Aadhaar Services: ಆಧಾರ್‌ನಲ್ಲಿ ಇನ್ನು ಜನ್ಮದಿನ, ವಿಳಾಸದಂಥ ವಿವರ ಇರಲ್ಲ?
Aadhaar Services: ಆಧಾರ್‌ನಲ್ಲಿ ಇನ್ನು ಜನ್ಮದಿನ, ವಿಳಾಸದಂಥ ವಿವರ ಇರಲ್ಲ? ಫೋಟೋ, ಕ್ಯೂಆರ್ ಕೋಡ್ ಉಳಿಸಲು ಚಿಂತನೆ: ವಿಳಾಸ, ಜನ್ಮ ದಿನಾಂಕದಂತಹ ವೈಯಕ್ತಿಕ ವಿವರ ಕೈಬಿಟ್ಟು ಭಾವ ಚಿತ್ರ ಮತ್ತು ಕ್ಯೂಆರ್ ಕೋಡ್ ಮಾತ್ರ ಒಳಗೊಂಡ ಆಧಾರ್ ಕಾರ್ಡ್ ಪರಿಚಯಿಸಲು ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಯೋಜಿಸುತ್ತಿದೆ.
ಆಧಾರ್‌ನ ಆಫ್‌ಲೈನ್ ದುರುಪಯೋಗ ತಡೆಯುವುದು ಮತ್ತು ದೃಢೀಕರಣ ವನು ಸುಗಮಗೊಳಿಸುವ ಮೂಲಕ ಗೌಪ್ಯತೆ ಹೆಚ್ಚಿಸುವುದು ಉದ್ದೇಶವಾಗಿದೆ ಎಂದು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ತಿಳಿಸಿದ್ದಾರೆ.
‘ಆಫ್‌ಲೈನ್‌ನಲ್ಲಿ ಆಧಾರ್ ಬಳಕೆಗೆ ಆಧಾರ್ ಕಾಯ್ದೆಯಲ್ಲಿ ನಿಷೇಧವಿದೆ. ಆದರೆ ಆಧಾರ್ ಸಂಖ್ಯೆಯನ್ನು ಆಫ್ ಲೈನ್‌ನಲ್ಲಿ ದೃಢೀಕರಿಸಲು ಪ್ರಿಂಟ್ಗಳನ್ನು ನೀಡುವ ಮತ್ತು ಸ್ವೀಕರಿಸುವ ಅಭ್ಯಾಸ ಜನರಲ್ಲಿದೆ. ಇಂತಹ ಆಧಾರ್ ಪ್ರತಿಗಳು ದುರುಪಯೋಗವಾಗುವ ಸಾಧ್ಯತೆ ಯಿದೆ. ಹೀಗಾಗಿ ಆಫ್‌ಲೈನ್ ಪರಿಶೀಲನೆ ಯನ್ನು ನಿಲ್ಲಿಸಲು ಕಾನೂನು ರೂಪಿಸಲಾಗುತ್ತಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಆದಾಗ್ಯೂ ಆಧಾರ್ ಮೂಲಕ ವಯಸ್ಸಿನ ದಾಖಲೆ ದೃಢೀಕರಿಸಬೇಕಾದ ಸಿನಿಮಂದಿರ, ಕ್ಲಬ್ ಮುಂತಾದ ಸ್ಥಳಗಳಲ್ಲಿ ವಯಸ್ಸು ಪರಿಶೀಲಿಸಬಲ್ಲ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ 18 ತಿಂಗಳಿನಲ್ಲಿ ಈ ಆ್ಯಪ್ ಕಾರ್ಯಾರಂಭಿಸುತ್ತದೆ ಎಂದಿದ್ದಾರೆ.