PM Vidyalaxmi- BANK OF BARODA
PM Vidyalaxmi ಯೋಜನೆಗೆ ಬ್ಯಾಂಕ್ ಆಫ್ ಬರೋಡಾ ಒತ್ತಾಸೆ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಒತ್ತಾಸೆ ನೀಡುವ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ನೆರವಿಗೆ ಬ್ಯಾಂಕ್ ಆಫ್ ಬರೋಡಾ ಒತ್ತಾಸೆಯನ್ನು ನೀಡಿದೆ.
ಪಿಎಂ-ವಿದ್ಯಾಲಕ್ಷ್ಮಿ ಅಧಿಕೃತ ಪೋರ್ಟಲ್ ಮೂಲಕ ಬ್ಯಾಂಕ್ ಆಫ್ ಬರೋಡಾದಿಂದ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ವಿದ್ಯಾರ್ಥಿ ಗಳಿಗೆ ನೆರವಾಗಲು ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ 12 ಶಿಕ್ಷಣ ಸಾಲ ಮಂಜೂರಾತಿ ಘಟಕ (ಇಎಲ್‌ಎಸ್‌ಸಿ) ಮತ್ತು 11 ರಿಟೇಲ್ ಅಸೆಟ್ ಮಂಜೂರಾತಿ ಘಟಕ (ಆರ್‌ಎಪಿಸಿ) ಹೊದಿದೆ. ಜತೆಗೆ ಬ್ಯಾಂಕ್‌ನ 8,300ಕ್ಕೂ ಹೆಚ್ಚು ಶಾಖೆಗಳಿವೆ. ವಿದ್ಯಾರ್ಥಿಗಳಿಗೆ ನೆರವಿನ ಹಸ್ತಚಾಚುವ ಈ ಉಪಕ್ರಮವನ್ನು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಮೊದಲಿಯಾರ್ ಇತ್ತೀಚೆಗೆ ಘೋಷಿಸಿದರು.
“ಪಿಎಂ-ವಿದ್ಯಾಲಕ್ಷ್ಮಿ ಯೋಜನೆಯು ಬಡವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನೆರವಾಗುತ್ತದೆ. ಇದನ್ನು ಪೋರ್ಟಲ್ ಮೂಲಕ ಯಾವುದೇ ಅಡೆತಡೆ ಇಲ್ಲದೆ ಪಡೆಯಬಹುದು. ಇದಕ್ಕೆ ನಾವು ಕೈ ಜೋಡಿಸುತ್ತಿದ್ದೇವೆ ಎಂದು ಹೇಳಲು ಸಂತಸವಾಗುತ್ತದೆ,” ಎಂದರು.
ದೇಶದ ಅಗ್ರ 860 ಗುರುತಿಸಲಾದ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯಡಿ ಶಿಕ್ಷಣ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ. 7.5 ಲಕ್ಷ ರೂ.ಗಳವರೆಗಿನ ಸಾಲ ನೀಡಲು ಬ್ಯಾಂಕ್ ಗಳಿಗೆ ಕೇಂದ್ರ ಸರಕಾರವೇ ಶೇ. 75 ಕ್ರೆಡಿಟ್ ಗ್ಯಾರಂಟಿಯನ್ನು ಒದಗಿಸುತ್ತದೆ. ಇದಲ್ಲದೆ ಉದ್ದೇಶಿತ ಗುಂಪುಗಳಿಗೆ ಶಿಕ್ಷಣ ಸಾಲಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಈ ಯೋಜನೆಯು ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಬಡ್ಡಿ ಸಹಾಯಧನವನ್ನು ನೀಡುತ್ತದೆ.