Reservation Update: ಪರಿಶಿಷ್ಟ ಜಾತಿ ಮೀಸಲಾತಿ 17% ರಿಂದ 15%ಕ್ಕೆ – ಒಳಮೀಸಲಾತಿ ಜಾರಿ
Reservation Update: ಮಾನ್ಯ ಉಚ್ಚ ನ್ಯಾಯಾಲಯದ ಮದ್ಯಂತರ ಆದೇಶದನ್ವಯ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 17 ರಿಂದ ಶೇ15ಕ್ಕೆ ಸೀಮಿತ ಗೊಳಿಸಿ ಒಳಮೀಸಲಾತಿ ಜಾರಿಗೊಳಿಸುವ ಇದೀಗ ಆದೇಶ ಪ್ರಕಟ.
ಪ್ರಸ್ತಾವನೆ:
1. ಮೇಲೆ (3)ರಲ್ಲಿ ಓದಲಾದ ದಿನಾಂಕ 27.02.2026ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ, 2022ನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ, ದಿನಾಂಕ 27.11.2025ರ ನಂತರದಲ್ಲಿ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 1 ಸೇಹಿಮ 2022, ದಿನಾಂಕ: 28-12-2022ರ ಆದೇಶದ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ಆದೇಶ ಮತ್ತು ರೋಸ್ಟರ್ ಬಿಂದುಗಳಂತೆ (ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 8 ಸೇಹಿಮ 1995, ದಿನಾಂಕ:20.06.1995 ರನ್ವಯ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ) ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸುವಂತೆ ಎಲ್ಲಾ ನೇಮಕಾತಿ/ಆಯ್ಕೆ ಪ್ರಾಧಿಕಾರಗಳಿಗೆ ಸೂಚಿಸಲಾಗಿರುತ್ತದೆ.
ಅದಕ್ಕೆ ಒಳಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 02 ಸೇಹಿಮ 2026, ಬೆಂಗಳೂರು, ದಿನಾಂಕ:27.04.2026
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 1 ಸೇಹಿಮ 2026, ದಿನಾಂಕ 27.02.2026ರ ಆದೇಶದಲ್ಲಿ ನೀಡಲಾಗಿರುವ ಸೂಚನೆಗಳನ್ನು ಮುಂದುವರೆಸುತ್ತಾ ಈ ಕೆಳಕಂಡಂತೆ ಆದೇಶಿಸಿದೆ.
1. ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 200448/2025ರಲ್ಲಿ ನೀಡಿರುವ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ, ಈಗಾಗಲೇ ದಿನಾಂಕ:26.02.2026ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ದಿನಾಂಕ:20.06.1995ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 8 ಸೇಹಿಮ 1995ರನ್ವಯ 50% ಮೀಸಲಾತಿ ಪ್ರಮಾಣವನ್ನು ತಾತ್ಕಾಲಿಕವಾಗಿ ಅಳವಡಿಸಿಕೊಂಡು, ಮಾನ್ಯ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು, ನೇಮಕಾತಿ ಮುಂದುವರೆಸಲು ನಿರ್ಧರಿಸಿರುವುದರಿಂದ, ಅದರಂತೆ ನೇಮಕಾತಿ ಹಾಗೂ ಪ್ರವೇಶಾತಿಗಳಲ್ಲಿ ಪರಿಶಿಷ್ಟ ಜಾತಿಗೆ ನಿಗದಿಪಡಿಸಿರುವ ಶೇಕಡಾ 15 ಮೀಸಲಾತಿಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಗಳಿಗೆ ಒಳಮೀಸಲಾತಿಯನ್ನು ಕ್ರಮವಾಗಿ 5.25, 5.25, 4.5 ಪ್ರಮಾಣದಲ್ಲಿ ಅನುಷ್ಠಾನಗೊಳಿಸತಕ್ಕದ್ದು.
ಪ್ರವರ್ಗ-ಸಿ ಗೆ ಲಭ್ಯವಾಗುವ ಹುದ್ದೆಗಳಲ್ಲಿ/ಪ್ರವೇಶಾತಿ ಸೀಟುಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು/ಪ್ರವೇಶಾತಿ ಸೀಟುಗಳನ್ನು ಪರಿಶಿಷ್ಟ ಜಾತಿಗಳಲ್ಲಿನ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿರಿಸುವುದು.
ಒಂದು ವೇಳೆ, ಈ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಸೇರಿದವರು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಹಾಗೂ ಪ್ರವೇಶಾತಿ ಸೀಟುಗಳನ್ನು ಪ್ರವರ್ಗ “ಸಿ” ಯ ಇತರೆ ಜಾತಿಗಳಿಗೆ ಲಭ್ಯಗೊಳಿಸತಕ್ಕದ್ದು;
2. ನೇಮಕಾತಿಗಳಲ್ಲಿ ಮೇಲಿನ ಮೀಸಲಾತಿ ಪ್ರಮಾಣವನ್ನು ಅನುಷ್ಠಾನಗೊಳಿಸಲು 400 ಬಿಂದುಗಳ ವರ್ತುಲಗಳನ್ನು ಅನುಪಾಲಿಸತಕ್ಕದ್ದು;
3. ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಾಗುತ್ತಿದ್ದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ಪರಿಶಿಷ್ಟ ಜಾತಿ ಸಾಮಾನ್ಯ ಎಂದು ಪರಿಗಣಿಸಿ, ನೇಮಕಾತಿ ಮಾಡತಕ್ಕದ್ದು;
4. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 02 ಸೇಹಿಮ 2025 ದಿನಾಂಕ:03.09.2025ರನ್ವಯ ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳನ್ನು ಅಥವಾ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 01 ಸೇಹಿಮ 2026 ದಿನಾಂಕ:27.02.2026 ರಂತೆ ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಮೇಲಿನಂತೆ ಒಳಮೀಸಲಾತಿ ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ, ನೇಮಕಾತಿಗಳನ್ನು ಮಾಡುವುದು;
5. ಮುಂದೆ ಮಾನ್ಯ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹೆಚ್ಚಿಸಿರುವ ಶೇಕಡಾ 24ರಷ್ಟು ಮೀಸಲಾತಿ ಪ್ರಮಾಣವನ್ನು ಒಪ್ಪಿದಲ್ಲಿ, ಶೇಕಡಾ 6 ರಷ್ಟು ಹುದ್ದೆಗಳನ್ನು ಬ್ಯಾಕ್ಲಾಗ್ ಹುದ್ದೆಗಳೆಂದು ಪರಿಗಣಿಸಿ ನೇಮಕಾತಿ ಮಾಡುವುದು;
6. ಈಗಾಗಲೇ ಆರ್ಥಿಕ ಇಲಾಖೆಯು ಅನುಮೋದನೆ ನೀಡಿರುವ 56,432 ಹುದ್ದೆಗಳ ನೇರ ನೇಮಕಾತಿಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದೆ.
