Essay- 49: ಜೀವನದ ಕಹಿಗಳೇ ಭವಿಷ್ಯದ ಪಾಠ

Essay- 49: ಜೀವನದ ಕಹಿಗಳೇ ಭವಿಷ್ಯದ ಪಾಠ

Essay- 49: ಜೀವನವು ಹೂವಿನ ಹಾಸಿಗೆಯಲ್ಲ; ಅದು ಏರಿಳಿತಗಳಿಂದ ಸಫಲತೆ-ವಿಫಲತೆಗಳಿಂದ, ಸಂತೋಷ ಮತ್ತು ದುಃಖಗಳಿಂದ ತುಂಬಿದ ಒಂದು ದೀರ್ಘ ಪಯಣವಾಗಿದೆ. ಸಂತೋಷದ ಕ್ಷಣಗಳು ನಮಗೆ ಸುರಕ್ಷಿತ ಭಾವನೆಯನ್ನುಂಟುಮಾಡಿದರೆ, ಅತ್ಯಂತ ಅರ್ಥಪೂರ್ಣ ಪಾಠಗಳನ್ನು ಕಲಿಸುವುದು ನೋವು ಮತ್ತು ಕಷ್ಟಗಳು ಮಾತ್ರ. ಬದುಕಿನ ಕಹಿ ಅನುಭವಗಳೇ ಉತ್ತಮ ಪಾಠಗಳನ್ನು ಕಲಿಸುತ್ತವೆ ಎಂಬ ಮಾತು ಈ ಸತ್ಯವನ್ನು ಸುಂದರವಾಗಿ ಅರಹುತ್ತದೆ. ಶಾಂತ ಸಮುದ್ರಗಳು ಶ್ರೇಷ್ಠ ನಾವಿಕರನ್ನು ಸೃಷ್ಟಿಸಲಾರವು ಎಂಬ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರ ಮಾತು ಇದನ್ನೇ ಧ್ವನಿಸುತ್ತದೆ.

ವಿವರಣೆ:

ಜಗತ್ತಿನ ತತ್ತ್ವ ಜ್ಞಾನಿಗಳು ದುಃಖವು ಮಾನವ ಬೆಳವಣಿಗೆಯ ಅತ್ಯಗತ್ಯ ಭಾಗವಾಗಿದೆ ಎಂದು ಬಹಳ ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ಭಾರತೀಯ ತತ್ತ್ವ ಶಾಸ್ತ್ರವು ತಪಸ್ಸಿನ ಪರಿಕಲ್ಪನೆಯ ಮೂಲಕ ಈ ದೃಷ್ಟಿಕೋನವನ್ನು ಎತ್ತಿಹಿಡಿದಿದೆ. ಆಧ್ಯಾತ್ಮಿಕ ಜ್ಞಾನೋದಯವನ್ನು ಪಡೆಯಲು ಕೈಗೊಳ್ಳುತ್ತಿದ್ದ ತಪಸ್ಸು ಕಷ್ಟಗಳನ್ನು ಸಹಿಸಿಕೊಳ್ಳುವ ಶಿಸ್ತನ್ನು ಕಲಿಸುತ್ತಿತ್ತು. ಇಂದು ಪ್ರತಿಯೊಬ್ಬನ ಬದುಕು ಒಂದು ತಪಸ್ಸೇ ಆಗಿದೆ. ತಪಸ್ಸೆಂದರೆ ಕಾಡಿನಲ್ಲಿ ಕುಳಿತುಕೊಳ್ಳುವುದಲ್ಲ. ನಾಗರಿಕ ಸಮಾಜದಲ್ಲಿದ್ದುಕೊಂಡೇ ಉನ್ನತಿಯತ್ತ, ಸಾಧನೆಯತ್ತ ಸಾಗುವುದು. ಈ ಉನ್ನತಿ, ಸಾಧನೆ ಸಾಧ್ಯವಾಗಲು ಸಹನೆ ಬೇಕು, ತಪ್ಪುಗಳಿಂದ ಕಲಿಯುವ ಮನಸ್ಸಿರಬೇಕು.

ಕಾಡು ಕಲ್ಲೊಂದು ಮೂರ್ತಿಯಾಗಿ ರೂಪುಗೊಂಡು ಜಗತ್ತಿನಿಂದ ಪೂಜಿಸಿಕೊಳ್ಳುವಂತಾಗಬೇಕಾದರೆ ಅದು ಸಾವಿರಾರು ಉಳಿಯ ಪೆಟ್ಟುಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಸಹಿಸಿಕೊಳ್ಳದೇ ಒಡೆದು ಹೋಗುವ ಕಲ್ಲನ್ನು ಶಿಲ್ಪಿ ಪಕ್ಕಕ್ಕೆ ಎಸೆಯುತ್ತಾನೆ. ಗಟ್ಟಿಯಿರುವ ಮತ್ತೊಂದನ್ನು ಎತ್ತಿಕೊಳ್ಳುತ್ತಾನೆ. ಹಾಗೆಯೇ, ನಮ್ಮ ಬಾಲ್ಯದಿಂದ ಮುಪ್ಪಿನವರೆಗೂ ಬರುವ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾದರೆ ನಮ್ಮ ಬದುಕು ಒಡೆದ ಕಲ್ಲಿನಂತಾಗುತ್ತದೆ. ಸಮಸ್ಯೆಗಳಿಗೆ, ಕಷ್ಟಗಳಿಗೆ ಬೆನ್ನು ತೋರಿಸಿದರೆ, ಅವಕಾಶಗಳಿಗೆ ಬೆನ್ನು ತೋರಿಸಿದಂತೆಯೇ.

ಕೀಡೆಯೊಂದು (ಕೀಟ) ಚಿಟ್ಟೆಯಾಗುವ ಪ್ರಕ್ರಿಯೆಯನ್ನು, ಸನ್ನಿವೇಶವನ್ನು ನಾವು ಗಮನಿಸಬೇಕು. ಗೂಡಿನೊಳಗೆ ಬಂದಿಯಾದ ಕ್ರೀಡೆ ಸುಂದರ ಚಿಟ್ಟೆಯಾಗಿ ರೂಪಾಂತರಗೊಳ್ಳಲು ಒಂದಿಷ್ಟು ಕಾಯಬೇಕು; ಕಷ್ಟಪಡಬೇಕು. ಚಿಟ್ಟೆಯಾಗುವ ಹಂತದಲ್ಲಿದ್ದ ಗೂಡಿನೊಳಗಿಂದ ಹೊರಬರಲು ತಿಣುಕುತ್ತಿದ್ದ ಆ ಜೀವಿಯನ್ನು ನೋಡಿ ಮರುಕ ಪಟ್ಟ ಅದ್ಯಾವನೋ ಪುಣ್ಯಾತ್ಮ ಆ ಗೂಡಿನ ಬಾಗಿಲನ್ನು ಕೊಯ್ದು ದೊಡ್ಡದು ಮಾಡಿದನಂತೆ. ಆ ಜೀವಿಯೇನೋ ಸರಳವಾಗಿ ಹೊರಗೆ ಬಂತು. ಆದರೆ, ಅದು ಸುಂದರ ಚಿಟ್ಟೆಯಾಗಿ ಹಾರಲೇ ಇಲ್ಲ. ನೆಲದಲ್ಲೇ ಬಳಲಿ, ಬಸವಳಿದು ಸತ್ತುಹೋಯಿತು.

ಹೋರಾಟ ಮತ್ತು ಸ್ವಯಂ ನಿಯಂತ್ರಣವು ಆತ್ಮವನ್ನು ಶುದ್ದೀಕರಿಸುತ್ತದೆ ಮತ್ತು ಬುದ್ದಿವಂತಿಕೆಗೆ ಕಾರಣವಾಗುತ್ತದೆ ಎಂಬುದು ಭಗವದ್ಗೀತೆಯ ಸಂದೇಶವಾಗಿದೆ.

ಬೌದ್ಧಧರ್ಮವು ದುಃಖವನ್ನು ಜೀವನದ ಅನಿವಾರ್ಯ ಸತ್ಯವೆಂದು ಒಪ್ಪಿಕೊಳ್ಳುವುದರೊಂದಿಗೆ – ಪ್ರಾರಂಭವಾಗುತ್ತದೆ. ಬುದ್ಧನ ಪ್ರಕಾರ, ದುಃಖವನ್ನು ಅರ್ಥಮಾಡಿ ಕೊಳ್ಳುವ ಮತ್ತು ಮೀರುವ ಮೂಲಕ ಮಾತ್ರ ನಾವು ನಿಜವಾದ – ಜ್ಞಾನೋದಯವನ್ನು ಸಾಧಿಸಬಹುದು.

ಕಷ್ಟಗಳು ಶಿಕ್ಷೆಗಳಲ್ಲ; ಆದರೆ ತಾಳ್ಮೆ, ಧೈರ್ಯ ಮತ್ತು ಸದ್ಗುಣವನ್ನು ಬೆಳೆಸಿಕೊಳ್ಳುವ ಅವಕಾಶಗಳು ಎಂದು ಬಹುತೇಕ ತತ್ವ ಜ್ಞಾನಿಗಳು ನಂಬಿದ್ದರು.

ಕಹಿ ಅನುಭವಗಳು ನಮ್ಮ ಊಹೆಗಳನ್ನು ಅಲುಗಾಡಿಸುತ್ತವೆ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಒತ್ತಾಯಿಸುತ್ತವೆ. ನಾವು ವಿಫಲವಾದಾಗ, ನಾವು ನಮ್ಮ ಆಯ್ಕೆಗಳು, ವರ್ತನೆಗಳು ಮತ್ತು ಮಿತಿಗಳನ್ನು ಪ್ರಶ್ನಿಸಲು ಪ್ರಾರಂಭಿಸುತ್ತೇವೆ. ಇದು ಬೆಳವಣಿಗೆ ಮತ್ತು ಸ್ವಯಂ ತಿದ್ದುಪಡಿಗೆ ದಾರಿ ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ತಪ್ಪುಗಳನ್ನು ಪಾಠಗಳಾಗಿ ಪರಿವರ್ತಿಸುತ್ತದೆ.

ಆಧುನಿಕ – ಮನೋವಿಜ್ಞಾನವು ಆಘಾತದ ನಂತರದ ಬೆಳವಣಿಗೆ (“post- traumatic growth”) ಎಂಬ ಪರಿಕಲ್ಪನೆಯ ಮೂಲಕ ಇದನ್ನು ಬೆಂಬಲಿಸುತ್ತದೆ. ಅನಾರೋಗ್ಯ, ನಷ್ಟ ಅಥವಾ ಆಘಾತದಂತಹ ಪ್ರಮುಖ ಪ್ರತಿಕೂಲಗಳನ್ನು ಅನುಭವಿಸುವ ಮತ್ತು ಜಯಿಸುವ ಜನರು ಹೆಚ್ಚಾಗಿ ಬಲಶಾಲಿ, ಬುದ್ಧಿವಂತ ಮತ್ತು ಹೆಚ್ಚು ಸಹಾನುಭೂತಿಯುಳ್ಳವರಾಗಿ ಹೊರಹೊಮ್ಮುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

ಮೂರ್ಖನು ತನ್ನ ಗೆಳೆಯರಿಂದ ಕಲಿಯುವುದಕ್ಕಿಂತ ಹೆಚ್ಚಿನದನ್ನು ಬುದ್ದಿವಂತನು ತನ್ನ ವೈರಿಗಳಿಂದ ಕಲಿಯುತ್ತಾನೆ ಎಂಬ ಮಾತು ಅರ್ಥಪೂರ್ಣವಾಗಿದೆ.

ಹಿನ್ನಡೆಯೇ ಅವಕಾಶ:

ಇತಿಹಾಸವು, ಕಹಿ ಅನುಭವಗಳು ವೈಯಕ್ತಿಕ ಬೆಳವಣಿಗೆಯ ಅಡಿಪಾಯವಾಗುತ್ತವೆ ಎಂಬುದನ್ನು ತೋರಿಸುವ ಉದಾಹರಣೆಗಳಿಂದ ತುಂಬಿ ಹೋಗಿದೆ.

ಅಮೆರಿಕದ ಶ್ರೇಷ್ಠ ಅಧ್ಯಕ್ಷರಲ್ಲಿ ಒಬ್ಬರಾಗಿದ್ದ ಅಬ್ರಹಾಂ ಲಿಂಕನ್ ವ್ಯಾಪಾರ,ಪ್ರೀತಿ ಮತ್ತು ರಾಜಕೀಯದಲ್ಲಿ ಪುನರಾವರ್ತಿತ ವೈಫಲ್ಯಗಳನ್ನು ಎದುರಿಸಿದ್ದರು. ಪ್ರತಿಯೊಂದು ವೈಫಲ್ಯವು ಅವರ ದೃಢಸಂಕಲ್ಪ, ಸಹಾನುಭೂತಿ ಮತ್ತು ನಾಯಕತ್ವ ಕೌಶಲಗಳನ್ನು ಬಲಪಡಿಸಿತು. ಅದೇ ರೀತಿ, ಶ್ರೇಷ್ಠ ಚಿಂತಕರು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ಶಕ್ತಿ ಮತ್ತು ಸೃಜನಶೀಲತೆಯನ್ನು ಹೋರಾಟಗಳು ಮತ್ತು ನಿರಾಕರಣೆಗಳಿಂದಲೇ ಪಡೆದುಕೊಂಡಿದ್ದಾರೆ.

ಆಧುನಿಕ ಜಗತ್ತಿನಲ್ಲಿ, ಸ್ಟೀವ್ ಜಾಬ್ ಮತ್ತು ಧೀರೂಭಾಯಿ ಅಂಬಾನಿಯವರ ಕಥೆಗಳು ಹಿನ್ನಡೆಗಳನ್ನು ಅವಕಾಶಗಳಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ವಿವರಿಸುತ್ತದೆ. ಸಾವಿರ ಸೋಲಿನ ನಂತರವೂ ಜಗತ್ತಿಗೆ ಬೆಳಕು ನೀಡಿದ ವಿದ್ಯುತ್ ಬಲ್ಬನ್ನು ಕಂಡುಹಿಡಿದ ಥಾಮಸ್‌ ಅಲ್ವಾ ಎಡಿಸನ್ ಅವರ ದೃಷ್ಟಾಂತವೂ ನಮ್ಮ ಮುಂದಿದೆ.

ಸಾಮಾನ್ಯ ಜೀವನದಲ್ಲಿಯೂ ಸಹ, ವೈಯಕ್ತಿಕ ನಷ್ಟಗಳು ಅಥವಾ ಅನಾರೋಗ್ಯಗಳನ್ನು ಅನುಭವಿಸಿದ ಜನರು ಜೀವನ ಮತ್ತು ಸಂಬಂಧಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ಒಂಟಿತನವನ್ನು ಎದುರಿಸಿದ ವ್ಯಕ್ತಿಯು ಒಡನಾಟದ ಮೌಲ್ಯವನ್ನು ಕಲಿಯುತ್ತಾನೆ; ರೋಗದ ವಿರುದ್ಧ ಹೋರಾಡಿದವನು ಉತ್ತಮ ಆರೋಗ್ಯ ಹೊಂದುವುದನ್ನು ಕಲಿಯುತ್ತಾನೆ. ಹೀಗಾಗಿ, ಕಹಿ ಅನುಭವಗಳು ನಮ್ಮ ಭಾವನಾತ್ಮಕ ಬುದ್ದಿವಂತಿಕೆಯನ್ನು ಪರಿಷ್ಕರಿಸುತ್ತವೆ ಮತ್ತು ನಮ್ಮನ್ನು ಹೆಚ್ಚು ಮಾನವೀಯವಾಗಿಸುತ್ತವೆ.

ಕಹಿಯಿಂದ ವಿಕಸನ:

ವ್ಯಕ್ತಿಗಳು ಕಷ್ಟಗಳಿಂದ ಕಲಿಯುವಂತೆಯೇ, ಸಮಾಜ, ದೇಶಗಳು ಸಹ ಕಹಿ ಅನುಭವಗಳ ಮೂಲಕ ವಿಕಸನಗೊಳ್ಳುತ್ತವೆ. ಬಿಕ್ಕಟ್ಟುಗಳು ನ್ಯೂನತೆಗಳನ್ನು ಬಹಿರಂಗಪಡಿಸಿದ . ನಂತರವೇ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳು ಹೆಚ್ಚಾಗಿ ಸುಧಾರಣೆಗೆ ಒಳಗಾಗುತ್ತವೆ ಎಂಬುದನ್ನು ಇತಿಹಾಸ ತೋರಿಸುತ್ತದೆ. 1975-77ರ ನಡುವೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯು ಭಾರತೀಯರಿಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಗಳ ಮಹತ್ವವನ್ನು ಮನದಟ್ಟು ಮಾಡಿತು.

ಅದೇ ರೀತಿ, ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದೆಂದು ಹೆಸರಿಸಬಹುದಾದ 1984 ರ ಭೋಪಾಲ್ ಅನಿಲ ದುರಂತ, 1986ರ ಚರ್ನೋಬಿಲ್ ಅಣುಶಕ್ತಿ ಸ್ಥಾವರ ದುರಂತಗಳಿಂದ ಸರಕಾರಗಳು ಪರಿಸರ ಮತ್ತು ಸುರಕ್ಷತಾ ನ್ನ ಕಾನೂನುಗಳನ್ನು ಹೇಗೆ ಬಲಪಡಿಸಬೇಕೆಂಬುದನ್ನು ಕಲಿತವು.

1991ರಲ್ಲಿ ಎದುರಾದ ಸಂದಾಯ ಬಾಕಿ ಬಿಕ್ಕಟ್ಟು ಭಾರತಕ್ಕೆ ಹೊಸ – ಆರ್ಥಿಕ ದಿಕ್ಕನ್ನು ತೋರಿಸಿತು. 2008-10ರ ಅವಧಿಯಲ್ಲಿ ಉಂಟಾದ ಜಾಗತಿಕ ಆರ್ಥಿಕ ಹಿಂಜರಿಕೆ ಭಾರತದ ಆಂತರಿಕ ” ಆರ್ಥಿಕ ಸ್ಥರತೆಯನ್ನು ಮತ್ತಷ್ಟು ಬಲಪಡಿಸಿತು.

ಕೋವಿಡ್ 2019 ಒಂದು ವ್ಯವಸ್ಥೆಯಾಗಿ ನಮ್ಮ ಬಲಹೀನತೆಗಳನ್ನು ಬಯಲಿಗೆಳೆಯಿತು  ಮತ್ತು ಅಂತಹ ಸಂಕಷ್ಟ ಮತ್ತೆ ಎದುರಾದರೆ ಹೇಗೆ ನಿಭಾಯಿಸಬೇಕೆಂಬ ಪಾಠ ಕಲಿಸಿತು. ಇದೀಗ ಎದುರಾಗಿರುವ ಮಧ್ಯಪ್ರಾಚ್ಯ ಬಿಕ್ಕಟ್ಟು (ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದ ಭಾರತ ತನ್ನ ಇಂಧನ ಭದ್ರತೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬ ಪಾಠವನ್ನು ಕಲಿಸುತ್ತಿದೆ.

ಉಪಸಂಹಾರ:

ವಿಪತ್ತು ಯಾವಾಗಲೂ ಬೆಳವಣಿಗೆಗೆ ಕಾರಣವಾಗುವುದಿಲ್ಲ ಎಂಬುದನ್ನೂ ಸಹ ಒಪ್ಪಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ, ಬಡತನ, ನಿಂದನೆಗಳು ಬುದ್ದಿವಂತಿಕೆಯ ಬದಲು ಆಘಾತ, ಭಯ ಅಥವಾ ಅಸಹಾಯಕತೆಯನ್ನು ಉಂಟುಮಾಡ ಬಹುದು. ನೋವನ್ನು ರಚನಾತ್ಮಕವಾಗಿ ಸಂಸ್ಕರಿಸದಿದ್ದರೆ ಅದು ಸಿನಿಕತನ, ಅಪನಂಬಿಕೆ ಅಥವಾ ನಿರಾಸಕ್ತಿಗೆ ಕಾರಣವಾಗಬಹುದು. ಆದ್ದರಿಂದ, ನೋವನ್ನು ಪ್ರಗತಿಯಾಗಿ ಪರಿವರ್ತಿಸಲು ಸಮಾ ಲೋಚನೆ, ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಪುನರ್ವಸತಿಯಂತಹ ಕಾರ್ಯವಿಧಾನಗಳು ಅತ್ಯಗತ್ಯ. ಮಾನವೀಯ ಸಮಾಜದ ಗುರಿ ಕಷ್ಟವನ್ನು ಸೃಷ್ಟಿಸುವುದಲ್ಲ, ಆದರೆ ಅದರಿಂದ ಕಲಿಯುವುದು ಮತ್ತು ಭವಿಷ್ಯದಲ್ಲಿ ಅನಗತ್ಯ ನೋವನ್ನು ತಡೆಯುವುದಾಗಿದೆ.

Essay- 49

ಕೃಪೆ: vk

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!