ASER- ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ASER ವರದಿಯಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ.-2024

ASER- ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ.ಕೋವಿಡ್ ಪಿಡುಗಿನ ನಂತರ ಶಿಕ್ಷಣ ಕ್ಷೇತ್ರದ ಸ್ಥಿತಿಗತಿ -ವಾರ್ಷಿಕ ವರದಿಯಲ್ಲಿ ಪ್ರಸ್ತಾಪ.

ASER REPORT: ರಾಜ್ಯದಲ್ಲಿ 2022ನೇ ಸಾಲಿನಲ್ಲಿ 6-14 ವರ್ಷದ ಶೇ.76 ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೆ 2024ರ ವೇಳೆಗೆ ಈ ವಯಸ್ಸಿನ ಶೇ.71ರಷ್ಟು ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಅಂದರೆ ಅವರ ಪ್ರಮಾಣ ಶೇ.5ರಷ್ಟು ಕುಸಿತ ಕಂಡಿದೆ ಎಂದು 2024ನೇ ಸಾಲಿನ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ (ಎಎಸ್‌ಇಆರ್) ಬಹಿರಂಗಪಡಿಸಿದೆ. ಹಾಗಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ದಾಖಲಾತಿ ಪ್ರಮಾಣ ಕುಸಿತ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್-19 ಪಿಡುಗಿನ ವೇಳೆ, ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಗೊಂಡಿತ್ತು. ನಂತರದ ವರ್ಷಗಳಲ್ಲಿ ದಾಖಲಾತಿಯಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ.

6-14 ವರ್ಷ ವಯೋಮಾನದ ಮಕ್ಕಳ ದಾಖಲಾತಿ ಪ್ರಮಾಣವು 2018ರಲ್ಲಿ ಇದ್ದ ಮಟ್ಟಕ್ಕೆ ತಲುಪಿದೆ.

‘ಪ್ರಥಮ್’ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ASER ಸಂಸ್ಥೆ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿ ವಾರ್ಷಿಕ ಎಎಸ್‌ಇಆ‌ರ್ ವರದಿಯನ್ನು ರಚಿಸುತ್ತದೆ. ಈ ವರ್ಷದ ವರದಿ ಈಗ ಬಿಡುಗಡೆಯಾಗಿದ್ದು, ರಾಜ್ಯದ ಶೈಕ್ಷಣಿಕ ಸ್ಥಿತಿಗತಿ ಮತ್ತು ಪ್ರವೃತ್ತಿಯ ಮೇಲೆ ಬೆಳಕು ಚೆಲ್ಲಿದೆ.

ಆತಂಕ ವ್ಯಕ್ತಪಡಿಸಿದ ಶಿಕ್ಷಣ ತಜ್ಞರು

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಹದಗೆಡುತ್ತಿದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್, ವಿವಿಧ ವಸತಿ ಶಾಲೆಗಳನ್ನು ಸ್ಥಾಪಿಸಿ, ಸಿಎಸ್‌ಆರ್ ನಿಧಿಯನ್ನು ಸೆಳೆದು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಈ ಹೊತ್ತಿನಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೇವಲ ಎರಡೇ ವರ್ಷಗಳಲ್ಲಿ ಶೇ.5ರಷ್ಟು ದಾಖಲಾತಿ ಕುಸಿದಿರುವುದು ಕಳವಳಕ್ಕೆ ಕಾರಣವಾಗಿದೆ.

ಇನ್ನೊಂದು ಆಘಾತಕಾರಿ ಅಂಶ ಎಂದರೆ 2022ರಲ್ಲಿ ಶೇ.2.2 ಮಕ್ಕಳು ಶಾಲೆಯಿಂದ ಹೊರಗಿದ್ದರೆ ಈ ಪ್ರಮಾಣ 2024ರಲ್ಲಿ ಶೇ.2.8ಕ್ಕೆ ಏರಿದೆ. ಇದರ ಜತೆಗೆ ಶೇ.83ರಷ್ಟು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇನ್ನು ಶೇ.22ರಷ್ಟು ಮಾಧ್ಯಮಿಕ ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಒಟ್ಟಾರೆ 2022ರ ಸಮೀಕ್ಷೆಗೆ ಹೋಲಿಸಿದರೆ 60ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿರುವ ಶಾಲೆಗಳ ಸಂಖ್ಯೆ ಮತ್ತಷ್ಟು ಬೆಳೆದಿದ್ದು, ಶೇ.17ರಷ್ಟು ಹೆಚ್ಚಳವಾಗಿದೆ.

ಅಪ್ರಾಪ್ತ ವಯಸ್ಕ ಮಕ್ಕಳ ಸಂಖ್ಯೆ ಇಳಿಕೆ

ರಾಷ್ಟ್ರ ಮಟ್ಟದಲ್ಲಿ 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಪೈಕಿ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಸಂಖ್ಯೆಯಲ್ಲಿ ಕ್ರಮೇಣ ಇಳಿಕೆ ಕಂಡುಬಂದಿದೆ.

2018ರಲ್ಲಿ ಇಂತಹ ಮಕ್ಕಳ ಪ್ರಮಾಣ ಶೇ.25.6ರಷ್ಟು ಇತ್ತು. 2022ರಲ್ಲಿ ಶೇ.22.7ಕ್ಕೆ ಕುಸಿಯಿತು. 2024ರ ವೇಳೆಗೆ ಈ ಪ್ರಮಾಣ ಶೇ.16.7ರಷ್ಟು ಇತ್ತು.

ಸಾಮರ್ಥ್ಯ ತರಗತಿಗೆ ತಕ್ಕಂತೆ ಇಲ್ಲ.

ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಕೇವಲ ಶೇ.15ರಷ್ಟು ವಿದ್ಯಾರ್ಥಿಗಳು ಮಾತ್ರ 2ನೇ ತರಗತಿ ಮಟ್ಟದ ಪಠ್ಯವನ್ನು ಓದಲು ಶಕ್ತರಾಗಿದ್ದಾರೆ. ಇನ್ನು, 8ನೇ ತರಗತಿಯಲ್ಲಿ ಓದುತ್ತಿರುವ ಶೇ.40ರಷ್ಟು ವಿದ್ಯಾರ್ಥಿಗಳು 2ನೇ ತರಗತಿ ಮಟ್ಟದ ಪಠ್ಯ ಓದಲು ಅಸಮರ್ಥರಾಗಿದ್ದಾರೆ.

ಭಾಗಾಕಾರ ಮಾಡಲು ಅಸಮರ್ಥತೆ:

ಇನ್ನು ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಶೇ.23 ಮಕ್ಕಳು ಮಾತ್ರ ವ್ಯವಕಲನವನ್ನು ಕಲಿತುಕೊಂಡಿದ್ದಾರೆ. ಅದೇ ಖಾಸಗಿ ಶಾಲೆಯಲ್ಲಿ ಇದೇ ತರಗತಿಯಲ್ಲಿ ಓದುತ್ತಿರುವ ಶೇ.31 ವಿದ್ಯಾರ್ಥಿಗಳು ವ್ಯವಕಲನ ಲೆಕ್ಕ ಮಾಡಲು ಸಮರ್ಥರಿದ್ದಾರೆ. ಇನ್ನು ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿ ಓದುತ್ತಿರುವ ಶೇ.19 ಮತ್ತು ಎಂಟನೇ ತರಗತಿಯಲ್ಲಿ ಓದುತ್ತಿರುವ * ಶೇ.35 ವಿದ್ಯಾರ್ಥಿಗಳು ಭಾಗಾಕಾರ ಮಾಡಬಲ್ಲರು. ಅದೇ ಖಾಸಗಿ ಶಾಲೆಗಳಲ್ಲಿ ಐದನೇ ತರಗತಿ ಓದುತ್ತಿರುವ ಶೇ.25 ಮತ್ತು ಎಂಟನೇ ತರಗತಿ ಓದುತ್ತಿರುವ ಶೇ.43 ವಿದ್ಯಾರ್ಥಿಗಳು ಭಾಗಾಕಾರ ಮಾಡಲು ಸಮರ್ಥರಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಇನ್ನು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ರಾಜ್ಯದಲ್ಲಿ ನಾಲ್ಕು ವರ್ಷ ವಯಸ್ಸಿನ ಶೇ.95ರಷ್ಟು ಮಕ್ಕಳು ಹಾಗೆಯೇ 5 ವರ್ಷದ ಶೇ.90ಕ್ಕಿಂತ ಹೆಚ್ಚು ಮಕ್ಕಳು ದಾಖಲಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ.

ಓದುವ ಸಾಮರ್ಥ್ಯದಲ್ಲಿ ಸುಧಾರಣೆ

ಓದುವ ಸಾಮರ್ಥ್ಯ ರಾಷ್ಟ್ರಮಟ್ಟಕ್ಕೆ ಸಂಬಂಧಿಸಿದಂತೆ 2014ರಲ್ಲಿ 3ನೇ ತರಗತಿ ಮಕ್ಕಳ ಪೈಕೆ ಓದುವ ಸಾಮರ್ಥ್ಯ ಹೊಂದಿದ್ದವರ ಸಂಖ್ಯೆ ಶೇ.23.6ರಷ್ಟಿತ್ತು. ಈ ಪ್ರಮಾಣ 2018ರಲ್ಲಿ ಶೇ.27.3ಕ್ಕೆ ಹೆಚ್ಚಳವಾಯಿತು. ಓದುವ ಸಾಮರ್ಥ್ಯ ಹೊಂದಿದ್ದ ಮಕ್ಕಳ ಸಂಖ್ಯೆ 2022ರಲ್ಲಿ ಶೇ.20.5ಕ್ಕೆ ಕುಸಿದಿತ್ತು. ಈಗ 3ನೇ ತರಗತಿ ಮಕ್ಕಳಲ್ಲಿ ಓದುವ ಸಾಮರ್ಥ್ಯದಲ್ಲಿ ಮತ್ತೆ ಸುಧಾರಣೆ ಕಂಡುಬಂದಿದ್ದು ಶೇ.27.1ರಷ್ಟು ಮಕ್ಕಳು ನಿರರ್ಗಳವಾಗಿ ಓದಬಲ್ಲವರಾಗಿದ್ದಾರೆ.

ಕೆಲ ರಾಜ್ಯಗಳಿಂದ ಉತ್ತಮ ಸಾಧನೆ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಕೆಲ ರಾಜ್ಯಗಳು ಉತ್ತಮ ಸಾಧನೆ ದಾಖಲಿಸಿವೆ. ಕೆಲ ರಾಜ್ಯಗಳು ಕೋವಿಡ್-19 ಪಿಡುಗಿಗೂ ಮುನ್ನ ಇದ್ದ ಕಲಿಕಾ ಮಟ್ಟಕ್ಕಿಂತಲೂ ಹೆಚ್ಚಿನ ಸುಧಾರಣೆ ದಾಖಲಿಸಿದ್ದರೆ ಇನ್ನೂ ಕೆಲ ರಾಜ್ಯಗಳಲ್ಲಿ ಸುಧಾರಣೆ ಕಂಡುಬರಬೇಕಿದೆ. ಉತ್ತರ ಪ್ರದೇಶ ಬಿಹಾರ ಮಧ್ಯಪ್ರದೇಶ ಹಾಗೂ ತಮಿಳುನಾಡಿನಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ರಾಜ್ಯದ ಶೇ.23 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೇ.3.7 ಶಾಲೆಗಳಲ್ಲಿ ಶೌಚಾಲಯ, ಶೇ.10.5 ಶಾಲೆಯಲ್ಲಿ ಗ್ರಂಥಾಲಯವಿಲ್ಲ. ಶೇ.64.5 ಶಾಲೆಗಳಲ್ಲಿ ಮಕ್ಕಳ ಬಳಕೆಗೆ ಕಂಪ್ಯೂಟರ್ ಲಭ್ಯವಿಲ್ಲ ಎಂದು ಸಮೀಕ್ಷೆ ಪತ್ತೆ ಹಚ್ಚಿದೆ.

ವರದಿಯಲ್ಲಿನ ಪ್ರಮುಖ ಅಂಶಗಳು:

▪️ಸಮೀಕ್ಷೆಯ ಭಾಗವಾಗಿದ್ದ ಗ್ರಾಮೀಣ ಭಾಗದ ಮಕ್ಕಳ ಸಂಖ್ಯೆ -6,49,491
▪️ಸಮೀಕ್ಷೆ ನಡೆಸಲಾದ ಗ್ರಾಮಗಳ ಸಂಖ್ಯೆ- 17,997
▪️ಸಮೀಕ್ಷೆ ಕೈಗೊಂಡಿದ್ದ ಜಿಲ್ಲೆಗಳ ಸಂಖ್ಯೆ- 605
▪️ಸರ್ಕಾರಿ ಶಾಲೆಗಳಲ್ಲಿ ಶೇ. 5ರಷ್ಟು ಕಲಿಕಾ ಪ್ರಮಾಣ ಕುಸಿತ
▪️ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲೂ ಇಳಿಕೆ
▪️2022ರಲ್ಲಿ ಶೇ.2.2 ಮಕ್ಕಳು ಶಾಲೆಯಿಂದ ಹೊರಗಿದ್ದರೆ, 2024ರಲ್ಲಿ ಶೇ .2.8 2ಕ್ಕೆ ಏರಿಕೆ.
▪️ಶೇ.83 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳು
▪️ಶೇ.10.5 ಶಾಲೆಯಲ್ಲಿ ಗ್ರಂಥಾಲಯವಿಲ್ಲ.
▪️ಶೇ.64.5 ಶಾಲೆಗಳಲ್ಲಿ ಮಕ್ಕಳ ಬಳಕೆಗೆ ಕಂಪ್ಯೂಟರ್ ಲಭ್ಯವಿಲ್ಲ.
▪️ಶೇ.23 ಶಾಲೆಗಳಲ್ಲಿ ಕುಡಿಯುವ ನೀರಿಲ್ಲ.

 

CLICK HERE TO DOWNLOAD ASER REPORT

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!