History: ಇಂದಿನ ಮಹಿಳೆಯರ ಸ್ಫೂರ್ತಿ ಕೆಳದಿ ಚನ್ನಮ್ಮ…
History: ಇಂದಿನ ಮಹಿಳೆಯರ ಸ್ಫೂರ್ತಿ ಕೆಳದಿ ಚನ್ನಮ್ಮ…
“ಇತಿಹಾಸ ಮರೆತ ವ್ಯಕ್ತಿ ಮತ್ತು ದೇಶಕ್ಕೆ ಭವಿಷ್ಯವಿಲ್ಲ” ಎಂಬ ಮಾತು ಇತಿಹಾಸದ ಮಹತ್ವ ಮತ್ತು ಇತಿಹಾಸ ಅಧ್ಯಯನದ ಆಗತ್ಯತೆಯನ್ನು ತಿಳಿಸುತ್ತದೆ. ಕರ್ನಾಟಕ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಎಂದೂ ‘ಮರೆಯಲಾಗದ ಸಾಮ್ರಾಜ್ಯ’ ಎಂದು ಹೆಸರಾಗಿದೆ. ಇವರ ಮಾರ್ಗದರ್ಶನದಲ್ಲಿ ನಡೆದವರು ಕೆಳದಿ ಆರಸರು, ವಿಜಯನಗರ ಸಾಮ್ರಾಜ್ಯ ಪತನದ ನಂತರ ಸ್ವತಂತ್ರರಾಗಿ ವಿಜಯನಗರ ಅರಸರ ಆಶಯಗಳನ್ನು ಮುಂದುವರಿಸಿಕೊಂಡು ಹೋದವರು ಹಾಗೂ ಸರ್ವಧರ್ಮ ಸಮನ್ವಯಿಗಳಾಗಿದ್ದವರು ನಮ್ಮ ಹೆಮ್ಮೆಯ ಕೆಳದಿ ಅರಸರು. ಕೆಳದಿಯ ಅರಸರ ಕಾಲದಲ್ಲಿ ಆಸ್ಥಾನ ಕವಿಯಾಗಿದ್ದ ಲಿಂಗಣ್ಣ ಕವಿ ರಚಿಸಿದ ‘ಕೆಳದಿ ನೃಪವಿ-ಜಯ’, ಗಂಗಾ ದೇವಿಯ ‘ಕೆಳದಿ ರಾಜ್ಯಾಭ್ಯುದಯ’, ಬಸಪ್ಪ ನಾಯಕನ ‘ಶಿವತತ್ವರತ್ನಾಕರ’ ಕೆಳದಿ ಇತಿಹಾಸವನ್ನು ತಿಳಿಸುವ ಮಹತ್ವದ ಕೃತಿಗಳಾಗಿವೆ. ಸುಮಾರು 750 ಶಾಸನಗಳು, ವಿದೇಶಿ ಪ್ರವಾಸಿಗರ ಉಲ್ಲೇಖ ಮುಂತಾದವುಗಳೂ ಕೆಳದಿ ಇತಿಹಾಸಕ್ಕೆ ಆಕರಗಳಾಗಿವೆ.
ಕೆಳದಿ ಸಂಸ್ಥಾನ
ಕ್ರಿಸ್ತಶಕ 1499 ರಲ್ಲಿ ಕೆಳದಿ ಸಂಸ್ಥಾನ ಜನ್ಮತಾಳಿತು. ಈಗಿನ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕೆಳದಿ ಇವರ ಮೊದಲ ರಾಜಧಾನಿಯಾಗಿತ್ತು. ನಂತರ ಇಕ್ಕೇರಿ, ಬಿದನೂರು, ಭುವನಗಿರಿಯಿಂದ ಆಡಳಿತ ನಡೆಸಿದರು. 16 ಅರಸರು ಮತ್ತು ಇಬ್ಬರು ರಾಣಿಯರು 263 ವರ್ಷಗಳ ಕಾಲ ಆಡಳಿತ ನಡೆಸಿದರು. ಚೌಡಪ್ಪನಾಯಕ ಮೊದಲ ಅರಸ ಸದಾಶಿವನಾಯಕ, ಚಿಕ್ಕ ಸಂಕಣ್ಣನಾಯಕ, ರಾಮರಾಜನಾಯಕ, ಹಿರಿಯ ವೆಂಕಟಪ್ಪ ನಾಯಕ, ವೀರಭದ್ರನಾಯಕ, ಶಿವಪ್ಪ ನಾಯಕ ಇವರ ಮನೆತನದ ಆಳ್ವಿಕೆ ಮುಂದುವರೆಯುತ್ತದೆ. ಕರ್ನಾಟಕ ಇತಿಹಾಸದಲ್ಲಿ ಕೆಳದಿ ಅರಸರು ಆಡಳಿತಾತ್ಮಕವಾಗಿ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಕಂದಾಯ ನಿಗದಿಗೆ ಸಂಬಂಧಿಸಿದಂತೆ ಪದ್ಧತಿ ‘ಶಿವಪ್ಪನಾಯಕನ ಶಿಸ್ತು’ ಎಂದೇ ಹೆಸರಾಗಿತ್ತು. ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಿದ ಕೆರೆಕಟ್ಟೆಗಳು, ದೇವಸ್ಥಾನಗಳು, ಕೋಟೆಕೊತ್ತಲಗಳು, ನೀರಾವರಿ ವ್ಯವಸ್ಥೆ, ಮಠ ಮಂದಿರಗಳು, ಅರಮನೆಗಳು, ಸಾಹಿತ್ಯರಚನೆ, ಸಾಂಸ್ಕೃತಿಕ ಕೊಡುಗೆಗಳು ಇಂದಿಗೂ ನಮ್ಮ ಕಣ್ಮುಂದಿವೆ. ಇಂದಿನ ಶಿವಮೊಗ್ಗ, ಚಿಕ್ಕಮಂಗಳೂರು, ಹಾಸನ, ಹಾವೇರಿ, ದ.ಕ., ಉ.ಕ. ಹೀಗೆ ಸುಮಾರು 13 ಜಿಲ್ಲೆಗಳನ್ನು ಒಳಗೊಂಡಿತ್ತು.
ಕನ್ನಡಿಗರ ಹೆಮ್ಮೆ ಕೆಳದಿ ಚನ್ನಮ್ಮ
ಕೆಳದಿ ಅರಸರ ಆಳ್ವಿಕೆಯಲ್ಲಿ ಕ್ರಿ.ಶ. 1672 ರಿಂದ ಕ್ರಿ.ಶ. 1697ರ ವರೆಗೆ ಚನ್ನ ಮಾಜಿ 25 ವರ್ಷಗಳ ಕಾಲ ಆಡಳಿತ ನಡೆಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಭಾರತೀಯ ಇತಿಹಾಸದಲ್ಲಿ ಕೆಚ್ಚೆದೆಗೆ, ಶೌರ್ಯಕ್ಕೆ ಹೆಸರಾದ ಕೆಲವೇ ರಾಣಿಯರಲ್ಲಿ ಕೆಳದಿ ಚನ್ನಮ್ಮಾಜಿಯೂ ಒಬ್ಬರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಇಂದಿಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಕಿತ್ತೂರಿನ ರಾಣಿ ಚನ್ನಮ್ಮ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಇವರ ಸಾಲಿನಲ್ಲಿ ನಿಲ್ಲಬೇಕಾದ ಕೆಳದಿ ಚೆನ್ನಮ್ಮನ ಹೆಸರು ಪ್ರಚಲಿತ ಇಲ್ಲದಿರುವುದು ಸೋ-ಜಿಗದ ವಿಷಯ. 2022 ಫೆಬ್ರವರಿ 27 ಕ್ಕೆ ರಾಣಿ ಚೆನ್ನಮ್ಮ ಅಧಿಕಾರವಹಿಸಿಕೊಂಡು 350 ವರ್ಷಗಳು ತುಂಬಿದೆ ಎಂದು ಹೇಳಲಾಗುತ್ತಿದೆ. ಅಧಿಕಾರವಹಿಸಿಕೊಂಡು 350 ವರ್ಷಗಳಾದ ಮತ್ತು ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾದಿನದ ಇಂತಹ ಸಂದರ್ಭದಲ್ಲಿ ಆ ಕಾಲದಲ್ಲಿಯೇ ಮೂಢನಂಬಿಕೆಯನ್ನು ಮೆಟ್ಟಿನಿಂತು ದಿಟ್ಟ ನಿರ್ಧಾರದ ತೆಗೆದುಕೊಂಡು ಜನಪರ ಆಡಳಿತ ನಡೆಸಿದ ಚನ್ನಮ್ಮಳ ಬಗ್ಗೆ ನಾವು ಹೆಮ್ಮೆ ಪಡಲೇಬೇಕು.
ಚನ್ನಮ್ಮ ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳಾಗಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದಳು. ರೂಪವತಿಯೂ ಧೈರ್ಯವಂತಳೂ ಆಗಿದ್ದಳು ಕೆಳದಿಯ ಪ್ರಸಿದ್ಧ ಅರಸ ಶಿವಪ್ಪನಾಯಕನ ಮಗನಾದ ಸೋಮಶೇಖರ ನಾಯಕನ ಹೆಂಡತಿಯಾಗಿ ಕೆಳದಿ ಅರಸರ ಕುಟುಂಬ ಸೇರಿದಳು. ಶಿವಪ್ಪ ನಾಯಕನ ಸೊಸೆಯಾದ ಚನ್ನಮ್ಮ ಸಹಜವಾಗಿ ಆಡಳಿತಾತ್ಮಕ ವಿಷಯಗಳನ್ನು ತಿಳಿಯಲು ಅವಕಾಶಗಳಿದ್ದವು. ಪತಿ ಸೋಮಶೇಖರ ನಾಯಕನ ಆಡಳಿತ ಕಾಲದಲ್ಲಿ ರಾಜ್ಯದ ಆಡಳಿತವನ್ನು ಚನ್ನಾಗಿ ಅರಿತಳು. ಚೆನ್ನಮ್ಮಾಜಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರೂ ಸಿಕ್ಕ ಸಂದರ್ಭಗಳನ್ನು ಸಮರ್ಥವಾಗಿ ಬಳಸಿಕೊಂಡು ಕನ್ನಡ ನಾಡಿನ ಹೆಮ್ಮೆಯ ರಾಣಿಯಾಗಿ ಆಡಳಿತ ನಡೆಸಿದಳು.
ಚನ್ನಮ್ಮಳ ಕ್ರಾಂತಿಕಾರಕ ನಡೆ
ಹೆಮ್ಮೆಯ ವೀರ ಕನ್ನಡತಿ ಚೆನ್ನಮ್ಮ ರಾಜ್ಯದ ಅಧಿಕಾರ ವಹಿಸಿಕೊಂಡ ಬಗೆ ಒಂದು ಕ್ರಾಂತಿಕಾರಕ ನಡೆಯಾಗಿದೆ. ಅರಸನಾಗಿದ್ದ ಸೋಮಶೇಖರ ನಾಯಕ ಶತ್ರುಗಳಿಂದ ಕೊಲೆಯಾದ ಸಂದರ್ಭದಲ್ಲಿ ಎದೆಗುಂದದೆ ದಿಟ್ಟ ನಿರ್ಧಾರ ಕೈಗೊಳ್ಳುತ್ತಾಳೆ. ಸತಿಸಹಗಮನ ನಡೆಯುತ್ತಿದ್ದ ಆ ಕಾಲದಲ್ಲಿ ಐದು ಜನ ಅತ್ತೆಯರು ಸಹಗಮನ ಮಾಡಿದ್ದರೂ, ಇಂತಹ ಮೂಢನಂಬಿಕೆ ವಿರುದ್ಧವಾಗಿ, ಯಾವುದೇ ಟೀಕೆ-ಟಿಪ್ಪಣಿಗಳಿಗೆ ಸೊಪ್ಪು ಹಾಕದೆ. ಗಂಡನ ಮರಣಾನಂತರ ರಾಜ್ಯಾಡಳಿತವನ್ನು ತನ್ನ ಕೈಗೆ ತೆಗೆದುಕೊಂಡಳು. ಇದು ಆ ಕಾಲಘಟ್ಟದಲ್ಲಿ ಚನ್ನಮಳ ಕ್ರಾಂತಿಕಾರಕ ನಡೆಯಾಗಿದೆ. ಇವಳ ಪಟ್ಟಾಭಿಷೇಕವು ಭುವನಗಿರಿ ದುರ್ಗದ ಅರಮನೆಯಲ್ಲಿ ನೆರವೇರಿತು. ವೈರಾಗ್ಯ ನಿಧಿ ಉಡುತಡಿಯ ಅಕ್ಕಮಹಾದೇವಿ, ಮಹಾಜ್ಞಾನಿ ಬಳ್ಳಿಗಾವಿಯ ಅಲ್ಲಮಪ್ರಭು ಬೆಳೆದ ನಾಡಲ್ಲಿ ಚನ್ನಮ್ಮನ ಈ ನಡೆ ಗಮನಿಸಬೇಕಾದ ಅಂಶವಾಗಿದೆ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮೂಢನಂಬಿಕೆಗಳನ್ನು ದಿಕ್ಕರಿಸಿ 25 ವರ್ಷಗಳ ಕಾಲ ರಾಜ್ಯ ಆಡಳಿತ ನಡೆಸಿದ್ದು ಸಾಮಾನ್ಯ ವಿಷಯವೇನಲ್ಲ.
ಮಾತೃ ಹೃದಯಿ ಚನ್ನಮ್ಮ
ಮಾತೃ ಹೃದಯಿ ಚೆನ್ನಮ್ಮ ತನ್ನ ಆಡಳಿತ ಕಾಲದಲ್ಲಿ ಪ್ರಜೆಗಳನ್ನು ಅತ್ಯಂತ ಪ್ರೀತಿಯಿಂದ ಕಂಡಳು. ಹಂಡೆಯಲ್ಲಿ ಹಾಲನ್ನು ಜನರಿಗಾಗಿ ಬಂಡಿಮೇಲೆ ಕಳಿಸಿಕೊಡುತ್ತಿದ್ದುದನ್ನು, ಚಳಿಯಿಂದ ಜನ ಕಷ್ಟ ಅನುಭವಿಸಬಾರದೆಂದು ಗಾಡಿಯ ಮೇಲೆ ಕಂಬಳಿಗಳನ್ನು ಕಳಿಸಿಕೊಡುತ್ತಿದ್ದಳೆಂದು ಬಲ್ಲವರು ಬಣ್ಣಿಸಿದ್ದಾರೆ. ಪ್ರೀತಿಯಿಂದ ಬುದ್ದಿವಂತಿ-ಕೆಯಿಂದ ತನ್ನ ಸಂಬಂಧಿಕರ ಹಿರಿಯ ಅಧಿಕಾ-ರಿಗಳ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾಳೆ. ಶತ್ರುಗಳ ದುರಾಸೆಯನ್ನು ಮಣ್ಣುಗೂಡಿಸುತ್ತಾಳೆ. ಹಲವಾರು ಜನಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಾನುರಾಗಿಯಾಗಿ ಆಡಳಿತ ನಡೆಸುತ್ತಾಳೆ. ಸಾಂಸ್ಕೃತಿಕ ಶ್ರೀಮಂತಿಕೆಗೆ ನೆರವಾಗಿ ಜನ ನೆಮ್ಮದಿಯಿಂದ ಬದುಕಲು ಬೆಂಬಲವಾಗಿ ನಿಲ್ಲುತ್ತಾಳೆ.
ಕೆಳದಿ ಚನ್ನಮ್ಮಳ ರಾಜ್ಯ ವಿಸ್ತರಣೆ
ಕೆಳದಿ ಚನ್ನಮ್ಮಳ ರಾಜ್ಯದ ಮೇಲೆ ದಂಡೆತ್ತಿ ಬಂದ ಸೋದೆ, ಬನವಾಸಿ, ಶಿರಸಿ, ಮೊದಲಾದ ಅರಸರನ್ನು ಮೈಸೂರಿನ ದಳವಾಯಿ ಕುಮಾರಯ್ಯನನ್ನು ಸೋಲಿಸಿ ಕಡೂರು, ಬಾಣಾವರ, ಹಾಸನ, ಬೇಲೂರು ಮೊದಲಾದವುಗಳನ್ನು ವಶಪಡಿಸಿಕೊಂಡು ಕೆಳದಿ ರಾಜ್ಯದ ದಕ್ಷಿಣ ಗಡಿಯನ್ನು ಭದ್ರಪಡಿಸಿದಳು. ಬಸವಾಪಟ್ಟಣ ಗೆದ್ದುಕೊಂಡಳಲ್ಲದೆ ಹುಲಿಗೆರೆ ಕೋಟೆ ವಶಪಡಿಸಿಕೊಂಡು ಅದಕ್ಕೆ ಚನ್ನಗಿರಿ ಕೋಟೆ ಎಂದು ಹೆಸರಿಟ್ಟಳು. ಹೀಗೆ ರಾಜ್ಯ ವಿಸ್ತರಿದ್ದಲ್ಲದೆ ಒಳ ಹೊರಗಿನ ಶತ್ರುಗಳನ್ನು ಮಟ್ಟಹಾಕಿದಳು. ಔರಂಗಜೇಬನ ಸೈನ್ಯವನ್ನ ಸೋಲಿಸಿದಳು. ಸಾಂದರ್ಭಿಕವಾಗಿ ಒಪ್ಪಂದಗಳನ್ನು ಮಾಡಿಕೊಳ್ಳುವುದರ ಮೂಲಕ ರಾಜನೀತಿಯನ್ನು ಮೆರೆದಳು.
ಶಿವಾಜಿ ಮಗ ರಾಜಾರಾಮನ ರಕ್ಷಣೆ
ಮರಾಠ ದೊರೆ ಶಿವಾಜಿ ಮಗ ರಾಜಾರಾಮ ಮೊಗಲ್ ಚಕ್ರವರ್ತಿ ಔರಂಗಜೇಬನ ಉಪಟಳದಿಂದಾಗಿ ಕೆಳದಿ ಚನ್ನಮ್ಮಳ ರಕ್ಷಣೆ ಬಯಸಿ ಬರುತ್ತಾನೆ. ಮೊಗಲ್ ಚಕ್ರವರ್ತಿ ಔರಂಗಜೇಬನ ದೊಡ್ಡ ಸೈನ್ಯದ ಅರಿವಿದ್ದರೂ ರಕ್ಷಣೆ ಬಯಸಿ ಬಂದ ರಾಜಾರಾಮನನ್ನು ಚನ್ನಮ್ಮ ರಕ್ಷಣೆಮಾಡುತ್ತಾಳೆ. ರಾಜಾರಾಮನನ್ನು ಚನ್ನಮ್ಮ ರಕ್ಷಣೆ ಮಾಡಿದ ಪರಿಯನ್ನು ಮರಾಠ ಇತಿಹಾಸಕಾರರು ಮನಸಾರೆ ಹೊಗಳಿದ್ದಾರೆ. ರಾಜಾರಾಮ ತನಗೆ ನೀಡಿದ ರಕ್ಷಣೆಯ ಕಾರಣದಿಂದಾಗಿ ಬಿದನೂರಿನಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸಿದನು. ಶಿವಾಜಿ ಮಗನಿಗೆ ರಕ್ಷಣೆ ನೀಡಲು ಒಪ್ಪಿಕೊಂಡ ನಿರ್ಧಾರ ಚನ್ನಮ್ಮ ತೆಗೆದುಕೊಂಡ ಗಟ್ಟಿ ನಿರ್ಧಾರ ಕನ್ನಡಿಗರಾದ ನಾವು ಅತ್ಯಂತ ಹೆಮ್ಮೆ ಪಡಬೇಕಾದ ವಿಷಯ.
ಕೆಳದಿ ಚೆನ್ನಮ್ಮಳ ಸಾಮಾಜಿಕ ಕಾರ್ಯಗಳು :
ಜಂಗಮ ಮಠಗಳನ್ನು ಅಗ್ರಹಾರಗಳನ್ನು ನಿರ್ಮಿಸಿದಳು. ಶೃಂಗೇರಿ ಮಠಕ್ಕೆ ರಾಜಾಶ್ರಯ ನೀಡಿದಳು. 1,96,000 ಜಂಗಮರಿಗೆ ದಾಸೋಹ,ಕೊಲ್ಲೂರು ಮೂಕಾಂಬಿಕ ದೇವಿಗೆ ಪಚ್ಚೆಯ ಪದಕ ನೀಡಿಕೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದಳು.ಕೃಷಿ ಆದ್ಯತೆ ನೀಡಿದಳು. ಕೆರೆಕಟ್ಟೆಗಳ ನಿರ್ಮಾಣ ನಿರ್ವಹಣೆ, ಸಾಹಿತ್ಯ ರಚನೆಗೆ ಪ್ರೋತ್ಸಾಹ ಹೀಗೆ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ನೆರವೇರಿಸಿದಳು.
ಚನ್ನಮ್ಮಾಜಿಗೆ ಮಕ್ಕಳಿಲ್ಲದಿದ್ದರಿಂದ ಬಸಪ್ಪನೆಂಬ ಹುಡುಗನನ್ನು ದತ್ತು ತೆಗೆದುಕೊಂಡು ಉತ್ತಮ ಶಿಕ್ಷಣ ಕೊಡಿಸಿದಳು. ಮಗನಿಗೆ ಮಾರ್ಗದರ್ಶನ ಮಾಡಿದಳು. “ನುಡಿದಿದ್ದನ್ನು ಬದಲಿಸದಿರು, ಆಶ್ರಯಿಸಿ ಬಂದವರಿಗೆ ರಕ್ಷಣೆ ನೀಡು, ಸಿರಿತನ ಬಂದಾಗ ಸೊಕ್ಕು ಮಾಡದಿರು. ಮಾತಿನಲಿ ಎಚ್ಚರವಿರಲಿ, ಪಾಪ ಕಾರ್ಯ ಮಾಡದಿರು ದುರ್ಮಾರ್ಗ ಹಿಡಿಯದಿರು. ಸಕಲ ಜೀವಿಗಳಲ್ಲಿ ದಯೆ ತೋರು..” ಹೀಗೆ ಮಗನಿಗೆ ಮಾರ್ಗದರ್ಶನ ಮಾಡಿದಳು. ಕೆಳದಿ ಚನ್ನಮ್ಮಳ ಈ ಮಾರ್ಗದರ್ಶನದ ಪರಿ ಗಮನಿಸಿದರೆ ಕನ್ನಡ ನಾಡಿನ ಪ್ರತಿ ತಾಯಿಯು ತನ್ನ ಮಕ್ಕಳಿಗೆ ಮಾಡುವ ಆದರ್ಶ ಮಾರ್ಗದರ್ಶನದಂತಿದೆ. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೆಳದಿ ಚನ್ನಮ್ಮಳ ನಡೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ.
ಕೆಳದಿ ಚನ್ನಮ್ಮಳ ಸಾಹಸ, ಸೂಕ್ತ ಸಂದರ್ಭದಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳು ನಮಗೆ ಮಾದರಿಯಾಗಿವೆ. ಕನ್ನಡ ನಾಡಿನಲ್ಲಿ ರಾಣಿಯೊಬ್ಬಳು ಇಪ್ಪತೈದು ವರ್ಷಗಳ ಕಾಲ ಸುವ್ಯವಸ್ಥಿತವಾಗಿ ಆಡಳಿತ ನಡೆಸಿದಳೆಂಬುದೇ ಅತ್ಯಂತ ಹೆಮ್ಮೆಯ ವಿಷಯ. ಕರುನಾಡಿನ ವೀರರಾಣಿ ಕೆಳದಿ ಚನ್ನಮ್ಮಳ ಇತಿಹಾಸ ಜಗದಗಲ ಪಸರಿಸಲಿ ಎಂಬುದೇ ನನ್ನ ಆಶಯ. ಕನ್ನಡನಾಡಿನ ಹೆಮ್ಮೆಯ ರಾಣಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ಮುಂದಿನ ಪೀಳಿಗೆಗೂ ತಿಳಿಸೋಣ.
ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ. ನಮ್ಮ ಕೆಳದಿಯ ರಾಣಿ ಚನ್ನಮ್ಮ, ಆಕರ ಗ್ರಂಥ: ಮರೆಯಲಾಗದ ಕೆಳದಿ ಸಾಮ್ರಾಜ್ಯ- ಡಾ. ಕೆಳದಿ ವೆಂಕಟೇಶ್ ಜೋಯಿಸ್..
ಕೃಪೆ: ಪಾಲಾಕ್ಷಪ್ಪ, ಎಸ್. ಎನ್. ಶಿಕ್ಷಕರು…