Karnataka Teacher Eligibility Test (KARTET) – 2025: ಕಂಪ್ಯೂಟರ್ ಆಧಾರಿತ ಟಿಇಟಿ,ಆಫ್‌ಲೈನ್ ಬದಲು ಆನ್‌ಲೈನ್‌ನಲ್ಲಿ ನಡೆಸಲು ನಿರ್ಧಾರ
Karnataka Teacher Eligibility Test (KARTET) – 2025: ಕಂಪ್ಯೂಟರ್ ಆಧಾರಿತ ಟಿಇಟಿ,ಆಫ್‌ಲೈನ್ ಬದಲು ಆನ್‌ಲೈನ್‌ನಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.ಬಿ.ಇಡಿ ಪದವೀಧರರಿಗೆ ಶಾಲಾ ಶಿಕ್ಷಣ ಇಲಾಖೆಯು ಬಿಖಿತವಾಗಿ ನಡೆಸುತ್ತಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ಇದೇ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ (ಸಿಬಿಟಿ) ನಡೆಸಲು ಇಲಾಖೆ ಸಿದ್ಧತೆ ನಡೆಸುತ್ತಿದೆ.
ಇಲ್ಲಿಯವರೆಗೂ ಆಫ್‌ಲೈನ್‌ನಲ್ಲಿ ನಡೆಯುತ್ತಿದ್ದ ಪರೀಕ್ಷೆಯನ್ನು ಮೊದಲ ಬಾರಿಗೆ ಆನ್ ಲೈತ್ ಮೂಲಕ ನಡೆಯಲಿದೆ. ಈ ಸಂಬಂಧ ಸರ್ಕಾರದ ಹಂತದಲ್ಲಿ ಚರ್ಚೆಯಾಗಿ ಒಪ್ಪಿಗೆ ನೀಡಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ.
ಪಾರದರ್ಶಕತೆ, ಹೊಣೆಗಾರಿಕೆ:
ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ನೀಡದಂತೆ ತಡೆಯುವುದು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ಪರೀಕ್ಷೆ ನಡೆಸುವುದು ಇದರ ಉದ್ದೇಶವಾಗಿದೆ. ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಲು ಸಹ ಅನುಕೂಲವಾಗಲಿದೆ. ಅಭ್ಯರ್ಥಿಗಳಿಗೂ ಪರೀಕ್ಷೆ ಮೇಲೆ ನಂಬಿಕೆ ಬರಲಿದೆ ಎಂಬುದು ಇಲಾಖೆ ಆಶಯವಾಗಿದೆ.
ಏಜೆನ್ಸಿಗೆ ಟೆಂಡರ್:
ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಬೇಕಿರುವ ಕಾರಣ ಏಜೆನ್ಸಿಗೆ ನೀಡಲಾಗುತ್ತದೆ. ಈ ಸಂಬಂಧ ಟೆಂಡರ್ ಕರೆಯಲಾಗುತ್ತದೆ. ಬಳಿಕ ಪ್ರಕ್ರಿಯೆಗಳು ಆರಂಭವಾಗಲಿವೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ, ಬ್ಯಾಂಕಿಂಗ್, ಡಿಆರ್‌ಡಿಒ, ಐಐಎಸ್‌ಸಿ ಸೇರಿ ಹಲವು ಸಂಸ್ಥೆಗಳ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆ ಕೂಡ ಆನ್‌ಲೈನ್ ಪರೀಕ್ಷೆ ಮೊರೆ ಹೋಗಿದೆ.ರಾಜ್ಯದ ಮಟ್ಟದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೂಡ ಆನ್‌ಲೈನ್ ಪರೀಕ್ಷೆ ನಡೆಸಲು ಅಣಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿರುವ ಪರೀಕ್ಷೆಗಳಿಗೆ ಬೆಂಗಳೂರಿನ ಕೆಇಎ ಕಚೇರಿಯಲ್ಲಿಯೇ ಪರೀಕ್ಷೆ ನಡೆಸಲು ಬೇಕಾದ ವ್ಯವಸ್ಥೆಗಳನ್ನು ರೂಪಿಸುತ್ತಿದೆ.
ಶಾಲಾ ಶಿಕ್ಷಣ ಇಲಾಖೆ ಪ್ರಸ್ತಾವನೆ:
ಆನ್‌ಲೈನ್ ಪರೀಕ್ಷೆಯನ್ನು ನಡೆಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಇತ್ತೀಚೆಗೆ ಈ ವಿಚಾರ ಕುರಿತು ಚರ್ಚಿಸಲಾಗಿದೆ. ಟಿಇಟಿಯನ್ನು ಆನ್‌ಲೈನ್ ಮೂಲಕ ನಡೆಸುವ ಸಂಬಂಧ ಇಲಾಖೆಯು ಅನುಮತಿ ಕೂಡ ನೀಡಿದೆ. ಶೀಘ್ರದಲ್ಲಿಯೇ ಆದೇಶ ಹೊರಬೀಳುವ ಸಾಧ್ಯತೆಗಳಿವೆ.
ಶಾಲಾ ಶಿಕ್ಷಣ ಇಲಾಖೆಯೇ ನೇತೃತ್ವ:
ಪರೀಕ್ಷೆಯನ್ನು ಏಜೆನ್ಸಿ ನಡೆಸಿದರೂ ಅದರ ನೇತೃತ್ವ, ನೋಂದಣಿ, ಪರೀಕ್ಷಾ ಪ್ರಕ್ರಿಯೆ, ಫಲಿತಾಂಶ ಪ್ರಕಟಿಸುವುದು, ಅಂಕಗಳ ಪರಿಗಣನೆ ಸೇರಿ ಒಟ್ಟಾರೆ ಪ್ರಕ್ರಿಯೆಯನ್ನು ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವೇ ನೋಡಿಕೊಳ್ಳಲಿದೆ.
3 ಲಕ್ಷ ಆಕಾಂಕ್ಷಿಗಳು:
ಬಿ.ಇಡಿ ಪದವಿ ಪಡೆದ 2.5ರಿಂದ 3 ಲಕ್ಷ ಅಭ್ಯರ್ಥಿಗಳು ಪ್ರತಿ ವರ್ಷ ಟಿಇಟಿ ಬರೆಯುತ್ತಾರೆ. ಸರ್ಕಾರಿ ನೇಮಕಾತಿ ಇಲ್ಲದಿದ್ದರೂ ಖಾಸಗಿ, ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ನೇಮಕಕ್ಕೆ ಟಿಇಟಿ ಪರಿಗಣಿಸಲಾಗುತ್ತದೆ. ಹೀಗಾಗಿ, ಪ್ರತಿವರ್ಷ ಆಕಾಂಕ್ಷಿಗಳಿರುತ್ತಾರೆ. 2023ರಲ್ಲಿ ಪತ್ರಿಕೆ-1ಕ್ಕೆ (1-5ನೇ ತರಗತಿ ಬೋಧನೆ) 1,27,130 ಮಂದಿ ಪರೀಕ್ಷೆ ಬರೆದಿದ್ದರು. ಪತ್ರಿಕೆ-2 (6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರು) 1,74,834 ಪರೀಕ್ಷೆಗೆ ಹಾಜರಾಗಿದ್ದರು. 2024ರಲ್ಲಿ ಎರಡೂ ಪತ್ರಿಕೆಗಳಿಂದ 2,70,514 ಮಂದಿ ನೊಂದಣಿ ಮಾಡಿಕೊಂಡು 2,45,466 ಮಂದಿ ಪರೀಕ್ಷೆ ಬರೆದಿದ್ದರು.
“ಈ ಬಾರಿ ಟಿಇಟಿ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ನಡೆಸಲು ಚರ್ಚಿಸಲಾಗಿದೆ. ಇಲಾಖೆ ಆದೇಶವಾದ ಬಳಿಕ ಟೆಂಡರ್ ಕರೆದು ಪ್ರಕ್ರಿಯೆ ಆರಂಭಿಸಲಾಗುತ್ತದೆ.”
| ಡಾ. ಕೆ.ವಿ. ತ್ರಿಲೋಕಚಂದ್ರ ಶಾಲಾ ಶಿಕ್ಷಣ ಇಲಾಖೆ ಆಯುಕ್ತ.
ಸಾಧಕ-ಬಾಧಕಗಳೇನು?
▪️ಆನ್‌ಲೈನ್ ಪರೀಕ್ಷೆಯಾಗಿರುವುದರಿಂದ ಮೌಲ್ಯಮಾಪನ, ಪರೀಕ್ಷಾ ಫಲಿತಾಂಶ ಪ್ರಕಟಣೆಗೆ ವೇಗ ಸಿಗಲಿದೆ.
▪️ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುವುದರಿಂದ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ.
▪️ಪರೀಕ್ಷಾ ಪ್ರಾಧಿಕಾರ ಹಾಗೂ ಅಭ್ಯರ್ಥಿಗಳಿಗೆ ಹೊಣೆಗಾರಿಕೆ ಇರಲಿದ್ದು, ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಬಹುದು ಅನ್ ಲೈನ್ ಪರೀಕ್ಷೆಯಾಗಿರುವ ಕಾರಣ ರಾಜ್ಯದ ಜಿಲ್ಲಾ/ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದು ಇಲಾಖೆಗೆ ಸವಾಲಾಗಿದೆ.
▪️ಏಜೆನ್ಸಿಗೆ ನೀಡುವುದರಿಂದ ಆ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಆನ್‌ಲೈನ್ ಮೋಸಗಳು ಹೆಚ್ಚಾಗುತ್ತಿರುವ ಕಾರಣ ನಿಗಾ ಇಡಬೇಕಿದೆ.
KARTET ಅಧ್ಯಯನ ಸಂಪನ್ಮೂಲ ಪಡೆಯಲು ಇಲ್ಲಿ ಕ್ಲಿಕ್ ಮಾಡಿ