Ai Kannada Story-2025 ಕೃತಕ ಬುದ್ಧಿ ಮತ್ತೆಯೂ ಹೇಳುತ್ತದೆ ಕನ್ನಡದ ಕತೆ!
Ai Kannada Story-2025: ಅದೊಂದು ಕಾಲ ಕಳೆದು ಬಹಳ ದಿನಗಳೇನೂ ಆಗಿಲ್ಲ. ಏನಾದರೂ ಮಾಹಿತಿ ಬೇಕು ಅಂದರೆ ಗೂಗಲ್‌ಗೆ ಹೋಗು ಅಂತಿದ್ದರು ಜನ. ಈಗ ಕಾಲ ಮತ್ತೊಂದು ಮಗ್ಗಲು ಬದಲಿಸಿದೆ. ಏನೇ ಮಾಹಿತಿ ಬೇಕು ಎಂದರೂ ‘ಎಐ ಚಾಟ್ ಬಾಟ್ ತಡಕಾಡು’ ಎನ್ನುತ್ತಿದ್ದೇವೆ. ನಾವು ಸಹ ಹಾಗೆ ಒಗ್ಗಿಕೊಳ್ಳುತ್ತಿದ್ದೇವೆ. ಕೃತಕ ಬುದ್ದಿಮತ್ತೆ ನಮ್ಮ ಬುದ್ಧಿಮತ್ತೆ ಮೇಲೆಯೇ ಸವಾರಿ ಮಾಡುವ ಕಾಲವೂ ಬಹಳ ದೂರವಿಲ್ಲ ಎನ್ನಬಹುದೇನೋ!
ಈ ಹಿಂದೆ ಗೂಗಲ್‌ಗೆ ಸಹ ಕನ್ನಡ ಅರ್ಥವಾಗುತ್ತಿರಲಿಲ್ಲ. ನಿಧಾನಕ್ಕೆ ನಾವು ಗೂಗಲ್ ಗೆ ಕನ್ನಡ ಕಲಿಸಿದೆವು. ನಮ್ಮ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಕೀಲಿಮಣೆಗಳು ತುಂಬಿಕೊಂಡವು. ಬರಹ-ನುಡಿ-ಪದ ತಂತ್ರಾಂಶಗಳು ಬರಹಗಾರರಿಗೆ ಆಪ್ತವಾದವು. ಫೇಸ್‌ಬುಕ್‌ನಲ್ಲಿ ಕನ್ನಡ ಕತೆ-ಕವನ-ಪ್ರಬಂಧಗಳು ಹರಿದಾಡತೊಡಗಿದವು. ಈಗ ಇದೆನ್ನೆಲ್ಲ ಮೀರಿ ಎಐ ಚಾಟ್ ಬಾಟ್ ಬಂದಿದೆ. ಅದು ಕನ್ನಡದಲ್ಲಿಯೇ ಉತ್ತರ ಕೊಡುತ್ತದೆ, ಕನ್ನಡದಲ್ಲಿಯೇ ಮಾತನಾಡುತ್ತದೆ. ಎಷ್ಟೆಂದರೂ ತರಬೇತಿ ಕೊಟ್ಟವರು ನಾವೇ ಅಲ್ಲವೆ! ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿನ ಈ ‘ನಿಶ್ಯಬ್ದ ಡಿಜಿಟಲ್ ಕನ್ನಡ ಕ್ರಾಂತಿ’ಯ ಬಗ್ಗೆ ಒಂದಷ್ಟು ಮಾತಾಡೋಣ!
ಇನ್ನು ಸಂಪೂರ್ಣ ಕಲಿತಿಲ್ಲ!:
ಕೃತಕ ಬುದ್ದಿಮತ್ತೆಯ ಹೆಚ್ಚಿನ ಡಿಜಿಟಲ್ ವೇದಿಕೆಗಳು ಇಂಗ್ಲಿಷ್ ಅಥವಾ ಹಿಂದಿಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಿದ್ದವು. ಆದರೆ ಕಾಲ ಬದಲಾಗಿದೆ.
ಇಂದು ಅಲೆಕ್ಸಾ ಗೂಗಲ್ ಅಸಿಸ್ಟೆಂಟ್ ಗಳಂತಹ ವಾಯ್ಸ್ ಅಸಿಸ್ಟೆಂಟ್‌ಗಳಿಂದ ಹಿಡಿದು ಬ್ಯಾಂಕ್‌ಗಳು ಮತ್ತು ಆಸ್ಪತ್ರೆಗಳಲ್ಲಿ ಬಳಸುವ ಎಐ ಚಾಟ್‌ಬಾಟ್ ಗಳವರೆಗೆ ಎಲ್ಲೆಡೆ ಕನ್ನಡದ ಡಿಜಿಟಲ್ ಧ್ವನಿ ಕೇಳಿಸುತ್ತಿದೆ. ನಮ್ಮ ಹೊಸ ಸ್ನೇಹಿತ, ಹೊಸ ಮಾರ್ಗದರ್ಶಿ, ನಮ್ಮ ಶಿಕ್ಷಕರಾಗಿ ಚಾಟ್ ಬಾಟ್‌ಗಳು ಸಜ್ಜಾಗಿವೆ. ಕನ್ನಡ ಕಲಿತು ಅರ್ಥ ಮಾಡಿಕೊಳ್ಳುತ್ತಿವೆ!
ಐಐಟಿ ಮದ್ರಾಸ್‌ನ Al4Bharat ಹಾಗೂ ಭಾರತ ಸರಕಾರದ ‘ಭಾಷಿಣಿ ಯೋಜನೆ’ಗಳು ಕನ್ನಡವನ್ನು ಕಲಿಯುವ ಮತ್ತು ಮಾತನಾಡುವ ಎಐ ಮಾದರಿಗಳನ್ನು ತರಬೇತುಗೊಳಿಸುತ್ತಿವೆ. ಇದರಿಂದ ಯಂತ್ರಗಳು ಈಗ ನಿಧಾನವಾಗಿ ಕನ್ನಡದ ಛಂದಸ್ಸು, ವ್ಯಾಕರಣ ಮತ್ತು ನುಡಿಗಟ್ಟಿನ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತಿವೆ.
ಒಬ್ಬರೈತ ಕನ್ನಡದಲ್ಲಿ ಪ್ರಶ್ನೆ ಕೇಳಿ, ಅದೇ ಕನ್ನಡದಲ್ಲಿ ನಿಖರ ಉತ್ತರ ಪಡೆಯುವಂತಾದರೆ ಅದೆ ತಾನೇ ನಿಜವಾದ ಡಿಜಿಟಲ್ ಸಬಲೀಕರಣ? ಪರಿಣತರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಮೊಬೈಲ್ ಬಳಕೆಯ ಪರಿಚಯದ ಜೊತೆಜೊತೆಗೆ ಎಐ ಬಳಕೆಯ ಪರಿಚಯವೂ ತಲೆಮಾರುಗಳನ್ನು ದಾಟಿದೆ.
ಹೊಸ ವಾಯ್ಸ್ ಅಸಿಸ್ಟೆಂಟ್‌ಗಳ ಯುಗ:
ರಾಜ್ಯದಾದ್ಯಂತ ಗ್ರಾಹಕಸೇವೆ ಮತ್ತಷ್ಟು ಸುಲಭವಾಗುತ್ತಿದೆ. ಅದಕ್ಕೆ ಕಾರಣ ಎಐ ಚಾಟ್ ಬಾಟ್‌ಗಳು, ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಸರಕಾರಿ ಕಚೇರಿಗಳು ಕನ್ನಡ ಮಾತನಾಡುವ ಚಾಟ್‌ಬಾಟ್ ಗಳನ್ನು ಬಳಸಲು ಆರಂಭಿಸಿವೆ. ಕೆಲವು ಬ್ಯಾಂಕ್‌ಗಳು ಬ್ಯಾಂಕಿಂಗ್ ಪ್ರಶ್ನೆಗಳಿಗೆ ಕನ್ನಡ ಆಧಾರಿತ ಎಐ ಚಾಟ್ ಬಾಟ್ ಪ್ರಯೋಗವನ್ನು ಆರಂಭಿಸಿವೆ. ಹೆಲ್ತ್-ಟೆಕ್ ಕಂಪನಿಗಳು ರೋಗಿಗಳಿಗೆ ಕನ್ನಡ ವಾಯ್ಸ್ ಅಸಿಸ್ಟೆಂಟ್‌ಗಳ ಮೂಲಕ ಔಷಧದ ವಿವರ ಹಾಗೂ ಅಪಾಯಿಂಟ್ಮೆಂಟ್ ಮಾಹಿತಿ ನೀಡುತ್ತಿವೆ. ಕೆಲವೊಂದು ಜಿಲ್ಲೆಗಳ ಸರಕಾರಿ ಕಚೇರಿಗಳು ನಾಗರಿಕರೊಂದಿಗೆ ಸಂವಹನ ಮಾಡಲು ಎಐ ಅನುವಾದಕವನ್ನು ಬಳಕೆ ಮಾಡುತ್ತಿವೆ.
ಇಂಗ್ಲಿಷ್ ಅಪ್ಲಿಕೇಶನ್‌ಗಳಿಂದ ದೂರ ಉಳಿದ ಜನರು, ತಮ್ಮ ಭಾಷೆಯಲ್ಲಿಯೇ ಕೇಳಿ ಅರ್ಥಮಾಡಿಕೊಳ್ಳುವ ಅನುಭವದಿಂದ ಈಗ ಹೆಚ್ಚು ವಿಶ್ವಾಸದಿಂದ ಡಿಜಿಟಲ್ ಲೋಕದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಕನ್ನಡ ಎಐ ಸ್ಟಾರ್ಟಪ್‌ಗಳ ಹೊಸ ದಿಕ್ಕು:
▪️ಎಐ ಸ್ಟಾರ್ಟಪ್‌ಗಳ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಕನ್ನಡದ ಕಂಪು ಪಸರಿಸದಿದ್ದರೆ ಹೇಗೆ? ಕೆಲವೊಂದು ಪ್ರಮುಖ ಸ್ಟಾರ್ಟಪ್‌ಗಳು ಗ್ರಾಹಕ ಸೇವೆಗಾಗಿ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಮಾತನಾಡಬಲ್ಲ ವಾಯ್ಸ್ ಬಾಟ್‌ಗಳನ್ನು ನಿರ್ಮಿಸಿದೆ. ಫಿನ್‌ಟೆಕ್ ಕಂಪನಿಗಳು ಪಾವತಿ ಮತ್ತು ವಿಮಾ ಸೇವೆಗಳಿಗೆ ಕನ್ನಡ ವಾಯ್ಸ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸುತ್ತಿವೆ.
▪️ಅಗ್ರಿ-ಟೆಕ್ ಸಂಸ್ಥೆಗಳು ರೈತರಿಗಾಗಿಯೇ ಬೆಳೆಗಳ ಬಗ್ಗೆ ಸಲಹೆ ನೀಡುವಂಥ ಕನ್ನಡ ಬಾಟ್‌ಗಳ ಸೇವೆಯನ್ನು ಕೆಲವು ಜಿಲ್ಲೆಗಳಲ್ಲಿ ಶುರು ಮಾಡಿವೆ.
ವಿದ್ಯಾರ್ಥಿಗಳು ಏನು ಮಾಡಬೇಕು?
ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘಟನೆ (NASSCOM) ಅಂದಾಜು ಪ್ರಕಾರ, ಭಾರತದ ಪ್ರಾದೇಶಿಕ ಭಾಷಾ ಎಐ ಸೇವೆಗಳ ಮಾರುಕಟ್ಟೆ 2030ರ ವೇಳೆಗೆ 10 ಬಿಲಿಯನ್ ಡಾಲರ್ ತಲುಪಲಿದೆ. ಕನ್ನಡದಲ್ಲಿ ಎಐ ಮಾಂತ್ರಿಕತೆ ಸಂಪೂರ್ಣವಾಗಿ ಸಾಧ್ಯವಾದರೇ, ಡಿಜಿಟಲ್ ವೇದಿಕೆಯಲ್ಲಷ್ಟೇ ಅಲ್ಲ, ರಾಜ್ಯದ ಆರ್ಥಿಕ ಬೆಳವಣಿಗೆಗೂ ಶಕ್ತಿ ಸಿಗಲಿದೆ.
‘ಕನ್ನಡ ಎಐ ಕ್ರಾಂತಿ’ಯ ಮೊದಲ ಹಂತದಲ್ಲಿ ನಾವಿದ್ದೇವೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಈ ಎಐ ಕ್ರಾಂತಿಯಲ್ಲಿ ಹೇಗೆ ಪಾಲ್ಗೊಳ್ಳಬಹುದು? ಈ ನಿಟ್ಟಿನಲ್ಲಿ ಪ್ರಯತ್ನಗಳು ಈಗಾಗಲೇ ಶುರುವಾಗಿವೆ. ಕನ್ನಡದಲ್ಲಿ ಕಾರ್ಯನಿರ್ವಹಿಸುವ ಎಡ್ ಟೆಕ್ ಉಪಕರಣಗಳು ವಿದ್ಯಾರ್ಥಿಗಳಿಗೆ ಕೋಡಿಂಗ್, ಹಣಕಾಸು, ಉದ್ಯಮಶೀಲತೆ ಮುಂತಾದ ವಿಷಯಗಳನ್ನು ಕಲಿಸಲು ಸಹಕಾರಿಯಾಗುತ್ತಿವೆ. ಇನ್ನೊಂದು ಕಡೆ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ‘ಎಐ + ಕನ್ನಡ’ ತರಗತಿಗಳನ್ನು ಸೇರಿಸುವ ಪ್ರಯತ್ನಗಳು ಚಾಲ್ತಿಯಲ್ಲಿವೆ.
ಭಾಷೆಯ ಅಸ್ಮಿತೆ ಮತ್ತು ಭಾವನೆ!
ಪ್ರತಿಯೊಂದು ಭಾಷೆಗೂ ತನ್ನದೇ ಆದ ಒಂದು ಅಸ್ಮಿತೆ ಇರುತ್ತದೆ. ಎಐ ಅದನ್ನು ಸಡಿಲಗೊಳಿಸುತ್ತದೆಯಾ? ಇಂಥದ್ದೊಂದು ಪ್ರಶ್ನೆ ಸಹ ಸಹಜ. ಗೂಗಲ್ ಟ್ರಾನ್ಸ್ ಲೇಟ್ ನ ಅಪಭ್ರಂಶಗಳನ್ನು ಹಲವು ಬಾರಿ ಅನುಭವಿಸಿದ್ದೇವೆ. ಈ ಎಐ ಸಹ ಒಬ್ಬ ವಿದ್ಯಾರ್ಥಿಯಾಗಿ ಕನ್ನಡ ಕಲಿಯುತ್ತಿದೆ. ಎಐಗೆ ತರಬೇತಿ ನೀಡುವ ಕೆಲಸ ಮಾಡುತ್ತಿರುವ ಸಂಸ್ಥೆಗಳು ಭಾಷಾ ಗೌರವ ಕಾಪಾಡಿಕೊಂಡು ತರಬೇತಿ ನೀಡಬೇಕಿದೆ. ಕನ್ನಡವನ್ನು ನಾವು ಹೆಚ್ಚುಹೆಚ್ಚು ಬಳಸಿದಷ್ಟೂ, ನಮ್ಮ ಭಾಷೆಯನ್ನು ಎಐ ಬಾಟ್ಗಳು ಚೆನ್ನಾಗಿ ಕಲಿಯುತ್ತವೆ.
ಪ್ರಾಂಪ್ಟ್ ಬರೆಯೋನೆ ಮಹಾಶೂರ!
ಎಐ ಚಾಟ್‌ಬಾಟ್‌ನ ಹೃದಯವೇ ಪ್ರಾಂಪ್ಟ್ ಬರೆಯುವ ಕಲೆ. ‘Prompt Writing’ ಎಂದರೆ ಸರಿಯಾದ ಪ್ರಶ್ನೆ ಅಥವಾ ನಿರ್ದೇಶನ ನೀಡಿ, ಸರಿಯಾದ ಉತ್ತರ ಪಡೆಯುವ ಸಾಮರ್ಥ್ಯ. ಇದು ಹೊಸಯುಗದ ಕೌಶಲ್ಯ. ಕನ್ನಡದಲ್ಲಿ ಚಾಟ್ ಬಾಟ್‌ಗಳನ್ನು ಉಪಯೋಗಿಸಲು ಕಲಿತವರು Al Prompt Engineer ಅಥವಾ Language Interaction Designer ಎಂಬ ಹೊಸ ಉದ್ಯೋಗಗಳಲ್ಲಿ ಅವಕಾಶ ಪಡೆಯಬಹುದು.
ಕನ್ನಡದಲ್ಲೇ ಪ್ರಾಂಪ್ಟ್ ರಚನೆ ಮಾಡುವವರಿಗೆ ಬೇಡಿಕೆ ಹೆಚ್ಚುತ್ತಿದೆ. ಅನೇಕ ಕಂಪನಿಗಳು ಕನ್ನಡ ಸಂಭಾಷಣೆಗಾಗಿ ಕಂಟೆಂಟ್ ಟ್ರೈನರ್, ಎಐ ಕ್ವಾಲಿಟಿ ಅನಾಲಿಸ್ಟ್, ವೈಸ್ ಸ್ಪೆಶಲಿಸ್ಟ್ ಹುದ್ದೆಗಳನ್ನು ಸೃಷ್ಟಿಸುತ್ತಿವೆ.
ಕೃತಕ ಬುದ್ದಿಮತ್ತೆಯು ಕನ್ನಡ ಕಲಿಯುತ್ತಿದೆ. ಆದರೆ ಅದು ನಮ್ಮ ನುಡಿಯ ಅರ್ಥವನ್ನು ಮಾತ್ರವಲ್ಲ, ನಮ್ಮ ಮನದ ಭಾವನೆಗಳನ್ನೂ ಅರಿಯುವ ಕಾಲ ಹತ್ತಿರದಲ್ಲಿದೆ. ಭವ್ಯ ಪರಂಪರೆ, ಇತಿಹಾಸ ಇರುವ ಭಾಷೆ ತಂತ್ರಜ್ಞಾನದಲ್ಲಿ ಹೂತುಹೋಗಬಾರದು, ಅದು ತಂತ್ರಜ್ಞಾನದಲ್ಲಿ ಅರಳಬೇಕು.
ನಿಮ್ಮ ಬ್ಯಾಂಕ್ ಆ್ಯಪ್ ನಿಮ್ಮನ್ನು ಕನ್ನಡದಲ್ಲಿ ಸ್ವಾಗತಿಸುವ, ನಿಮ್ಮ ಎಐ ಬೋಧಕರು ಕನ್ನಡದಲ್ಲಿ ಕಲಿಸುವ ಮತ್ತು ನಿಮ್ಮ ಕಾರು ಸಂಚರಣೆ ವ್ಯವಸ್ಥೆಯು ಕನ್ನಡದಲ್ಲಿ ನಿರ್ದೇಶನಗಳನ್ನು ನೀಡುವ ದಿನಗಳು ದೂರದಲ್ಲಿಲ್ಲ. ಕರ್ನಾಟಕವು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಭಾಷೆಯು ಸೇತುವೆಯಾಗಲಿದೆ.
ಗೂಗಲ್ ಟ್ರಾನ್ಸ್‌ಲೇಟ್ VS ಎಐ ಚಾಟ್‌ಬಾಟ್:
ಪದ, ವಾಕ್ಯ ಅಥವಾ ಪ್ಯಾರಾಗ್ರಾಫ್‌ಗಳನ್ನು ಭಾಷಾಂತರ ಮಾಡುವುದಷ್ಟೆ ಗೂಗಲ್ ಟ್ರಾನ್ಸ್‌ಲೇಟ್‌ನ ಕಾರ್ಯವಲ್ಲ. ಅದು ಅರ್ಥವನ್ನು ಯಾಂತ್ರಿಕವಾಗಿ ಅನುವಾದಿಸುತ್ತದೆ. ಆದರೆ ಅರ್ಥದ ನುಡಿ, ಶೈಲಿ ಅಥವಾ ಭಾವನೆಗಳ ಆಳವನ್ನು ಅರಿತುಕೊಳ್ಳುವುದಿಲ್ಲ. ಆದರೆ ಎಐ ಚಾಟ್ ಬಾಟ್ (Al Chatbot) ಮನುಷ್ಯನಂತೆ ಮಾತನಾಡಿ, ಸಂದರ್ಭಕ್ಕೆ ತಕ್ಕ ಉತ್ತರ ನೀಡಬಲ್ಲದು. ಅದು ಕೇವಲ ಭಾಷೆಯನ್ನು ಅರ್ಥಮಾಡಿಕೊಳ್ಳುವುದಲ್ಲ, ಪ್ರಶ್ನೆಯ ಉದ್ದೇಶ, ಭಾವ ಹಾಗೂ ಸಂಭಾಷಣೆಯ ಹಿನ್ನೆಲೆಯನ್ನೂ ಗ್ರಹಿಸುತ್ತದೆ.
ಉದಾಹರಣೆಗೆ: ‘ನಾಳೆ ಹವಾಮಾನ ಹೇಗಿರುತ್ತೆ?’ ಎಂಬ ಪ್ರಶ್ನೆಗೆ ಗೂಗಲ್ ಟ್ರಾನ್ಸ್‌ಲೇಟ್ ಕೇವಲ ಅನುವಾದವನ್ನಷ್ಟೇ ಮಾಡುತ್ತದೆ. ಆದರೆ ಚಾಟ್ ಬಾಟ್ ನಾಳೆಯ ಹವಾಮಾನ ವಿವರದ ಜತೆಗೆ ಸಲಹೆಯನ್ನೂ ನೀಡಬಲ್ಲದು!
ಬಿಸಿನೆಸ್‌ಗೂ ಸಾಥ್:
ಉದ್ಯಮ ಅಥವಾ ವ್ಯವಹಾರಗಳಿಗೆ ಸಂಬಂಧಿಸಿದ ಎಐ ಪರಿಕರಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕು. ಆಗ ಕನ್ನಡ/ಕರ್ನಾಟಕದ ಮಾರುಕಟ್ಟೆಯ ವ್ಯಾಪ್ತಿ ಹಿಗ್ಗುತ್ತದೆ.
ಕನ್ನಡ ಮಾತನಾಡುವ ಫೈನಾನ್ಶಿಯಲ್ ಅಡ್ವೈಸರ್ ಬಾಟ್‌ನಿಂದ ಗ್ರಾಮೀಣ ಹೂಡಿಕೆದಾರರಿಗೆ ಎಸ್‌ಐಪಿಗಳು ಮತ್ತು ವಿಮೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಸಂಬಂಧಿ ಉದ್ಯಮವೂ ಬೆಳೆಯುತ್ತದೆ.
ಧ್ವನಿ ಚಾಲಿತ ಇ-ಕಾಮರ್ಸ್ ಆ್ಯಪ್‌ಗಳು ಸಾಕಷ್ಟಿವೆ. ಇಂಗ್ಲಿಷ್ ಗೊತ್ತಿಲ್ಲದ ಕನ್ನಡ ಗ್ರಾಹಕರನ್ನು ತಲುಪಲು ಕನ್ನಡಕ್ಕೆ ಈ ಆ್ಯಪ್‌ಗಳು ಜೈ ಅನ್ನಲೇ ಬೇಕು.
ಕನ್ನಡಕ್ಕೆ ಆದ್ಯತೆ ನೀಡಿ ರೂಪುಗೊಳ್ಳುವ ಕಂಪನಿಗಳು ಗ್ರಾಹಕರ ವಿಶ್ವಾಸವನ್ನು ಗಳಿಸುತ್ತವೆ, ಬೆಳವಣಿಯನ್ನೂ ದಾಖಲಿಸುತ್ತವೆ. ಇಂಥ ಕಂಪನಿಗಳು ಕೋಟ್ಯಂತರ ಕನ್ನಡ ಗ್ರಾಹಕರನ್ನು ಆಕರ್ಷಿಸುತ್ತವೆ.