SSLC and PUC EXAM:10, 12ನೇ ಕ್ಲಾಸ್‌ಗೆ ಪಾಸ್ ಅಂಕ ಶೇ.33|ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯುವ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ಅನ್ವಯ
SSLC and PUC EXAM:ಸಿಬಿಎಸ್‌ಇ ಮತ್ತು ಇತರ ರಾಜ್ಯಗಳ ಮಂಡಳಿ ಪರೀಕ್ಷೆಗಳಲ್ಲಿರುವಂತೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕನಿಷ್ಠ ತೇರ್ಗಡೆ ಅಂಕಗಳನ್ನು ಶೇ.35ರಿಂದ 33ಕ್ಕೆ ನಿಗದಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈ ನಿಯಮವು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು (ಫ್ರೆಷರ್ಸ್), ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ.
ರಾಜ್ಯದಲ್ಲಿ ಮೂರು ಪರೀಕ್ಷೆ ಮತ್ತು ವೆಬ್‌ಕಾಸ್ಟಿಂಗ್‌ನಿಂದಾಗಿ ಸಾಕಷ್ಟು ಸುಧಾರಣೆ ತರಲಾಗಿದೆ. ಅದರಂತೆಯೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಲಾಗಿತ್ತು.
ಅದರಂತೆ ಹೊಸ ನಿಯಮಗಳು ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನ್ವಯವಾಗಲಿವೆ ಎಂದು ತಿಳಿಸಿದರು.
206 ಅಂಕ ಪಡೆದರೆ ಉತ್ತೀರ್ಣ:
ಎಸ್‌ಎಸ್‌ಎಲ್‌ಸಿಯಲ್ಲಿ ಅಭ್ಯರ್ಥಿಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡೂ ಸೇರಿ ಒಟ್ಟು ಶೇ.33 ಅಂಕಗಳನ್ನು ಪಡೆಯಬೇಕು. 625 ಅಂಕಗಳಿಗೆ ಕನಿಷ್ಠ 206 ಅಂಕ ಪಡೆದು ಮತ್ತು ವಿಷಯವಾರು ಕನಿಷ್ಠ 30 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ದ್ವಿತೀಯ ಪಿಯುಸಿಯಲ್ಲಿ ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಶೇ.30 ಅಂಕಗಳನ್ನು ಪಡೆದು ಒಟ್ಟು 600ಕ್ಕೆ 198 (ಶೇ.33) ಅಂಕಗಳು ಪಡೆದಲ್ಲಿ ಅಂತಹ ಅಭ್ಯರ್ಥಿಯನ್ನು ಉತ್ತೀರ್ಣರೆಂದು ಘೋಷಿಸಲಾಗುತ್ತದೆ.
ಹೊಸ ನಿಯಮದ ವ್ಯತ್ಯಾಸ ಪರಿಣಾಮವೇನು?
▪️ಇಲ್ಲಿಯವರೆಗೂ ಶೇ.35 ಅಂಕ ಪಡೆದ ಅಭ್ಯರ್ಥಿಗಳು ಉತ್ತೀರ್ಣರೆಂದು ಘೋಷಿಸುವ ನಿಯಮವಿದೆ. ಇದರಲ್ಲಿ ಆಂತರಿಕ ಅಂಕಗಳು ಎಷ್ಟೇ ಪಡೆದಿದ್ದರೂ ಲಿಖಿತ ಪರೀಕ್ಷೆಯಲ್ಲಿ 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆಯಬೇಕಿತ್ತು.
▪️ಹೊಸ ನಿಯಮಗಳ ಪ್ರಕಾರ ಆಂತರಿಕ ಮತ್ತು ಲಿಖಿತ ಪರೀಕ್ಷೆ ಎರಡೂ ಸೇರಿ ಶೇ.33 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಉದಾ- ಒಟ್ಟು 100 ಅಂಕಗಳ ಪರೀಕ್ಷೆಯಲ್ಲಿ 80 ಲಿಖಿತ ಮತ್ತು 20 ಅಂತರಿಕ ಅಂಕಗಳನ್ನು ನಿಗದಿ ಮಾಡಲಾಗಿದೆ. ಇದರಲ್ಲಿ ಆಂತರಿಕ ಅಂಕಗಳಲ್ಲಿ 20ಕ್ಕೆ 18 ಪಡೆದು ಲಿಖಿತ ಪರೀಕ್ಷೆಯಲ್ಲಿ 80ಕ್ಕೆ 15 ಅಂಕಗಳನ್ನು ಪಡೆದ ವಿದ್ಯಾರ್ಥಿಯು ಉತ್ತೀರ್ಣನಾಗುತ್ತಾನೆ.
▪️ಇದರಿಂದ ಕನಿಷ್ಠ ಅಂಕಗಳನ್ನು ಪಡೆಯಲು ಸಾಧ್ಯವಾಗದೆ ಅನುತ್ತೀರ್ಣರಾಗುತ್ತಿದ್ದ ವಿದ್ಯಾರ್ಥಿಗಳು ತೇರ್ಗಡೆ ಹೊಂದಬಹುದಾಗಿದೆ. ಉನ್ನತ ಶಿಕ್ಷಣ ಪಡೆಯಲು ಮತ್ತು ಓದಿನಲ್ಲಿ ಹಿಂದುಳಿದಿದ್ದು ಐಟಿಐಗಳಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ಪಡೆಯಲು ಇಚ್ಛಿಸುವವರಿಗೆ ಹೆಚ್ಚು ಸಹಕಾರಿ
CLICK HERE- Karnataka Pre-University Examination (Scheme of Evaluation) Rules, 2025.
CLICK HERE -Karnataka Secondary Education Examination Board First Regulations (Amendment) 2025.