Unit – 1 Teaching Aptitude: ಬೋಧನಾ ಸಾಮರ್ಥ್ಯ
Unit-1 Teaching Aptitude (ಬೋಧನಾ ಸಾಮರ್ಥ್ಯ) ಕುರಿತು ಸಂಪೂರ್ಣ ಮಾಹಿತಿ, ಬೋಧನೆಯ ಅರ್ಥ, ಉದ್ದೇಶಗಳು, ಬೋಧನಾ ವಿಧಾನಗಳು, ಶಿಕ್ಷಕರ ಗುಣಗಳು, ಕಲಿಕಾ ಪ್ರಕ್ರಿಯೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪ್ರಮುಖ ಅಂಶಗಳನ್ನು ಸರಳವಾಗಿ ತಿಳಿದುಕೊಳ್ಳಿ.
Teaching: Concept (ಬೋಧನೆಯ ಪರಿಕಲ್ಪನೆ)
ಬೋಧನೆ ಅಂದರೆ ಜ್ಞಾನ, ಕೌಶಲ್ಯ, ಮೌಲ್ಯ ಮತ್ತು ಧೋರಣೆಗಳನ್ನು ವಿದ್ಯಾರ್ಥಿಗಳಿಗೆ ಸಾರುವ ಸಕ್ರಿಯ ಪ್ರಕ್ರಿಯೆ. ಇದು ಕೇವಲ ಮಾಹಿತಿಯನ್ನು ನೀಡುವುದಲ್ಲ; ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸಕ್ಕೆ ಮಾರ್ಗದರ್ಶನ ನೀಡುವುದು. ಬೋಧನೆ ಎರಡು ದಿಶೆಯ ಪ್ರಕ್ರಿಯೆ – ಶಿಕ್ಷಕ ಮತ್ತು ವಿದ್ಯಾರ್ಥಿ ಎರಡರ ಸಹಭಾಗಿತ್ವದಿಂದ ಇದು ಪರಿಣಾಮಕಾರಿ ಆಗುತ್ತದೆ.
Objectives of Teaching (ಬೋಧನೆಯ ಉದ್ದೇಶಗಳು)
1. ಜ್ಞಾನಾತ್ಮಕ ಗುರಿಗಳು (Cognitive Objectives)
ಇವು ಬ್ಲೂಮ್ ಟ್ಯಾಕ್ಸಾನಮಿ (Bloom’s Taxonomy) ಯ ಮೊದಲ ಹಂತ. ವಿದ್ಯಾರ್ಥಿಗಳ ಬುದ್ದಿ-ವಿಶ್ಲೇಷಣಾ ಸಾಮರ್ಥ್ಯಗಳನ್ನು ಬೆಳೆಸುವುದು ಇದರ ಉದ್ದೇಶ.
ಜ್ಞಾನ (Knowledge):
ವಿಷಯವನ್ನು ನೆನಪಿಸಿಕೊಳ್ಳುವುದು. ಉದಾ: ಇತಿಹಾಸದ ದಿನಾಂಕಗಳನ್ನು ಹೇಳುವುದು.
ಅರ್ಥಗ್ರಹಣ (Comprehension):
ವಿಷಯವನ್ನು ಅರ್ಥಮಾಡಿಕೊಳ್ಳುವುದು. ಉದಾ: ಪಾಠದ ಅರ್ಥವನ್ನು ವಿವರಿಸುವುದು.
ಅನ್ವಯಿಕೆ (Application):
ಕಲಿತ ಮಾಹಿತಿಯನ್ನು ಬಳಸುವುದು. ಉದಾ: ಗಣಿತ ಸೂತ್ರಗಳನ್ನು ಸಮಸ್ಯೆ ಬಗೆಹರಿಸಲು ಬಳಸುವುದು.
ವಿಶ್ಲೇಷಣೆ (Analysis):
ವಿಷಯವನ್ನು ಭಾಗಗಳಾಗಿ ವಿಭಜಿಸಿ ಅರ್ಥ ಮಾಡಿಕೊಳ್ಳುವುದು. ಉದಾ: ಕವಿತೆಯ ಅರ್ಥವನ್ನು ಪದ, ಸಾಲು, ಅಂಶಗಳ ಮೂಲಕ ವಿಶ್ಲೇಷಿಸುವುದು.
ಸಂಶ್ಲೇಷಣೆ (Synthesis):
ವಿಭಿನ್ನ ಮಾಹಿತಿಗಳನ್ನು ಸೇರಿಸಿ ಹೊಸ ರೂಪವನ್ನು ಸೃಷ್ಟಿಸುವುದು.
ಉದಾ: ಒಂದು ಕಥೆ ಬರೆಯುವುದು.
ಮೌಲ್ಯಮಾಪನ (Evaluation): ವಿಮರ್ಶಾತ್ಮಕವಾಗಿ ತೀರ್ಮಾನಿಸುವುದು. ಉದಾ: ಒಂದು ಲೇಖನದ ಒಳಿತು-ಕೆಡುಕುಗಳನ್ನು ಅಳೆಯುವುದು.
2. ಭಾವನಾತ್ಮಕ ಗುರಿಗಳು (Affective Objectives)
ಇವು ವಿದ್ಯಾರ್ಥಿಗಳ ಮನೋಭಾವ, ಮೌಲ್ಯಗಳು ಮತ್ತು ಧೋರಣೆಗಳ ಬೆಳವಣಿಗೆ ಯೊಂದಿಗೆ ಸಂಬಂಧಪಟ್ಟಿವೆ.
ಸ್ವೀಕಾರ (Receiving):
ವಿಷಯವನ್ನು ಗಮನದಿಂದ ಕೇಳುವುದು.
ಪ್ರತಿಕ್ರಿಯೆ (Responding):
ಪ್ರಶ್ನೆಗಳಿಗೆ ಉತ್ತರಿಸುವುದು, ಚರ್ಚೆಯಲ್ಲಿ ಪಾಲ್ಗೊಳ್ಳುವುದು.
ಮೌಲ್ಯ ನಿಶ್ಚಯ (Valuing):
ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು. ಉದಾ: ಸತ್ಯ, ಪ್ರಾಮಾಣಿಕತೆ.
ಸಂಘಟನೆ (Organizing):
ವಿಭಿನ್ನ ಮೌಲ್ಯಗಳನ್ನು ಹೊಂದಾಣಿಕೆ ಮಾಡುವುದು. ಉದಾ: ಸಹಿಷ್ಣುತೆ, ಸಹಕಾರ.
ಅಂತರೀಕರಣ (Characterization): ಜೀವನದಲ್ಲಿ ನಂಬಿಕೆಗಳು ಹಾಗೂ ಧೋರಣೆಗಳನ್ನು ಅಳವಡಿಸಿಕೊಂಡು ನಡೆಯುವುದು. ಉದಾ: ಸದಾ ಸತ್ಯವಂತಿಕೆ ಪಾಲಿಸುವುದು.
3. ಕ್ರಿಯಾತ್ಮಕ ಗುರಿಗಳು (Psychomotor Objectives)
ಇವು ಕೈ-ಕಣ್ಣು ಹೊಂದಾಣಿಕೆ, ದೈಹಿಕ ಕೌಶಲ್ಯಗಳು ಮತ್ತು ಅಭ್ಯಾಸ ಸಾಮರ್ಥ್ಯಗಳ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ.
ಅನುಕರಣ (Imitation):
ಶಿಕ್ಷಕನ ತೋರಿಸುವ ಕ್ರಿಯೆಯನ್ನು ಅನುಸರಿಸುವುದು. ಉದಾ: ಶಿಕ್ಷಕ ಬರೆದಂತೆ ವಿದ್ಯಾರ್ಥಿ ಬರೆಯುವುದು.
ಅಭ್ಯಾಸ (Manipulation):
ಸ್ವತಃ ಪ್ರಯತ್ನಿಸುವುದು. ಉದಾ: ಪ್ರಾಯೋಗಿಕ ಪ್ರಯೋಗ ನಡೆಸುವುದು.
ನಿಖರತೆ (Precision):
ತಪ್ಪಿಲ್ಲದಂತೆ ಕಾರ್ಯವನ್ನು ಮಾಡುವುದು. ಉದಾ: ಸಂಗೀತ ವಾದ್ಯವನ್ನು ಸರಿಯಾಗಿ ವಾದಿಸುವುದು.
ಸಂಕೀರ್ಣ ಕೌಶಲ್ಯ (Articulation):
ವಿಭಿನ್ನ ಕೌಶಲ್ಯಗಳನ್ನು ಸೇರಿಸಿ ಪ್ರದರ್ಶಿಸುವುದು. ಉದಾ: ಕ್ರೀಡೆಯಲ್ಲಿ ತಂತ್ರಗಳನ್ನು ಬಳಸಿ ಆಟ ಆಡುವುದು.
▪️ಸ್ವಯಂಚಾಲಿತಿಕೆ (Naturalization): ಯಾವುದೇ ಯೋಚನೆ ಇಲ್ಲದೆ ನೈಸರ್ಗಿಕವಾಗಿ ಕ್ರಿಯೆ ನಡೆಯುವುದು. ಉದಾ: ಬರೆದರೆ ಓದಲು ಬಾರದ ಮಕ್ಕಳು ನಂತರ ಸರಾಗವಾಗಿ ಓದುವುದು.
Levels of Teaching (ಬೋಧನೆಯ ಹಂತಗಳು)
1. Memory Level of Teaching (ಸ್ಮರಣ ಹಂತ )
▪️ಇದು ಬೋಧನೆಯ ಅತಿ ಕೆಳಮಟ್ಟದ ಹಂತ, “thoughtless teaching” ಎಂದೂ ಕರೆಯುತ್ತಾರೆ.
▪️ವಿದ್ಯಾರ್ಥಿ ಇಲ್ಲಿ ಕೇವಲ ನೆನಪಿಡುವಿಕೆ (rote learning) ಯನ್ನು ಮಾಡುತ್ತಾನೆ. ವಿಷಯವನ್ನು ಅರ್ಥಮಾಡಿಕೊಳ್ಳದೆ ಪುನರಾವರ್ತನೆ ಮಾಡುತ್ತಾನೆ.
▪️ಈ ಹಂತದಲ್ಲಿ ಗುರುವು ಕೇಂದ್ರ, ವಿದ್ಯಾರ್ಥಿ ಪ್ಯಾಸಿವ್ (Passive) ಆಗಿರುತ್ತಾನೆ.
▪️ಗುರಿ: ಜ್ಞಾನವನ್ನು ಸಂಗ್ರಹಿಸುವುದು ಮಾತ್ರ.
▪️ಲಾಭ: ಅತಿ ಬೇಗನೆ ಹೆಚ್ಚಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಂಚಬಹುದು.
▪️ಮಿತಿ: ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ಸೃಜನಶೀಲತೆ ಬೆಳೆಯುವುದಿಲ್ಲ.
▪️ಉದಾಹರಣೆ: ದಿನಾಂಕ, ಸೂತ್ರ, ವ್ಯಾಖ್ಯಾನ, ಪದಗಳ ಅರ್ಥಗಳನ್ನು ಕೇವಲ ನೆನಪಿಡುವುದು.
2. Understanding Level of Teaching (ಅರ್ಥ ಗ್ರಹಣ ಹಂತ)
▪️ಇದು ಬೋಧನೆಯ ಮಧ್ಯಮ ಹಂತ, “thoughtful teaching” ಎಂದೂ ಕರೆಯುತ್ತಾರೆ.
▪️ವಿದ್ಯಾರ್ಥಿ ಇಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಅರ್ಥಮಾಡಿಕೊಳ್ಳುತ್ತಾನೆ.
▪️ಶಿಕ್ಷಕ “ಗೈಡ್” ಆಗಿ ವಿದ್ಯಾರ್ಥಿಗೆ ತಿಳುವಳಿಕೆ ಮೂಡಿಸುತ್ತಾನೆ.
▪️ಗುರಿ: ವಿಷಯದ ಅರ್ಥವನ್ನು ತಿಳಿಸುವುದು ಮತ್ತು ಅದನ್ನು ಅನ್ವಯಿಸಲು ಸಹಾಯ ಮಾಡುವುದು.
▪️ಲಾಭ: ವಿದ್ಯಾರ್ಥಿ ವಿಷಯವನ್ನು ಬೇರೆಯ ಸಂದರ್ಭಗಳಲ್ಲಿ ಬಳಸಬಲ್ಲನು. ತಾರ್ಕಿಕತೆ ಬೆಳೆಯುತ್ತದೆ.
▪️ಮಿತಿ: ಹೆಚ್ಚಿನ ಸಮಯ ಬೇಕಾಗುತ್ತದೆ ಮತ್ತು ಎಲ್ಲಾ ವಿಷಯಗಳನ್ನು ಈ ಹಂತದಲ್ಲಿ ಬೋಧಿಸಲು ಸಾಧ್ಯವಿಲ್ಲ.
▪️ಉದಾಹರಣೆ: ಗಣಿತದಲ್ಲಿ ನಿಯಮವನ್ನು ಅರ್ಥಮಾಡಿಕೊಂಡು ಸಮಸ್ಯೆ ಬಗೆಹರಿಸುವುದು, ಇತಿಹಾಸದ ಘಟನೆಗಳ ಕಾರಣ-ಪರಿಣಾಮ ತಿಳಿಯುವುದು.
3. ಪ್ರತಿ ಬಿಂಬ ಹಂತ (Reflective Level of Teaching)
▪️ಇದು ಬೋಧನೆಯ ಅತಿ ಮೇಲ್ಮಟ್ಟದ ಹಂತ, “upper thoughtful teaching” ಎಂದೂ ಕರೆಯುತ್ತಾರೆ.
▪️ವಿದ್ಯಾರ್ಥಿ ಇಲ್ಲಿ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣೆ, ಸಮಸ್ಯೆ ಪರಿಹಾರ ಹಾಗೂ ಸೃಜನಶೀಲತೆ ತೋರಿಸುತ್ತಾನೆ.
▪️ಶಿಕ್ಷಕ ಇಲ್ಲಿ ಕೇವಲ ಮಾರ್ಗದರ್ಶಕ (Facilitator), ವಿದ್ಯಾರ್ಥಿ ಕೇಂದ್ರವಾಗಿರುತ್ತಾನೆ.
▪️ಗುರಿ: ಸ್ವತಂತ್ರವಾಗಿ ಯೋಚಿಸುವುದು, ಹೊಸ ಪರಿಹಾರಗಳನ್ನು ಕಂಡುಹಿಡಿಯುವುದು.
▪️ಲಾಭ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಂಶೋಧನಾ ಮನೋಭಾವ, ತಾರ್ಕಿಕತೆ ಬೆಳೆಯುತ್ತದೆ.
▪️ಮಿತಿ: ಇದು ಹೆಚ್ಚು ಸಮಯ, ಹೆಚ್ಚಿನ ಸಾಮರ್ಥ್ಯ, ಅನುಭವ ಹೊಂದಿದ ವಿದ್ಯಾರ್ಥಿಗಳಿಗಷ್ಟೇ ಪರಿಣಾಮಕಾರಿ.
▪️ಉದಾಹರಣೆ: ವೈಜ್ಞಾನಿಕ ಪ್ರಾಜೆಕ್ಟ್ ಮಾಡುವುದು, ಹೊಸ ತತ್ವ ರೂಪಿಸುವುದು, ಸಂಶೋಧನೆ ಬರೆಯುವುದು.
Characteristics of Teaching (ಬೋಧನೆಯ ಲಕ್ಷಣಗಳು)
1. ಸಾಮಾಜಿಕ ಪ್ರಕ್ರಿಯೆ (Social Process)
▪️ಬೋಧನೆ ಎಂದರೆ ಕೇವಲ ಮಾಹಿತಿಯನ್ನು ಹಂಚುವುದು ಅಲ್ಲ; ಅದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ನಡೆಯುವ ಪರಸ್ಪರ ಕ್ರಿಯೆ (interaction).
▪️ಒಳ್ಳೆಯ ಬೋಧನೆಗೆ ಸಂವಾದ, ಚರ್ಚೆ, ಪ್ರಶ್ನೆ-ಉತ್ತರ, ಗುಂಪು ಚಟುವಟಿಕೆಗಳಂತಹ ಸಾಮಾಜಿಕ ಕ್ರಿಯೆಗಳು ಅವಶ್ಯಕ.
▪️ಇದರಿಂದ ವಿದ್ಯಾರ್ಥಿಗಳಲ್ಲಿ ಸಹಕಾರ, ಸಂವಹನ ಕೌಶಲ್ಯ ಹಾಗೂ ಸಾಮಾಜಿಕ ಮೌಲ್ಯಗಳು ಬೆಳೆಯುತ್ತವೆ.
2. ಉದ್ದೇಶಪೂರ್ವಕ (Purposeful)
▪️ಪ್ರತಿಯೊಂದು ಬೋಧನೆಗೂ ಸ್ಪಷ್ಟ ಗುರಿ ಇರುತ್ತದೆ.
▪️ಆ ಗುರಿಗಳು ಜ್ಞಾನಾತ್ಮಕ, ಭಾವನಾತ್ಮಕ ಅಥವಾ ಕ್ರಿಯಾತ್ಮಕವಾಗಿರಬಹುದು.
▪️ಉದಾಹರಣೆಗೆ, ಗಣಿತ ಪಾಠ ಬೋಧಿಸುವ ಗುರಿ ಕೇವಲ ಸೂತ್ರ ಕಲಿಸುವುದಲ್ಲ; ಅದನ್ನು ಸಮಸ್ಯೆ ಬಗೆಹರಿಸಲು ಬಳಸುವ ಸಾಮರ್ಥ್ಯ ಬೆಳೆಸುವುದು.
▪️ಹೀಗಾಗಿ ಬೋಧನೆ ಎಂದರೆ ಗುರಿ ಹೊಂದಿದ ಕಾರ್ಯ, ಅಪ್ರಯೋಜಕ ಮಾಹಿತಿ ಹರಿವು ಅಲ್ಲ.
3. ದ್ವಿದಿಶೀಯ ಪ್ರಕ್ರಿಯೆ (Bidirectional Process)
▪️ಬೋಧನೆ ಒಂದು ಎರಡು ದಿಶೆಯ ಸಂವಹನ.
▪️ಕೇವಲ ಶಿಕ್ಷಕ ಮಾತನಾಡಿ, ವಿದ್ಯಾರ್ಥಿ ಕೇಳುವುದು ಮಾತ್ರ ಬೋಧನೆ ಅಲ್ಲ; ವಿದ್ಯಾರ್ಥಿಗಳ ಪ್ರಶ್ನೆ, ಪ್ರತಿಕ್ರಿಯೆ, ಚಟುವಟಿಕೆಗಳೂ ಮುಖ್ಯ.
▪️ಶಿಕ್ಷಕ-ವಿದ್ಯಾರ್ಥಿ ನಡುವಿನ ಪ್ರತಿಕ್ರಿಯೆಯಿಂದ (feedback) ಬೋಧನೆ ಪರಿಣಾಮಕಾರಿ ಆಗುತ್ತದೆ.
▪️ಉದಾ: ಪಾಠದ ಮಧ್ಯೆ ಪ್ರಶ್ನೆ-ಉತ್ತರ, ಚರ್ಚೆ, ಪರೀಕ್ಷೆಗಳ ಮೂಲಕ ಪ್ರತಿಕ್ರಿಯೆ ಪಡೆಯುವುದು.
4. ವಿದ್ಯಾರ್ಥಿ ಕೇಂದ್ರಿತ (Learner-Centered)
▪️ಆಧುನಿಕ ಬೋಧನೆ ವಿದ್ಯಾರ್ಥಿಯ ಆಸಕ್ತಿ, ಸಾಮರ್ಥ್ಯ, ಅಗತ್ಯ ಮತ್ತು ಹಿನ್ನೆಲೆಗಳನ್ನು ಗಮನಿಸಿ ರೂಪಿಸಲ್ಪಡುತ್ತದೆ.
▪️ಹಳೆಯ ಕಾಲದಲ್ಲಿ ಶಿಕ್ಷಕ ಕೇಂದ್ರಿತ ಬೋಧನೆ ಇತ್ತು; ಈಗ ವಿದ್ಯಾರ್ಥಿ ಕೇಂದ್ರಿತ ಬೋಧನೆ ಮುಖ್ಯ.
▪️ಇದರಿಂದ ವಿದ್ಯಾರ್ಥಿಯ ಸ್ವತಂತ್ರ ಕಲಿಕೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸಬಹುದು.
▪️ಉದಾ: ಪ್ರಾಜೆಕ್ಟ್ ಆಧಾರಿತ ಕಲಿಕೆ, ಕ್ರಿಯಾಶೀಲ ಕಲಿಕೆ ವಿಧಾನ.
5. ಗತಿಶೀಲ (Dynamic)
▪️ಬೋಧನೆ ಎಂದರೆ ಸ್ಥಿರ ಪ್ರಕ್ರಿಯೆ ಅಲ್ಲ. ಅದು ಕಾಲ, ಪರಿಸ್ಥಿತಿ, ಸಮಾಜ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿ ಬದಲಾಗುತ್ತದೆ.
▪️ಇಂದಿನ ಬೋಧನೆಗೆ (Information & Communication Technology), ಸ್ಮಾರ್ಟ್ ಕ್ಲಾಸ್ , ಆನ್ಲೈನ್ ಶಿಕ್ಷಣಗಳ ಪ್ರಾಮುಖ್ಯತೆಯಿದೆ.
▪️ಶಿಕ್ಷಕ ತನ್ನ ವಿಧಾನಗಳನ್ನು ವಿದ್ಯಾರ್ಥಿಗಳ ಅಗತ್ಯ ಹಾಗೂ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.
▪️ಹೀಗಾಗಿ ಬೋಧನೆ ಸದಾ ಪ್ರಗತಿಶೀಲ ಹಾಗೂ ಬದಲಾವಣೆಗೆ ಹೊಂದಿಕೊಳ್ಳುವ ಪ್ರಕ್ರಿಯೆ.
Basic Requirements of Teaching (ಬೋಧನೆಯ ಮೂಲ ಅವಶ್ಯಕತೆಗಳು)
1. ನಿರ್ದಿಷ್ಟ ಗುರಿ (Clear Objectives)
▪️ಬೋಧನೆ ಯಾವ ಗುರಿಗಾಗಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿರಬೇಕು.
▪️ಗುರಿಗಳು ಜ್ಞಾನಾತ್ಮಕ (knowledge), ಭಾವನಾತ್ಮಕ (attitude) ಅಥವಾ ಕ್ರಿಯಾತ್ಮಕ (skills) ಆಗಿರಬಹುದು.
2. ವಿಷಯದ ಆಳವಾದ ತಿಳಿವು (Mastery of Subject)
▪️ಒಳ್ಳೆಯ ಶಿಕ್ಷಕ ತನ್ನ ವಿಷಯದಲ್ಲಿ ಆಳವಾದ ಜ್ಞಾನ ಹೊಂದಿರಬೇಕು.
▪️ವಿಷಯದ ತತ್ವ, ಮೂಲಭೂತ ಅಂಶಗಳು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿದಿದ್ದರೆ ಬೋಧನೆ ಆತ್ಮವಿಶ್ವಾಸದಿಂದ ಸಾಗುತ್ತದೆ.
▪️ವಿಷಯದಲ್ಲಿ ಪರಿಣಿತಿ ಇಲ್ಲದಿದ್ದರೆ ಬೋಧನೆ ಅಸ್ಪಷ್ಟ ಹಾಗೂ ಗೊಂದಲಕಾರಿಯಾಗಬಹುದು.
▪️ಸ್ಪಷ್ಟ ಗುರಿ ಇದ್ದರೆ ಪಾಠ ಕೇಂದ್ರಿತ, ಕ್ರಮಬದ್ಧ ಮತ್ತು ಪರಿಣಾಮಕಾರಿ ಆಗುತ್ತದೆ.
ಸಂವಹನ ಕೌಶಲ್ಯ (Effective Communication)
▪️ಬೋಧನೆಗೆ ಸ್ಪಷ್ಟ, ಸರಳ, ವಿದ್ಯಾರ್ಥಿ ಗ್ರಹಿಸಬಲ್ಲ ರೀತಿಯ ಮಾತು, ಶರೀರ ಭಾಷೆ ಮತ್ತು ದೃಶ್ಯಸಾಮಗ್ರಿಗಳ ಬಳಕೆ ಅಗತ್ಯ.
▪️ಉತ್ತಮ ಸಂವಹನ ಕೌಶಲ್ಯವು ವಿದ್ಯಾರ್ಥಿಗಳ ಆಸಕ್ತಿ ಮತ್ತು ಗಮನ ಸೆಳೆಯುತ್ತದೆ.
▪️ದ್ವಿದಿಶೀಯ ಸಂವಹನ (interaction) ಬೋಧನೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
4. ಬೋಧನಾ ವಿಧಾನಗಳ ಅರಿವು (Use of Methods & Techniques)
▪️ಶಿಕ್ಷಕರ ವಿವಿಧ ಬೋಧನಾ ವಿಧಾನಗಳು (Lecture, Discussion, Demonstration, Project method, ICT tools) ಬಳಸಲು ಬಲ್ಲವನಾಗಿರಬೇಕು.
▪️ಒಂದೇ ವಿಧಾನ ಎಲ್ಲೆಡೆ ಸೂಕ್ತವಲ್ಲ; ವಿಷಯ, ಗುರಿ, ವಿದ್ಯಾರ್ಥಿಗಳ ಮಟ್ಟಕ್ಕೆ ಅನುಗುಣವಾಗಿ ಕ್ರಮ ಬದಲಾಯಿಸಬೇಕು.
5.ವಿದ್ಯಾರ್ಥಿ ಮನೋವಿಜ್ಞಾನ ಅರಿವು (Knowledge of Learner’s Psychology)
▪️ಶಿಕ್ಷಕನು ವಿದ್ಯಾರ್ಥಿಗಳ ವಯಸ್ಸು, ಬುದ್ಧಿ, ಆಸಕ್ತಿ, ಸಾಮರ್ಥ್ಯ ಮತ್ತು ಕಲಿಕೆಯ ಶೈಲಿಗಳನ್ನು ಅರ್ಥಮಾಡಿಕೊಳ್ಳಬೇಕು.
▪️ಮನೋವಿಜ್ಞಾನ ಅರಿವಿದ್ದರೆ ಶಿಕ್ಷಕನು ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕ ಬೋಧನೆ ಮಾಡಬಹುದು.
▪️ಇದು ಕಲಿಕೆಯ ಪ್ರಗತಿಗೆ ಅತ್ಯವಶ್ಯಕ.
6. ಮೌಲ್ಯಮಾಪನ ಮತ್ತು ಪ್ರತಿಕ್ರಿಯೆ (Evaluation & Feedback System)
▪️ಬೋಧನೆಯ ಪರಿಣಾಮ ತಿಳಿಯಲು ಮೌಲ್ಯಮಾಪನ (tests, assignments, discussions) .
▪️ವಿದ್ಯಾರ್ಥಿಗಳ ಪ್ರತಿಕ್ರಿಯೆಯಿಂದ ಶಿಕ್ಷಕ ತನ್ನ ಬೋಧನಾ ವಿಧಾನದಲ್ಲಿ ತಿದ್ದುಪಡಿ ಮಾಡಬಹುದು.
▪️Feedback ಇದ್ದರೆ ಬೋಧನೆ ನಿರಂತರ ಸುಧಾರಣೆಗೆ ಸಹಾಯಕ.
7. ಅನುಕೂಲಕರ ವಾತಾವರಣ (Conducive Learning Environment)
▪️ಬೋಧನೆ ಯಶಸ್ವಿಯಾಗಲು ಶಾಂತ, ಸುರಕ್ಷಿತ ಮತ್ತು ಪ್ರೇರಣಾತ್ಮಕ ವಾತಾವರಣ ಅಗತ್ಯ.
▪️ತರಗತಿ ಕೊಠಡಿ, ತಾಂತ್ರಿಕ ಸಾಧನಗಳು, ಸೂಕ್ತ ಕುಳಿತುಕೊಳ್ಳುವ ವ್ಯವಸ್ಥೆ, ಪ್ರೋತ್ಸಾಹಕಾರಿ ವಾತಾವರಣ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
▪️Adolescent Learners (ಯುವಕ / ಕಿಶೋರ ವಯಸ್ಸಿನ ವಿದ್ಯಾರ್ಥಿಗಳು)
ವಯಸ್ಸು: ಸಾಮಾನ್ಯವಾಗಿ 12 ರಿಂದ 18 ವರ್ಷ, ಅಂದರೆ “ಮಾಧ್ಯಮಿಕ-ಪಿಯು ಹಂತ.”
1. Academic (ಶೈಕ್ಷಣಿಕ):
▪️ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ಹೆಚ್ಚು, ಆದರೆ ಗಮನ ಶೀಘ್ರವಾಗಿ ಬೇರೆಡೆ ತಿರುಗುತ್ತದೆ.
▪️ಸಾಧನೆ, ಅಂಕಗಳು ಹಾಗೂ ಸ್ಪರ್ಧೆಯಲ್ಲಿ ಮುನ್ನಡೆಯುವ ಆಸೆ ಹೆಚ್ಚು.
▪️ಶಿಕ್ಷಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಕಲಿಕೆಯಲ್ಲಿ ಪ್ರಮುಖ.
2. Social (ಸಾಮಾಜಿಕ):
▪️ಸ್ನೇಹ, ಗುಂಪು, ಸಹಪಾಠಿಗಳ ಪ್ರಭಾವ ಹೆಚ್ಚಾಗಿ ಕಾಣಿಸುತ್ತದೆ.
▪️ಸ್ವತಂತ್ರತೆಯ ಹಂಬಲ ಹೆಚ್ಚಾಗಿದ್ದರೂ ಸಮಾಜದ ನಿಯಮಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ.
▪️ಗುಂಪಿನ ಒತ್ತಡ (peer pressure) ಇವರ ವರ್ತನೆಗೆ ದೊಡ್ಡ ಪ್ರಭಾವ ಬೀರುತ್ತದೆ.
3. Emotional (ಭಾವನಾತ್ಮಕ):
▪️ಭಾವನೆಗಳಲ್ಲಿ ತೀವ್ರತೆ, ಅಸ್ಥಿರತೆ (mood swings) ಸಾಮಾನ್ಯ.
▪️ಆತ್ಮಸಮ್ಮಾನವನ್ನು ಹುಡುಕುವ ಹಂತ; ಗುರುತಿನ ಹುಡುಕಾಟ (identity crisis) ನಡೆಯುತ್ತದೆ.
▪️ಹೆಚ್ಚು ಸ್ಪರ್ಶಕ (sensitive) ಸ್ವಭಾವದಿಂದ ಖಿನ್ನತೆ ಅಥವಾ ಉಲ್ಲಾಸ ಬೇಗನೆ ಅನುಭವಿಸುತ್ತಾರೆ.
4. Cognitive (ಬುದ್ಧಿಗಾರಿಕೆ):
▪️ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆ ಅಭಿವೃದ್ಧಿ ಪಡತೊಡಗುತ್ತದೆ.
▪️ಕಲ್ಪನಾ ಶಕ್ತಿ ಮತ್ತು ಹೊಸದನ್ನು ಪ್ರಯೋಗಿಸುವ ಆಸಕ್ತಿ ಹೆಚ್ಚು.
▪️ಆದರೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇನ್ನೂ ಸಂಪೂರ್ಣವಾಗಿ ಬೆಳೆದು ಬಾರದಿರುವುದರಿಂದ ತಪ್ಪು ನಿರ್ಧಾರಗಳ ಸಾಧ್ಯತೆ ಹೆಚ್ಚಿರುತ್ತದೆ.
▪️Adult Learners (ವಯಸ್ಕ ವಿದ್ಯಾರ್ಥಿಗಳು)
ವಯಸ್ಸು:
ಸಾಮಾನ್ಯವಾಗಿ 18 ವರ್ಷ ಮೇಲಾಗಿರುವವರು – ವಿಶ್ವವಿದ್ಯಾಲಯ ಹಂತ, ಉದ್ಯೋಗ ಸಂಬಂಧಿತ ತರಬೇತಿ ಹಾಗೂ ಜೀವನಾವಧಿ ಕಲಿಕೆ (Lifelong Learning) ನಡೆಸುವವರು.
1. Academic (ಶೈಕ್ಷಣಿಕ) :
▪️ವಯಸ್ಕರ ಕಲಿಕೆ ಉದ್ದೇಶಪೂರ್ವಕ (purposeful learning) ಆಗಿರುತ್ತದೆ. ಅಂದರೆ, ಅವರು ಕೆಲಸ, ವೃತ್ತಿಜೀವನದ ಉತ್ತೇಜನ, ಅಥವಾ ವೈಯಕ್ತಿಕ ಬೆಳವಣಿಗೆಗಾಗಿ ಕಲಿಯುತ್ತಾರೆ.
▪️ಸ್ವತಂತ್ರವಾಗಿ ಕಲಿಯುವ (independent learning) ಸಾಮರ್ಥ್ಯ ಹೆಚ್ಚು. ಮಾರ್ಗದರ್ಶನಕ್ಕಿಂತ ಸ್ವಯಂ ಅಧ್ಯಯನಕ್ಕೆ ಆದ್ಯತೆ ಕೊಡುತ್ತಾರೆ.
▪️ಕಲಿಕೆಯೊಂದಿಗೆ ಜವಾಬ್ದಾರಿಯ ಭಾವನೆ ಹೆಚ್ಚಿರುತ್ತದೆ; ಅವರು ತಿಳಿದುಕೊಳ್ಳುವ ವಿಷಯವನ್ನು ತಕ್ಷಣ ಜೀವನದಲ್ಲಿ ಅಥವಾ ವೃತ್ತಿಯಲ್ಲಿ ಬಳಸಲು ಬಯಸುತ್ತಾರೆ.
2. Social (ಸಾಮಾಜಿಕ) :
▪️ಕುಟುಂಬ, ಉದ್ಯೋಗ ಮತ್ತು ಸಮಾಜದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.
▪️ತಮ್ಮ ಜೀವನಾನುಭವವನ್ನು ಕಲಿಕೆಯಲ್ಲಿ ಬಳಸುತ್ತಾರೆ, ಹೀಗಾಗಿ ತರಗತಿಯಲ್ಲಿ ಅನುಭವ ಹಂಚಿಕೆ (experience sharing) ಹೆಚ್ಚು ಪರಿಣಾಮಕಾರಿ.
▪️ಗುಂಪಿನಲ್ಲಿ ಕಲಿತರೂ, ಅವರು ತಮ್ಮ ವೈಯಕ್ತಿಕ ಅವಶ್ಯಕತೆಗಳು ಮತ್ತು ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಕಲಿಯುತ್ತಾರೆ.
3. Emotional (ಭಾವನಾತ್ಮಕ) :
▪️ವಯಸ್ಕರು ಸಾಮಾನ್ಯವಾಗಿ ಭಾವನಾತ್ಮಕವಾಗಿ ಸ್ಥಿರ, ಆತ್ಮವಿಶ್ವಾಸಿ ಮತ್ತು ಸಹನಶೀಲರಾಗಿರುತ್ತಾರೆ.
▪️ಆದರೆ ಕೆಲಸ-ಕುಟುಂಬ-ಸಮಾಜದ ಒತ್ತಡಗಳು ಕೆಲವೊಮ್ಮೆ ಕಲಿಕೆಗೆ ಅಡ್ಡಿಯಾಗಬಹುದು.
▪️ಸಾಧನೆ, ಪ್ರಗತಿ, ಮತ್ತು ಸಮಯದ ಮೌಲ್ಯ ಇವರಿಗೆ ಬಹಳ ಮುಖ್ಯ. ವಿಫಲತೆ ಎದುರಾದರೆ ಒತ್ತಡ ಹೆಚ್ಚಾಗಬಹುದು.
4. Cognitive (ಬುದ್ಧಿಗಾರಿಕೆ ) :
▪️ವಯಸ್ಕರಲ್ಲಿ ವಿಶ್ಲೇಷಣಾತ್ಮಕ (analytical), ವಿಮರ್ಶಾತ್ಮಕ (critical) ಚಿಂತನೆ ಮತ್ತು ಸಮಸ್ಯೆ ಪರಿಹಾರ (problem-solving) ಸಾಮರ್ಥ್ಯ ಉತ್ತಮವಾಗಿ ಬೆಳೆದಿರುತ್ತದೆ.
▪️ಹೊಸ ಮಾಹಿತಿಯನ್ನು ತಮ್ಮ ಹಳೆಯ ಅನುಭವಗಳೊಂದಿಗೆ ಸಂಪರ್ಕಿಸಿ ಕಲಿಯುತ್ತಾರೆ, ಇದರಿಂದ ಕಲಿಕೆಯು ಆಳವಾದ ಮತ್ತು ದೀರ್ಘಕಾಲೀನವಾಗುತ್ತದೆ.
▪️ಅವರು “ಯಾಕೆ ಈ ವಿಷಯ ಕಲಿಯಬೇಕು?” ಎಂಬ ಪ್ರಶ್ನೆಗೆ ಉತ್ತರ ದೊರೆತಾಗ ಮಾತ್ರ ಹೆಚ್ಚು ತೊಡಗಿಸಿಕೊಂಡು ಕಲಿಯುತ್ತಾರೆ.
Individual Differences (ವೈಯಕ್ತಿಕ ವ್ಯತ್ಯಾಸಗಳು):
ಅರ್ಥ:
ಪ್ರತಿ ವಿದ್ಯಾರ್ಥಿಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತಾನೆ. ಯಾರೂ ಒಂದರಂತಿಲ್ಲ. ಅವರ ಕಲಿಕೆಯ ವೇಗ, ಆಸಕ್ತಿ, ಸಾಮರ್ಥ್ಯ, ನಡವಳಿಕೆ-all ವಿಭಿನ್ನವಾಗಿರುತ್ತವೆ. ಬೋಧನೆಯ ಯಶಸ್ಸು ಶಿಕ್ಷಕರು ಈ ವ್ಯತ್ಯಾಸಗಳನ್ನು ಎಷ್ಟು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬೋಧನೆಯನ್ನು ಹೇಗೆ ಹೊಂದಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ.
1. ಬೌದ್ಧಿಕ ವ್ಯತ್ಯಾಸ (Intelligence differences):
▪️ವಿದ್ಯಾರ್ಥಿಗಳ ಬುದ್ಧಿಮಟ್ಟ (IQ) ಸಮಾನವಾಗುವುದಿಲ್ಲ.
▪️ಕೆಲವರು ವೇಗವಾಗಿ ಅರ್ಥಮಾಡಿಕೊಳ್ಳುತ್ತಾರೆ, ಕೆಲವರಿಗೆ ನಿಧಾನ ಕಲಿಕೆ ಅಗತ್ಯ.
▪️ಕೆಲವರಿಗೆ ತಾರ್ಕಿಕ ಚಿಂತನೆ (logical thinking) ಉತ್ತಮ, ಮತ್ತವರಿಗೆ ಸೃಜನಶೀಲತೆ (creativity) ಹೆಚ್ಚು.
▪️ ಶಿಕ್ಷಕರು ಬೋಧನೆ ಮಾಡುವಾಗ ಮಂದಗತಿ ಕಲಿಯುವವರಿಗೆ ಸಹನೆ, ಹೆಚ್ಚು ಬುದ್ಧಿವಂತರಿಗೆ ಸವಾಲು ನೀಡುವಂತೆ ಪಾಠವನ್ನು ರೂಪಿಸಬೇಕು.
2. ಆಸಕ್ತಿ (Interests)
▪️ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ವಿಷಯದಲ್ಲಿ ಸಮಾನ ಆಸಕ್ತಿ ಇರುವುದಿಲ್ಲ.
▪️ಕೆಲವರಿಗೆ ಗಣಿತ, ಕೆಲವರಿಗೆ ಭಾಷೆ, ಮತ್ತವರಿಗೆ ಕಲೆ ಅಥವಾ ಕ್ರೀಡೆ ಇಷ್ಟವಾಗಬಹುದು.
▪️ಆಸಕ್ತಿ ಇರುವ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡುತ್ತಾರೆ.
▪️ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿಯನ್ನು ಅರಿತು, ಅದನ್ನು ಪಾಠಗಳಿಗೆ ಸಂಪರ್ಕಿಸಬೇಕು.
3.ಕಲಿಕೆ ಶೈಲಿ (Learning style):
ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಕಲಿಯುತ್ತಾರೆ:
▪️ಕೇಳಿ ಕಲಿಯುವವರು (Auditory learners)
▪️ನೋಡಿ ಕಲಿಯುವವರು (Visual learners)
▪️ಮಾಡಿ ಕಲಿಯುವವರು (Kinesthetic learners)
▪️ಒಂದು ವಿಧಾನ ಎಲ್ಲರಿಗೂ ಸೂಕ್ತವಾಗುವುದಿಲ್ಲ.
▪️ಶಿಕ್ಷಕರು ಪಾಠದಲ್ಲಿ ಕೇಳಿಸುವುದು, ತೋರಿಸುವುದು ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಒಳಗೊಂಡಿರಬೇಕು.
4. ಸಾಮಾಜಿಕ ಹಿನ್ನೆಲೆ (Social background):
▪️ಕುಟುಂಬ ಪರಿಸ್ಥಿತಿ, ಆರ್ಥಿಕ ಹಿನ್ನಲೆ, ಸಂಸ್ಕೃತಿ, ಸಮುದಾಯ-all ವಿದ್ಯಾರ್ಥಿಗಳ ಕಲಿಕೆಗೆ ಪ್ರಭಾವ ಬೀರುತ್ತವೆ.
▪️ಉತ್ತಮ ಸೌಲಭ್ಯ ಹೊಂದಿದ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶ ಹೆಚ್ಚಿರುತ್ತದೆ, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸವಾಲು ಹೆಚ್ಚು.
▪️ಶಿಕ್ಷಕರು ಎಲ್ಲರಿಗೂ ಸಮಾನ ಅವಕಾಶ ನೀಡುವಂತೆ ಪಾಠವನ್ನು ರೂಪಿಸಬೇಕು.
5.ವಯಕ್ತಿಕ ಗುಣಗಳು (Personality traits):
▪️ವಿದ್ಯಾರ್ಥಿಗಳ ಆತ್ಮವಿಶ್ವಾಸ, ಶ್ರಮಶೀಲತೆ, ನಡವಳಿಕೆ, ಸಾಮಾಜಿಕತೆ, ಭಾವನೆಗಳು-ಎಲ್ಲವೂ ವಿಭಿನ್ನ.
▪️ಕೆಲವರು ಚುರುಕು, ಕೆಲವರು ಶಾಂತ, ಕೆಲವರು ನಾಯಕತ್ವ ತೋರಿಸುತ್ತಾರೆ.
▪️ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಗುಣವನ್ನು ಗುರುತಿಸಿ, ಅವರಿಗೆ ಉತ್ತೇಜನ ನೀಡಬೇಕು.
ಬೋಧನೆಗೆ ಪ್ರಭಾವ ಬೀರುವ ಅಂಶಗಳು:
ಶಿಕ್ಷಣ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವಿಧ ದೃಷ್ಟಿಕೋನಗಳಿಂದ ಗಮನಿಸಬಹುದು. ಮುಖ್ಯವಾಗಿ ಗುರು (Teacher), ವಿದ್ಯಾರ್ಥಿ (Learner), ಪೂರಕ ವಸ್ತುಗಳು (Support material),ಬೋಧನಾ ಸೌಲಭ್ಯಗಳು (Instructional facilities),ಕಲಿಕಾ ವಾತಾವರಣ (Learning environment) ಮತ್ತು ಸಂಸ್ಥೆ (Institution) ಎಂಬ ಅಂಶಗಳು ಪ್ರಭಾವ ಬೀರುತ್ತವೆ.
1. ಗುರು (Teacher):
ಗುರುಗಳ ಜ್ಞಾನ, ಬೋಧನಾ ಕೌಶಲ್ಯ, ವ್ಯಕ್ತಿತ್ವ, ನಡವಳಿಕೆ ಮತ್ತು ಬೋಧನೆಗೆ ಇರುವ ಉತ್ಸಾಹವು ಬೋಧನೆಯ ಗುಣಮಟ್ಟವನ್ನು ನಿರ್ಧರಿಸುತ್ತದೆ. ಒಳ್ಳೆಯ ಗುರು ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತೇಜಿಸುತ್ತಾನೆ.
2. ವಿದ್ಯಾರ್ಥಿ (Learner):
ವಿದ್ಯಾರ್ಥಿಯ ಬೌದ್ಧಿಕ ಸಾಮರ್ಥ್ಯ, ಆಸಕ್ತಿ, ಮನೋಭಾವ, ಕಲಿಕೆ ಶೈಲಿ ಮತ್ತು ಮನೋಸ್ಥಿತಿ ಬೋಧನೆಗೆ ನೇರ ಪ್ರಭಾವ ಬೀರುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ವ್ಯತ್ಯಾಸವನ್ನು ಗುರುತಿಸಬೇಕು.
3. ಪೂರಕ ವಸ್ತುಗಳು (Support material):
ಪಾಠ ಪುಸ್ತಕಗಳು, ಆಡಿಯೋ-ವೀಡಿಯೋ ಸಾಮಗ್ರಿಗಳು,ನಕ್ಷೆಗಳು, ಮಾದರಿಗಳು ಮತ್ತು ಇತರ ಕಲಿಕಾ ಸಂಪನ್ಮೂಲಗಳು ಪಾಠವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ.
4. ಬೋಧನಾ ಸೌಲಭ್ಯಗಳು (Instructional facilities):
ತರಗತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ತಂತ್ರಜ್ಞಾನ ಸೌಲಭ್ಯಗಳು ಇತ್ಯಾದಿಗಳು ಬೋಧನೆಯನ್ನು ಪರಿಣಾಮಕಾರಿಯಾಗಿಸುತ್ತವೆ.
5. ಕಲಿಕಾ ವಾತಾವರಣ (Learning environment):
ಶಾಂತ, ಸ್ನೇಹಪರ ಮತ್ತು ಪ್ರೇರಣಾದಾಯಕ ವಾತಾವರಣವಿದ್ದಾಗ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುತ್ತಾರೆ. ಶಿಸ್ತು, ಸಹಕಾರ ಹಾಗೂ ಪ್ರೋತ್ಸಾಹವೂ ಮುಖ್ಯ.
6. ಸಂಸ್ಥೆ (Institution):
ಸಂಸ್ಥೆಯ ಆಡಳಿತ, ನೀತಿಗಳು, ಪಠ್ಯಕ್ರಮ, ಶೈಕ್ಷಣಿಕ ವಾತಾವರಣ ಮತ್ತು ಬೆಂಬಲ ವ್ಯವಸ್ಥೆಗಳು ಬೋಧನೆ-ಕಲಿಕೆಯನ್ನು ಉತ್ತಮಗೊಳಿಸುತ್ತವೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ವಿಧಾನಗಳು:
1. ಗುರು ಕೇಂದ್ರಿತ ವಿಧಾನಗಳು (Teacher-centred methods):
ಇಲ್ಲಿ ಗುರು ಬೋಧನೆಯ ಕೇಂದ್ರಬಿಂದು. ಪಾಠ ಹೇಳುವವನು, ವಿಷಯ ವಿವರಿಸುವವನು ಗುರು. ವಿದ್ಯಾರ್ಥಿಗಳು ಶ್ರವಣ, ಟಿಪ್ಪಣಿ ಬರೆಯುವ ಕಾರ್ಯವನ್ನು ಮಾಡುತ್ತಾರೆ.
ಉದಾಹರಣೆಗಳು: ಉಪನ್ಯಾಸ ವಿಧಾನ (Lecture method), ಬ್ಲ್ಯಾಕ್ ಬೋರ್ಡ್ ಬಳಕೆ, ಪ್ರಾತ್ಯಕ್ಷಿಕೆ (Demonstration).
ಲಾಭಗಳು:
▪️ಹೆಚ್ಚಿನ ವಿದ್ಯಾರ್ಥಿಗಳಿಗೆ ಒಂದೇ ಸಮಯದಲ್ಲಿ ಜ್ಞಾನ ಹಂಚಬಹುದು.
▪️ಮೂಲಭೂತ ತತ್ತ್ವಗಳನ್ನು ಬೇಗ ಕಲಿಸಬಹುದು.
ಅಪಾಯಗಳು:
▪️ವಿದ್ಯಾರ್ಥಿಗಳ ಚಟುವಟಿಕೆ ಕಡಿಮೆ; ಸ್ವತಂತ್ರ ಚಿಂತನೆ, ಪ್ರಶೋತ್ತರ ಅವಕಾಶ ಕಡಿಮೆ.
2. ವಿದ್ಯಾರ್ಥಿ ಕೇಂದ್ರಿತ ವಿಧಾನಗಳು (Learner-centred methods):
ಇಲ್ಲಿ ಕಲಿಕೆಯ ಕೇಂದ್ರ ವಿದ್ಯಾರ್ಥಿ. ಗುರು ಮಾರ್ಗದರ್ಶಕನಾಗಿ ಮಾತ್ರ ಇರುತ್ತಾನೆ. ವಿದ್ಯಾರ್ಥಿಗಳು ಸ್ವತಃ ಕಲಿಯುತ್ತಾರೆ, ಚರ್ಚಿಸುತ್ತಾರೆ, ಸಮಸ್ಯೆ ಪರಿಹರಿಸುತ್ತಾರೆ.
ಉದಾಹರಣೆಗಳು: ಗುಂಪು ಚರ್ಚೆ (Group discussion), ಪ್ರಾಜೆಕ್ಟ್ ವಿಧಾನ (Project method), ಕೇಸ್ ಸ್ಟಡಿ (Case study), ಸಮಸ್ಯೆ ಪರಿಹಾರ (Problem-solving).
ಲಾಭಗಳು:
▪️ವಿದ್ಯಾರ್ಥಿಯ ಚಿಂತನೆ, ಸೃಜನಶೀಲತೆ, ಸಂವಹನ ಕೌಶಲ್ಯ ಬೆಳೆಯುತ್ತದೆ. ಕಲಿಕೆ ಹೆಚ್ಚು ಶಾಶ್ವತವಾಗುತ್ತದೆ.
ಅಪಾಯಗಳು:
▪️ಹೆಚ್ಚು ಸಮಯ, ಸಂಪನ್ಮೂಲ ಬೇಕಾಗುತ್ತದೆ. ಎಲ್ಲರಿಗೂ ಸಮಾನವಾಗಿ ಪಾಲ್ಗೊಳ್ಳುವ ಅವಕಾಶ ದೊರೆಯದೆ ಇರಬಹುದು.
3. ಆಫ್ ಲೈನ್ ವಿಧಾನಗಳ(Off-line methods):
ಇವು ಮುಖ್ಯವಾಗಿ ತರಗತಿ ಮತ್ತು ಸಂಸ್ಥೆಯ ಆವರಣದಲ್ಲಿ ನಡೆಯುವ ವಿಧಾನಗಳು. ವಿದ್ಯಾರ್ಥಿಗಳು ಮತ್ತು ಗುರು ಮುಖಾಮುಖಿಯಾಗಿ ಭೇಟಿಯಾಗುತ್ತಾರೆ.
ಉದಾಹರಣೆಗಳು: ತರಗತಿ ಉಪನ್ಯಾಸ, ಗ್ರಂಥಾಲಯ ಅಧ್ಯಯನ, ಪ್ರಯೋಗಾಲಯ ಕಾರ್ಯ, ಸೆಮಿನಾರ್, ಕಾರ್ಯಾಗಾರಗಳು.
ಲಾಭಗಳು:
ನೇರ ಸಂವಹನ ಸಾಧ್ಯ. ಅನುಭವಾಧಾರಿತ ಕಲಿಕೆ (Experiential learning) ಸಾಧ್ಯ.
ಅಪಾಯಗಳು:
ಭೌತಿಕ ಹಾಜರಾತಿ ಅವಶ್ಯಕ. ತಂತ್ರಜ್ಞಾನ ಆಧಾರಿತ ಅನುಕೂಲತೆ ಕಡಿಮೆ.
4. ಆನ್‌ಲೈನ್ ವಿಧಾನಗಳು (On-line methods):
▪️ಇವು ತಂತ್ರಜ್ಞಾನ ಆಧಾರಿತ, ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಯುವ ಬೋಧನೆಗಳು. ಇವು ಸಮಯ, ಸ್ಥಳದ ಅಡಚಣೆಯನ್ನು ಕಡಿಮೆ ಮಾಡುತ್ತವೆ.
ಉದಾಹರಣೆಗಳು:
SWAYAM: ಭಾರತ ಸರ್ಕಾರದ ಆನ್‌ಲೈನ್ ಪಠ್ಯಕ್ರಮ ವೇದಿಕೆ. ಹಲವು ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದ ಕೋರ್ಸ್‌ಗಳು ಇಲ್ಲಿ ಲಭ್ಯ.
SWAYAMPRABHA: 24×7 ಪ್ರಸಾರ ಮಾಡುವ ಶೈಕ್ಷಣಿಕ ಉಪಗ್ರಹ ವಾಹಿನಿ. ವಿವಿಧ ವಿಷಯಗಳ ಉಪನ್ಯಾಸಗಳನ್ನು ಟಿವಿ/ಡಿಟಿಎಚ್ ಮೂಲಕ ಪ್ರಸಾರ ಮಾಡುತ್ತದೆ.
MOOCs (Massive Open Online Courses): ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ವಿಶ್ವದಾದ್ಯಂತ ಲಭ್ಯವಿರುವ ಆನ್‌ಲೈನ್ ಪಠ್ಯಕ್ರಮಗಳು. (ಉದಾ: Coursera, edX, NPTEL).
ಲಾಭಗಳು:
ಎಲ್ಲಿಂದಲೂ, ಯಾವಾಗಲೂ ಕಲಿಯಬಹುದು. ಹೆಚ್ಚು ಸಂಪನ್ಮೂಲಗಳು ಲಭ್ಯ.
ಅಪಾಯಗಳು:
ಇಂಟರ್ನೆಟ್ ಸೌಲಭ್ಯ, ಸ್ವಯಂ-ಶಿಸ್ತು ಅವಶ್ಯಕ. ನೇರ ಮಾನವ ಸಂವಹನ ಕಡಿಮೆ.
ಬೋಧನಾ ಬೆಂಬಲ ವ್ಯವಸ್ಥೆ (Teaching Support System)
ಬೋಧನಾ ಬೆಂಬಲ ವ್ಯವಸ್ಥೆ (Teaching Support System) ಎಂಬುದು ಗುರುಗಳು ತಮ್ಮ ಬೋಧನೆ ಪರಿಣಾಮಕಾರಿ ಆಗಲು ಬಳಸುವ ವಿಧಾನಗಳು, ಸಾಧನಗಳು ಹಾಗೂ ತಂತ್ರಜ್ಞಾನಗಳ ಸಮೂಹ. ಇದನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು: ಪಾರಂಪರಿಕ (Traditional), ಆಧುನಿಕ (Modern) ಮತ್ತು ಮಾಹಿತಿ-ಸಂವಹನ ತಂತ್ರಜ್ಞಾನ ಆಧಾರಿತ (ICT based).
1. ಪಾರಂಪರಿಕ (Traditional) ಬೋಧನಾ ಬೆಂಬಲ ವ್ಯವಸ್ಥೆ:
ಬ್ಲ್ಯಾಕ್‌ಬೋರ್ಡ್, ಚಾಕ್, ನೋಟ್ಸ್, ಪಾಠ ಪುಸ್ತಕ, ನಕ್ಷೆ, ಮಾದರಿ ಮೊದಲಾದವು.
▪️ಗುರು ಬೋಧನೆಯ ಕೇಂದ್ರಬಿಂದು, ವಿದ್ಯಾರ್ಥಿಗಳು ಮುಖ್ಯವಾಗಿ ಕೇಳುವವರಾಗಿ ಇರುತ್ತಾರೆ.
▪️ಸರಳ, ಕಡಿಮೆ ವೆಚ್ಚದ, ಎಲ್ಲೆಡೆ ಬಳಸಬಹುದಾದ ವಿಧಾನ.
▪️ಆದರೆ, ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ದೃಶ್ಯ/ಧ್ವನಿ ಆಧಾರಿತ ಅನುಭವ ಕಡಿಮೆ.
2. ಆಧುನಿಕ (Modern) ಬೋಧನಾ ಬೆಂಬಲ ವ್ಯವಸ್ಥೆ:
▪️ಚಾರ್ಟ್‌ಗಳು, ಫ್ಲಾಶ್ ಕಾರ್ಡ್‌ಗಳು, ಫಿಲ್ಡ್ ಸ್ಕ್ರಿಪ್‌ಗಳು, ಓವರ್‌ಹೆಡ್ ಪ್ರೊಜೆಕ್ಟರ್ (OHP), ಮಾದರಿಗಳು, ರೇಡಿಯೋ, ಟಿವಿ ಮೊದಲಾದವು.
▪️ದೃಶ್ಯ ಶ್ರವ್ಯ ಸಾಧನಗಳ ಮೂಲಕ ಕಲಿಕೆಯನ್ನು ಹೆಚ್ಚು ಆಕರ್ಷಕ, ಸ್ಪಷ್ಟ ಮತ್ತು ಶಾಶ್ವತಗೊಳಿಸುತ್ತದೆ.
▪️ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಹೆಚ್ಚಿಸುತ್ತದೆ. ಆದರೆ, ಸಾಧನಗಳ ಲಭ್ಯತೆ ಮತ್ತು ನಿರ್ವಹಣೆ ಅಗತ್ಯ.
3. ಮಾಹಿತಿ-ಸಂವಹನ ತಂತ್ರಜ್ಞಾನ ಆಧಾರಿತ (ICT based) ಬೋಧನಾ ಬೆಂಬಲ ವ್ಯವಸ್ಥೆ:
ಕಂಪ್ಯೂಟರ್, ಇಂಟರ್ನೆಟ್, ಸ್ಮಾರ್ಟ್ ಕ್ಲಾಸ್‌ರೂಮ್, ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಳು, ಇ ಲರ್ನಿಂಗ್, ಮಲ್ಟಿಮೀಡಿಯಾ, ವರ್ಚುವಲ್ ಲ್ಯಾಬ್‌ಗಳು.
▪️ಆನ್ಲೈನ್ ಫ್ಲಾಟ್ ಫಾರ್ಮ್ ಗಳು SWAYAM, SWAYAMPRABHA, MOOCs, NPTEL, Coursera, EdX ಇತ್ಯಾದಿ.
▪️ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಕಲಿಯುವ ಅವಕಾಶ; ಪರಸ್ಪರ ಸಂವಹನ (interactive learning) ಸಾಧ್ಯ.
▪️ಆದರೆ, ತಂತ್ರಜ್ಞಾನ ಜ್ಞಾನ ಮತ್ತು ಸೌಲಭ್ಯ ಅಗತ್ಯ.
ಮೌಲ್ಯ ಮಾಪನ ವ್ಯವಸ್ಥೆಗಳು (Evaluation Systems)
▪️ಮೌಲ್ಯಮಾಪನವು ವಿದ್ಯಾರ್ಥಿಗಳ ಕಲಿಕೆಯ ಮಟ್ಟ, ಸಾಧನೆ ಮತ್ತು ಸಾಮರ್ಥ್ಯವನ್ನು ಅಳೆಯುವ ಪ್ರಕ್ರಿಯೆ. ಉನ್ನತ ಶಿಕ್ಷಣದಲ್ಲಿ ಇದು ಬಹುಮುಖ್ಯ ಪಾತ್ರ ವಹಿಸುತ್ತದೆ. ಇದನ್ನು ವಿವಿಧ ಅಂಶಗಳಂತೆ ವಿವರಿಸಬಹುದು.
1. ಮೌಲ್ಯ ಮಾಪನದ ಅಂಶಗಳು (Elements of Evaluation):
▪️ಗುರಿ (Objectives):
ಮೌಲ್ಯಮಾಪನವು ಯಾವ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂಬುದು ಪ್ರಮುಖ. ಕಲಿಕೆಯ ಉದ್ದೇಶವನ್ನು ಸ್ಪಷ್ಟಗೊಳಿಸಿದಾಗ ಮಾತ್ರ ಸರಿಯಾದ ಮೌಲ್ಯಮಾಪನ ಸಾಧ್ಯ. ಉದಾಹರಣೆಗೆ – ಜ್ಞಾನ ಪರಿಶೀಲನೆ, ಕೌಶಲ್ಯಗಳ ಅಭಿವೃದ್ಧಿ, ಮನೋಭಾವ ಹಾಗೂ ಮೌಲ್ಯಗಳ ಬೆಳವಣಿಗೆ ಇತ್ಯಾದಿ. ಗುರಿ ಸ್ಪಷ್ಟವಾಗದಿದ್ದರೆ ಮೌಲ್ಯಮಾಪನ ಅಸಂಬಂಧಿತವಾಗಬಹುದು.
2. ಮಾಪನ ಸಾಧನಗಳು (Tools):
ಮೌಲ್ಯಮಾಪನಕ್ಕಾಗಿ ಬಳಸುವ ವಿವಿಧ ಸಾಧನಗಳನ್ನು ‘ಟೂಲ್ಸ್’ ಎಂದು ಕರೆಯಲಾಗುತ್ತದೆ. ಉದಾ: ಪರೀಕ್ಷೆಗಳು (Exams): ಲಿಖಿತ ಅಥವಾ ವಾಚಿಕ ಪ್ರಶ್ನೆ-ಉತ್ತರ.
▪️ಅಸೈನ್‌ಮೆಂಟ್‌ಗಳು (Assignments):
ವಿದ್ಯಾರ್ಥಿಗಳಿಗೆ ನೀಡುವ ಕಾರ್ಯಗಳು.
▪️ಪ್ರಾಜೆಕ್ಟ್‌ಗಳು (Projects):
ವಿಷಯಾಧಾರಿತ ಪ್ರಾಯೋಗಿಕ ಕೆಲಸ.
▪️ಕ್ವಿಜ್ (Quiz):
ಸಣ್ಣ ಪ್ರಶೋತ್ತರ ಸ್ಪರ್ಧೆಗಳು.
ಇವುಗಳ ಮೂಲಕ ವಿದ್ಯಾರ್ಥಿಯ ಜ್ಞಾನ, ಕೌಶಲ್ಯ, ಸೃಜನಾತ್ಮಕತೆ ಮತ್ತು ಸಮಸ್ಯೆ ಪರಿಹಾರ ಸಾಮರ್ಥ್ಯ ಅಳೆಯಬಹುದು.
3. ಮಾಪನ ವಿಧಾನಗಳು (Techniques):
ಮೌಲ್ಯಮಾಪನ ನಡೆಸುವ ವಿಧಾನಗಳು ಮೂರು ಮುಖ್ಯ ರೂಪಗಳಲ್ಲಿ ನಡೆಯುತ್ತವೆ:
▪️ಬರವಣಿಗೆ (Written):
ಲೇಖನ, ಪ್ರಬಂಧ, ಗಣಿತ ಸಮಸ್ಯೆ ಪರಿಹಾರ, ಲಿಖಿತ ಪರೀಕ್ಷೆಗಳು.
▪️ವಾಚಿಕ (Oral):
ಸಂದರ್ಶನ, ಪ್ರಶೋತ್ತರ, ಸೆಮಿನಾರ್ ಪ್ರಸ್ತುತೀಕರಣ.
▪️ಪ್ರಾಯೋಗಿಕ (Practical):
ಪ್ರಯೋಗಾಲಯದಲ್ಲಿ ನಡೆಸುವ ಕಾರ್ಯಗಳು, ಪ್ರಾತ್ಯಕ್ಷಿಕೆ, ತಾಂತ್ರಿಕ ಕೌಶಲ್ಯ ತೋರಿಕೆ.
ಈ ವಿಧಾನಗಳ ಸಂಯೋಜನೆಯ ಮೂಲಕ ವಿದ್ಯಾರ್ಥಿಯ ಸಂಪೂರ್ಣ ಸಾಮರ್ಥ್ಯವನ್ನು ಅಳೆಯಬಹುದು.
4. ಫಲಿತಾಂಶದ ವಿಶ್ಲೇಷಣೆ (Interpretation):
ಮೌಲ್ಯಮಾಪನದ ನಂತರ ವಿದ್ಯಾರ್ಥಿಯ ಸಾಧನೆ ಕುರಿತು ಅರ್ಥಪೂರ್ಣ ವಿಶ್ಲೇಷಣೆ ಅಗತ್ಯ. ಅಂಕಗಳನ್ನು ನೀಡುವುದಷ್ಟೇ ಸಾಕಾಗದೆ, ಆ ಅಂಕಗಳು ಏನು ಸೂಚಿಸುತ್ತವೆ ಎಂಬುದರ ಕುರಿತು ಗುರು ಹಾಗೂ ವಿದ್ಯಾರ್ಥಿ ಸ್ಪಷ್ಟತೆ ಹೊಂದಬೇಕು. ಉದಾಹರಣೆಗೆ- “ವಿದ್ಯಾರ್ಥಿ ತತ್ವಜ್ಞಾನದಲ್ಲಿ ಬಲವಾಗಿದ್ದರೂ ಪ್ರಾಯೋಗಿಕ ಅನ್ವಯಿಕೆಯಲ್ಲಿ ದುರ್ಬಲನಾಗಿದ್ದಾನೆ” ಎಂದು ಗುರುತಿಸುವುದು. ಇದು ಮುಂದಿನ ಬೋಧನೆಗೆ ಮಾರ್ಗದರ್ಶನ ನೀಡುತ್ತದೆ.
5. ಪ್ರತಿಕ್ರಿಯೆ (Feedback):
▪️ಮೌಲ್ಯಮಾಪನದ ಪ್ರಮುಖ ಅಂಶವೆಂದರೆ ಪ್ರತಿಕ್ರಿಯೆ. ವಿದ್ಯಾರ್ಥಿಯ ಸಾಧನೆ ಬಗ್ಗೆ ಗುರು ನೀಡುವ ಸಲಹೆಗಳು ಮತ್ತು ಸೂಚನೆಗಳು ಅವನ/ಅವಳ ಕಲಿಕೆಯಲ್ಲಿ ಸುಧಾರಣೆ ತರುವಂತೆ ಮಾಡಬೇಕು. ಉದಾ: “ನೀನು ತತ್ವವನ್ನು ಚೆನ್ನಾಗಿ ಬರೆಯುತ್ತೀಯಾ, ಆದರೆ ಉದಾಹರಣೆಗಳನ್ನು ಸೇರಿಸಿದರೆ ಇನ್ನೂ ಉತ್ತಮವಾಗುತ್ತದೆ”.
▪️ಪ್ರತಿಕ್ರಿಯೆ ಸದಾ ರಚನಾತ್ಮಕ, ಪ್ರೇರಣಾದಾಯಕ ಮತ್ತು ಮಾರ್ಗದರ್ಶಕ ಆಗಿರಬೇಕು.

ಮುಂದುವರೆಯುವುದು…..