Grant of additional increment: ಹೆಚ್ಚುವರಿ ವೇತನ ಬಡ್ತಿ ಕುರಿತು ಒಂದಿಷ್ಟು ಮಾಹಿತಿ.
Grant of additional increment to Government Servants who continue in the same post for 20 years without a single promotion in the entire service.
ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ 20 ವರ್ಷಗಳು ಅದೇ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ.
ದಿನಾಂಕ: 9.5.2002ರ ಸರ್ಕಾರಿ ಆದೇಶ ಸಂಖ್ಯೆ; ಎಫ್‌ಡಿ 13 ಎಸ್‌ಆರ್‌ಪಿ 2002ರಂತೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಒಂದು ಪದೋನ್ನತಿ ಇಲ್ಲದೆ 20 ವರ್ಷಗಳು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರೆ ಅಂತಹ ಸರ್ಕಾರಿ ನೌಕರರಿಗೆ ಒಂದು ಹೆಚ್ಚುವರಿ ವೇತನಬಡ್ತಿ ನೀಡಲಾಗುತ್ತದೆ. ಆದರೆ ಈ ಆದೇಶದ ಕಂಡಿಕೆ 6(ಆ) ರಂತೆ ಕನಿಷ್ಠ ಒಂದು ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ ಈ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡುವುದಿಲ್ಲ.
ಕಂಡಿಕೆ 6(ii) ರಲ್ಲಿ ನಮೂದಿಸಲಾಗಿರುವ ನೌಕರರನ್ನು ಹೊರತುಪಡಿಸಿ ರಾಜ್ಯ ವೇತನ ಶ್ರೇಣಿಗಳಲ್ಲಿ ಈ ಕೆಳಗೆ ನಮೂದಿಸಿರುವ ಮೊದಲ ಹನ್ನೊಂದು ವೇತನ ಶ್ರೇಣಿಗಳಲ್ಲಿ ಯಾವುದೇ ಒಂದು ಹುದ್ದೆಯಲ್ಲಿ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದೂ ಪದೋನ್ನತಿ ಪಡೆಯದೆ ಮುಂದುವರೆದಿರುವ ಅಥವಾ ಮುಂದುವರೆಯುವ ಸರ್ಕಾರಿ ನೌಕರನಿಗೆ ಆ ಹುದ್ದೆಗೆ ನಿಗಧಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಅವನು ಹೊಂದಿರುವ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ, ಆಯಾ ಪ್ರಕರಣಕ್ಕನ್ವಯ, ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ದಿನಾಂಕ 1-4-2002 ರಿಂದ ಜಾರಿಗೆ ಬರುವಂತೆ ಅಥವಾ ಇಪ್ಪತ್ತು ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ, ಇದರಲ್ಲಿ ಯಾವುದು ನಂತರವೋ ಆ ದಿನಾಂಕದಿಂದ ಮಂಜೂರು ಮಾಡತಕ್ಕದ್ದು.
ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಹಾಗೂ ಅರ್ಹತಾ ಷರತ್ತುಗಳು..
2.ಈ ಕೆಳಕಂಡ ಷರತ್ತುಗಳನ್ನು ಪೂರೈಸಿದಲ್ಲಿ ನೇಮಕಾತಿ ಪ್ರಾಧಿಕಾರವೇ ಈ ಆದೇಶದನ್ವಯ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತದೆ:
ಅ) ನೌಕರನು ತೃಪ್ತಿಕರ ಸೇವಾ ದಾಖಲೆ ಹೊಂದಿರಬೇಕು; ತೃಪ್ತಿಕರ ಸೇವೆಯನ್ನು ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಪದೋನ್ನತಿಗೆ ಅರ್ಹತೆ ನಿರ್ಧರಿಸುವ ರೀತಿಯಲ್ಲಿಯೇ ನಿರ್ಧರಿಸತಕ್ಕದು.
ಆ) ಆ ಹುದ್ದೆಗೆ ನೇಮಕಾತಿ ನಿಯಮಗಳಲ್ಲಿ ಪದೋನ್ನತಿಗೆ ಅವಕಾಶ ಕಲ್ಪಿಸಿರುವಲ್ಲಿ, ಪದೋನ್ನತಿಗಾಗಿ ನಿಗಧಿಪಡಿಸಿರುವ ಅರ್ಹತೆಯನ್ನು ಅವರು ಹೊಂದಿರಬೇಕು. ಆದಾಗ್ಯೂ, ಈ ಕೆಳಕಂಡಂತೆ ಸಡಿಲಿಕೆ ಕಲ್ಪಿಸಿದೇ
(1) ಮೇಲಿನ ಹುದ್ದೆಗೆ ಪದೋನ್ನತಿಗೆ ಶೈಕ್ಷಣಿಕ ಅಥವಾ ವೃತ್ತೀಯ ವಿದ್ಯಾರ್ಹತೆ ನಿಗಧಿಪಡಿಸಿರುವಲ್ಲಿ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಗೆ ಆ ಅರ್ಹತೆಯನ್ನು ಪಡೆದಿರಲೇಬೇಕೆಂದು ಒತ್ತಾಯಿಸಬಾರದು. ಮಂಜೂರಾತಿಗಾಗಿ ಸರ್ಕಾರಿ ನೌಕರನು ಆದರೆ ಹೆಚ್ಚುವರಿ ವೇತನ ಬಡ್ತಿ ತಾನು ಹೊಂದಿರುವ ಹುದ್ದೆಗೆ ನಿಗಧಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಇಲಾಖಾ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿರಲೇಬೇಕು.
(2) ಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ, ಶೈಕ್ಷಣಿಕ ವಿದ್ಯಾರ್ಹತೆ ಪಡೆದಿರಬೇಕೆಂದು ಅಥವಾ ಕನ್ನಡ ಭಾಷಾ ಪರೀಕ್ಷೆ ಅಥವಾ ಪದೋನ್ನತಿಗಾಗಿ ನಿಗಧಿಪಡಿಸಿರುವ ಇಲಾಖಾ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲೇ ಬೇಕೆಂದು ಒತ್ತಾಯಿಸಬಾರದು.
(3) ವಾಹನ ಚಾಲಕರಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಪದೋನ್ನತಿಗಾಗಿ ನಿಗಧಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಲೇ ಬೇಕೆಂದು ಒತ್ತಾಯಿಸಬಾರದು.
ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಉದ್ದೇಶಕ್ಕಾಗಿ ಗಣನೆಗೆ ತೆಗೆದುಕೊಳ್ಳಬೇಕಾದ ಸೇವೆ
3.ಈ ಕೆಳಗಿನ ಸೇವೆಯನ್ನು ಹೊರತುಪಡಿಸಿ ಒಬ್ಬ ಸರ್ಕಾರಿ ನೌಕರನು ತಾನು ಹೊಂದಿರುವ ಹುದ್ದೆಯಲ್ಲಿ 20 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸತತ ಸೇವೆ ಸಲ್ಲಿಸಿರಬೇಕು.
(i) ಸ್ಥಳೀಯ ಅಭ್ಯರ್ಥಿ ಸೇವೆ.
ii) ಕಾರ್ಯಧೃತ ಸಿಬ್ಬಂದಿ ಸೇವೆ.
(iii) ವೃಂದ ಅಥವಾ ಹುದ್ದೆ ಬದಲಾವಣೆಯ ಪರಿಣಾಮವಾಗಿ ಯಾವುದೇ ಇಲಾಖೆ ಅಥವಾ ಸೇವೆಯಲ್ಲಿ ಪದೋನ್ನತಿಗಾಗಿ ಜೇಷ್ಠತೆಯನ್ನು ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿತವಾಗದ ಒಂದು ಇಲಾಖೆಯ ಹಿಂದಿನ ಹುದ್ದೆ ಅಥವಾ ವೃಂದದಲ್ಲಿ ಸಲ್ಲಿಸಿದ ಸೇವೆ; ಮತ್ತು
(iv) ಒಂದೇ ಹುದ್ದೆಯಲ್ಲಿ 20 ವರ್ಷಗಳ ಸೇವೆಯನ್ನು ಲೆಕ್ಕ ಮಾಡುವಾಗ ಪದೋನ್ನತಿಗಾಗಿ ಜೇಷ್ಠತೆಯನ್ನು ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿಸಲ್ಪಡದ ಇತರ ಯಾವುದೇ ಸೇವೆ.
ಟಿಪ್ಪಣಿ: ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಗಾಗಿ ನಿಗಧಿತ ಸೇವೆಯನ್ನು ಎಣಿಕೆ ಮಾಡುವಾಗ ಕಾಲಕಾಲಕ್ಕೆ ಜಾರಿಯಲ್ಲಿರುವ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಾವಳಿ, 1957 ರನ್ವಯ ಜೇಷ್ಠತೆ ನಿರ್ಧರಿಸುವ ಉದ್ದೇಶಕ್ಕೆ ಪರಿಗಣಿಸಲ್ಪಡುವ ಸೇವೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.
4.ಹೆಚ್ಚುವರಿ ವೇತನ ಬಡ್ತಿಯನ್ನು ಈ ಕೆಳಕಂಡಂತೆ ಪಾವತಿ ಮಾಡಿ ಕ್ರಮಗೊಳಿಸತಕ್ಕದ್ದು.
ಹೆಚ್ಚುವರಿ ವೇತನ ಬಡ್ತಿಯ ದರ.
(i) ಹೆಚ್ಚುವರಿ ವೇತನ ಬಡ್ತಿಯನ್ನು ಸರ್ಕಾರಿ ನೌಕರನು ಹೊಂದಿರುವ ವೇತನ ಶ್ರೇಣಿಯಲ್ಲಿ ಅವನಿಗೆ ಲಭ್ಯವಾಗುವ ಮುಂದಿನ ವಾರ್ಷಿಕ ವೇತನ ಬಡ್ತಿಯ ದರದಲ್ಲಿ ನೀಡತಕ್ಕದ್ದು.
(ii) ಸರ್ಕಾರಿ ನೌಕರನು ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತವನ್ನು ತಲುಪಿದ್ದಲ್ಲಿ ಅಥವಾ ಅವನಿಗೆ ಸ್ಥಗಿತ ವೇತನ ಬಡ್ತಿ/ಬಡ್ತಿಗಳನ್ನು ಮಂಜೂರು ಮಾಡಿದ್ದಲ್ಲಿ, ಹೆಚ್ಚುವರಿ ವೇತನ ಬಡ್ತಿಯನ್ನು ಅವನು ಕಡೆಯದಾಗಿ ಪಡೆದ ವಾರ್ಷಿಕ ವೇತನ ಬಡ್ತಿಯ ದರದಲ್ಲಿ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತ ಮೀರಿ ಮಂಜೂರು ಮಾಡತಕ್ಕದ್ದು ಮತ್ತು ಅದನ್ನು ‘ವೈಯಕ್ತಿಕ ವೇತನ’ ಎಂದು ಪರಿಗಣಿಸತಕ್ಕದ್ದು.
(iii) ಈ ಆದೇಶದನ್ವಯ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಿದ ಪರಿಣಾಮವಾಗಿ ಸರ್ಕಾರಿ ನೌಕರನು ಕಾಲಿಕ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತ ತಲುಪಿದಲ್ಲಿ, ಅವನು ಕಡೆಯದಾಗಿ ಪಡೆದ ವಾರ್ಷಿಕ ವೇತನ ಬಡ್ತಿಯ ದರಕ್ಕೆ ಸಮನಾಗಿ ವಾರ್ಷಿಕ ವೇತನ ಬಡ್ತಿಯನ್ನು ಕಾಲಿಕ ವೇತನ ಶ್ರೇಣಿಯಲ್ಲಿ ಅದು ಬಾಕಿ ಇರುವ ದಿನಾಂಕದಿಂದ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ ಮತ್ತು ಮಂಜೂರು ಮಾಡಲಾದ ಹೆಚ್ಚುವರಿ ವೇತನ ಬಡ್ತಿಯನ್ನು ‘ವೈಯಕ್ತಿಕ ವೇತನ’ ಎಂದು ಪರಿಗಣಿಸತಕ್ಕದ್ದು.
ಟಿಪ್ಪಣಿ: ಈ ಅದೇಶದನ್ವಯ ಮಂಜೂರು ಮಾಡಲಾದ ಹೆಚ್ಚುವರಿ ವೇತನ ಬಡ್ತಿಯ ಪರಿಣಾಮದಿಂದ ಉದ್ಭವಿಸಿದ ‘ವೈಯಕ್ತಿಕ ವೇತನ’ವನ್ನು ವೇತನ ಶ್ರೇಣಿಗಳ ಪರಿಷ್ಕರಣೆ ಮತ್ತು ಪದೋನ್ನತಿ ನಂತರದ ವೇತನ ನಿಗಧಿ ಸೇರಿದಂತೆ ಎಲ್ಲಾ ಉದ್ದೇಶಗಳಿಗೆ ಮೂಲ ವೇತನ ಎಂದು ಪರಿಗಣಿಸತಕ್ಕದ್ದು.
ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿ ಒಂದು ಬಾರಿ ಮಾತ್ರ:
5.ಈ ಆದೇಶದನ್ವಯ ಹೆಚ್ಚುವರಿ ವೇತನ ಬಡ್ತಿಯನ್ನು ಸರ್ಕಾರಿ ನೌಕರನು ಸರ್ಕಾರದಲ್ಲಿ ಸಲ್ಲಿಸುವ ತನ್ನ ಇಡೀ ಸೇವಾ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪಡೆಯಲು ಅರ್ಹನಾಗುವುದಿಲ್ಲ.
ಅನ್ವಯಿಸುವಿಕೆ!
6 (1) ಕಂಡಿಕೆ 2 ರಲ್ಲಿರುವ ಉಪಬಂಧಗಳಿಗೆ ಒಳಪಟ್ಟು, ಈ ಆದೇಶಗಳು ಯಾರ ಸೇವಾ ಷರತ್ತುಗಳು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಉಪಬಂಧಗಳಿಗೆ ಒಳಪಡುತ್ತವೋ ಆ ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯವಾಗುತ್ತವೆ.
6 (ii) ಈ ಆದೇಶಗಳು ಇವರಿಗೆ ಅನ್ವಯವಾಗತಕ್ಕದ್ದಲ್ಲ!
(ಅ) ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಾಥಮಿಕ/ಪ್ರೌಢ ಶಾಲೆಗಳ ಎಲ್ಲಾ ವರ್ಗದ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜುಗಳ (ಕಿರಿಯ ಕಾಲೇಜುಗಳ) ಉಪನ್ಯಾಸಕರುಗಳಿಗೆ.
(ಅ) ಈಗಾಗಲೇ ಕನಿಷ್ಠ ಒಂದು ಪದೋನ್ನತಿ ಪಡೆದಿರುವ ಸರ್ಕಾರಿ ನೌಕರರಿಗೆ.
(ಇ) ಕಾರ್ಯಧೃತ ಸಿಬ್ಬಂದಿ ವರ್ಗಕ್ಕೆ ಸೇರಿದವರಿಗೆ.
(ಈ) ಸಾದಿಲ್ವಾರು ನಿಧಿಯಿಂದ ಸಂಬಳ ನೀಡಲಾಗುತ್ತಿರುವವರಿಗೆ.
(ಉ) ಸ್ಥಳೀಯ ಅಭ್ಯರ್ಥಿಗಳಾಗಿ ನೇಮಕಾತಿಗೊಂಡವರಿಗೆ.
(ಊ) ಸಂಚಿತ ವೇತನ ಅಥವಾ ಅರೆಕಾಲಿಕ ಆಧಾರದ ಮೇರೆಗೆ ನೇಮಕಾತಿಗೊಂಡವರಿಗೆ:
(ಋ) ಸ್ವಇಚ್ಛೆಯಿಂದ ತಮ್ಮ ಪದೋನ್ನತಿಯನ್ನು ಬಿಟ್ಟುಕೊಟ್ಟ ಸರ್ಕಾರಿ ನೌಕರರಿಗೆ.
(ಮಾ) ಸರ್ಕಾರವು, ತನ್ನ ಆದೇಶದ ಮುಖಾಂತರ, ಈ ಆದೇಶಗಳ ಕಾರ್ಯಾಚರಣೆಯಿಂದ ನಿರ್ಧಿಷ್ಟವಾಗಿ ಹೊರತುಪಡಿಸಬಹುದಾದ ಯಾವುದೇ ಇತರ ವರ್ಗ ಅಥವಾ ಪ್ರವರ್ಗದ ವ್ಯಕ್ತಿಗಳಿಗೆ.
7.ಈ ಆದೇಶಗಳು 2002ರ ಏಪ್ರಿಲ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುತ್ತದೆ.
8.ಈ ಆದೇಶದನ್ವಯ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಿ ಹೊರಡಿಸಿದ ಆದೇಶದ ಪ್ರತಿಯನ್ನು ಆರ್ಥಿಕ ಇಲಾಖೆ (ಸೇವೆಗಳು-2) ಮತ್ತು ಸಂಬಂಧಿಸಿದ ಆಡಳಿತ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ ಕಳುಹಿಸಿ ಕೊಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
CLICK HERE TO DOWNLOAD ORDER