Service Book Lost? ಸರ್ಕಾರಿ ನೌಕರರಿಗೆ ಪುನರ್‌ರಚನೆ ಮಾಡುವ ಕ್ರಮಗಳು
Service Book Lost?: ರಾಜ್ಯ ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ಗ್ರೂಪ್ ಡಿ ವರ್ಗವು ಒಳಗೊಂಡಂತೆ ಯಾವುದೇ ಸರ್ಕಾರಿ ನೌಕರರ ಸೇವಾ ಪುಸ್ತಕವನ್ನು ಪುನಃ ತಯಾರಿಸಬಹುದಾಗಿದೆ.
ಮೊದಲಿಗೆ..
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 27 ಇಳಿಸು 2012, ದಿನಾಂಕ:16.03.2021 ರ ಅಧಿಕೃತ ಜ್ಞಾಪನ ಪತ್ರದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರರ ಸೇವಾ ಪುಸ್ತಕಗಳನ್ನು ದ್ವಿಪ್ರತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ತಿಳಿಸಲಾಗಿರುತ್ತದೆ.
1. ಅಧಿಕೃತ ಜ್ಞಾಪನ ಸಂಖ್ಯೆ:- ಜಿಎಡಿ 64 ಎಂಎಆರ್ 71 ದಿನಾಂಕ:19.1.1972.
2. ಅಧಿಕೃತ ಜ್ಞಾಪನ ಸಂಡಿಪಿಎಆರ್ 19 ಎಎಆರ್ 84 ದಿನಾಂಕ:19.6.1984.
ಮೇಲೆ ನಮೂದಿಸಲಾಗಿರುವ 2 ಅಧಿಕೃತ ಜ್ಞಾಪನಗಳಲ್ಲಿ ಸರ್ಕಾರಿ ನೌಕರರ ಸೇವಾ ಪುಸ್ತಕಗಳನ್ನು ದ್ವಿ-ಪ್ರತಿಯಲ್ಲಿ ನಿರ್ವಹಿಸಿ, 2ನೇ ಪ್ರತಿಯನ್ನು ನೌಕರರಿಗೆ ಉಚಿತವಾಗಿ ಒದಗಿಸುವಂತೆ ಮತ್ತು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಸೇವಾ ಪುಸ್ತಕದ 2ನೇ ಪ್ರತಿಯಲ್ಲಿಯೂ ಸಹ ಕಾಲಕಾಲಕ್ಕೆ ಮಾಡಬೇಕಾದ ವಿವರಗಳನ್ನು ದಾಖಲಿಸಿ ಸೇವಾ ಪುಸ್ತಕವನ್ನು ಸಜ್ಜುಗೊಳಿಸಿ (ಅಪ್‌ಡೇಟ್) ಇಡಬೇಕೆಂದು ಸೂಚಿಲಾಗಿರುತ್ತದೆ.
ಸರ್ಕಾರಿ ನೌಕರರ ಸೇವಾ ಪುಸ್ತಕಗಳು, ಕಾಣೆಯಾಗಿರುವ ಕಾರಣದಿಂದ ‘ಡಿ’ ವರ್ಗದ ನೌಕರರು ಸೇರಿದಂತೆ ಸರ್ಕಾರಿ ನೌಕರರ ಸೇವಾ ಪುಸ್ತಕಗಳನ್ನು ದ್ವಿಪ್ರತಿಯಲ್ಲಿ ತಯಾರಿಸಿ, ಕಾಲಕಾಲಕ್ಕೆ ವಿವರಗಳನ್ನು ದಾಖಲಿಸಿ ಸಜ್ಜುಗೊಳಿಸಿ, ಒದಗಿಸುವಂತೆ ಹಾಗೂ ಈ ಬಗ್ಗೆ ಲೋಪ ಉಂಟಾಗಿ ನಿವೃತ್ತ ಸರ್ಕಾರಿ, ‘ನೌಕರರಿಗೆ ತೊಂದರೆ ಉಂಟಾದಲ್ಲಿ ಇಲಾಖಾ ಮುಖ್ಯಸ್ಥರ ಮೇಲೆ ಜವಾಬ್ದಾರಿ ನಿಗದಿಪಡಿಸಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಹೇಳಲಾಗಿರುತ್ತದೆ.
▪️ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ಮತ್ತು ನಿಗಮ / ಮಂಡಳಿಗಳಲ್ಲಿಯೇ ನೌಕರರ ಸೇವಾ ಪುಸ್ತಕವನ್ನು ದ್ವಿಪ್ರತಿಯಲ್ಲಿ ತಯಾರಿಸಿ 2ನೇ’ ಪ್ರತಿಯನ್ನು ನೌಕರರಿಗೆ ಉಚಿತವಾಗಿ ನೀಡುವಂತೆ ಹಾಗೂ ಸದರಿ ಸೇವಾ ಮಸ್ತಕದ 2ನೇ ಪ್ರತಿಯಲ್ಲಿಯೂ ಕಾಲ-ಕಾಲಕ್ಕೆ ವಿವರಗಳನ್ನು ದಾಖಲಿಸುವಂತೆ ಸೂಚಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
ಕೆಲವು ಸಂದರ್ಭದಲ್ಲಿ ಗೊತ್ತೋ ಗೊತ್ತಿಲ್ಲದಂತೆಯೋ ಸರ್ಕಾರಿ ನೌಕರನ ಸೇವಾ ಪುಸ್ತಕ ಕಳೆದು ಹೋಗಿರುವ ಬಗ್ಗೆ ಅಥವಾ ಕೈತಪ್ಪಿನಿಂದಾಗಿ ಮರೆಯಾಗಿರುವ ಬಗ್ಗೆ ಹೀಗೆ ಬೇರೆ ಕಾರಣಗಳಿಂದ ಸೇವಾ ಪುಸ್ತಕ ಇಲ್ಲವಾದಲ್ಲಿ ಅದು ಕಛೇರಿಯ ಮುಖ್ಯಸ್ಥರ ಗಮನಕ್ಕೆ ಬಂದ ತಕ್ಷಣ ಈ ಬಗ್ಗೆ ಎಚ್ಚೆತ್ತುಕೊಂಡು ನೌಕರನ ಸೇವಾ ಪುಸ್ತಕವನ್ನು ಪುನರ್ ರಚಿಸುವ ಬಗ್ಗೆ ಸೂಕ್ತ ಕ್ರಮಬಹಿಸುವುದು ಬಹಳ ಮುಖ್ಯವಾಗುತ್ತದೆ.
ಇಂತಹ ಸಂದರ್ಭದಲ್ಲಿ ನೌಕರನ ಸೇವಾ ಪುಸ್ತಕವನ್ನು ಹೇಗೆ ಪುನರ್ ರಚಿಸಬೇಕು ಎಂಬ ಬಗ್ಗೆ ಸರ್ಕಾರಿ ನಿಯಮಗಳನ್ವಯ ತಿಳಿದುಕೊಳ್ಳೋಣ.
ಕರ್ನಾಟಕ ನಾಗರೀಕ ಸೇವಾ ನಿಯಮ-1958ರ ನಿಯಮ….
▪️ನಿಯತಕಾಲಿಕ (Periodical Inspections)
* ನಿಯಮ 415 ರನ್ವಯ:-
1. ಕಛೇರಿಗಳ ಪರಿವೀಕ್ಷಣೆ ನಡೆಸುವ ಸರ್ಕಾರಿ ನೌಕರರು ಆ ಕಛೇರಿಗಳಲ್ಲಿ ನಿರ್ವಹಿಸಿಕೊಂಡು ಬಂದಿರುವ ಸೇವಾಪುಸ್ತಕಗಳ ಪರಿವೀಕ್ಷಣೆ ಮಾಡುವುದು ಅವರ ಕರ್ತವ್ಯ. ಅವುಗಳನ್ನು ಅಂದಂದಿನ ದಿನಾಂಕದವರೆಗೆ ಸರಿಯಾಗಿ ನಿರ್ವಹಿಸಲಾಗಿದೆ, ನಮೂದುಗಳನ್ನು ಸರಿಯಾಗಿ ಮಾಡಲಾಗಿದೆ ಮತ್ತು ಅವುಗಳನ್ನು ದೃಢೀಕರಿಸಲಾಗಿದೆ. ಸತ್ಯಾಪನೆಯನ್ನು ಸಮರ್ಪಕ ರೀತಿಯಲ್ಲಿ ಮಾಡಲಾಗಿದೆ ಮತ್ತು ಅಗತ್ಯವಾಗಿರುವ ವಿವರಣೆ ಮತ್ತು ಸಾಕ್ಷ್ಯಗಳನ್ನು ಪಡೆಯಲಾಗಿದೆ ಮತ್ತು ಕಛೇರಿಯ ಮುಖ್ಯಾಧಿಕಾರಿಗಳು ಸತ್ಯಾಪನೆಯ ಬಗ್ಗೆ ಪ್ರಮಾಣಪತ್ರಗಳನ್ನು ನಮೂದಿಸಿದ್ದಾರೆ ಎಂಬ ವಿಷಯಗಳನ್ನು ನೋಡುವುದು ಅವರ ಕರ್ತವ್ಯ.
2. ಸೇವಾದಾಖಲೆಯ ದ್ವಿಪ್ರತಿ ಪುಸ್ತಕವನ್ನು ಸಕ್ಷಮ ಪ್ರಾಧಿಕಾರಿಯು ಮಹಾಲೇಖಪಾಲರ ಕಛೇರಿಗೆ ಕಳುಹಿಸಬೇಕಿದ್ದಲ್ಲಿ, ಮೂಲ ಸೇವಾ ಪುಸ್ತಕವು, ಸಕಲ ಪ್ರಯತ್ನಗಳನ್ನು ಮಾಡಿದ್ದಾಗ್ಯೂ ಕಳುವಿನಿಂದಾಗಿ ಅಥವಾ ನಾಶಪಡಿಸಿರುವುದರಿಂದ ಅಥವಾ ಕೈಮರೆತಿಟ್ಟು ಕಂಡುಹಿಡಿಯಲಾಗದಂತಾಗಿ ಸಂಪೂರ್ಣವಾಗಿ ಕಳೆದುಹೋಗಿದೆಯೆಂಬುದನ್ನು ಖಾತ್ರಿಪಡಿಸಿಕೊಂಡ ನಂತರವೇ ಕಳುಹಿಸತಕ್ಕದ್ದು, ತಪಾಸಣಾ ಕಾರ್ಯಕ್ಕಾಗಿ ಸೇವಾ ದಾಖಲೆಯ ದ್ವಿಪ್ರತಿ ಪುಸ್ತಕವನ್ನು ಬಳಸಲು ಸಕ್ಷಮ ಪ್ರಾಧಿಕಾರಿಯ ಔಪಚಾರಿಕ ಅನುಮೋದನೆಯನ್ನು ಬರವಣಿಗೆ ಮೂಲಕ ಪಡೆಯತಕ್ಕದ್ದು.
3. ಸೇವಾದಾಖಲೆಯ ದ್ವಿಪ್ರತಿ ಪುಸ್ತಕವನ್ನು ಆಧರಿಸಿ ಪಿಂಚಣಿಯನ್ನು ಇತ್ಯರ್ಥಪಡಿಸಿದ್ದಲ್ಲಿ ಈ ಕ್ರಮವನ್ನು ಅಳವಡಿಸಿ ಪಾವತಿ ಮಾಡಲಾದ ಯಾವುದೇ ಹೆಚ್ಚುವರಿ ಪಿಂಚಣಿ ಮೊತ್ತವನ್ನು ಸರ್ಕಾರಿ ನೌಕರನಿಂದ/ಳಿಂದ ಹಿಂದಿರುಗಿಸುವ ಕುರಿತು ಸದರಿ ನೌಕರನಿಂದ/ಳಿಂದ ಒಂದು ಮುಚ್ಚಳಿಕೆಯನ್ನು ಪಡೆದುಕೊಳ್ಳತಕ್ಕದ್ದು.
4. ಮೂಲ ಸೇವಾದಾಖಲೆ ಪುಸ್ತಕವನ್ನು ತದನಂತರ ಪತ್ತೆ ಹಚ್ಚಲಾದಲ್ಲಿ, ಅದನ್ನು ತಕ್ಷಣವೇ ದ್ವಿಪ್ರತಿ ಸೇವಾದಾಖಲೆ ಪುಸ್ತಕದೊಂದಿಗೆ ತಾಳೆ ನೋಡುವುದಕ್ಕೆ ಮತ್ತು ಅವಶ್ಯವಿದ್ದಲ್ಲಿ ಕೈಮುಗಳ ಪರಿಷ್ಕರಣ ಕುರಿತು ತಪಾಸಣಾ ಮೇಲ್ಮುದ್ರೆ ನಮೂದಿಸಲು ಆಡಿಟ್ ಕಛೇರಿಗೆ ಕಳುಹಿಸತಕ್ಕದ್ದು.
5. ನ್ಯಾಯಸಮ್ಮತವಾದ ಕಾರಣಗಳಿಂದಾಗಿ ನಿವೃತ್ತಿಯ ದಿನಾಂಕದಿಂದ ಆರು ತಿಂಗಳೊಳಗಾಗಿ ನೇವಾದಾಖಲೆ ಪುಸ್ತಕದ ಪುನರ್ ರಚನೆಯನ್ನು ಮಾಡಲು ಸಾಧ್ಯವಾಗದಿದ್ದಲ್ಲಿ, ಕಛೇರಿ ಮುಖ್ಯಸ್ಥರು ನಿವೃತ್ತಿ ವೇತನ ದಾಖಲೆಗಳಲ್ಲಿ ನಿವೃತ್ತ ನೌಕರನ ಜನ್ಮ ದಿನಾಂಕ, ಕರ್ತವ್ಯಕ್ಕೆ ಹಾಜರಾದ ದಿನಾಂಕ ಮತ್ತು ನಿವೃತ್ತಿ ದಿನಾಂಕ ಹಾಗೂ ನಿವೃತ್ತ ನೌಕರನ ನಿವೃತ್ತ ಪೂರ್ವಸೇವೆಯ ಕೊನೆಯ 10 ತಿಂಗಳ ವೇತನದ ವಿವರಗಳನ್ನು ಅದೇ ಅವಧಿಯ ಮುಂದೋಟದ (Baraward) ಉದ್ಭತ ಭಾಗವನ್ನು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಇತರ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಕಳುಹಿಸಿಕೊಡುವುದು. ಕಳೆದು ಹೋದ ಅಥವಾ ಕೈಮರೆತಿಟ್ಟ ಸೇವಾ ದಾಖಲೆ ಪುಸ್ತಕವನ್ನು ಪುನರ್ರಚನೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾಗ್ಯೂ ಅವಶ್ಯವಿರುವ ದಾಖಲೆಗಳು/ಮಾಹಿತಿಗಳು ಒದಗಿಬರದ ಕಾರಣ ಅದನ್ನು ಪುನರ್‌ರಚಿಸಲು ಸಾಧ್ಯವಾಗಿಲ್ಲವೆಂಬ ಬಗ್ಗೆಯೂ ಕಛೇರಿ ಮುಖ್ಯಸ್ಥರು ದೃಢೀಕರಿಸತಕ್ಕದ್ದು, ಮಹಾಲೇಖಪಾಲರು ಸೇವಾ ದಾಖಲೆ ಪುಸ್ತಕದ ಬದಲಾಗಿ ಈ ದೃಢೀಕರಣವನ್ನು ಸ್ವೀಕರಿಸಿ, ಆ ಮಾಹಿತಿಗಳ ಆಧಾರದ ಮೇಲೆ ನಿವೃತ್ತಿ ವೇತನ ಪ್ರಕರಣವನ್ನು ಅಂತಿಮಗೊಳಿಸುವುದು, ಸೇವಾ ದಾಖಲೆ ಪುಸ್ತಕ ಕಳೆದುಹೋದ ಅಥವಾ ಕೈಮರೆತಿಟ್ಟ (Mislaid) ಸಂಬಂಧದಲ್ಲಿ ರಜೆಯ ವಿವರ ಅಥವಾ ಇನ್ನಾವುದೇ ದಾಖಲೆಗಳನ್ನು ಕೊಡುವಂತೆ ಮಹಾಲೇಖಪಾಲರು ಒತ್ತಾಯಿಸುವುದಿಲ್ಲ.
ಈ ಮೇಲೆ ತಿಳಿಸಿರುವ ನಿಯಮಗಳನ್ವಯ ಕ್ರಮವಹಿಸುವುದು ಅಗತ್ಯವಾಗಿರುತ್ತದೆ.
▪️ಆರ್ಥಿಕ ಇಲಾಖೆಯು ಹೊರಡಿಸಿರುವ ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಕ್ರಮಾಂಕ: ಆ.ಇ.(ವಿ) 3 ಸಿಪಿಪಿ 84, ದಿನಾಂಕ:14.10.2984 ರಲ್ಲಿ ನೌಕರನ ಸೇವಾ ಪುಸ್ತಕ ಕಳೆದುಹೋದ ಮತ್ತು ಅದನ್ನು ಪುನಃ ತಯಾರಿಸುವಲ್ಲಿ ಅಡಚಣೆಯಿರುವ ನಿವೃತ್ತಿ ವೇತನ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ತಿಳಿಸಿ ಕೊಡಲಾಗಿರುತ್ತದೆ.
▪️ಯಾವ ಕಚೇರಿಯಲ್ಲಿ ಸರ್ಕಾರಿ ನೌಕರನು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಬೇಕೋ ಆ ಕಛೇರಿಯಲ್ಲಿ ಸೇವಾ ಮಸ್ತಕ ಕಳೆದುಹೋಗಿರುವುದು ಅಥವಾ ಕೃ ಮರೆತಿಟ್ಟಿರುವುದು ಬೆಳಕಿಗೆ ಬರುವುದರಿಂದ ಕಛೇರಿಯ ಮುಖ್ಯಸ್ಥರು ವೇತನ ಪಟ್ಟಿಯಿಂದ ಮತ್ತು ಇತರ ದಾಖಲೆಗಳಿಂದ ಸೇವಾ ಪುಸ್ತಕವನ್ನು ಪುನರಚಿಸಲು ಕ್ರಮ ಕೈಗೊಳ್ಳಬೇಕು.
▪️ಕರ್ನಾಟಕ ನಾಗರೀಕ ಸೇವಾ ನಿಯಮ 330ರಲ್ಲಿ ಕಚೇರಿಯ ಮುಖ್ಯಸ್ಥನು, ನಮೂನೆ 7ಎ ಯ ಎರಡನೆಯ ಪುಟದಲ್ಲಿ ಅರ್ಜಿದಾರನ ಸೇವೆಗಳ ಬಗ್ಗೆ ವಿವರಣಾ ತಟ್ಟೆಯನ್ನು ತಯಾರಿಸತಕ್ಕುದು ಮತ್ತು ಮುಂದಿನ ಕಾರ್ಯವಿಧಾನಕ್ಕನುಸಾರವಾಗಿ ಅವುಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡತಕ್ಕುದು:
▪️ (iv) ಖಂಡ (i) (ii) ಮತ್ತು (iii)ರಲ್ಲಿ ನಿರ್ದಿಷ್ಟಗೊಳಿಸಿದ ರೀತಿಯಲ್ಲಿ ಸರ್ಕಾರಿ ನೌಕರನು ಸಲ್ಲಿಸಿದ ಸೇವೆಯ ಯಾವುದೇ ಭಾಗವನ್ನು ಸತ್ಯಾಪನೆ ಮಾಡುವುದು ಸಾಧ್ಯವಾಗದಿದ್ದಲ್ಲಿ, ಅರ್ಜಿದಾರನು ಲಿಖಿತ ವಿವರಣಾ ಪತ್ರವನ್ನು ಖಾಲಿ ಕಾಗದದ ಮೇಲೆ ದಾಖಲು ಮಾಡಬೇಕು. ಮತ್ತು ಅದರಲ್ಲಿ ತಾನು ವಾಸ್ತವಿಕವಾಗಿ ಆ ಸೇವಾವಧಿಯಲ್ಲಿ ಸೇವೆಯನ್ನು ಸಲ್ಲಿಸಿರುವುದಾಗಿ ತಿಳಿಸಿ ವಿವರಣ ಪತ್ರದ ಅಡಿಯಲ್ಲಿ ಹೇಳಿಕೆಯ ಸತ್ಯತೆಯ ಘೋಷಣೆಗೆ ಸಹಿ ಹಾಕತಕ್ಕುದು ಮತ್ತು ಇಂಥ ಘೋಷಣೆಯನ್ನು ಸಮರ್ಥಿಸುವಂತೆ ತಾನು ತನ್ನ ಶಕ್ರನುಸಾರ ಹಾಜರುಪಡಿಸಬಹುದಾದ ಎಲ್ಲಾ ಲಿಖಿತ ಸಾಕ್ಷ್ಯವನ್ನು ಅಥವಾ ಒದಗಿಸಬಹುದಾದ ಮಾಹಿತಿಯನ್ನು ಸಾದರಪಡಿಸತಕ್ಕದ್ದು.
▪️ಟಿಪ್ಪಣಿ – ಈ ಖಂಡದ ಮೇರೆಗೆ ಸತ್ಯಾಪಿತವಾದ ಸೇವೆಯನ್ನು ಅಂಗೀಕರಿಸುವ ಅಧಿಕಾರವನ್ನು ಈ ನಿಯಮಗಳ ಮೇರೆಗೆ ನಿವೃತ್ತಿವೇತನವನ್ನು ಮಂಜೂರು ಮಾಡಲು ಅಧಿಕಾರ ಪಡೆದ ಎಲ್ಲ ಅಧೀನ ಅಧಿಕಾರಿಗಳೂ ಚಲಾಯಿಸಬಹುದು.
▪️ಟಿಪ್ಪಣಿ: 2:- ನೌಕರಿಯಿಂದ ತೆಗೆದುಹಾಕಲ್ಪಟ್ಟ ತಮ್ಮ ಅಧೀನಾಧಿಕಾರಿಗಳಿಗೆ ಪ್ರಮಾಣಪತ್ರವನ್ನು ಕೊಡುವಾಗ ಇಲಾಖೆಯ ಮುಖ್ಯಾಧಿಕಾರಿಗಳು ಜಾಗರೂಕರಾಗಿರ ತದ್ದು, ಅಧೀನ ನೌಕರನು ಅವನ ನೇಮಕದಿಂದ ತೆಗೆದುಹಾಕಲ್ಪಟ್ಟಿದ್ದಾನೆಂಬ ವಿಷಯಕ್ಕೆ ಸಂಬಂಧಿಸಿದ ನಿಜವಾದ ಕಾರಣವನ್ನು ಅಡಗಿಸಿಡುವುದರಿಂದ ಸರ್ಕಾರಿ ಸೇವೆಯ ಹಿತದೃಷ್ಟಿಗೆ ಸ್ಪಷ್ಟವಾಗಿ ಅಪಾಯಕರವಾಗುವುದರಿಂದ, ನೇಮಕದ ಸ್ವಭಾವ ಮತ್ತು ನೇಮಕಾತಿಯಿಂದ ವಜಾ ಅಥವಾ ರಾಜೀನಾಮೆ ಕಾರಣಗಳಿಗೆ ಸಂಬಂಧಿಸಿದಂತೆ ಪೂರ್ಣ ಸತ್ಯವನ್ನು ಅದರಲ್ಲಿ ವಿವರಿಸಬೇಕು.
▪️ಟಿಪ್ಪಣಿ 3:- ಅಧೀನ ನೌಕರನು ಕೆಲಸವನ್ನು ಬಿಡುವಾಗ ಅಧಿಕಾರಿಯು ನೀಡು ವಂಥ ದಸ್ತಾವೇಜಿನ ಪ್ರಮಾಣಪತ್ರಗಳಿಂದ ಸಾಕ್ಷ್ಯಗಳಾಗಿ ಹಾಜರುಪಡಿಸಲಾಗುವ ದಸ್ತಾವೇಜುಗಳು ಮತ್ತು ಮೇಲೆ ಹೇಳಿದ ಸಮಕಾಲೀನ ಸರ್ಕಾರಿ ನೌಕರರ ಸಾಕ್ಷ್ಯಗಳು. ಅಧಿಕಾರಿಯ ಸೇವೆಯನ್ನು ಸತ್ಯಾಪನೆ ಮಾಡಲಾಗುವುದಿಲ್ಲವೆಂದು ಘೋಷಿಸಿದ ಅವಧಿಯಲ್ಲಿಯೇ ವಾಸ್ತವವಾಗಿ ಹೊರಡಿಸಿದ್ದಿರಬೇಕು. ನಿವೃತ್ತ ಗೆಜೆಟೆಡ್ ಅಧಿಕಾರಿಗಳು ಹಲವಾರು ವರ್ಷಗಳು ಕಳೆದ ನಂತರ ನೀಡಿದ ಪ್ರಮಾಣಪತ್ರ ಮೊದಲಾದವುಗಳನ್ನು ಸೂಕ್ತ ಸಾಕ್ಷ್ಯವೆಂದು ಅಂಗೀಕರಿಸಬಾರದು.
▪️ವಿನಾಯಿತಿ : ಆದರೆ 1936ಕ್ಕೆ ಮೊದಲು ವಿದ್ಯುಚ್ಛಕ್ತಿ ಇಲಾಖೆಯ ಸೇವೆಯಲ್ಲಿ ಸೇರಿದ್ದು, ಆ ದಿನಾಂಕಕ್ಕೆ ಮುಂಚಿನ ದಾಖಲೆಗಳು ದೊರೆಯದೆಯೇ ಯಾರ ನಿವೃತ್ತಿವೇತನವನ್ನು ನಿರ್ಧರಿಸಬೇಕಾಗಿರುವುದೋ ಅವರ ಮತ್ತು 1944ರಲ್ಲಿ ಶಿವನ ಸಮುದ್ರದಲ್ಲಿ ಘಟಿಸಿದ ಅಗ್ನಿ ಅನಾಹುತದಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡ ವಿದ್ಯುತ್ ಇಲಾಖೆಯ ನೌಕರರ ಸಂದರ್ಭದಲ್ಲಿ ಮಾತ್ರ ಅನೇಕ ವರ್ಷಗಳ ಕರುವಾಯವೂ ನಿವೃತ ಗೆಜೆಟೆಡ್ ಅಧಿಕಾರಿಗಳು ಕೊಟ್ಟ ಪ್ರಮಾಣಪತ್ರಗಳನ್ನು ವಿಶೇಷ ಪ್ರಕರಣವೆಂದು ಸ್ವೀಕರಿಸಬಹುದು. ಪರಂತು, ಆ ಗೆಜೆಟೆಡ್ ಅಧಿಕಾರಿಗಳು ವಾಸ್ತವಿಕವಾಗಿ ವಿದ್ಯುತ್ ಇಲಾಖೆಯ ಸೇವೆಯಲ್ಲಿದ್ದರು ಎಂಬ ಬಗ್ಗೆ ತನಗೆ ಮನವರಿಕೆಯಾಗಿದೆ ಎಂದು ಕರ್ನಾಟಕದ ಮುಖ್ಯ ವಿದ್ಯುಚ್ಛಕ್ತಿ ಎಂಜಿನಿಯರರು, ಅಂಥ ಪ್ರಮಾಣಪತ್ರಗಳಿಗೆ ಸಹಿ ಹಾಕಿರಬೇಕು.
▪️ನೌಕರನು ಒದಗಿಸಿದ ಮೇಲೆ ತಿಳಿಸಲಾದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 330ರ ಉಪ ನಿಯಮದ (ನೇ ಅಧಿನಿಯಮದ ಪ್ರಕಾರ ಸೇವಾ ತಪಾಸಣೆ ಬಗ್ಗೆ ಲಿಖಿತ ಹೇಳಿಕೆ ಮತ್ತು ಇತರ ದಾಖಲೆಗಳ ಆಧಾರದ ಮೇಲೆ ಸೇವಾ ಪುಸ್ತಕದಲ್ಲಿ ನೋಂದಣಿ ಹಾಕಬೇಕು.
▪️ಕಳೆದುಹೋದ ಸೇವಾ ಪುಸ್ತಕಗಳನ್ನು ನಿವೃತ್ತಿ ದಿನಾಂಕದಿಂದ 1 ತಿಂಗಳೊಳಗಾಗಿ ಪುನರ್‌ರಚಿಸಲು ಸಮರ್ಪಕ ಕಾರಣಗಳಿಂದಾಗಿ ಸಾಧ್ಯವಾಗದ ಹೋದಲ್ಲಿ
1. ನಿವೃತ್ತ ನೌಕರನ ಜನ್ಮ ದಿನಾಂಕ ಸರ್ಕಾರಿ ಸೇವೆ ಸೇರಿದ ತಾರೀಖು,
2. ನಿವೃತ್ತಿ ದಿನಾಂಕ
3. ನಿವೃತ್ತಿ ಪೂರ್ವ 10 ತಿಂಗಳ ವೇತನ ವಿವರಗಳ ಬಗ್ಗೆ ನಿವೃತ್ತಿ ವೇತನ ದಾಖಲೆಗಳಲ್ಲಿ ಕಛೇರಿ ಮುಖ್ಯಸ್ಥರು ದೃಢೀಕರಣ ಮಾಡಿ.
4. ಕೊನೆಯ 11 ತಿಂಗಳ ವೇತನ ಪಟ್ಟಿಯನ್ನು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಇತರ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಕಳುಹಿಸತಕ್ಕೆಂದು ತೀರ್ಮಾನಿಸಲಾಗಿದೆ.
5. ಅಂತಹ ಪ್ರಕರಣಗಳಲ್ಲಿ ಕಳೆದು ಹೋದ/ಮರೆತಿಟ್ಟ, ಸೇವಾ ಪುಸ್ತಕವನ್ನು ಪುನರ್ ರಚಿಸಲು ಎಲ್ಲಾ ಪ್ರಯತ್ನ ಮಾಡಲಾದರೂ ಕೂಡ ಅವಶ್ಯವಿರುವ ದಾಖಲ/ಮಾಹಿತಿ ಒದಗಿಬರದ ಕಾರಣ ಅದನ್ನು ಪುನರ್‌ರಚಿಸಲು ಸಾಧ್ಯವಾಗಿಲ್ಲ ಎಂದು ಕಚೇರಿ ಮುಖ್ಯಸ್ಥರು ದೃಢೀಕರಿಸಬೇಕು.
6. ಸೇವಾ ಮಸ್ತಕದ ಬದಲಾಗಿ ಈ ದೃಢೀಕರಣವನ್ನು ಮಹಾಲೇಖಪಾಲರು ಒಪ್ಪಿ ಒದಗಿಸಿದ ಮಾಹಿತಿಯ ಆಧಾರದ ಮೇಲೆ ನಿವೃತ್ತಿ ವೇತನ ಪ್ರಕರಣವನ್ನು ತೀರ್ಮಾನಿಸಬೇಕು.
7. ಕಳೆದುಹೋದ ಅಥವಾ ಕೈಮರತಿಟ್ಟ ಸೇವಾ ಪುಸ್ತಕಗಳ ಬಗ್ಗೆ ರಜೆಯ’ ವಿವರ ಅಥವಾ ಇನ್ನಾವುದೇ ದಾಖಲೆಗಳನ್ನು ಕೊಡುವಂತೆ ಮಹಾಲೇಖಪಾಲರು ಒತ್ತಾಯಿಸುವುದಿಲ್ಲ.
▪️ಸೇವಾ ಪುಸ್ತಕ ಕಳೆದು ಹೋಗಿದೆ ಎಂಬ ಕಾರಣದಿಂದ ನಿವೃತ್ತಿ ವೇತನ ಪಕರಣ ವಿಲೇವಾರಿಯಾಗದೇ ಉಳಿದಿದ್ದಲ್ಲಿ ಮತ್ತು ಆಂತಹ ಪ್ರಕರಣಗಳಲ್ಲಿ ಸೇವಾ ಪುಸ್ತಕಗಳನ್ನು ಪುನರ್‌ರಚಿಸಲು ನಿಗದಿಪಡಿಸಿರುವ 6 ತಿಂಗಳ ಅವಧಿ ಈಗಾಗಲೇ ಮುಗಿದು ಹೋಗಿದ್ದಲ್ಲಿ ಈ ಸೂಚನೆಯನ್ವಯ ಅಂತಹ ಪ್ರಕರಣಗಳನ್ನು ತೀರ್ಮಾನಿಸತಕ್ಕದ್ದು,
ಹಾಗೆಯೇ ಕಛೇರಿಯ ಮುಖ್ಯಸ್ಥನು ತನ್ನ ಅಧೀನದಲ್ಲಿರುವ ನೌರನ ಸೇವಾಪುಸ್ತಕದ ಬಗ್ಗೆ ಸತ್ಯಪನೆ ಮಾಡುವುದು ಸಹಾ ಕಡ್ಡಾಯವಾಗಿರುತ್ತದೆ.
ಸತ್ಯಪನೆ (Verification):
* ನಿಯಮ 412 ರನ್ವಯ:-
1. ಪ್ರತಿಯೊಂದು ಕಚೇರಿಯ ಲಿಪಿಕ ಶಾಖೆಗಳ ಮುಖ್ಯಾಧಿಕಾರಿಗಳು ತಮ್ಮ ಅಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರ ಸೇವಾಪುಸ್ತಕಗಳನ್ನು ಅಂದಂದಿನವರೆಗೂ ನಿರ್ವಹಿಸಿಕೊಂಡು ಬರತಕ್ಕದ್ದು,
2. ಕಛೇರಿಯ ಮುಖ್ಯಾಧಿಕಾರಿಗಳ ಅಥವಾ ಇಲಾಖೆಯ ಮುಖ್ಯಸ್ಥರ ಗೆಜೆಟೆಡ್ ಸಹಾಯಕರು ಸೇವಾಪುಸ್ತಕಗಳನ್ನು ಮೂರು ತಿಂಗಳಿಗೊಮ್ಮೆ ತನಿಖೆ ಮಾಡತಕ್ಕದ್ದು ಮತ್ತು ಆ ಬಗ್ಗೆ ಸಂದರ್ಭಾನುಸಾರ, ಕಛೇರಿಯ ಅಥವಾ ಇಲಾಖೆಯ ಮುಖ್ಯಾಧಿಕಾರಿಗೆ ಪ್ರಮಾಣಪತ್ರವನ್ನು ಒಪ್ಪಿಸತಕ್ಕದ್ದು ಕಛೇರಿಯ ಮುಖ್ಯಾಧಿಕಾರಿಯು ವರ್ಷಕ್ಕೆ ಒಂದು ಸೇವಾಪುಸ್ತಕಗಳನ್ನು ಸತ್ಯಾಪನೆಗಾಗಿ ತೆಗೆದುಕೊಳ್ಳಬೇಕು.
3. ಈ ನಿಯಮಗಳಿಗನುಸಾರವಾಗಿ ಸಂಬಂಧಪಟ್ಟ ಸರ್ಕಾರಿ ನೌಕರರ ಸೇವಾವಿಷಯಗಳನ್ನು ಹಾಗೂ ಅವನ ಕುಟುಂಬದ ಸದಸ್ಯರ ಅಂದಂದಿನವರೆಗಿನ ವಾಸದ ವಿಳಾಸಗಳನ್ನು ಅವನ ಸೇವಾಪುಸ್ತಕದಲ್ಲಿ ಸರಿಯಾಗಿ ದಾಖಲು ಮಾಡಲಾಗಿದೆಯೇ ಎಂಬುದನ್ನು ಆ ಅಧಿಕಾರಿಯು ಮನದಟ್ಟು ಮಾಡಿಕೊಂಡ ನಂತರ ಈ ಮುಂದಿನ ಪದಗಳಲ್ಲಿ ಪ್ರಮಾಣ ಪತ್ರವನ್ನು ದಾಖಲು ಮಾಡಿ ತನ್ನ ಸಹಿ ಮಾಡಬೇಕು.
4. “ವೇತನ ಬಿಲ್ಲುಗಳು, ವೇತನ ಪಟ್ಟಿಗಳು ಮತ್ತು ಅಂಥ ದಾಖಲೆಗಳ ಮೂಲಕ ಸೇವೆಗಳನ್ನು (ಯಾವ ಉಲ್ಲೇಖದ ಮೇರೆಗೆ ಸತ್ಯಾಪನೆ ಮಾಡಲಾಗಿದೆಯೋ ಆ ಉಲ್ಲೇಖವನ್ನು ನಿರ್ದಿಷ್ಟವಾಗಿ ತಿಳಿಸಬೇಕು) ಅಂದಂದಿನವರೆಗಿನ ವಾಸದ ವಿಳಾಸಗಳನ್ನು ಸಹ ಸತ್ಯಾಪನೆಗೊಳಿಸಲಾಗಿದೆ.
5. ವಾರ್ಷಿಕ ಸತ್ಯಾಪನೆಯ ಕೆಲಸ ಒಂದು ಮುಖ್ಯ ಅಂಶ ಮತ್ತು ಇದನ್ನು ಸಾಮಾನ್ಯವಾಗಿ ಕಚೇರಿಯ ಮುಖ್ಯಾಧಿಕಾರಿಯೇ ಮಾಡಬೇಕು. ಕಛೇರಿಯಲ್ಲಿ ಪರಿಶೀಲಿಸಬೇಕಾದ ಸೇವಾ ಪುಸ್ತಕಗಳ ಸಂಖ್ಯೆಯು ಅತಿ ಹೆಚ್ಚಾಗಿದ್ದ (ಅಂದರೆ ಐವತ್ತಕ್ಕೂ ಮೇಲ್ಪಟ್ಟ) ಸಂದರ್ಭಗಳಲ್ಲಿ ಸತ್ಯಾಪನೆಯ ಕಾರ್ಯವನ್ನು ಒಬ್ಬರು ಅಥವಾ ಹಲವಾರು ಗೆಜೆಟೆಡ್ ಸಹಾಯಕರಿಗೆ ಒಪ್ಪಿಸಬಹುದು. ಕಛೇರಿಯ ಮುಖ್ಯಾಧಿಕಾರಿಯು ಪರೀಕ್ಷಿಸಬೇಕಾದ ಸೇವಾ ಪುಸ್ತಕಗಳ ಸಂಖ್ಯೆಯು ಒಟ್ಟು ಸೇವಾಪುಸ್ತಕಗಳ ಸಂಖ್ಯೆಯ ಶೇಕಡಾ ಐದಕ್ಕಿಂತ ಕಡಿಮೆ ಇರಕೂಡದು.
6. ಸಚಿವಾಲಯದಲ್ಲಿ ಸೇವಾ ಪುಸ್ತಕಗಳ ಸತ್ಯಾಪನೆಯನ್ನು ಆಡಳಿತ ಶಾಖೆಯ ಪ್ರಭಾರವನ್ನು ಹೊಂದಿರುವ ಸೂಪರಿಂಟೆಂಡೆಂಟರೇ ಮಾಡಬೇಕು. ಆಡಳಿತ ಶಾಖೆಯ ಅಧೀನ ಕಾರ್ಯದರ್ಶಿಯವರು ಸ್ವತಃ ಶೇಕಡಾ ಹತ್ತರಷ್ಟು ಸೇವಾ ಪುಸ್ತಕಗಳನ್ನು ಮತ್ತು ಉಪಕಾರ್ಯದರ್ಶಿಯವರು ಶೇಕಡಾ ಐದರಷ್ಟು ಸೇವಾ ಪುಸ್ತಕಗಳನ್ನಾದರೂ ಪರೀಕ್ಷಿಸತಕ್ಕುದು.
▪️ನಿಯಮ 413 ರನ್ವಯ:- ಕಛೇರಿಯ ಮುಖ್ಯಾಧಿಕಾರಿಯು ವಾರ್ಷಿಕ ಸತ್ಯಾಪನೆಯನ್ನು ದಾಖಲು ಮಾಡುವಾಗ ಕಛೇರಿಯ ದಾಖಲೆಗಳಿಂದ ಸೇವೆಯ ಯಾವುದೇ ಭಾಗವನ್ನು ಸತ್ಯಾಪನೆಗೊಳಿಸಲು ಸಾಧ್ಯವಾಗದಿದ್ದಲ್ಲಿ ಕೆಲವೊಂದು ಸ್ವೀಕೃತ ಕಾಲಾವಧಿಗಳ, ಬಗ್ಗೆ (ಅವನ್ನು ಹೆಸರಿಸಿ) ಅಧಿಕಾರಿಯ ಲಿಖಿತ ವಿವರಣೆ ಮತ್ತು ಅವನ ಸಮಕಾಲೀನ ನೌಕರರ ಸಾಕ್ಷಿಗಳ, ದಾಖಲೆಗಳನ್ನು ಸೇವಾಪುಸ್ತಕದ ಜೊತೆಗೆ ಇಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಬೇಕು.
▪️ನಿಯಮ 414 ರನ್ವಯ:- ನಿಗದಿಪಡಿಸಲಾದ ನಿಯಮಗಳನ್ನನುಸರಿಸಿ ತಮ್ಮ ಕಛೇರಿಗಳಲ್ಲಿರುವ ಸರ್ಕಾರಿ ನೌಕರರ ಸೇವಾ ಪುಸ್ತಕಗಳನ್ನು ಸೂಕ್ತ ರೀತಿಯಲ್ಲಿ ಸತ್ಯಾಪನೆಗೊಳಿಸಲಾಗಿದೆ ಮತ್ತು ಅವು ಸರಿಯಾಗಿರುವುದಾಗಿ ಕಂಡು ಬಂದಿದೆ ಎಂಬ’ ಪ್ರಮಾಣ ಪತ್ರವನ್ನು ಕಛೇರಿಯ ಮತ್ತು ಇಲಾಖೆಯ ಮುಖ್ಯಾಧಿಕಾರಿಗಳು ಪ್ರತಿ ವರ್ಷವೂ ಮೇ ತಿಂಗಳ ತಮ್ಮ ವೇತನದ ಬಿಲ್ಲುಗಳಿಗೆ ಲಗತ್ತಿಸತಕ್ಕದ್ದು.
”ಪ್ರತಿಯೊಬ್ಬ ಸರ್ಕಾರಿ ನೌಕರನು ತಮ್ಮ ಸೇವಾ ಪುಸ್ತಕವನ್ನು ದ್ವಿ-ಪ್ರತಿ ಮಾಡಿಟ್ಟುಕೊಳ್ಳಲು ಸರ್ಕಾರದ ಆದೇಶದಲ್ಲಿ ಅವಕಾಶವಿದ್ದು ಮೇಲಾಧಿಕಾರಿಗಳ ಅನುಮತಿಯೊಂದಿಗೆ ನಕಲು ಪ್ರತಿ ಮಾಡಿಸಿಕೊಳ್ಳಿ, ಸೇವಾ ಪುಸ್ತಕವನ್ನು ಬಹಳ ಜಾಗರುಕತೆಯಿಂದ ಎಚ್ಚರಿಕೆವಹಿಸಿ ಪರಿಶೀಲಿಸಿ ನಿಮಗೆ ಸಂಬಂಧಿಸಿದ ಎಲ್ಲಾ ದಾಖಲೆ/ವಿವರಗಳು/ನಾಮನಿರ್ದೇಶನಗಳು ಸರಿಯಿವೆಯೇ ಎಂಬ ಬಗ್ಗೆ ಮತ್ತು ಲಗತ್ತಿಸಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿತ್ತಿರಿ.”
HOW TO MAINTAIN SERVICE BOOK- CLICK HERE
ಮಾಹಿತಿ ಕೃಪೆ: ಶಶಿಕುಮಾರ್ ಪಿ.ಎಂ. ಕರ್ನಾಟಕ ಸಚಿವಾಲಯ