UGC: ನೇಮಕ ನಿಯಮಗಳಿಗೆ ಯುಜಿಸಿ ಮಾರ್ಪಾಡು:ಮಾರ್ಗಸೂಚಿ ಹೊರಡಿಸಿದ ಆಯೋಗ-2025

UGC: ನೇಮಕ ನಿಯಮಗಳಿಗೆ ಯುಜಿಸಿ ಮಾರ್ಪಾಡು

 

UGC: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರು, ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ಕರಡು ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅನ್ವಯ ಹಲವು ಮಹತ್ವದ ಮಾರ್ಪಾಡುಗಳನ್ನು ಮಾಡಲಾಗಿದೆ.

ಯಾವುದೇ ಪದವಿ ಪಡೆದಿದ್ದರೂ, ಅತ್ಯುನ್ನತ ಶೈಕ್ಷಣಿಕ ಅರ್ಹತೆ ಪಡೆದ ವಿಷಯವನ್ನೇ ಬೋಧನೆ ಮಾಡತಕ್ಕದ್ದು. ಒಂದು ವೇಳೆ, ಬೇರೊಂದು ವಿಷಯವನ್ನು ಬೋಧನೆ ಮಾಡಲು ಬಯಸಿದ್ದಲ್ಲಿ ಆ ವಿಷಯದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ.

 

ಉದಾಹರಣೆಗೆ ಅಭ್ಯರ್ಥಿಯೊಬ್ಬ ಗಣಿತ ವಿಷಯದಲ್ಲಿ ಪದವೀಧರನಾಗಿದ್ದು, ಭೌತಶಾಸ್ತ್ರದಲ್ಲಿ ಪಿಎಚ್‌.ಡಿ ಗಳಿಸಿದ್ದರೆ ಅಂಥವರು ಭೌತಶಾಸ್ತ್ರವನ್ನೇ ಬೋಧಿಸಬೇಕಾಗುತ್ತದೆ. ಒಂದು ವೇಳೆ ಗಣಿತದಲ್ಲಿ ಅಧ್ಯಾಪಕರಾಗಬೇಕು ಎಂದು ಬಯಸಿದಲ್ಲಿ ಆ ವಿಷಯದಲ್ಲಿ ನೆಟ್ ಉತ್ತೀರ್ಣರಾಗುವುದು. ಕಡ್ಡಾಯವಾಗಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕುಲಪತಿ ಹುದ್ದೆಗೆ ಆಯ್ಕೆ:

ಕುಲಪತಿಗಳ ಆಯ್ಕೆಗೆ ಅರ್ಹತಾ ಮಾನದಂಡಗಳನ್ನು ಯುಜಿಸಿ ಇನ್ನಷ್ಟು ವಿಶಾಲಗೊಳಿಸಿದೆ. ನಿರೂಪಿತ ಸಾಧನೆ, ಶೈಕ್ಷಣಿಕ ಕೊಡುಗೆಗಳನ್ನು

ಹೊಂದಿದ ಉದ್ಯಮ, ಆಡಳಿತ, ನೀತಿ ನಿರೂಪಣೆ ಕ್ಷೇತ್ರದ ವೃತ್ತಿಪರರನ್ನು ಪರಿಗಣಿಸಬಹುದು. ಹೀಗಾಗಿ ಪ್ರಾಧ್ಯಾಪಕರಲ್ಲದವರೂ ಕುಲಪತಿ ಹುದ್ದೆ ಆಕಾಂಕ್ಷಿಗಳಾಗಬಹುದು.

ಕುಲಪತಿ ಆಯ್ಕೆಗೆ ರಚಿಸಲಾಗುವ ಶೋಧನಾ ಸಮಿತಿಗಳು ಇತರ ಅರ್ಜಿಗಳನ್ನು ಪರಿಗಣಿಸಲು ಅವಕಾಶವಾಗಲಿದೆ. ಜತೆಗೆ, ಸಮಿತಿಗಳು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಒಳಗೊಳ್ಳುವಿಕೆಯ ಸೂತ್ರ:

ನೇಮಕಾತಿ ಹಂತದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಇತರ ವರ್ಗಗಳಿಗೆ ನೀಡಲಾಗಿರುವಂತೆ ಆರ್ಥಿಕವಾಗಿ ಹಿಂದುಳಿದ ಹಾಗೂ ಅಂಗವಿಕಲರಿಗೂ ಕೆಲ ಮೀಸಲಾತಿಗಳನ್ನು ಈ ಕರಡು ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರೊಫೆಸರ್ ಆಫ್ ಪ್ರಾಕ್ಟಿಸ್‌ಗೆ ಅವಕಾಶ:

ಆಯಾ ಕ್ಷೇತ್ರದಲ್ಲಿ ಪರಿಣತರಾದವರನ್ನು ಬೋಧನೆ ಹಾಗೂ ಸಂಶೋಧನಾ ಉದ್ದೇಶಗಳಿಗಾಗಿ ‘ಪ್ರೊಫೆಸರ್ ಆಫ್ ಪ್ರಾಕ್ಟಿಸ್’ ಹುದ್ದೆಗೆ ನೇಮಕ ಮಾಡಿಕೊಳ್ಳಬಹುದು. ಈ ಹುದ್ದೆಗಳು ಆಯಾ ಸಂಸ್ಥೆಗೆ ಮಂಜೂರಾದ ಹುದ್ದೆಗಳಿಗೆ ಹೊರತಾಗಿರಲಿವೆ.

ಅಗತ್ಯ ವಿದ್ಯಾರ್ಹತೆಯಲ್ಲಿ ಬದಲಾವಣೆ:

ಕೆಲ ಹುದ್ದೆಗಳ ನೇಮಕಾತಿಗೆ ವಿದ್ಯಾರ್ಹತೆಯಲ್ಲಿ ಬದಲಾವಣೆಗಳನ್ನು ಸೂಚಿಸಲಾಗಿದೆ. ಗ್ರಂಥಪಾಲಕರ ನೇಮಕಾತಿಯಲ್ಲಿ ಗ್ರಂಥಾಲಯದ ಡಿಜಿಟಲೀಕರಣ ಹಾಗೂ ಸಮುದಾಯಿಕ ಚಟುವಟಿಕೆಗಳನ್ನು ಸೂಚಿಸಲಾಗಿದೆ. ಅಂತೆಯೇ, ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಾಗಿ ಕ್ರೀಡೆಯಲ್ಲಿ ತೋರಿದ ಈ ಸಾಧನೆ, ಪ್ರದರ್ಶನ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಳನ್ನು ಪರಿಗಣಿಸಲಾಗುತ್ತದೆ.

ಮಾರ್ಗಸೂಚಿಯ ಮುಖ್ಯಾಂಶಗಳು:

▪️ಉನ್ನತ ವಿದ್ಯಾರ್ಹತೆ ಅಥವಾ ನೆಟ್ ಉತ್ತೀರ್ಣತೆ ಪರಿಗಣನೆ

▪️ಕುಲಪತಿ ನೇಮಕಕ್ಕೆ ಅರ್ಹತಾ ಮಾನದಂಡಗಳು ವಿಸ್ತಾರ

▪️ಆರ್ಥಿಕವಾಗಿ ಹಿಂದುಳಿದ, ಅಂಗವಿಕಲರಿಗೂ ಮೀಸಲಾತಿ

▪️ಪ್ರಾಯೋಗಿಕ ಬೋಧನಾ ಕ್ರಮ ಆಧರಿಸಿ ಹುದ್ದೆಗೆ ಆಯ್ಕೆ

▪️ನಾವೀನ್ಯತಾ ಕ್ರಮಗಳಿಗೂ ಯುಜಿಸಿಯಿಂದ ಮನ್ನಣೆ

▪️ಗ್ರಂಥಪಾಲಕ, ದೈಹಿಕ ಶಿಕ್ಷಣ ಹುದ್ದೆಗಳ ಸ್ವರೂಪ ಬದಲು

ಶಿಸ್ತುಕ್ರಮವೂ ಇದೆ:

ಯುಜಿಸಿ ನಿಯಮಗಳನ್ನು ಪಾಲಿಸದ ಉನ್ನತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಯುಜಿಸಿ ಯೋಜನೆಗಳಿಂದ ದೂರ ಇಡುವುದಲ್ಲದೆ, ಪದವಿ ಕೋರ್ಸ್ ಗಳಿಂದಲೂ ಹೊರಗಿಡಲಾಗುತ್ತದೆ.

ಕೌಶಲಕ್ಕೂ ಮನ್ನಣೆ:

ವಿನೂತನ ಬೋಧನಾ ಕ್ರಮಗಳು, ಡಿಜಿಟಲ್ ಕಂಟೆಂಟ್ ರಚನೆ, ಸಂಶೋಧನಾ ಕ್ಷೇತ್ರಕ್ಕೆ

ನೀಡುವ ಕೊಡುಗೆ ಮುಂತಾದ ವೃತ್ತಿಪರ ಸಾಧನೆಗಳಿಗೂ ಈ ಮಾರ್ಗಸೂಚಿಯಡಿಯಲ್ಲಿ ಮನ್ನಣೆ ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆಯೇ ಮುಖ್ಯವಾಗುವ ಹಿಂದಿನ ನಿಯಮಗಳ ಬದಲು ಜ್ಞಾನ ಮತ್ತು ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಇಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಯುಜಿಸಿ ಅಧ್ಯಕ್ಷ ಪ್ರೊ.ಎಂ. ಜಗದೀಶಕುಮಾರ್ ಹೇಳಿದ್ದಾರೆ.

ಎಲ್ಲಕ್ಕೂ ಮುಖ್ಯವಾಗಿ ನೇಮಕಾತಿ ಹಂತದಲ್ಲಿ ಪಾರದರ್ಶಕತೆ ಹಾಗೂ ವಸ್ತುನಿಷ್ಠತೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ಉದಾಹರಣೆಗೆ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಬೋಧನೆ, ಸಂಶೋಧನಾ ಕ್ಷೇತ್ರದ ಕ್ಷಮತೆಯನ್ನು ಉಪನ್ಯಾಸ ಹಾಗೂ ವಿಚಾರ ಸಂಕಿರಣದ ಮೂಲಕವೂ ಮೌಲ್ಯಮಾಪನ ಮಾಡಬಹುದು.

ಆಧುನೀಕರಣಕ್ಕೆ ಒತ್ತು:

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಉಪನ್ಯಾಸಕರು, ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ಹಾಗೂ ಬಡ್ತಿ ಚೌಕಟ್ಟನ್ನು ಆಧುನೀಕರಣಗೊಳಿಸುವ ಉದ್ದೇಶ ಕರಡು ಅಧಿಸೂಚನೆಯದ್ದಾಗಿದೆ. 2018ರಲ್ಲಿ ಜಾರಿಗೆ ತರಲಾಗಿದ್ದ ನಿಯಮಾವಳಿಗಳನ್ನು ಬದಲಾವಣೆ ಮಾಡಲಿದೆ. ಒಳಗೊಳ್ಳುವಿಕೆ. ನಮ್ಯತೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ಸಮನ್ವಯವನ್ನು ಸಾಧಿಸುವುದು ಇದರ ಉದ್ದೇಶವಾಗಿದೆ.

ಬಡ್ತಿ ನೀಡಲು ರಜೆ ಅವಧಿ ಪರಿಗಣನೆ:

ಬೋಧಕರ ಹಾಗೂ ಶೈಕ್ಷಣಿಕ ಸಿಬ್ಬಂದಿ ಬಡ್ತಿಗಾಗಿ ರಜೆ ಅವಧಿಯನ್ನು ಪರಿಗಣಿಸಲಾಗುತ್ತದೆ. ಹೆರಿಗೆ ರಜೆ, ಮಕ್ಕಳ ಪಾಲನಾ ರಜೆ ಹಾಗೂ ಅಧ್ಯಯನಕ್ಕಾಗಿ ಪಡೆದ ರಜಾ ಅವಧಿಯನ್ನು ಒಳಗೊಳ್ಳಲಿದೆ. ಈ ಮೂಲಕ ಈ ಪ್ರಕ್ರಿಯೆಯನ್ನು ಹೆಚ್ಚು ನ್ಯಾಯಯುತ ಗೊಳಿಸಲಾಗಿದೆ ಎಂದು ಯುಜಿಸಿ ತಿಳಿಸಿದೆ.

ಒಳಗೊಳ್ಳುವಿಕೆ, ನಮ್ಯತೆ ಹಾಗೂ ಅಸಾಮಾನ್ಯ ಪ್ರತಿಭೆಗಳನ್ನು ಗುರುತಿಸುವ ಮೂಲಕ ದೇಶದ ಸುಭದ್ರ ಶೈಕ್ಷಣಿಕ ಬುನಾದಿಗೆ ಹಾದಿ ಮಾಡಿಕೊಡುತ್ತಿದ್ದೇವೆ.ಎನ್‌ಇಪಿ ಅನುಷ್ಠಾನದ ಸಂದರ್ಭದಲ್ಲಿ ಇದು ಅತ್ಯಂತ ಸಕಾಲಿಕವಾಗಿದೆ.

| ಧಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ ಸಚಿವ

 

CLICK HERE TO COMPLETE INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!