Amendment Rules-2025: ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ (ತಿದ್ದುಪಡಿ) ನಿಯಮಗಳು-2025

Amendment Rules-2025: ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ (ತಿದ್ದುಪಡಿ) ನಿಯಮಗಳು-2025

ಅಧಿಸೂಚನೆ:

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ 2010 (2011ರ ಕರ್ನಾಟಕ ಅಧಿನಿಯಮ 09)ರ 17ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸಾರ್ವಜನಿಕ ದಾಖಲೆಗಳ ನಿಯಮಗಳು, 2013ನ್ನು ತಿದ್ದುಪಡಿ ಮಾಡಲು ಈ ಕೆಳಗಿನ ನಿಯಮಗಳನ್ನು ರಚಿಸುತ್ತದೆ; ಎಂದರೆ:-

ನಿಯಮಗಳು

1.ಶೀರ್ಷಿಕೆ ಮತ್ತು ಪ್ರಾರಂಭ :

(1) ಈ ನಿಯಮಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ (ತಿದ್ದುಪಡಿ) ನಿಯಮಗಳು-2025 ಎಂದು ಕರೆಯತಕ್ಕದ್ದು.

(2) ಇವು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2.ಶೀರ್ಷಿಕೆ ತಿದ್ದುಪಡಿ :

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು, 2013 ರಲ್ಲಿ (ಇನ್ನು ಮುಂದೆ ನಿಯಮಗಳು ಎಂದು ಉಲ್ಲೇಖಿಸಲಾಗುವುದು), “ನಿಯಮಗಳು” ಶೀರ್ಷಿಕೆ ನಂತರ ಈ ಕೆಳಗಿನಂತೆ ಸೇರಿಸಲಾಗುತ್ತದೆ. ಅವುಗಳೆಂದರೆ :

ಅಧ್ಯಾಯ-I: ಸಾಮಾನ್ಯ

3.ಹೊಸ ಅಧ್ಯಾಯ-1ರ ಅಳವಡಿಕೆ:

ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ನಿಯಮಗಳು, 2013 ರ ನಿಯಮ 12 ರ ನಂತರ ಈ ಕೆಳಕಂಡ ನಿಯಮಗಳನ್ನು ಸೇರಿಸಲಾಗುತ್ತದೆ; ಅವುಗಳೆಂದರೆ:-

ಅಧ್ಯಾಯ-II

ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಸಂಬಂಧಿಸಿದಂತೆ

13.ದಾಖಲೆಗಳ ವರ್ಗೀಕರಣ :

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಎಲ್ಲಾ ಶಾಖೆಗಳಿಂದ ಸೃಜಿಸಲಾಗುವ ದಾಖಲೆಗಳ ಪ್ರತಿ ವರ್ಗವನ್ನು ಸದರಿ ದಾಖಲೆಗಳ ಪ್ರಾಮುಖ್ಯತೆ ಮತ್ತು ಭವಿಷ್ಯದಲ್ಲಿ ಸದರಿ ದಾಖಲೆಗಳ ಅವಶ್ಯಕತೆಗೆ ಅನುಗುಣವಾಗಿ ಅವಧಿಯನ್ನು ನಿಗದಿಪಡಿಸಿ, ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ನಿಬಂಧಕರು ಅವುಗಳನ್ನು ಎ, ಬಿ, ಸಿ, ಡಿ ಮತ್ತು ಇ ವರ್ಗಗಳನ್ನಾಗಿ ವರ್ಗೀಕರಿಸಬೇಕು. ಎಲ್ಲಾ ದಾಖಲೆಗಳಿಗೂ ಪುಟ ಸಂಖ್ಯೆಯನ್ನು ನೀಡಿ ಪ್ರತ್ಯೇಕ ಭಾಗಗಳಾಗಿ ಪರಿವಿಂಗಡಣೆ ಮಾಡಿ, ಅವುಗಳನ್ನು ವಿಲೇವಾರಿ ಮಾಡಿದ ಮೂರು ತಿಂಗಳೊಳಗಾಗಿ ಲೋಕಾಯುಕ್ತ ಸಂಸ್ಥೆಯ ದಾಖಲೆ ಕೊಠಡಿಗೆ ಹಸ್ತಾಂತರಿಸಬೇಕು.

14.ಸಾಕ್ಷ್ಯಗಳೆಂದು ಒಪ್ಪಿಸಿರದ ದಾಖಲಾತಿಗಳು:

(1) ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಒದಗಿಸಿರುವ ದಾಖಲಾತಿಗಳನ್ನು ತನಿಖೆ ಅಥವಾ ವಿಚಾರಣೆಯ ಅವಧಿಯಲ್ಲಿ ಸಾಕ್ಷ್ಯಗಳನ್ನಾಗಿ ಒಪ್ಪಿಸದೇ ಉಳಿದಿರುವಂತಹ ದಾಖಲೆಗಳನ್ನು ವಿಚಾರಣೆ/ ತನಿಖೆ ನಡವಳಿಗಳಿಂದ ಪ್ರತ್ಯೇಕಗೊಳಿಸಿ ಪ್ರಕರಣಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಹಿಂದಿರುಗಿಸತಕ್ಕದ್ದು.

(2) ತನಿಖೆ ಅಥವಾ ವಿಚಾರಣೆಯ ಅವಧಿಯಲ್ಲಿ ಸಾಕ್ಷ್ಯಗಳನ್ನಾಗಿ ಒಪ್ಪಿಸದೇ ಉಳಿದಿರುವಂತಹ ದಾಖಲೆಗಳನ್ನು ಪ್ರಕರಣಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಿಗೆ ಹಿಂದಿರುಗಿಸಲು ಯಾವುದೇ ಅರ್ಜಿಗಳನ್ನು ಸಲ್ಲಿಸಬೇಕಾದ ಅಗತ್ಯವಿರುವುದಿಲ್ಲ. ಸಂಬಂಧಿಸಿದ ವ್ಯಕ್ತಿಗಳಿಂದ ಸ್ವೀಕೃತಿಯನ್ನು ಪಡೆದರೆ ಸಾಕು.

(3) ಯಾವುದೇ ವಾರಸುದಾರರಿಲ್ಲದ ದಾಖಲೆಗಳನ್ನು ದಾಖಲೆಗಳ ವರ್ಗೀಕರಣದಲ್ಲಿ ನಿಗಧಿಪಡಿಸಿರುವ ಕಾಲಾವಧಿಗೆ ಅನುಗುಣವಾಗಿ ನಾಶಪಡಿಸತಕ್ಕದ್ದು.

(4) ಸರ್ಕಾರದ /ಇಲಾಖೆಯ ಯಾವುದೇ ಅಧಿಕಾರಿ ಒದಗಿಸಿದ ಮೂಲ ದಾಖಲಾತಿಗಳನ್ನು ಅಥವಾ ದಾಖಲೆಗಳನ್ನು ವಿಚಾರಣೆ ಅಥವಾ ತನಿಖೆ ಪೂರ್ಣಗೊಂಡ ನಂತರ ಅವುಗಳನ್ನು ಹಾಜರುಪಡಿಸಿದ ಸಂಬಂಧಪಟ್ಟ ಕಛೇರಿಗೆ ತಪ್ಪದೇ ಹಿಂದಿರುಗಿಸತಕ್ಕದ್ದು.

15.ನಾಶಪಡಿಸಬೇಕಾದ ಕಾಲ ಪರಿಪಕ್ವಗೊಂಡಿದ್ದರೂ ಮತ್ತೊಂದು ದೂರಿನಲ್ಲಿ ಪರಿಗಣನೆಗೆ ತೆಗೆದುಕೊಂಡ ದಾಖಲಾತಿಗಳು:

ಈ ನಿಯಮಾವಳಿಗಳ ಪ್ರಕಾರ ನಾಶಪಡಿಸಲು ಅಥವಾ ನಾಶವಾಗಲು ಕಾಲ ಪರಿಪಕ್ವಗೊಂಡ ಯಾವುದೇ ದಾಖಲಾತಿಗೆ ಸಂಬಂಧಿಸಿದಂತೆ ಸದರಿ ದಾಖಲಾತಿಯನ್ನು ನಾಶಪಡಿಸುವುದಕ್ಕೆ ಮುಂಚಿತವಾಗಿ ಬೇರೆ ಯಾವುದಾದರೂ ದೂರಿನಲ್ಲಿ, ವಿಚಾರಣೆಯಲ್ಲಿ ಅಥವಾ ನಡವಳಿಯಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಿದ್ದರೆ ಅಂತಹ ದಾಖಲಾತಿಗಳನ್ನು ನಾಶಪಡಿಸಲು ಅವುಗಳನ್ನು ಹಾಜರುಪಡಿಸಿದ ಕಡತಕ್ಕೆ ಅನ್ವಯಿಸುವ ನಿಯಮವನ್ನು ಅನುಸರಿಸತಕ್ಕದ್ದು.

16.ನಿಯತಕಾಲಿಕ ಸಮೀಕ್ಷೆ:

ವರ್ಗೀಕೃತ ದಾಖಲೆಗಳನ್ನು ಕೆಳದರ್ಜೆಗಿಳಿಸಲು (ಡೌನ್-ಗ್ರೇಡ್ ಮಾಡಲು) ಮತ್ತು ಅಲ್ಪಕಾಲಿಕ ಮೌಲ್ಯದ ದಾಖಲೆಗಳನ್ನು ಹೊರಹಾಕಲು ಸಂಸ್ಥೆಯ ನಿಬಂಧಕರು ಕನಿಷ್ಠ ಐದು ವರ್ಷಗಳಿಗೊಮ್ಮೆ ನಿಯತಕಾಲಿಕ ಸಮೀಕ್ಷೆಯನ್ನು ಕೈಗೊಳ್ಳಬೇಕು. ವಿಲೇವಾರಿಯಾದ, ಪ್ರಸ್ತುತ ಅಸ್ತಿತ್ವದಲ್ಲಿರುವ ದಾಖಲೆಗಳನ್ನು ದಾಖಲೆಗಳ ವರ್ಗೀಕರಣದಲ್ಲಿ ನಿಗದಿಪಡಿಸಲಾದ ಕಾಲಾವಧಿಗೆ ಅನುಸಾರವಾಗಿ ನಾಶಪಡಿಸತಕ್ಕದ್ದು.

17.ದಾವೆಗೆ ಸಂಬಂಧಿಸಿದ ದಾಖಲೆಗಳು:

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಉಚ್ಚ ನ್ಯಾಯಾಲಯ ಅಥವಾ ಭಾರತ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಅಥವಾ ವ್ಯಾಜ್ಯವು ಪರಿಹಾರವಾಗಿರದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅವು ತೀರ್ಮಾನವಾಗುವವರೆಗೂ ನಾಶಪಡಿಸಬಾರದು.

18.ದಾಖಲೆಗಳ ನಾಶ:

ನಮೂದು ಮಾಡದೇ ಪರಿಶೀಲನೆ ಮಾಡದೇ ಯಾವುದೇ ದಾಖಲೆಗಳನ್ನು ನಾಶಪಡಿಸಬಾರದು.

19.ದಾಖಲೆಗಳ ನಾಶದ ಸೂಚನೆಯ ಪ್ರಕಟಣೆ:

ನಾಶಪಡಿಸಲು ಪಟ್ಟಿ ಮಾಡಲಾದ ದಾಖಲೆಗಳ ಪಟ್ಟಿಯನ್ನು (ಪ್ರಕರಣಗಳ ಸಂಖ್ಯೆ ಸಹಿತವಾಗಿ) ಅವುಗಳನ್ನು ನಾಶಪಡಿಸಲಾಗುವ ದಿನಾಂಕವನ್ನು ನಿಗದಿಪಡಿಸಿದ ಮಾಹಿತಿಯೊಂದಿಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಸೂಚನಾ ಫಲಕ ಹಾಗೂ ಅಂತರ್ಜಾಲದಲ್ಲಿ ಪ್ರಕಟಿಸತಕ್ಕದ್ದು.

20.ದಾಖಲೆಗಳ ಡಿಜಿಟಲೀಕರಣ:

ಸ್ಥಳಾವಕಾಶಕ್ಕಾಗಿ ಅಥವಾ ಶೋಧನಾ ಕಾರ್ಯದ ಸರಳೀಕರಣಕ್ಕಾಗಿ ದಾಖಲೆಗಳ ಡಿಜಿಟಲೀಕರಣ ಅವಶ್ಯವೆಂದು ನಿಬಂಧಕರಿಗೆ ಕಂಡುಬಂದರೆ, ದಾಖಲೆಗಳ ಡಿಜಿಟಲೀಕರಣದ ಮೂಲಕ ಭೌತಿಕ ದಾಖಲೆಗಳನ್ನು ಸಂರಕ್ಷಿಸಬಹುದು. ಹಾಗೆ ಡಿಜಿಟಲೀಕರಣಗೊಳಿಸಿದ ಭೌತಿಕ ದಾಖಲೆಗಳನ್ನು ಸ್ಥಳಾವಕಾಶದ ಕೊರತೆಯಂಟಾದಲ್ಲಿ, ನಿಗದಿಪಡಿಸಿದ ಕಾಲ ಪರಿಪಕ್ವಗೊಳ್ಳುವ ಮುನ್ನವೇ ನಾಶಪಡಿಸಲು ನಿಬಂಧಕರು ವಿವೇಚನಾನುಸಾರ ಆದೇಶಿಸಬಹುದು.

ವಿವರಣೆ:- ಈ ಅಧ್ಯಾಯದ ಉದ್ದೇಶಕ್ಕಾಗಿ

(ಎ) ‘ಅಧಿನಿಯಮ’ ಎಂದರೆ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಅಧಿನಿಯಮ, 2010 (2011ರ ಕರ್ನಾಟಕ ಅಧಿನಿಯಮ 09);

(ಬಿ) ‘ಎ’ ವರ್ಗದ ದಾಖಲೆಗಳು’ ಎಂದರೆ ಶಾಶ್ವತವಾಗಿ ಸಂರಕ್ಷಿಸಬೇಕಾದ ದಾಖಲೆಗಳು;

(ಸಿ) ‘ಬಿ’-ವರ್ಗದ ದಾಖಲೆಗಳು’ ಎಂದರೆ ಮೂವತ್ತು ವರ್ಷಗಳ ಅವಧಿಗೆ ಸಂರಕ್ಷಿಸಬೇಕಾದ ದಾಖಲೆಗಳು;

(ಡಿ) ‘ಸಿ’ ವರ್ಗದ ದಾಖಲೆಗಳು’ ಎಂದರೆ ಹತ್ತು ವರ್ಷಗಳ ಅವಧಿಗೆ ಸಂರಕ್ಷಿಸಬೇಕಾದ ದಾಖಲೆಗಳು;

(ಇ) ‘ಡಿ’ ವರ್ಗದ ದಾಖಲೆಗಳು’ ಎಂದರೆ ಐದು ವರ್ಷಗಳ ಅವಧಿಗೆ ಸಂರಕ್ಷಿಸಬೇಕಾದ ದಾಖಲೆಗಳು;

(ಎಫ್) ‘ಇ’ ವರ್ಗದ ದಾಖಲೆಗಳು’ ಎಂದರೆ ಒಂದು ವರ್ಷದ ಅವಧಿಗೆ ಸಂರಕ್ಷಿಸಬೇಕಾದ ದಾಖಲೆಗಳು;

(ಜಿ) “ಲೋಕಾಯುಕ್ತ” ಎಂದರೆ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984 (1985ರ ಕರ್ನಾಟಕ ಅಧಿನಿಯಮ 4) ಸೆಕ್ಷನ್ 3 ರ ಅಡಿಯಲ್ಲಿ ಲೋಕಾಯುಕ್ತರಾಗಿ ನೇಮಕಗೊಂಡ ವ್ಯಕ್ತಿ; ಮತ್ತು

(ಹೆಚ್) ‘ನಿಬಂಧಕರು’ ಎಂದರೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ನೇಮಕಗೊಂಡ ನಿಬಂಧಕರು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

(ಎನ್. ಶಾರದಾಂಬ) ಸರ್ಕಾರದ ಅಪರ ಕಾರ್ಯದರ್ಶಿ, ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ

 

CLICK HERE TO DOWNLOAD NOTIFICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!