DIRECT RECRUITMENT TO THE POST OF CIVIL JUDGE-2025 : ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ,ಅಧಿಸೂಚನೆ, ಸಂಪೂರ್ಣ ಮಾಹಿತಿ ಇಲ್ಲಿದೆ.

DIRECT RECRUITMENT TO THE POST OF CIVIL JUDGE-2025.

 

Civil Judge Recuritment-2025: ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004 ಮತ್ತು ಅದರ ತಿದ್ದುಪಡಿ ಮಾಡಲಾದ ನಿಯಮಗಳು 2011,2015, 2016 ಮತ್ತು 2024 ಮತ್ತು ಸರ್ವೋಚ್ಚ ನ್ಯಾಯಾಲಯದ SMW (C) No. 2/2024 ದಿನಾಂಕ: 07.11.2024 ರ ಆದೇಶದನ್ವಯ ಕರ್ನಾಟಕ ಉಚ್ಚ ನ್ಯಾಯಾಲಯವು 24 ಉಳಿಕೆ (ಬ್ಯಾಕ್ ಲಾಗ್) ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 158 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆಯೆಂದು ಈ ಮೂಲಕ ಅಧಿಸೂಚಿಸಿದೆ.

ಈ ನೇಮಕಾತಿಯು IA No. 13980/2025 in Civil Appeal No.1867/2006 (Malik Mazhar Sultan & Another Vs. U.P. Public Service Commission through its Secretary & Others) ಸರ್ವೋಚ್ಚ ನ್ಯಾಯಾಲಯದ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

1.ಕನಿಷ್ಠ ವಿದ್ಯಾರ್ಹತೆ ಮತ್ತು ವಯೋಮಿತಿ:

ಎ. ನೇರ ನೇಮಕಾತಿ:

(ಎ) ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.

(ಬಿ) ಅಭ್ಯರ್ಥಿಗಳ ವಯಸ್ಸು, ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು:

(i) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ 40 ವರ್ಷ ವಯಸ್ಸು;

(ii) ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-II(ಎ) ಅಥವಾ II(ಬಿ) ಅಥವಾ III(ಎ) ಅಥವಾ III(ಬಿ)ಗೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ 38 ವರ್ಷ ವಯಸ್ಸು ಹಾಗೂ

(iii)ಯಾವುದೇ ಇತರ ಅಭ್ಯರ್ಥಿಗಳ ಸಂದರ್ಭದಲ್ಲಿ 35 ವರ್ಷ ವಯಸ್ಸು ಮೀರಿರಬಾರದು.

(ಸಿ) ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.

ಬಿ. ಸೇವಾ ನಿರತ ಅಭ್ಯರ್ಥಿಗಳು:

(ಎ) ಭಾರತದ ಕಾನೂನಿನ ಮೇರೆಗೆ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು.

(ಬಿ) ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಸಂದರ್ಭದಲ್ಲಿ 43 ವರ್ಷಗಳ ವಯಸ್ಸು ಮತ್ತು ಇತರರ ಸಂದರ್ಭದಲ್ಲಿ 40 ವರ್ಷ ವಯಸ್ಸು ಮೀರಿರಬಾರದು.

(ಸಿ) ಅರ್ಜಿ ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು:

1.ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಥವಾ ಕರ್ನಾಟಕ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.

2.ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್/ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುತ್ತಿರಬೇಕು.

ಸಿ. ಅಂಗವಿಕಲ ವ್ಯಕ್ತಿಗಳು:-

ಸಿವಿಲ್ ನ್ಯಾಯಾಧೀಶರ ವೃಂದಗಳಿಗೆ ಸೇರಿದ ಎಲ್ಲಾ ನೇರ ನೇಮಕಾತಿಗಳಲ್ಲಿ ನಾಲ್ಕು ಪ್ರತಿಶತದಷ್ಟು (49) ಖಾಲಿ ಹುದ್ದೆಗಳನ್ನು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016ರ ಕಲಂ 34(1)ರ ಪ್ರಕಾರ ಅಂಗವಿಕಲ ವ್ಯಕ್ತಿಗಳಿಗೆ (Persons with Benchmark Disability) (Central Act No. 49/2016) ಮೀಸಲಿಡಲಾಗಿದೆ

ಪರಂತು. ಅಂಗವಿಕಲತೆಯ ನಿರ್ಧರಣೆಗಾಗಿ ರಚಿಸಲಾದ ವೈದ್ಯಕೀಯ ಮಂಡಳಿಯು ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ನಿಯಮಗಳು, 2004ರಲ್ಲಿನ ಇತರೆ ನಿಬಂಧನೆಗಳು ಮತ್ತು ಅದರ ಮೇರೆಗೆ ರೂಪಿಸಲಾದ ಪರೀಕ್ಷಾ ವಿಧಾನದ ಮೂಲಕ ಆಯ್ಕೆಯಲ್ಲಿ ಅನ್ಯಥಾ ಆರ್ಹತೆ ಹೊಂದಿರದ ಹೊರತು, ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ನೇಮಕಾತಿ ಪ್ರಾಧಿಕಾರಕ್ಕೆ ಮನವರಿಕೆಯಾಗುವಂಥ ಯುಕ್ತ / ಸಹಾಯಕ ಉಪಕರಣಗಳು ಅಥವಾ ನೆರವನ್ನು ಒದಗಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಯು ನ್ಯಾಯಾಂಗ ಅಧಿಕಾರಿಯ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಮರ್ಥನಾಗಿರಬೇಕೆಂದು ಪ್ರಮಾಣೀಕರಿಸತಕ್ಕದ್ದು.

ವೇತನ ಶ್ರೇಣಿ:

ರೂ.77840-136520

3.158 ಖಾಲಿ ಹುದ್ದೆಗಳ ವರ್ಗೀಕರಣ [24 ಉಳಿಕೆ (ಬ್ಯಾಕ್ ಲಾಗ್) ಹುದ್ದೆಗಳು ಒಳಗೊಂಡಂತೆ]

 

 

ಟಿಪ್ಪಣಿ:

1.(*) ಈ ಚಿಹ್ನೆಯು ಉಳಿಕೆ (ಬ್ಯಾಕ್‌ ಲಾಗ್) ಹುದ್ದೆಗಳನ್ನು ಸೂಚಿಸುತ್ತದೆ.

2.ಹೊಸ ಖಾಲಿ ಹುದ್ದೆಗಳಿಗೆ ನೇರ ಮತ್ತು ಸಮತಳ ಮೀಸಲಾತಿಗಳನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 01 ಸೆಹಿಮ 2022, ದಿನಾಂಕ 28.12.2022 ಮತ್ತು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 02 ಸೆಹಿಮ 2023, ದಿನಾಂಕ:08.03.2023ರ ಅನ್ವಯ ಅನುಸರಿಸಲಾಗಿದೆ.

3.ಅಂಗವಿಕಲ (Persons with Benchmark Disability) ವ್ಯಕ್ತಿಗಳಿಗೆ ಸಮತಳ ಬಿಂದುಗಳ ವಿರುದ್ಧ ಮೀಸಲಾತಿಯನ್ನು ಒದಗಿಸುವ ಸಂದರ್ಭದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (ಕೇಂದ್ರ ಅಧಿನಿಯಮ ನಂ.49/2016) ರಲ್ಲಿ ಗೊತ್ತುಪಡಿಸಲಾದಂತೆ ಹಾಗೂ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 149 ಸೆನೆನಿ 2020, ದಿನಾಂಕ 25.09.2020 ರಲ್ಲಿ ಅಂಗವಿಕಲ ವ್ಯಕ್ತಿಗಳ ಮೀಸಲಾತಿಯನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.

 

 

4.ನೇಮಕಾತಿ ವಿಧಾನ :-

ಉಚ್ಚ ನ್ಯಾಯಾಲಯವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಲಿಖಿತ ಮತ್ತು ಮೌಖಿಕ) ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿಯನ್ನು ಮಾಡಲಾಗುತ್ತದೆ.

(1) ಸಿವಿಲ್ ನ್ಯಾಯಾಧೀಶರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವು ಯಾವುದೆಂದರೆ:

(ಎ) ಪೂರ್ವಭಾವಿ ಪರೀಕ್ಷೆ

(ಬಿ) ಮುಖ್ಯ ಲಿಖಿತ ಪರೀಕ್ಷೆ ಮತ್ತು

(ಸಿ) ಮೌಖಿಕ ಪರೀಕ್ಷೆ

ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದಲು ಮಾತ್ರ ಪರಿಗಣಿಸಲಾಗುತ್ತದೆ.

(ಎ) ಪೂರ್ವಭಾವಿ ಪರೀಕ್ಷೆ:

ಪೂರ್ವಭಾವಿ ಪರೀಕ್ಷೆಯನ್ನು 100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆ ಪತ್ರಿಕೆಯ ರೂಪದಲ್ಲಿ ನಡೆಸಲಾಗುತ್ತದೆ ಮತ್ತು ಸದರಿ ಪರೀಕ್ಷೆಯ ಪಠ್ಯಕ್ರಮವು ಈ ಕೆಳಕಂಡಂತಿರುತ್ತದೆ:-

ಭಾಗ-ಎ:

ದಿವಾಣಿ ಪ್ರಕ್ರಿಯಾ ಸಂಹಿತೆ, 1908;

ವರ್ಗಾವಣೀಯ ಲಿಖಿತಗಳ ಅಧಿನಿಯಮ, 1881;

ಸ್ವತ್ತು ವರ್ಗಾವಣೆ ಅಧಿನಿಯಮ, 1882;

ಭಾರತೀಯ ಕರಾರು ಅಧಿನಿಯಮ, 1872:

ನಿರ್ದಿಷ್ಟ ಪರಿಹಾರ ಅಧಿನಿಯಮ, 1963;

ಭಾರತದ ಸಂವಿಧಾನ; ಮತ್ತು ಕರ್ನಾಟಕ ಬಾಡಿಗೆ ಅಧಿನಿಯಮ, 1999,

ಭಾಗ-ಬಿ:

ದಂಡ ಪ್ರಕ್ರಿಯಾ ಸಂಹಿತೆ 1973 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023;

ಭಾರತೀಯ ದಂಡ ಸಂಹಿತೆ, 1860 ಮತ್ತು ಭಾರತೀಯ ನ್ಯಾಯ ಸಂಹಿತೆ. 2023;

ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು ಭಾರತೀಯ ಸಾಕ್ಷ್ಯ, ಅಧಿನಿಯಮ, 2023;

ಭಾಗ- ಸಿ: ಸಾಮಾನ್ಯ ಜ್ಞಾನ ತಾರ್ಕಿಕ ಮತ್ತು ಮನೋಸಾಮರ್ಥ್ಯ ಪರೀಕ್ಷೆ.

ಬಿ) ಮುಖ್ಯ ಲಿಖಿತ ಪರೀಕ್ಷೆ:-

(i) ಭಾಷಾಂತರ ಪತ್ರಿಕೆ (ಗರಿಷ್ಠ ಅಂಕಗಳು-100)

ಒಂದು ಭಾಷಾಂತರ ಪತ್ರಿಕೆಯಿದ್ದು, ಅಭ್ಯರ್ಥಿಗಳು ಆಂಗ್ಲಭಾಷೆಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಆಂಗ್ಲಭಾಷೆಗೆ ಕೆಲವು ಉದ್ಭತ ಭಾಗಗಳನ್ನು ಭಾಷಾಂತರಿಸುವ ಅಗತ್ಯವಿರುತ್ತದೆ. ಉದ್ಭತ ಭಾಗಗಳನ್ನು (1) ಹೇಳಿಕೆಗಳು (2) ತೀರ್ಪುಗಳು ಮತ್ತು (3) ದಸ್ತಾವೇಜುಗಳಿಂದ ಆರಿಸಿ ತೆಗೆದುಕೊಳ್ಳಲಾಗಿರುತ್ತದೆ.

(ii) ಕಾನೂನು ಪತ್ರಿಕೆ – 1 (ಗರಿಷ್ಠ ಅಂಕಗಳು-100)

ದಿವಾಣಿ ಪ್ರಕ್ರಿಯಾ ಸಂಹಿತೆ 1908, ದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023; ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 2023; ವಾದ ತತ್ವಗಳು ಮತ್ತು ಭಾರತೀಯ ಸಂವಿಧಾನದಂಡ ಪ್ರಕ್ರಿಯಾ ಸಂಹಿತೆ, 1973 ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023; ಭಾರತೀಯ ಸಾಕ್ಷ್ಯ ಅಧಿನಿಯಮ, 1872 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ, 2023; ವಾದ ತತ್ವಗಳು ಮತ್ತು ಭಾರತೀಯ ಸಂವಿಧಾನ

(iii) ಕಾನೂನು ಪತ್ರಿಕೆ – 2 (ಗರಿಷ್ಠ ಅಂಕಗಳು 100)

ಸಿವಿಲ್ ಪ್ರಕರಣಗಳಲ್ಲಿ ವಿವಾದಾಂಶಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು ಬರೆಯುವುದು.

(iv) ಕಾನೂನು ಪತ್ರಿಕೆ – 03 (ಗರಿಷ್ಠ ಅಂಕಗಳು 100)

ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಣೆಗಳನ್ನು ರೂಪಿಸುವುದು ಮತ್ತು ತೀರ್ಪುಗಳನ್ನು ಬರೆಯುವುದು.

(ಸಿ) ಮೌಖಿಕ – ಪರೀಕ್ಷೆ (ಗರಿಷ್ಠ ಅಂಕಗಳು-100)

ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಕಾನೂನು ತತ್ವಗಳ ಗ್ರಹಿಕೆ ಮತ್ತು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಲು ಅವರಿಗಿರುವ ಅರ್ಹತೆಗಳನ್ನು ಪರೀಕ್ಷಿಸಲಾಗುವುದು.

(ಡಿ) ಕಂಪ್ಯೂಟರ್ ಜ್ಞಾನದ ಪರೀಕ್ಷೆ (ಗರಿಷ್ಠ ಅಂಕಗಳು 25)

ಕಂಪ್ಯೂಟರ್ ಜ್ಞಾನದ ಪರೀಕ್ಷೆಯು 25 ಅಂಕಗಳಿಗೆ ಇರುತ್ತದೆ. ಅಭ್ಯರ್ಥಿಗಳು ಗಳಿಸಿದ ಈ ಅಂಕಗಳನ್ನು ಅವರ ಅರ್ಹತೆಯನ್ನು ನಿಶ್ಚಿತಪಡಿಸಲು ಪರಿಗಣಿಸಲಾಗುತ್ತದೆ. ಮತ್ತು ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ.

ಸೂಚನೆ : (ಬಿ) ಮತ್ತು (ಸಿ) ಗೆ ಸಂಬಂಧಪಟ್ಟಂತೆ ಯಾವ ಅಭ್ಯರ್ಥಿಗಳು ಕನ್ನಡದಲ್ಲಿ ಉತ್ತರಿಸಲು ಅಪೇಕ್ಷೆ ಪಡುತ್ತಾರೋ ಅವರು ಕನ್ನಡದಲ್ಲಿ ಉತ್ತರಿಸಬಹುದು.

(ಇ) ಪೂರ್ವಭಾವಿ, ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆ ಅರ್ಹತೆ:

(i) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ (Persons with Benchmark Disability) ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಕನಿಷ್ಠ 50 ಅಂಕಗಳು ಮತ್ತು ಇತರರಿಗೆ 60 ಅಂಕಗಳನ್ನು ನಿಗದಿಪಡಿಸಲಾಗಿದೆ.

ii) ಮೇಲಿನ ಕಲಂ (1)ರ ಮೇರೆಗೆ ಲಿಖಿತ ಪರೀಕ್ಷೆಗೆ ಅರ್ಹರಾಗಿರುವಂತಹ ಅಭ್ಯರ್ಥಿಗಳನ್ನು ಪ್ರತಿ ಮೀಸಲಾತಿ ಪ್ರವರ್ಗದಲ್ಲಿನ ಖಾಲಿ ಸ್ಥಾನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ 10 (ಹತ್ತು) ಪಟ್ಟು ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಿ, ಮುಖ್ಯ ಲಿಖಿತ ಪರೀಕ್ಷೆಗೆ ಕರೆಯಲಾಗುವುದು.

(iii) ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಅಂಗವಿಕಲ (Persons with Benchmark Disability) ಅಭ್ಯರ್ಥಿಗಳು ಮುಖ್ಯ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರತಿಯೊಂದು ಪತ್ರಿಕೆಯಲ್ಲೂ ಕನಿಷ್ಠ 40 ಅಂಕಗಳು ಮತ್ತು ಇತರರಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ.

(iv) ಮೇಲಿನ ಕಲಂ (iii) ರ ಮೇರೆಗೆ ಮೌಖಿಕ ಪರೀಕ್ಷೆಗೆ ಅರ್ಹರಾಗಿರುವಂತಹ ಅಭ್ಯರ್ಥಿಗಳನ್ನು ಪ್ರತಿ ಮೀಸಲಾತಿ ಪ್ರವರ್ಗದಲ್ಲಿನ ಖಾಲಿ ಸ್ಥಾನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಧಿಸೂಚಿಸಿರುವ ಖಾಲಿ ಹುದ್ದೆಗಳ ಸಂಖ್ಯೆಗೆ 3 (ಮೂರು) ಪಟ್ಟು ಅಭ್ಯರ್ಥಿಗಳನ್ನು, ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಿ ಮೌಖಿಕ 5 ಪರೀಕ್ಷೆಗೆ ಕರೆಯ ಕರೆಯಲಾಗುವುದು.

(v) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ (Persons with Benchmark Disability) ಅಭ್ಯರ್ಥಿಗಳು ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕನಿಷ್ಠ 40 ಅಂಕಗಳು ಮತ್ತು ಇತರರಿಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ.

ಪರಂತು.

(i) ಮುಖ್ಯ ಲಿಖಿತ ಪರೀಕ್ಷೆಯ ಯಾವುದೇ ಪತ್ರಿಕೆಯಲ್ಲಿ ಮೇಲೆ ನಿಗದಿಪಡಿಸಿದ ಕನಿಷ್ಠ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದಂತಹ ಯಾವುದೇ ಅಭ್ಯರ್ಥಿಯು ಮೌಖಿಕ ಪರೀಕ್ಷೆಗೆ ಅರ್ಹರಾಗುವುದಿಲ್ಲ.

(ii) ಮುಖ್ಯ ಲಿಖಿತ ಪರೀಕ್ಷೆಯ ಯಾವುದೇ ಪತ್ರಿಕೆಯಲ್ಲಿ ಅಥವಾ ಮೌಖಿಕ ಪರೀಕ್ಷೆಯಲ್ಲಿ ಮೇಲೆ ನಿಗದಿಪಡಿಸಿದ ಕನಿಷ್ಠ ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿದಂತಹ ಯಾವುದೇ ಅಭ್ಯರ್ಥಿಯು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗುವುದಕ್ಕೆ ಅರ್ಹರಾಗುವುದಿಲ್ಲ.

(ಎಫ್) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ (Persons with Benchmark Disability) ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗಕ್ಕೆ ಪರಿಗಣಿಸಬೇಕಾದ್ದಲ್ಲಿ, ಅಂತಹ ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಈ ಕೆಳಗೆ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಗಳಿಸಿರಬೇಕು.

ಪೂರ್ವಭಾವಿ ಪರೀಕ್ಷೆ: 60 ಅಂಕಗಳು

ಮುಖ್ಯ ಲಿಖಿತ ಪರೀಕ್ಷೆ: ಪ್ರತಿ ಪತ್ರಿಕೆಯಲ್ಲೂ 50 ಅಂಕಗಳು

ಮೌಖಿಕ ಪರೀಕ್ಷೆ: 50 ಅಂಕಗಳು.

 

5.ಪರಿವೀಕ್ಷಣ ಅವಧಿ ಮತ್ತು ತರಬೇತಿ:-

ಆಯ್ಕೆಯಾಗಿ ಮತ್ತು ನೇಮಕಾತಿಯಾದ ಅಭ್ಯರ್ಥಿಗಳು, ಪ್ರಾರಂಭದಲ್ಲಿ ಎರಡು ವರ್ಷಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ. ಇದಲ್ಲದೆ, ಅಭ್ಯರ್ಥಿಯು ಉಚ್ಚ ನ್ಯಾಯಾಲಯವು ನಿರ್ದಿಷ್ಟಪಡಿಸಬಹುದಾದಂತ ಹ ತರಬೇತಿಯನ್ನು ಪಡೆಯಬೇಕು.

ಅವನು/ಅವಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದಿದ್ದರೆ ಕರ್ನಾಟಕ ಸಿಎಲ್ ಸೇವಾ (ಸೇವೆಗಳು ಹಾಗೂ ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974 ರ ಅನುಸಾರವಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು,

6.ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಸಂದಾಯ ಮಾಡಲು ಸೂಚನೆ :-

(ಎ) ಅಭ್ಯರ್ಥಿಯು ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳತಕ್ಕದ್ದು. ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ https://karnatakajudiciary.kar.nic.in/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ, ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೆಂದು ಖಚಿತಪಡಿಸಿಕೊಂಡ ನಂತರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಆನ್‌ಲೈನ್ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

(ಬಿ) ಅಭ್ಯರ್ಥಿಯು ಅಂತಿಮವಾಗಿ ಅರ್ಜಿಯನ್ನು ಸಲ್ಲಿಸುವ ಮೊದಲು, ಒದಗಿಸಿದ ಮಾಹಿತಿಯು ಎಲ್ಲಾ ರೀತಿಯಲ್ಲೂ ಸರಿಯಾಗಿದೆಯೇ ಹಾಗೂ ಅಗತ್ಯ ಶುಲ್ಕವನ್ನು ಪಾವತಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯು ನಮೂದಾಗುವುದು. ಅದನ್ನು ಮುಂದಿನ ಉಲ್ಲೇಖಕ್ಕಾಗಿ ಸಂರಕ್ಷಿಸಿಕೊಳ್ಳತಕ್ಕದ್ದು, ಅರ್ಜಿಯ ಪ್ರತಿಯನ್ನು ಸಹ ಮುದ್ರಣ ಮಾಡಿಟ್ಟುಕೊಳ್ಳತಕ್ಕದ್ದು.

(ಸಿ) ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವಾಗ, ಅಭ್ಯರ್ಥಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಇ-ಪಾವತಿ ಗೇಟ್‌ ವೇ ಮೂಲಕ ನಿಗದಿತ ಶುಲ್ಕವನ್ನು ಸಂದಾಯ ಮಾಡತಕ್ಕದ್ದು, ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಅಂದರೆ ನೆಟ್ ಬ್ಯಾಕಿಂಗ್ / ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಯು.ಪಿ.ಐ ಐ.ಡಿ. ಮೂಲಕ ಪಾವತಿಸತಕ್ಕದ್ದು, ಒಮ್ಮೆ ಸಂದಾಯ ಮಾಡಿದ ಶುಲ್ಕವನ್ನು ಯಾವುದೇ ಸಂದರ್ಭಗಳಲ್ಲೂ ಮರುಪಾವತಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

(ಡಿ) ನಿಗದಿತ ಶುಲ್ಕವನ್ನು ಪಾವತಿಸದೇ ವಿಫಲವಾದ ಆನ್‌ಲೈನ್ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕದಂದು ಅಂತಿಮವಾಗಿ ಸಲ್ಲಿಸಲಾಗದ ಅರ್ಜಿಗಳನ್ನು ಅಪೂರ್ಣವಾದ ಅರ್ಜಿಗಳು ಎಂದು ಪರಿಗಣಿಸಲಾಗುವುದು ಮತ್ತು ಅಂತಹ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸಲು ಮತ್ತು ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: 12.03.2025

(ಇ ) ಪೂರ್ವಭಾವಿ ಪರೀಕ್ಷೆ ಶುಲ್ಕ:

ಸಾಮಾನ್ಯ ವರ್ಗ ಮತ್ತು ಪ್ರವರ್ಗ-II(ಎ)/II(ಬಿ)/III(ಎ)/III(ಬಿ) ಸೇರಿದ ಅಭ್ಯರ್ಥಿಯು ರೂ. 1000/- (ಒಂದು ಸಾವಿರ ರೂಪಾಯಿಗಳು ಮಾತ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ವರ್ಗಕ್ಕೆ ಸೇರಿದ ಅಭ್ಯರ್ಥಿಗಳು / ಅಂಗವಿಕಲ ವ್ಯಕ್ತಿಗಳು (Persons with Benchmark Disability) ರೂ. 500/- (ಐದುನೂರು ರೂಪಾಯಿಗಳು ಮಾತ್ರ) ಶುಲ್ಕವನ್ನು ಸಂದಾಯ ಮಾಡತಕ್ಕದ್ದು.

ಅಭ್ಯರ್ಥಿಗಳು ನಿರ್ದಿಷ್ಟ ಸಮಯದೊಳಗೆ ಶುಲ್ಕವನ್ನು ಪಾವತಿಸದಿದ್ದಲ್ಲಿ, ಅಂತಹ ಅಭ್ಯರ್ಥಿಯನ್ನು ಮುಖ್ಯ ಲಿಖಿತ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ.

7.ಅಂಗವಿಕಲ (Persons with Benchmark Disability) ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಸಂಬಂಧಿಸಿ] ಮಾರ್ಗಸೂಚಿಗಳನ್ನು ಅನುಬಂಧ – 1 ರಲ್ಲಿ ಲಗತ್ತಿಸಿದೆ:

8.ಇತರ ಷರತ್ತುಗಳು :

(ಎ) ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆಗಾಗಿ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬೇಕು i.c., ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ, ಅಭ್ಯರ್ಥಿಗಳು ಒಮ್ಮೆ ಆಯ್ಕೆ ಮಾಡಿದ ಪೂರ್ವಭಾವಿ ಪರೀಕ್ಷಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.

(ಬಿ) ಪೂರ್ವಭಾವಿ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಗೆ ಕರೆಯಲ್ಪಡುವ ಅಭ್ಯರ್ಥಿಗಳು, ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.

(ಸಿ) ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು, ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಮತ್ತು ಸಕ್ಷಮ ಪ್ರಾಧಿಕಾರವು ನೀಡಿದ ಪ್ರಮಾಣಪತ್ರವನ್ನು ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಹೊಂದಿರತಕ್ಕದ್ದು ಮತ್ತು ಆಯ್ಕೆ ಸಮಿತಿಯಿಂದ ನಿರ್ದೇಶಿಸಲ್ಪಟ್ಟಾಗ ತಪ್ಪದೆ ಹಾಜರುಪಡಿಸುವುದು.

i. ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-I/ II(ಎ)/II(ಬಿ )/ III(ಎ )/ III(ಬಿ) ಪ್ರಮಾಣಪತ್ರ

ii. ಅಂಗವಿಕಲ ಮೀಸಲಾತಿಯನ್ನು ಕೋರುವ (Persons with Benchmark Disability) ಅಭ್ಯರ್ಥಿಗಳು ಸಕ್ತಮ ಪ್ರಾಧಿಕಾರವು ನಿಗದಿಪಡಿಸಿರುವ ನಮೂನೆಯಲ್ಲಿ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು. ಈ ಅಧಿಸೂಚನೆಯಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಓದಿಕೊಳ್ಳತಕ್ಕದ್ದು.

iii. ಮಾಜಿ ಸೈನಿಕ ವರ್ಗದ ಅಡಿಯಲ್ಲಿ ಸಶಸ್ತ್ರ ಪಡೆಯಿಂದ ಬಿಡುಗಡೆ ಮಾಡಲಾದ ಅಥವಾ ವಿಮುಕ್ತಿಗೊಳಿಸಿದ ಪ್ರಮಾಣ ಪತ್ರ,

iv. ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು 1 ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿರತಕ್ಕದ್ದು, ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 96 ಸೆನೆನಿ 2005 ದಿನಾಂಕ 10.08.2005 ರನ್ವಯ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲುರುಜುವಿನೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು ಮತ್ತು ಗ್ರಾಮೀಣ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಸರ್ಕಾರಿ ಆದೇಶ ಸಂಖ್ಯೆ ಸಿಆಸುಇ 8 ಸೆನೆನಿ 2001 ದಿನಾಂಕ 13.02.2001 ರನ್ವಯ ನಮೂನೆ-1ರಂತೆ ಸಂಬಂಧಿತ ತಹಶೀಲ್ದಾರ್‌ರವರಿಂದ ಪಡೆದ ಪ್ರಮಾಣ ಪತ್ರವನ್ನು ಸಹ ಹೊಂದಿರತಕ್ಕದ್ದು.

V. ಕನ್ನಡ ಮಾಧ್ಯಮದ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 1 ರಿಂದ 10ನೇ ತರಗತಿಯವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಸರ್ಕಾರಿ ಅಧಿಸೂಚನೆ ಸಂಖ್ಯೆ ಸಿಆಸುಇ 71 ಸೆನೆನಿ 2001 ದಿನಾಂಕ 24.10.2002 ರನ್ವಯ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲುರುಜು ಹೊಂದಿರುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.

 vi.ತೃತೀಯ ಲಿಂಗ ಮೀಸಲಾತಿ ಕೋರುವ ಅಭ್ಯರ್ಥಿಗಳು , Transgender Persons (Protection of Rights) Act, 2019 ಕಲಂ 6ರ ಅನ್ವಯ ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವನ್ನು ಹೊಂದಿರತಕ್ಕದ್ದು.

(ಡಿ) ಅಭ್ಯರ್ಥಿಯು ಮೂರು ನಡತೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ. ಅವುಗಳಲ್ಲಿ, ಒಂದು ವಿದ್ಯಾಭ್ಯಾಸದ ವಿವರಗಳೊಂದಿಗೆ ಎಲ್.ಎಲ್.ಬಿ ಯನ್ನು ವ್ಯಾಸಂಗ ಮಾಡಿದ ಸಂಸ್ಥೆ/ಕಾಲೇಜಿನಿಂದ ಪಡೆದಿರುವ ನಡತೆಯ ಪ್ರಮಾಣ ಪತ್ರ ಮತ್ತು ತನಗೆ ಸಂಬಂಧಿಯಾಗಿರದ ಹಾಗೂ ಚೆನ್ನಾಗಿ ಪರಿಚಯವಿರುವ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಪಡೆದಿರುವ ಎರಡು ನಡತೆಯ ಪ್ರಮಾಣಪತ್ರಗಳು ದಾಖಲಾತಿಗಳ ಪರಿಶೀಲನೆ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

(ಇ) ಮೌಖಿಕ ಪರೀಕ್ಷೆಯ ಸಮಯದಲ್ಲಿ ದಾಖಲೆಗಳ ಪರಿಶೀಲನೆಗಾಗಿ ಕರೆಯಲ್ಪಡುವ ಅಭ್ಯರ್ಥಿಗಳು, ಶೈಕ್ಷಣಿಕ ವಿದ್ಯಾರ್ಹತೆ, ಜನ್ಮ ದಿನಾಂಕವನ್ನು ಹಾಗೂ ಮೀಸಲಾತಿಯನ್ನು ದೃಢಪಡಿಸಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣಪತ್ರ, ಗುರುತಿನ ಚೀಟಿ, ಪದವಿ ಹಾಗೂ ಕಾನೂನು ಪದವಿಯ ಅಂಕ ಪಟ್ಟಿಗಳು ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳು, ಜಾತಿ ಪ್ರಮಾಣ ಪತ್ರ, ಗ್ರಾಮೀಣ / ಅಂಗವಿಕಲ ಅಭ್ಯರ್ಥಿಗಳು (Persons with Benchmark Disability) / ಮಾಜಿ ಸೈನಿಕರು / ಕನ್ನಡ ಮಾಧ್ಯಮ ಮತ್ತು ತೃತೀಯ ಲಿಂಗಕ್ಕೆ (Transgender) ಸಂಬಂಧಿಸಿದ ಮೀಸಲಾತಿಗಳ ಪ್ರಮಾಣ ಪತ್ರಗಳನ್ನು ಸ್ವಯಂ ದೃಢೀಕೃತ ಮೂರು ಛಾಯ ಪ್ರತಿಗಳ ಜೊತೆಗೆ ಅಗತ್ಯ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಸಲ್ಲಿಸತಕ್ಕದ್ದು.

(ಎಫ್) ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 11ರ ಪ್ರಕಾರ, ಈ ಅಧಿಸೂಚನೆಯ 1(ಬಿ) ಆಡಿಯಲ್ಲಿ ಸೇವಾ ನಿರತ ಅಭ್ಯರ್ಥಿಗಳು, ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ‘ಹೌದು’ ಎಂಬುದನ್ನು ಆಯಾ ಕಾಲಂನಲ್ಲಿ ನಮೂದಿಸತಕ್ಕದ್ದು ಮತ್ತು ಅವನು/ಅವಳು ಆಯ್ಕೆಗೊಂಡ ಸಂದರ್ಭದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ‘ನಿರಪೇಕ್ಷಣಾ ಪತ್ರ’ ವನ್ನು ಒದಗಿಸತಕ್ಕದ್ದು.

9.ನೇಮಕಾತಿಯ ಅನರ್ಹತೆ:- ಈ ಕೆಳಗಿನ ಯಾವುದೇ ವ್ಯಕ್ತಿಯು ಸೇವೆಯ ನೇಮಕಾತಿಗೆ ಅರ್ಹರಾಗಿರತಕ್ಕದ್ದಲ್ಲ.

(ಎ) ಭಾರತೀಯ ಪೌರನಾಗಿರದ ಹೊರತು;

(ಬಿ) ಆತನು/ಆಕೆಯು ನ್ಯಾಯಾಂಗ ಸೇವೆಯಿಂದ ಅಥವಾ ಸರ್ಕಾರಿ ಅಥವಾ ಶಾಸನಾತ್ಮಕ ಅಥವಾ ಸ್ಥಳೀಯ ಪ್ರಾಧಿಕಾರ ಸೇವೆಯಿಂದ ಕಡ್ಡಾಯ ನಿವೃತ್ತಿ ಹೊಂದಿದ್ದರೆ. ತೆಗೆದು ಹಾಕಿದ್ದರೆ ಅಥವಾ ವಜಾಗೊಳಿಸಿದ್ದರೆ ಅಥವಾ ಅಭ್ಯರ್ಥಿಯು ನ್ಯಾಯಾಂಗ ಅಧಿಕಾರಿಯಾಗಿ ಆಯ್ಕೆಗೊಂಡ ನಂತರ ಪರಿವೀಕ್ಷಣ ಅವಧಿಯಲ್ಲಿ ಸೇವೆಯಿಂದ ವಿಮುಕ್ತಿಗೊಂಡಿದ್ದರೆ;

(ಸಿ) ನೈತಿಕ ಅಧಃಪತನಕ್ಕೆ ಸೇರುವ ಯಾವುದೇ ಅಪರಾಧದಲ್ಲಿ ಅಪರಾಧಿಯೆಂದು ನಿರ್ಣಿತನಾಗಿದ್ದಲ್ಲಿ ಅಥವಾ ಉಚ್ಚ ನ್ಯಾಯಾಲಯ ಅಥವಾ ಕೇಂದ್ರ ಲೋಕಸೇವಾ ಆಯೋಗ ಅಥವಾ ಯಾವುದೇ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಿಗೆ ಹಾಜರಾಗುವುದರಿಂದ ಅಥವಾ ಇವು ನಡೆಸುವ ನೇಮಕಾತಿಗಳಿಗೆ ಶಾಶ್ವತವಾಗಿ ಅನರ್ಹಗೊಂಡಿರುವ ಅಥವಾ ಅನರ್ಹರಾಗಿರುವ ಅಥವಾ ಯಾವುದೇ ಬಾರ್ ಕೌನ್ಸಿಲ್‌ನ ನೋಂದಣಿ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದಲ್ಲಿ:

(ಡಿ) ಬಾರ್ ಕೌನ್ಸಿಲ್ ಅಥವಾ ಯಾವುದೇ ಶಿಸ್ತುಪಾಲನಾ ಪ್ರಾಧಿಕಾರ ದಂಡ ಅಥವಾ ಶಿಕ್ಷೆ ವಿಧಿಸಿದ್ದಲ್ಲಿ, ಅರ್ಜಿದಾರ ನ್ಯಾಯಾಂಗ ಹುದ್ದೆಗೆ ಸೂಕ್ತವಲ್ಲವೆಂದು ಆಯ್ಕೆ ಪ್ರಾಧಿಕಾರ ಅಭಿಪ್ರಾಯಪಟ್ಟಲ್ಲಿ;

(ಇ) ತನ್ನ ಅಭ್ಯರ್ಥಿಕೆಗೆ ಸಂಬಂಧಿಸಿದಂತೆ ಯಾವುದೇ ರೂಪದಲ್ಲಿ ನೇಮಕಾತಿ ಪ್ರಾಧಿಕಾರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವಿಸಿದ್ದಲ್ಲಿ;

(ಎಫ್) ಅಭ್ಯರ್ಥಿಯ ವೈವಾಹಿಕ ಸ್ಥಿತಿ ದ್ವಿಪತ್ನಿತ್ವ/ದ್ವಿಪತಿತ್ವ ಇದ್ದಲ್ಲಿ.

10.ಪರಿಶೀಲನೆಯ ಯಾವುದೇ ಸಮಯದಲ್ಲಿ ಅಥವಾ ನೇಮಕಾತಿಯ ಯಾವುದೇ ಹಂತದಲ್ಲಿ, ಅಭ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳು ಎಂದು ಕಂಡುಬಂದರೆ ಅಥವಾ ಅಭ್ಯರ್ಥಿಯು ಯಾವುದೇ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದಲ್ಲಿ ಅಥವಾ ಅವನು/ಅವಳು ಯಾವುದೇ ವಸ್ತುನಿಷ್ಠ ಸತ್ಯಗಳನ್ನು ತಿರುಚಿದರೆ ಅಥವಾ ಮೊಟಕುಗೊಳಿಸಿದರೆ, ಅವನ/ಅವಳ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುತ್ತದೆ. ನೇಮಕಾತಿಯ ನಂತರವೂ ಅಂತಹ ಯಾವುದೇ ನ್ಯೂನತೆಗಳು ಕಂಡುಬಂದರೆ, ಅವನ/ಅವಳ ನೇಮಕಾತಿಯನ್ನು ರದ್ದುಗೊಳಿಸಲಾಗುವುದು. ತಪ್ಪು, ಅಪೂರ್ಣ ಅಥವಾ ತಪ್ಪಾದ ಮಾಹಿತಿಯನ್ನು ಒದಗಿಸುವುದು ಅಭ್ಯರ್ಥಿಯ ಅನರ್ಹತೆಗೆ ಕಾರಣವಾಗುವುದಲ್ಲದೆ ಅಂತಹ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗುತ್ತಾನೆ/ಳೆ.

ಟಿಪ್ಪಣಿ: ಈ ಅಧಿಸೂಚನೆಯಲ್ಲಿ ಯಾವುದಾದರೂ ವ್ಯತ್ಯಾಸ/ಗೊಂದಲ ಕಂಡುಬಂದಲ್ಲಿ ಆಂಗ್ಲ ಭಾಷೆಯ ಆವೃತ್ತಿಯಲ್ಲಿರುವುದೇ ಅಂತಿಮವೆಂದು ಪರಿಗಣಿಸಬೇಕು/ಆಂಗ್ಲಭಾಷೆಯ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಳ್ಳುವುದು.

ಮಾಹಿತಿಗಾಗಿ ಮಾತ್ರ ಮೇಲಿನ ಅಧಿಸೂಚನೆ ನೀಡಲಾಗಿದೆ.

 

ಅಧಿಕೃತ ಅಧಿಸೂಚನೆಗಾಗಿ – CLICK HERE TO DOWNLOAD NOTIFICATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!