THE KARNATAKA SOCIAL BOYCOTT (PREVENTION, PROHIBITION AND REDRESSAL) ACT, 2025
THE KARNATAKA SOCIAL BOYCOTT (PREVENTION, PROHIBITION AND REDRESSAL) ACT, 2025: ರಾಜ್ಯದಲ್ಲಿ ಒಬ್ಬ ವ್ಯಕ್ತಿ ಅಥವಾ ಅವನ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವುದಕ್ಕಾಗಿ ಒಂದು ಅಧಿನಿಯಮ;
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಒಂದು ಗುರಿಯಾಗಿ ಪ್ರತಿಷ್ಠಾಪಿಸಲಾದ ವ್ಯಕ್ತಿ ಘನತೆಯನ್ನು ಖಾತ್ರಿಪಡಿಸಿ, ನಾಗರೀಕರಲ್ಲಿ ಭಾತೃತ್ವವನ್ನು ಉತ್ತೇಜಿಸಲಾಗಿರುವುದರಿಂದ;
ಮತ್ತು ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವು ಸಂವಿಧಾನದ ಭಾಗ-IIIರಲ್ಲಿ ಪ್ರತಿಷ್ಠಾಪಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದರಿಂದ;
ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಅಮಾನವೀಯ ಪದ್ಧತಿಯು ಇನ್ನೂ ಉಳಿದಿರುವುದನ್ನು ಗಮನಿಸಲಾಗಿರುವುದರಿಂದ;
ಮತ್ತು ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರದ ಪಿಡುಗನ್ನು ಸಂಪೂರ್ಣವಾಗಿ ತೆಗೆದುಹಾಕುವಲ್ಲಿ ಈಗಾಗಲೇ ಇರುವ ಕಾನೂನುಗಳು ಪರಿಣಾಮಕಾರಿಯಲ್ಲವೆಂದು ಸಾಬೀತಾಗಿರುವುದು ಕಂಡುಬಂದಿರುವುದರಿಂದ;
ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿಯ ಹಿತಾಸಕ್ತಿಯಲ್ಲಿ ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅಗತ್ಯವಾಗಿರುವುದರಿಂದ; ಹಾಗೂ ರಾಜ್ಯದಲ್ಲಿ ಜನರು ಅವರ ಮಾನವ ಹಕ್ಕುಗಳೊಂದಿಗೆ ಸೌಹಾರ್ದದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ, ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳನ್ನು ಉಪಬಂಧಿಸುವುದು ಯುಕ್ತವಾಗಿರುವುದರಿಂದ;
ಇದು, ಭಾರತ ಗಣರಾಜ್ಯದ ಎಪ್ಪತ್ತಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.
(1) ಈ ಅಧಿನಿಯಮವನ್ನು ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಅಧಿನಿಯಮ, 2025 ಎಂದು ಕರೆಯತಕ್ಕದ್ದು.
(2) ಇದು ರಾಜ್ಯ ಸರ್ಕಾರವು ಈ ಕುರಿತು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ
ಅಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
2. ಪರಿಭಾಷೆಗಳು.-
(1) ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ
ಹೊರತು,-
(ಎ) “ಜಾತಿ ಪಂಚಾಯತಿ” ಎಂದರೆ ಅದೇ ಸಮುದಾಯದಲ್ಲಿನ ಹಲವು ಪದ್ಧತಿಗಳನ್ನು ನಿಯಂತ್ರಿಸಲು ಸಮುದಾಯದೊಳಗೆ ಕಾರ್ಯನಿರ್ವಹಿಸುವ, ಯಾರೇ ಸದಸ್ಯನ ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವ ಹಾಗೂ ಅವರ ಕುಟುಂಬಗಳನ್ನೂ ಒಳಗೊಂಡಂತೆ ಅದರ ಸದಸ್ಯರ ಪೈಕಿ ಯಾವುದೇ ವಿವಾದಗಳನ್ನು ಮೌಖಿಕ ಅಥವಾ ಲಿಖಿತವಾದ ವಿದ್ಯುಕ್ತ ಹೇಳಿಕೆಗಳ (dictum) ಮೂಲಕ ಒಟ್ಟಾಗಿ ಪರಿಹರಿಸುವ ಅಥವಾ ನಿರ್ಧರಿಸುವ, “ಪಂಚಾಯತಿ’ ಅಥವಾ ಯಾವುದೇ ಇತರ ಹೆಸರು ಅಥವಾ ವಿವರಣೆಯಿಂದ ಕರೆಯಲಾಗುವ ನೋಂದಾಯಿತ ಅಥವಾ ನೋಂದಾಯಿತವಲ್ಲದ, ಔಪಚಾರಿಕ ಅಥವಾ ಅನೌಪಚಾರಿಕವಾದ ಯಾವುದೇ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳ ಗುಂಪಿನ ಮೂಲಕ ರಚಿಸಲಾದ ಸಮಿತಿ ಅಥವಾ ನಿಕಾಯ;
(ಬಿ) “ಸಮುದಾಯ” ಎಂಬುದು ಜಾತಿ ಪಂಚಾಯತಿಗೆ ಸಂಬಂಧಿಸಿದಂತೆ, ಹುಟ್ಟು ಪರಿವರ್ತನೆ ಅಥವಾ ಯಾವುದೇ ಧಾರ್ಮಿಕ ವಿಧಿವಿಧಾನಗಳ ಅಥವಾ ಉತ್ಸವಗಳ ಆಚರಣೆ, ಅವರು ಸೇರಿರುವ ಅದೇ ಧರ್ಮ ಅಥವಾ ಧಾರ್ಮಿಕ ಪಂಥ, ಜಾತಿ ಅಥವಾ ಉಪಜಾತಿಯ ಕಾರಣದಿಂದಾಗಿ ಒಟ್ಟಿಗೆ ಸೇರುವ ಸದಸ್ಯರ ಗುಂಪು;
(ಸಿ) ‘ಸಾಮಾಜಿಕ ಬಹಿಷ್ಕಾರ” ಎಂದರೆ 3ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಸಮುದಾಯದ ಸದಸ್ಯರ ನಡುವೆ ಯಾವುದೇ ಸಾಮಾಜಿಕ ತಾರತಮ್ಯದ ಕುರಿತು ಮೌಖಿಕವಾದ ಅಥವಾ ಲಿಖಿತವಾದ ಪರೋಕ್ಷ ಸೂಚನೆ (gesture) ಅಥವಾ ಕೃತ್ಯ;
(ಡಿ) “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ;
(ಇ) ಮಾನವ ಹಕ್ಕುಗಳು” ಎಂಬುದು ಮಾನವ ಹಕ್ಕುಗಳ ರಕ್ಷಣೆ ಅಧಿನಿಯಮ, 1993 (1994ರ ಕೇಂದ್ರ ಅಧಿನಿಯಮ 10)ರ 2ನೇ ಪ್ರಕರಣದ (1)ನೇ ಉಪ-ಪ್ರಕರಣದಲ್ಲಿನ (ಡಿ) ಖಂಡದಲ್ಲಿ ಅದಕ್ಕೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು;
(ಎಫ್) “ಸದಸ್ಯ” ಎಂದರೆ ಯಾವುದೇ ಸಮುದಾಯದ ಸದಸ್ಯನಾಗಿರುವ ಒಬ್ಬ ವ್ಯಕ್ತಿ;
(ಜಿ) “ನಿಯಮಿಸಲಾದುದು” ಎಂದರೆ ಈ ಅಧಿನಿಯಮದ ಅಡಿಯಲ್ಲಿ ನಿಯಮಗಳ ಮೂಲಕ ನಿಯಮಿಸಲಾದುದು;
(ಎಚ್) ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ” ಎಂದರೆ 15ನೇ ಪ್ರಕರಣದಡಿ ಹಾಗೆ ಗೊತ್ತುಪಡಿಸಿದ ಅಧಿಕಾರಿ; ಮತ್ತು
(ಐ) “ಸಂತ್ರಸ್ತ” ಎಂದರೆ ಸಾಮಾಜಿಕ ಬಹಿಷ್ಕಾರ ಮಾಡಿರುವ ಕಾರಣದಿಂದಾಗಿ ತೊಂದರೆಗೊಳಗಾದ ಅಥವಾ ದೈಹಿಕವಾದ ಅಥವಾ ಹಣಕಾಸಿನ ತೊಂದರೆ ಅಥವಾ ಆತನ ಸ್ವತ್ತಿಗೆ ತೊಂದರೆಯನ್ನು ಅನುಭವಿಸಿದ ವ್ಯಕ್ತಿ ಮತ್ತು ಆತನ ಸಂಬಂಧಿಕರು, ಕಾನೂನುಬದ್ಧ ಪೋಷಕರು ಮತ್ತು ಕಾನೂನುಬದ್ಧ ವಾರಸುದಾರರನ್ನು ಒಳಗೊಳ್ಳುವುದು.
(2) ಈ ಅಧಿನಿಯಮದಲ್ಲಿ ಬಳಸಲಾದ ಆದರೆ ಪರಿಭಾಷಿಸದಿರುವ ಪದಗಳು ಮತ್ತು ಪದಾವಳಿಗಳು ಭಾರತೀಯ ನ್ಯಾಯ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 45), ಭಾರತೀಯ ಸಾಕ್ಷ್ಯ ಅಧಿನಿಯಮ, 2023 (2023ರ ಕೇಂದ್ರ ಅಧಿನಿಯಮ 47), ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 46), ಅಥವಾ ಸಂದರ್ಭಾನುಸಾರ ಮಾನವ ಹಕ್ಕುಗಳ ರಕ್ಷಣೆ ಅಧಿನಿಯಮ, 1993 (1994ರ ಕೇಂದ್ರ ಅಧಿನಿಯಮ 10)ರಲ್ಲಿ ಅನುಕ್ರಮವಾಗಿ ಅವುಗಳಿಗೆ ಆ ಅಧಿನಿಯಮತಿಗಳಲ್ಲಿ ನೀಡಲಾದ ಅರ್ಥಗಳನ್ನು ನೀಡಲಾಗಿದೆಯೆಂದು ಭಾವಿಸತಕ್ಕದ್ದು.
3. ಸಾಮಾಜಿಕ ಬಹಿಷ್ಕಾರ.- ಜಾತಿ ಪಂಚಾಯತಿಯ ತೀರ್ಮಾನದ ಅನುಸಾರ ಯಾರೇ
ಸದಸ್ಯನು ಆತನ ಸಮುದಾಯದ ಇನ್ನೊಬ್ಬ ಸದಸ್ಯನ ಮೇಲೆ ಈ ಮುಂದಿನ ಯಾವುದೇ ಕೃತ್ಯವನ್ನು ಎಸಗಿದರೆ, ಸಾಮಾಜಿಕ ಬಹಿಷ್ಕಾರವನ್ನು ಹೇರಿದನೆಂದು ಭಾವಿಸತಕ್ಕದ್ದು, ಆತನು,
(i) ಇನ್ನೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಲು, ಬಾಡಿಗೆಗಾಗಿ ಕೆಲಸ ನಿರ್ವಹಿಸಲು ಅಥವಾ ವ್ಯಾಪಾರ ಮಾಡಲು ನಿರಾಕರಿಸುವುದು; ಅಥವಾ
(ii) ಪ್ರತಿಫಲಕ್ಕಾಗಿ ಸೇವೆಯನ್ನು ಸಲ್ಲಿಸುವುದಕ್ಕೆ ಸೇವೆಗಳನ್ನು ನೀಡುವ ಅಥವಾ ಒಪ್ಪಂದ ಅವಕಾಶಗಳನ್ನು ಒಳಗೊಂಡ ಸದವಕಾಶಗಳನ್ನು ನಿರಾಕರಿಸುವುದು; ಅಥವಾ
(iii) ಸಹಜ ವ್ಯಾವಹಾರಿಕ ಕ್ರಮದಲ್ಲಿ ಸಾಮಾನ್ಯವಾಗಿ ಮಾಡಲಾದ ವಿಷಯಗಳ ಮೇಲಿನ ಯಾವುದೇ ನಿಬಂಧನೆಗಳನ್ನು ನಿರಾಕರಿಸುವುದು; ಅಥವಾ
(iv) ಇತರ ವ್ಯಕ್ತಿಯೊಂದಿಗೆ ನಿರ್ವಹಿಸಲಾಗುವ ವೃತ್ತಿಪರ ಅಥವಾ ವ್ಯಾವಹಾರಿಕ ಸಂಬಂಧಗಳಿಂದ ವಿಮುಖನಾಗುವುದು; ಅಥವಾ
(v) ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ಸಾಮಾಜಿಕ ಅಥವಾ ಧಾರ್ಮಿಕ ಪದ್ಧತಿ, ಆಚರಣೆ ಅಥವಾ ಸಮಾರಂಭವನ್ನು ಆಚರಿಸುವುದರಿಂದ ಅಥವಾ ಸಾಮಾಜಿಕ, ಧಾರ್ಮಿಕ ಅಥವಾ ಸಾಮುದಾಯಿಕ ಕಾರ್ಯಕ್ರಮಗಳು, ಸಮಾರಂಭ, ಸಮಾವೇಶ, ಸಭೆ ಅಥವಾ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವುದರಿಂದ ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(vi) ಆತನ ಸಮುದಾಯದ ಯಾರೇ ಸದಸ್ಯನನ್ನು ಆತನದೇ ಸಮುದಾಯದ ಸದಸ್ಯರು ಸಹಜವಾಗಿ ಮತ್ತು ಸಾಮಾನ್ಯವಾಗಿ ನೆರವೇರಿಸುವ ಮದುವೆ, ಶವಸಂಸ್ಕಾರ ಅಥವಾ ಇತರ ಧಾರ್ಮಿಕ ಸಮಾರಂಭಗಳು ಮತ್ತು ಪದ್ಧತಿಗಳನ್ನು ನಿರ್ವಹಿಸುವುದಕ್ಕಾಗಿನ ಹಕ್ಕನ್ನು ನಿರಾಕರಿಸುವುದು ಅಥವಾ ತಿರಸ್ಕರಿಸುವುದು ಅಥವಾ ನಿರಾಕರಿಸಲು ಅಥವಾ ತಿರಸ್ಕರಿಸಲು ಕಾರಣನಾಗುವುದು;
(vii) ಯಾವುದೇ ಆಧಾರಗಳ ಮೇಲೆ ಸಾಮಾಜಿಕ ಬಹಿಷ್ಕಾರ ಎಸಗುವುದು ಅಥವಾ ಎಸಗಲು ಕಾರಣನಾಗುವುದು;
(viii) ಆತನ ಸಮುದಾಯದ ಯಾರೇ ಸದಸ್ಯನನ್ನು ಸಮಾಜದಲ್ಲಿ ತೊಡಗಿಸಿಕೊಳ್ಳುವುದರಿಂದ ದೂರವಿರಿಸುವುದು ಅಥವಾ ತಿರಸ್ಕರಿಸುವುದು ಅಥವಾ ಅಂಥ ಸದಸ್ಯನೊಂದಿಗಿನ ಸಾಮಾಜಿಕ ಅಥವಾ ವ್ಯಾವಹಾರಿಕ ಬಂಧಗಳನ್ನು ಕಡಿಯುವ ಮೂಲಕ ಅಂಥ ಸದಸ್ಯನ ಬದುಕು ನಿಕೃಷ್ಟವಾಗಲು ಕಾರಣನಾಗುವುದು;
(ix) ಆತನ ಸಮುದಾಯದ ಯಾರೇ ಸದಸ್ಯನನ್ನು ಆತನದೇ ಸಮುದಾಯವು ಧರ್ಮಾದಾಯ ದತ್ತಿ, ಧಾರ್ಮಿಕ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಅಂಥ ಸಮುದಾಯದ ನಿಧಿಗಳಿಂದ ಆ ಸಮುದಾಯದ ಪರವಾಗಿ ಸ್ಥಾಪಿಸಿದ ಅಥವಾ ನಿರ್ವಹಿಸುತ್ತಿರುವ ಅಥವಾ ಬಳಸುತ್ತಿರುವ ಅಥವಾ ಬಳಸಲು ಉದ್ದೇಶಿಸಿರುವ ಮತ್ತು ಆತನದೇ ಸಮುದಾಯದ ಯಾರೇ ಇತರ ಸದಸ್ಯರು ಸಾಮಾನ್ಯವಾಗಿ ಬಳಸಲು ಲಭ್ಯವಿರುವ ಯಾವುದೇ ಸ್ಥಳಕ್ಕೆ ಪ್ರವೇಶಿಸುಕ್ಕೆ ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು.
(x) ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ಶಾಲೆ, ಶೈಕ್ಷಣಿಕ ಸಂಸ್ಥೆ ವೈದ್ಯಕೀಯ ಸಂಸ್ಥೆ ಸಮುದಾಯ ಸಭಾಂಗಣ, ಕ್ಲಬ್ ಹಾಲ್, ಸ್ಮಶಾನ, ಸಮಾಧಿ ಸ್ಥಳ ಅಥವಾ ಆತನ ಸಮುದಾಯವು ಬಳಸುವ ಅಥವಾ ಬಳಸಲು ಉದ್ದೇಶಿಸಿರುವ ಯಾವುದೇ ಇತರ ಸ್ಥಳ ಅಥವಾ ಯಾವುದೇ ಇತರ ಸಾರ್ವಜನಿಕ ಸ್ಥಳದ ಸೌಲಭ್ಯ ಒದಗಿಸುವುದನ್ನು ಅಥವಾ ಬಳಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(xi) ಆತನ ಸಮುದಾಯದ ಯಾರೇ ಸದಸ್ಯನನ್ನು ಆತನ ಸಮುದಾಯದ ಪ್ರಯೋಜನಕ್ಕಾಗಿ ರಚಿಸಲಾದ ಧರ್ಮಾದಾಯ ನ್ಯಾಸದ (charitable trust) ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆಯುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(xii) ಆತನ ಸಮುದಾಯದ ಯಾರೇ ಸದಸ್ಯನನ್ನು ನೇರವಾಗಿ ಅಥವಾ ಪರೋಕ್ಷವಾಗಿ, ಆತನ ಸಮುದಾಯದ ಯಾರೇ ಸದಸ್ಯ ಅಥವಾ ಇತರ ಸದಸ್ಯರೊಂದಿಗೆ ಸಾಮಾಜಿಕ, ಧಾರ್ಮಿಕ, ವೃತ್ತಿಪರ ಅಥವಾ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳಲು ಪ್ರಚೋದಿಸುವುದು ಅಥವಾ ಉತ್ತೇಜಿಸುವುದು;
(xi) ಆತನ ಸಮುದಾಯದ ಯಾರೇ ಸದಸ್ಯನನ್ನು ಆತನ ಸಮುದಾಯದ ಸದಸ್ಯರಿಗೆ ಸಾಮಾನ್ಯವಾಗಿ ಮುಕ್ತವಾಗಿರುವ ಯಾವುದೇ ಪೂಜಾ ಸ್ಥಳ ಅಥವಾ ತೀರ್ಥಕ್ಷೇತ್ರ ಪ್ರವೇಶಿಸುವುದನ್ನು ಅದರಲ್ಲಿ ತಂಗುವುದನ್ನು ಅಥವಾ ಅನ್ಯಥಾ ರೀತಿಯಲ್ಲಿ ಬಳಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(xiv) ಆತನ ಸಮುದಾಯದ ಯಾರೇ ಸದಸ್ಯನನ್ನು ಆತನ ಇತರ ಸದಸ್ಯರೊಂದಿಗೆ ಸಾಮಾನ್ಯವಾಗಿ ಸ್ಥಾಪಿಸಲಾದ ಅಥವಾ ನಿರ್ವಹಿಸಲಾಗುತ್ತಿರುವ ಅಂಥ ಸಾಮಾಜಿಕ, ವೃತ್ತಿಪರ ಅಥವಾ ವ್ಯಾಪಾರ ಸಂಬಂಧ ಸ್ಥಾಪಿಸುವುದನ್ನು ಅಥವಾ ನಿರ್ವಹಿಸುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(xv) ಆತನ ಸಮುದಾಯದ ಯಾರೇ ಮಕ್ಕಳು ನಿರ್ದಿಷ್ಟ ಕುಟುಂಬದ ಅಥವಾ ಸಮುದಾಯದ ಇತರ ಕುಟುಂಬಗಳ ಮಕ್ಕಳೊಂದಿಗೆ ಒಟ್ಟಿಗೆ ಆಟವಾಡುವುದನ್ನು ತಡೆಯುವುದು ಅಥವಾ ನಿರ್ಬಂಧಿಸುವುದು ಅಥವಾ ತಡೆಯಲು ಅಥವಾ ನಿರ್ಬಂಧಿಸಲು ಕಾರಣನಾಗುವುದು;
(xvi) ಆತನ ಸಮುದಾಯದ ಯಾರೇ ಸದಸ್ಯನನ್ನು ಮಾನವ ಹಕ್ಕುಗಳನ್ನು ಪಡೆಯುವುದನ್ನು ನಿರ್ಬಂಧಿಸುವುದು ಅಥವಾ ನಿರಾಕರಿಸುವುದು ಅಥವಾ ನಿರ್ಬಂಧಿಸಲು ಅಥವಾ ನಿರಾಕರಿಸಲು ಕಾರಣನಾಗುವುದು;
(xvii) ನೈತಿಕತೆ, ಸಾಮಾಜಿಕ ಸ್ವೀಕಾರ, ರಾಜಕೀಯ ಒಲವು, ಲಿಂಗತ್ವ ಅಥವಾ ಯಾವುದೇ ಇತರ ಆಧಾರದ ಮೇಲೆ ಸಮುದಾಯದ ಸದಸ್ಯರ ನಡುವೆ ತಾರತಮ್ಯವನ್ನು ಉಂಟುಮಾಡುವುದು ಅಥವಾ ತಾರತಮ್ಯವನ್ನು ಉಂಟುಮಾಡಲು ಕಾರಣನಾಗುವುದು;
(xviii) ಸಾಂಸ್ಕೃತಿಕ ಅಡಚಣೆಯನ್ನು ಸೃಷ್ಟಿಸುವುದು ಅಥವಾ ಸೃಷ್ಟಿಗೆ ಕಾರಣವಾಗುವುದು ಅಥವಾ ಆತನ ಸಮುದಾಯದ ಯಾರೇ ಸದಸ್ಯನನ್ನು ಯಾವುದೇ ನಿರ್ದಿಷ್ಟ ರೀತಿಯ ಬಟ್ಟೆಗಳನ್ನು ಧರಿಸಲು ಅಥವಾ ಯಾವುದೇ ನಿರ್ದಿಷ್ಟ ಭಾಷೆಯನ್ನು ಬಳಸಲು ಒತ್ತಾಯಿಸುವುದು;
(xix) ಆತನ ಸಮುದಾಯದ ಯಾರೇ ಸದಸ್ಯನನ್ನು ಸದರಿ ಸಮುದಾಯದಿಂದ ಹೊರಹಾಕುವುದು ಅಥವಾ ಹೊರಹಾಕಲು ಕಾರಣನಾಗುವುದು, ಮತ್ತು
(xx) ಸಾಮಾಜಿಕ ಬಹಿಷ್ಕಾರಕ್ಕೆ ಸಮಾನವಾದ ಯಾವುದೇ ಇತರ ಕೃತ್ಯಗಳನ್ನು ಎಸಗುವುದು.
4. ಸಾಮಾಜಿಕ ಬಹಿಷ್ಕಾರದ ನಿಷೇಧ.- ಸಾಮಾಜಿಕ ಬಹಿಷ್ಕಾರವನ್ನು ಈ ಮೂಲಕ
ನಿಷೇಧಿಸಲಾಗಿದೆ ಹಾಗೂ ಅದನ್ನು ಮಾಡುವುದು ಮತ್ತು ಆಚರಿಸುವುದು ಅಪರಾಧವಾಗಿರತಕ್ಕದ್ದು.
5. ಸಾಮಾಜಿಕ ಬಹಿಷ್ಕಾರಕ್ಕೆ ಶಿಕ್ಷೆ.- ಯಾರೇ ವ್ಯಕ್ತಿಯು ತನ್ನ ಸಮುದಾಯದ ಯಾರೇ ವ್ಯಕ್ತಿಯ ಮೇಲೆ ಯಾವುದೇ ಸಾಮಾಜಿಕ ಬಹಿಷ್ಕಾರವನ್ನು ಹೇರಿದರೆ ಅಥವಾ ಹೇರಲು ಕಾರಣನಾದರೆ ಅಥವಾ ಆಚರಿಸಿದರೆ, ಅಪರಾಧ ನಿರ್ಣೀತನಾದ ಮೇಲೆ ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸಅಥವಾ ಒಂದು ಲಕ್ಷ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಇವೆರಡರಲ್ಲಿ ಯಾವುದೇ ಪ್ರಕಾರದ ಅಥವಾ ಇವರೆಡರಿಂದಲೂ ದಂಡಿತನಾಗತಕ್ಕದ್ದು.
ವಿವರಣೆ 1.- ವ್ಯಕ್ತಿಯು ತನ್ನ ಅಧಿಕಾರವನ್ನು ಬಳಸಿ ಅಥವಾ ಬಳಸಲು ಕಾರಣವಾಗಿ ಸಾಮಾಜಿಕ ಬಹಿಷ್ಕಾರ ವಿಧಿಸುವುದಕ್ಕಾಗಿ ಜಾತಿ ಪಂಚಾಯಿತಿಯ ಸಭೆಗಳಲ್ಲಿ ಮತಚಲಾಯಿಸಲು ಅದರ ಇತರ ಸದಸ್ಯರನ್ನು ಪ್ರಭಾವಿಸಿ, ಅಂಥ ಸಭೆಯಲ್ಲಿ ಉಪಸ್ಥಿತನಾಗಿಲ್ಲದಿದ್ದರೂ ಸಹ ಈ ಪ್ರಕರಣದಡಿ ಅಪರಾಧ ಮಾಡಿರುವುದಾಗಿ ಭಾವಿಸತಕ್ಕದ್ದು.
ವಿವರಣೆ II.- ಜಾತಿ ಪಂಚಾಯಿತಿ ಸಭೆಯು ನಡೆದಾಗ, ಸಾಮಾಜಿಕ ಬಹಿಷ್ಕಾರ ವಿಧಿಸುವ ನಿರ್ಣಯವನ್ನು ಮಾಡಿ, ಅಂಥ ನಿರ್ಣಯವನ್ನು ಹೊರಡಿಸಿದಾಗ, ಸಭೆಯ ಅಂಥ ನಿರ್ಣಯ ಅಥವಾ ಆಚರಣೆಯ ಚರ್ಚೆಗಳ ಪರವಾಗಿ ಮತಚಲಾಯಿಸಿದ ಪ್ರತಿ ಸದಸ್ಯನು ಈ ಪ್ರಕರಣದಡಿ ಅಪರಾಧ ಮಾಡಿರುವುದಾಗಿ ಭಾವಿಸತಕ್ಕದ್ದು.
6. ಸಾಮಾಜಿಕ ಬಹಿಷ್ಕಾರ ವಿಧಿಸುವುದಕ್ಕಾಗಿ ಸಭೆ ಸೇರುವುದರ ನಿಷೇಧ.- ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಸಮುದಾಯದ ಯಾರೇ ಸದಸ್ಯನ ಮೇಲೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸುವ ವಿಷಯದ ಮೇಲೆ ಅಭಿಪ್ರಾಯ ಅಥವಾ ಉದ್ದೇಶಪೂರ್ವಕ ಚರ್ಚೆಯೊಂದಿಗೆ ಒಟ್ಟುಗೂಡುವುದು, ಸಭೆ ಸೇರುವುದು ಅಥವಾ ಗುಂಪುಗೂಡುವುದನ್ನು ಮಾಡತಕ್ಕದ್ದಲ್ಲ; ಅಂಥ ಒಟ್ಟುಗೂಡುವಿಕೆ, ಸಭೆ ಸೇರುವಿಕೆ ಅಥವಾ ಗುಂಪುಗೂಡುವಿಕೆಯನ್ನು ಕಾನೂನುಬಾಹಿರ ಸಭೆ ಸೇರುವಿಕೆಯಂತೆ ಪರಿಗಣಿಸತಕ್ಕದ್ದು ಹಾಗೂ ಅಂಥ ಸಭೆ ಸೇರುವಿಕೆಯನ್ನು ಕರೆದಿರುವ ಅಥವಾ ಸಂಘಟಿಸಿರುವ ಪ್ರತಿ ವ್ಯಕ್ತಿಯನ್ನು ಮತ್ತು ಅದರಲ್ಲಿ ಭಾಗವಹಿಸಿರುವ ಅದರ ಪ್ರತಿ ಸದಸ್ಯನು ಒಂದು ಲಕ್ಷ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡನೀಯನಾಗತಕ್ಕದ್ದು.
7. ಅಪರಾಧಕ್ಕೆ ನೆರವಾಗುವ ಅಥವಾ ದುಷ್ಪರಿಸುವುದಕ್ಕಾಗಿ ದಂಡನೆ.- 4ನೇ ಪ್ರಕರಣದಡಿಯ ಅಪರಾಧ ಮಾಡಲು ನೆರವು ಅಥವಾ ದುಪ್ರೇರಣೆ ನೀಡಿದ ಯಾರೇ ವ್ಯಕ್ತಿಯು ಮೂರು ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದೊಂದಿಗೆ ಅಥವಾ ಒಂದು ಲಕ್ಷ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆ ಅಥವಾ ಇವೆರಡರಿಂದಲೂ ದಂಡಿತನಾಗತಕ್ಕದ್ದು.
8. ಹಿಂದಿನ ಸಾಮಾಜಿಕ ಬಹಿಷ್ಕಾರದ ಕ್ರಿಯೆಗಳ ಅನೂರ್ಜಿತಗೊಳ್ಳುವಿಕೆ.-
(1) ಈ ಅಧಿನಿಯಮವು ಜಾರಿಗೆ ಬಂದ ದಿನಾಂಕದಂದು, ಅಂಥ ಪ್ರಾರಂಭವು ಜಾರಿಗೆ ಬಂದ ದಿನಾಂಕದೊಂದಿಗೆ, ಯಾವುದೇ ಸಾಮಾಜಿಕ ಬಹಿಷ್ಕಾರದ ಕ್ರಿಯೆಯು ಅನೂರ್ಜಿತಗೊಳ್ಳತಕ್ಕದ್ದು ಮತ್ತು ಪರಿಣಾಮಕಾರಿಯಾಗತಕ್ಕದ್ದಲ್ಲ.
(2) ಸಾಮಾಜಿಕ ಬಹಿಷ್ಕಾರ ವಿಧಿಸುವ ಅಥವಾ ವಿಧಿಸಲು ಕಾರಣವಾಗುವ ಯಾವುದೇ ಜಾತಿ ಪಂಚಾಯಿತಿಯು 4ನೇ ಪ್ರಕರಣದಡಿ ಅಪರಾಧ ಮಾಡಿರುವುದಾಗಿ ಭಾವಿಸತಕ್ಕದ್ದು ಹಾಗೂ 5ನೇ ಪ್ರಕರಣದಡಿ ದಂಡನೆಗೆ ಹೊಣೆಗಾರನಾಗತಕ್ಕದ್ದು.
9. ದಂಡನೆಗೆ ಮೊದಲು ಸಂತ್ರಸ್ತನ ಕೇಳುವಿಕೆ.. ಆಪಾದಿತನ ಅಪರಾಧ
ನಿರ್ಣಯವಾದರೆ, ನ್ಯಾಯಾಲಯವು ದಂಡನೆಯ ಪ್ರಮಾಣವನ್ನು ಸಂತ್ರಸ್ತನಿಗೆ ಕೇಳತಕ್ಕದ್ದು ಮತ್ತು ತರುವಾಯ ಮಾತ್ರ ದಂಡನೆಯನ್ನು ಹೊರಡಿಸತಕ್ಕದ್ದು.
10. ಅಪರಾಧಗಳ ಸಂಜ್ಞೆಯತೆ ಮತ್ತು ಜಾಮೀನೀಯತೆ.- ಈ ಅಧಿನಿಯಮದಡಿಯ ಯಾವುದೇ ದಂಡನೀಯ ಅಪರಾಧವು ಸಂಜ್ಞೆಯವಾಗಿರಕ್ಕದ್ದು ಮತ್ತು ಜಾಮೀನೀಯವಾಗಿರತಕ್ಕದ್ದು ಹಾಗೂ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಂದ ಅಧಿವಿಚಾರಣೆ ನಡೆಯತಕ್ಕದ್ದು.
11. ಅಪರಾಧದ ರಾಜಿಮಾಡಿಕೊಳ್ಳುವಿಕೆ.- ಈ ಅಧಿನಿಯಮದಡಿ ದಂಡನೀಯವಾದ ಅಪರಾಧವನ್ನು, ಸಂತ್ರಸ್ತನ ಸಮ್ಮತಿಯೊಂದಿಗೆ ಹಾಗೂ ನ್ಯಾಯಾಲಯದ ಅನುಮತಿಯೊಂದಿಗೆ ರಾಜಿಮಾಡಿಕೊಳ್ಳಬಹುದು:
ಪರಂತು, ಆಪಾದಿತ ವ್ಯಕ್ತಿಯು ನ್ಯಾಯಾಲಯವು ತಾನು ಸೂಕ್ತವೆಂದು ಭಾವಿಸುವಂಥ ಸಮುದಾಯ ಸೇವೆಗಳನ್ನು ನಿರ್ವಹಿಸುವ ಷರತ್ತಿಗೊಳಪಟ್ಟು, ನ್ಯಾಯಾಲಯವು ಅಪರಾಧಗಳ ರಾಜಿಗಾಗಿ ಆದೇಶದ ಮೂಲಕ ಅನುಮತಿಯನ್ನು ನೀಡತಕ್ಕದ್ದ.
12. ದೂರು ಸ್ವೀಕರಿಸಿದ ತರುವಾಯ ಅನುಸರಿಸಬೇಕಾದ ಕಾರ್ಯವಿಧಾನ. (1) ಸಂತ್ರಸ್ತ ಅಥವಾ ಆತನ ಕುಟುಂಬದ ಯಾರೇ ಸದಸ್ಯ ಪೊಲೀಸರಿಗೆ ಅಥವಾ ನೇರವಾಗಿ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರಿಗೆ ದೂರನ್ನು ದಾಖಲಿಸಬಹುದು ಅಥವಾ ನಿಯಮಿಸಬಹುದಾದ ವಿಧಾನದಲ್ಲಿ ಈ ಅಧಿನಿಯಮದಡಿಯಲ್ಲಿನ ಅಪರಾಧಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸ್ವೀಕರಿಸಿದ ಮೇಲೆ, ಇನ್ಸ್ ಪೆಕ್ಟರ್ ದರ್ಜೆಗಿಂತ ಕಡಿಮೆಯಲ್ಲದ ಪೊಲೀಸ್ ಅಧಿಕಾರಿಯು ಸ್ವಪ್ರೇರಿತ (suo-moto) ಕ್ರಮವನ್ನು ಕೈಗೊಳ್ಳಬಹುದು.
(2) ಉಪಪ್ರಕರಣ (1)ರಡಿ ಯಾರ ಮುಂದೆ ದೂರು ದಾಖಲಿಸಲಾಗಿದೆಯೋ ಆ ಮ್ಯಾಜಿಸ್ಟ್ರೇಟರು ಪೊಲೀಸರಿಗೆ ತನಿಖೆ ನಡೆಸಲು ನಿರ್ದೇಶಿಸಬಹುದು.
(3) ಮ್ಯಾಜಿಸ್ಟ್ರೇಟರು ಅಧಿವಿಚಾರಣೆಯು ಮುಕ್ತಾಯವಾಗುವರೆಗೆ ಸಂತ್ರಸ್ತ ಅಥವಾ ಆತನ ಕುಟುಂಬಕ್ಕೆ, ಆತನು ಸೂಕ್ತವೆಂದು ಭಾವಿಸುವ ಯಾವುದೇ ವಿಧದ ನೆರವು ಅಥವಾ ಸಹಾಯವನ್ನು ಒದಗಿಸುವಂತೆ ಸಹ ಪೊಲೀಸರು ಅಥವಾ ಇತರ ಸಂಬಂಧಿತ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು.
13. ಕ್ರಮ ಕೈಗೊಳ್ಳುವ ಪೊಲೀಸ್ ಅಧಿಕಾರಿ.- ಈ ಅಧಿನಿಯಮದಡಿ ಸಾಮಾಜಿಕ ಬಹಿಷ್ಕಾರದ ಅಪರಾಧದ ಮಾಹಿತಿಯನ್ನು ಸ್ವೀಕರಿಸಿದ ತರುವಾಯ ಪೊಲೀಸ್ ಅಧಿಕಾರಿಯು,-
(ಎ) ಯಾವುದೇ ಸ್ಥಳದಲ್ಲಿ ನಿರ್ಮಿಸಲಾದ ಅಥವಾ ಇರಿಸಲಾದ ಯಾವುದೇ ಅಡ್ಡಿ ಅಥವಾ ತಡೆಯನ್ನು ಈ ಅಧಿನಿಯಮದಡಿ ಅಪರಾಧವನ್ನು ಮಾಡುವ ಉದ್ದೇಶಕ್ಕಾಗಿ ಬಳಸಲಾಗಿದೆಯೆಂಬುದನ್ನು ನಂಬಲು ಅಂಥ ಪೊಲೀಸ್ ಅಧಿಕಾರಿಯು ಯುಕ್ತ ಆಧಾರವನ್ನು ಹೊಂದಿದ್ದರೆ, ಹಾಗೆ ನಿರ್ಮಿಸಿದ ಅಥವಾ ಇರಿಸಲಾದ ಅಡ್ಡಿ ಅಥವಾ ತಡೆಯನ್ನು ತೆಗೆಯಬಹುದು ಅಥವಾ ತೆಗೆಯಲು ಕಾರಣವಾಗಬಹುದು; ಅಥವಾ
(ಬಿ) ಈ ಅಧಿನಿಯಮದಡಿ ಅಪರಾಧವನ್ನು ಮಾಡುವ ಉದ್ದೇಶಕ್ಕಾಗಿ ಅಂಥ ಗೇಟು ಅಥವಾ ಬಾಗಿಲನ್ನು ಮುಚ್ಚಲಾಗಿದೆಯೆಂದು ನಂಬಲು ಅಂಥ ಪೊಲೀಸ್ ಅಧಿಕಾರಿಯು ಯುಕ್ತ ಆಧಾರವನ್ನು ಹೊಂದಿದ್ದರೆ, ಯಾವುದೇ ಗೇಟು ಅಥವಾ ಬಾಗಿಲನ್ನು ತೆರೆಯಬಹುದು ಅಥವಾ ತೆರೆಯಲು ಕಾರಣವಾಗಬಹುದು.
14. ಕೆಲವು ಕಾರ್ಯಗಳನ್ನು ತಡೆಯುವ ಅಧಿಕಾರ.-
1) ಸಾಮಾಜಿಕ ಬಹಿಷ್ಕಾರ:
ವಿಧಿಸುವುದಕ್ಕಾಗಿ ಕಾನೂನು ಬಾಹಿರ ಸಭೆ ಕರೆಯುವ ಸಾಧ್ಯತೆಯಿರುವುದೆಂದು ಮಾಹಿತಿಯನ್ನು ಜಿಲ್ಲಾಧಿಕಾರಿಯು ಸ್ವೀಕರಿಸಿದಾಗ, ಆದೇಶದ ಮೂಲಕ ಆತನು, ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದ ಯಾವುದೇ ಪ್ರದೇಶದಲ್ಲಿ ಯಾರೇ ವ್ಯಕ್ತಿಯು ಅಂಥ ಕಾನೂನು ಬಾಹಿರ ಸಭೆ ಕರೆಯುವುದನ್ನು ಹಾಗೂ ಈ ಅಧಿನಿಯಮದಡಿ ಯಾವುದೇ ಅಪರಾಧ ಎಸಗುವ ಅಂಥ ಯಾವುದೇ ಕಾರ್ಯ ಮಾಡುವುದನ್ನು ನಿಷೇಧಿಸತಕ್ಕದ್ದು.
(2) ಜಿಲ್ಲಾಧಿಕಾರಿಯು ಪೊಲೀಸ್ ಪ್ರಾಧಿಕಾರಗಳಿಗೆ ಸೂಕ್ತ ನೀರ್ದೇಶನಗಳನ್ನು ನೀಡುವುದನ್ನು ಒಳಗೊಂಡು, ಅಂಥ ಆದೇಶಕ್ಕೆ ಪರಿಣಾಮ ನೀಡಲು ಆತನು ಅವಶ್ಯಕವೆಂದು ಭಾವಿಸುವಂಥ ಕ್ರಮಗಳನ್ನು ತೆಗೆದುಕೊಳ್ಳಬಹುದು.
15. ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ.- ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಸರ್ಕಾರದ ‘ಎ’ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯನ್ನು ತಾನು ಅವಶ್ಯಕವೆಂದು ಪರಿಗಣಿಸಬಹುದಾದಂತೆ ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿಯಾಗಿ ಗೊತ್ತುಪಡಿಸಬಹುದು ಹಾಗೂ ಆತನು ಯಾವ ಪ್ರದೇಶ ಅಥವಾ ಪ್ರದೇಶಗಳೊಳಗೆ ನಿಯಮಿಸಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದು ಮತ್ತು ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದೆಂದು ಅಧಿಸೂಚಿಸಬಹುದು.
16. ಸಾಮಾಜಿಕ ಬಹಿಷ್ಕಾರ ಅಧಿಕಾರಿಯ ಪ್ರಕಾರ್ಯಗಳು. ಸಾಮಾಜಿಕ ಬಹಿಷ್ಕಾರ ಅಧಿಕಾರಿಯು ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ:-
(ಎ) ತನ್ನ ಅಧಿಕಾರವ್ಯಾಪ್ತಿಯ ಪ್ರದೇಶದಲ್ಲಿ ಯಾರೇ ವ್ಯಕ್ತಿಯು ಈ ಅಧಿನಿಯಮದ ಉಪಬಂಧಗಳಡಿ ಅಪರಾಧ ಮಾಡಿರುವುದನ್ನು ಪತ್ತೆಹಚ್ಚುವುದು, ತಾನು ಸೂಕ್ತವೆಂದು ಬಾವಿಸುವಂಥ ಕ್ರಮವನ್ನು ತೆಗೆದುಕೊಳ್ಳುವುದು ಮತ್ತು ಅಂಥ ಪ್ರಕರಣಗಳನ್ನು ಮ್ಯಾಜಿಸ್ಟ್ರೇಟರಿಗೆ ಮತ್ತು ಜಿಲ್ಲಾಧಿಕಾರಿಗೆ ವರದಿಮಾಡುವುದು;
(ಬಿ) ಈ ಅಧಿನಿಯಮದಡಿ ಅಪರಾಧಗಳನ್ನು ಮತ್ತು ಅದರ ವ್ಯವಹರಣೆಗಳನ್ನು ಅಧಿವಿಚಾರಣೆ ಮಾಡುವಾಗ ಮ್ಯಾಜಿಸ್ಟ್ರೇಟರಿಗೆ ನೆರವುನೀಡುವುದು.
17. ಸಂತ್ರಸ್ತನಿಗೆ ಪರಿಹಾರ ನೀಡಿಕೆ.- ನ್ಯಾಯಾಲಯವು, ತೀರ್ಪನ್ನು ಹೊರಡಿಸುವಾಗ, ಜುಲ್ಮಾನೆಯ ದಂಡನೆಯನ್ನು ವಿಧಿಸುವಾಗ, ವಸೂಲಾದ ಜುಲ್ಮಾನೆಯ ಪೂರ್ಣ ಅಥವಾ ಭಾಗವನ್ನು ಸಂತ್ರಸ್ತ ಅಥವಾ ಆತನ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಆದೇಶಿಸಬಹುದು.
18. ಅಧಿನಿಯಮವು ಇತರ ಯಾವುದೇ ಕಾನೂನನ್ನು ಅದ್ರೀಕರಿಸುವುದಿಲ್ಲ.. ಈ ಅಧಿನಿಯಮದ ಉಪಬಂಧಗಳು ಹೆಚ್ಚುವರಿಯಾಗಿರತಕ್ಕದ್ದು ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನ ಉಪಬಂಧಗಳನ್ನು ಅದ್ರೀಕರಿಸುವುದಿಲ್ಲ.
19. ಭಾರತೀಯ ನ್ಯಾಯ ಸಂಹಿತೆ, 2023ರಡಿ ಆರೋಪಗಳ ರಚನೆ.- ಈ
ಅಧಿನಿಯಮದಡಿ ಅಪರಾಧಕ್ಕಾಗಿ ಆರೋಪಗಳನ್ನು ರೂಪಿಸುವಾಗ ಭಾರತೀಯ ನ್ಯಾಯ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 45ರ) 3(5), 61(1), 61(2), 190, 196, 308(1) 80 (6) 62ನೇ ಪ್ರಕರಣಗಳಡಿ ಅಪರಾಧ ಮಾಡಿರುವುದನ್ನು ಸಂಗತಿಯು ತಿಳಿಯಪಡಿಸಿದರೆ ಮ್ಯಾಜಿಸ್ಟ್ರೇಟರು ಅವುಗಳಡಿಯಲ್ಲಿಯೂ ಸಹ ಆರೋಪಗಳನ್ನು ರೂಪಿಸಬಹುದು.
20. ನಿಯಮಗಳ ರಚನಾಧಿಕಾರ.-
(1) ರಾಜ್ಯ ಸರ್ಕಾರವು, ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಪೂರ್ವಪ್ರಕಟಣೆಯ ತರುವಾಯ ನಿಯಮಗಳನ್ನು ರಚಿಸಬಹುದು.
(2) ಈ ಅಧಿನಿಯಮದ ಅಡಿಯಲ್ಲಿ ರಚಿಸಲಾದ ಪ್ರತಿಯೊಂದು ನಿಯಮವನ್ನು ಅಥವಾ ಅಧಿಸೂಚನೆಯನ್ನು ಅದನ್ನು ರಚಿಸಿದ ತರುವಾಯ, ಆದಷ್ಟು ಬೇಗನೆ, ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಧಿವೇಶನದಲ್ಲಿ ಅಥವಾ ಎರಡು ಅಥವಾ ಹೆಚ್ಚಿನ ನಿರಂತರ ಅಧಿವೇಶನಗಳಲ್ಲಿ ಅಡಕವಾಗಬಹುದಾದ ಒಟ್ಟು ಮೂವತ್ತು ದಿನಗಳ ಅವಧಿಯವರೆಗೆ ಮಂಡಿಸತಕ್ಕದ್ದು ಮತ್ತು ಮೇಲೆ ಹೇಳಿದ ಅಧಿವೇಶನಗಳ ಅಥವಾ ನಿರಂತರ ಅಧಿವೇಶನಗಳ ನಿಕಟ ತರುವಾಯದ ಅಧಿವೇಶನದ ಮುಕ್ತಾಯಕ್ಕೆ ಮುಂಚೆ ಆ ನಿಯಮದಲ್ಲಿ ಅಥವಾ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡೂ ಸದನಗಳೂ ಒಪ್ಪಿದರೆ ಅಥವಾ ಆ ನಿಯಮವನ್ನು ಅಥವಾ ಅಧಿಸೂಚನೆಯನ್ನು ಮಾಡಕೂಡದೆಂದು ಎರಡೂ ಸದನಗಳೂ ಒಪ್ಪಿದರೆ ಆ ನಿಯಮವು ಅಥವಾ ಅಧಿಸೂಚನೆಯು ಸಂದರ್ಭಾನುಸಾರ ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರ ಆ ಮಾರ್ಪಾಟನ್ನು ಅಥವಾ ರದ್ದತಿಯನ್ನು ಅಧಿಸೂಚಿಸಿದ ದಿನಾಂಕದಿಂದ ಪರಿಣಾಮಕಾರಿಯಾಗತಕ್ಕದ್ದು ಅಥವಾ ಯಾವುದೇ ಪರಿಣಾಮ ಹೊಂದಿರತಕ್ಕದ್ದಲ್ಲ; ಆದಾಗ್ಯೂ ಅಂಥ ಯಾವುದೇ ಮಾರ್ಪಾಟು ಅಥವಾ ರದ್ದತಿಯು ಆ ನಿಯಮದ ಅಥವಾ ಅಧಿಸೂಚನೆಯ ಮೇರೆಗೆ ಹಿಂದೆ ಮಾಡಿದ ಯಾವುದೇ ಕಾರ್ಯದ ಮಾನ್ಯತೆಗೆ ಬಾಧಕವಾಗತಕ್ಕದ್ದಲ್ಲ.
21. ತೊಂದರೆಗಳನ್ನು ನಿವಾರಿಸುವ ಅಧಿಕಾರ.- (1) ಈ ಅಧಿನಿಯಮದ ಉಪಬಂಧಗಳನ್ನು ಜಾರಿಗೆ ತರುವಾಗ, ಯಾವುದೇ ತೊಂದರೆಗಳು ಉದ್ಭವಿಸಿದಲ್ಲಿ, ರಾಜ್ಯ ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ, ತೊಂದರೆಗಳನ್ನು ನಿವಾರಿಸುವ ಉದ್ದೇಶಕ್ಕಾಗಿ ಅವಶ್ಯಕ ಅಥವಾ ಯುಕ್ತವೆಂದು ಕಂಡುಬರುವಂಥ ಈ ಅಧಿನಿಯಮದ ಉಪಬಂಧಗಳಿಗೆ ಅಸಂಗತವಲ್ಲದ ಉಪಬಂಧಗಳನ್ನು ಕಲ್ಪಿಸಬಹುದು :
ಪರಂತು, ಈ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಎರಡು ವರ್ಷಗಳ ಅವಧಿಯ ಮುಕ್ತಾಯದ ತರುವಾಯ ಯಾವುದೇ ಅಂಥ ಆದೇಶವನ್ನು ಮಾಡತಕ್ಕದ್ದಲ್ಲ.
(2) ಉಪ-ಪ್ರಕರಣ (1)ರಡಿ ಮಾಡಿದ ಪ್ರತಿಯೊಂದು ಆದೇಶವನ್ನು, ಅದನ್ನು ಮಾಡಿದ ತರುವಾಯ ಸಾಧ್ಯವಾದಷ್ಟು ಬೇಗನೆ ರಾಜ್ಯ ವಿಧಾನಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು.
