High court Order: ಮಕ್ಕಳ ಹೆಸರು ಬದಲಾವಣೆ ಕರ್ನಾಟಕದ ಉಚ್ಚ ನ್ಯಾಯಾಲಯ ಮಹತ್ವದ ಆದೇಶ ಪ್ರಕಟ-2025
High court order: ಮಕ್ಕಳ ಹೆಸರು ಬದಲಾವಣೆಗೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ನಮೂದು ಮಾಡಲಾದ ಹೆಸರನ್ನು ಮತ್ತೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ರೀತಿಯಲ್ಲಿ ಜನನ ಮರಣ ಪ್ರಮಾಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ.
ಈ ಕುರಿತು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎನ್.ಎಸ್.ಸಂಜಯ್ ಗೌಡ ಅವರು ನಡೆಸಿದರು. ತಮ್ಮ ಮಗನ ಹೆಸರನ್ನು ಬದಲಾವಣೆಗೆ ಅವಕಾಶ ಕಲ್ಪಿಸಲು ಜನನ-ಮರಣ ನೋಂದಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಕೋರಿ ಮಗುವಿನ ಪರವಾಗಿ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.
ವಾದವನ್ನು ಆಲಿಸಿದ ರಾಜ್ಯ ಉಚ್ಚ ನ್ಯಾಯಾಲಯ ನ್ಯಾಯಪೀಠ, ಜನನ ಪ್ರಮಾಣ ಪತ್ರದಲ್ಲಿ ಒಮ್ಮೆ ಹೆಸರನ್ನು ನೋಂದಾಯಿಸಿದ ನಂತರ ಅದನ್ನು ಪೋಷಕರು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಹಲವು ಹೆಸರುಗಳನ್ನು ಇಡುವುದು ನಮ್ಮ ದೇಶದಲ್ಲಿ ಸಾಮಾನ್ಯವಾಗಿದೆ. ಆದರೆ, ದಾಖಲೆಗಳು ಒಂದೇ ಹೆಸರನ್ನು ನಮೂದಿಸಿರುವುದಕ್ಕೆ ಅವಕಾಶವಿರುವುದರಿಂದ ಇದು ವ್ಯಕ್ತಿಯನ್ನು ಗುರುತಿಸುವುದಕ್ಕೆ ಕೆಲವು ಸಂದರ್ಭಗಳಲ್ಲಿ ಗೊಂದಲಗಳನ್ನುಂಟು ಮಾಡಲಿದೆ ಎಂಬುದಾಗಿ ಅಭಿಪ್ರಾಯಪಟ್ಟಿತು.
ಇದಕ್ಕೆ ಸಂಬಂಧಿಸಿದಂತೆ ಶಾಸನಸಭೆ ಗಮನವನ್ನು ಹರಿಸಿ ನಾಗರಿಕರು ತಾವು ಇಷ್ಟಪಟ್ಟ ಸಂದರ್ಭದಲ್ಲಿ ತಮ್ಮ ಹೆಸರುಗಳನ್ನು ಬದಲಾವಣೆಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವ ರೀತಿಯಲ್ಲಿ ತಿದ್ದುಪಡಿ ಮಾಡಬೇಕು. ಜೊತೆಗೆ, ಹೆಸರು ಬದಲಾಯಿಸಿಕೊಳ್ಳುವವರ ದಾಖಲೆಗಳನ್ನು ಏಕಕಾಲಕ್ಕೆ ಬದಲಾವಣೆಗೆ ಅವಕಾಶ ನೀಡುವಂತಹ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಆದೇಶಿಸಿದೆ.
ರಾಜ್ಯ ಕಾನೂನು ಆಯೋಗ 2013ರ ಜುಲೈ 20ರಂದು ಸರ್ಕಾರಕ್ಕೆ ಸಲ್ಲಿಸಿರುವ 24ನೇ ವರದಿಯಲ್ಲಿನ ಶಿಫಾರಸುಗಳನ್ನು ಪರಿಗಣಿಸಿ ಕಾಯಿದೆಗೆ ತಿದ್ದುಪಡಿ ಮಾಡುವುದು ಸೂಕ್ತ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಕಾಯಿದೆಯ ಪ್ರಕಾರ ಹೆಸರನ್ನು ತಿದ್ದುಪಡಿ ಮಾಡುವವರೆಗೂ ಪೋಷಕರು ತಮ್ಮ ಮಕ್ಕಳ ಹೆಸರನ್ನು ಬದಲಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಹೆಸರು ಬದಲಾವಣೆ ಕೋರಿ ಬರುವವರ ಕುರಿತಂತೆ ಕೈಗೊಳ್ಳಬೇಕಾದಂತಹ ಕ್ರಮಗಳ ಕುರಿತು ನ್ಯಾಯಪೀಠ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ಕಾಯಿದೆ ತಿದ್ದುಪಡಿಯಾಗುವವರೆಗೂ ಈ ನಿರ್ದೇಶನಗಳನ್ನು ಅನುಸರಿಸುವ ಮೂಲಕ ಹೆಸರನ್ನು ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.