Guidelines: ಶಾಲೆಗಳಲ್ಲಿ ಅಂಗನವಾಡಿ ಸ್ಥಾಪನೆ, ಸ್ಥಳಾಂತರಕ್ಕೆ ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟ
Guidelines:
ಶಾಲೆಗಳಲ್ಲಿ ಅಂಗನವಾಡಿಗಳನ್ನು ಆರಂಭಿಸುವ ಕುರಿತಾಗಿ ಕೇಂದ್ರ ಸರ್ಕಾರವು ವಿಸ್ತ್ರತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಲ್ಲೂ ಮುಖ್ಯವಾಗಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳು, మిని ಅಂಗನವಾಡಿಗಳನ್ನು ಸ್ಥಳಾಂತರಿಸಲು ಆದ್ಯತೆ ನೀಡುವಂತೆ ಹೇಳಿದೆ. ಕೇಂದ್ರ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಂಜಯ್‌ಕುಮಾರ್ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಈ ನಿರ್ದೇಶನ ನೀಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಶಿಕ್ಷಣ ಹಂತವನ್ನು ಹಿಂದಿನ 10+2 ಬದಲಾಗಿ 5+3+3+4 ಎಂದು ವಿಂಗಡಿಸಿದೆ. ಮೂರು ವರ್ಷದಿಂದ ಆರಂಭಿಸಿ ನಂತರದ ಐದು ವರ್ಷಗಳನ್ನು ಆರಂಭಿಕ ಬಾಲ್ಯಾವಸ್ಥೆ, ಆರೈಕೆ ಹಾಗೂ ಶಿಕ್ಷಣ (ಅರ್ಲಿ ಚೈಲ್ಡ್ಹುಡ್ ಕೇರ್ ಅಂಡ್ ಎಜುಕೇಶನ್- ಇಸಿಸಿಇ) ಎಂದು ಕರೆದು ಫೌಂಡೇಶನ್ ಸ್ಟೇಜ್ ಎಂದು ಹೆಸರಿಸಿದೆ.
ಇದರಲ್ಲಿ ಮೂರು ವರ್ಷಪೂರ್ವ ಪ್ರಥಮಿಕ ಹಾಗೂ ನಂತರದ ಎರಡು ವರ್ಷ ಒಂದು ಮತ್ತು ಎರಡನೇ ತರಗತಿಯನ್ನು ಒಳಗೊಂಡಿದೆ
ಇಸಿಸಿಇ ಹಂತವನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಜಂಟಿಯಾಗಿ ನಿರ್ಮಿಸಬೇಕೆಂದು NEP ಉಲ್ಲೇಖಿಸಿದೆ.
ಹೀಗಾಗಿ ಸ್ವತಂತ್ರ ಅಂಗನವಾಡಿಗಳು, ಶಾಲೆಗಳಲ್ಲಿರುವ ಅಂಗನವಾಡಿ ಹಾಗೂ ಶಿಶುವಿಹಾರಗಳ ಬೃಹತ್ ಜಾಲವನ್ನು ಬಳಸಿಕೊಂಡು ಬಾಲ್ಯಾವಸ್ಥೆಯ ಕಲಿಕೆಯು ಆಟ, ಚಟುವಟಿಕೆಗಳಿಂದ ಕೂಡಿದ ಹಂತವನ್ನಾಗಿಸಲು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಲಾಗಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಸಿಸಿಇ ಹಂತವನ್ನು ಉತ್ತೇಜಿಸಲು, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕಾಂಶ ದೊರೆಯವಂತಾಗಲು ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಲಾಗಿದೆ. ಕ್ಷೇತ್ರಮಟ್ಟದಲ್ಲಿ ಸಂಯೋಜನೆ ಇರುವಂತೆಯೂ ನೋಡಿಕೊಳ್ಳಬೇಕಿದೆ. ಜತೆಗೆ, ಅಂಗನವಾಡಿಗಳನ್ನು ಶಾಲೆಗಳೊಂದಿಗೆ ಇರುವಂತಾಗಲು ಬೇರುಮಟ್ಟದಲ್ಲಿ ಕಂಡುಬರುವ ನಿರ್ವಹಣಾ ಸವಾಲುಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹೇಳಿದೆ.
ಕೇಂದ್ರ ಹೇಳೋದೇನು?
▪️ಶಾಲೆಯ ಸುತ್ತಲಿನ ಅಂಗನವಾಡಿಗಳ ಮ್ಯಾಪಿಂಗ್
▪️ಅಂಗನವಾಡಿ-ಶಾಲೆಗಳ ನಡುವೆ ಸಂಪರ್ಕ ವೃದ್ಧಿ
▪️ಗರ್ಭಿಣಿ, ತಾಯಂದಿರಿಗೂ ಸೌಲಭ್ಯ ವಿತರಣೆ ಸ್ಥಳ
▪️ಅಂಗನವಾಡಿ, ಶಿಶುವಿಹಾರ ಶಿಕ್ಷಕರಿಗೆ ಸಮಾನ ಪಾತ್ರ
▪️ನಿಪುಣ್ ಭಾರತ್, ಆಧಾರಶಿಲಾ ಪಠ್ಯಕ್ರಮ ಜಾರಿ
▪️ಜಂಟಿ ತರಬೇತಿ ಕಾರ್ಯಕ್ರಮ ಆಯೋಜನೆ
▪️ಆಟ ಆಧಾರಿತ ಕಲಿಕೆ, ಕಲಿಕಾ ಸಾಮಗ್ರಿ ಬಳಕೆ
▪️ಎರಡೂ ಇಲಾಖೆಗಳಿಂದ ಡೇಟಾ ಹಂಚಿಕೆ
▪️ಮಕ್ಕಳಿಗೆ ಅಪಾರ್ ಐಡಿ ಬಳಕೆಗೆ ಉತ್ತೇಜನ
ಮ್ಯಾಪಿಂಗ್ ಕಾರ್ಯಕ್ಕೆ ಸೂಚನೆ
ಅಂಗನವಾಡಿಗಳನ್ನು ಹತ್ತಿರದ ಶಾಲೆಗಳೊಂದಿಗೆ ಸಂಪರ್ಕಿಸಲು ಮ್ಯಾಪಿಂಗ್ ಮಾಡಬೇಕಿದೆ. ಗ್ರಾಮೀಣ ಹಾಗೂ ದುರ್ಗಮ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳು ಹಾಗೂ ಅಂಗನವಾಡಿಗಳೊಂದಿಗೆ ಸಂಪರ್ಕವಿರುವಂತೆ ಮಾಡುವುದು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಗೂ ಮಿನಿ ಅಂಗನವಾಡಿಗಳನ್ನು ಸ್ಥಳಾಂತರಿಸುವುದಾದಲ್ಲಿ ಅವುಗಳನ್ನು ಒಂದನೇ ತರಗತಿಯಿರುವ ಶಾಲೆಗಳಲ್ಲಿ ಆರಂಭಿಸುವಂತೆ ತಿಳಿಸಿದೆ.
ಸೂಚಿತ ಪಠ್ಯಕ್ರಮ ಪಾಲಿಸಿ:
ಅಂಗನವಾಡಿ ಹಾಗೂ ಶಿಶುವಿಹಾರಗಳಲ್ಲಿ ಆಧಾರಶಿಲಾ, ನಿಪುಣ್ ಭಾರತ್ ಪಠ್ಯಕ್ರಮವನ್ನೇ ಅನುಸರಿಸುವುದು. ಇದರ ಒಟ್ಟಾರೆ ಉದ್ದೇಶವು ಮಗುವನ್ನು ಒಂದನೇ ತರಗತಿಗೆ ಸಜ್ಜುಗೊಳಿಸುವುದೇ ಆಗಿರುತ್ತದೆ. ಇದಕ್ಕಾಗಿ ಸಿಬ್ಬಂದಿಗೆ ಜಂಟಿ ಪೂರ್ವ ಪ್ರಾಥಮಿಕ ಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿಗೆ ಜಂಟಿ ತರಬೇತಿಯನ್ನು ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ.
ಸಾಮಾನ್ಯ ಕಾರ್ಯಭಾರ:
ಶಾಲೆಗಳಿಗೆ ಅಂಗನವಾಡಿ ಸ್ಥಳಾಂತರಿಸಿದಾಗ ಇತರ ಫಲಾನುಭವಿಗಳಾದ ಗರ್ಭಿಣಿಯರು, ಹದಿಹರೆಯದ ಹೆಣ್ಣುಮಕ್ಕಳು, ತಾಯಂದಿರಿಗೆ ಪ್ರತ್ಯೇಕ ದ್ವಾರಗಳಿರಬೇಕು. ಕಾರ್ಯಕರ್ತೆ ಯರು ಹಾಗೂ ಶಿಶುವಿಹಾರದ ಸಿಬ್ಬಂದಿ ಕಾರ್ಯಭಾರ ಸ್ಪಷ್ಟಪಡಿಸುವುದು. ಒಟ್ಟಾಗಿ ಚಟುವಟಿಕೆ ಹಮ್ಮಿಕೊಳ್ಳಲು ಸಾಮಾನ್ಯ ವೇಳಾಪಟ್ಟಿ ರೂಪಿಸಲು ನಿರ್ದೇಶಿಸಲಾಗಿದೆ.