Scholarship News : SC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಸ್ಕಾಲರ್‌ಶಿಪ್ ಆದಾಯ ಮಿತಿ ₹4.5 ಲಕ್ಷ| ಸಂಸದೀಯ ಸಮಿತಿ ಶಿಫಾರಸು ಅಂಗೀಕಾರ
Scholarship News : SC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಸ್ಕಾಲರ್‌ಶಿಪ್ ಆದಾಯ ಮಿತಿ ₹4.5 ಲಕ್ಷ: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಪಡೆಯಲು ಆದಾಯ ಮಿತಿಯನ್ನು ₹4.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೊಸ ನಿಯಮಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ದೇಶದ ಲಕ್ಷಾಂತರ ಪರಿಶಿಷ್ಟ ಜಾತಿಯ (ಎಸ್‌ಸಿ) ವಿದ್ಯಾರ್ಥಿಗಳ ಶಿಕ್ಷಣದ ಕನಸಿಗೆ ಆಸರೆಯಾಗಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ’ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಣಯಿಸಿದೆ. ಬದಲಾಗುತ್ತಿರುವ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ, ಹೆಚ್ಚಿನ ವಿದ್ಯಾರ್ಥಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಸಚಿವಾಲಯವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಇದುವರೆಗೂ ಈ ವಿದ್ಯಾರ್ಥಿವೇತನ ಪಡೆಯಲು ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ ಗಿಂತ ಕಡಿಮೆ ಇರಬೇಕಿತ್ತು. ಆದರೆ, ಈಗ ಈ ಮಿತಿಯನ್ನು 4.5 ಲಕ್ಷ ರೂ.ಗೆ ಏರಿಸಲಾಗುವುದು.
ಈ ಬದಲಾವಣೆಯಿಂದಾಗಿ ಇದುವರೆಗೆ ಆದಾಯದ ಕಾರಣಕ್ಕಾಗಿ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದ ಲಕ್ಷಾಂತರ ಮಧ್ಯಮ ವರ್ಗದ ಎಸ್‌ಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯುವುದು ಸುಲಭವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಸರ್ಕಾರವು ನೀಡುವ ವಾರ್ಷಿಕ ಬೋಧನಾ ಶುಲ್ಕದ ಮರುಪಾವತಿಗೆ 4.5 ಲಕ್ಷ ರೂ. ಗರಿಷ್ಠ ಮಿತಿ ವಿಧಿಸಲಾಗಿದೆ. ಈ ಹಿಂದೆ ಕೆಲವು ಖಾಸಗಿ ವೈದ್ಯಕೀಯ ಅಥವಾ ತಾಂತ್ರಿಕ ಕಾಲೇಜುಗಳಲ್ಲಿ ಶುಲ್ಕ ಎಷ್ಟೇ ಇದ್ದರೂ ಸರ್ಕಾರ ಪಾವತಿಸುತ್ತಿತ್ತು. ಆದರೆ, ಇನ್ನು ಮುಂದೆ, ಯಾವುದೇ ಕೋರ್ಸ್‌ನ ಶುಲ್ಕ 4.5 ಲಕ್ಷ ರೂ. ಗಿಂತ ಹೆಚ್ಚಿದ್ದಲ್ಲಿ, ಸರ್ಕಾರ ಕೇವಲ 4.5 ಲಕ್ಷ ರೂ.ಗಳನ್ನು ಮಾತ್ರ ಭರಿಸಲಿದೆ. ಉಳಿದ ಮೊತ್ತವನ್ನು ವಿದ್ಯಾರ್ಥಿಯೇ ಭರಿಸಬೇಕಾಗುತ್ತದೆ.
ಈ ಪರಿಷ್ಕೃತ ನಿಯಮಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದ್ದು, ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸದಂತೆ ತಡೆಯುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಮುಖ್ಯ ಅಂಶಗಳು:
ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಅಧಿಕೃತ · ‘ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್’ (ಎನ್ ಎಸ್‌ಪಿ) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇತ್ತೀಚಿನ ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರಗಳನ್ನು (ದೃಢೀಕೃತವಾಗಿರಬೇಕು) ಲಗತ್ತಿಸಬೇಕು ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು.
ಆದಾಯ ಮಿತಿ ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ, ಶುಲ್ಕದ ಮೇಲೆ ಮಿತಿ ಹೇರಿರುವುದು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮೇಲೆ ಹೊರೆ ಉಂಟುಮಾಡಬಹುದು. ಒಟ್ಟಾರೆಯಾಗಿ, ಈ ಯೋಜನೆಯು ಹೆಚ್ಚು ಜನರನ್ನು ತಲುಪುವ ಉದ್ದೇಶವನ್ನು ಹೊಂದಿದೆ.
ನೇರ ನಿಧಿ ಹಂಚಿಕೆ:
ವಿದ್ಯಾರ್ಥಿವೇತನದ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರವು ಶೇ.60 ಮತ್ತು ರಾಜ್ಯ ಸರ್ಕಾರವು ಶೇ.40 ಪಾಲನ್ನು ಭರಿಸಲಿವೆ. ಹಣವು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ‘ನೇರ ನಗದು ವರ್ಗಾವಣೆ’ ಮೂಲಕ ಜಮೆಯಾಗಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಪಾರದರ್ಶಕತೆ ಹೆಚ್ಚಲಿದೆ.
ಯೋಜನೆಯಲ್ಲಿ ಬದಲಾವಣೆ ಏನೇನು?
▪️ಆದಾಯ ಮಿತಿ 4.5 ಲಕ್ಷ ರೂ.ಗೆ ಏರಿಕೆ
▪️ಅಂಗವಿಕಲರ ಭತ್ಯೆ ಏರಿಕೆ
▪️ಬೋಧನಾ ಶುಲ್ಕ, ಕೋರ್ಸ್‌ಗೆ ಶುಲ್ಕಕ್ಕೆ ಮಿತಿ
▪️ಮಾಹಿತಿ ಹಾಗೂ ಜಾಗೃತಿ ವೆಚ್ಚದ ಸೇರ್ಪಡೆ
▪️ರಾಜ್ಯಗಳಿಗೆ ಅನುದಾನ ಹಂಚಿಕೆ ಸ್ವರೂಪ ಬದಲು
▪️ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಶಿಫಾರಸು

ಪಿ.ಸಿ. ಮೋಹನ್ ನೇತೃತ್ವದ ಸಮಿತಿ:
ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಂಸದೀಯ ಸ್ಥಾಯಿ ಸಮಿತಿ ಈ ನಿಟ್ಟಿನಲ್ಲಿ ನೀಡಿದ್ದ ಶಿಫಾರಸುಗಳನ್ನು ಸಚಿವಾಲಯವು ಅಂಗೀಕರಿಸಿದೆ. ಈ ಸಮಿತಿಗೆ ಬೆಂಗಳೂರಿನ ಸಂಸದ ಪಿ.ಸಿ. ಮೋಹನ್ ನೇತೃತ್ವ ವಹಿಸಿದ್ದರು.