History-01: ಕನ್ನಡ ನಾಡಿನ ಪರಿಚಯ-ವಿಜಯಪುರ ಜಿಲ್ಲೆ
History-01: ವಿಜಯ(ಬಿಜಾ) ಪುರ
ವಿಜಯ(ಬಿಜಾ) ಪುರ
ಇದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರ. ಇದನ್ನು ಬೆಂಗಳೂರಿನಿಂದ ಹುಬ್ಬಳ್ಳಿ-ಅಣ್ಣಿಗೇರಿ ಮಾರ್ಗವಾಗಿ ಮೋಟಾರಿನಲ್ಲಿಯಾಗಲಿ ಅಥವಾ ಗುಂತಕಲ್ಲು-ಗದಗು ಅಥವಾ ಹರಿಹರ-ಹುಬ್ಬಳ್ಳಿ ಮಾರ್ಗವಾಗಿ ರೈಲಿನಲ್ಲಿಯಾಗಲಿ ತಲುಪಬಹುದು. ಇದು ಬೆಂಗಳೂರಿಗೆ ರಸ್ತೆ ಮೂಲಕ ಸುಮಾರು ೩೮೮ ಮೈಲಿಗಳ ದೂರದಲ್ಲಿದೆ. ಇದು ವಾಸ್ತು, ಮೂರ್ತಿ, ಚಿತ್ರ ಶಿಲ್ಪಗಳ ದೃಷ್ಟಿಯಿಂದ ಕರ್ನಾಟಕದಲ್ಲಿಯೇ ಏಕೆ ಇಡೀ ಭರತಖಂಡದಲ್ಲೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಎಂಟು ಮೈಲಿಗಳ ಸುತ್ತಳತೆಯ ಕೋಟೆಯೊಳಗೆ ಈ ಊರು ಐದು ಚದರ ಮೈಲಿಗಳಷ್ಟು ವಿಸ್ತಾರವಾಗಿದೆ. ಭಾರತದಲ್ಲಿ ಚೊಕ್ಕವಾಗಿ ಉಳಿದಿರುವ ಕೆಲವೇ ಕೋಟೆಗಳಲ್ಲಿ ಬಿಜಾಪುರದ ಕೋಟೆಯೂ ಒಂದು. ಈ ಕೋಟೆಯ ಒಳಗೂ ಹೊರಗೂ ಅಸಂಖ್ಯಾತ ಪ್ರೇಕ್ಷಣೀಯ ಸ್ಮಾರಕಗಳು ಇರುತ್ತವೆ. ಚರಿತ್ರೆಯಂತೆ ಈಗ ಇದನ್ನು ‘ವಿಜಯುಪುರ’ ಎಂದು ಕರೆಯಲಾಗಿದೆ.
ಗೋಲಗುಮ್ಮಟ :
ಇದು ಬಿಜಾಪುರ ರೈಲ್ವೆ ನಿಲ್ದಾಣಕ್ಕೆ ಪಶ್ಚಿಮದಲ್ಲಿ ೨ ಫರ್ಲಾಂಗುಗಳ ದೂರದಲ್ಲಿ ಇದೆ. ಪ್ರವಾಸಿಗರು ಬಿಜಾಪುರವನ್ನು ಸಮೀಪಿಸುತ್ತಿದ್ದಂತೆ ಅವರ ಕಣ್ಣಿಗೆ ಮೊದಲು ಬೀಳುವುದು ಗೋಲಗುಮ್ಮಟ. ಈ ಗುಮ್ಮಟಕ್ಕೆ ವಿಶೇಷ ಆಲಂಕಾರಗಳೇನೂ ಇಲ್ಲದಿದ್ದರೂ ಇದು ಆಶ್ಚರ್ಯಕರ ಪ್ರಮಾಣದ ಕಟ್ಟಡ.
ಈ ಗೋಲಗುಮ್ಮಟವನ್ನು ಆಸಾರ್ ಮಹಲಿನ ಮೇಲಿನ ಹಜಾರದಿಂದ ನೋಡಿದರೆ ಇದರ ಚಿತ್ರ ಅತ್ಯಂತ ಆಶ್ಚರ್ಯಕರವಾದ ಪರಿಣಾಮದಿಂದ ಕಾಣುತ್ತದೆ. ಇಬ್ರಾಹಿಂ ಸುಲ್ತಾನನು ಕಟ್ಟಿದ ಇಬ್ರಾಹಿಂ ರೋಜಾವು ಅಲಂಕರಣದಲ್ಲಿ ಮತ್ತು ಭವ್ಯತೆಯಲ್ಲಿ ಕೊನೆಯ ಮಾತಾಗಿದ್ದುದರಿಂದ ಮಹಮದನು ಅಲಂಕರಣ ಮತ್ತು ಭವ್ಯತೆಯ ಮಾರ್ಗದಿಂದ ಬೇರೆಯಾದ ಅಸಾಧಾರಣ ಪ್ರಮಾಣದ ಮಾರ್ಗವನ್ನು ಹಿಡಿದು ಇಬ್ರಾಹಿಂ ರೋಜಾವನ್ನು ಮೀರಿಸುವಂಥ ಗೋಳಗುಮ್ಮಟವನ್ನು ಕಟ್ಟಿಸಿದನು. ಇದರ ಅಸ್ತಿಭಾರ ಸಮತಲವಾದ ಶಿಲೆಯ ಮೇಲೆ ನಿರ್ಮಿತವಾಗಿದೆ.
ಇದು ತಳಪೀಠದಿಂದ ಅಷ್ಟಕೋಣಾಕೃತಿಯಾಗಿ ಎದ್ದು ಮೇಲೆ ಬೆಟ್ಟದಂತಹ ಗುಮ್ಮಟವನ್ನು ಹೊಂದಿದೆ. ಇದು ೨೦೦ ಅಡಿ ಚಚೌಕದ ೨೦೦ ಅಡಿ ಎತ್ತರದ ಕಟ್ಟಡ. ಕಂಬಗಳ ಆಸರೆ ಇಲ್ಲದೆ ನಿರ್ಮಾಣವಾಗಿರುವುದರಿಂದ ಇದು ವಿಸ್ಮಯಕಾರಿಯಾಗಿದೆ.
ಇದರ ಒಳ ಭಾಗದಲ್ಲಿ ಒಂದಕ್ಕೊಂದು ಅಡ್ಡಲಾಗಿ ಬರುವ ಕಮಾನುಗಳ ಮೂಲಕವಾದ ಅಷ್ಟಕೋಣಾಕಾರದ ಮೊಗಸಾಲೆ ಇದೆ. ನಾಲ್ಕು ಮೂಲೆಗಳಲ್ಲಿಯೂ ಅಷ್ಟಕೋಣಾ ಕಾರವಾಗಿ ಕಟ್ಟಿರುವ ಬುರುಜುಗಳ ಒಳಗಿನಿಂದ ಮೆಟ್ಟಲುಗಳನ್ನು ಹತ್ತಿ ನೆಲದಿಂದ ೧೧೦ ಅಡಿ ಎತ್ತರದಲ್ಲಿರುವ ಈ ಮೊಗಸಾಲೆಯನ್ನು ಪ್ರವೇಶಿಸಬಹುದು. ಮೊಗಸಾಲೆಯನ್ನು ಪ್ರವೇಶಿಸುತ್ತಲೇ ನಮಗೆ ಮತ್ತೊಂದು ಆಶ್ಚರ್ಯ ಅರಿವಾಗುತ್ತದೆ.
ನಗು, ಚಿಟಿಕೆ, ಚಪ್ಪಾಳೆ, ಅಷ್ಟೇ ಏಕೆ, ಗಡಿಯಾರದ ಸಪ್ಪಳ, ಬೆಂಕಿಕಡ್ಡಿಯ ಗೀಚು-ಇವುಗಳು ಅತ್ಯಂತ ಸ್ಪಷ್ಟತೆಯಿಂದ ಆರೇಳು ಸಲ ಪ್ರತಿಧ್ವನಿತವಾಗುತ್ತವೆ. ಹತ್ತು ಜನ ಸದ್ದು ಮಾಡುತ್ತ ನಡೆದರೆ ಒಂದು ಸೈನ್ಯವೇ ನಡೆದು ಬರುವ ಭ್ರಮೆ ಉಂಟಾಗುತ್ತದೆ. ಗುಮ್ಮಟದ ಗೋಡೆಗೆ ಆತು ಆಡುವ ಪಿಸುಮಾತು ಸಹ ೧೩೦ ಅಡಿ ದೂರದ ಎದುರು ಮೊಗಸಾಲೆಯಲ್ಲಿ ಕುಳಿತಿರುವವರಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಈ ಕಾರಣದಿಂದ ಈ ಮೊಗಸಾಲೆಗೆ “ಪಿಸುಮಾತಿನ ಮೊಗಸಾಲೆ” (Whispering Gallery) ಎಂಬ ಹೆಸರು ಬಂದಿದೆ. ಒಂದು ದಿವಸ ಈ ಗೋಲಗುಮ್ಮಟದ ಮೇಲ್ಬಾಗದ ಗಿಲಾವು ಕೆಲಸವೆಲ್ಲಾ ಮುಗಿದು ಕೆಳಭಾಗದಲ್ಲಿ ಕೆಲಸ ನಡೆಯುತ್ತಿದ್ದಾಗ ಗುಮ್ಮಟದ ಪರಿಶೀಲನಾರ್ಥವಾಗಿ ತನ್ನ ಹಿಂದೂ ಪ್ರಿಯತಮೆ ರಂಭಾಳೊಡನೆ ಬಂದ ಸುಲ್ತಾನ್ ಮಹಮ್ಮದ್ ಆದಿಲ್ ಶಾಹನು ಗುಮ್ಮಟದ ಮೊಗಸಾಲೆಯ ಸುಖಾಸನವೊಂದರಲ್ಲಿ ಆಕೆಯನ್ನು ಕೂರಿಸಿ, ತಾನು ಹೋಗಿ ಎದುರಿನ ಮೊಗಸಾಲೆಯ ಆಸನದಲ್ಲಿ ಕುಳಿತು ಪಿಸುಮಾತಿನಲ್ಲಿ ಅವಳೊಡನೆ ಸರಸ ಸಂಭಾಷಣೆಯಲ್ಲಿ ತೊಡಗಿದನು.
ಒಬ್ಬರಾಡಿನ ಒಂದೊಂದು ಪಿಸು ಮಾತೂ ಇನ್ನೊಬ್ಬರಿಗೆ ಕೇಳಿಸಿ ಇಬ್ಬರೂ ಹಿಗ್ಗಿ ಹೋದರು. ಸುಲ್ತಾನ ಈ ಸರಸಸಂಭಾಷಣೆಯಲ್ಲಿ ಮೈಮರೆತವನಾಗಿ “ನನ್ನನ್ನು ನೀನು ನಿಜವಾಗಿಯೂ ನೀನು ಹೇಳಿಕೊಳ್ಳುವಷ್ಟು ಪ್ರೀತಿಸುವುದಾದರೆ ಅದರ ಕುರುಹಾಗಿ ಈ ಮೊಗಸಾಲೆಯಿಂದ ಕೆಳಕ್ಕೆ ಧುಮುಕಿ ನಿನ್ನ ಪ್ರಾಣವನ್ನು ಒಪ್ಪಿಸಬಲ್ಲೆಯಾ?” ಎಂದು ರಂಭಾಳನ್ನು ಪ್ರಶ್ನಿಸಿದನು. ಒಡನೆಯೇ ರಂಭಾ ಎದ್ದು ಹೋಗಿ ಮೊಗಸಾಲೆಯಿಂದ ಹಾರಿ ಕೆಳಕ್ಕೆ ಬಿದ್ದೇಬಿಟ್ಟಳು.
ದಿಗ್ಧಮೆಗೊಂಡ ಸುಲ್ತಾನನು “ರಂಭಾ” ಎಂದು ಚೀರುತ್ತ ಮೆಟ್ಟಲಿಳಿದು ಹೋಗಿ ಪ್ರಾಣ ಬಿಡುತ್ತಿದ್ದ ರಂಭಾಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಣ್ಣೀರಿಟ್ಟನು. ಈ ಅಮರ ಪ್ರೇಮದ ಸಂಕೇತವಾಗಿ ಅವಳ ಕೊನೆಯ ಇಚ್ಛೆಯಂತೆ ಅವಳ ಸಮಾಧಿಯನ್ನು ಈ ಗುಮ್ಮಟದಲ್ಲೇ ನಿರ್ಮಿಸಿದನು. ಸುಲ್ತಾನ ಮಹಮ್ಮದ ಆದಲ್ ಶಾಹನು ಈ ಗುಮ್ಮಟವನ್ನು ತನ್ನ ಸಮಾಧಿಗಾಗಿಯೆಂದೇ ಕ್ರಿ.ಶ. ೧೬೨೬ರಲ್ಲಿ ಪ್ರಾರಂಭಿಸಿದನು.
ಈ ಕಟ್ಟಡದ ಕೆಲಸ ೩೦ ವರ್ಷಗಳ ಕಾಲ ನಡೆಯಿತು. ಗೋಲಗುಮ್ಮಟವು ಇಂಡೋ ಸಾರಸೆನಿಕ್ (ಹಿಂದೂ ಮುಸ್ಲಿಮ್ ) ಮಿಶ್ರ ಶೈಲಿಯಲ್ಲಿ ಕಟ್ಟಿರುವ ಕಟ್ಟಡ. ಈ ಗುಮ್ಮಟದ ದಕ್ಷಿಣ ದ್ವಾರದ ಮೇಲೆ ಒಂದು ಕಬ್ಬಿಣದ ಸರಪಳಿಗೆ ಒಂದು ದೊಡ್ಡ ಕಲ್ಲನ್ನು ನೇತು ಹಾಕಲಾಗಿದೆ. ಇದು ಉಲ್ಕೆಯೆಂದೂ, ಇದನ್ನು ಅರೇಬಿಯಾದಿಂದ ತರಲಾಯಿತೆಂದೂ ಕೆಲವರು ಹೇಳುತ್ತಾರೆ. ಮಹಮ್ಮದನ ಕಾಲದಲ್ಲಿ ಇದೇ ಸ್ಥಳದಲ್ಲಿ ಈ ಉಲ್ಕೆ ಆಕಾಶದಿಂದ ಬಿದ್ದಿತೆಂದೂ, ಇದನ್ನೇ ಇಲ್ಲಿ ತೂಗುಹಾಕಿದೆಯೆಂದೂ ಮತ್ತೆ ಕೆಲವರು ಹೇಳುತ್ತಾರೆ. ಈ ಗುಮ್ಮಟದ ಮಧ್ಯದಲ್ಲಿ ಗೋಲಕದ ಕೆಳಗೆ ೭೭ ಅಡಿಗಳ ಚಚೌಕದ ೨೪ ಅಡಿಗಳ ಎತ್ತರದ ಅದ್ಭುತ ಜಗುಲಿಯ ಮೇಲೆ ಸುಲ್ತಾನ ಮಹಮದ್, ಇವನ ಹಿರಿಯ ರಾಣಿ.
ಇವನ ಕಿರಿಯ ರಾಣಿ, ಇವನ ಪ್ರೇಯಸಿ ರಂಭಾ, ಇವನ ಮಗಳು, ಇವನ ಮೊಮ್ಮಗ – ಇವರ ತೋರು ಸಮಾಧಿಗಳು ಇವೆ. ಈ ಜಗುಲಿಯ ಕೆಳಗಿನ ನೆಲಮಾಳಿಗೆಯಲ್ಲಿ ಇವರ ನಿಜವಾದ ಸಮಾಧಿಗಳು ಇವೆ. ಗೋಲಗುಮ್ಮಟದ ಆವರಣದಲ್ಲಿ ಅದಕ್ಕೆ ಸೇರಿದಂತೆ ಒಂದು ಮಸೀದಿ, ನಗರಖಾನ, ಪ್ರದೇಶದ್ವಾರ, ಸರಾಯ್ (ವಿಶ್ರಾಂತಿಗೃಹ) – ಇವೇ ಮೊದಲಾದವುಗಳು ಇರುತ್ತವೆ.
ಈ ಗೋಲಗುಮ್ಮಟದ ಎದುರಿನಲ್ಲಿರುವ ಮೇಲ್ಕಂಡ ನಗರ ಖಾನೆಯ ಮೇಲಂತಸ್ತಿನಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯವಿದೆ. ಇಲ್ಲಿ ಶಿಲಾಲಿಪಿ, ಮೂರ್ತಿಶಿಲ್ಪ, ವರ್ಣಚಿತ್ರ, ಹಸ್ತಲಿಖಿತ, ರತ್ನಗಂಬಳಿ, ಮಣ್ಣಿನಪಾತ್ರೆ, ಮರದಕೆತ್ತನೆ, ನಾಣ್ಯ, ಆಯುಧ ಇತ್ಯಾದಿ ಹಿಂದಿನ ವಸ್ತುಗಳನ್ನು ಇಡಲಾಗಿದೆ. ಪ್ರಾಚ್ಯ ವಸ್ತು ಶೋಧನ ಇಲಾಖೆಯವರು ಒಂದು ಉಪವನವನ್ನು ಈ ಗುಮ್ಮಟದ ಎದುರಿನಲ್ಲಿ ರಚಿಸಿರುತ್ತಾರೆ. ಗೋಲಗುಮ್ಮಟವು ಪ್ರಪಂಚದ ಮಹಾ ಅದ್ಭುತಗಳಲ್ಲಿ ಒಂದೆಂದು ಪಾಶ್ಚಿಮಾತ್ಯ ಹಾಗೂ ಪೌರಾತ್ಯ ಶಿಲ್ಪ ವಿಮರ್ಶಕರು ಒಪ್ಪಿಕೊಂಡಿದ್ದಾರೆ.
ಇಬ್ರಾಹಿಂ ರೋಜಾ :
ರೋಜಾ ಎಂದರೆ ಗೋರಿ ಮತ್ತು ಮಸೀದಿ ಇವೆರಡೂ ಇರುವ ಕಟ್ಟಡ. ಈ ರೋಜಾ ಬಿಜಾಪುರ ಜಿಲ್ಲೆಯ ಮತ್ತೊಂದು ಅದ್ಭುತ. ೨ನೇ ಇಬ್ರಾಹಿಂ ಆದಿಲ್‌ಶಾಹನ ಹೆಚ್ಚಿನ ರಾಣಿಯಾಗಿದ್ದ ತಾಜ್ ಸುಲ್ತಾನಳು ತನ್ನ ಸಮಾಧಿಗೆಂದು ತಾನು ಇರುವಾಗಲೇ ಕ್ರಿ.ಶ. ೧೬೧೦-೧೬೨೬ರ ನಡುವೆ ಈ ರೋಜಾವನ್ನು ಕಟ್ಟಿಸಿದಳು. ಆದರೆ ಇವಳಿಗಿಂತ ಮುಂಚಿತವಾಗಿಯೇ ಇವಳ ಪತಿ ಇಬ್ರಾ ಹಿಮನು ತೀರಿಕೊಂಡುದರಿಂದ ಈತನೇ ಸಮಾಧಿಯನ್ನು ಮೊದಲು ಸೇರಿದನು. ಈ ಕಾರಣದಿಂದ ಇದಕ್ಕೆ ಇಬ್ರಾಹಿಂ ರೋಜಾ ಎಂದೇ ಹೆಸರಾಯಿತು.
ಈ ರೋಜಾವನ್ನು ಜೋರಾಪುರದ ಪೇಟೆಯ ಬಳಿ ಎತ್ತರವಾದ ವೇದಿಕೆಯ ಮೇಲೆ ಕಟ್ಟಲಾಗಿದೆ. ಇದು ೪೦೦ ಅಡಿಗಳ ಚಚೌಕದ ಆವರಣದಲ್ಲಿ ನಿಂತಿದೆ. ಇದರ ಮಹಾದ್ವಾರದ ಮೇಲೆ ನಾಲ್ಕು ಮೂಲೆಗಳಲ್ಲಿ ನಾಲ್ಕು ಸೊಬಗಿನ ಮೀನಾರಗಳು ನಿಂತಿವೆ. ಹಿಂದೆ ಈ ಕಟ್ಟಡದ ಸುತ್ತಲೂ ರಮ್ಯವಾದ ಉಪವನವಿತ್ತು. ಈ ರೋಜಾ ಬಿಜಾಪುರದ ಉಳಿದೆಲ್ಲ ಕಟ್ಟಡಗಳಿಗಿಂತಲೂ ಹೆಚ್ಚಿನ ಅಲಂಕಾರದ ಕೆಲಸಗಳನ್ನು ಹೊಂದಿದೆ. ಗೋಲಗುಮ್ಮಟ ನಿರಾಭರಣ ಸುಂದರಿಯಂತೆ ಕಂಗೊಳಿಸಿದರೆ, ಇಬ್ರಾಹಿಂ ರೋಜಾ ಸಂಪೂರ್ಣ ಕುಸುರಿ ಕೆಲಸದಿಂದ ಕೂಡಿ ಅಲಂಕೃತ ಮದವಣಗಿತ್ತಿಯಂತೆ ಇದೆ.
ಈ ರೋಜಾದಲ್ಲಿ ಗೋರಿಯು ೧೧೬ ಅಡಿ ಚಚೌಕವಾಗಿದ್ದು ಇದಕ್ಕೆ ೫೦ ಅಡಿ ಚಚೌಕದ ಒಳಭವನವಿದೆ. ಸುತ್ತಲೂ ಎರಡು ಸಾಲು ಕಂಬಗಳಿವೆ. ಈ ಕಂಬಗಳ ಮೇಲೆ ಕಮಾನುಗಳು ಇವೆ. ಒಳಕ್ಕೆ ಪ್ರವೇಶಿಸಲು ಜೋಡಿ ಕಮಾನು ದಾರಿ ಇದೆ. ಕಂಬಗಳ ಮೇಲೆ ಅಪೂರ್ವವಾದ ಕೆತ್ತನೆಗಳು ಇವೆ. ಕಟ್ಟಡದ ಹೊರ ಮೈ ಮೇಲೆ ಸಂಪೂರ್ಣ ಕುರಾನಿನ ಶ್ಲೋಕಗಳನ್ನು ಕಲಾಮಯವಾಗಿ ಕೆತ್ತಲಾಗಿದೆ. ಹಿಂದೆ ಇವುಗಳ ಮೇಲೆ ಅಪ್ಪಟ ಚಿನ್ನದ ಲೇಪಸಹಿತವಾದ ವರ್ಣಾಲಂಕಾರ ಮಾಡಲಾಗಿತ್ತು.
ಈಗ ಆ ಬಣ್ಣಗಳು ಮಾಸಿವೆ. ಇಲ್ಲಿನ ವಾಸ್ತುಶಿಲ್ಲದ ಇನ್ನೊಂದು ವಿಶಿಷ್ಟತೆಯೆಂದರೆ ಜಾಲಂಧ್ರಗಳನ್ನು ಅರಬ್ಬಿ ಭಾಷೆಯ ವಾಕ್ಯಗಳಾಗುವಂತೆ ನಿರ್ಮಿಸಿರುವುದು. “ಈ ರೋಜಾವನ್ನು ಮೀರಿಸುವ ಇನ್ನೊಂದು ಕಟ್ಟಡ ಇಡೀ ಹಿಂದೂಸ್ಥಾನದ ಇಲ್ಲ” ಎಂದು ಮುದ್ರೆ ಇದರ ಶಿಲ್ಪಿಗಳ ಕೌಶಲವನ್ನು ಕೊಂಡಾಡಿದ್ದಾರೆ. ಒಳಭಾಗದ ಕೋಣೆಯ ವಇಬ್ರಾಹಿಂ ಅದಿಲ್‌ಶಾಹ, ತಾಜ್ ಸುಲ್ತಾನಾ, ಒಬ್ಬ ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳು ಮತ್ತು ತಾಯಿ – ಇವರ ಗೋರಿಗಳು ಇವೆ.
ಇಲ್ಲಿನ ೫೦ ಅಡಿ ಚಚೌಕದ ಮೇಲ್ ಚಾವಣಿಯನ್ನು ದೊಡ್ಡ ದೊಡ್ಡ ಕಲ್ಲುಗಳಿಂದ ಯಾವ ಆಸರೆಯೂ ಇಲ್ಲದೆ ನಿರ್ಮಿಸಿರುವುದು ಆಶ್ಚರ್ಯಕರವಾಗಿದೆ. “ಇಲ್ಲಿನ ಮೇಲ್ಟಾವಣಿ ಯಾವ ಆಧಾರದ ಮೇಲೆ ನಿಂತಿದೆ ಎನ್ನುವುದೇ ಮಹಾ ರಹಸ್ಯವಾಗಿದೆ” ಎಂದು ಫರ್‌ಗ್ಯುಸನ್ ಉದ್ಗಾರ ತೆಗೆದಿದ್ದಾರೆ. ಆಸರೆ ಇಲ್ಲದ ಈ ಮೇಲ್ಪಾವಣಿಯ ಮೇಲೆ ಇನ್ನೊಂದು ಗುಮ್ಮಟ ಛಾವಣಿಯಿರುವುದು ಆಶ್ಚರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗೋರಿಯ ಎದುರಿಗೆ ಮಸೀದಿ ಇದೆ. ಇದರ ಮುಂಭಾವು ಗೋರಿಯ ಮುಂಭಾಗಕ್ಕಿಂತ ಹೆಚ್ಚು ಮನೋಹರವಾಗಿದೆ. ಈ ಮಸೀದಿಯ ಪ್ರತಿಮೂಲೆಯಲ್ಲೂ ಎತ್ತರವಾದ ಮೀನಾರುಗಳಿವೆ. ಈ ಮೂಲೆ ಮೀನಾರುಗಳ ಮಧ್ಯೆ ಆರಾರು ಚಿಕ್ಕ ಮೀನಾರುಗಳಿವೆ.
ಮಸೀದಿಯ ಮುಭಾಗದಲ್ಲಿ ಕಲ್ಲಿನ ಸರಪಳಿಗಳು ನೇತುಬಿದ್ದಿವೆ. ಪ್ರತಿಯೊಂದು ಸರಪಳಿಯೂ ಒಂದೇ ಕಲ್ಲಿನಿಂದ ಕಡೆಯಲ್ಪಟ್ಟಿವೆ. ಈ ರೋಜಾ ಸಹ ಹಿಂದೂ-ಮುಸ್ಲಿಂ ಮಿಶ್ರ ಶೈಲಿಯಲ್ಲಿ ನಿರ್ಮಿತವಾಗಿದೆ. ಈ ರೋಜಾದ ಬಾಗಿಲೊಂದರ ಮೇಲೆ “ಪೃಥ್ವಿಯ ಮೇಲೆ ನಿಂತು ಸ್ವರ್ಗವನ್ನು ಮುಟ್ಟುವುದೋ ಎಂಬಂತೆ ಶೋಭಿಸುವ ಈ ಕಟ್ಟಡವನ್ನು ನೋಡಿ ಸ್ವರ್ಗವೂ ಬೆರಗಾಯಿತು” ಎಂದು ಇಬ್ರಾಹಿಂ ಸುಲ್ತಾನನು ಕೆತ್ತಿಸಿರುವ ಮಾತುಗಳು ಉತ್ತೇಕ್ಷೆಯಲ್ಲ. ಈ ರೋಜಾದ ದಕ್ಷಿಣ ಬಾಗಿಲಲ್ಲಿ ಇರುವ ಪಾರ್ಸಿ ಭಾಷೆಯ ಶಾಸನವು ಈ ಕಟ್ಟಡದ ವೆಚ್ಚವನ್ನು ವಿವರಿಸುತ್ತದೆ.
ಸಾತ್ ಮಂಜೀಲ್ :
ಇದು ಬಿಜಾಪುರದ ಅರಮನೆಗಳ ಆವರಣದಲ್ಲಿದೆ. ಇದು ಅತ್ಯಂತ ಸುಂದರವಾದ ಕಟ್ಟಡ. ಇದು ಹಿಂದೆ ಏಳು ಉಪ್ಪರಿಗೆಗಳ ಕಟ್ಟಡವಾಗಿತ್ತು. ಅದರಿಂದಲೇ ಇದಕ್ಕೆ ಈ ಹೆಸರು. ಈಗ ಐದು ಉಪ್ಪರಿಗೆಗಳು ಮಾತ್ರವೇ ಉಳಿದಿವೆ. ಇದು ಬಿಜಾಪುರ ಸುಲ್ತಾನರ ಅರಮನೆಯ ವಿಲಾಸ ಭವನವಾಗಿತ್ತು. ಇದರ ಗೋಡೆಗಳೊಳಗೆ ಕೊಳವೆಗಳನ್ನು ಹಾಯಿಸಿ ಅವುಗಳ ಮೂಲಕ ಇಲ್ಲಿಯ ಕಾರಂಜಿಗೂ ಸ್ನಾನಗೃಹಕ್ಕೂ ನೀರನ್ನು ಒದಗಿಸಲಾಗುತ್ತಿತ್ತು.
ಇದನ್ನು ೨ನೆಯ ಇಬ್ರಾಹಿಂ ಆದಿಲ್ ಶಾಹನು ಕ್ರಿ.ಶ. ೧೫೮೩ರಲ್ಲಿ ಕಟ್ಟಿಸಿದನು. ಇದರಲ್ಲಿ ಅವನು ಸಂಗೀತ, ಕಾವ್ಯರಚನೆ ಮತ್ತು ಇತರ ವಿಲಾಸಗಳಲ್ಲಿ ತೊಡಗಿರುತ್ತಿದ್ದನು. ಇವನ ಮಗ ಮಹಮ್ಮದ್ ಶಾಹನು ನರ್ತಕಿ ರಂಭಾಳಿಗಾಗಿ ಈ ಕಟ್ಟಡದ ಕೆಲವು ಗೋಡೆಗಳ ಮೇಲೆ ಬಣ್ಣದ ಚಿತ್ರಗಳನ್ನು ಬರೆಯಿಸಿದ್ದನು. ಇವುಗಳಲ್ಲಿ ತನ್ನ ಮತ್ತು ರಂಭಾಳ ಚಿತ್ರಗಳೂ ಇದ್ದುವು. ಇದರ ಮೇಲಿನ ಉಪ್ಪರಿಗೆಯಿಂದ ನೋಡಿದರೆ ಈ ಊರಿನ ಸುಂದರ ದೃಶ್ಯ ಕಾಣಿಸುತ್ತದೆ.
ಆಲಿರೋಜಾ (ಬಾರಾಕಮಾನ್) :
ಇದು ಅರಮನೆಗಳ ಉತ್ತರಕ್ಕೆ ಇದೆ. ಗಾತ್ರದಲ್ಲೂ ಮತ್ತು ಮಹತ್ತಿನಲ್ಲೂ ಗೋಲಗುಂಬಜ್‌ನ್ನು ಮೀರುವಂತೆ ಇದನ್ನು ಕಟ್ಟಬೇಕೆಂದು ಅಲಿ ಆದಿಲ್ ಶಾಹನು ಬಯಸಿದ್ದನು. ಆದರೆ ಅವನ ಅಕಾಲ ಮರಣದಿಂದ ಈ ಕಟ್ಟಡವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇದು ೨೧೫ ಅಡಿ ಚಚೌಕದ ಆವರಣದ ಮೇಲೆ ಇದೆ. ಇದರ ಕಟ್ಟೆಯ ಸುತ್ತಲೂ ಕಮಾನುಗಳ ಸಾಲು ಇದೆ. ಈ ಸಾಲಿನ ಒಳಗೆ ಕಮಾನುಗಳ ಇನ್ನೊಂದು ಸಾಲು ಇದೆ. ಇಷ್ಟರಿಂದಲೇ ಈ ಕಟ್ಟಡದ ಅದ್ಭುತ ಕಲ್ಪನೆ ಮನವರಿಕೆಯಾಗುತ್ತದೆ.
ಕೋಟೆ : ಇದು ಸುಭದ್ರವಾದ ಎಂಟು ಮೈಲಿಗಳ ಉದ್ದದ ಕೋಟೆ. ಇದು ಬಿಜಾಪುರವನ್ನು ಸುತ್ತಿಕೊಂಡಿದೆ. ಇದನ್ನು ಆಲಿಆದಿಲ್ ಶಾಹನು ಕಟ್ಟಿಸಿದನು. ಈ ಕೋಟೆ ೩೦ ಅಡಿ ದಪ್ಪವಾಗಿದೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ.
ಇದರಲ್ಲಿ ನೀರನ್ನು ತುಂಬಿ ಮೊಸಳೆಗಳನ್ನು ಬಿಡಲಾಗುತ್ತಿತ್ತು. ಈ ಕೋಟೆಗೆ ಹೆಬ್ಬಾಗಿಲುಗಳೂ ದೊಡ್ಡ ಬುರುಜಗಳೂ ಇವೆ. ಈ ಬುರುಜಗಳ ಮೇಲೆ ತೋಪುಗಳು ಇರುತ್ತಿದ್ದವು. ಹೆಬ್ಬಾಗಿಲುಗಳಿಗೆ – ಆಲಿಪುರ, ಬಹಮನಿ, ಜೋರಾಪುರ, ಶಾಹಪುರ, ಮೆಕ್ಕಾ, ಪಥೇ – ಹೀಗೆ ಹೆಸರುಗಳನ್ನು ಕೊಡಲಾಗಿತ್ತು. ಮೆಕ್ಕಾ ಹೆಬ್ಬಾಗಿಲನ್ನು ಬಿಟ್ಟು ಉಳಿದ ಹೆಬ್ಬಾಗಿಲುಗಳು ಈಗಲೂ ಉಪಯೋಗದಲ್ಲಿದೆ.
ಉಪ್ಪರಿ ಬುರುಜ :
ಉಪ್ಪರಿ ಎಂದರೆ ಎತ್ತರವಾದುದು ಎಂದು ಅರ್ಥ. ಎತ್ತರವಾದ ಈ ಬುರುಜದ ಮೇಲೆ ನಿಂತು ನೋಡಿದರೆ ಬಿಜಾಪುರದ ಸುತ್ತಣ ಬಯಲು ಸೀಮೆಯ ಚೆಲುವೆಲ್ಲಾ ಕಾಣುವುದು. ಇದರ ಮೇಲೆ ಎರಡು ತೋಪುಗಳು ಇವೆ.
ಇವುಗಳಲ್ಲಿ ಒಂದು ೩೧ ಆಡಿ ಉದ್ದವಾಗಿಯೂ ೨೨ ಟನ್ ತೂಕವಾಗಿಯೂ ಇದೆ. ಇದಕ್ಕೆ ಲಾಮ್‌ಟೆರಿ ಎಂಬ ಹೆಸರಿದೆ. ದೂರ ಹಾರುವುದು ಎಂದು ಇದರ ಅರ್ಥ. ಈ ಬುರುಜನ್ನು ಕ್ರಿಶ. ೧೫೮೪ರಲ್ಲಿ ಕಟ್ಟಲಾಯಿತೆಂದು ಇದರ ಒಂದು ಪಾರ್ಶಿ ಶಾಸನದಿಂದ ಗೊತ್ತಾಗುತ್ತದೆ.
ಅದಾಲತ್ ಮಹಲ್ :
ಇದು ಬಿಜಾಪುರ ರೈಲ್ವೆ ನಿಲ್ದಾಣಕ್ಕೆ ೧.೫ ಮೈಲಿಗಳ ದೂರದಲ್ಲಿ ಇದೆ. ಇದು ಎರಡು ಅಂತಸ್ತಿನ ಕಟ್ಟಡ. ಇದು ಹಸಿರು ಗಿಡ ಮರಗಳ ಸುಂದರ ವಾತಾವರಣದಲ್ಲಿ ಇದೆ. ಇದು ಈಗ ಜಿಲ್ಲೆಯ ಡೆಪ್ಯೂಟಿ ಕಮೀಶನರ ವಾಸಸ್ಥಾನವಾಗಿದೆ. ಇದರ ದಕ್ಷಿಣಕ್ಕೆ ಆದಿಲ್ ಶಾಹಿಸುಲ್ತಾನರ ರಾಜ ಉದ್ಯಾನ ವನಗಳ ಮತ್ತು ಕಾರಂಜಿಗಳ ಅವಶೇಷಗಳು ಕಂಡುಬರುತ್ತವೆ. ಇದಕ್ಕೂ ಉತ್ತರದಲ್ಲಿ ಔರಂಗಜೇಬನು ಕಟ್ಟಿಸಿದನೆಂದು ಹೇಳುವ ಮಸೀದಿ ಇದೆ.
ಅಫಜಲ್ ಖಾನನ ಗೋರಿ ಮತ್ತು ಮಸೀದಿ :
ಇವು ಬಿಜಾಪುರದ ಹೊರಗೆ ಶಹಪುರದಿಂದ ಎರಡೂವರೆ ಮೈಲಿಗಳ ದೂರದಲ್ಲಿ ಇವೆ. ಈ ಗೋರಿಯನ್ನೂ ಮತ್ತು ಮಸೀದಿಯನ್ನೂ ಅಫಜಲ್ ಖಾನನೇ ಕಟ್ಟಿಸಿದನು. ಈ ಗೋರಿ ಪೂರ್ಣವಾಗುವುದಕ್ಕೆ ಮುಂಚೆ ಅಫಜಲ್ ಖಾನನು ಶಿವಾಜಿಯೊಡನೆ ಘರ್ಷಿಸಿದಾಗ ಸತ್ತನು. ಅವನ ದೇಹವನ್ನು ಈ ಗೋರಿಗೆ ತರಲಾಗಲಿಲ್ಲ. ಈ ಗೋರಿ ಮತ್ತು ಮಸೀದಿಗಳಿಗೆ ದಕ್ಷಿಣ ಭಾಗದಲ್ಲಿ ಅಫಜಲ್ ಖಾನನ ಅರಮನೆಯ ಅವಶೇಷಗಳು ಇವೆ.
ಅಫಜಲ್ ಖಾನನ ಹೆಂಡತಿಯರ ಗೋರಿಗಳು :
ಅಫಜಲ್ ಖಾನನ ಗೋರಿಗೆ ೬ ಫರ್ಲಾಂಗುಗಳ ದೂರದಲ್ಲಿ ಒಂದು ಮರಗಳ ತೋಪಿನಲ್ಲಿ ೬೪ ಗೋರಿಗಳ ೧೧ ಸಾಲುಗಳಿವೆ. ಇವುಗಳಲ್ಲಿ ಒಂದು ಗೋರಿ ತೆರೆದ ಗೋರಿ. ಅಫಜಲ್‌ಖಾನನು ಶಿವಾಜಿಯೊಡನೆ ಯುದ್ಧಕ್ಕೆ ಹೊರಟಾಗ ಅವನು ಬಿಜಾಪುರಕ್ಕೆ ವಾಪಸು ಬರುವುದಿಲ್ಲವೆಂದು ಬಾವಿಗೆ ತಳ್ಳಿಸಿದನೆಂದೂ, ಒಬ್ಬಳು ಮಾತ್ರ ತಪ್ಪಿಸಿಕೊಂಡಳೆಂದೂ, ಈ ೬೩ ಗೋರಿಗಳೇ ಸತ್ತ ಹೆಂಡತಿಯವರೆಂದೂ, ೬೪ನೆಯ ತೆರೆದ ಗೋರಿಯೇ ತಪ್ಪಿಸಿಕೊಂಡ ಹೆಂಡತಿಯದೆಂದೂ ಪ್ರತೀತಿ ಇದೆ. ಈ ಗೋರಿಗಳ ಪಕ್ಕದಲ್ಲಿ ಒಂದು ಹಳೆಯ ಬಾವಿ ಇದ್ದು ಇದೇ ಬಾವಿಯಲ್ಲೇ ಅಫಜಲ್ ಖಾನನ ಹೆಂಡತಿಯರು ಸತ್ತುದೆಂದು ಹೇಳುತ್ತಾರೆ.
ಐನ್ ಉಲ್ ಮುಲ್ಕನ ಗೋರಿ ಮತ್ತು ಮಸೀದಿ :
ಇವು ಈ ಊರಿಗೆ ಪೂರ್ವದಲ್ಲಿ ಒಂದೂವರೆ ಮೈಲಿಗಳ ದೂರದಲ್ಲಿ ಇವೆ. ಗೋರಿಯು ಚಚೌಕದ ಕಟ್ಟಡ. ಮಸೀದಿಯು ಚಿತ್ರಿತವಾದ ಗಾರೆ ಕಟ್ಟಡ. ೧ನೆಯ ಇಬ್ರಾಹಿಮನ ವಿರುದ್ಧ ದಂಗೆ ಎದ್ದು ಕ್ರಿ.ಶ. ೧೫೫೬ರಲ್ಲಿ ಸತ್ತ ಆಸ್ಥಾನಿಕ ಐನ್ ಉಲ್ ಮುಲ್ಕ ಕನಾನಿಯ ಗೋರಿ ಇದೆಂದು ಹೇಳುತ್ತಾರೆ.
೧ನೆಯ ಆಲಿ ಆದಿಲ್ ಶಾಹನ ಗೋರಿ :
ಇದು ಈ ಊರಿನ ನೈರುತ್ಯ ಭಾಗದಲ್ಲಿದೆ. ಇದು ಯಾವ ಚಿತ್ರ ಕೆತ್ತನೆಯೂ ಇಲ್ಲದ ಸಾಮಾನ್ಯ ಗೋರಿ. ಇದು ಬಿಜಾಪುರದಲ್ಲಿ ನಿರ್ಮಾಣವಾದ ಮೊಟ್ಟಮೊದಲ ರಾಜಗೋರಿ.
೨ನೆಯ ಆಲಿ ಆದಿಲ್ ಶಾಹನ ಗೋರಿ :
ಇದು ಈ ಊರ ಕೋಟೆಯ ವಾಯುವ್ಯ ಭಾಗದಲ್ಲಿ ಹೊರ ಕಂದಕಕ್ಕೆ ೧೦೦ ಗಜಾಗಳ ದೂರದಲ್ಲಿ ಛಾವಣಿ ಇಲ್ಲದೆ ಇರುವ ಚಚೌಕದ ಒಂದು ದೊಡ್ಡ ಕಟ್ಟಡ. ತನ್ನ ತಂದೆ ಮಹಮದ್ ಆದಿಲ್ ಶಾಹನ ಗೋಲಗುಮ್ಮಟವನ್ನು ಮೀರಿಸುವ ಕಟ್ಟಡವನ್ನು ಕಟ್ಟಬೇಕೆಂದು ಮಗ ೨ನೆಯ ಆಲಿ ಆದಿಲ್ ಶಾಹನು ಉದ್ದೇಶಿಸಿದಂತೆ ಕಾಣುತ್ತದೆ. ಆದರೆ ಇದು ಪೂರ್ಣಗೊಳ್ಳಲಿಲ್ಲ.
ಗೋಲಗುಮ್ಮಟದ ತಳಪಾಯ ೧೫೮ ಅಡಿ ಚಚೌಕವಾಗಿದ್ದರೆ, ಈ ಕಟ್ಟಡದ ತಳಪಾಯ ೨೧೫ ಅಡಿ ಚಚ್ಚಕವಾಗಿದೆ. ಜಗುಲಿಯು ೨೦ ಅಡಿ ಎತ್ತರವಾಗಿದ್ದು ಇದರ ಮೇಲೆ ೨ನೆಯ ಆಲಿ ಆದಿಲ್ ಶಾಹನ ಮತ್ತು ಅವನ ಕುಟುಂಬದವರ ಗೋರಿಗಳ ತೋರುಕಲ್ಲುಗಳು ಇವೆ. ಈ ಜಗುಲಿಯ ಕೆಳಗಡೆಯ ನೆಲಮಾಳಿಗೆಯಲ್ಲಿ ಅವರ ನಿಜವಾದ ಗೋರಿಗಳಿವೆ. ಚಾವಣಿಯಿಲ್ಲದ ಈ ಕಟ್ಟಡದ ಕಮಾನುಗಳು ೩೦೦ ವರ್ಷಗಳಾದರೂ ಇನ್ನೂ ಗಟ್ಟಿಯಾಗಿಯೇ ಇವೆ.
ಆಲಿ ಶಾಹಿ ಪೀರನ ಮಸೀದಿ ಮತ್ತು ಗೋರಿ :
ಈ ಮಸೀದಿ ೩೬.೫ ಅಡಿಗಳ ಚಚೌಕದ ಕಟ್ಟಡ. ಇದರ ಮುಖಭಾಗವು ಅತ್ಯಂತ ಸುಂದರವಾಗಿದೆ. ಇದು ಮಜಬೂತಾದ ಕಟ್ಟಡ. ಇದನ್ನು ೧ನೆಯ ಆಲಿ ಆದಿಲ್ ಶಾಹನು ಹಜರತ್ ಸಯದ್ ಆಲಿ ಫಕೀರರ ಜ್ಞಾಪಕಾರ್ಥವಾಗಿ ಕಟ್ಟಿಸಿದನು. ಈ ಫಕೀರರು ಯುದ್ಧ ರಂಗದಲ್ಲಿ ಮಡಿದು ಶಾಹಿದ್ ಆದರು. ಇದರ ಗೋರಿಯು ಈ ಮಸೀದಿಯ ಈಶಾನ್ಯ ಭಾಗದ ಬಾಗಿಲ ಹೊರಗಡೆ ಇದೆ.
ಅಮೀನನ ದರ್ಗಾ :
ಇದು ಈ ಊರಿನ ಪಶ್ಚಿಮಭಾಗದಲ್ಲಿ ೧ ಮೈಲಿಯ ದೂರದಲ್ಲಿದೆ. ಇದು ಶಹಾಬುರ್‌ಹಾನ ಉದ್ದೀನನ ಮಗನೂ ಫಕೀರನೂ ಆದ ಹಜರತ್ ಸ್ವಾಜ ಅಮೀನ್ ಉದ್ದೀನರ ಗೋರಿಯಾಗಿದೆ. ಇದನ್ನು ಅಫಜಲ್ ಖಾನನು ಕಟ್ಟಿಸಿದನೆಂದು ಹೇಳುತ್ತಾರೆ.
ಆನಂದ್ ಮಹಲ್ :
ಇದು ಕೋಟೆಯ ಮಧ್ಯದಲ್ಲಿ ಉತ್ತರದ ಕಡೆ ಇದೆ. ಇದನ್ನು ೨ನೆಯ ಇಬ್ರಾಹಿಂ ಆದಿಲ್ ಶಾಹನು ಕ್ರಿ.ಶ. ೧೫೮೯ರಲ್ಲಿ ಕಟ್ಟಿಸಿದನು. ಇದು ಈ ಊರಿನ ಅತ್ಯಂತ ಸುಂದರವಾದ ಅರಮನೆಗಳಲ್ಲಿ ಒಂದಾಗಿತ್ತು. ಈಗ ಇದು ಪಾಳು ಬಿದ್ದಿದೆ. ಇದು ಎರಡು ಅಂತಸ್ತುಗಳ ಕಟ್ಟಡ. ಇದರ ದ್ವಾರಕ್ಕೆ ಎದುರಾಗಿರುವ ಮಧ್ಯದ ಗೋಡೆಯ ಮೇಲೆ ಬಣ್ಣದ ಕಲ್ಲುಗಳ ಜೋಡಣೆಗಳು, ವರ್ಣಚಿತ್ರಗಳು ಮತ್ತು ಬರೆವಣಿಗೆಗಳು ಇದ್ದುವೆಂದು ಹೇಳುತ್ತಾರೆ. ಈ ಕಟ್ಟಡದ ಸೆಜ್ಜೆಯಲ್ಲಿ ಅರಮನೆಯ ಹೆಂಗಸರು ಕೂತು ಹೊರಗಡೆಯ ದೃಶ್ಯಗಳನ್ನು ನೋಡುತ್ತಿದ್ದರು. ಈಗ ಈ ಕಟ್ಟಡದಲ್ಲಿ ಸರ್ಕಾರಿ ಕಛೇರಿಗಳು ಇವೆ.
ಅಂದು ಮಸೀದಿ :
ಇದು ಎರಡು ಅಂತಸ್ತುಗಳ ಕಟ್ಟಡ ಮೇಗಳ ಅಂತಸ್ತು ಪ್ರಾರ್ಥನಾ ಮಂದಿರವಾಗಿದ್ದು ಕೆಳ ಅಂತಸ್ತು ವಿಶ್ರಾಂತಿ ಗೃಹವಾಗಿದೆ. ಇದು ಹೆಂಗಸರ ಉಪಯೋಗಕ್ಕಾಗಿ ಏರ್ಪಟ್ಟ ಮಸೀದಿಯಾದ್ದರಿಂದ ಇದರಲ್ಲಿ ವೇದಿಕೆ ಇಲ್ಲ. ಇದರ ದ್ವಾರದ ಬಳಿ ಒಂದು ಪಾರ್ಸಿ ಭಾಷೆಯ ಶಾಸನವಿದೆ. ಇದನ್ನು ಇಸ್ಟಾರ್ ಖಾನ್ ಎಂಬ ಸಂಸ್ಥಾನಿಕನು ಕ್ರಿ.ಶ. ೧೬೦೮ರಲ್ಲಿ ಕಟ್ಟಿಸಿದನೆಂದು ತಿಳಿದುಬರುತ್ತದೆ.
ಆರ್ಕ್ ಕಿಲ್ಲಾ :
ಇದು ಈ ಊರಿನ ಮಧ್ಯಭಾಗದಲ್ಲಿ ಇದೆ. ಇದು ಸುಮಾರು ೧ ಮೈಲಿ ಸುತ್ತಳತೆಯುಳ್ಳದಾಗಿದೆ. ಇದನ್ನು ಯೂಸುಪ್ ಆದಿಲ್ ಶಾಹನು ಪ್ರಾರಂಭಿಸಿ, ೧ನೆಯ ಇಬ್ರಾಹಿಂ ಆದಿಲ್ ಶಾಹನು ಪೂರೈಸಿದನು.. ಈ ಕೋಟೆಗೆ ಈಗ ಎರಡು ದ್ವಾರಗಳು ಮಾತ್ರ ಉಳಿದಿವೆ. ಇದರ ಅರಮನೆಗಳೂ, ಕಾರಂಜಿಗಳೂ ಜೀರ್ಣವಾಗಿವೆ.
ಆಸಾರ್ ಮಹಲ್ (ಅದಾಲತ್ ಮಹಲ್) :
ಇದು ಕೋಟೆಗೆ ಪೂರ್ವ ಭಾಗದಲ್ಲಿ ಇದೆ. ಇಲ್ಲಿಯ ಅರಮನೆಗಳಲೆಲ್ಲಾ ಇದೇ ಹಾಳಾಗದೆ ಉಳಿದಿರುವ ಕಟ್ಟಡ. ಇದನ್ನು ಸುಲ್ತಾನ್ ಮಹಮ್ಮದನು ಕ್ರಿ.ಶ. ೧೬೪೬ರಲ್ಲಿ ನ್ಯಾಯಾಸ್ಥಾನಕ್ಕಾಗಿ ಕಟ್ಟಿಸಿದನು. ಇದರಿಂದಲೇ ಇದನ್ನು ಹಿಂದೆ ಅದಾಲತ್ ಮಹಲ್ ಎಂದು ಕರೆಯುತ್ತಿದ್ದರು. ಈ ಕಟ್ಟಡದ ಕೊಠಡಿಗಳ ಗೋಡೆಗಳ ಮೇಲೂ ಮತ್ತು ಅಂಕಣದ ಮೇಲೂ ಬಣ್ಣದ ಚಿತ್ರಗಳಿವೆ.
ಈ ಚಿತ್ರಗಳಲ್ಲಿ ಮನುಷ್ಯರ ಚಿತ್ರಗಳಿರುವುದನ್ನು ಕಂಡು ಔರಂಗಜೇಬನಿಗೆ ಕೋಪಬಂದು ಅವುಗಳ ಮುಖಗಳನ್ನು ಒರೆಸಿಹಾಕುವಂತೆ ಮಾಡಿದನೆಂದು ಪ್ರತೀತಿ ಇದೆ. ಕೆಳ ಅಂತಸ್ತಿನಲ್ಲಿ ಕಿತಾಬ್ ಖಾನಾ (ಗ್ರಂಥಭಂಡಾರ) ಇದೆ. ಈ ಕಟ್ಟಡದ ಮುಂದೆ ದೊಡ್ಡ ಚಚೌಕದ ಕಲ್ಯಾಣಿ ಇದೆ. ಈ ಕಲ್ಯಾಣಿಯ ಕಟ್ಟೆಯಮೇಲೆ ಆಶ್ಚರ್ಯಕರವಾದ ದೊಡ್ಡ ಹಸಿರು ಶಿಲೆಯ ಚೆಪ್ಪಡಿಗಳಿವೆ. ಮುಂದಿನ ಕೈಸಾಲೆಯಲ್ಲಿ ಅಮೃತಶಿಲೆಯ ಉದ್ದವಾದ ಸುಂದರ ಚಪ್ಪಡಿ ಇದೆ. ಇದನ್ನು ಅರೇಬಿಯಾದಿಂದ ತಂದದೆಂದು ಹೇಳುತ್ತಾರೆ.
ಅರಸ್ ಮಹಲ್ :
ಇದು ಅದಾಲತ್ ಮಹಲಿಗೆ ಆಗ್ನೆಯದಲ್ಲಿರುವ ಅರಮನೆ ಕಟ್ಟಡ. ಇದನ್ನು ೨ನೆಯ ಆಲಿ ಆದಿಲ್ ಶಾಹನು ಕ್ರಿ.ಶ. ೧೬೬೯ರಲ್ಲಿ ವಿಹಾರಕ್ಕಾಗಿ ಕಟ್ಟಿಸಿದನೆಂದು ಪಾರ್ಸಿ ಶಾಸನದಿಂದ ಗೊತ್ತಾಗುತ್ತದೆ. ಇದು ಈಗ ಜಿಲ್ಲಾ ಸರ್ಜನರ ವಾಸಸ್ಥಾನವಾಗಿದೆ.
ಔರಂಗಜೇಬ್ ಈದಿಗಡ್ಡ :
ಇದು ಮುನಿಸಿಪಲ್ ಜಲಾಶಯದ ಬಳಿ ಇದೆ. ಔರಂಗಜೇಬನು ಬಿಜಾಪುರವನ್ನು ವಶಪಡಿಸಿಕೊಂಡ ಮೇಲೆ ಇದನ್ನು ಕ್ರಿ.ಶ. ೧೬೮೭ರಲ್ಲಿ ಈ ಊರ ಮುಸಲ್ಮಾನರ ಪ್ರಾರ್ಥನೆಗಾಗಿ ಕಟ್ಟಿಸಿದನು.
ಬುಖಾರಿ ಮಸೀದಿ :
ಇದನ್ನು ಚಾಂದಬೀಬಿಯು ಬುಖಾರಿ ವಂಶದ ಒಬ್ಬ ಮೌಲ್ವಿಗಾಗಿ ಕಟ್ಟಿಸಿದಳೆಂದು ಹೇಳುತ್ತಾರೆ. ಇದರ ಪೂರ್ವಭಾಗದ ದ್ವಾರವು ಹಸಿರು ಕಲ್ಲಿನ ಕೆತ್ತನೆಯಿಂದ ಸುಂದರವಾಗಿದೆ. ಈ ದ್ವಾರದ ಮೇಲೆ ಪಾರ್ಸಿ ಶಾಸನವಿದೆ.
ಚಾಂದ್ ಬಾವಡಿ :
ಇದು ಈ ಊರಿನ ವಾಯವ್ಯ ಮೂಲೆಯಲ್ಲಿ ಶಹಪುರ ಬಾಗಿಲಿಗೆ ೧೫೦ ಅಡಿಗಳ ದೂರದಲ್ಲಿದೆ. ಈ ಬಾವಿಯನ್ನು ೧ನೆಯ ಆಲಿ ಆದಿಲ್ ಶಾಹನು ಕ್ರಿ.ಶ. ೧೫೭೯ರಲ್ಲಿ ತನ್ನ ರಾಣಿ ಚಾಂದಬೀಬಿಯ ಗೌರವಾರ್ಥವಾಗಿ ಕಟ್ಟಿಸಿದನು. ಈ ಬಾವಿಯ ಸುತ್ತಲೂ ಒಡಾಡಲು ದಾರಿ ಇದೆ. ಈ ಬಾವಿಯ ಮೂರು ಪಕ್ಕಗಳಲ್ಲಿ ಕೋಣೆಗಳಿವೆ. ಇದು ತಾಜ್ ಬಾವಡಿಗಿಂತಲೂ ಹಳೆಯದು.
ಛೋಟ ಅಸರ್ :
ಇದು ಒಂದು ಚಿಕ್ಕ ಮಸೀದಿ. ಇದರ ಗೋಡೆ, ಅಂಕಣ ಮತ್ತು ಮುಂಭಾಗಗಳು ಸುಂದರವಾದ ಗಿಲಾವು ಕೆಲಸಗಳಿಂದ ಕೂಡಿವೆ.
ಚೀನಿ ಮಹಲ್ (ಫರೂಕ್ ಮಹಲ್) :
ಇದನ್ನು ಯೂಸುಪ್ ಆದಿಲ್ ಶಾಹನು ಕಟ್ಟಿಸಿದನು. ಇದರಲ್ಲಿ ಒಂದು ದೊಡ್ಡ ದರ್ಬಾರು ಅಂಗಣವೂ, ಪಕ್ಕಗಳಲ್ಲಿ ಕೋಣೆಗಳೂ ಇವೆ. ಬಿಜಾಪುರದ ಮತ್ತಾವ ಅರಮನೆಗಳಲ್ಲೂ ಇಷ್ಟು ದೊಡ್ಡ ದರ್ಬಾರು ಅಂಗಣ ಇಲ್ಲ. ಭೂ ಶೋಧನೆ ಮಾಡುವಾಗ ಇಲ್ಲಿ ಒಡೆದುಹೋದ ಚೀನಿಪಾತ್ರೆ ಸಾಮಾನುಗಳು ಸಿಕ್ಕಿದ್ದರಿಂದ ಇದಕ್ಕೆ ಚೀನಿ ಮಹಲ್ ಎಂಬ ಹೆಸರು ಬಂದಿತು. ಈಗ ಇಲ್ಲಿ ಜಿಲ್ಲಾ ಸರ್ಕಾರಿ ಕಛೇರಿಗಳು ಇವೆ.
ಗಗನ ಮಹಲ್ :
ಇದು ಆನಂದ ಮಹಲಿಗೆ ಪಶ್ಚಿಮದಲ್ಲಿ ೨೦೦ ಅಡಿಗಳ ದೂರದಲ್ಲಿದೆ. ಇದನ್ನು ಕ್ರಿ.ಶ. ೧೫೬೧ರಲ್ಲಿ ಕಟ್ಟಲಾಯಿತೆಂದು ಹೇಳುತ್ತಾರೆ. ಇದು ಬಹಳ ವರ್ಷಗಳವರೆಗೆ ಸುಲ್ತಾನರ ವಾಸಸ್ಥಾನವಾಗಿಯೂ, ದರ್ಬಾರು ಅಂಗಣ ವಾಗಿಯೂ ಇತ್ತು. ಈಗ ಈ ಕಟ್ಟಡಕ್ಕೆ ಛಾವಣಿ ಇಲ್ಲ. ಇದರ ದರ್ಬಾರು ಅಂಗಣದಲ್ಲಿ ಅನೇಕ ಚಾರಿತ್ರಿಕ ಘಟನೆಗಳು ನಡೆದಿರುತ್ತವೆ.
ಪ್ರಸಿದ್ದ ಸುಲ್ತಾನಳಾದ ಚಾಂದಬೀಬಿಯು ಅನೇಕ ವರ್ಷ ಇಲ್ಲಿ ಕೂತು ರಾಜ್ಯಭಾರ ಮಾಡಿರುತ್ತಾಳೆ. ಈ ಊರನ್ನು ಔರಂಗಜೇಬನು ವಶಪಡಿಸಿಕೊಂಡಮೇಲೆ ಅವನ ಮುಂದೆ ಸಿಕಂದರ್ ಸುಲ್ತಾನನು ಬೆಳ್ಳಿ ಕೋಳವನ್ನು ತೊಟ್ಟು ಹಾಜರಾಗುವಂತೆ ಆಜ್ಞೆಮಾಡಿದುದು ಇಲ್ಲಿಯೇ. ಈ ಕಟ್ಟಡದ ಒಂದು ಶಿಲ್ಪಚಾತುರ್ಯವೆಂದರೆ ಇದರ ಮಧ್ಯದ ಕಮಾನು ೬೦ ಅಡಿ ೯ ಅಂಗುಲಗಳ ಅಂತರವನ್ನು ಹೊಂದಿರುವುದು.
ಹಸಿರು-ಕಪ್ಪು ಕಲ್ಲಿನ ಚಿತ್ರಿತ ಗೋರಿಕಲ್ಲು :
೧ನೆಯ ಆಲಿ ಆದಿಲ್‌ಶಾಹನ ಗೋರಿಗೆ ದಕ್ಷಿಣದಲ್ಲಿ ೫೦ ಗಜಗಳ ದೂರದಲ್ಲಿ ಹಸಿರು-ಕಪ್ಪು ಅಗ್ನಿಶಿಲೆಯಲ್ಲಿ ಸುಂದರವಾಗಿ ಕೆತ್ತಿದ ಈ ಗೋರಿಕಲ್ಲು ಇದೆ. ಇದು ಯಾರ ಗೋರಿ ಎಂಬುದು ಗೊತ್ತಿಲ್ಲ. ಈ ಗೋರಿಕಲ್ಲನ್ನು ಸ್ಥಾಪಿಸಿರುವ ಜಗಲಿ ಸಹ ಅಮೋಘ ಕೆತ್ತನೆಯಿಂದ ಕೊಡಿದೆ. ಈ ಊರಿನ ಯಾವ ಗೋರಿ ಕಲ್ಲೂ ಇಷ್ಟು ವೈಭವಯುತವಾಗಿಲ್ಲವೆಂದು ವಿಮರ್ಶಕರು ಹೇಳುತ್ತಾರೆ.
ಜಹಾಜ್ ಮಹಲ್ :
ಇದು ಅಸರ್ ಮಹಲಿನ ಹತ್ತಿರದಲ್ಲಿದೆ. ಇದು ಈಗ ಜೀರ್ಣವಾಗಿದೆ. ಹಿಂದೆ ಈ ಕಟ್ಟಡವು ಬಿಜಾಪುರ ನೌಕಾಪಡೆಯ ಕಛೇರಿಯಾಗಿತ್ತೆಂದು ಹೇಳುತ್ತಾರೆ.
ಜಲ ಮಂಜೀಲ್ :
ಇದು ಸಾತ್ ಮಂಜೀಲ್ ಅರಮನೆಗೆ ಎದುರಿನಲ್ಲಿ ಇದೆ. ಇದು ಒಂದು ಚಿಕ್ಕ ಜಲಾಶಯದ ಮಧ್ಯೆ ಇರುವ ಸುಂದರ ಚಿಕ್ಕ ಕಟ್ಟಡ. ಇದು ವಿಹಾರ ಸ್ಥಾನವಾಗಿ ಬಳಸಲ್ಪಡುತ್ತಿತ್ತೆಂದು ಹೇಳುತ್ತಾರೆ.
ಜಾಮಿ ಮಸೀದಿ :
ಇದು ಈ ಊರ ಕೋಟೆಗೆ ೧೨೦೦ ಗಜಗಳ ದೂರದಲ್ಲಿದೆ. ಇದು ಮುಸ್ಲಿಮರ ಶುಕ್ರವಾರದ ಪ್ರಾರ್ಥನೆಗಾಗಿ ಕಟ್ಟಿದ ಕಟ್ಟಡ. ವಿಜಯನಗರದ ಮೇಲೆ ಯುದ್ಧಮಾಡಿ ಜಯಶೀಲನಾಗಿ ಹಿಂತಿರುಗಿದ ಮೇಲೆ ೧ನೆಯ ಆಲಿ ಆದಿಲ್ ಶಹನು ಈ ಕಟ್ಟಡವನ್ನು ಕಟ್ಟಲು ಪ್ರಾರಂಭಿಸಿದನು.
ಇವನು ಮತ್ತು ಇವನ ತರುವಾಯದ ಸುಲ್ತಾನರು ಈ ಕಟ್ಟಡದ ನಿರ್ಮಾಣಕ್ಕೆ ಹೆಚ್ಚಿನ ಗಮನವನ್ನು ಕೊಟ್ಟರೂ ಇದು ಪೂರ್ತಿಯಾಗಲೇ ಇಲ್ಲ. ಇದರ ಮೀನಾರುಗಳು ನಿರ್ಮಾಣವಾಗಲೇ ಇಲ್ಲ.
ಈ ಮಸೀದಿಯು ಪೂರ್ವ-ಪಶ್ಚಿಮ ೪೦೦ ಅಡಿಗಳ, ಉತ್ತರ-ದಕ್ಷಿಣ ೨೮೦ ಅಡಿಗಳ ಆಯಾಕಾರದ ಕಟ್ಟಡವಾಗಿದೆ. ಇದರ ಪೂರ್ವ ದಿಕ್ಕಿನ ಮುಖ್ಯದ್ವಾರವು ಈ ಮಸೀದಿಯ ವಿಶಾಲ ಪ್ರಾಂಗಣಕ್ಕೆ ಒಯ್ಯುತ್ತದೆ. ಈ ಪ್ರಾಂಗಣದ ಮಧ್ಯೆ ಒಂದು ದೊಡ್ಡ ಕಲ್ಯಾಣಿ ಇದೆ. ಈ ರೀತಿಯಾಗಿ ಈ ಮಸೀದಿಯು ಒಟ್ಟು ೯೧,೦೦೦ ಚದುರಡಿಗಳ ಜಾಗವನ್ನು ತೆಗೆದುಕೊಂಡಿದೆ. ಈ ಮಸೀದಿಯ ಮೂಲ ಕಟ್ಟಡದಲ್ಲಿ ನೆಲವು ೪೫ ಸಮ ಚದುರಗಳನ್ನು ಹೊಂದಿದೆ.
ನೆಲದ ಮೇಲೆ ರಚಿಸಿರುವ ಕಪ್ಪು ಎಲೆಗಳು ನಮಾಜಿಗೆ ಬರುವ ಪ್ರತಿಯೊಬ್ಬನಿಗೂ ಸಾಕಾಗುವಷ್ಟು ಸ್ಥಳವನ್ನು ಸೂಚಿಸುತ್ತದೆ. ಈ ಮಸೀದಿಯಲ್ಲಿ ಒಟ್ಟು ೨೨೮೬ ಇಂಥ ಎಲ್ಲೆ ಕಟ್ಟು ಜಾಗಗಳು ಇವೆ. ಎಂದರೆ ಒಮ್ಮೆಲೆ ಈ ಮಸೀದಿಯಲ್ಲಿ ೨೨೮೬ ಜನರು ಒಟ್ಟಿಗೆ ಪ್ರಾರ್ಥನೆ ಮಾಡಲು ಅವಕಾಶವಿದೆ. ಈ ಮಸೀದಿಯ ಗುಮ್ಮಟವು ಗೋಲಗುಮ್ಮಟದ ಅರ್ಧದಷ್ಟಕ್ಕಿಂತಲೂ ಕಡಿಮೆ ಇದ್ದರೂ ಅದಕ್ಕಿಂತಲೂ ಸುಂದರವಾಗಿದೆ.
ಮಧ್ಯದ ಮಿಹರಾಬಿನ ಮುಂದೆ ಒಂದು ದೊಡ್ಡ ಪರದೆ ಇದೆ. ಈ ಪರದೆಯನ್ನು ತೆಗೆದರೆ ಮುಂಭಾಗವು ಬಣ್ಣದ ಹಿನ್ನೆಲೆಯಲ್ಲಿ ಸುಂದರವಾದ ಗಿಲಾವು ಕೆಲಸವನ್ನು ಹೊಂದಿದೆ. ಈ ಗಿಲಾವು ಕೆಲಸದಲ್ಲಿ ಅನೇಕ ಚಿತ್ರಣಗಳೂ ಬರವಣಿಗೆಗಳೂ ಇವೆ. ಈ ಮಸೀದಿಯನ್ನು ಈಗಲೂ ಈ ಊರಿನ ಜನರು ಬಳಸುತ್ತಾರೆ.
ಜೋಡು ಗುಮ್ಮಟಗಳು :
ಇವು ಈ ಊರ ಕೋಟೆಯ ಮೆಕ್ಕಾ ದ್ವಾರಕ್ಕೆ ಪೂರ್ವದಲ್ಲಿ ೪೦೦ ಗಜಗಳ ದೂರದಲ್ಲಿವೆ. ಇವು ಒಂದಕ್ಕೊಂದು ಹತ್ತಿರದಲ್ಲಿ ಒಂದೇ ಆಕೃತಿಯಲ್ಲಿ ಇರುವುದರಿಂದ ಇವುಗಳಿಗೆ ಈ ಹೆಸರು ಬಂದಿದೆ. ಇವುಗಳ ಗೋರಿಗಳ ನೆಲವು ಬಹಳ ಎತ್ತರದಲ್ಲಿದೆ. ಈ ಗುಮ್ಮಟಗಳ ಒಳಗೆ ಗೋಲ ಗುಮ್ಮಟದಲ್ಲಿ ಇರುವಂತೆ ಮೊಗಸಾಲೆಗಳಿವೆ. ಆದರೆ ಈ ಗುಮ್ಮಟಗಳ ವ್ಯಾಸವು ಕಡಿಮೆ ಇರುವುದರಿಂದ ನಿರ್ದಿಷ್ಟ ಪ್ರತಿಧ್ವನಿ ಕಂಡುಬರುವುದಿಲ್ಲ.
ಕರೀಂ ಉದ್ದೀನನ ಮಸೀದಿ :
ಇದು ಆನಂದ ಮಹಲಿಗೆ ನೈರುತ್ಯದಲ್ಲಿ ೨೦೦ ಗಜಗಳ ದೂರದಲ್ಲಿದೆ. ಇದು ಒಂದು ಹಳೆಯ ಜೀರ್ಣವಾದ ಹಿಂದೂ ದೇವಸ್ಥಾನದಂತೆ ಕಾಣುತ್ತದೆ. ಇದು ಈ ಊರಿನ ಅತ್ಯಂತ ಹಳೆಯ ಮಸೀದಿಯಾಗಿದೆ. ಕರೀಂ ಉದ್ದೀನನು ಕ್ರಿ.ಶ. ೧೪ನೆಯ ಶತಮಾನದ ಆದಿಭಾಗದಲ್ಲಿ ಈ ಊರಿನ ಮಂಡಲಾಧಿಕಾರಿಯಾಗಿದ್ದನೆಂದು ತಿಳಿದುಬರುತ್ತದೆ. ಇವನ ಅಪ್ಪಣೆಯ ಮೇರೆಗೆ ಸಾಲೋಟಗಿಯ ಶಿಲ್ಪಿ ರೇವಯ್ಯನೆಂಬುವನು ಕ್ರಿ.ಶ. ೧೩೨೦ರಲ್ಲಿ ಈ ಮಸೀದಿಯನ್ನು ಕಟ್ಟಿದನೆಂದು ಈ ಮಸೀದಿಯ ಒಂದು ಕಂಬದ ಮೇಲಿನ ಕನ್ನಡ ಶಾಸನ ಹೇಳುತ್ತದೆ. ಈ ಮಸೀದಿಯನ್ನು ಒಂದೆರಡು ಹಿಂದೂ ದೇವಸ್ಥಾನಗಳ ಕಟ್ಟಡದ ವಸ್ತುಗಳಿಂದ ಕಟ್ಟಲಾಗಿದೆಯೆಂದು ಹೆನ್ರಿ ಕಸಿನ್ಸ್ ಅವರು ಅಭಿಪ್ರಾಯಪಡುತ್ತಾರೆ. ಇದು ಹಿಂದೆ ಒಂದು ಅಗ್ರಹಾರದ ಪಾಠಶಾಲೆಯಾಗಿತ್ತೆಂದೂ, ಮಲ್ಲಿಕಾಫರನ ದಂಡಯಾತ್ರೆಯ ಕಾಲದಲ್ಲಿ ಇದನ್ನು ಮಸೀದಿಯಾಗಿ ಪರಿವರ್ತಿಸಲಾಯಿತೆಂದೂ ಸಹ ಹೇಳುತ್ತಾರೆ.
ಲಂಡ್ ಕಸಬ : ಇದು ಈ ಊರಿನ ದಕ್ಷಿಣ ಭಾಗದ ಕೋಟೆಯ ಬುರುಜಿನ ಮೇಲೆ ಇರುವ ಬಿಜಾಪುರದ ಪ್ರಸಿದ್ದ ಫಿರಂಗಿ. ಇದು ೨೧ ಅಡಿ ೭ ಅಂಗುಲ ಉದ್ದವಾಗಿಯೂ, ಸುಮಾರು ೪೬.೫ ಟನ್ನುಗಳಷ್ಟು ಭಾರವಾಗಿಯೂ ಇದೆ. ಇದು ಮುಂಭಾಗದ ಕೊನೆಯಲ್ಲಿ ೪ ಅಡಿ ೪ ಅಂಗುಲ ವ್ಯಾಸವನ್ನೂ, ಹಿಂಭಾಗದ ಕೊನೆಯಲ್ಲಿ ೪ ಅಡಿ ೫ ಅಂಗುಲ ವ್ಯಾಸವನ್ನೂ ಹೊಂದಿದೆ. ಈ ಕೋಟೆಯಲ್ಲಿ ಚಿಕ್ಕ ಚಿಕ್ಕ ಪ್ರಮಾಣದ ಹಲವಾರು ಫಿರಂಗಿಗಳು ಇವೆ.
ಮಲ್ಲಿಕ್-ಇ-ಮೈದಾನ್ :
ಇದು ಈ ಊರ ಕೋಟೆಯ ಫಟ್ಟಾದ್ವಾರದ ಉತ್ತರಕ್ಕೆ ೧೦೦ ಗಜಗಳ ದೂರದಲ್ಲಿ ಷೇರ್‌ಜಿ ಬುರುಜಿನ ಮೇಲೆ ಇರುವ ಫಿರಂಗಿ. ಈ ಬುರುಜಿನ ದ್ವಾರದ ಎರಡು ಪಕ್ಕಗಳಲ್ಲಿ ಕಲ್ಲಿನಲ್ಲಿ ಎರಡು ಸಿಂಹಗಳು ಕೆತ್ತಿರುವುದರಿಂದ ಈ ಬುರುಜಿಗೆ ಈ ಹೆಸರು ಬಂದಿದೆ. ಈ ಬುರುಜದ ಮೇಲೆ ಇರುವ ಈ ಮಲ್ಲಿಕ್-ಇ-ಮೆದಾನ್ ಫಿರಂಗಿಯು ಪ್ರಸಿದ್ಧವಾಗಿದ್ದು ಲಂಡ್ ಕಸಬ ಫಿರಂಗಿಯನ್ನು ಬಿಟ್ಟರೆ ಉದ್ದದಲ್ಲಿ ಬಿಜಾಪುರದ ಫಿರಂಗಿಗಳಲ್ಲಿ ಇದೇ ಅತ್ಯಂತ ದೊಡ್ಡದು. ಇದು ೫೫ ಟನ್ನುಗಳಷ್ಟು ತೂಕವಾಗಿದೆ.
ಈ ಫಿರಂಗಿಯ ಉದ್ದ ೧೪ ಅಡಿ ೪ ಅಂಗುಲ. ಇದರ ಹೊರಗಿನ ಸುತ್ತಳತೆಯೂ ಅಷ್ಟೇ ಇದೆ. ಇದರ ಬಾಯಲ್ಲಿ ಒಬ್ಬ ಮನುಷ್ಯ ಸಲೀಸಾಗಿ ಕುಳಿತುಕೊಳ್ಳಬಹುದು. ಈ ಫಿರಂಗಿಯ ಬಾಯನ್ನು ಸಿಂಹದ ತೆರೆದ ಬಾಯಿಯಂತೆಯೂ, ಅದರ ಎಡ ಬಲ ದವಡೆಗಳಲ್ಲಿ ಆನೆಗಳು ಸಿಕ್ಕಿಕೊಂಡಂತೆಯೂ ರಚಿಸಲಾಗಿದೆ. ಈ ಫಿರಂಗಿಯನ್ನು ಜಾಗಟೆ, ಗಂಟೆಗಳನ್ನು ತಯಾರಿಸುವಂತೆ ತಾಮ್ರ, ಕಬ್ಬಿಣ ಮತ್ತು ತವರಗಳ ಮಿಶ್ರ ಎರಕದಿಂದ ತಯಾರಿಸಲಾಗಿದೆ. ಇದನ್ನು ಕುಟ್ಟಿದರೆ ಗಂಟೆಯ ಶಬ್ದ ಬರುತ್ತದೆ.
ಇದರ ಹೊರಮೈ ಹಸಿರುಗುಪ್ಪಾದ ಗಾಜಿನಂತೆ ಇದೆ. ಮಲ್ಲಿಕ್-ಇ-ಮೈದಾನ್ ಎಂದರೆ ಮೈದಾನದ ಮಹಾರಾಜ ಎಂದು ಅರ್ಥ. ಇದನ್ನು ಕ್ರಿ.ಶ. ೧೫೪೯ರಲ್ಲಿ ೧ನೆಯ ಬರ್ಹಂ ನೈಜಾಂ ಶಹನ ತುರ್ಕಿ ಅಧಿಕಾರಿಯೊಬ್ಬ ಅಹಮದ್ ನಗರದಲ್ಲಿ ಎರಕ ಹೊಯಿಸಿದನೆಂದೂ, ಇದನ್ನು ಕ್ರಿ.ಶ. ೧೫೬೫ರಲ್ಲಿ ನಡೆದ ರಕ್ಕಸ ತಂಗಡಗಿ ಯುದ್ಧದಲ್ಲಿ ವಿಜಯನಗರ ಸೈನ್ಯದ ಮೇಲೆ ಬಳಸಲಾಯಿತೆಂದೂ, ಇದನ್ನು ಮುಂದೆ ಯುದ್ಧದ ಜಯಸಂಕೇತವಾಗಿ ಕ್ರಿ.ಶ. ೧೬೩೬ರಲ್ಲಿ ಇಲ್ಲಿಗೆ ತಂದು ಇಡಲಾಯಿತೆಂದೂ, ಔರಂಗಜೇಬನು ಬಿಜಾಪುರದ ಮೇಲೆ ದಂಡೆತ್ತಿ ಬಂದು ಬಿಜಾಪುರವನ್ನು ಗೆದ್ದ ಸಂದರ್ಭದಲ್ಲಿ ಮಹಾ ಬಲಿಷ್ಟವಾದ ಈ ಫಿರಂಗಿಯನ್ನು ಅಂಕೆಯೊಳಗೆ ತರುವಲ್ಲಿ ತಾನು ಯಶಸ್ವಿಯಾದುದಾಗಿ ಅವನು ಹೆಮ್ಮೆಯಿಂದ ಇದರ ಮೇಲೆ ಕ್ರಿ.ಶ. ೧೬೮೬ರಲ್ಲಿ ಲಿಪಿಯನ್ನು ಕೊರೆಸಿದನೆಂದೂ ಐತಿಹ್ಯವಿದೆ.
ಈ ಫಿರಂಗಿಯನ್ನು ಕುತೂಹಲ ವಸ್ತುವಾಗಿ ಇಂಗ್ಲೆಂಡಿಗೆ ಸಾಗಿಸಲು ಪ್ರಯತ್ನಿಸಲಾಯಿತೆಂದೂ, ಆದರೆ ಸಾಗಣೆಯ ತೊಂದರೆಯಿಂದ ಅದನ್ನು ಕೈಬಿಡಲಾಯಿತೆಂದೂ, ಮುಂದೆ ಕ್ರಿ.ಶ. ೧೮೫೪ರಲ್ಲಿ ಒಬ್ಬ ಸ್ಥಳೀಯ ನ್ಯಾಯಾಧಿಕಾರಿ ಇದನ್ನು ಹರಾಜಿಗೆ ಇಡಿಸಿ ೧೫೦ ರೂಪಾಯಿಗಳಿಗೆ ಮಾರಲಾಯಿತೆಂದೂ, ಆದರೆ ಈ ಮಾರಾಟವನ್ನು ವಜಾಮಾಡಿ ಇಲ್ಲಿಯೇ ಉಳಿಸಿಕೊಳ್ಳಲಾಯಿತೆಂದೂ ಸಹ ಹೇಳಿಕೆ ಇದೆ.
ಮಲ್ಲಿಕ್ ಜಹಾನ್ ಬೇಗಂ ಮಸೀದಿ :
ಇದು ಈ ಊರ ಕೋಟೆಯ ಪಶ್ಚಿಮದಲ್ಲಿ ೧೦೦ ಗಜಗಳ ದೂರದಲ್ಲಿ
ಇದೆ. ಇದನ್ನು ೨ನೆಯ ಇಬ್ರಾಹಿಂ ಆದಿಲ್‌ಶಹನು ಕ್ರಿ.ಶ. ೧೫೮೬ರಲ್ಲಿ ತನ್ನ ರಾಣಿ ಮಲ್ಲಿಕಾ ಜಹಾನ್ ಬೇಗಮಳ ಗೌರವಾರ್ಥವಾಗಿ ಕಟ್ಟಿಸಿದನು. ಇದರ ಲೋವೆಯಲ್ಲಿ ಚಿಕ್ಕಕಲ್ಲು ಸರಪಳಿ ಇದ್ದ ಕಾರಣ ಇದಕ್ಕೆ ಜಂಜೀರಿ ಮಸೀದಿ ಎಂಬ ಹೆಸರೂ ಇದೆ. ಈ ಕಟ್ಟಡ ಉತ್ತಮ ಶಿಲ್ಪಚಾತುರ್ಯದಿಂದ ಕೂಡಿದೆ.
ಮಲ್ಲಿಕ್ ಸಂಡಲ್ ಮಸೀದಿ :
ಇದು ಹಿಂದು-ಮುಸಲ್ಮಾನ ಮಿಶ್ರ ಶೈಲಿಯಲ್ಲಿ ಕಟ್ಟಲ್ಪಟಿದೆ. ಇದರ ಸಾಮಾನ್ಯ ಶಿಲ್ಪವನ್ನು ನೋಡಿದರೆ ಇದಕ್ಕೂ ಇಬ್ರಾಹಿಂ ರೋಜಾವನ್ನು ಕಟ್ಟಿದ ಮಲ್ಲಿಕ್ ಸಂಡಲನಿಗೂ ಯಾವ ಸಂಬಂಧವು ಕಂಡುಬಂದಿಲ್ಲವೆಂದೂ, ಇದನ್ನು ದರ್ಬಾರಿನ ನರ್ತಕಿಯೊರ್ವಳು ಕಟ್ಟಿಸಿದಳೆಂದೂ, ಇದರ ಮುಖ್ಯಗೋರಿ ಒಬ್ಬ ಹೆಂಗಸಿನದಾಗಿದೆಯೆಂದೂ ವಿಮರ್ಶಕರು ಹೇಳುತ್ತಾರೆ.
ಮೆಕ್ಕಾ ಮಸೀದಿ :
ಇದು ಈ ಊರಿನ ಕೋಟೆಯ ಮಧ್ಯದಲ್ಲಿ ಇದೆ. ಇದು ಮೆಕ್ಕಾದ ಮಸೀದಿಯ ಮಾದರಿಯಲ್ಲೇ ಕಟ್ಟಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಬಿಜಾಪುರದ ಅತ್ಯಂತ ಚಿಕ್ಕ ಮತ್ತು ಸುಂದರ ಮಸೀದಿಗಳಲ್ಲಿ ಒಂದಾಗಿದೆ. ಇದು ೨ನೆಯ ಇಬ್ರಾಹಿಂ ಆದಿಲ್ ಶಹನ ಕಾಲದಲ್ಲಿ ಮಲ್ಲಿಕ್ ಸಂಡಲನ ಮೇಲ್ವಿಚಾರಣೆಯಲ್ಲಿ ಕಟ್ಟಲ್ಪಟ್ಟಿತೆಂದು ಹೇಳುತ್ತಾರೆ.
ಮೆಹತರ್ ಮಹಲ್ :
ಇದು ವಾಸ್ತವವಾಗಿ ಅರಮನೆಯಲ್ಲ. ಇದು ಮಸೀದಿ, ತೋಟ ಮತ್ತು ಇವುಗಳಿಗೆ ಹೋಗುವ ಅಲಂಕೃತ ಮಹಾದ್ವಾರ – ಇವುಗಳಿಂದ ಕೂಡಿದೆ. ಇದರ ಹೆಸರಿನ ಅರ್ಥ ಗುಡಿಸುವವನ ಅರಮನೆ ಎಂದು. ೧ನೆಯ ಇಬ್ರಾಹಿಂ ಆದಿಲ್‌ಶಹನಿಗೆ ತೊನ್ನು ರೋಗ ಪ್ರಾಪ್ತವಾಗಲು ಅವನು ರಾತ್ರಿ ಮಲಗಿ ಬೆಳಿಗ್ಗೆ ಮೊಟ್ಟಮೊದಲಾಗಿ ಕಣ್ಣಿಗೆ ಕಾಣುವವರಿಗೆ ಭಾರಿ ಹಣವನ್ನು ಕೊಟ್ಟರೆ ಆ ಹಣವು ಧರ್ಮಕ್ಕಾಗಿ ಬಳಸಲ್ಪಡುವುದೆಂದೂ, ಆಗ ಅವನ ತೊನ್ನುರೋಗ ವಾಸಿಯಾಗುವುದೆಂದೂ, ಜೋತಿಷ್ಯನೊಬ್ಬನು ಹೇಳಿ ಸುಲ್ತಾನನಿಗೆ ಕಾಣಿಸಿಕೊಳ್ಳುವ ಮನುಷ್ಯ ತಾನೇ ಆಗಬೇಕೆಂದು ಕನಸು ಕಾಣುತ್ತಿರಲು ಜೋತಿಷ್ಯನ ದುರದೃಷ್ಟದಿಂದ ಸುಲ್ತಾನನು ಹೊತ್ತಿಗೆ ಮುಂಚೆಯೇ ಎದ್ದು ಮೊದಲು ಒಬ್ಬ ಕಸ ಗುಡಿಸುವವನನ್ನು ಕಂಡು ಅವನಿಗೇ ಅಪಾರ ಹಣವನು ಕೊಟ್ಟನೆಂದೂ, ಆ ಕಸಗುಡಿಸುವವನು ಆ ಹಣವನ್ನು ಹೇಗೆ ಬಳಸಬೇಕೆಂಬುದು ತಿಳಿಯದೆ ಅದರಿಂದ ಈ ಮಹಲನ್ನು ಕಟ್ಟಿಸಿದನೆಂದೂ, ಈ ರೀತಿ ಕಸ ಗುಡಿಸುವವನು ಈ ಮಲಹನ್ನು ಕಟ್ಟಿಸಿದುದರಿಂದ ಈ ಮಹಲಿಗೆ ಮೆಹತರ್ ಮಹಲ್ ಎಂಬ ಹೆಸರು ಬಂದಿತೆಂದೂ ಹೇಳುತ್ತಾರೆ. ೨ನೆಯ ಇಬ್ರಾಹಿಂ ಆದಿಲ್ ಶಹನಿಗೆ ಮೆಹತರ್ ಗಡ ಎಂಬ ಒಬ್ಬ ಮಂತ್ರಿ ಇದ್ದನೆಂದೂ, ಅವನು ಈ ಮಹಲನ್ನು ಕಟ್ಟಿಸಿದನೆಂದೂ ಇನ್ನು ಕೆಲವರು ಹೇಳುತ್ತಾರೆ.
ಮೆಹತರ್ ಎಂದರೆ ಹಿರಿಯವ ಎಂದೂ, ಫಕೀರರಲ್ಲಿ ಹಿರಿಯವನೊಬ್ಬ ಈ ಮಹಲನ್ನು ಕಟ್ಟಿಸಿದುದರಿಂದ ಈ ಮಹಲಿಗೆ ಈ ಹೆಸರು ಬಂದಿತೆಂದೂ ಮತ್ತೆ ಕೆಲವರು ಹೇಳುತ್ತಾರೆ.
ಮೋತಿ ಗುಮ್ಮಟ :
ಇದು ಇಬ್ರಾಹಿಂ ರೋಜಾಗೆ ವಾಯುವ್ಯದಲ್ಲಿ ೨ ಫರ್ಲಾಂಗುಗಳ ದೂರದಲ್ಲಿದೆ. ಇದರ ಬಿಳಿಯ ಗುಮ್ಮಟ ಬಹುದೂರಕ್ಕೆ ಕಾಣಿಸುತ್ತದೆ. ಈ ಗುಮ್ಮಟದ ಒಳಭಾಗವನ್ನು ಮುತ್ತುಗಳ ಪುಡಿಯಿಂದ ಲೇಪನ ಮಾಡಿದ್ದರಿಂದ ಈ ಗುಮ್ಮಟಕ್ಕೆ ಈ ಹೆಸರು ಬಂದಿದೆಯೆಂದು ಹೇಳುತ್ತಾರೆ. ಮೋತಿ ಎಂದರೆ ಮುತ್ತು.
ಮುಸ್ತಾಫಾಖಾನನ ಮಸೀದಿ ಮತ್ತು ಅರಮನೆ : ಇವು ಜಾಮಿ ಮಸೀದಿಗೆ ಉತ್ತರದಲ್ಲಿ ೨೦೦ ಗಜಗಳ ದೂರದಲ್ಲಿ ಇವೆ. ಈ ಮಸೀದಿಯು ೫ ಅಡಿ ಎತ್ತರದ ಜಗಲಿಯ ಮೇಲೆ ನಿಂತಿದೆ. ಈ ಮಸೀದಿಯ ಹಿಂದಕ್ಕೆ ಮುಸ್ತಾಫಾಖಾನನ ಅರಮನೆಯ ಅವಶೇಷಗಳು ಇವೆ.
ನೌಗುಮ್ಮಟ (ನೌಗುಂಬಜ್) :
ಇದು ಮುಸ್ತಾಫಾಖಾನನ ಮಸೀದಿಗೆ ಈಶಾನ್ಯದಲ್ಲಿ ೨೦೦ ಗಜಗಳ ದೂರದಲ್ಲಿದೆ. ಇದು ೯ ಗುಮ್ಮಟಗಳನ್ನು ಹೊಂದಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದರ ಕಮಾನುಗಳು ಸ್ವಲ್ಪ ತಗ್ಗಾಗಿದ್ದರೂ ಉಳಿದ ಭಾಗಗಳು ಎಲ್ಲ ರೀತಿಯಲ್ಲಿಯೂ ಸಪ್ರಮಾಣದಲ್ಲಿದ್ದು ಸುಂದರವಾಗಿವೆ.
ಪಾನಿ ಮಹಲ್ :
ಇದು ಅರಸ್ ಮಹಲಿಗೆ ಎದುರಿನಲ್ಲಿ ಕೋಟೆಯ ಒಂದು ಬುರುಜಿನ ಮೇಲೆ ಇದೆ. ಇದು ಜೀರ್ಣವಾಗಿದೆ. ಇದು ಹಿಂದೆ ತೋಟದ ಮನೆಯಾಗಿತ್ತೆಂದೂ, ನೀರಿನ ಕಂದಕದ ಮೇಲು ಭಾಗದಲ್ಲಿದ್ದುದರಿಂದ ಇದಕ್ಕೆ ಈ ಹೆಸರು ಬಂದಿತೆಂದೂ ಹೇಳುತ್ತಾರೆ. ಪಾನಿ ಎಂದರೆ ನೀರು,
ಸಂಗೀತ್ ಮಹಲ್ :
ಇದು ಬಿಜಾಪುರಕ್ಕೆ ಪಶ್ಚಿಮದಲ್ಲಿ ೪ ಮೈಲಿಗಳ ದೂರದಲ್ಲಿ ೨ನೆಯ ಇಬ್ರಾಹಿಂ ಆದಿಲ್ ಶಹನು ನಿರ್ಮಾಣ ಮಾಡಿದ ನವ್‌ರಸ್ ಪುರದಲ್ಲಿ ಇದೆ. ನವ್‌ರಸ್ ಪುರವು ಈಗ ಜೀರ್ಣವಾಗಿದೆ. ಸಂಗೀತ ಮಹಲಿಗೆ ನವ್‌ರಸ್ ಮಹಲು ಎಂಬ ಹೆಸರೂ ಇದೆ. ಈ ಮಹಲಿನ ಬಹುಭಾಗ ಜೀರ್ಣವಾಗಿದೆ. ಈ ಮಹಲು ಸುಂದರವಾದ ವಾತಾವರಣದಲ್ಲಿ ಇದೆ.
ತಾಜ್ ಬಾವಡಿ :
ಇದು ಕೋಟೆಯ ಮೆಕ್ಕಾದ್ವಾರಕ್ಕೆ ಪೂರ್ವದಲ್ಲಿ ೧೦೦ ಗಜಗಳ ದೂರದಲ್ಲಿ ಇದೆ. ಇದನ್ನು ಮಲ್ಲಿಕ್ ಸಂಡಲನು ೨ನೆಯ ಇಬ್ರಾಹಿಂ ಆದಿಲ್‌ಶಹನ ರಾಣಿ ತಾಜಳ ಗೌರವಾರ್ಥವಾಗಿ ಕಟ್ಟಿಸಿದನೆಂದು ಹೇಳುತ್ತಾರೆ. ಈ ಬಾವಿ ೨೨೩ ಅಡಿ ಚದರವಾಗಿದೆ. ೫೨ ಅಡಿ ಆಳವಾಗಿದೆ.
ಯಾಕೂತ್‌ಬೂಲಿಯ ಗೋರಿ ಮತ್ತು ಮಸೀದಿ :
ಇವು ಅದಾಲತ್ ಮಹಲಿಗೆ ಈಶಾನ್ಯದಲ್ಲಿವೆ. ಇವು ಚಚೌಕದ ಸುಂದರ ಕಟ್ಟಡಗಳಾಗಿವೆ.
ಬಾಲಾಜಿ ಮಂದಿರ :
ಇದು ರಾಮದೇವರ ರಸ್ತೆ ಮತ್ತು ಬಸವೇಶ್ವರ ರಸ್ತೆ-ಇವು ಸಂಧಿಸುವ ಸ್ಥಳದಿಂದ ಒಂದೂವರೆ ಫರ್ಲಾಂಗುಗಳ ದೂರದಲ್ಲಿದೆ. ಇದನ್ನು ೫೦ ವರ್ಷಗಳ ಹಿಂದೆ ಈ ಊರ ವರ್ತಕ ಮಂಡಲಿ ಕಟ್ಟಿಸಿರುತ್ತದೆ. ಇದರ ಬಾಲಾಜಿ ವಿಗ್ರಹ ಕಪ್ಪು ಶಿಲೆಯಲ್ಲಿ ಸುಂದರವಾಗಿದೆ.
ಮಹಾಲಕ್ಷ್ಮಿ ದೇವಸ್ಥಾನ :
ಇದನ್ನು ಈ ಊರಿನ ವಕೀಲರೂ, ಧರ್ಮಿಷ್ಠರೂ ಆದ ಪಾಂಡುರಂಗರಾವ್ ಅನಂತರಾವ್ ದೇಸಾಯಿ ಎಂಬುವರು ಕ್ರಿ.ಶ. ೧೯೧೫ರಲ್ಲಿ ಕಟ್ಟಿಸಿರುತ್ತಾರೆ. ಮಹಾಲಕ್ಷ್ಮಿಯ ವಿಗ್ರಹವೂ ಮತ್ತು ಇತರ ವಿಗ್ರಹಗಳೂ ಬಿಳಿಯ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿವೆ. ಈ ದೇವಸ್ಥಾನದ ಮೇಲಂತಸ್ತಿನ ಮೊಗಸಾಲೆಯಲ್ಲಿ ಅದೈತ ಗ್ರಂಥಾಲಯ ಎಂಬ ಪುಸ್ತಕ ಭಂಡಾರವಿದೆ.
ನರಸಿಂಹ ದೇವಸ್ಥಾನ :
ಇದನ್ನು ನರಸೋಬನ ದೇವಸ್ಥಾನವೆಂದೂ ಕರೆಯುತ್ತಾರೆ. ಇದು ಈ ಊರಿನ ಕೋಟೆಯ ಪಶ್ಚಿಮ ಭಾಗದ ಮಧ್ಯದಲ್ಲಿ ಇದೆ. ಈ ದೇವಸ್ಥಾನವು ದತ್ತಾತ್ರೇಯನಿಗೆ ಮೀಸಲಾಗಿದೆ. ೨ನೆಯ ಇಬ್ರಾಹಿಂ ಆದಿಲ್ ಶಹನು ಈ ದೇವಸ್ಥಾನದ ವಿಚಾರದಲ್ಲಿ ಆಸಕ್ತನಾಗಿದ್ದನೆಂದೂ, ಇಲ್ಲಿ ಪೂಜೆ ಸಲ್ಲಿಸುತ್ತಿದ್ದನೆಂದೂ ಹೇಳುತ್ತಾರೆ.
ಪಾರ್ಶ್ವನಾಥ ಬಸದಿ :
ಇದು ಚಚೌಕದ ಮಜಬೂತಾದ ಕಟ್ಟಡವಾಗಿದೆ. ಈ ಊರಿನಲ್ಲಿ ಪಾರ್ಶ್ವನಾಥನ ಇನ್ನೂ ಮೂರು ಬಸದಿಗಳಿವೆ.
ರಾಮ ಮಂದಿರ :
ಇದು ೪೦ X ೬೦ ಅಡಿಗಳ ಕಟ್ಟಡ. ಇದನ್ನು ಮಾರ್ವಾಡಿ ವ್ಯಾಪಾರಿ ಜನರು ೫೦ ವರ್ಷಗಳ ಹಿಂದೆ ಕಟ್ಟಿಸಿದ್ದಾರೆ. ಇದರಲ್ಲಿ ರಾಮ ಸೀತಾ ಲಕ್ಷ್ಮಣರ ಅಮೃತ ಶಿಲೆಯ ವಿಗ್ರಹಗಳಿವೆ.
ರುಕ್ಷಾಂಗದ ಪಂಡಿತರ ಸಮಾಧಿ :
ಇದು ಈ ಊರ ಎಲ್ಲೆಯ ಹತ್ತಿರ ಆಗ್ನಿಯದಲ್ಲಿ ಇದೆ. ರುಕ್ಕಾಂಗದ ಪಂಡಿತರು ಆದಿಲ್ ಶಾಹಿಗಳ ಕೈಕೆಳಗಿನ ಒಬ್ಬ ನ್ಯಾಯಾಧಿಕಾರಿಯ ಮಗನಾಗಿ ಕ್ರಿ.ಶ. ೧೬೧೦ರಲ್ಲಿ ಹುಟ್ಟಿದರೆಂದೂ, ಇವರು ಒಬ್ಬ ದೊಡ್ಡ ವೈದ್ಯರಾಗಿ, ಸಂಗೀತಗಾರರಾಗಿ, ತತ್ವಜ್ಞಾನಿಗಳಾಗಿ, ರೋಗಿಗಳಾಗಿ ಖ್ಯಾತಿ ಹೊಂದಿ ಅನೇಕ ಪವಾಡಗಳನ್ನು ಮಾಡಿದರೆಂದೂ ಹೇಳುತ್ತಾರೆ.
ಅಲ್ಲದೆ ಇವರು ಔರಂಗಜೇಬನ ಮೊದಲನೆಯ ಧಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಗಣನೀಯ ಪಾತ್ರವನ್ನು ವಹಿಸಿದರೆಂದೂ ಸಹ ಪ್ರತೀತಿ ಇದೆ. ಪ್ರತಿವರ್ಷ ಇವರ ಜಾತ್ರೆ ನಡೆಯುತ್ತದೆ. ಇವರ ಸಮಾಧಿಯ ಮುಂದುಗಡೆ ಯಾತ್ರಿಕರು ಇಳಿದುಕೊಳ್ಳಲು ಛತ್ರಗಳು ಇವೆ.
ಸಿದ್ದೇಶ್ವರ ದೇವಸ್ಥಾನ :
ಇದು ೫೦ ವರ್ಷಗಳ ಹಿಂದೆ ಕಟ್ಟಿದ ಕಟ್ಟಡ. ಇದರ ಹೊರಗೋಡೆಗಳು ಬಾದಾಮಿಯ ಹೊಳಪುಕಲ್ಲಿನಿಂದ ಕಟ್ಟಿವೆ. ಈ ದೇವಸ್ಥಾನಕ್ಕೆ ಎತ್ತರವಾದ ಗೋಪುರವಿದೆ. ಒಳಗೆ ಗರ್ಭಗುಡಿಯಲ್ಲಿ ಪನ್ನಗಭೂಷಣ ಸಿದ್ದೇಶ್ವರನ ಕಂಚು ವಿಗ್ರಹವಿದೆ.
ಮಮದಾಪುರ
ಇದು ಬಿಜಾಪುರ ತಾಲ್ಲೂಕಿನಲ್ಲಿ ಬಿಜಾಪುರಕ್ಕೆ ೨೨ ಮೈಲಿಗಳ ದೂರದಲ್ಲಿದೆ. ೬ನೆಯ ಆದಿಲ್‌ಶಾಹಿ ಸುಲ್ತಾನನಾದ ಮಹಮದನು ಕೊಂಕಣದೇಶ ಹೇಗಿದೆಯೆಂದು ತಿಳಿಯಲು ಬಯಸಿದನೆಂದೂ, ಅವನ ಮುಖ್ಯ ವಜೀರನು ಈ ಊರ ಪ್ರದೇಶದಲ್ಲಿ ಕಲ್ಯಾಣಿಗಳನ್ನು ಕಟ್ಟಿ ಕೊಂಕಣದ ಗಿಡ ಮರಗಳನ್ನು ನೆಡಿಸಿದನೆಂದೂ, ಇವುಗಳನ್ನು ಮಹಮದನು ನೋಡಿ ಸಂತೋಷಗೊಂಡು ಇಲ್ಲಿ ಈ ಊರನ್ನು ತನ್ನ ಹೆಸರಿನಲ್ಲಿ ಕ್ರಿ.ಶ. ೧೬೩೩ ರಲ್ಲಿ ನಿರ್ಮಾಣ ಮಾಡಿದನೆಂದೂ ಪ್ರತೀತಿ ಇದೆ. ಈ ಊರ ಬಜಾರಿನಲ್ಲಿ ಕಮಾಲ್ ಸಾಹೇಬ್ ಫಕೀರರ ದರ್ಗಾ ಇದೆ. ಈ ಊರಲ್ಲಿ ಸಿದ್ದೇಶ್ವರನ ಗುಡಿ ಇದೆ. ಈ ಊರ ಹೊರಗಡೆ ಬಯಲ ಹನುಮಂತನ ದೇವಸ್ಥಾನವಿದೆ. ಅಲ್ಲದೆ ಈ ಊರಲ್ಲಿ ಎರಡು ದೊಡ್ಡ ಕಲ್ಯಾಣಿಗಳಿದ್ದು ಇವುಗಳನ್ನು ಮೇಲೆ ಹೇಳಿದ ಮಹಮದನು ಕಟ್ಟಿಸಿದನೆಂದು ಅವುಗಳ ಶಾಸನಗಳಿಂದ ಗೊತ್ತಾಗುತ್ತದೆ. ಈ ಕಲ್ಯಾಣಿಗಳಲ್ಲಿ ಒಂದರ ಮೇಲೆ ಮಹಾಲಿಂಗೇಶ್ವರ ಮತ್ತು ಮಡಿವಾಳೇಶ್ವರ ದೇವಸ್ಥಾನಗಳಿವೆ.
ಲಚ್ಯಾಣ
ಇದು ಇಂಡಿ ತಾಲ್ಲೂಕಿನಲ್ಲಿ ಇಂಡಿಗೆ ೭ ಮೈಲಿಗಳ ದೂರದಲ್ಲಿದೆ. ಇಲ್ಲಿ ಸಿದ್ದಲಿಂಗ ಮಹಾರಾಜರ ಪ್ರಸಿದ್ಧವಾದ ಮಠವಿದೆ. ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಸಾಲೋಟಗಿ
ಇದು ಇಂಡಿ ತಾಲ್ಲೂಕಿನಲ್ಲಿ ಇಂಡಿಗೆ ೬ ಮೈಲಿಗಳ ದೂರದಲ್ಲಿದೆ. ಇದು ಪುರಾತನ ಸ್ಥಳವಾಗಿದ್ದು ಹಿಂದೆ ವಿದ್ಯಾಕೇಂದ್ರವಾಗಿತ್ತು. ಇಲ್ಲಿ ಹಿಂದೆ ಒಂದು ದೊಡ್ಡ ವಿದ್ಯಾ ಸಂಸ್ಥೆ ಇದ್ದು ಇಲ್ಲಿಗೆ ಎಲ್ಲಕಡೆಯಿಂದಲೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರೆಂದು ಕ್ರಿಶ. ೯೪೫ರ ಒಂದು ಶಾಸನ ತಿಳಿಸುತ್ತದೆ. ಈ ಊರಿನ ಉತ್ತರ ಕೊನೆಯಲ್ಲಿ ಶಿವಯೋಗೀಶ್ವರರ ಹಳೆಯ ದೇವಸ್ಥಾನವಿದೆ. ಈ ಶಿವಯೋಗೀಶ್ವರರು ಹಿಂದೆ ಆಗಿಹೋದ ಪವಾಡಪುರುಷರಾಗಿದ್ದಾರೆ. ಈ ದೇವಸ್ಥಾನವನ್ನು ಬೀದರಿನ ರಾಜನೊಬ್ಬನು ಕಟ್ಟಿಸಿದನೆಂದು ಹೇಳುತ್ತಾರೆ. ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ.
ಸಿಂಧಗಿ
ಇದು ತಾಲ್ಲೂಕು ಕೇಂದ್ರ ಇದು ಇಂಡಿ ರೈಲ್ವೆ ನಿಲ್ದಾಣಕ್ಕೆ ೩೩ ಮೈಲಿಗಳ ದೂರದಲ್ಲಿದೆ. ಇದನ್ನು ಸುಮಾರು ಕ್ರಿ.ಶ. ೧೨೦೦ರಲ್ಲಿ ಸಿಂಧು ಬಲ್ಲಾಳನೆಂಬುವನು ಸ್ಥಾಪಿಸಿದನೆಂದೂ, ಇದಕ್ಕೆ ಹಿಂದೆ ಸಿಂಧಪುರವೆಂಬ ಹೆಸರಿತ್ತೆಂದೂ ಪ್ರತೀತಿ ಇದೆ. ಈ ಊರ ದಕ್ಷಿಣಭಾಗದಲ್ಲಿ ಸಂಗಮೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಗರ್ಭಗೃಹಕ್ಕೆ ಹೋಗಬೇಕಾದರೆ ಭಕ್ತರು ೫ ಬಾಗಿಲುಗಳನ್ನು ದಾಟಿ ಹೋಗಬೇಕು. ಈ ಗುಡಿಯ ಆವರಣದಲ್ಲಿ ಭ್ರಮರಾಂಬಿಕೆಯ ಗುಡಿಯೂ ಇದೆ. ಈ ಊರಲ್ಲಿ ಜಕ್ಕಪ್ಪಯ್ಯನವರ ಮಠವಿದೆ. ಇದರ ಜ್ಞಾಪಕಾರ್ಥವಾಗಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಆ ಕಾಲದಲ್ಲಿ ಪಾದತೀರ್ಥವು ಒಂದು ಸಣ್ಣ ಬಿಂದಿಗೆಗೆ ಎಷ್ಟು ಹರಿದು ಬಿದ್ದಾಗ್ಯೂ ಆದು ತುಂಬುವುದೇ ಇಲ್ಲವೆಂದು ನಂಬುಗೆ ಇದೆ. ಈ ದೆಸೆಯಿಂದಲೇ ಕೊನೆಯಿಲ್ಲದ ಕೆಲಸಗಳ ವಿಚಾರದಲ್ಲಿ “ಸಿಂಧಗಿಯ ಬಿಂದಿಗೆಯ ಹಾಗೆ” ಎಂಬ ಗಾದೆ ಪ್ರಚಾರಕ್ಕೆ ಬಂದಿದೆ. ಈ ಊರಲ್ಲಿ ನೀಲಗಂಗಮ್ಮನವರ ದೇವಸ್ಥಾನವೂ ಇದೆ. ಇದು ಅರಮನೆಯ ಮಾದರಿಯಲ್ಲಿದೆ. ನೀಲಗಂಗಮ್ಮನವರಿಗೆ ಭಾಗೀರಥಿ ಎಂಬ ಹೆಸರೂ ಇದೆ.
ಹಲಸಂಗಿ
ಇದು ಇಂಡಿ ತಾಲ್ಲೂಕಿನಲ್ಲಿ ಇಂಡಿ ರೈಲ್ವೆ ನಿಲ್ದಾಣಕ್ಕೆ ೯ ಮೈಲಿಗಳ ದೂರದಲ್ಲಿದೆ. ಇಲ್ಲಿ ಅದಿಲ್ ಶಾಹಿಗಳ ಕಾಲದ ಹಳೆಯಕೋಟೆ ಇದೆ. ಇಲ್ಲಿ ದಾದಾಪೀರ್ ಸಾಹೇಬರ ಉರುಸು ಪ್ರತಿವರ್ಷ ನಡೆಯುತ್ತದೆ. ಈ ಊರು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿದೆ. ಪ್ರಸಿದ್ಧ ಆಧುನಿಕ ಕನ್ನಡ ಕವಿಗಳಾದ ಮಧುರ ಚೆನ್ನರು ಇಲ್ಲಿಯವರಾಗಿದ್ದಾರೆ. ಇಲ್ಲಿ ಅರವಿಂದಮಂಡಲಸಂಸ್ಥೆ ಇದೆ.
ಹಿಪ್ಪರಗಿ
ಇದು ಸಿಂಧಗಿ ತಾಲ್ಲೂಕಿನಲ್ಲಿ ಸಿಂಧಗಿಗೆ ೧೫ ಮೈಲಿಗಳ ದೂರದಲ್ಲಿದೆ. ಇದರ ಹಳೆಯ ಹೆಸರು ಪಿಪ್ಪಲಿ ಎಂದು. ಇಲ್ಲಿ ಕಲ್ಲೇಶ್ವರದೇವರ ಹಳೆಯ ದೇವಸ್ಥಾನವಿದೆ. ಇದನ್ನು ಪರುಶುರಾಮನ ತಂದೆ ಜಮದಗ್ನಿಯು ಕಟ್ಟಿದನೆಂದೂ, ಮಹಾಕವಿ ಕಾಳಿದಾಸ ಈ ಕಲೇಶ್ವರ ದೇವರ ಭಕ್ತರಾಗಿದ್ದರೆಂದೂ ಸ್ಥಳಪುರಾಣವಿದೆ. ಇಲ್ಲಿಗೆ ೦.೫ ಮೈಲಿ ದೂರದಲ್ಲಿ ಮಾರ್ತಾಂಡದೇವರ ದೇವಸ್ಥಾನವಿದೆ. ಕ್ರಿ.ಶ. ೧೨ನೆ ಶತಮಾನದ ವೀರ ಶರಣರೂ, ಪ್ರಸಿದ್ಧ ವಚನಕಾರರೂ ಆದ ಮಡಿವಳ ಮಾಚಿದೇವರು ಈ ಊರಿನವರಾಗಿದ್ದಾರೆ.
ಸಾಹಿತ್ಯ ಮತ್ತು ಸಂಸ್ಕೃತಿ
ಬಿಜಾಪುರ ಜಿಲ್ಲೆಯು ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಚಾರದಲ್ಲಿ ಮಹೋನ್ನತವಾದ ಸೇವೆಯನ್ನು ಸಲ್ಲಿಸಿದೆ. ಚಾಲುಕ್ಯರ ಮತ್ತು ಆನಂತರ ಆದಿಲ್ ಶಾಹಿ ಸುಲ್ತಾನರ ಕಾಲಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳ ವಿಚಾರದಲ್ಲಿ ಅಪಾರವಾದ ರಾಜಾಶ್ರಯವೂ ಪ್ರೋತ್ಸಾಹವೂ ದೊರೆತವು, ರತ್ನತ್ರಯರಲ್ಲಿ ಒಬ್ಬರಾದ ರನ್ನ ಕವಿ ೨ನೆಯ ತೈಲಪನ ಕಾಲದಲ್ಲೂ ಮತ್ತು ತರುವಾಯವೂ ಆಸ್ಥಾನ ಪಂಡಿತರಾಗಿ ಅಮೋಘವಾದ ಗ್ರಂಥಗಳನ್ನು ಬರೆದರು.
ಇವರು ಬರೆದ ಅಜಿತಪುರಾಣ ಮತ್ತು ಗದಾಯುದ್ಧ ಮೇರು ಕೃತಿಗಳಾಗಿವೆ. ಇವರು ಮುಧೋಳದವರು. ಇವರು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದರು. ಮಲ್ಲಿನಾಥಪುರಾಣ, ರಾಮಚಂದ್ರಚರಿತಪುರಾಣ ಈ ಗ್ರಂಥಗಳನ್ನು ಬರೆದ ನಾಗಚಂದ್ರ ಕವಿ ಬಿಜಾಪುರದವರಾಗಿದ್ದಾರೆ. ಇವರು ಅಭಿನವಪಂಪ ಎಂದು ಪ್ರಸಿದ್ದರಾಗಿದ್ದಾರೆ.
ಇವರು ಬಿಜಾಪುರದಲ್ಲಿ ಮಲ್ಲಿನಾಥ ಜಿನಾಲಯವನ್ನು ಕಟ್ಟಿಸಿದರೆಂದು ಪ್ರತೀತಿ ಇದೆ. ಕರ್ನಾಟಕದಲ್ಲಿ ಧರ್ಮಕ್ರಾಂತಿಯನ್ನೂ, ಸಮಾಜ ಕ್ರಾಂತಿಯನ್ನೂ, ಸಾಹಿತ್ಯ ಕ್ರಾಂತಿಯನ್ನೂ ಮಾಡಿದ ಬಸವೇಶ್ವರರು ಬಾಗೇವಾಡಿಯಲ್ಲಿ ಜನಿಸಿದವರಾಗಿದ್ದಾರೆ. ತೊರವೆಯ ರಾಮಾಯಣವನ್ನು ಬರೆದು ಕುಮಾರ ವಾಲ್ಮೀಕಿ ಎಂದು ಪ್ರಸಿದ್ದರಾದ ನರಹರಿ ಕವಿ ಇದೇ ಜಿಲ್ಲೆಯ ತೊರವೆಯವರು.
ಷಡಕ್ಷರ ಕಂದವನ್ನೂ ವಚನಗಳನ್ನೂ ಬರೆದಿರುವ ಕೇಶಿರಾಜ ಇದೇ ಜಿಲ್ಲೆಯ ಕೊಂಡಗೂಳಿಯವರು. ಪ್ರಸಿದ್ಧ ಶರಣರೂ, ವಚನಕಾರರೂ ಆದ ಮಡಿವಳ ಮಾಚಿದೇವರು ಹಿಪ್ಪರಗಿಯವರು. ಚಂದ್ರಪ್ರಭಾ ಪುರಾಣವನ್ನು ಬರೆದಿರುವ ಅಗ್ಗಳ ಕವಿ ಇಂಗಳೇಶ್ವರದವರಾಗಿದ್ದಾರೆ. ಪಂಚ ತಂತ್ರವನ್ನು ಬರೆದಿರುವ ದುರ್ಗಸಿಂಹ ಪಟ್ಟದಕಲ್ಲಿನವರಾಗಿದ್ದಾರೆ.
ದೈತದರ್ಶನ ಶಾಸ್ತ್ರಕಾರರಾದ ಕೃಷ್ಣ ದೈಪಾಯನಾಚಾರ್ಯ, ಜಕ್ಕಪ್ಪಯ್ಯ, ಚಾಮ ರಸಕವಿ, ರುಕ್ಕಾಂಗದ ಪಂಡಿತ, ದಾಸಕೂಟದ ಪ್ರಸಿದ್ಧ ಸಂತರಾದ ಮಹೀಪತಿದಾಸ- ಇವರೇ ಮೊದಲಾದವರು ಇದೇ ಜಿಲ್ಲೆಯವರಾಗಿದ್ದಾರೆ. ಆಧುನಿಕ ಸಾಹಿತಿಗಳಲ್ಲಿ ಕೆರೂರು ವಾಸುದೇವಾಚಾರ್ಯರು, ಹರ್ಡೆಕರ್ ಮಂಜಪ್ಪನವರು, ಡಾ|| ರಾಮಚಂದ್ರ ದತ್ತಾತ್ರೇಯ ರಾನಡೆಯವರು, ಮೊಹರೆ ಹನುಮಂತರಾವ್ ಅವರು, ಡಾ| ಫ.ಗು.ಹಳಕಟ್ಟಿಯವರು – ಇವರೇ ಮೊದಲಾದವರು ಇದೇ ಜಿಲ್ಲೆಯವರಾಗಿ ಪ್ರಸಿದ್ಧರಾಗಿದ್ದಾರೆ.
ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ಚರಿತ್ರಕಾರರಾದ ಫೆರಿಸ್ತಾ, ಕವಿಗಳಾದ ಜಹೂರಿ ಇವರೇ ಮೊದಲಾದವರು ಪ್ರಸಿದ್ಧರಾಗಿದ್ದಾರೆ. ವಾಸ್ತು, ಮೂರ್ತಿ ಮತ್ತು ಚಿತ್ರಶಿಲ್ಪ ವಿಚಾರದಲ್ಲೂ ಸಹ ಬಿಜಾಪುರ ಜಿಲ್ಲೆಯು ಮಹೋನ್ನತವಾದ ಕಾಣಿಕೆಯನ್ನು ಸಲ್ಲಿಸಿದೆ. ಈ ಜಿಲ್ಲೆಯಲ್ಲಿ ಔತ್ತರೇಯ ಮತ್ತು ದಾಕ್ಷಿಣಾತ್ಯ ಶೈಲಿಗಳ ಹಿಂದೂ ಶಿಲ್ಪವೂ ಮತ್ತು ವಿಶಿಷ್ಟವಾದ ಚಾಲುಕ್ಯ ಶೈಲಿಯ ಮತ್ತು ಮುಸಲ್ಮಾನ ಶೈಲಿಯಶಿಲ್ಪಗಳೂ ಈ ಜಿಲ್ಲೆಯಲ್ಲಿ ವಿಜೃಂಭಿಸಿವೆ.
ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮಹಾಕೂಟ, ಬಿಜಾಪುರ – ಇವೇ ಮೊದಲಾದ ಸ್ಥಳಗಳು ಬಿಜಾಪುರ ಜಿಲ್ಲೆಯ ಶಿಲ್ಪಕಲೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿವೆ. ವರ್ಣಚಿತ್ರದ ಕ್ಷೇತ್ರದಲ್ಲೂ ಈ ಜಿಲ್ಲೆಯು ಅಮೋಘ ಕಾಣಿಕೆಯನ್ನು ಸಲ್ಲಿಸಿದೆ. ಬಾದಾಮಿಯ ಗುಹೆಗಳ, ಬಿಜಾಪುರದ ಅರಮನೆಗಳ ಚಿತ್ರಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿವೆ. ೨ನೆಯ ಇಬ್ರಾಹಿಂ ಆದಿಲ್‌ಶಹ ಸ್ವತಃ ವರ್ಣಚಿತ್ರಕಾರರೂ, ಲಿಪಿಕಾರರೂ ಆಗಿದ್ದರು. ಮಹಮದ್ ಆದಿಲ್‌ಶಹ ಇಟಲಿಯಿಂದ ವರ್ಣಚಿತ್ರಕಾರರನ್ನು ಕರೆಯಿಸಿ ಅವರಿಂದ ಅನೇಕ ವರ್ಣ ಚಿತ್ರಗಳನ್ನು ಬರೆಸಿದುದು ಆಸಾರ್ ಮಹಲಿನಲ್ಲಿ ಉಳಿದುಕೊಂಡಿರುವ ಭಿತ್ತಿ ಚಿತ್ರಗಳಿಂದ ಗೊತ್ತಾಗುತ್ತದೆ.
ಜಾತ್ರೆಗಳು ಮತ್ತು ಪರಿಷೆಗಳು
ಬಿಜಾಪುರ ಜಿಲ್ಲೆಯಲ್ಲಿ ಬಿಜಾಪುರ, ಗೋಳಗೇರಿ, ಚೊಳಚಗುಡ್ಡ, ಲಚ್ಯಾಣ, ಚಡಚಣ, ಜಮಖಂಡಿ, ರಬಕವಿ, ತೇರದಾಳ, ಮಹಾಲಿಂಗಪುರ, ಹೊರಿ, ಕಲ್ಲೇರಿ, ಕೊರವಾರ, ಚಿಮ್ಮಡ, ಮುತ್ತೂರು, ಸಾಲೋಟಗಿ, ಸಿಂಧಗಿ, ಹಲಸಂಗಿ- ಇವೇ ಮೊದಲಾದ ಕ್ಷೇತ್ರಗಳಲ್ಲಿ ಜನಪ್ರಿಯವಾದ ಜಾತ್ರೆಗಳೂ ಮತ್ತು ಪರಿಷೆಗಳೂ ನಡೆಯುತ್ತವೆ.