Microfinance: ಅಕ್ರಮ ಫೈನಾನ್ಸ್ ನೀಡಿದ ಸಾಲವೆಲ್ಲಾ ಮನ್ನಾ: ರಾಜ್ಯ ಸರಕಾರದಿಂದ ಕರಡು ವಿಧೇಯಕ ರಚನೆ

Microfinance: ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದ್ದು, ಸುಗ್ರೀವಾಜ್ಞೆ ಕರಡನ್ನು ತಯಾರಿಸಿದೆ. ನೋಂದಣಿ ರಹಿತ ಮತ್ತು ಪರವಾನಗಿ ರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ನೀಡಿರುವ ಸಾಲದ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಸಾಲಗಾರರು ಮರುಪಾವತಿ ಮಾಡಬೇಕಿಲ್ಲ ಎಂದು ಕರಡಿನಲ್ಲಿ ಸೇರಿಸಲಾಗಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಲೇವಾದೇವಿದಾರರು ನೀಡುತ್ತಿರುವ ಕಿರುಕುಳದಿಂದ ಸಾಲಗಾರರನ್ನು ರಕ್ಷಿಸುವ ಉದ್ದೇಶದಿಂದ ‘ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ-2025’ ಅನ್ನು ಹೊರಡಿಸಲು ರಾಜ್ಯ ಸರಕಾರ ಮುಂದಾಗಿದ್ದು, ಅದರ ಭಾಗವಾಗಿ ಕರಡು ಪ್ರತಿಯನ್ನು ಅಂತಿಮಗೊಳಿಸಿದೆ.
3 ವರ್ಷ ಜೈಲು, 5 ಲಕ್ಷ ರೂ. ದಂಡ: ಸಾಲಗಾರರಿಗೆ ಹಿಂಸೆ, ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳು ಅಥವಾ ಲೇವಾದೇವಿದಾರರಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದ, ಮೂರು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಯಾವುದಕ್ಕೆ ನಿರ್ಬಂಧ?
▪️ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುವುದು, ಅವಮಾನಿಸುವುದು, ಅಡ್ಡಿಪಡಿಸುವುದು, ಹಿಂಸಿಸುವುದು.
▪️ಸಾಲಗಾರರು ಅಥವಾ ಅವರ ಕುಟುಂಬದ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು, ಅವರ ಸ್ವಾಧೀನದಲ್ಲಿರುವ ಸ್ವತ್ತುಗಳ ಬಳಕೆಗೆ ಅಡ್ಡಿಪಡಿಸುವುದು.
▪️ಸಾಲಗಾರರು ಅಥವಾ ಅವರ ಕುಟುಂಬದವರು ವಾಸಿಸುವ, ಕೆಲಸ ಮಾಡುವ ಸ್ಥಳಕ್ಕೆ ನಿರಂತರವಾಗಿ ಭೇಟಿ ನೀಡಿ ಚಟುವಟಿಕೆಗಳಿಗೆ ಅಡ್ಡಿಪಡಿಸುವುದು.
▪️ಬಲವಂತದಿಂದ ಸಾಲ ವಸೂಲಿ ಮಾಡಲು ಹೊರಗುತ್ತಿಗೆ ಸಿಬ್ಬಂದಿ ಬಳಕೆ, ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ಬಳಸಿಕೊಳ್ಳುವುದು.
▪️ಸಾಲಗಾರನು ಸರಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಾಲದಾತ ಅಥವಾ ಅವರ ಸಿಬ್ಬಂದಿ ಕಿತ್ತುಕೊಳ್ಳುವುದು.
ಕರಡಿನಲ್ಲಿ (Draft Rule) ಏನಿದೆ?
▪️’ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ಒಳಗೆ ಆಯಾ ನೋಂದಣಿ ಪ್ರಾಧಿಕಾರದಲ್ಲಿ (ಜಿಲ್ಲಾಧಿಕಾರಿ) ನೋಂದಣಿ ಮಾಡಿಕೊಳ್ಳಬೇಕು.
▪️’ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿ ದರ, ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು.
▪️’ಮೈಕ್ರೋ ಫೈನಾನ್ಸ್ ಕಂಪನಿ, ಲೇವಾದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ಮಾಡುವಂತಿಲ್ಲ.
▪️ನೋಂದಣಿ ಅವಧಿ ಒಂದು ವರ್ಷ ಮಾತ್ರ. ಅವಧಿ ಮುಗಿಯುವ 60 ದಿನಗಳ ಮೊದಲು ಮರು ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
▪️ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿ ಸಿದರೆ, ಪ್ರಾಧಿಕಾರವು ನೋಂದಣಿಯನ್ನು ರದ್ದು ಮಾಡಬಹುದು.
▪️ಸಾಲಗಾರರಿಂದ ಭದ್ರತೆಯಾಗಿ ಅಡಮಾನ ಇಟ್ಟುಕೊಳ್ಳಬಾರದು.
“ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲಗಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ರೂಪಿಸಲಾಗಿದೆ. ಸಾಲ ವಸೂಲಿ ಮಾಡಲು ರೌಡಿಗಳ ಮೂಲಕ ಬೆದರಿಸಿ, ಕಾನೂನು ಕೈಗೆ ತೆಗೆದುಕೊಂಡು, ಬಡವರ ಮೇಲೆ ದಬ್ಬಾಳಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು.”
-ಡಿ.ಕೆ.ಶಿವಕುಮಾರ್, ಡಿಸಿಎಂ