SSLC EXAM-2025 Recent Information
SSLC EXAM-2025 ಸಂಬಂಧಿಸಿದಂತೆ ಕಿರು ಪುಸ್ತಕಗಳನ್ನು ಹಾಗೂ ಮೈಕ್ರೋ ಬುಕ್ ಮತ್ತು ಮೈಕ್ರೋ ಝರಾಕ್ಸ್ಗಳ ಉಪಯೋಗವನ್ನು ನಿರ್ಬಂಧಿಸುವ ಕುರಿತು.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಸದರಿ ಪರೀಕ್ಷೆಯನ್ನು ಯಾವುದೇ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಪರೀಕ್ಷಾ ಮಂಡಳಿಯು ಎಲ್ಲಾ ರೀತಿಯ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುತ್ತಲಿದೆ.
ಪರೀಕ್ಷಾ ಅಕ್ರಮಗಳಾದ ಪರೀಕ್ಷಾ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು, ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲು ಪ್ರಯತ್ನಪಡುವುದು, ಈ ತರಹದ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಪ್ರಯತ್ನಿಸುವ ಮೂಲಕ ವಿದ್ಯಾರ್ಥಿ/ಪೋಷಕರಲ್ಲಿ ಗೊಂದಲವುಂಟುಮಾಡುವುದು ಮತ್ತು ಸಮಾಜದ ಸ್ವಾಸ್ತ್ರವನ್ನು ಹಾಳುಮಾಡುವುದು ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರ ಉದ್ದೇಶವಾಗಿರುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಲಾಖೆಯು ಅತ್ಯಂತ ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ.
ಇದರನ್ವಯ ಕಾನೂನು ಬಾಹಿರವಾಗಿ ಪರೀಕ್ಷಾ ಅಕ್ರಮಗಳಲ್ಲಿ ಪಾಲ್ಗೊಳ್ಳುವವರು ಮತ್ತು ಇದಕ್ಕೆ ಸಹಕರಿಸುವವರು / ಪ್ರಚೋದಿಸುವವರು ವಿದ್ಯಾರ್ಥಿಗಳಾಗಿರಲಿ / ಶಿಕ್ಷಕರಾಗಿರಲಿ / ಬಾಹ್ಯ ವ್ಯಕ್ತಿಗಳಾಗಿರಲಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಕಟ್ಟುನಿಟ್ಟಿನ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಪಾಲ್ಗೊಳ್ಳುವ ಸರ್ಕಾರಿ ಹಾಗೂ ಅನುದಾನಿತ/ಅನುದಾನರಹಿತ ಶಾಲೆಯ ಮತ್ತು ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರ ವಿರುದ್ಧ ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸುವಂತಹ ದಂಡನೆ ವಿಧಿಸಲು ಉಲ್ಲೇಖ(2)ರಂತೆ ಸರ್ಕಾರ ಈಗಾಗಲೇ ಆದೇಶಿಸಿದೆ.
ಅದಲ್ಲದೆ ಕರ್ನಾಟಕ ಶಿಕ್ಷಣ ಕಾಯ್ದೆ Karnataka Act No.18 of 2017 The Karnataka Education (Amendment) Act, 2017ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೊ ತೆಗೆಯುವುದು ಮತ್ತು ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ/ವಾಟ್ಸಾಪ್ ಮುಖಾಂತರ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿಗಳನ್ನು ಸರಬರಾಜು ಮಾಡುವುದು ಇನ್ನಿತರ ಯಾವುದೇ ಪರೀಕ್ಷಾ ಅವ್ಯವಹಾರದ ಅಪರಾಧಕೃತ್ಯದಲ್ಲಿ ಭಾಗಿಯಾದವರಿಗೆ 3 ರಿಂದ 5 ವರ್ಷ ಜೈಲು ಹಾಗೂ ಐದು ಲಕ್ಷದಂಡ ವಿಧಿಸುವ ಅವಕಾಶವಿರುತ್ತದೆ.
ಈ ಕುರಿತು ಕಲಬುರಗಿ ವಿಭಾಗದಲ್ಲಿ ಕಳೆದ ಸಾಲಿನಿಂದ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಹಲವಾರು ನವೀನ ಪ್ರಯೋಗಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಆಳವಡಿಕೆ ಹಾಗೂ ವೆಬ್ ಕಾಸ್ಟಿಂಗ್ ಮುಂತಾದ ಪ್ರಯೋಗಗಳ ಮೂಲಕ ಪರೀಕ್ಷಾ ಅಕ್ರಮಗಳನ್ನು ನಿಯಂತ್ರಣದಲ್ಲಿ ತರಲಾಗುತ್ತಿದೆ. ಕಲಬರಗಿ ವಿಭಾಗದಲ್ಲಿನ ಎಸ್.ಎಸ್.ಎಲ್.ಸಿ ಫಲಿತಾಂಶವು ರಾಜ್ಯದ ಇತರೆ ವಿಭಾಗಗಳು ಹಾಗೂ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕುಂಠಿತಗೊಂಡಿರುವುದು ಸರಿಯಷ್ಟೆ, ಕಾರಣ. ಪರೀಕ್ಷಾ ಆಕ್ರಮಗಳನ್ನು ತಡೆಗಟ್ಟಿ ಫಲಿತಾಂಶ ಸುಧಾರಣೆಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಚಟುವಟಿಕೆಗಳನ್ನು ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
SSLC ಪರೀಕ್ಷೆಗೆಂದು ಕಿರು ಪುಸ್ತಕಗಳನ್ನು ಹಾಗೂ ಮೈಕ್ರೋ ಬುಕ್ ಮತ್ತು ಮೈಕ್ರೋ ಝರಾಕ್ಷಗಳನ್ನು ವಿದ್ಯಾರ್ಥಿಗಳು, ಶಾಲೆಯಲ್ಲಿ ಬಳಸುವುದನ್ನು ಗಮನಿಸಲಾಗಿದೆ.
ಕಿರು ಪುಸ್ತಕಗಳ ಮುದ್ರಣ ಮಾಡುವುದು. ಮಾರಾಟ ಮಾಡುವುದು, ಖರೀದಿ ಮಾಡುವುದು ಹಾಗೂ ಬಳಕೆ ಮಾಡುವುದು, ಉಲ್ಲೇಖಿತ(1)ಹಾಗೂ (2)ರಂತೆ, ಕಾನೂನು ಬಾಹಿರವಾಗಿರುತ್ತದೆ. ಕಾರಣ, ಇಂತಹ ನಿಯಮ ಬಾಹಿರ ಕ್ರಮ ಅನುಸರಿಸಿದಲ್ಲಿ ಹಾಗೂ ಇಂತಹ ಪ್ರಸಂಗಗಳು ಕಂಡುಬಂದಲ್ಲಿ ಉಲ್ಲೇಖ(2)ರ ಸರ್ಕಾರದ ಆದೇಶದಂತೆ, ಸಂಬಂಧಿಸಿದ ಮುಖ್ಯಶಿಕ್ಷಕರು/ಶಿಕ್ಷಕರ ಮೇಲೆ ನಿಯಮಾನುಸಾರ ಸೂಕ್ತ ಶಿಸ್ತಿನ ಕ್ರಮ ಕಡ್ಡಾಯವಾಗಿ ಜರುಗಿಸಲಾಗುವುದು.
ಅದಲ್ಲದೆ ಉಲ್ಲೇಖ(03)ರ ಮಾನ್ಯ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರ ಸುತ್ತೋಲೆಯಂತೆ ಇಲಾಖೆಯಿಂದ ನೀಡಲಾದ ಪಠ್ಯ ಪುಸ್ತಕಗಳನ್ನೇ ಕಡ್ಡಾಯವಾಗಿ ಅನುಸರಿಸುವುದು. ಅಲ್ಲದೇ ಯಾವುದೇ ಇತರೆ ಪಠ್ಯ ಪುಸ್ತಕಗಳನ್ನು ಅನುಸರಿಸುವಂತಿಲ್ಲ ಎಂದು ತಿಳಿಸಲಾಗಿರುತ್ತದೆ.
ಆದ್ದರಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಅನ್ವಯಿಸುವಂತೆ 10ನೇ ತರಗತಿಗೆ ಹಾಗೂ SSLC ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಕಿರು ಪುಸ್ತಕಗಳನ್ನು ಹಾಗೂ ಮೈಕ್ರೋ ಝರಾಕ್ಷಗಳನ್ನು ಮಾರಾಟ ಮಾಡುವುದು, ಖರೀದಿ ಮಾಡುವುದು ಹಾಗೂ ಶಾಲಾ ಆವರಣದಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮೇಲ್ಕಂಡಂತೆ ಸೂಕ್ತ ಕ್ರಮವಹಿಸಿ ಸದರಿ ಆದೇಶವನ್ನು ಯಶಸ್ವಿಯಾಗಿ ಜಾರಿಗೊಳಿಸುವಂತೆ ವಿಭಾಗದ ಎಲ್ಲಾ ಉಪ ನಿರ್ದೇಶಕರು(ಆಡಳಿತ) ರವರುಗಳಿಗೆ ಈ ಮೂಲಕ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.ಈ ಕುರಿತು ಆದೇಶ ಹೊರಡಿಸಲಾಗಿದೆ.
ಇದನ್ನೂ ನೋಡಿ…..ಏಕಲವ್ಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ-2025