ಕರಡು ನಿಯಮ: ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರ ವರ್ಗಾವಣೆ) ನಿಯಮಗಳು, 2025

ಕರಡು ನಿಯಮ: ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರ ವರ್ಗಾವಣೆ) ನಿಯಮಗಳು, 2025ಕರಡು ನಿಯಮಗಳು

 

ಅಧಿಸೂಚನೆ

ಕರಡು ನಿಯಮ: ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978 (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ 3ನೇ ಪ್ರಕರಣದ (1)ನೇ ಉಪ-ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ, ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರ ವರ್ಗಾವಣೆ) ನಿಯಮಗಳು,2025 ಕರಡನ್ನು, ಸದರಿ ಕಾಯ್ದೆಯ 3ನೇ ಪ್ರಕರಣದ (2)ನೇ ಉಪ-ಪ್ರಕರಣದ ಎ-ಖಂಡವನ್ನು ಇದೇ ಕಾಯ್ದೆಯ 8ನೇ ಪ್ರಕರಣದೊಂದಿಗೆ ಓದಿಕೊಂಡು ಅದರಲ್ಲಿ ಆಗತ್ಯಪಡಿಸಿರುವಂತೆ ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಿದೆ.

ಮತ್ತು ಅದು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳ ತರುವಾಯ ಸದರಿ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿವಳಿಕೆ ನೀಡಲಾಗಿದೆ.

ಮೇಲೆ ನಿರ್ದಿಷ್ಟಪಡಿಸಿದ ಅವಧಿಯ ಮುಕ್ತಾಯಕ್ಕೆ ಮುಂಚೆ, ಸದರಿ ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ,ಆರ್ಥಿಕ ಇಲಾಖೆ, ವಿಧಾನಸೌಧ. ಬೆಂಗಳೂರು-01 ಇವರಿಗೆ ಕಳುಹಿಸಬಹುದು.

ಕರಡು ನಿಯಮಗಳು

1.ಶೀರ್ಷಿಕೆ ಮತ್ತು ಪ್ರಾರಂಭ :-(1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವೆಗಳ (ಅಬಕಾರಿ ಇಲಾಖೆ ಅಧಿಕಾರಿ ಮತ್ತು ನೌಕರರ ವರ್ಗಾವಣೆ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು, ಕರ್ನಾಟಕ ರಾಜ್ಯ ಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು,

2.ಪರಿಭಾಷೆಗಳು:-

(1) ಈ ನಿಯಮಗಳ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-

(ಎ) ‘ಕಾಯ್ದೆ’ ಎಂದರೆ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978(1990 ರ ಕರ್ನಾಟಕ ಅಧಿನಿಯಮ ಸಂಖ್ಯೆ 14).

(ಬಿ) ‘ಕಾರ್ಯನಿರ್ವಾಹಕ ಹುದ್ದೆ’ ಎಂದರೆ ಅಬಕಾರಿ ಅಪರ ಆಯುಕ್ತರ ಕಛೇರಿ ಕೇಂದ್ರಸ್ಥಾನ ಬೆಳಗಾವಿ, ಅಬಕಾರಿ ವಿಭಾಗ ಕಛೇರಿ, ಅಬಕಾರಿ ಜಿಲ್ಲಾ ಕಛೇರಿ, ಅಬಕಾರಿ ಉಪ ವಿಭಾಗ ಕಛೇರಿ,ಅಬಕಾರಿ ವಲಯ ಕಛೇರಿ ಮತ್ತು ಅಬಕಾರಿ ತನಿಖಾ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಎ ವೃಂದದ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಗ್ರೂಪ್-ಬಿ ವೃಂದದ ಅಬಕಾರಿ ಉಪ ಅಧೀಕ್ಷಕರು, ಗ್ರೂಪ್-ಸಿ ವೃಂದದ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಮುಖ್ಯ ಪೇದೆ ಮತ್ತು ಅಬಕಾರಿ ಪೇದೆಗಳು.

(ಸಿ) ‘ಕಾರ್ಯನಿರ್ವಾಹಕೇತರ ಹುದ್ದೆಗಳು’ ಎಂದರೆ ಅಬಕಾರಿ ಇಲಾಖೆಯ ಕೇಂದ್ರ ಕಛೇರಿ, ಡಿಸ್ಟಿಲರಿಗಳು, ಬ್ರಿವರಿಗಳು, ವೈನರಿ ಘಟಕಗಳು, ಅಬಕಾರಿ ಭದ್ರತಾ ಚೀಟಿ ವಿಭಾಗ, ಕರ್ನಾಟಕ ರಾಜ್ಯ ಪಾನೀಯ

ನಿಗಮ(ಕೆ.ಎಸ್.ಬಿ.ಸಿ.ಎಲ್)ದ ಡಿಪೋ ಮತ್ತು ಕೇಂದ್ರ ಕಛೇರಿಗಳಲ್ಲಿ ಕಾರ್ಯನಿರ್ಹಿಸುತ್ತಿರುವ ಗ್ರೂಪ್-ಎ ವೃಂದದ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಗ್ರೂಪ್-ಬಿ ವೃಂದದ ಅಬಕಾರಿ ಉಪ ಅಧೀಕ್ಷಕರು, ಗ್ರೂಪ್-ಸಿ ವೃಂದದ ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ನಿರೀಕ್ಷಕರು, ಅಬಕಾರಿ ಮುಖ್ಯ ಪೇದೆ ಮತ್ತು ಅಬಕಾರಿ ಪೇದೆಗಳು.

(ಡಿ) ‘ಜಿಲ್ಲೆ’ ಎಂದರೆ ಕಂದಾಯ ಜಿಲ್ಲೆ.

(ಇ) ‘ಕನಿಷ್ಠ ಸೇವಾವಧಿ’ ಎಂದರೆ, ಅಬಕಾರಿ ಇಲಾಖೆಯ ವಿವಿಧ ವೃಂದದ ಅಧಿಕಾರಿ ಅಥವಾ ನೌಕರರು ನಿಯೋಜಿಸಿದ ಹುದ್ದೆಯಲ್ಲಿ ಕೆಳಕಂಡಂತೆ ಕನಿಷ್ಠ ಸೇವಾ ಅವಧಿಯನ್ನು ಪೂರೈಸಿರತಕ್ಕದ್ದು.

(ಎಫ್) ‘ಕಲಂ’ ಎಂದರೆ ಕಾಯ್ದೆಯ ಕಲಂಗಳು.

(ಜಿ) ‘ಅಧಿಕಾರಿ ಅಥವಾ ನೌಕರರು’ ಎಂದರೆ ರಾಜ್ಯ ಅಬಕಾರಿ ಇಲಾಖೆಯ ಗ್ರೂಪ್-ಎ. ಗ್ರೂಪ್-ಬಿ ಮತ್ತು ಗ್ರೂಪ್-ಸಿ ವೃಂದದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ನೌಕರರುಗಳು.

(ಹೆಚ್) ‘ವರ್ಗಾವಣೆ’ ಎಂದರೆ ಒಂದೇ ಕಛೇರಿಯಲ್ಲಿನ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಕಾರ್ಯ ಬದಲಾವಣೆ ಮಾಡುವುದನ್ನು ಹೊರತುಪಡಿಸಿ ಅಧಿಕಾರಿ ಮತ್ತು ನೌಕರರುಗಳನ್ನು ಕಾರ್ಯನಿರ್ವಹಿಸುತ್ತಿರುವ ಒಂದು ಸ್ಥಳದ ಹುದ್ದೆಯಿಂದ ಅದೇ ವೃಂದದ ಮತ್ತೊಂದು ಸ್ಥಳದ ಹುದ್ದೆಗೆ ವರ್ಗಾಯಿಸುವುದು.

(ಐ) ‘ಸಕ್ಷಮ ಪ್ರಾಧಿಕಾರ’ ಎಂದರೆ ನಿಯಮ (03) ರಲ್ಲಿ ವ್ಯಾಖ್ಯಾನಿಸಿರುವಂತೆ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡಲು ಅಧಿಕಾರ ಹೊಂದಿರುವ ಪ್ರಾಧಿಕಾರ.

(2) ಈ ನಿಯಮಗಳಲ್ಲಿ ವ್ಯಾಖ್ಯಾನಿಸದ ಪದಗಳು ಮತ್ತು ಉಚ್ಚಾರಣೆಗಳು ಈ ಕಾಯ್ದೆಯಲ್ಲಿ ಸೂಚಿಸಿರುವ ಅರ್ಥವನ್ನೇ ಹೊಂದಿರುತ್ತವೆ.

ಸಕ್ಷಮ ಪ್ರಾಧಿಕಾರ:- ಕೆಳಕಂಡ ಪಟ್ಟಿಯ ಕಾಲಂ 03 ರಲ್ಲಿ ನಮೂದಿಸಿರುವ ಪ್ರಾಧಿಕಾರವು ಕಾಲಂ 02 ರಲ್ಲಿ ನಮೂದಿಸಿರುವ ಅಧಿಕಾರಿ ಮತ್ತು ನೌಕರರ ವರ್ಗಾವಣೆಗೆ ಸಕ್ಷಮ ಪ್ರಾಧಿಕಾರವಾಗಿರುತ್ತದೆ.

ವರ್ಗಾವಣೆ ವಿಧಾನ:-

ನಿಯಮ 3 ರಲ್ಲಿರುವ ಕೋಷ್ಟಕದ ಕ್ರಮ ಸಂಖ್ಯೆ 6.7.8 ಮತ್ತು 9 ರಲ್ಲಿನ ಹುದ್ದೆಗಳ ಅಧಿಕಾರಿ ಮತ್ತು ನೌಕರರ ವರ್ಗಾವಣೆಗಳನ್ನು ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್ ಮುಖಾಂತರ ಮಾಡತಕ್ಕದ್ದು.

5.ವರ್ಗಾವಣೆಯ ಆದ್ಯತೆ:- (1) ಯಾವುದೇ ಅಧಿಕಾರಿ ಅಥವಾ ನೌಕರರು ವರ್ಗಾವಣೆಯನ್ನು ತಮ್ಮ ಹಕ್ಕು ಎಂದು ಸಾಧಿಸತಕ್ಕದ್ದಲ್ಲ.

(2)ಯಾವುದೇ ಅಧಿಕಾರಿ ಅಥವಾ ನೌಕರರುಗಳನ್ನು ಕಾರ್ಯನಿರ್ವಾಹಕ ಹುದ್ದೆ ಅಥವಾ ಕಾರ್ಯನಿರ್ವಾಹಕೇತರ ಹುದ್ದೆಯಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸದ ಹೊರತು ಸಾಮಾನ್ಯವಾಗಿ ಪರಸ್ಪರ ವರ್ಗಾಯಿಸತಕ್ಕದ್ದಲ್ಲ.

ಪರಂತು,ಕೆಳಕಂಡ ಪ್ರಕರಣಗಳಲ್ಲಿ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸಕಾರಣಗಳನ್ನು ದಾಖಲಿಸಿ ಸಕ್ಷಮ ಪ್ರಾಧಿಕಾರವು ಅವಧಿ ಪೂರ್ವ ವರ್ಗಾವಣೆ ಮಾಡಬಹುದು.

(i) ವಿಶೇಷ ಪರಿಣಿತಿ ಅಥವಾ ಜ್ಞಾನ ಹೊಂದಿರುವ ಅಧಿಕಾರಿ ಅಥವಾ ನೌಕರರುಗಳನ್ನು ಅವಶ್ಯಕತೆ ಕಂಡುಬಂದಲ್ಲಿ, ಕೇಂದ್ರ ಕಚೇರಿಗೆ ವರ್ಗಾಯಿಸಲು; ಅಥವಾ

(ii) ಕ್ರಿಮಿನಲ್ ಮೊಕದ್ದಮೆ ಅಥವಾ ಲೋಕಾಯುಕ್ತ ಪ್ರಕರಣ ಅಥವಾ ವಿಚಾರಣೆ ಬಾಕಿ ಇರುವ ಅಥವಾ ಹೂಡಲು ಉದ್ದೇಶಿಸಲಾದ ಅಧಿಕಾರಿ ಮತ್ತು ನೌಕರರನ್ನು ಮೂಲ ಹುದ್ದೆಯಿಂದ ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾಯಿಸುವುದು; ಅಥವಾ

(ii) ದಂಡನಾವಧಿಯಲ್ಲಿರುವ ಅಧಿಕಾರಿ ಮತ್ತು ನೌಕರರನ್ನು ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾಯಿಸುವುದು.

(3) ಅಧಿಕಾರಿ ಅಥವಾ ನೌಕರರನ್ನು ಕೆಳಕಂಡ ಕಾರಣಗಳ ಆದ್ಯತೆಯನುಸಾರ ವರ್ಗಾಯಿಸುವುದು.

(i) ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸಿರುವ ಅಧಿಕಾರಿ ಅಥವಾ ನೌಕರರುಗಳು.

(ii) ಕಾರ್ಯನಿರ್ವಾಹಕೇತರ ಹುದ್ದೆಯಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸಿರುವ ಅಧಿಕಾರಿ ಅಥವಾ ನೌಕರರುಗಳು.

(iii) ಗಂಭೀರ ಆರೋಗ್ಯ ಸಮಸ್ಯೆ ಇರುವ ಅಧಿಕಾರಿ ಅಥವಾ ನೌಕರರುಗಳನ್ನು ವೈದ್ಯಕೀಯ ಮಂಡಳಿಯ ದೃಢೀಕರಣ ಪತ್ರದ ಮೇರೆಗೆ ವರ್ಗಾಯಿಸುವುದು.

(iv) ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ವರ್ಗಾಯಿಸುವುದು.

(v) ಅಂಗವೈಕಲ್ಯದ ಕಾರಣದಿಂದ ವರ್ಗಾಯಿಸಲು ಅಂಗವಿಕಲರ ಹಕ್ಕುಗಳ ಕಾಯ್ದೆ, 2016(ಕೇಂದ್ರ ಕಾಯ್ದೆ, 2016ರ 49 ರಂತೆ)ರನ್ವಯದ ಪ್ರಮಾಣ ಪತ್ರದೊಂದಿಗೆ ವರ್ಗಾಯಿಸುವುದು.

ಪರಂತು. ಮೇಲಿನ (iii) (iv) ಮತ್ತು (v) ಆದ್ಯತೆಗಳನ್ನು ಉಪಯೋಗಿಸಿಕೊಳ್ಳುವವರನ್ನು ಕಾರ್ಯನಿರ್ವಾಹಕೇತರ(Non-executive) ಹುದ್ದೆಗಳಿಗೆ ಮಾತ್ರ ವರ್ಗಾಯಿಸುವುದು.

(4) ಉಪ ನಿಯಮ(1) (2) ಮತ್ತು (3)ರಲ್ಲಿನ ಪ್ರಕರಣಗಳನ್ನು ಹೊರತುಪಡಿಸಿ ಸಕ್ಷಮ ಪ್ರಾಧಿಕಾರವು ಲಿಖಿತ ಕಾರಣಗಳನ್ನು ದಾಖಲಿಸಿ ವಿವೇಚನಾಧಿಕಾರದ ಮೇರೆಗೆ ಆಯಾ ವೃಂದಬಲದ ಶೇ.1 ರಷ್ಟನ್ನು ಮೀರದಂತೆ ವರ್ಗಾಯಿಸುವುದು.

ಪರಂತು, ವಿವೇಚನಾಧಿಕಾರದ ಮೇರೆಗೆ ವರ್ಗಾಯಿಸುವ ಸಂದರ್ಭದಲ್ಲಿ ಅಧಿಕಾರಿ ಅಥವಾ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಡಿ ಶಿಸ್ತುಕ್ರಮ ಜರುಗಿಸುವಂತಹ ಮತ್ತು ದಂಡನೆ ವಿಧಿಸುವ ಪ್ರಕರಣಗಳಿರುವುದಿಲ್ಲ ಎಂಬುದನ್ನು ಸಹ ಖಚಿತಪಡಿಸಿಕೊಳ್ಳುವುದು.

6.ವರ್ಗಾವಣೆಗೆ ಮಾರ್ಗಸೂಚಿಗಳು ಮತ್ತು ನಿರ್ಬಂಧಗಳು:-

(1) ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸಿದ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು

ಮತ್ತು ಅಬಕಾರಿ ಉಪ ನಿರೀಕ್ಷಕರುಗಳನ್ನು ಮುಂದಿನ ವರ್ಗಾವಣೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾಯಿಸತಕ್ಕದ್ದಲ್ಲ.

(2) ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರುಗಳನ್ನು ಅವರ ಸೇವಾ ವಹಿಯಲ್ಲಿ ನಮೂದಿಸಿರುವಂತೆ ಸ್ವಂತ ಜಿಲ್ಲೆಯಲ್ಲಿನ ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾಯಿಸತಕ್ಕದ್ದಲ್ಲ.

(3) ಇಲಾಖಾ ವಿಚಾರಣೆ ಅಥವಾ ಕ್ರಿಮಿನಲ್ ಮೊಕದ್ದಮೆ ಅಥವಾ ಲೋಕಾಯುಕ್ತ ಪ್ರಕರಣ ಬಾಕಿ ಇರುವ ಅಧಿಕಾರಿ ಅಥವಾ ನೌಕರರನ್ನು ಕಡ್ಡಾಯವಾಗಿ ಕಾರ್ಯನಿರ್ವಾಹಕೇತರ ಹುದ್ದೆಗೆ ಮಾತ್ರ ವರ್ಗಾಯಿಸುವುದು.

(4) ಅಮಾನತ್ತು ಅವಧಿಯಿಂದ ತೆರವುಗೊಂಡು ಸೇವೆಗೆ ಪುನರ್ ಸ್ಥಾಪಿಸಲ್ಪಡುವ ಯಾವುದೇ ಅಧಿಕಾರಿ ಅಥವಾ ನೌಕರನನ್ನು ಕಡ್ಡಾಯವಾಗಿ ಕಾರ್ಯನಿರ್ವಾಹಕೇತರ ಹುದ್ದೆಗೆ ಮಾತ್ರ ಸ್ಥಳನಿಯುಕ್ತಿಗೊಳಿಸುವುದು.

(5) ಕಳೆದ 05 ವರ್ಷಗಳಲ್ಲಿ ಬೆಂಗಳೂರು ನಗರ / ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧೀಕ್ಷಕರು, ಅಬಕಾರಿ ಉಪ ಅಧೀಕ್ಷಕರು, ಅಬಕಾರಿ ನಿರೀಕ್ಷಕರು ಮತ್ತು ಅಬಕಾರಿ ಉಪ ನಿರೀಕ್ಷಕರುಗಳನ್ನು ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ವರ್ಗಾಯಿಸುವುದು.

(6) ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮಗಳಡಿ ದಂಡನಾವಧಿಯಲ್ಲಿರುವ ಅಧಿಕಾರಿ ಅಥವಾ ನೌಕರರನ್ನು ಕಾರ್ಯನಿರ್ವಾಹಕೇತರ ಹುದ್ದೆಗೆ ಮಾತ್ರ ವರ್ಗಾಯಿಸುವುದು.

(7) ಸತತ ಎರಡು ಅವಧಿಯವರೆಗೆ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅಬಕಾರಿ

ಉಪ ಅಧೀಕ್ಷಕರು ಮತ್ತು ಅಬಕಾರಿ ನಿರೀಕ್ಷಕರುಗಳನ್ನು ಮೂರನೇ ಅವಧಿಗೆ ಕಡ್ಡಾಯವಾಗಿ ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾಯಿಸುವುದು.

(8) ಅಬಕಾರಿ ನಿರೀಕ್ಷಕರನ್ನು ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾಯಿಸುವಾಗ ಪ್ರತಿ ಬಾರಿ ವಲಯ ಕಛೇರಿಗಳಿಗೆ ವರ್ಗಾಯಿಸದೇ, ಒಂದು ಬಾರಿ ವಲಯ ಕಛೇರಿಯಲ್ಲಿ ಅಬಕಾರಿ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಮುಂದಿನ ವರ್ಗಾವಣೆಯಲ್ಲಿ ಇಲಾಖೆಯಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಅಬಕಾರಿ ಉಪ ವಿಭಾಗ ಕಛೇರಿ, ಅಬಕಾರಿ ಜಿಲ್ಲಾ ಕಛೇರಿ, ಅಬಕಾರಿ ವಿಭಾಗ ಕಛೇರಿ, ಅಬಕಾರಿ ತನಿಖಾ ಠಾಣೆಗಳಿಗೆ ವರ್ಗಾಯಿಸುವುದು.

(9) ವಯೋನಿವೃತ್ತಿಗೆ ಎರಡು ವರ್ಷಗಳಿಗಿಂತ ಕಡಿಮೆ ಸೇವಾವಧಿ ಹೊಂದಿರುವ ಅಧಿಕಾರಿ ಅಥವಾ ನೌಕರರನ್ನು ಅವರ ಕೋರಿಕೆಯ ಮೇರೆಗೆ ಸ್ವಂತ ಜಿಲ್ಲೆಯಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾಯಿಸಬಹುದು.

(10)ಅಬಕಾರಿ ಇಲಾಖೆಯಲ್ಲಿನ ಲಿಪಿಕ ನೌಕರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ,ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕಾಲಕಾಲಕ್ಕೆ ಅಧಿಸೂಚಿಸಲಾದ ವರ್ಗಾವಣೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ.

(11) ವರ್ಗಾವಣೆ ಮಾಡುವಾಗ ಯಾವುದೇ ಅಧಿಕಾರಿ ಅಥವಾ ನೌಕರರುಗಳು ಕಡ್ಡಾಯ ನಿರೀಕ್ಷಣಾ ಅವಧಿಯಲ್ಲಿರದಂತೆ ನೋಡಿಕೊಳ್ಳುವುದು.

7.ದುರ್ನಡತೆ:-

(1) ಯಾವುದೇ ಅಧಿಕಾರಿ ಅಥವಾ ನೌಕರನು ನಿರ್ದಿಷ್ಟ ಹುದ್ದೆಗೆ ಅಥವಾ ಸ್ಥಳಕ್ಕೆ ವರ್ಗಾಯಿಸಬೇಕೆಂದು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರಾಜಕೀಯ ಒತ್ತಡ ತಂದಲ್ಲಿ ಈ ಕ್ರಮವನ್ನು ಘೋರ ದುರ್ನಡತೆ ಎಂದು ನಿರ್ಧರಿಸಿ, ಅಂತಹ ಅಧಿಕಾರಿ ಅಥವಾ ನೌಕರರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ.ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರನ್ವಯ ಶಿಸ್ತು ಕ್ರಮ ತೆಗೆದುಕೊಳ್ಳುವುದು.

(2) ವರ್ಗಾವಣೆ ಹೊಂದಿದ ಅಧಿಕಾರಿ ಅಥವಾ ನೌಕರರು ನಿಯಮಾನುಸಾರ ಅರ್ಹವಾಗುವ ಸೇರ್ಪಡೆ ಕಾಲಾವಕಾಶವನ್ನು ಉಪಯೋಗಿಸಿಕೊಂಡ ನಂತರವೂ ವರ್ಗಾಯಿಸಿದ ಹುದ್ದೆಗೆ ಕಾರ್ಯವರದಿ ಮಾಡಿಕೊಳ್ಳದಿದ್ದಲ್ಲಿ ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರಡಿ ಶಿಸ್ತು ಕ್ರಮ ತೆಗೆದುಕೊಳ್ಳುವುದು.

(3) ವರ್ಗಾವಣೆಗೊಂಡ ಅಧಿಕಾರಿ ಅಥವಾ ನೌಕರರು ವರ್ಗಾವಣೆಯಾದ ಹುದ್ದೆಗೆ ವರದಿ ಮಾಡಿಕೊಳ್ಳದೆ, ವೈದ್ಯಕೀಯ ಕಾರಣವಿಲ್ಲದೇ ರಜೆ ಸಲ್ಲಿಸಿದಲ್ಲಿ ಅಂತಹ ಅಧಿಕಾರಿ ಅಥವಾ ನೌಕರರ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ.

8.ವಿಕಲಚೇತನ ಅಧಿಕಾರಿ ಮತ್ತು ನೌಕರರಿಗೆ ಸಂಬಂಧಿಸಿದಂತೆ ಕೆಲವು ವಿನಾಯಿತಿಗಳು:

(1) ವಿಕಲಚೇತನ ಅಧಿಕಾರಿ ಅಥವಾ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡುವುದು.

(2) ವಿಕಲಚೇತನ ಅಧಿಕಾರಿ ಅಥವಾ ನೌಕರರು ನೇಮಕಾತಿ ಹೊಂದಿದ ನಂತರ ಹಾಗೂ ಪದೋನ್ನತಿಯ ನಂತರದಲ್ಲಿ ಅವರುಗಳನ್ನು ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸುವುದು.

(3) ಸೇವಾನಿರತ ಅಧಿಕಾರಿ ಅಥವಾ ನೌಕರರು ತಮ್ಮ ಸೇವಾವಧಿಯಲ್ಲಿರುವಾಗ ವಿಕಲಚೇತನರಾದಲ್ಲಿ ಸಕ್ಷಮ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರವನ್ನು ಹಾಜರುಪಡಿಸುವ ಷರತ್ತಿಗೊಳಪಟ್ಟು ಅವರನ್ನು ಹತ್ತಿರದ ಸ್ಥಳಕ್ಕೆ ವರ್ಗಾಯಿಸುವುದು.

9.ಕಲ್ಯಾಣ ಕರ್ನಾಟಕ ಹುದ್ದೆಗಳು:- ಕಲ್ಯಾಣ ಕರ್ನಾಟಕ ಪ್ರದೇಶದ ಕಛೇರಿಗಳಲ್ಲಿನ ವಿವಿಧ ವೃಂದದ ಖಾಲಿ ಇರುವ ಹುದ್ದೆಗಳಿಗೆದುರಾಗಿ ನೇಮಕಾತಿ ಹೊಂದಿರುವ ಅಧಿಕಾರಿ ಅಥವಾ ನೌಕರರನ್ನು ಭಾರತ ಸಂವಿಧಾನದ ಕಲಂ 371(ಜೆ) ರನ್ವಯ ಅಬಕಾರಿ ಕೇಂದ್ರ ಕಛೇರಿಯನ್ನು ಹೊರತುಪಡಿಸಿ ಕಲ್ಯಾಣ ಕರ್ನಾಟಕ ಪ್ರದೇಶದಿಂದ ಹೊರಗೆ ವರ್ಗಾವಣೆ ಮಾಡಬಾರದು.

 

CLICK HERE TO DOWNLOAD DRAFT NOTIFICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!