Preparatory Examination- ದ್ವಿತೀಯ ಪಿಯುಸಿಗೆ 2 ಪೂರ್ವಸಿದ್ಧತಾ ಪರೀಕ್ಷೆ
Preparatory Examination– ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಎರಡು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಜತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆ ಮತ್ತು ದಾಖಲಾತಿ ಹೆಚ್ಚಳದ ನಿಟ್ಟಿನಲ್ಲಿ ಇಲಾಖೆ ಹಲವು ಹೊಸ ಪ್ರಯೋಗಗಳಿಗೆ ಮುಂದಾಗಿದೆ.
2024-25ನೇ ಸಾಲಿನ ದ್ವಿತೀಯ ಪಿಯು ಮೊದಲ ಪರೀಕ್ಷೆಯಲ್ಲಿ ಶೇ.69.16 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪಿಯು ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಒಂದೆಡೆ ಫಲಿತಾಂಶ ಕುಸಿಯುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರತಿಯಾಗಿ ಖಾಸಗಿ ಕಾಲೇಜುಗಳಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಇಲಾಖೆ, 2025-26ರ ಸಾಲಿನ ಫಲಿತಾಂಶ ಹೆಚ್ಚಿಸಲು ಹರಸಾಹಸ ಪಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಫೆ.28ರಿಂದ ಮಾ.17ರವರೆಗೆ ಹಾಗೂ ಎರಡನೇ ಅಂತಿಮ ವಾರ್ಷಿಕ ಪರೀಕ್ಷೆ ಏ.25ರಿಂದ ಮೇ 9ರವರೆಗೆ ನಡೆಯಲಿದೆ.
ಫಲಿತಾಂಶ ಹೆಚ್ಚಳಕ್ಕೆ ಪೈಪೋಟಿ:
ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಪಠ್ಯಕ್ರಮ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಪ್ರಾಯೋಗಿಕ ಪರೀಕ್ಷೆ ನಡೆಸುವ ಮೂಲಕ ಫಲಿತಾಂಶ ಹೆಚ್ಚಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇದೇ ಮೊದಲ ಬಾರಿಗೆ ಜ.2ರಿಂದ ಜ.14ರವರೆಗೆ ಮೊದಲ ಹಾಗೂ ಜ.19ರಿಂದ 28ರವರೆಗೆ ಎರಡನೇ ಪೂರ್ವಸಿದ್ಧತಾ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ವಾರ್ಷಿಕ ಪರೀಕ್ಷೆ ಆರಂಭಕ್ಕೆ ಇನ್ನೂ ತಿಂಗಳು ಇರುವಾಗಲೇ ಈ ಪರೀಕ್ಷೆಗಳ ಫಲಿತಾಂಶದಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಸಾಧನೆ ತಿಳಿಯಲಿದೆ.
ಪ್ರಮುಖಾಂಶಗಳು:
» ಸ್ಯಾಟ್ಸ್ ಮೂಲಕ ಶೈಕ್ಷಣಿಕ ವಿವರ ಸಂಗ್ರಹ
» ನಿತ್ಯ ಒಂದು ತಾಸು ವಿಶೇಷ ತರಗತಿ
» ಹಿಂದುಳಿದವರಿಗೆ ವಿಶೇಷ ಕ್ರಿಯಾ ಯೋಜನೆ
» ವಿಷಯ ತಜ್ಞರಿಂದ ತರಗತಿ ಆಯೋಜನೆ
» ವಿದ್ಯಾರ್ಥಿಗಳೊಂದಿಗೆ ಗುಂಪು ಚರ್ಚೆ
» ಘಟಕ ಪರೀಕ್ಷೆ ನಡೆಸಿ ವಿಶ್ಲೇಷಣೆ
» ಪಾಲಕರೊಂದಿಗೆ ತಿಂಗಳಿಗೊಮ್ಮೆ ಸಭೆ
ಬೋಧಕ ಸಿಬ್ಬಂದಿ ಕೊರತೆ:
ರಾಜ್ಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಏಳು ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದು, ಈ ಪೈಕಿ 2.43 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿದ್ದಾರೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಏಳು ಸಾವಿರ ಕಾಯಂ ಉಪನ್ಯಾಸಕರಷ್ಟೇ ಇದ್ದು, ತೀವ್ರ ಕೊರತೆಯಿದೆ. ಹೀಗಾಗಿ ಬೋಧನೆಗೆ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಸಂಕಷ್ಟ:
ಸರ್ಕಾರಿ ಕಾಲೇಜುಗಳಲ್ಲಿ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ಸಾಧಾರಣ ಮಟ್ಟದಲ್ಲಿರುವ ಮಕ್ಕಳಿಗಾಗಿ ನಿತ್ಯ ಮಧ್ಯಾಹ್ನ 3.30ರಿಂದ 4.30ರವರೆಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಆದರೆ, ಬಸ್‌ಗಳ ಕೊರತೆಯಿಂದಾಗಿ ನಿತ್ಯ ನಡೆಯುವ ಈ ವಿಶೇಷ ತರಗತಿಗೆ ಕೆಲ ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ.
ಸುಧಾರಣೆಗೆ ಏಳು ಸೂತ್ರ:
ಫಲಿತಾಂಶ ಹೆಚ್ಚಳಕ್ಕಾಗಿ ಇಲಾಖೆ ಕೆಲ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ. ಸ್ಮಾಟ್ಸ್ ಮೂಲಕ ವಿದ್ಯಾರ್ಥಿಯ ಶೈಕ್ಷಣಿಕ ವಿವರ ಪಡೆಯುವುದು, ನಿತ್ಯ ಒಂದು ತಾಸು ವಿಶೇಷ ತರಗತಿ ನಡೆಸುವುದು, ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ಕ್ರಿಯಾ ಯೋಜನೆ ರೂಪಿಸುವುದು, ವಿಷಯ ಪರಿಣತರಿಂದ ತರಗತಿ ಆಯೋಜನೆ, ವಿದ್ಯಾರ್ಥಿಗಳೊಂದಿಗೆ ಗುಂಪು ಚರ್ಚೆ, ಘಟಕ ಪರೀಕ್ಷೆ ನಡೆಸಿ ವಿಶ್ಲೇಷಣೆ ಮಾಡುವುದು ಹಾಗೂ ಪಾಲಕರೊಂದಿಗೆ ತಿಂಗಳಿಗೊಮ್ಮೆ ಸಭೆ ನಡೆಸುವುದು ಇವುಗಳಲ್ಲಿ ಸೇರಿವೆ.
“ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಹೆಚ್ಚಳಕ್ಕೆ ಇಲಾಖೆಯಿಂದ ನಾನಾ ಕ್ರಿಯಾ ಯೋಜನೆ ರೂಪಿಸಲಾಗಿದೆ. ಸರ್ಕಾರದಿಂದ ಪ್ರಪ್ರಥಮವಾಗಿ ಎರಡು ಪೂರ್ವಭಾವಿ ಸಿದ್ಧತೆ ಪರೀಕ್ಷೆ ಆಯೋಜನೆಯಿಂದ ಫಲಿತಾಂಶ ಹೆಚ್ಚಿಸುವ ಗುರಿಯಿದೆ.”
| ಲಕ್ಷ್ಮಣ ಹಳ್ಳದಮನಿ ಡಿಡಿಪಿಯು, ಬಳ್ಳಾರಿ
