ಹೆಚ್ಚು ಎಂದರೆ 12 ಜಿಲ್ಲೆಗಳು ಸ್ಥಾನ ಪಡೆದಿವೆ.
ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, 100 ಕೇಂದ್ರ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅವರು ತಮ್ಮ ತಮ್ಮ ಜಿಲ್ಲೆಗಳ ಯೋಜನಾ ಪ್ರಗತಿಯನ್ನು ನಿಗಾ ಇಡುವ ಕೆಲಸವನ್ನು ನಿರ್ವಹಿಸಲಿದ್ದಾರೆ.
ಯಾವ ರಾಜ್ಯದಿಂದ ಎಷ್ಟು ಜಿಲ್ಲೆಗಳು?:
ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರವು 9 ಜಿಲ್ಲೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ತಲಾ 8 ಜಿಲ್ಲೆಗಳನ್ನೂ ಚುನಾವಣೆ ಎದುರಿಸುತ್ತಿರುವ ಬಿಹಾರ ರಾಜ್ಯವು 7 ಜಿಲ್ಲೆಗಳನ್ನೂ ಹೊಂದಿದೆ. ಆಂಧ್ರಪ್ರದೇಶ, ಗುಜರಾತ್, ಒಡಿಶಾ, ತಮಿಳುನಾಡು, ತೆಲಂಗಾಣ 8 ಮತ್ತು ಪಶ್ಚಿಮ ಬಂಗಾಳ ತಲಾ 4 ಜಿಲ್ಲೆಗಳನ್ನೂ ಒಳಗೊಂಡಿವೆ.
ಆಯ್ಕೆಗೆ ಮಾನದಂಡವೇನು?:
ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಕೃಷಿ ಉತ್ಪಾದಕತೆ ಕಡಿಮೆ ಇರುವುದು, ಬೆಳೆ ಚಕ್ರದ ತೀವ್ರತೆ ಮಧ್ಯಮ ಮಟ್ಟದಲ್ಲಿರುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಪಡೆದಿರುವ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆಯು ಪ್ರಾದೇಶಿಕ ಸಮತೋಲನದ ಅಭಿವೃದ್ಧಿ ಮತ್ತು ಕೃಷಿ ವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿದೆ.
ಕೃಷಿ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಯೋಜನೆ ರೂಪಿಸಲಾಗಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಶಾಶ್ವತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಬೆಳೆ ಸಂಗ್ರಹಣೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಬಲಪಡಿಸುವುದು, ನೀರಾವರಿ ವ್ಯವಸ್ಥೆ ಸುಧಾರಿಸುವುದು ಮತ್ತು ರೈತರಿಗೆ ದೀರ್ಘ ಮತ್ತು ಅಲ್ಪಾವಧಿಯ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
