SSLC ಪರೀಕ್ಷೆಯಲ್ಲಿ ಈ ಬಾರಿ ಕನಿಷ್ಠ ಉತ್ತೀರ್ಣರಾಗಲು ಶೇ.35 ಅಂಕಗಳನ್ನು ನಿಗದಿ
SSLC ಪರೀಕ್ಷೆಯಲ್ಲಿ ಈ ಬಾರಿ ಕನಿಷ್ಠ ಉತ್ತೀರ್ಣರಾಗಲು ಶೇ.35 ಅಂಕಗಳನ್ನು ನಿಗದಿ ಮಾಡಿದೆ.
ಕಳೆದ ವರ್ಷ ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಫಲಿತಾಂಶ ಕುಸಿತವಾಗಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇ.35ರಿಂದ ಶೇ.25ಕ್ಕೆ ಇಳಿಸಲಾಗಿತ್ತು. ಈ ವರ್ಷ ಹಿಂದಿನಂತೆ ಶೇ.35 ಅಂಕ ಪಡೆಯಲೇ ಬೇಕು. ಥಿಯರಿಯಲ್ಲಿ ಪ್ರಥಮ ಭಾಷೆಗೆ 35 ಹಾಗೂ ಇತರ ವಿಷಯಗಳಲ್ಲಿ ಕನಿಷ್ಠ 28 ಅಂಕ ಮತ್ತು ಆಂತರಿಕ ಅಂಕಗಳು ಸೇರಿ ಒಟ್ಟು 35 ಪಡೆದಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದ್ವಿತೀಯ ಪಿಯುಸಿಯ ಉತ್ತೀರ್ಣತಾ ಅಂಕಗಳಲ್ಲಿ ಬದಲಾವಣೆ ಇರುವುದಿಲ್ಲ. ಹಿಂದಿನ ನಿಯಮಗಳು ಅನ್ವಯವಾಗಲಿವೆ. ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಇಲಾಖೆ ವತಿಯಿಂದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಗೆ 8.96 ಲಕ್ಷ ನೋಂದಣಿ
ಎಸ್‌ಎಸ್‌ಎಲ್‌ಸಿಗೆ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 15,881 ಶಾಲೆಗಳ 8,42,817 ವಿದ್ಯಾರ್ಥಿಗಳು, 38,091 ಪುನರಾವರ್ತಿತ ಮತ್ತು 15,539 ಖಾಸಗಿ ಸೇರಿ ಒಟ್ಟು 8,96,447 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.ಇವರಲ್ಲಿ 3,35,468 ಬಾಲಕರು, 3,78,389 ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಇದ್ದಾರೆ. 2,818 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳು ಹೆಚ್ಚಳ
ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 8,69,968 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ 6,98,624 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ 8,96,447 ಹಾಗೂ ಪಿಯುಸಿಯಲ್ಲಿ 7,13,862 ವಿದ್ಯಾರ್ಥಿಗಳಿದ್ದಾರೆ. ಕ್ರಮವಾಗಿ 26,479 ಮತ್ತು 15,238 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.
1,662 ವಿಚಕ್ಷಣ ದಳಗಳು
ಎಸ್‌ಎಸ್‌ಎಲ್‌ಸಿಗೆ 2,818 ಸ್ಥಾನಿಕ, ಜಿಲ್ಲಾ ಹಂತದಲ್ಲಿ 410, ತಾಲೂಕು ಹಂತದಲ್ಲಿ 1,662 ವಿಚಕ್ಷಣ ದಳವನ್ನು ಪರೀಕ್ಷಾ ಭದ್ರತೆ ದೃಷ್ಟಿಯಿಂದ ನೇಮಿಸಲಾಗಿದೆ. ಪಿಯುಸಿಗೆ 2,342 ಸ್ಥಾನಿಕ ಜಾಗೃತ ದಳ ಮತ್ತು 504 ವಿಚಕ್ಷಣ ದಳ ನೇಮಿಸಲಾಗಿದೆ.
ಎಸ್‌ಎಸ್‌ಎಲ್‌ಸಿಗೆ 1,117 ಮತ್ತು ಪಿಯುಸಿಗೆ 365 ಪ್ರಶ್ನೆಪತ್ರಿಕೆ ವಿತರಣಾ ಮಾರ್ಗಗಳನ್ನು ಗುರುತು ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ 65 ಸಾವಿರ ಮತ್ತು ಪಿಯುಸಿಗೆ 31 ಸಾವಿರ ಮೌಲ್ಯಮಾಪಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಬಸವರಾಜೇಂದ್ರ, ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ, ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ಪಿಯು ಇಲಾಖೆ ನಿರ್ದೇಶಕಿ ಸಿಂಧು ಬಿ. ರೂಪೇಶ್ ಉಪಸ್ಥಿತರಿದ್ದರು.