Teacher job news:11,795 teacher vacancies.
Teacher Jobs: ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ 11,795 ಶಿಕ್ಷಕರ ಹುದ್ದೆ ಖಾಲಿಯಿದ್ದು, ಇದರಿಂದ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು ಬೀಳುತ್ತಿದೆ. ಜತೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೂ ಹೊಡೆತ ಬೀಳುತ್ತಿದೆ.
ರಾಜ್ಯದಲ್ಲಿ 4,871 ಸರಕಾರಿ ಪ್ರೌಢಶಾಲೆಗಳಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ಅತಿಥಿ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ಅಪೇಕ್ಷಿಸಲು ಅಸಾಧ್ಯ. ಆದ್ದರಿಂದ ರಾಜ್ಯಾದ್ಯಂತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಸರಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು 44,405 ಹುದ್ದೆ ಮಂಜೂರಾಗಿವೆ. ಇದರಲ್ಲಿ 32.610 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, 11,795 ಹುದ್ದೆಗಳು ಖಾಲಿಯಿವೆ. ಇದರಲ್ಲಿ ಸಿಬಿಜೆಡ್, ಆರ್ಟ್ಸ್, ಇಂಗ್ಲಿಷ್, ಭಾಷಾ ಶಿಕ್ಷಕರು ಹಾಗೂ ಪಿಇಟಿ ಶಿಕ್ಷಕರ ಹುದ್ದೆಗಳು ಖಾಲಿಯಿವೆ.
2,500 ಹುದ್ದೆ ಭರ್ತಿಗೆ ಪ್ರಸ್ತಾವನೆ: ಸರಕಾರ ಈ ಹಿಂದೆ ನೇಮಕಾತಿ ನಡೆಸಿದ್ದಾಗ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹುದ್ದೆಗಳಲ್ಲಿ ಭರ್ತಿಯಾಗದೆ ಖಾಲಿ ಉಳಿದ ಹುದ್ದೆಗಳಿಗೆ ಹೊಂದಾಣಿಕೆ ಮಾಡಿಕೊಂಡು ನೇರ ನೇಮಕಾತಿಗೆ ಅನುಮತಿ ನೀಡಿದೆ. ಇದರಲ್ಲಿ 1,648 ಹುದ್ದೆಗಳು ಉಳಿದರುವ ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು2,500 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದಾರೆ. ಆದರೆ, ಒಪ್ಪಿಗೆ ದೊರೆತಿಲ್ಲ. ಇದರೊಟ್ಟಿಗೆ ಕಲ್ಯಾಣ ಕರ್ನಾಟಕ ಭಾಗದ 385 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದೆ.
ರಾಯಚೂರು ಜಿಲ್ಲೆಯಲ್ಲೇ ಅಧಿಕ ಕಲ್ಯಾಣ ಕರ್ನಾಟಕ ಭಾಗ ಮೊದಲೇ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ. ಜತೆಗೆ ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಭಾಗದಲ್ಲಿ ಒಟ್ಟು 12,375 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 8,475 ಶಿಕ್ಷಕರು ಕಾರ್ಯನಿರ್ವಹಿಸು ತ್ತಿದ್ದಾರೆ. 3,900 ಹುದ್ದೆ ಖಾಲಿಯಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ರಾಯಚೂರು ಜಿಲ್ಲೆಯಲ್ಲಿ 1,040 ಹುದ್ದೆ ಖಾಲಿ ಇದ್ದರೆ, ಯಾದಗಿರಿ ಜಿಲ್ಲೆಯಲ್ಲೂ 734 ಹುದ್ದೆಗಳು ಖಾಲಿಯಿವೆ.
