Delegation of Financial Powers for release of funds from April-2025 to June – 2025 for the financial year 2025-26.
Delegation of Financial Powers for release of funds from April-2025 to June – 2025 for the financial year 2025-26.
ಪ್ರಸ್ತಾವನೆ:-
ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳ ಮೂಲಕ ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಅಧಿಕಾರ ಪ್ರತ್ಯಾಯೋಜಿಸಲಾಗುತ್ತಿದೆ.
2025-26ನೇ ಸಾಲಿಗೆ ಪ್ರತ್ಯಾಯೋಜಿಸಿರುವ ಈ ಆರ್ಥಿಕ ಅಧಿಕಾರಗಳ ಆದೇಶವು. 2025-26ನೇ ಸಾಲಿನ ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚಗಳನ್ನು ಬಿಡುಗಡೆ ಮಾಡುವುದಕ್ಕೆ ಅನ್ವಯವಾಗುತ್ತದೆ. ಈ ಆದೇಶದಲ್ಲಿರುವ ಅಧಿಕಾರ ಪ್ರತ್ಯಾಯೋಜನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಚಲಾಯಿಸತಕ್ಕದ್ದೇ ಹೊರತು ಪುನರ್ ಪ್ರತ್ಯಾಯೋಜನೆ ಮಾಡತಕ್ಕದ್ದಲ್ಲ.
ಸರ್ಕಾರದ ಆದೇಶ ಸಂ: ಎಫ್‌ಡಿ 1 ಟಿಎಫ್‌ಪಿ: 2025, ಬೆಂಗಳೂರು, ದಿನಾಂಕ:02.04.2025
ಭಾಗ-I ಆಡಳಿತಾತ್ಮಕ ಅನುಮೋದನೆ:
1. ಒಂದು ಆರ್ಥಿಕ ವರ್ಷದಲ್ಲಿ ಮುಂದುವರಿದ ಅಥವಾ ಹೊಸ ಯೋಜನೆಗಳೆಂದು ಅನುಮೋದನೆಗೊಂಡಿರುವ ಯೋಜನೆಗಳಿಗೆ ಮಾತ್ರ ಹಣವನ್ನು ಆಡಳಿತ ಇಲಾಖೆಗಳು ಬಿಡುಗಡೆಗೊಳಿಸಬಹುದಾಗಿದೆ. ಮೇಲೆ (2) ಮತ್ತು (3) ರಲ್ಲಿ ಉಲ್ಲೇಖಿಸಲಾದ ಆದೇಶ ಮತ್ತು ಅರೆಸರ್ಕಾರಿ ಪತ್ರಗಳಲ್ಲಿ ಮುಂದುವರೆದ ಯೋಜನೆಗಳ ಮತ್ತು ಹೊಸ ಯೋಜನೆಗಳ ಅನುಮೋದನೆಗೆ ಮತ್ತು ಉಸ್ತುವಾರಿಗೆ ಯೋಜನಾ ಇಲಾಖೆಯು ನೀಡಿರುವ ಮಾರ್ಗಸೂಚಿಗಳನ್ನು ಹಾಗೂ 2025-26 ಸಾಲಿನಲ್ಲಿ ಯೋಜನಾ ಇಲಾಖೆಯು ಈ ಬಗ್ಗೆ ಮಾರ್ಗದರ್ಶನ/ಸೂಚನೆಗಳನ್ನು ನೀಡಿದಲ್ಲಿ ಅದನ್ನೂ ಸಹ ಓದಿಕೊಳ್ಳಲು ತಿಳಿಸಿದೆ.
2. ಆಡಳಿತಾತ್ಮಕ ಅನುಮೋದನೆಯ ಆದೇಶವನ್ನು ಹಣ ಬಿಡುಗಡೆಯ ಆದೇಶವೆಂದು ಪರಿಭಾವಿಸತಕ್ಕದ್ದಲ್ಲ. ಅನುಮೋದನೆಯಾಗಿರುವ ವಿವಿಧ ಯೋಜನೆಗಳಿಗೆ ಅಧಿಕಾರ ಪ್ರತ್ಯಾಯೋಜನೆಯನ್ವಯ ಹಣ ಬಿಡುಗಡೆ ಮಾಡುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಬೇಕಾಗುತ್ತದೆ. ಯಾವುದೇ ಯೋಜನೆಗೆ ಹಣ ಬಿಡುಗಡೆ ಮಾಡುವ ಮೊದಲು ಯೋಜನೆಯ ಮಾರ್ಗಸೂಚಿ, ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ ಪ್ರಕ್ರಿಯೆ ಮುಂತಾದ ಆಡಳಿತಾತ್ಮಕ ಪರಿಶೀಲನೆಗಳನ್ನು ಆಡಳಿತ ಇಲಾಖೆಯು ಪರಿಶೀಲಿಸತಕ್ಕದ್ದು.
3. ಕಾಮಗಾರಿ ಅಂದಾಜುಗಳ ಅನುಮೋದನೆಗೆ ರೂ.10 ಕೋಟಿಗಳವರೆಗೆ ಮತ್ತು ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ರೂ.10ಕೋಟಿಗಳವರೆಗೆ ಆರ್ಥಿಕ ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ ಆಡಳಿತಾತ್ಮಕ ಅನುಮೋದನೆಯನ್ನು (ಕೆ.ಟಿ.ಪಿ.ಪಿ ನಿಯಮಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಯವ್ಯಯದ ಲಭ್ಯತೆಗೊಳಪಟ್ಟು) ನೀಡಬಹುದಾಗಿದೆ.
4. ಬ್ಯಾಂಕ್/ಪಿಡಿ ಖಾತೆಗಳಿಗೆ ಹಣ ಬಿಡುಗಡೆ ಮಾಡುವ ಮೊದಲು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆಯೇ ಹಾಗೂ ಆಡಳಿತ ಇಲಾಖೆಯಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
ಭಾಗ- II ಹಣ ಬಿಡುಗಡೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ನಿರ್ದಿಷ್ಟವಾಗಿ ಅನುಮೋದನೆ ಪಡೆಯಬೇಕಾಗಿರುವ ಪ್ರಕರಣಗಳು:
5. ಈ ಆದೇಶದ ಅನುಬಂಧ-1 ರಲ್ಲಿ ವರ್ಗೀಕರಿಸಲಾಗಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಇನ್ನುಳಿದ ಯೋಜನೆಗಳಿಗೆ, ಕೆಳಗೆ ವಿವರಿಸಿದಂತೆ ಅಧಿಕಾರ ಪ್ರತ್ಯಾಯೋಜನೆ ಅನ್ವಯವಾಗುತ್ತದೆ.
6. ಎಲ್ಲಾ ಹೊಸ ಯೋಜನೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಕಡ್ಡಾಯವಾಗಿ ಪಡೆಯತಕ್ಕದ್ದು.
7. ಎಲ್ಲಾ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಅನುದಾನದಡಿಯಲ್ಲಿ (VPP) ಒದಗಿಸಿರುವ ಅನುದಾನವನ್ನು ಬಿಡುಗಡೆ ಮಾಡಲು ಅಧಿಕಾರ ಪ್ರತ್ಯಾಯೋಜಿಸಿರುವುದಿಲ್ಲ.
ಷೇರು ಬಂಡವಾಳ ಮತ್ತು ಸಾಲಗಳು:
8. ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮಗಳು, 1977ರಲ್ಲಿ ವಿಧಿಸಿರುವ ನಿಯಮಗಳನ್ನು ಮತ್ತು ಆರ್ಥಿಕ ಇಲಾಖೆಯು ಹೊರಡಿಸಿರುವ ಸರ್ಕಾರದ ಆದೇಶ ಸಂ:ಎಫ್‌ಡಿ: 1 ಬಿಎಲ್‌ಎ 2013, ದಿ:26.11.2013ರಲ್ಲಿನ ಸೂಚನೆಗಳನ್ನು ಪಾಲಿಸುವ ಷರತ್ತಿಗೊಳಪಟ್ಟು ಹಾಗೂ ಆಡಳಿತ ಇಲಾಖೆಗಳು ಇದುವರೆಗೆ ಬಿಡುಗಡೆಯಾಗಿರುವ ಷೇರು ಬಂಡವಾಳವು ಅಧಿಕೃತ ಷೇರು ಬಂಡವಾಳದ ಮಿತಿಯನ್ನು ಮೀರದಿರುವುದನ್ನು ಹಾಗೂ ಷೇರು ಬಂಡವಾಳದ ರಾಜ್ಯದ ಪಾಲು ಷೇರುದಾರರ ಒಪ್ಪಂದದ ಪ್ರಕಾರ ಇರುವುದನ್ನು ಆಡಳಿತ ಇಲಾಖೆಗಳು ಖಚಿತಪಡಿಸಿಕೊಂಡು, ಆಯವ್ಯಯ ಅನುದಾನ ಲಭ್ಯವಿದ್ದಲ್ಲಿ, ರೂ.10 ಕೋಟಿಯೊಳಗಿನ ಷೇರು ಬಂಡವಾಳವನ್ನು ಆರ್ಥಿಕ
ಇಲಾಖೆಯ ಅನುಮೋದನೆ ಇದೆಯೆಂದು ಭಾವಿಸಿ. ಆಡಳಿತ ಇಲಾಖೆಗಳು ಬಿಡುಗಡೆ ಮಾಡಬಹುದಾಗಿದೆ. ಒಂದು ವರ್ಷದಲ್ಲಿ ರೂ.10 ಕೋಟಿಗಿಂತ ಹೆಚ್ಚಿನ ಷೇರು ಬಂಡವಾಳವನ್ನು ಹಾಗೂ ಎಷ್ಟೇ ಮೊತ್ತದ ಸಾಲವನ್ನಾಗಲೀ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಪೂರ್ವಾನುಮೋದನೆ ಪಡೆಯಬೇಕಾಗುತ್ತದೆ.
ಭಾಗ-III ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಡಳಿತ ಇಲಾಖೆಗಳು ಹಣ ಬಿಡುಗಡೆ ಮಾಡಬಹುದಾದ ಪ್ರಕರಣಗಳು:
9. ಅನುಬಂಧ-2 ರಲ್ಲಿ ಪಟ್ಟಿ ಮಾಡಲಾದ ಬಾಬುಗಳಿಗೆ ಸಂಬಂಧಿಸಿದಂತೆ. ಆಯವ್ಯಯದಲ್ಲಿ ಒದಗಿಸಿರುವ ಮೊತ್ತದವರೆಗೆ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಹಣವನ್ನು ಬಿಡುಗಡೆ ಮಾಡಬಹುದಾಗಿದೆ. ಅನುಬಂಧ-2 ರಲ್ಲಿ ಪಟ್ಟಿ ಮಾಡಿರದ ಲೆಕ್ಕ ಶೀರ್ಷಿಕೆ/ಯೋಜನೆಗಳಿಗೆ ಈ ಆದೇಶದ ಕಂಡಿಕೆ 12 ರಿಂದ ಮುಂದಿನ ಕಂಡಿಕೆಗಳನ್ನು ಸಂದರ್ಭಾನುಸಾರ ಅನ್ವಯಿಸಿ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಉದ್ದೇಶ ಲೆ.ಶೀ. 021-ವೈದ್ಯಕೀಯ ವೆಚ್ಚ ರಡಿ Group DDO ಗಳಿಗೆ ಸಮಾನವಾಗಿ ಬಿಡುಗಡೆ ಮಾಡದೇ, ಅಧೀನ ಕಛೇರಿ (DDO) ಗಳ ಅವಶ್ಯಕತೆಯನುಸಾರ ಬಿಡುಗಡೆ ಮಾಡಲು ತಿಳಿಸಿದೆ.
10. ಬಾಕಿ ಕಾಮಗಾರಿಗಳ ಮೊತ್ತ: ಸಿವಿಲ್ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಂಡವಾಳ ಲೆ.ಶೀ. ಗಳಡಿ 2025-26ನೇ ಸಾಲಿಗೆ ಒದಗಿಸಿರುವ ಆಯವ್ಯಯವನ್ನು, ಈ ಆದೇಶದಲ್ಲಿ ತಿಳಿಸಿದ ವಿಧಾನಗಳನ್ನು ಮತ್ತು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 127 ವೆಚ್ಚ-12/2023. ದಿ:16.05.2023 ರಲ್ಲಿನ ಸೂಚನೆಗಳನ್ನು ಅನುಸರಿಸಿ ಬಿಡುಗಡೆ ಮಾಡುವಂತೆ ತಿಳಿಸಿದೆ.
ರೂ.10 ಕೋಟಿಗಳಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ ರಾಜ್ಯ ಯೋಜನೆಗಳು:
11. ರೂ.10 ಕೋಟಿಗಿಂತ ಕಡಿಮೆ ಆಯವ್ಯಯ ಅವಕಾಶವಿರುವ, ಮುಂದುವರಿದ ರಾಜ್ಯ ಯೋಜನೆಗಳಿಗೆ/ಕಾರ್ಯಕ್ರಮಗಳಿಗೆ/ವೇತನೇತರ ವೆಚ್ಚಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಯವ್ಯಯದಲ್ಲಿ ಒದಗಿಸಿರುವ ಮೊತ್ತವನ್ನು ಎರಡು ಕಂತಿನಲ್ಲಿ ಬಿಡುಗಡೆ ಮಾಡಬಹುದು.
12. ಪಿ.ಡಿ ಖಾತೆ ಅಥವಾ ಬ್ಯಾಂಕ್ ಖಾತೆಯಲ್ಲಿಡಲು ಆರ್ಥಿಕ ಇಲಾಖೆಯು ಸಹಮತಿಸಿರುವ ಯೋಜನೆಗಳಿಗೆ ಬ್ಯಾಂಕ್ ಖಾತೆ ಅಥವಾ ಪಿ.ಡಿ. ಖಾತೆಯಲ್ಲಿರುವ ಆರಂಭಿಕ ಶಿಲ್ಕಿನಲ್ಲಿ ಶೇ. 75ರಷ್ಟು ಮೊತ್ತವನ್ನು ವೆಚ್ಚ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಮೇಲೆ ತಿಳಿಸಿದಂತೆ ಬಿಡುಗಡೆ ಮಾಡಬೇಕಾಗುತ್ತದೆ.
ಭಾಗ-IV ರೂ.10 ಕೋಟಿ ಮತ್ತು ಮೇಲ್ಪಟ್ಟು ಆಯವ್ಯಯ ಅವಕಾಶವಿರುವ ರಾಜ್ಯ ಯೋಜನೆಗಳು:
ಮೊದಲ ತ್ರೈಮಾಸಿಕ ಕಂತಿನಲ್ಲಿ ಮಾಸಿಕ ಹಣ ಬಿಡುಗಡೆಗಳು:
13. ಈ ಕೆಳಗೆ ಸೂಚಿಸಲಾದ ಯೋಜನೆಗಳಿಗೆ ಮಾಡಲಾದ ಆಯವ್ಯಯ ಅವಕಾಶದ ಹನ್ನೆರಡನೇ ಒಂದು ಭಾಗದಷ್ಟು (1/12) ಮೊತ್ತವನ್ನು ಪ್ರತಿ ತಿಂಗಳು ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಆರ್ಥಿಕ ವರ್ಷ 2025-26ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆಡಳಿತ ಇಲಾಖೆಗಳು ಬಿಡುಗಡೆ ಮಾಡಬಹುದಾಗಿದೆ.
ಅನುಬಂಧ-1ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಲೋಕೋಪಯೋಗಿ ಇಲಾಖೆಯ ಎಲ್ಲಾ ಯೋಜನೆಗಳು
ಅನುಬಂಧ-1ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಭಾರಿ, ಮಧ್ಯಮ ಮತ್ತು ಸಣ್ಣ ನೀರಾವರಿ ಯೋಜನೆಗಳು
ಆದರೆ, ಮೇಲೆ (ಎ) ಮತ್ತು (ಬಿ) ರಲ್ಲಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಡಲಾದ ಎಸ್‌ಸಿಎಸ್‌ಪಿ-ಟಿಎಸ್‌ಪಿ ಆಯವ್ಯಯ ಅವಕಾಶದ 1/12 ಭಾಗವನ್ನು ಸಹ ಬಿಡುಗಡೆ ಮಾಡಬಹುದಾಗಿದೆ.
ಗ್ಯಾರಂಟಿ ಯೋಜನೆಗಳಡಿಯಲ್ಲಿ ಹಣ ಬಿಡುಗಡೆ:
14. ಸರ್ಕಾರವು ಗ್ಯಾರಂಟಿ ಯೋಜನೆಗಳಾದ ‘ಯುವನಿಧಿ’, ‘ಅನ್ನಭಾಗ್ಯ’, ಗೃಹ ಲಕ್ಷ್ಮೀ’ ಮತ್ತು “ಶಕ್ತಿ” ಯೋಜನೆಗಳ ಅಡಿಯಲ್ಲಿ ಬಿಡುಗಡೆಗಳನ್ನು ಮಾಡಲು ಆರ್ಥಿಕ ಇಲಾಖೆಯಿಂದ ಪೂರ್ವಾನುಮೋದನೆ ಪಡೆಯತಕ್ಕದ್ದು.
ಮೊದಲ ಕಂತಿನ ಹಣ ಬಿಡುಗಡೆ: (ಏಪ್ರಿಲ್ 2025 ರಿಂದ ಜೂನ್ 2025 ರವರೆಗೆ)
15. ಈ ಆದೇಶದ ಅನುಬಂಧ-1 ಹಾಗೂ ಕಂಡಿಕೆ-13 ರಲ್ಲಿ ಸೇರಿರದ ಎಲ್ಲಾ ಯೋಜನೆಗಳಿಗೆ, ಆಯವ್ಯಯದ ನಾಲ್ಕನೇ ಒಂದು (1/4) ಭಾಗದಷ್ಟು ಮೊತ್ತವನ್ನು ಮೊದಲ ಕಂತಿನಲ್ಲಿ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಹಣ ಬಿಡುಗಡೆಯನ್ನು ಮಾಡಬಹುದು.
16. ಬ್ಯಾಂಕ್/ಪಿ.ಡಿ.ಖಾತೆ: ಆರ್ಥಿಕ ಇಲಾಖೆಯು ಯಾವುದೇ ಅನುಷ್ಠಾನಗೊಳಿಸುವ ಏಜೆನ್ಸಿಗಳ ಪಿ.ಡಿ.ಖಾತೆ ಅಥವಾ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲು ಸಹಮತಿಸಿದ್ದಲ್ಲಿ ವೈಯಕ್ತಿಕ ಠೇವಣಿ ಖಾತೆಯಲ್ಲಿನ ಪ್ರಾರಂಭಿಕ ಮೊತ್ತವೂ ಸೇರಿದಂತೆ ಹಿಂದೆ ಬಿಡುಗಡೆ ಮಾಡಲಾದ ಮೊತ್ತದ ಶೇ.75 ರಷ್ಟನ್ನು ಉಪಯೋಗಿಸಿಕೊಂಡಿದ್ದಲ್ಲಿ ಮಾತ್ರ ಮೊದಲನೇ ತ್ರೈಮಾಸಿಕ ಕಂತನ್ನು ಬಿಡುಗಡೆ ಮಾಡುವುದು. ಇಲಾಖೆಗಳ ಅಂತರೀಕ ಆರ್ಥಿಕ ಸಲಹೆಗಾರರು ಈ ಅಂಶವನ್ನು ಪರಿಶೀಲಿಸಿ ಬಿಡುಗಡೆ ಮಾಡುವುದು.
17. NTT Module ನಲ್ಲಿ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಲ್ಲಿರುವ ಮೊತ್ತಗಳ ವಿವರಗಳನ್ನು ಪರಿಶೀಲಿಸಿ, ಯಾವುದೇ ಬಿಡುಗಡೆಗಳನ್ನು ಮಾಡುವ ಮೊದಲು ಅನುಷ್ಠಾನಗೊಳಿಸುವ ಏಜೆನ್ಸಿಗಳ (ನಿಗಮ/ಮಂಡಳಿಗಳು/ಇಲಾಖಾಧಿಕಾರಿಗಳು) ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡತಕ್ಕದ್ದು.
ಸಾಲ ಸೇವೆಗಳು:
18. ಆಯವ್ಯಯದ ಹಣದ ಲಭ್ಯತೆಗೆ ಒಳಪಟ್ಟು ಸಾಲಗಳ ನಿಬಂಧನೆಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಸಾಲ ಪಾವತಿಗಾಗಿ ಆರ್ಥಿಕ ಇಲಾಖೆಯ ಅನುಮತಿ ಇದೆಯೆಂದು ಭಾವಿಸಿ ಆಯವ್ಯಯ ಅವಕಾಶದವರೆಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ನೇರವಾಗಿ ಪಾವತಿಗಳನ್ನು ಮಾಡಬಹುದಾಗಿದೆ. ಯಾವುದೇ ಸಂದರ್ಭದಲ್ಲಿಯೂ ಈ ಮೊತ್ತವನ್ನು ಸೆಳೆದು ಬ್ಯಾಂಕ್ ಖಾತೆಯಲ್ಲಿ ಇಡತಕ್ಕದ್ದಲ್ಲ.
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣ ಬಿಡುಗಡೆ:
ರಾಜ್ಯ ಯೋಜನೆಗಳು:
19. ರಾಜ್ಯ ಯೋಜನೆಗಳಿಗೆ ಸಂಬಂಧಿಸಿದಂತೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲು ಪ್ರಸ್ತುತ ಆರ್ಥಿಕ ಇಲಾಖೆಯು ಅನುಸರಿಸುತ್ತಿರುವ ಪದ್ಧತಿಯೇ ಮುಂದುವರಿಯುತ್ತದೆ.
ಜಿಲ್ಲಾ ವಲಯಕ್ಕೆ ಸಂಬಂಧಿಸಿದ ಕೇಂದ್ರ ಪುರಸ್ಕೃತ ಯೋಜನೆಗಳು:
20. ಅನುಬಂಧ-3 ರಲ್ಲಿ ಪಟ್ಟಿ ಮಾಡಲಾದ ಜಿಲ್ಲಾ ವಲಯದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, ಕಂಡಿಕೆ-26 ರಿಂದ ತಿಳಿಸಿರುವ ವಿಧಾನಗಳನ್ನನುಸರಿಸಿ ಆಡಳಿತ ಇಲಾಖೆಗಳೇ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವುದು.
21.ಜಿಲ್ಲಾ ಪಂಚಾಯತ್ ಲಿಂಕ್ ಪುಸ್ತಕದಲ್ಲಿ ಕೆಲವು ಯೋಜನೆಗಳಿಗೆ ಒಟ್ಟಾರೆಯಾಗಿ ಉದ್ದೇಶಿತ ಲೆಕ್ಕ ಶೀರ್ಷಿಕೆ 300 ರಡಿಯಲ್ಲಿ ಆಯವ್ಯಯ ಅವಕಾಶ ಮಾಡಲಾಗಿದೆ. ಅನುಬಂಧ-1-ಬಿ ರಡಿ ಹೇಳಲಾದ 300-lumpsum ಯೋಜನೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿರುತ್ತದೆ. ಉದ್ದೇಶಿತ ಲೆ.ಶೀ.300 ರಡಿ ಒದಗಿಸಿದ ಇತರ ಯೋಜನೆಗಳಿಗೆ ಆಡಳಿತ ಇಲಾಖೆಯೇ ಹಣ ಬಿಡುಗಡೆ ಮಾಡಬಹುದಾಗಿದೆ. ಜಿಲ್ಲಾ ವಲಯ ಯೋಜನೆಗಳಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಆಡಳಿತ ಇಲಾಖೆಗಳು ಆಯಾ ಯೋಜನೆಗಳಡಿ ಮಾಡುವ ಬಿಡುಗಡೆಗೆ ಅನುಗುಣವಾಗಿ SCSP ಹಾಗೂ TSP ಗೆ ಸಂಬಂಧಪಟ್ಟಂತೆ ಸಹಾ ಬಿಡುಗಡೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು.
ನಗರ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ:
22. ಅನುಬಂಧ-1 ರಲ್ಲಿನ ಯೋಜನೆಗಳನ್ನು ಹೊರತುಪಡಿಸಿ ಯೋಜನೆಗಳನ್ನು ಜಾರಿಗೊಳಿಸುವ ಏಜೆನ್ಸಿಗಳ ಖಾತೆಯಲ್ಲಿ ಅಥವಾ ಪಿ.ಡಿ. ಖಾತೆಯಲ್ಲಿರುವ ಆರಂಭಿಕ ಶಿಲ್ಕೂ ಸೇರಿದಂತೆ ಈವರೆಗೆ ಬಿಡುಗಡೆ ಮಾಡಿರುವ ಹಣದಲ್ಲಿ ಶೇ.75ರಷ್ಟು ಹಣವನ್ನು ಉಪಯೋಗಿಸಿಕೊಂಡಿದ್ದಲ್ಲಿ ಮಾತ್ರ ಆಯವ್ಯಯ ಅವಕಾಶದ ನಾಲ್ಕನೇ ಒಂದು (1/4) ಭಾಗವನ್ನು ಮೊದಲ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬಹುದು.
23.SCSP ಮತ್ತು TSP ಇವುಗಳಿಗೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವಾಗ, ನಗರಾಭಿವೃದ್ಧಿ ಇಲಾಖೆಯು ಲಿಂಕ್ ಡಾಕ್ಯುಮೆಂಟ್‌ನಲ್ಲಿ ಮಾಡಿರುವ ಹಂಚಿಕೆಗಳನ್ನು ಹಣ ಬಿಡುಗಡೆ ಆದೇಶದಲ್ಲಿ ನಮೂದಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಬೇಕಾಗುತ್ತದೆ.
ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ.ಹಣದ ಬಿಡುಗಡೆ:
24.ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ಅಡಿಯಲ್ಲಿ ಒದಗಿಸಿರುವ ಆಯವ್ಯಯ ಅಂದಾಜಿನ ನಾಲ್ಕನೇ ಒಂದು ಭಾಗವನ್ನು (1/4) ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲು ಈ ಕೆಳಕಂಡಂತೆ ಆಡಳಿತ ಇಲಾಖೆಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
(ಅ) ಕಂಡಿಕೆ 13 (ಎ) & (ಬಿ) ರಲ್ಲಿ ತಿಳಿಸಿದ ಯೋಜನೆಗಳಿಗೆ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ. ರಡಿ ಅನುದಾನವನ್ನ, ಏಪ್ರಿಲ್-2025 ರಿಂದ ಜೂನ್-2025ರವರೆಗೆ ಆಯವ್ಯಯ ಅಂದಾಜಿನ ಹನ್ನೆರಡನೇ ಒಂದು ಭಾಗವನ್ನು (1/12) ಪ್ರತಿ ತಿಂಗಳು ಬಿಡುಗಡೆ ಮಾಡುವುದು.
(ಆ) ಕಂಡಿಕೆ 13 (ಎ) & (ಬಿ) ಹೊರತುಪಡಿಸಿ ಇತರೆ ಯೋಜನೆಗಳಿಗೆ ಆಯವ್ಯಯ ಅಂದಾಜಿನ ನಾಲ್ಕನೇ ಒಂದು ಭಾಗವನ್ನು (1/4) ಮೊದಲ ತ್ರೈಮಾಸಿಕ ಕಂತಾಗಿ ಬಿಡುಗಡೆ ಮಾಡುವುದು.
(ಇ) ಫಲಾನುಭವಿ ಆಧಾರಿತ ಯೋಜನೆಗಳು: ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದಂತೆ ಪ.ಜಾ.ಉ.ಯೋ/ಗಿ.ಉ.ಯೋ ಬಿಡುಗಡೆಗಳನ್ನು. ಆಯವ್ಯಯದಲ್ಲಿ ಹಂಚಿಕೆ ಮಾಡಿರುವ ಅನುಪಾತದ ಆಧಾರದ ಮೇಲೆ ಬಿಡುಗಡೆ ಮಾಡುವುದು.
ವೆಚ್ಚ ಹಿಂಬರಿಸಬಹುದಾದ ಯೋಜನೆಗಳು
ನಬಾರ್ಡ್ – ಆರ್.ಐ.ಡಿ.ಎಫ್ ಯೋಜನೆಗಳು / ಬಾಹ್ಯ ನೆರವಿನ ಯೋಜನೆಗಳು
25. ಅನುಬಂಧ-1 ರಲ್ಲಿ ಪಟ್ಟಿ ಮಾಡಲಾದ ಯೋಜನೆಗಳನ್ನು ಹೊರತುಪಡಿಸಿ, ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಆಯವ್ಯಯದಲ್ಲಿ ಒದಗಿಸಿರುವ ಮೊತ್ತದ 1/4 ಭಾಗದಷ್ಟು ಮೊತ್ತವನ್ನು ಮೊದಲ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬಹುದಾಗಿದೆ. ಈ ರೀತಿ ಬಿಡುಗಡೆ ಮಾಡುವಾಗ ಪ್ರಾರಂಭಿಕ ಶಿಲ್ಕೂ ಸೇರಿದಂತೆ ಹಿಂದಿನ ಬಿಡುಗಡೆಗಳ ಕನಿಷ್ಠ ಶೇ.75 ರಷ್ಟು ವೆಚ್ಚವಾಗಿರುವುದನ್ನು ಹಾಗೂ ಅದಕ್ಕೆ ಸಂಬಂಧಿಸಿದಂತೆ ವೆಚ್ಚ ಮರುಪಾವತಿ ಕೋರಿ ಸಂಬಂಧಿಸಿದ ಸಂಸ್ಥೆಗೆ/ಭಾರತ ಸರ್ಕಾರಕ್ಕೆ ಸಲ್ಲಿಸುವ ಕ್ಲೀಮಿನ ಅಂತರ ಒಂದು ತಿಂಗಳಿಗಿಂತ ಹೆಚ್ಚಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಈ ಕುರಿತು ಹೊರಡಿಸಲಾಗುವ ಸರ್ಕಾರದ ಆದೇಶಗಳಲ್ಲಿ ಮೇಲಿನ ಅಂಶಗಳು ಸೇರಿರತಕ್ಕದ್ದು.
ಕೇಂದ್ರದ ನೆರವಿನ ರಾಜ್ಯ ಕಾರ್ಯಕ್ರಮಗಳು ಮತ್ತು ಇತರೆ ಕೇಂದ್ರ ಪುರಸ್ಕೃತ ಯೋಜನೆಗಳು:
26. ಭಾರತ ಸರ್ಕಾರದಿಂದ ಕೇಂದ್ರದ ಪಾಲಿನ ಹಣ ಬಿಡುಗಡೆ ಮಾಡಲು ಮಂಜೂರಾತಿ ಆದೇಶ ಹೊರಡಿಸಿದ ನಂತರ ರಾಜ್ಯದ ಸಂಚಿತ ನಿಧಿಗೆ ಜಮೆಯಾಗುವ ಮೊದಲು ಕೇಂದ್ರ ಮತ್ತು ರಾಜ್ಯದ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕಾದಲ್ಲಿ, ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯ ವಿಶೇಷಾಧಿಕಾರಿ (ಎಫ್.ಆರ್.ಸಿ. ಮತ್ತು ಸಿ.ಸಿ.) ಯವರಿಗೆ ಕಳುಹಿಸತಕ್ಕದ್ದು. ಭಾರತ ಸರ್ಕಾರದಿಂದ ಅನುದಾನ ಬಿಡುಗಡೆ ಆದೇಶ ಮತ್ತು ಆಯವ್ಯಯ ಅನುದಾನದ ಲಭ್ಯತೆಯ ವಿವರಗಳನ್ನು ಪ್ರಸ್ತಾವನೆಯು ಒಳಗೊಂಡಿರಲೇಬೇಕು.
27.ಕೇಂದ್ರದಿಂದ ಸ್ವೀಕರಿಸಲಾದ ಮೊತ್ತವನ್ನು 30 ದಿನಗಳೊಳಗೆ SNA ಖಾತೆಗೆ ವರ್ಗಾಯಿಸಬೇಕಾಗಿರುವುದರಿಂದ ಆಡಳಿತ ಇಲಾಖೆಗಳು ಜಮಾ ದೃಢೀಕರಣ ಪತ್ರವನ್ನು (Credit Confirmation Slip) ಸ್ವೀಕರಿಸಿದ ತಕ್ಷಣ ಆಯವ್ಯಯ ಲಭ್ಯತೆಯಿದ್ದಲ್ಲಿ ರಾಜ್ಯದ ಪಾಲಿನ ಅನುದಾನ ಸೇರಿಸಿ ಯೋಜನೆಯ ಷರತ್ತು ಮತ್ತು ಮಾರ್ಗಸೂಚಿಗಳ ಪ್ರಕಾರ SNA ಖಾತೆಗೆ ವರ್ಗಾಯಿಸುವುದು. ಈ ರೀತಿ ಬಿಡುಗಡೆ ಮಾಡಲು ಅನುದಾನದ ಕೊರತೆಯಾದಲ್ಲಿ ಹೆಚ್ಚುವರಿ ಅನುದಾನ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದು. ಆಡಳಿತ ಇಲಾಖೆಗಳು Credit Confirmation Slip ಸ್ವೀಕೃತವಾಗದೇ ಯಾವುದೇ ಕೇಂದ್ರ ಮತ್ತು ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವಂತಿಲ್ಲ.
30 ದಿನಗಳೊಳಗೆ SNA ಖಾತೆಗೆ ವರ್ಗಾಯಿಸದಿದ್ದಲ್ಲಿ, ಕೇಂದ್ರ ಸರ್ಕಾರವು ದಂಡವನ್ನು ವಿಧಿಸುವುದರಿಂದ ಸಂಬಂಧಿಸಿದ ಆಡಳಿತ ಇಲಾಖೆಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಹಾಗೂ ದಂಡ ಪಾವತಿಯ ಮೊತ್ತವನ್ನು ಇಲಾಖೆಯ ಆಯವ್ಯಯ ಹಂಚಿಕೆಯಿಂದ ಕಡಿತಗೊಳಿಸಲಾಗುತ್ತದೆ.
28.2023-24 ಸಾಲಿನಿಂದ, SNA-SPARSH ಅಡಿಯಲ್ಲಿ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲು ಭಾರತ ಸರ್ಕಾರವು ಹೊಸ ವಿಧಾನವನ್ನು ರೂಪಿಸಿರುತ್ತದೆ. ಅದರಂತೆ ಕೇಂದ್ರ ಸರ್ಕಾರವು ಯಾವುದೇ ಹೊಸ ಕೇಂದ್ರ ಪುರಸ್ಕೃತ ಯೋಜನೆಗಳನ್ನು SNA-SPARSH ವ್ಯವಸ್ಥೆಯಡಿ ತರಲು ಸೂಚನೆಗಳನ್ನು ನೀಡಿದಾಗ, ಆಯಾ ಆಡಳಿತ ಇಲಾಖೆಯು ಸ್ಟೀಮ್‌ಗಳ ಆನ್‌ಬೋರ್ಡಿಂಗ್ ಮತ್ತು ಲೆಕ್ಕ ಶೀರ್ಷಿಕೆಗಳ ಮ್ಯಾಪಿಂಗ್ ಬಗ್ಗೆ ಸಹಾಯಕ್ಕಾಗಿ ಆರ್ಥಿಕ ಇಲಾಖೆಯ ಗಣಕಕೋಶ ಶಾಖೆಗೆ ಮೂಲ (Mother Sanction) ಮಂಜೂರಾತಿ ಪ್ರತಿಯೊಂದಿಗೆ ಕಳುಹಿಸಬೇಕು.
ವೇತನ ಅನುದಾನ ಹೊಂದಿರುವ ಕೇಂದ್ರ ಪುರಸ್ಕೃತ ಯೋಜನೆಗಳು:
29. ಕೆಲವೊಂದು ಕೇಂದ್ರ ಪುರಸ್ಕೃತ ಯೋಜನೆಗಳಡಿ ಭರಿಸುವ ವೇತನ ವೆಚ್ಚಗಳನ್ನು ರಾಜ್ಯ ಸರ್ಕಾರದಿಂದ ಖಜಾನೆ ಮೂಲಕ ಮುಂಚಿತವಾಗಿ ಪ್ರತ್ಯೇಕ ಲೆಕ್ಕ ಶೀರ್ಷಿಕೆಗಳಡಿ ಭರಿಸಲಾಗುತ್ತದೆ. ಖಜಾನೆ ಮೂಲಕ ಈ ವೇತನ ಲೆಕ್ಕ ಶೀರ್ಷಿಕೆಗಳಡಿ ಭರಿಸಲಾಗುವ ಒಟ್ಟು ವೆಚ್ಚಗಳನ್ನು SNA ಬ್ಯಾಂಕ್ ಖಾತೆಗಳಿಂದ ರಾಜ್ಯ ಸರ್ಕಾರದ ಸಂಚಿತ ನಿಧಿಗೆ ಕೂಡಲೇ ಮರುಪಾವತಿ ಮಾಡಬೇಕಾಗುತ್ತದೆ. SNA ಖಾತೆಗೆ ವರ್ಗಾಯಿಸಲಾದ ವೇತನಾನುದಾನದ ಮೊತ್ತವನ್ನು ಯಾವುದೇ ಇತರೆ ಕಾರ್ಯಕ್ರಮಕ್ಕೆ ಅಥವಾ ಯಾವುದೇ ವೆಚ್ಚಗಳಿಗೆ ಉಪಯೋಗಿಸುವಂತಿಲ್ಲ.
ಕೇಂದ್ರ ಹಣಕಾಸು ಆಯೋಗ ಅನುದಾನಗಳು:
30. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವ 15ನೇ ಹಣಕಾಸು ಆಯೋಗದ ಅನುದಾನಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಮೂಲಭೂತ ಅನುದಾನ ಮತ್ತು ಸಾಮಾನ್ಯ ಕಾರ್ಯಕ್ಷಮತೆ ಅನುದಾನಗಳಿಗೆ ಯಾವುದೇ ಕ್ರಿಯಾ ಯೋಜನೆಯ ಅನುಮೋದನೆ ಅಗತ್ಯವಿರುವುದಿಲ್ಲ ಮತ್ತು ಅನುದಾನ ಸ್ವೀಕೃತಿಯಾದ 10 ದಿನಗಳೊಳಗೆ ಈ ಮೊತ್ತವನ್ನು ಬಿಡುಗಡೆ ಮಾಡತಕ್ಕದ್ದು.
ಭಾಗ-V ಸಾಮಾನ್ಯ ಸೂಚನೆಗಳು
ವೈಯಕ್ತಿಕ ಠೇವಣಿ ಖಾತೆ/ಬ್ಯಾಂಕ್ ಖಾತೆ:
31. ಆರ್ಥಿಕ ಇಲಾಖೆಯ ನಿರ್ದಿಷ್ಟ ಅನುಮೋದನೆ ಪಡೆಯದಿದ್ದಲ್ಲಿ, ಯಾವುದೇ ಮೊತ್ತಗಳನ್ನು ಬ್ಯಾಂಕ್ ಖಾತೆ ಅಥವಾ ವೈಯಕ್ತಿಕ ಠೇವಣಿ ಖಾತೆಗೆ (ಪಿ.ಡಿ. ಖಾತೆ) ಜಮೆ ಮಾಡುವಂತಿಲ್ಲ. ಆದರೆ ಯಾವುದೇ ಯೋಜನೆಯ ಭೂ ಸ್ವಾಧೀನ ಪರಿಹಾರಕ್ಕೆ ಸಂಬಂದಿಸಿದಂತೆ ಬಿಡುಗಡೆಯಾದ ಅನುದಾನವನ್ನು ಹಾಗೂ ರಾಷ್ಟ್ರೀಯ/ರಾಜ್ಯ ವಿಪತ್ತು ಪರಿಹಾರ ನಿಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ / ಉಪವಿಭಾಗಾಧಿಕಾರಿಗಳ ಪಿ.ಡಿ. ಖಾತೆಗೆ ಜಮಾ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸುವುದು. ಹಣ ಬಿಡುಗಡೆ ಆದೇಶವು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರತಕ್ಕದ್ದು, ಕೆಳಕಂಡ ಅಂಶಗಳನ್ನು ಒಳಗೊಂಡಿರದ ಆದೇಶವನ್ನು ಖಜಾನೆಯು ಅಂಗೀಕರಿಸತಕ್ಕದ್ದಲ್ಲ.
ಆರಂಭಿಕ ಶಿಲ್ಕು
ಇತ್ತೀಚಿನ ಸರ್ಕಾರಿ ಆದೇಶದಲ್ಲಿ ಮಾಡಿದ ಬಿಡುಗಡೆಗಳು
▪️ಲಭ್ಯವಿರುವ ಒಟ್ಟು ಮೊತ್ತ
▪️ಆಗಿರುವ ವೆಚ್ಚ
▪️ಲಭ್ಯವಿರುವ ಮೊತ್ತಕ್ಕೆ ಶೇಕಡಾವಾರು ವೆಚ್ಚ
32. ಖಜಾನೆ ಠೇವಣಿ ಖಾತೆ ಮೂಲಕ ವ್ಯವಹರಿಸುತ್ತಿರುವ ಪ.ಜಾ/ಪ.ಪಂ/ಹಿಂವಕ/ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಅಭಿವೃದ್ಧಿ ನಿಗಮಗಳ ಠೇವಣಿ ಖಾತೆಗಳಿಗೆ ಹಣವನ್ನು ಆರ್ಥಿಕ ಇಲಾಖೆಯ ಅನುಮತಿ ಇದೆ ಎಂದು ಭಾವಿಸಿ ಆಯವ್ಯಯ ಅವಕಾಶದ 1/4 ಭಾಗವನ್ನು ಮೊದಲ ತ್ರೈಮಾಸಿಕ ಕಂತಿನಲ್ಲಿ ಬಿಡುಗಡೆ ಮಾಡಬಹುದು.
ಬ್ಯಾಂಕ್ ಖಾತೆಗಳು:
33. (ಎ) ಕೆಲವು ಪ್ರಕರಣಗಳಲ್ಲಿ ಆರ್ಥಿಕ ಇಲಾಖೆಯು ಯೋಜನೆಗಳಿಗೆ ಒದಗಿಸಿದ ಮೊತ್ತವನ್ನು ಸೆಳೆದು ಬ್ಯಾಂಕ್ ಖಾತೆಯಲ್ಲಿಟ್ಟು ಬಳಸಲು ಸಹಮತಿ ನೀಡಿರುತ್ತದೆ. ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ಬ್ಯಾಂಕ್ ಖಾತೆ/ಪಿ.ಡಿ ಖಾತೆಯಲ್ಲಿ ಇರಿಸಿಕೊಂಡಿರುವ ಮೊತ್ತವನ್ನು ಇಲಾಖೆಗಳು ದಿ:30.06.2025 ರೊಳಗೆ ಬಳಕೆ ಮಾಡತಕ್ಕದ್ದು. ನಂತರ ಸದರಿ ಪಿ.ಡಿ/ಬ್ಯಾಂಕ್ ಖಾತೆಯಲ್ಲಿ ಉಳಿದಿರುವ ಬಳಕೆಯಾಗದ ಮೊತ್ತವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡುವುದು. ಈ ಬಗ್ಗೆ ಆಡಳಿತ ಇಲಾಖೆಗಳು ಖಚಿತಪಡಿಸಿಕೊಂಡು ಆರ್ಥಿಕ ಇಲಾಖೆಗೆ ವರದಿ ನೀಡಲು ತಿಳಿಸಿದೆ.
(ಬಿ) ಆರ್ಥಿಕ ಇಲಾಖೆಯ ಅನುಮತಿಯಿಲ್ಲದೆ ಮತ್ತು ಆಡಳಿತ ಇಲಾಖೆಯಿಂದ ಸರ್ಕಾರದ ಆದೇಶವಿಲ್ಲದೇ ತೆರೆಯಲಾಗಿರುವ ಖಾತೆಗಳ ಬಗ್ಗೆ ಆಡಳಿತ ಇಲಾಖೆಯ ಸುತ್ತೋಲೆ ಸಂಖ್ಯೆ: ಆಇ 51 ಟಿಎಆರ್ 2024, ದಿ:19.09.2024ರನ್ವಯ ಕ್ರಮ ತೆಗೆದುಕೊಂಡು ವರದಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸತಕ್ಕದ್ದು.
34.ಪಿ.ಡಿ ಖಾತೆಯಿಂದ ಆರ್ಥಿಕ ಇಲಾಖೆಯ ಅನುಮತಿಯಿಲ್ಲದೆ ಸಂಸ್ಥೆಯ ಯಾವುದೇ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಂತಿಲ್ಲ. ಖಜಾನೆಗೆ ಬಿಲ್ಲು ಸಲ್ಲಿಸುವ ಮೂಲಕ ಪಿ.ಡಿ. ಖಾತೆಯಿಂದಲೇ ವೆಚ್ಚ ಭರಿಸಬೇಕಾಗುತ್ತದೆ.
35. ಅನುಷ್ಠಾನ ಸಂಸ್ಥೆಯ/ ಅಧಿಕಾರಿಯ ಬ್ಯಾಂಕ್ ಖಾತೆ ಅಥವಾ ವೈಯಕ್ತಿಕ ಠೇವಣಿ ಖಾತೆಗೆ ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಣವನ್ನು ಜಮೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಪಡೆದಿದ್ದರೂ ಸಹ, ಅದನ್ನು ಈ ಹಣಕಾಸು ಪ್ರತ್ಯಾಯೋಜನೆಯ ಅಧಿಕಾರವನ್ನು ಚಲಾಯಿಸುವುದರಿಂದ ವಿನಾಯಿತಿ ಎಂದು ಪರಿಭಾವಿಸುವಂತಿಲ್ಲ.
36. ಆರ್ಥಿಕ ಇಲಾಖೆಯು ಇಲಾಖಾಧಿಕಾರಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯಲ್ಲಿನ ವ್ಯವಹಾರಗಳನ್ನು ಖಜಾನೆಯ NTT Module ಮೂಲಕ ಪರಿಶೀಲಿಸುವುದರಿಂದ, ಆಡಳಿತ ಇಲಾಖೆಯು ಹಣ ಬಿಡುಗಡೆ ಮಾಡುವಾಗ ಇಂತಹ ಬ್ಯಾಂಕ್/ ವೈಯಕ್ತಿಕ ಠೇವಣಿ ಖಾತೆಯಲ್ಲಿ ಲಭ್ಯವಿರುವ ಶಿಲ್ಕು ಹಾಗೂ ನೈಜ ವೆಚ್ಚ ಇವುಗಳನ್ನು ಪರಿಗಣಿಸಿಯೇ ಹಣ ಬಿಡುಗಡೆ ಮಾಡಬೇಕಾಗುತ್ತದೆ. ಆರ್ಥಿಕ ಇಲಾಖೆಯ ಅನುಮೋದನೆಯೊಂದಿಗೆ ತೆರೆದಿರುವ ಬ್ಯಾಂಕ್ ಖಾತೆ ವಿವರಗಳನ್ನು ಕಡ್ಡಾಯವಾಗಿ ಖಜಾನೆಯ NTT ಮಾಡ್ಯೂಲ್ ನಲ್ಲಿ ದಾಖಲಿಸಿರುವ ಬಗ್ಗೆ ಆಡಳಿತ ಇಲಾಖೆಯು ಖಚಿತಪಡಿಸಿಕೊಳ್ಳುವುದು.
ಆರ್ಥಿಕ ಇಲಾಖೆಗೆ ಮಾಹಿತಿ:
37. ಆಡಳಿತ ಇಲಾಖೆಗಳು ಈ ಆರ್ಥಿಕ ಪ್ರತ್ಯಾಯೋಜನೆಗಳನ್ವಯ ಹೊರಡಿಸುವ ಹಣ ಬಿಡುಗಡೆ ಆದೇಶದ ಪ್ರತಿಗಳನ್ನು ತಪ್ಪದೇ ಆರ್ಥಿಕ ಇಲಾಖೆಯ ಸಂಬಂಧಿತ ವೆಚ್ಚ ಶಾಖೆಗಳಿಗೆ ಕಳುಹಿಸುವುದು.
ಖಜಾನೆ ಇಲಾಖೆಯ ಪಾತ್ರ
38. (ಎ) ಈ ಸಂಬಂಧ ಮೇಲ್ಕಾಣಿಸಿದ ವಿವರಗಳನ್ವಯ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುವುದನ್ನು ಗಮನಿಸದೇ ಖಜಾನೆ ಇಲಾಖೆಯು ಆಡಳಿತ ಇಲಾಖೆಗಳು ಸಲ್ಲಿಸುವ ಬಿಲ್ಲುಗಳನ್ನು ಅಂಗೀಕರಿಸತಕ್ಕದ್ದಲ್ಲ ಮತ್ತು ಹಣ ಬಿಡುಗಡೆ ಮಾಡತಕ್ಕದ್ದಲ್ಲ.
(ಬಿ) ಕೇಂದ್ರ ವಲಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, ಆರ್ಥಿಕ ಇಲಾಖೆಯು ಹೊರಡಿಸುವ Credit Confirmation Slip ಅನ್ನು ಪರಿಶೀಲಿಸದೆ ಯಾವುದೇ ಬಿಲ್ಲುಗಳನ್ನು ಮಾನ್ಯ ಮಾಡತಕ್ಕದ್ದಲ್ಲ.
(ಸಿ) ಪಿ.ಡಿ. ಖಾತೆಯಿಂದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡದಿರುವುದನ್ನು (ಕಂಡಿಕೆ-33 ರಲ್ಲಿನ ಸೂಚನೆಯಂತೆ) ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳನ್ನು (CSS) SNA ಖಾತೆಗೆ ಮಾತ್ರ ವರ್ಗಾಯಿಸುವಂತೆ ಮತ್ತು Non SNA ಖಾತೆಗೆ ವರ್ಗಾಯಿಸದಿರುವುದನ್ನು ಖಜಾನೆ ಇಲಾಖೆಯು ಖಚಿತಪಡಿಸಿಕೊಳ್ಳುವುದು.
(ಡಿ) ಹಾಗೆಯೇ, ಆರ್ಥಿಕ ಇಲಾಖೆಯ ನಿರ್ಧಿಷ್ಟ ಅನುಮತಿಯೊಂದಿಗೆ ಆಡಳಿತ ಇಲಾಖೆಯಿಂದ ಹೊರಡಿಸಿರುವ ಆದೇಶವಿಲ್ಲದೆ ಯಾವುದೇ ಪಿ.ಡಿ. ಖಾತೆಗೆ / ಬ್ಯಾಂಕ್ ಖಾತೆಗೆ ಖಜಾನೆಯಿಂದ ಹಣವನ್ನು ವರ್ಗಾವಣೆ ಮಾಡುವಂತಿಲ್ಲ ಮತ್ತು ಆರ್ಥಿಕ ಇಲಾಖೆಯ ತ್ರೈಮಾಸಿಕ ಕಂತುಗಳ ಹಣ ಬಿಡುಗಡೆ ಆದೇಶದ ಅನುಬಂಧ-1 ರಲ್ಲಿರುವ ಪ್ರತ್ಯಾಯೋಜನೆ ಮಾಡಿರದ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯಿಂದ ನಿರ್ದಿಷ್ಟ ಅನುಮೋದನೆ ನೀಡಿದ ಹಿಂಬರಹವನ್ನು ಪರಿಶೀಲಿಸಿದ ನಂತರವೇ ಬಿಲ್ಲುಗಳನ್ನು ಅಂಗೀಕರಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಡಾ:ಪಿ.ಸಿ.ಜಾಫರ್)
ಸರ್ಕಾರದ ಕಾರ್ಯದರ್ಶಿ (ಆ ಮತ್ತು ಸಂ) ಆರ್ಥಿಕ ಇಲಾಖೆ.
