SMCs GUIDELINES: ಶಾಲಾ ನಿರ್ವಹಣಾ ಸಮಿತಿ (SMC) ಮಾರ್ಗಸೂಚಿ 2026|ಸಂಪೂರ್ಣ ಮಾಹಿತಿ

SMCs GUIDELINES :ಶಾಲಾ ನಿರ್ವಹಣಾ ಸಮಿತಿ (SMC) ಮಾರ್ಗಸೂಚಿ 2026|ಸಂಪೂರ್ಣ ಮಾಹಿತಿ

SMCs Guidelines :ಶಾಲಾ ನಿರ್ವಹಣಾ ಸಮಿತಿ (SMC) ಮಾರ್ಗಸೂಚಿ 2026: ಕೇಂದ್ರ ಸರ್ಕಾರವು ಶಾಲಾ ನಿರ್ವಹಣಾ ಸಮಿತಿ (ಸ್ಕೂಲ್ ಮ್ಯಾನೇಜ್‌ಮೆಂಟ್ ಕಮಿಟಿ- ಎಸ್‌ಎಂಸಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಮುದಾಯದ ಭಾಗವಹಿಸುವಿಕೆ, ಶಾಲಾ ಮೂಲಸೌಕರ್ಯ ಸುಧಾರಣೆ ಮತ್ತು ಶೈಕ್ಷಣಿಕ ವಾತಾವರಣದ ಅಗತ್ಯವನ್ನು ಪ್ರತಿಪಾದಿಸಿದೆ ಎಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಈ ಮಾರ್ಗಸೂಚಿಗಳ ಮೂಲಕ ಶಾಲಾಭಿವೃದ್ಧಿ ಸಮಿತಿಗೆ ಸಂಬಂಧಿಸಿದ ಈ ಹಿಂದಿನ ಎಲ್ಲ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಶಾಲಾ ನಿರ್ವಹಣಾ ಸಮಿತಿಗಳು ಸಮಾಜ ಮತ್ತು ಶಾಲೆಗಳ ನಡುವಿನ ಸೇತುವೆಯಾಗಿವೆ.

ಸಮಾಜ, ಶಿಕ್ಷಣ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ ಬೆಸೆಯಬೇಕು. ಸಾಮಾಜಿಕ ಚಳವಳಿಯಾಗಿ ರೂಪುಗೊಳ್ಳಬೇಕು ಎಂದು ಪ್ರಧಾನ್ ಆಶಿಸಿದ್ದಾರೆ. ಶಿಕ್ಷಣದಲ್ಲಿ ಭಾರತದ ಪ್ರಗತಿಯು ಸಮಾಜವು ತನ್ನ ಸೀಮಿತ ಪಾತ್ರವನ್ನು ಮೀರಿ ಹೆಜ್ಜೆ ಹಾಕುವುದು ಮತ್ತು ಸಾಮೂಹಿಕ ಜವಾಬ್ದಾರಿಯಾಗಿ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಆಧರಿಸಿದೆ. ಶಾಲಾ ನಿರ್ವಹಣಾ ಸಮಿತಿಗಳು ಇದನ್ನು ಸಾಕಾರಗೊಳಿಸುವಂತೆ ರೂಪುಗೊಂಡಿವೆ ಎಂದು ಸಚಿವರು ಹೇಳಿದ್ದಾರೆ.

ಯಾರಿಗೆ ಪ್ರಾತಿನಿಧ್ಯ?

ಮಕ್ಕಳ ಪಾಲಕರೇ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರಾಗಿರತಕ್ಕದ್ದು. ಸ್ಥಳೀಯಾಡಳಿತದ ಚುನಾಯಿತ ಪ್ರತಿನಿಧಿ, ಮಕ್ಕಳ ಪಾಲಕರು ಹಾಗೂ ಶಾಲಾ ಶಿಕ್ಷಕರು ಸದಸ್ಯರಾಗಿರಲಿದ್ದಾರೆ. ಶಾಲಾ ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಹೊಣೆಗಾರಿಕೆ ನಿಗದಿ:

ಶಾಲಾ ನಿರ್ವಹಣೆಯಲ್ಲಿ ಸುಧಾರಿತ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಆರ್ಥಿಕ ಮೇಲ್ವಿಚಾರಣೆಯನ್ನು ಕೇಂದ್ರೀಕರಿಸಿದ್ದು, ಸಮಿತಿ ಮತ್ತು ಸದಸ್ಯ ಕಾರ್ಯದರ್ಶಿಗಳ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿವೆ. ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳ ಹಾಜರಾತಿ ಮತ್ತು ಶಿಕ್ಷಕರ ತೊಡಗಿಸಿಕೊಳ್ಳುವಿಕೆಯಲ್ಲಿ ಪೂರ್ವಭಾವಿ ಮೇಲ್ವಿಚಾರಣೆ ಇವುಗಳದ್ದಾಗಿದೆ.

ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಶಾಲಾ ಕಾರ್ಯನಿರ್ವಹಣೆಯ ಉತ್ತಮ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಶಾಲಾ ಅಭಿವೃದ್ಧಿ ಯೋಜನೆ ಮತ್ತು ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯವಿಧಾನಗಳು ಈ ಚೌಕಟ್ಟಿನ ಪ್ರಮುಖ ಲಕ್ಷಣವಾಗಿದೆ. ಶಾಲಾ ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಲವು ಇಲಾಖೆಗಳು ಮತ್ತು ಯೋಜನೆಗಳನ್ನು ಸಮನ್ವಯಗೊಳಿಸಿವೆ.

ಚುನಾವಣೆ ಮೂಲಕ ಆಯ್ಕೆ:


ಪ್ರತಿಯೊಂದು ಶಾಲೆಯು ಶೈಕ್ಷಣಿಕ ವರ್ಷ ಪ್ರಾರಂಭವಾದ ಒಂದು ತಿಂಗಳೊಳಗೆ ಸಮಿತಿಯನ್ನು ರಚಿಸಬೇಕು ಮತ್ತು ಇದಕ್ಕಾಗಿ ಚುನಾವಣೆಗಳನ್ನು ಪ್ರಜಾಪ್ರಭುತ್ವ, ಪಾರದರ್ಶಕ ರೀತಿಯಲ್ಲಿ ನಡೆಸಬೇಕು.

ಮಕ್ಕಳ ದಾಖಲಾತಿ ಆಧಾರದ ಮೇಲೆ ಸಮಿತಿಯ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. 100 ವಿದ್ಯಾರ್ಥಿಗಳವರೆಗಿನ ಶಾಲೆಗಳಿಗೆ 12 ರಿಂದ 15 ಸದಸ್ಯರು, 100 ರಿಂದ 500 ರವರೆಗಿನ ದಾಖಲಾತಿಗಳಿದ್ದರೆ 15 ರಿಂದ 20 ಸದಸ್ಯರು ಮತ್ತು 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ 20 ರಿಂದ 25 ಸದಸ್ಯರನ್ನು ನಿಗದಿ ಮಾಡಲಾಗಿದೆ.

ಸಮಿತಿಯು ಶಾಲಾ ಮಟ್ಟದ ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ನಿರಂತರತೆಯನ್ನು ಬಲಪಡಿಸುವ ಗುರಿ ಹೊಂದಿವೆ. ಬಾಲವಾಟಿಕಾದಿಂದ 12 ನೇ ತರಗತಿಯವರೆಗೆ ಶಾಲೆಗೆ ಒಂದೇ ಸಮಿತಿ ಕಾರ್ಯನಿರ್ವಹಿಸಲಿದೆ.

ಮುಖ್ಯಾಂಶಗಳು:


▪️ಕೇಂದ್ರ ಶಿಕ್ಷಣ ಸಚಿವಾಲಯದಿಂದ ಪ್ರಕಟ

▪️ಪಾಲಕರಿಗೆ ಸಮಿತಿಯಲ್ಲಿ ಅಗ್ರಸ್ಥಾನ

▪️ಎರಡು ವರ್ಷಗಳ ಅವಧಿಗೆ ಆಯ್ಕೆ

▪️ಸ್ಥಳೀಯ ಚುನಾಯಿತರಿಗೂ ಅವಕಾಶ

▪️ಹಣಕಾಸಿನ ಅಧಿಕಾರವನ್ನೂ ನೀಡಲಾಗಿದೆ

▪️ಗರಿಷ್ಠ 25 ಸದಸ್ಯರನ್ನು ಹೊಂದಬಹುದು

▪️ಮಕ್ಕಳ ಪಾಲಕರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
▪️₹30 ಲಕ್ಷದವರೆಗೆ ಕಾಮಗಾರಿ ನಡೆಸುವ ಅಧಿಕಾರ

ಸಮಿತಿ ಸ್ವರೂಪ:

ಸಮಿತಿಯ ಬಲದ ಶೇ.75 ಮಕ್ಕಳ ಪಾಲಕರು ಮತ್ತು ಪೋಷಕರನ್ನು ಒಳಗೊಂಡಿರಬೇಕು ಮತ್ತು – ಎಲ್ಲ ಸದಸ್ಯರಲ್ಲಿ ಶೇ.50 ಮಹಿಳೆಯರು ಇರಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಪರಿಶಿಷ್ಟ ಹಾಗೂ ಹಿಂದುಳಿದ ಸಮುದಾಯಗಳು ಮತ್ತು ಅಂಗವಿಕಲರು ಸೇರಿದಂತೆ ಸಾಮಾಜಿಕ- ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಲಾಗಿದೆ.

ಸಮಿತಿ ಸದಸ್ಯರ ಅವಧಿ ಎರಡು ವರ್ಷವಾಗಿದೆ. ಹೊಸ ಸಮಿತಿಯನ್ನು ರಚಿಸುವವರೆಗೆ ಎರಡು ವರ್ಷಗಳ ಅವಧಿಯನ್ನು ಮೀರಿ ಮುಂದುವರಿಯಬಹುದು. ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ 30 ಲಕ್ಷ ರೂ.ಗಳವರೆಗಿನ ಎಲ್ಲ ಸಿವಿಲ್ ಕೆಲಸಗಳನ್ನು ಎಸ್‌ಎಂಸಿ ನಿರ್ವಹಿಸಬಹುದು.

ಎಲ್ಲ ಎಸ್‌ಎಂಸಿ ನಿಧಿಗಳನ್ನು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಹೆಸರಿನಲ್ಲಿ ಪ್ರತ್ಯೇಕ ಜಂಟಿ ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

10-12ನೇ ಕ್ಲಾಸ್‌ಗೆ ಹೊಸ ಪಠ್ಯಕ್ರಮ:

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿಇಆರ್‌ಟಿ) ಈಗಾಗಲೇ 9 ನೇ ತರಗತಿಯವರೆಗೆ ಹೊಸ ಪಠ್ಯಪುಸ್ತಕಗಳನ್ನು ಲಭ್ಯವಾಗುವಂತೆ ಮಾಡಿದೆ. ಮುಂಬರುವ ವರ್ಷಗಳಲ್ಲಿ 10, 11 ಮತ್ತು 12 ನೇ ತರಗತಿಗಳಿಗೆ ಹೊಸ ಪಠ್ಯ ಪುಸ್ತಕಗಳನ್ನು  ಪರಿಚಯಿಸಲಾಗುವುದು.

3 ನೇ ತರಗತಿಯಿಂದ ಕಂಪ್ಯೂಟೇಶನಲ್ ಚಿಂತನೆ ಮತ್ತು ಕೃತಕ ಬುದ್ಧಿಮತ್ತೆಯ ಪ್ರಾಥಮಿಕ ಜ್ಞಾನವನ್ನು ಪರಿಚಯಿಸಲಿದ್ದೇವೆ ಎಂದು ಪ್ರಧಾನ್ ಮಾಹಿತಿ ನೀಡಿದ್ದಾರೆ.

SMCs Guidelines

 

CLICK HERE DOWNLOAD GUIDELINES

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!